ಗಣೇಶ್‌ ಮನೆ ಅರಮನೆ!

ರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾಗರಾಜ ನಗರದಲ್ಲಿರುವ ನಾಗಸಂದ್ರ ಸರ್ಕಲ್‌ ಪಕ್ಕದಲ್ಲೊಂದು ಗಲ್ಲಿ. ಅದು ಮಾಡೆಲ್‌ಹೌಸ್‌ ಸ್ಟ್ರೀಟ್‌. ಅಲ್ಲಿ ಮನೆ ಎಂದು ಹೇಳಿಕೊಳ್ಳಬಹುದಾದ ರೂಮು ಅಥವಾ ರೂಮು ಎಂದು ಕರೆದುಬಿಡಬಹುದಾದ ಮನೆ. ಆ ಪುಟ್ಟ ಮನೆಗೊಂದು ಟೆರೇಸು.

ನಾಲ್ಕು ವರ್ಷಗಳ ಹಿಂದಿನ ರಾತ್ರಿಗಳಲ್ಲಿ ಆ ಟೆರೇಸಿನ ಮೇಲೆ ಕುಳಿತು ಇನ್ನೂ ಹುಟ್ಟಿಕೊಳ್ಳಬೇಕಾಗಿದ್ದ ತಾರೆ ಗಣೇಶ್‌ ಮತ್ತು ಹುಟ್ಟಿಕೊಳ್ಳಬೇಕಾಗಿದ್ದ ನಿರ್ದೇಶಕ ನಾಗಶೇಖರ್‌ ಹರಟೆ ಹೊಡೆಯುತ್ತಿದ್ದರು. ಮೈಗೊಂದು ಟವೆಲ್‌ ಸುತ್ತಿಕೊಂಡು ಆಕಾಶದಲ್ಲಿ ತಾರೆಗಳನ್ನು ನೋಡುತ್ತಾ ಬದಲಾಗದ ತಮ್ಮ ತಾರಾಬಲದ ಕುರಿತು ಗೊಂದಲಗೊಳ್ಳುತ್ತಾ ಸಿನಿಮಾಗಳ ಕುರಿತು ಮಾತಾಡುತ್ತಿದ್ದರು. ಸಣ್ಣದೊಂದು ಸಿನಿಮಾದಲ್ಲಿ ಮಾಡಿದ ಸಣ್ಣದೊಂದು ಪಾತ್ರಕ್ಕೆ ಬಂದಿದ್ದ ಹಣದಲ್ಲೇ ತಿಂಗಳು ಮುಗಿಸುವ ಆಲೋಚನೆಯ ನಡುವೆ ದಿನಾ ರಾತ್ರಿ ತಾರೆ ಟೆರೇಸ್‌ ಪರ್‌!

ಪ್ರತಿದಿನವೂ ರಾತ್ರಿ ಹನ್ನೆರಡೂವರೆ ಗಂಟೆಯಾಗಿ ಐದು ನಿಮಿಷಗಳ ನಂತರ ಒಂದು ವಿಮಾನ ಹಾರಿ ಹೋಗುತ್ತಿತ್ತು. ಈ ವಿಮಾನ ಹಾರಿ ಹೋಗುತ್ತಲೇ ಹುಡುಗರ ಮಾತುಕತೆ ಮುಗಿಯುತ್ತಿತ್ತು. ಈ ಕಷ್ಟದ ದಿನಗಳಲ್ಲೂ ಗಣೇಶ್‌ ಸದಾ ಆಶಾವಾದಿ. `ನೋಡ್ತಿರು ಗೆಳೆಯಾ. ಒಂದು ದಿನ ಬರುತ್ತೆ. ಆ ದಿನ ನಮ್ಮನ್ನು ಹಿಡಿದು ನಿಲ್ಲಿಸೋದಕ್ಕೇ ಯಾರಿಗೂ ಸಾಧ್ಯವಾಗೊಲ್ಲ. ಅಂಥಾ ದಿನ ಬರುತ್ತೆ’ ಎಂದು ದಿನವೂ ಗಣೇಶ್‌ ಹೇಳುತ್ತಿದ್ದರೆ ನಾಗಶೇಖರ್‌ ನಿರ್ಲಕ್ಷ್ಯದಿಂದ ಕಾಣೆಯಾಗುತ್ತಿದ್ದ ವಿಮಾನ ನೋಡುತ್ತ ಕುಳಿತಿರುತ್ತಿದ್ದರು.

ದಿನಗಳು ಕಳೆದವು. ನಾಗಶೇಖರ್‌ ಮತ್ತು ಗಣೇಶ್‌ ಇಬ್ಬರೂ ನಾಗಸಂದ್ರ ಸರ್ಕಲ್‌ ಬಿಟ್ಟರು. ಬೇರೆ ಬೇರೆ ಮನೆ ಸೇರಿಕೊಂಡರು. ಈ ಹಂತದಲ್ಲೇ ಮಳೆ ಬಂದು ಗಣೇಶ್‌ ದೊಡ್ಡ ನಟರಾದರು. ಆಗಲೇ ಚೆಲ್ಲಾಟ ಬಂದಿತ್ತು. ಹುಡುಗಾಟ ಬರುವುದರಲ್ಲಿತ್ತು. `ಕೃಷ್ಣ’ ಚಿತ್ರೀಕರಣಕ್ಕಾಗಿ ಗಣೇಶ್‌ ಬ್ಯಾಂಕಾಕ್‌ಗೆ ಹೊರಟಿದ್ದರು. ಗಣೇಶ್‌ ಹೇಳುತ್ತಿದ್ದ `ಆ ಒಂದು ದಿನ ‘ ಆಗಲೇ ಬಂದುಬಿಟ್ಟಿತ್ತು.

ಗಣೇಶ್‌ಗೆ ಮೊದಲ ವಿದೇಶ ಪ್ರವಾಸ. ನಾಗಶೇಖರ್‌ಗೆ ಸಂಭ್ರಮವಾಗಿತ್ತು. ಗಣೇಶ್‌ರನ್ನು ಬೀಳ್ಕೊಡುವುದಕ್ಕೆ ನಾಗಶೇಖರ್‌ ಆ ದಿನ ರಾತ್ರಿ ವಿಮಾನ ನಿಲ್ದಾಣದಲ್ಲಿದ್ದರು. ಅದು ನಡುರಾತ್ರಿಯ ವಿಮಾನ. ಹನ್ನೆರಡೂವರೆ ಗಂಟೆಯಾಗಿ ಐದು ನಿಮಿಷಗಳ ನಂತರ ವಿಮಾನ ಹಾರುವುದೆಂದು ನಿಗದಿಯಾಗಿತ್ತು. ನಾಗಶೇಖರ್‌ಗೆ ಪುನಃ ನಾಗಸಂದ್ರ ಸರ್ಕಲ್‌ ನೆನಪಾಯಿತು. ಮಾಡೆಲ್‌ ಹೌಸ್‌ ಸ್ಟ್ರೀಟ್‌ ನೆನಪಾಯಿತು. ಟೆರೇಸು, ತಾರೆಗಳು, ಸಿನಿಮಾಗಳ ಕುರಿತು ಹರಟೆ ಮತ್ತು ಅದೇ ಸಮಯಕ್ಕೆ ಹಾರುವ ವಿಮಾನ. ಬಹುಶಃ ಈಗ ಅದೇ ವಿಮಾನದಲ್ಲಿ ಗಣೇಶ್‌ ಬ್ಯಾಂಕಾಕ್‌ಗೆ ಹೋಗುತ್ತಿದ್ದಾರೆ!

`ಹಾಗಂತ ನನಗೆ ಅನಿಸಿತು’ ಎಂದು ನೆನಪು ಮಾಡಿಕೊಂಡರು ನಾಗಶೇಖರ್‌. ತಾರೆಗಳನ್ನು ನೋಡುತ್ತ ಮಾತಾಡುತ್ತಿದ್ದ ಗೆಳೆಯ ತಾರೆಯೇ ಆಗಿಬಿಟ್ಟ ಸಮಯದಲ್ಲಿ ನಾಗಶೇಖರ್‌ ಬದುಕಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದವು. `ಸಂಜು ವೆಡ್ಸ್‌ ಗೀತಾ’ ಎಂದು ಅವರು ಒಂದು ಕತೆ ಬರೆದಿಟ್ಟುಕೊಂಡಿದ್ದರು. ಇದೊಂದು ಮದುವೆ ಕತೆ ಮತ್ತು ಮಳೆಯ ಕತೆ. ಆಗಷ್ಟೇ `ಮುಂಗಾರು ಮಳೆ’ ಯಶಸ್ವಿಯಾಗಿದ್ದರಿಂದ ನಾಗಶೇಖರ್‌ ಅದನ್ನು ಕೈಬಿಟ್ಟರು. ಈ ಹಂತದಲ್ಲಿ ಅವರ ಸ್ನೇಹಿತ, ಛಾಯಾಗ್ರಾಹಕ ಚಂದ್ರು ಒಂದು ಎಳೆ ಹೇಳಿದರು. ನಾಗಶೇಖರ್‌ ಖುಷಿಯಾದರು. ಪ್ರೀತಮ್‌ ಗುಬ್ಬಿ ಚಿತ್ರಕತೆ ಬರೆಯಲು ನೆರವಾದರು. ರಂಗ ಸಂಭಾಷಣೆಗೆ ಕುಳಿತರು. ಹತ್ತು ದಿನಗಳಲ್ಲಿ `ಅರಮನೆ’ಯ ನೀಲಿನಕ್ಷೆ ಸಿದ್ಧವಾಯಿತು.

ಆ ಮಂಜು ಕೆ ಮಂಜು

ಒಂದು ದಿನ ಸಂಜೆ ನಿರ್ಮಾಪಕ ಜಾಕ್‌ ಮಂಜು ಅವರಿಗೆ ಕತೆ ಹೇಳಿದರು ನಾಗಶೇಖರ್‌. ಕತೆ ಕೇಳಿ ಅವರು ಖುಷಿಯಾದರು. `ಒಂದಿನ ಟೈಮ್‌ ಕೊಡಿ. ನಾಳೆ ಮಾತಾಡೋಣ’ ಎಂದರು. ಕತೆ ಇಟ್ಟುಕೊಂಡು ಒಂದು ದಿನ ಕಾಯುವುದೂ ನಾಗಶೇಖರ್‌ಗೆ ಕಷ್ಟ ಅನಿಸಿತು. ಮರುದಿನ ಬೆಳಿಗ್ಗೆಯೇ ಅವರು ಕೆ ಮಂಜು ಎದುರು ಕುಳಿತಿದ್ದರು. ಆ ದಿನ ಮಂಜು ಹುಟ್ಟಿದ ಹಬ್ಬ. ಕತೆ ಕೇಳಿದ ಮಂಜು ರೋಮಾಂಚಿತರಾಗಿ(!) ಎದ್ದು ನಿಂತು ಒಂದು ಲಕ್ಷದ ಒಂದು ರೂಪಾಯಿ ಅಡ್ವಾನ್ಸ್‌ ಕೊಟ್ಟರು. ಗಣೇಶ್‌ ಜೊತೆ ಫೋನಲ್ಲೇ ಮಾತುಕತೆಯಾಯಿತು. ಗೆಳೆಯನ ಸಿನಿಮಾವನ್ನು ಗಣೇಶ್‌ ಕತೆ ಕೇಳದೇ ಒಪ್ಪಿಕೊಂಡಿದ್ದರು. ಅಲ್ಲಿಂದ ಸಂಭ್ರಮದಿಂದ ಹೊರಕ್ಕೆ ಬರುತ್ತಿದ್ದಾಗ ನಾಗಶೇಖರ್‌ಗೆ ಆ ಮಂಜು ಫೋನ್‌. ಮುಂಗಡ ಹಣ ಕೊಡುವುದಕ್ಕೆಂದು ಅವರು ಫೋನ್‌ ಮಾಡಿದ್ದರು.

ಇಂಥ ಆಕಸ್ಮಿಕಗಳ ಕತೆಗಳನ್ನು ನಾಗಶೇಖರ್‌ ಒಂದಾದ ಮೇಲೆ ಒಂದರಂತೆ ಬಿಚ್ಚಿಡುತ್ತಾ ಹೋಗುತ್ತಾರೆ. ಮಂಡ್ಯದ ಮಳವಳ್ಳಿಯ ಪಕ್ಕದ ದಲಿತ ಕುಟುಂಬದಲ್ಲಿ ಹುಟ್ಟಿದ್ದು, ಹಟದಿಂದ ಇಂಗ್ಲಿಷ್‌ ಮೀಡಿಯಮ್‌ನಲ್ಲಿ ಓದಿದ್ದು, ಬೆಂಗಳೂರಿಗೆ ಬಂದಿದ್ದು, ಪುನಃ ಮಂಡ್ಯಕ್ಕೆ ಹೋಗಿ ಎಂಜಿನೀಯರಿಂಗ್‌ ಓದಿದ್ದು, ವಾಪಸ್‌ ಬೆಂಗಳೂರಿಗೆ ಬಂದು ನಾಟಕ, ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದು ಹೀಗೆ ಎಲ್ಲವನ್ನೂ ಹೇಳಿಕೊಳ್ಳುತ್ತಾ ಹೋಗುತ್ತಾರೆ. ಧಾರಾವಾಹಿಯಿಂದ ಸಿನಿಮಾ ಪ್ರಪಂಚಕ್ಕೆ ಅವರು ಕಾಲಿಟ್ಟಿದ್ದೂ ಒಂದು ಕತೆ. `ನಿನಗಾಗಿ’ ಚಿತ್ರಕ್ಕೆ ನಿರ್ದೇಶಕ ಮಹೇಂದರ್‌ ನಾಯಕಿಯಹುಡುಕಾಟದಲ್ಲಿದ್ದರು. ಅವರ ಸಹನಿರ್ದೇಶಕರಾಗಿದ್ದ ಶಶಾಂಕ್‌ ಟೀವಿ ಧಾರಾವಾಹಿಗಳಲ್ಲಿ ಹೊಸ ಮುಖದ ಹುಡುಕಾಟ ನಡೆಸುತ್ತಿದ್ದರು. ಹುಡುಗಿಯೊಬ್ಬಳ ಅಭಿನಯ ಅಳೆಯಲು ಶಶಾಂಕ್‌ ಒಂದು ಸೀನ್‌ ನೋಡಬೇಕಾಯಿತು. ಆ ಸೀನ್‌ನಲ್ಲಿ ಆಕೆಯೊಂದಿಗೆ ಅಭಿನಯಿಸಿದ್ದು ಇದೇ ನಾಗಶೇಖರ್‌. ಸೀನ್‌ ಮುಗಿಯುವ ಹೊತ್ತಿಗೆ `ನಿನಗಾಗಿ’ ಚಿತ್ರದ ಪಾತ್ರವೊಂದಕ್ಕೆ ನಾಗಶೇಖರ್‌ ಆಯ್ಕೆಯಾಗಿದ್ದರು.

ಭಾವನೆಗಳ ಅರಮನೆ

ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ.

ಪ್ರೀತಿಯಿಲ್ಲದ ಅರಮನೆಯೂ ಸೆರೆಮನೆ!

ಇಂಥದ್ದೊಂದು ಎಳೆ ಇಟ್ಟುಕೊಂಡು ನಾಗಶೇಖರ್‌ `ಅರಮನೆ’ ಸಿನಿಮಾ ಮಾಡಿದ್ದಾರೆ. ಒಟ್ಟಾರೆ 55 ದಿನ ಚಿತ್ರೀಕರಣ ನಡೆಸಿದ್ದಾರೆ. ಗಣೇಶ್‌ ಜೊತೆಯಲ್ಲಿ ಅನಂತ್‌ನಾಗ್‌ ಅಭಿನಯಿಸಿದ್ದಾರೆ. ಇಂಥದ್ದೊಂದು ಸಿನಿಮಾ ಆಗುವುದಕ್ಕೆ ಮಂಜು ಕೊಟ್ಟ ಸಹಕಾರವನ್ನು ನಾಗಶೇಖರ್‌ ನೆನೆಯುತ್ತಾರೆ. `ನನ್ನ ಸಹನಿರ್ದೇಶಕರೂ ಮಂಜು. ಪ್ರೊಡಕ್ಷನ್‌ ಮ್ಯಾನೇಜರೂ ಮಂಜು. ಅಷ್ಟು ಸಹಕಾರ ಕೊಟ್ಟಿದ್ದಾರೆ’ ಎಂದು ಖುಷಿ ಪಡುತ್ತಾರೆ ನಾಗಶೇಖರ್‌.

ನಾಯಕ ನಟ ಗಣೇಶ್‌ಗೆ ಇಲ್ಲಿ ಭಿನ್ನವಾದ ಪಾತ್ರ. `ಮುಂಗಾರು ಮಳೆ’ ಮತ್ತು `ಗಾಳಿಪಟ’ ಚಿತ್ರಕ್ಕಿಂತ ಭಿನ್ನವಾದ ಮಾತಿನ ಶೈಲಿ. `ಗಣೇಶ್‌ ಅದನ್ನು ತುಂಬಾ ಅದ್ಭುತವಾಗಿ ನಿಭಾಯಿಸಿದ್ದಾರೆ. ಸೀರಿಯಸ್ಸಾಗಿ ಹೇಳ್ತೀನಿ. ಗಣೇಶ್‌ಗೆ ಏನೋ ಆಗಿಬಿಟ್ಟಿದೆ. ಆತ ಅಭಿನಯಿಸುತ್ತಿರೋ ರೀತಿ ನೋಡಿದರೆ ಸಂಭ್ರಮ ಆಗುತ್ತೆ’ ಎನ್ನುತ್ತಾರೆ ಅವರು.

ಅರಮನೆ ಒಂದು ಪ್ರೇಮಕತೆ. ಭಾವನೆಗಳ ಸುತ್ತ ಸುತ್ತುವ ಕತೆ. ಚಿತ್ರದಲ್ಲಿ ಆರು ಹಾಡುಗಳಿವೆ. ಮೂರು ಹಾಡುಗಳನ್ನು ಕವಿರಾಜ್‌ ಬರೆದರೆ ಉಳಿದ ಹಾಡುಗಳನ್ನು ಜಯಂತ್‌, ಯೋಗರಾಜ್‌ ಭಟ್‌ ಮತ್ತು ನಾಗೇಂದ್ರಪ್ರಸಾದ್‌ ಬರೆದಿದ್ದಾರೆ. ಗುರುಕಿರಣ್‌ ಸಂಗೀತ ಕೊಟ್ಟಿದ್ದಾರೆ. ಹಾಡುಗಳು ಹಿಟ್‌ ಆಗುತ್ತವೆ ಎನ್ನುವುದರಲ್ಲಿ ನಿರ್ದೇಶಕರಿಗೆ ಅನುಮಾನಗಳಿಲ್ಲ. ಮಾರ್ಚ್‌ ಮೊದಲ ವಾರ ಹಾಡುಗಳು ಮಾರುಕಟ್ಟೆಯಲ್ಲಿರುತ್ತವೆ.

ಸಿನಿಮಾ ಓದು

`ನನಗೆ ಮೊದಲಿಂದಲೂ ಬಂಗಾರದ ಮನುಷ್ಯ ಇಷ್ಟ. ಕಸ್ತೂರಿ ನಿವಾಸ ಇಷ್ಟ. ಪುಟ್ಟಣ್ಣ, ಬಾಲಚಂದರ್‌, ಮಣಿರತ್ನಮ್‌ ಸಿನಿಮಾಗಳನ್ನು ನೋಡುತ್ತಾ ಬೆಳೆದೋರು ನಾವು’ ಎನ್ನುತ್ತಾರೆ ನಾಗಶೇಖರ್‌. ಈ ಸಿನಿಮಾವೂ ಅದೇ ಥರ ಭಾವನೆಗಳ ಸುತ್ತ ಸುತ್ತುತ್ತದೆ ಎನ್ನುವುದು ಅವರು ಕೊಡುವ ಭರವಸೆ.

ಅಂದಹಾಗೆ ಈ ಚಿತ್ರವನ್ನು ಭಿನ್ನ ಪ್ರಯತ್ನ ಎಂದು ಕರೆದುಕೊಳ್ಳಲು ನಾಗಶೇಖರ್‌ಗೆ ಇಷ್ಟವಿಲ್ಲ. ಪ್ರಚಾರವನ್ನು ಬೇರೆ ರೀತಿ ಮಾಡುವ ಕುರಿತೂ ಅವರು ಯೋಚನೆ ಮಾಡುತ್ತಿಲ್ಲ. ಸಿನಿಮಾಗಳನ್ನು ಟ್ರಿಕ್‌ಗಳಿಂದ ಗಿಮಿಕ್‌ಗಳಿಂದ ಗೆಲ್ಲಿಸಲಾಗುವುದಿಲ್ಲ ಎನ್ನುವುದು ಅವರ ನಂಬಿಕೆ.

`ಗಣೇಶ್‌ ಕುರಿತು ಇಂದು ಜನರಿಗೆ ಪ್ರೀತಿ ಇದೆ. ಕ್ರೇಜ್‌ ಇದೆ. ಸತ್ಯ ಹೇಳ್ತೀನಿ. ಈ ಸಿನಿಮಾ ನೂರು ದಿನ ಓಡಿದರೆ ಅದು ಗಣೇಶ್‌ದು. ಅದಕ್ಕಿಂತ ಹೆಚ್ಚು ಓಡಿದರೆ ನನ್ನದು’ ಎನ್ನುತ್ತಾರೆ ಅವರು. ಇಡೀ ಸಿನಿಮಾದಲ್ಲಿ ಅವರು ನೀಲಿ ಮತ್ತು ಬಿಳಿಯನ್ನು ಯಥೇಚ್ಛವಾಗಿ ಬಳಸಿದ್ದಾರೆ. ಪ್ರಚಾರ ಸಾಮಗ್ರಿಗಳಲ್ಲೂ ಅದೇ ನೀಲಿ. ಅದೇ ಬಿಳಿ.

ಚಾಕೊಲೇಟ್‌ ಹೀರೋಯಿನ್‌

ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ರೋಮಾ ಈ ಚಿತ್ರದ ನಾಯಕಿ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕನ್ನಡದ ರಮ್ಯಾ ನಾಯಕಿಯಾಗಬೇಕಿತ್ತು. ಡೇಟ್ಸ್‌ ಹೊಂದಾಣಿಕೆ ಆಗದೇ ಅದು ಸಾಧ್ಯವಾಗಲಿಲ್ಲ. `ನೋಟ್‌ಬುಕ್‌’ ಚಿತ್ರದ ಮೂಲಕ ಖ್ಯಾತಿಗೆ ಬಂದಿರುವ ರೋಮಾ `ಚಾಕೋಲೇಟ್‌’ ಚಿತ್ರದಲ್ಲೂ ನಾಯಕಿ. ರೋಮಾಗೆ ಇದು ಮೊದಲ ಕನ್ನಡ ಚಿತ್ರ.

`ಯಾವಾಗ್ಲೂ ನಾನು ತಿಪ್ಪೆಯಿಂದ ಎದ್ದು ಬಂದಿರೋ ಥರಾ ಇರ್ತೀನಿ. ಮೊದಲಿಂದಲೂ ಎಲ್ಲದರಲ್ಲೂ ಗಣೇಶ್‌ ಅಚ್ಚುಕಟ್ಟು. ಬದುಕಿನ ವಿಷಯದಲ್ಲೂ ಆತ ಈಗಲೂ ಒಳ್ಳೊಳ್ಳೆಯ ಸಲಹೆ ಕೊಡುತ್ತಾನೆ’ ಎನ್ನುತ್ತಾರೆ ನಾಗಶೇಖರ್‌. ಗಣೇಶ್‌ ಹೇಳುವ ಒಂದು ಮಾತಿನೊಂದಿಗೆ ಅವರ ಮಾತು ಮುಗಿಯುತ್ತದೆ. ಆ ಮಾತು ಹೀಗಿದೆ: ಕುಡಿತ ನಮ್ಮ ಚಟ ಆಗಬಾರದು. ಶ್ರಮ ಮತ್ತು ಗುರಿ ನಮ್ಮ ಚಟ ಆಗಬೇಕು!

ಅಂದಹಾಗೆ ಏಪ್ರಿಲ್‌ ಮೊದಲ ವಾರ `ಅರಮನೆ’ ಬಿಡುಗಡೆ.

1 ಟಿಪ್ಪಣಿ

Filed under ಬಾಲ್ಕನಿ

One response to “ಗಣೇಶ್‌ ಮನೆ ಅರಮನೆ!

  1. ಏನ್ ಗುರೂ, ಗಣೇಶ್ ಗೆಟಪ್ಪ್ ‘ಅರಮನೆ’ಗಾಗಿನಾ? ಚಾರ್ಲಿ ಚಾಪ್ಲಿನ್ ತರಹ ಕಾಣುತ್ತಿದ್ದಾನೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s