ಕನಸುಗಳ ಕಥಾಸಂಕಲನ

ಡ್ರೀಮ್ಸ್‌! ಹೆಸರೇ ಹೇಳುವಂತೆ ಕನಸುಗಳ ಕತೆಯಿರುವ ಸಿನಿಮಾ. ನಿರೂಪಕನ(ನಿರ್ದೇಶಕನ) ಬದುಕಿನ ಬೇರೆ ಬೇರೆ ಅವಸ್ಥೆಗಳಲ್ಲಿ ಕಂಡ ಕನಸುಗಳ ಕಥಾ ಸಂಕಲನ ಇದು. ಒಂದೊಂದು ಕನಸಿನದು ಒಂದೊಂದು ಕತೆ. ಆ ಕನಸಿಗೂ ಅನಂತರ ಹೇಳುವ ಕನಸಿಗೂ ಅರ್ಥಾತ್‌ ಸಂಬಂಧವಿಲ್ಲ. ಆದರೂ ಸಂಬಂಧ ಇದೆ! ಏಕೆಂದರೆ ಈ ಕನಸುಗಳನ್ನೆಲ್ಲಾ ಒಬ್ಬನೇ ಕಾಣುತ್ತಿದ್ದಾನೆ. ಆತನಲ್ಲಿ ಅವಸ್ಥಾಂತರಗಳು ಸಂಭವಿಸುತ್ತಿವೆ. ಹೀಗೆ ಎಂಟು ಕನಸುಗಳು ಬೇರೆ ಬೇರೆಯಾಗಿದ್ದೂ ಒಂದೇ ಕನಸಾಗುವ, ಕತೆಯಾಗುವ ವಿಸ್ಮಯವನ್ನು ನಿರ್ದೇಶಕ ಅಕಿರಾ ಕುರಸೋವಾ `ಡ್ರೀಮ್ಸ್‌’ ಸಿನಿಮಾದಲ್ಲಿ ಸೃಷ್ಟಿಸುತ್ತಾರೆ. 

ನಿರೂಪಕ, ಅಂದರೆ ನಿರ್ದೇಶಕ ಬಾಲ್ಯದಲ್ಲಿ ಕಂಡಿರಬಹುದಾದ ಕನಸಿನ ಜೊತೆಯಲ್ಲಿ ಸಿನಿಮಾ ಶುರುವಾಗುತ್ತದೆ. ಆ ದಿನ ಬಿಸಿಲು ಮತ್ತು ಮಳೆ ಬರುತ್ತಿದೆ. ಸಣ್ಣ ಹುಡುಗನೊಬ್ಬ ಮನೆಯಿಂದ ಹೊರಕ್ಕೆ ಹೊರಡುತ್ತಾನೆ. ಅಮ್ಮ ಆತನನ್ನು ತಡೆಯುತ್ತಾಳೆ. `ಬಿಸಿಲು ಮಳೆ ಇರುವಾಗ ನರಿಗಳ ಮದುವೆ ನಡೆಯುತ್ತದೆ. ಅದನ್ನು ನೋಡಕೂಡದು’ ಎನ್ನುತ್ತಾಳೆ. ಅಮ್ಮನ ಮಾತು ಮೀರಿ ಹುಡುಗ ಕಾಡಿನ ನಡುವೆ ನಡೆಯುವ ನರಿಗಳ ಮದುವೆಯ ಮೆರವಣಿಗೆಯನ್ನು ಕದ್ದು ನೋಡುತ್ತಾನೆ. ಈ ಹುಡುಗ ಕದ್ದು ನೋಡುತ್ತಿರುವುದನ್ನು ನರಿಯೊಂದು ನೋಡುತ್ತದೆ. ಬಾಲಕ ಅಲ್ಲಿಂದ ಓಟ ಕೀಳುತ್ತಾನೆ. ಮನೆಗೆ ಬಂದರೆ ಅಮ್ಮ ಬಾಗಿಲಲ್ಲೇ ನಿಂತಿದ್ದಾಳೆ. ಅವಳಿಗೆ ಸಿಟ್ಟು ಬಂದಿದೆ ಮತ್ತು ಆತನಿಗೆ ಮನೆಗೆ ಪ್ರವೇಶವಿಲ್ಲ ಎಂದು ಹೇಳುತ್ತಿದ್ದಾಳೆ. ಜೊತೆಯಲ್ಲಿ ನರಿಯೊಂದು ಆತನನ್ನು ಹುಡುಕಿಕೊಂಡು ಅಲ್ಲಿಗೆ ಬಂದ ವಿಷಯ ಹೇಳುತ್ತಾಳೆ. ನರಿ ಕೊಟ್ಟ ಹೋದ ಪುಟ್ಟ ಚೂರಿಯನ್ನು ಆತನಿಗೆ ಕೊಡುತ್ತ `ಮಾಡಿದ ತಪ್ಪಿಗೆ ನಿನ್ನನ್ನು ನೀನೇ ಕೊಂದುಕೊಳ್ಳಬೇಕು’ ಎಂದು ಹೇಳುತ್ತಾಳೆ. ಬಾಲಕ ಭಯದಲ್ಲಿ ನಿಂತು ಹೋಗುತ್ತಾನೆ. `ಹೋಗು, ನರಿಗಳ ಕ್ಷಮೆ ಕೇಳು. ಅವರು ಸಾಮಾನ್ಯವಾಗಿ ಕ್ಷಮಾದಾನ ಮಾಡುವುದಿಲ್ಲ’ ಎಂದು ಹೇಳಿ ಮನೆಯ ಬಾಗಿಲು ಹಾಕಿಕೊಳ್ಳುತ್ತಾಳೆ. ಅಲ್ಲಿಂದ ಹೊರಡುವ ಹುಡುಗ ಬೆಟ್ಟ ಗುಡ್ಡಗಳನ್ನು ಹಾದು ಕಾಮನಬಿಲ್ಲುಗಳ ಕೆಳಗೆ ಇದ್ದಿರಬಹುದಾದ ನರಿಗಳನ್ನು ಹುಡುಕಿಕೊಂಡು ಹೊರಡುತ್ತಾನೆ. ನಿರೂಪಕನ ಮೊದಲ ಕನಸು ಇಲ್ಲಿಗೆ ನಿಲ್ಲುತ್ತದೆ. ಇನ್ನೊಂದು ಕನಸು ಕಂಡೆ ಎಂದು ನಿರೂಪಕ ಇನ್ನೊಂದು ಕನಸಿನ ಕತೆ ಬಿಚ್ಚಿಡತೊಡಗುತ್ತಾನೆ. ಕತ್ತರಿಸಿದ ಮರಗಳ ಕತೆ ಹೇಳುತ್ತಾನೆ. ಮೊದಲ ಕನಸಿನಲ್ಲಿ ಸಣ್ಣ ಹುಡುಗ ಈಗ ಸ್ವಲ್ಪ ದೊಡ್ಡವನಾಗಿದ್ದಾನೆ. ಇದು ಮುಗಿಯುತ್ತಲೇ ಸಾಹಸದ ಕನಸು. ಅನಂತರ ಆತ ಯುದ್ಧ ಮುಗಿಸಿ ಮನೆಗೆ ಬರುತ್ತಿದ್ದಾನೆ. ಮುಂದಿನ ಕನಸಿನಲ್ಲಿ ವ್ಯಾನ್‌ಗೋನ ಕಲಾಕೃತಿಯನ್ನು ನೋಡುತ್ತ ನೋಡುತ್ತ ಅದರ ನಡುವೆ ನಡೆದುಕೊಂಡು ಹೊರಟು ಕಲಾವಿದ ವ್ಯಾನ್‌ಗೋನನ್ನೇ ಭೇಟಿಯಾಗುತ್ತಾನೆ. ಆತನನ್ನು ಹಿಂಬಾಲಿಸಿ ದಾರಿ ತಪ್ಪಿ ಆತನ ಇತರ ಕಲಾಕೃತಿಗಳಲ್ಲಿ ಹಾದು ಹೋಗುತ್ತ ವ್ಯಾನ್‌ಗೋನನ್ನು ಹುಡುಕುತ್ತಾನೆ. ನಂತರ ಅಣು ಸ್ಫೋಟದ ನಂತರದ ಬರ್ಬರತೆ ಜಗತ್ತನ್ನು ನೋಡುತ್ತಿದ್ದಾನೆ. ವಿನಾಶದ ಅಂಚಿನಲ್ಲಿರುವಂತೆ ಕಾಣುವ ಜಗತ್ತಿನಲ್ಲಿ ಅಳುವ ದೆವ್ವಗಳನ್ನು ಕಂಡು ಗಾಬರಿಯಾಗುತ್ತಿದ್ದಾನೆ. ಕೊನೆಯ ಕನಸಿನಲ್ಲಿ ನೀರಿನ ಗಿರಣಿಗಳೇ ತುಂಬಿರುವ ಊರಿನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಕಂಡು ವಿಸ್ಮಿತನಾಗುತ್ತಿದ್ದಾನೆ.

ಈ ಕನಸುಗಳ ಕತೆಯನ್ನು ನಿರ್ದೇಶಕ ಅಕಿರಾ ಕುರಸೋವಾ ಜೋಡಿಸಿರುವ ರೀತಿಯೇ ಒಂದು ಸುಂದರ ಕತೆಯಾಗುತ್ತದೆ. ಸಣ್ಣ ಹುಡುಗನೊಬ್ಬ ದೊಡ್ಡವನಾಗುವ ಹಾದಿಯಲ್ಲಿ ಕಾಣುವ ಕನಸುಗಳು ವಯಸ್ಸಿನೊಂದಿಗೆ ಮನಃಸ್ಥಿತಿಯಲ್ಲಾಗುವ ಪಲ್ಲಟ, ಭಯ ಮತ್ತು ಗೊಂದಲಗಳನ್ನು ಸುಂದರವಾಗಿ ಬಿಂಬಿಸುತ್ತವೆ. ಬಾಲ್ಯದ ಕನಸಿಗೆ ಇರುವ ರಮ್ಯ ಗುಣ ಮುಂದಿನ ಕನಸಿನಲ್ಲಿ ಕಮ್ಮಿಯಾಗಿ, ಅದರ ಮುಂದಿನ ಕನಸಿನಲ್ಲಿ ಇನ್ನೂ ಕಮ್ಮಿಯಾಗಿ, ಕೊನೆ ಕೊನೆಯಲ್ಲಿ ಮನುಕುಲದ ವೇದನೆ, ವಿಶಾಶದ ಕತೆಯಾಗುತ್ತದೆ. ಈ ಹಾದಿಯನ್ನು ಕುರಸೋವಾ ಹೇಳಿರುವ ರೀತಿಯೂ ಅಷ್ಟೇ ಪರಿಣಾಮಕಾರಿ. ಮೊದಲ ಕನಸಿನಲ್ಲಿ ಅಮ್ಮನ ಮಾತು ಕೇಳದೇ ನರಿಗಳ ಮದುವೆ ನೋಡಿದ ಹುಡುಗ ದೊಡ್ಡವನಾಗುತ್ತ ಕಡಿದು ಹಾಕಿದ ಮರಗಳ ನಡುವೆ ನಿಂತು ಅಳುತ್ತಾನೆ. ಅನಂತರ ಮಂಜುಗಡ್ಡೆಗಳ ಬೆಟ್ಟ ಹತ್ತುವ ಸಾಹಸ ಮಾಡುತ್ತಾನೆ. ಯುದ್ಧದಲ್ಲಿ ಸತ್ತುಹೋದ ತನ್ನದೇ ತುಕಡಿಯ ಸೈನಿಕರು ಹಿಂಬಾಲಿಸುವುದು ನೋಡಿ ಬೆಚ್ಚಿ ಬೀಳುತ್ತಾನೆ. ಕಲಾಕೃತಿಗಳನ್ನು ವ್ಯಾನ್‌ಗೋನನ್ನು ಹುಡುಕುತ್ತ ದಿಕ್ಕುತಪ್ಪುತ್ತಾನೆ. ಅಣುರಿಯಾಕ್ಟರ್‌ಗಳ ಅನಾಹುತ ಕಂಡು ಬೆಚ್ಚಿ ಬೀಳುತ್ತಾನೆ. ಅಳುವ ದೆವ್ವಗಳನ್ನು ನೋಡಿ ಭಯವಾಗಿ ಕತ್ತಲೆಯಲ್ಲಿ ಕಳೆದು ಹೋಗುತ್ತಾನೆ. ಕೊನೆಯಲ್ಲಿ ಆಧುನಿಕತೆ, ತಂತ್ರಜ್ಞಾನಗಳಿಂದ ದೂರ ಇರುವ ನೀರಿನ ಗಿರಣಿಗಳಿರುವ ಹಳ್ಳಿಯ ಬದುಕನ್ನು ನೋಡಿ ವಿಸ್ಮಯಗೊಳ್ಳುತ್ತಾನೆ. ವಿಜ್ಞಾನ, ಆಧುನಿಕತೆ ಮತ್ತು ತಂತ್ರಜ್ಞಾನದಿಂದ ದೂರ ಇರುವ ಊರು ಹೇಗೆ ಆರೋಗ್ಯಕರವಾಗಿದೆಯಲ್ಲಾ ಎಂದು ಕನವರಿಸುತ್ತಾನೆ. ಹೀಗೆ ಕನಸುಗಳ ಕತೆಯ ಮೂಲಕ ಕುರಸೋವಾ ಮನುಷ್ಯನ ಬೆಳವಣಿಗೆ, ದುರಂತ ಮತ್ತು ಕೊನೆಯಲ್ಲಿ ಆರೋಗ್ಯಕರ ಬದುಕಿಗಾಗಿನ ಕನವರಿಕೆಯನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಡುತ್ತಾರೆ.

ಇದು ಕುರಸೋವಾ ಮಾಡಿದ ಬಣ್ಣದ ಚಿತ್ರಗಳಲ್ಲಿ ಒಂದು. ಬಣ್ಣಗಳನ್ನು ಈ ಚಿತ್ರದಲ್ಲಿ ಅವರು ಬಳಸಿಕೊಂಡಿರುವ ರೀತಿ ಬೆರಗು ಮೂಡಿಸುತ್ತದೆ. ದೃಶ್ಯಗಳನ್ನು ಸಂಯೋಜಿಸಿದ ರೀತಿ, ಕತೆ ಹೇಳುತ್ತ ಹೋದ ರೀತಿಯೂ ಅಷ್ಟೇ ಪರಿಣಾಮಕಾರಿ. ವಿನ್ಸೆಂಟ್‌ ವ್ಯಾನ್‌ಗೋನ ಕಲಾಕೃತಿಗಳನ್ನು ನೋಡುತ್ತ ನಿಂತ ಒಬ್ಬ ವಿದ್ಯಾರ್ಥಿ ಆತನ ಕಲಾಕೃತಿಗಳ ಜಗತ್ತಿಗೇ ಹೋಗಿಬಿಡುವ ಮತ್ತು ಅಲ್ಲಿ ಕಲಾವಿದನನ್ನು ಭೇಟಿಯಾಗಿಬಿಡುವ, ಆತನನ್ನು ಹಿಂಬಾಲಿಸುತ್ತ ದಾರಿ ತಪ್ಪಿಬಿಡುವ ಕಲ್ಪನೆಯೇ ರೋಮಾಂಚನ ಉಂಟುಮಾಡುತ್ತದೆ.

ಚಿತ್ರ ಎಂಟು ಕನಸುಗಳ ಗುಚ್ಛವಾದರೂ, ಎಂಟು ಬೇರೆ ಬೇರೆ ಕನಸುಗಳ ಕತೆ ಈ ಚಿತ್ರದಲ್ಲಿ ಇದ್ದರೂ ಇದನ್ನು ನೋಡಿದಾಗ ಒಂದೇ ಕತೆ ನೋಡಿದ ಅನುಭವ ದಕ್ಕುತ್ತದೆ. ಒಂದು ಕತೆಯಿಂದ ಇನ್ನೊಂದು ಕತೆಗೆ ಸಹಜವಾಗಿ ನಡೆದುಕೊಂಡು ಹೋದ ಹಾಗೆ ಭಾಸವಾಗುತ್ತದೆ. ಇದು ಕುರಸೋವಾ ಸೃಷ್ಟಿಸಿದ ಕನಸುಗಳ ಗೆಲುವು.

2 ಟಿಪ್ಪಣಿಗಳು

Filed under ಬಾಲ್ಕನಿ

2 responses to “ಕನಸುಗಳ ಕಥಾಸಂಕಲನ

  1. Govind madiwalar

    KANASUGAL KATHASANKALAN ONDU 0LLEYA KATHE.CINIMA CHENNAGI IRABHUDU ANISUTTIDE.

    THANKU RASHID.

  2. md

    I was thinking “who’s blog it is after all?”. In above comment i got the answer. Rashid sir you always stand outside the crowd.
    Thanks alot for sharing such a nice details about film.

ನಿಮ್ಮ ಟಿಪ್ಪಣಿ ಬರೆಯಿರಿ