`ಬೆಳದಿಂಗಳಾಗಿ ಬಾ’ ಸಿನಿಮಾದಲ್ಲಿ ಬೆಳದಿಂಗಳಿಲ್ಲ. ಆದರೆ ಬೆಳದಿಂಗಳಂಥ ಹುಡುಗಿಯಿದ್ದಾಳೆ. ಬಾ ಎಂದು ಯಾರೂ ಕರೆಯುವುದಿಲ್ಲ. ಆದರೂ ಅಮವಾಸ್ಯೆಯಂಥ ಡಾನ್‌ಗಳು ಪದೇ ಪದೇ ಹಾಜರಾಗುತ್ತಾರೆ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಲು ಹೊರಟವನ ಕತೆ ಅಂದುಕೊಂಡಂತೆಯೇ ಆರಂಭವಾಗಿ ಅಂದುಕೊಂಡಂತೆಯೇ ಮುಗಿಯುತ್ತದೆ. ಆದರೆ ನಡುವಿನ ಹಾದಿಯಲ್ಲಿ ಮುನ್ಸೂಚನಾ ಫಲಕಗಳಿಲ್ಲದೇ ಸಿಗುವ ಅಚ್ಚರಿಯ ತಿರುವುಗಳಿವೆ. ಈ ಅಚ್ಚರಿಗಳೇ ಸಿನಿಮಾದ ನಿಜವಾದ ಅಚ್ಚರಿ!
ಜನಪ್ರಿಯ ಕನ್ನಡ ಚಿತ್ರದಲ್ಲಿ ಏನೆಲ್ಲವನ್ನು ನಿರೀಕ್ಷಿಸಬಹುದೋ ಅದೆಲ್ಲವೋ `ಬೆಳದಿಂಗಳಾಗಿ ಬಾ’ ಚಿತ್ರದಲ್ಲಿದೆ. ಹೊಡೆದಾಡಲು ಹುಡುಗನಿದ್ದಾನೆ. ಪ್ರೀತಿಸಲು ಹುಡುಗಿಯಿದ್ದಾಳೆ. ವಿರೋಧಿಸಲು ತಂದೆ ತಾಯಿಗಳಿದ್ದಾರೆ. ಹೊಡೆದಾಟವನ್ನು ಪ್ರೋತ್ಸಾಹಿಸಲು ಖಳನಾಯಕರಿದ್ದಾರೆ. ಭೂಗತ ಜಗತ್ತಿನ ಸ್ಪರ್ಧೆಯಿದೆ. ಪೊಲೀಸರ ಹಿತೋಪದೇಶವಿದೆ. ಜಲಪಾತದ ಎದುರು ಪ್ರೇಮಿಗಳ ಭೋರ್ಗೆರೆತವಿದೆ. ಅಣ್ಣ-ತಂಗಿ ಸೆಂಟಿಮೆಂಟ್, ಅಜ್ಜ-ಮೊಮ್ಮಗ ಸೆಂಟಿಮೆಂಟ್, ಅಪ್ಪ-ಮಗ ಸೆಂಟಿಮೆಂಟ್ ಹೀಗೆ ವೈವಿಧ್ಯವಿದೆ. ಇದೆಲ್ಲಕ್ಕೂ ಮೊದಲು ಮದುವೆ ಮನೆಯಲ್ಲಿ ಕಾಶಿ ಹಾಸ್ಯೋತ್ಸವವೂ ಉಂಟು!
ಸ್ನೇಹಿತನ ತಂಗಿಯ ಮದುವೆಗೆ ಬರುವ ಹುಡುಗನೊಬ್ಬ ಹುಡುಗಿಯೊಬ್ಬಳನ್ನು ಪ್ರೀತಿಸಿಬಿಡುವ ಮಾಮೂಲಿ ಸಂಗತಿಯೊಂದಿಗೆ ನಿರ್ದೇಶಕ ಎಂಎಸ್ ರಮೇಶ್ ಕತೆ ಬಿಚ್ಚಿಡತೊಡಗುತ್ತಾರೆ. ಈ ಮದುವೆಗೆ ಮೊದಲು ಕಾಲೇಜ್ ಡೇ ಕಾರ್ಯಕ್ರಮ ತಂದು, ಮದುವೆಯಲ್ಲಿ ಹಾಸ್ಯೋತ್ಸವ ತಂದು ಚಿತ್ರಕ್ಕೆ ಬೇಕಾದ ನಾಟಕೀಯ ಭೂಮಿಕೆಯನ್ನು ಸಿದ್ಧಪಡಿಸಲು ಅವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಭೂಗತ ಜಗತ್ತು ಪರಿಚಯಿಸಿ, ಅದರೊಂದಿಗೆ ನಾಯಕನ ತಿಕ್ಕಾಟ ಹೇಳಿ, ನಾಯಕನ ಅಪ್ಪನೇ ಭೂಗತ ಜಗತ್ತಿನ ಡಾನ್ ಎಂದು ಅನಂತರ ಸ್ಪಷ್ಟಪಡಿಸಿ ಚಿತ್ರಕತೆಯಲ್ಲಿ ರಮೇಶ್ ಗಮನ ಸೆಳೆಯುತ್ತಾರೆ. ಕನ್ನಡ ಚಿತ್ರೋದ್ಯಮ ಈಗಾಗಲೇ ಬಳಸಿದ ಸಂಗತಿಗಳನ್ನೇ ಅದೇ ಶೈಲಿಯಲ್ಲಿ ಬಳಸಿಕೊಂಡು ಚಿತ್ರಕತೆ ಕಟ್ಟುತ್ತಾ ಹೋಗುವ ರಮೇಶ್ ನಾಟಕೀಯತೆ ಮತ್ತು ಕುತೂಹಲ ಉಳಿಸಿಕೊಳ್ಳುತ್ತಾರೆ. ಈ ನಾಟಕೀಯತೆಯನ್ನು ನಿಭಾಯಿಸುವಲ್ಲಿ ಮತ್ತು ಸಂಭಾಷಣೆಗಳಿಂದ ಅದನ್ನು ಹೆಚ್ಚು ಪ್ರಭಾವಶಾಲಿಯಾಗಿಸುವಲ್ಲಿ ರಮೇಶ್ ಇನ್ನಷ್ಟು ಪಕ್ವತೆಯನ್ನು ತೋರಿಸಬಹುದಿತ್ತು.
ನಟನೆಯಲ್ಲಿ ವಿಜಯ ರಾಘವೇಂದ್ರ ಅಚ್ಚರಿಗೊಳಿಸದಿದ್ದರೂ ನಿರಾಶೆಗೊಳಿಸುವುದಿಲ್ಲ. ರಂಗಾಯಣ ರಘು ಎಂದಿನಂತೆ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಅವರು ಸಂಭಾಷಣೆಯನ್ನು ಒಪ್ಪಿಸುವ ರೀತಿ, ಆಂಗಿಕ ಅಭಿನಯ ಎಲ್ಲವೂ ಆಕರ್ಷಕ. ಚಂದ್ರಶೇಖರ ಕಂಬಾರರ ಅಭಿನಯ ಗಮನ ಸೆಳೆಯುವುದಿಲ್ಲವೋ, ಪಾತ್ರವೇ ಗಮನ ಸೆಳೆಯುವುದಿಲ್ಲವೋ ಹೇಳುವುದು ಕಷ್ಟ. ಅಭಿನಯಿಸಿದಾಗಲೂ, ಸುಮ್ಮನಿದ್ದಾಗಲೂ ರಮಣಿತೋ ಚೌಧರಿ ದಂತದ ಬೊಂಬೆಯಂತೆ ಕಾಣಿಸುತ್ತಾರೆ. ಗುರುಕಿರಣ್ ಸಂಯೋಜಿಸಿದ ಎರಡು ಹಾಡುಗಳು ಹಿತವಾಗಿವೆ.