ಸಿನಿಮಾ:ಗಜ ರಾಜ್ಯೋತ್ಸವ!

ಭಾವನೆಗಳ ನಂಟಿನ ಜೊತೆ ಪ್ರೀತಿಯ ಅಂಟು. ಹಾಸ್ಯದ ಜೊತೆ ಸ್ವಲ್ಪ ಅಪಹಾಸ್ಯ. ಯುರೋಪ್‌ನ ಬೆಟ್ಟ ಗುಡ್ಡಗಳಲ್ಲಿ ಹಾಡು, ಕುಣಿತ. ಬ್ಯಾಂಕಾಕ್‌ನಲ್ಲೊಂದು ಐಟಮ್‌ ನಂಬರ್‌. ನಡುನಡುವೆ ದುಷ್ಟ ಮರ್ದನ ಮತ್ತು ರುಂಡ ಛೇದನ!

ದರ್ಶನ್‌ ಸಿನಿಮಾಗಳಿಗೆ ಸಹಜ ಎನಿಸುವ ಈ ಸೂತ್ರದೊಳಗೇ `ಗಜ’ ಕತೆ ತೆರೆದುಕೊಳ್ಳುತ್ತದೆ, ಬೆಳೆಯುತ್ತದೆ ಮತ್ತು ಮುಗಿಯುತ್ತದೆ. ಸಾಮಾನ್ಯ ಹುಡುಗನೊಬ್ಬ ಹುಡುಗಿಯೊಬ್ಬಳ ಪ್ರಪಂಚ ಪ್ರವೇಶಿಸಿ, ಆ ಜಗತ್ತಿನಲ್ಲಿ ನಡೆಯುವ ಜಗಳದಲ್ಲಿ ಭೀಕರವಾಗಿ ಹೊಡೆದಾಡಿ, ಗ್ಲಾಸು ಪುಡಿಪುಡಿ ಮಾಡಿ, ಕಾರುಗಳನ್ನು ಆಕಾಶಕ್ಕೆ ಹಾರಿಸಿ, ಸಂಹಾರ ಇತ್ಯಾದಿ ಚಟುವಟಿಕೆಗಳನ್ನು ಸಾಂಗವಾಗಿ ನಡೆಸಿ ಕೊನೆಗೂ ಗೆಲ್ಲುವ ಕತೆಯಿದು. ಪ್ರೀತಿ ಇಲ್ಲಿ ಆಟಕ್ಕುಂಟು. ಲೆಕ್ಕಕ್ಕಿಲ್ಲ. ದ್ವೇಷ ಲೆಕ್ಕಕ್ಕುಂಟು. ಆಟಕ್ಕೂ ಉಂಟು. ಹೀಗೆ ಇದು ಅಪ್ಪಟ ದರ್ಶನ್‌ ಸಿನಿಮಾ!

`ಗಜ’ ಕತೆ ತೆರೆದುಕೊಳ್ಳುವ ರೀತಿ, ತೆಗೆದುಕೊಳ್ಳುವ ತಿರುವು, ಪಡೆದುಕೊಳ್ಳುವ ವೇಗ ಕುತೂಹಲ ಹುಟ್ಟಿಸುತ್ತದೆ. ಫ್ಲ್ಯಾಶ್‌ಬ್ಯಾಕಿಗೆ ಹೊರಳುತ್ತ ಕತೆ ಹೇಳುತ್ತ ಚಿತ್ರಕತೆ ಕಟ್ಟಿದ ರೀತಿ ಜನಪ್ರಿಯ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದೆ. ಚುರುಕಾದ ಸಂಭಾಷಣೆಗಳಿಂದಾಗಿ ಲವ್‌ಸ್ಟೋರಿಗೆ ಬೇಕಾದ ಲವಲವಿಕೆಯ ಗುಣವೂ ಕತೆಗೆ ದಕ್ಕಿದೆ. ಪ್ರೀತಿಯ ಕತೆ ಹೇಳುವ ಭರವಸೆ ಹುಟ್ಟಿಸುವ ನಿರ್ದೇಶಕರು ದ್ವೇಷದ ಕತೆ ಬಿಡಿಸಿಟ್ಟು ಅಚ್ಚರಿ ಹುಟ್ಟಿಸುತ್ತಾ, ರಕ್ತಪಾತದೊಂದಿಗೆ ಬೆಚ್ಚಿಬೀಳಿಸುತ್ತಾ ಕತೆ ಹೇಳುತ್ತಾ ಹೋಗುತ್ತಾರೆ. ಪರಿಣಾಮ: ನಾಯಕ ಭದ್ರ. ಖಳನಾಯಕ ಛಿದ್ರ!

ಗಮನಿಸಬೇಕಾದ ಸಂಗತಿಯೆಂದರೆ ಈ ಕತೆ, ಕಥನವೆಲ್ಲಾ ರಾಮಚಂದ್ರ ರಾವ್‌ ಬರೆದ `ಕಾದಂಬರಿ’ ಮಹಿಮೆ. ಅವರ `ಕಾದಂಬರಿ’ಯನ್ನು ನಿರ್ದೇಶಕ ಮಾದೇಶ್‌ ಯಥಾವತ್ತಾಗಿ ಅನುವಾದಿಸಿದ್ದಾರೆ. ಅನೋ `ಭದ್ರಾಃ’ ಕೃತವೋ ಯಂತು ವಿಶ್ವತಃ’ ಎಂಬ ಮಾತಿನಂತೆ ಒಳ್ಳೆಯ ಸಂಗತಿಗಳನ್ನು ಜಗತ್ತಿನ ಬೇರೆ ಬೇರೆ ಕಡೆಯಿಂದ ಸ್ವೀಕರಿಸಿದ್ದಾರೆ. ನಡುನಡುವೆ ನಾಯಕನ ಇಮೇಜ್‌ಗೆ ಬೇಕಾದ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುತ್ತ, ಖಳನಾಯಕರಿಗೆ ಬೇಕಾದ ಏಟು ಸಂಯೋಜಿಸುತ್ತ ಕತೆ ಹೇಳಿದ್ದಾರೆ.

ಒಂದಿಷ್ಟು ಅಚ್ಚರಿಯ ಸಂಗತಿಗಳೂ `ಗಜ’ದಲ್ಲಿವೆ. ಉದಾಹರಣೆ ಒಂದು: ಬೆಟ್ಟಗುಡ್ಡಗಳಲ್ಲಿ ನಾಯಕನೊಂದಿಗೆ ಕುಣಿದಾಡುವ ನಾಯಕಿ (ನವ್ಯಾ ನಾಯರ್‌) ಅಭಿನಯದಿಂದಲೂ ಗಮನ ಸೆಳೆಯುತ್ತಾರೆ. ಎರಡು: ಹೊಡೆದಾಟ, ಕೊಲೆ ನಡೆದು ಮುಗಿಯವ ಹೊತ್ತಿಗೆ ಪೊಲೀಸರು ಬರುತ್ತಾರೆ ಎಂದು ನೀವಂದುಕೊಂಡರೆ ತಪ್ಪು ತಪ್ಪು. ಎಷ್ಟು ಕೊಲೆ, ಹೊಡೆದಾಟಗಳು ನಡೆದರೂ ಪೊಲೀಸರು ಬರುವುದಿಲ್ಲ. ಮೂರು: ತಂಗಿ ಪಾಸಾದರೆ ಅಣ್ಣ ಕ್ಲಬ್‌ನಲ್ಲಿ ಡ್ಯಾನ್ಸ್‌ ಮಾಡುತ್ತ ಪಾರ್ಟಿ ಕೊಡುತ್ತಾನೆ. ಇಂಥ ಅಣ್ಣಂದಿರಿದ್ದರೆ ಜಗತ್ತಿನ ಯಾವ ತಂಗಿಯೂ ಬಹುಶಃ ಫೇಲ್‌ ಆಗಲಾರಳು!

ಅಭಿನಯದ ವಿಷಯದಲ್ಲಿ ದರ್ಶನ್‌ ಎಂದಿನಂತೆ ಲೀಲಾಜಾಲ. ಹೊಡೆದಾಟದ ಸೀನ್‌ಗಳನ್ನು ಅವರು ನಿಭಾಯಿಸಿದ ರೀತಿ ಮೆಚ್ಚುಗೆಗೆ ಅರ್ಹ. ಕುಣಿತದಲ್ಲೂ ಅದೇ ಎನರ್ಜಿ ಕಾಣಿಸುತ್ತದೆ. ನವ್ಯಾ ನಾಯರ್‌ ಪ್ರೀತಿಯ ನಡುವೆ ಕೋಮಲ್‌ ಹಾಸ್ಯೋತ್ಸವ, ಏಕ್ತಾ ನಾಟ್ಯೋತ್ಸವ ಚಿತ್ರಕ್ಕೊಂದು ಲವಲವಿಕೆಯ ಸ್ಪರ್ಶ ಕೊಟ್ಟಿದೆ. ಸಂಗೀತದಲ್ಲಿ ಹರಿಕೃಷ್ಣ ಗಮನ ಸೆಳೆಯುತ್ತಾರೆ. ಹೊಚ್ಚ ಹೊಸ ಶೈಲಿಯ ಕಾಸ್ಟ್ಯೂಮ್‌ಗಳಲ್ಲಿ ದರ್ಶನ್‌ ಚೆಂದ. ಹಾಡುಗಳು ಚಿತ್ರೀಕರಣವಾದ ತಾಣಗಳು ಚೆಂದಕಿಂತ ಚೆಂದ. ಡಚ್‌ ಶಾಟ್‌ಗಳ ದುರ್ಬಳಕೆಯಾಗಿದ್ದರೂ ರಮೇಶ್‌ ಬಾಬು ಛಾಯಾಗ್ರಹಣ ಗಮನ ಸೆಳೆಯುತ್ತದೆ. ಹೊಡೆದಾಟಗಳನ್ನು ಚಿತ್ರೀಕರಿಸುವಾಗ ಅವರು ಬಳಸಿದ ಕಂಪೋಸಿಷನ್‌ಗಳು ಖುಷಿ ಕೊಡುತ್ತವೆ.

Leave a Comment

Filed under ಸಿನಿಮಾ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s