ಗಾಳಿಪಟ:ಮಾತಿನ ಪಟ ಪ್ರೀತಿಯ ಪುಟ

ಮುಗಿಲಪೇಟೆಯಿಂದ ಬಣ್ಣಬಣ್ಣದ ಕಾಗದ ತಂದಿದ್ದಾರೆ. ಮಳೆಕಾಡಿನ ಕಡ್ಡಿಗಳಿಂದ ಹಂದರ ರಚಿಸಿ ಭಾವನೆಗಳ ಅಂಟಿನಿಂದ ಅಂಟಿಸಿದ್ದಾರೆ. ತುಸು ಹೆಚ್ಚೇ ಎನಿಸುವಂತೆ ಸಂಭಾಷಣೆಗಳ ಬಾಲಂಗೋಚಿಯನ್ನು ಜೋಡಿಸಿ, ಜನಪ್ರಿಯ ಸಿನಿಮಾಗಳ ಮಿನುಗುವ ಬೇಗಡೆಯಿಂದ ಅಲಂಕರಿಸಿ ನಿರ್ದೇಶಕ ಯೋಗರಾಜ್‌ ಭಟ್‌ `ಗಾಳಿಪಟ’ ಹಾರಿಸಿದ್ದಾರೆ!ಗಾಳಿಪಟ ಇಲ್ಲಿ ಪತ್ರವಾಗುತ್ತದೆ. ಪಾತ್ರವಾಗುತ್ತದೆ. ರೂಪಕವಾಗುತ್ತದೆ. ಹಸಿರೇ ತುಂಬಿಕೊಂಡಿರುವ, ಕೆಸರಿಲ್ಲದ, ಮುಗಿಲುಪೇಟೆಯೆಂಬ ಹೊಸಪೇಟೆಯನ್ನು ಸೃಷ್ಟಿಸುವ ನಿರ್ದೇಶಕರು ಸೂತ್ರ ಕಿತ್ತುಹೋದ ಗಾಳಿಪಟದಂತಾಗಿರುವ ಮೂರು ಹುಡುಗರನ್ನು ಈ ಊರಿಗೆ ತರುತ್ತಾರೆ. ಅದರಲ್ಲೊಬ್ಬ ವಾಚಾಳಿ. ಮತ್ತೊಬ್ಬ ಭಗ್ನಪ್ರೇಮಿ. ಇನ್ನೊಬ್ಬ ಸಂಕೋಚದ ಮುದ್ದೆ. ಇದಕ್ಕೆ ತದ್ವಿರುದ್ಧವಾಗಿರುವ ಸ್ವಭಾವದ ಮೂವರು ಹುಡುಗಿಯರೊಂದಿಗೆ ಇವರ ಮುಖಾಮುಖಿ. ಪ್ರೇಮ ಪ್ರಕರಣ. ಇದು ಕತೆ.

ಸರಳವಾಗಿರುವ ಲಘುಕತೆಯನ್ನು ಪರಿಣಾಮಕಾರಿಯಾದ ಚಿತ್ರಕತೆಯ ಜೊತೆ ಬಿಚ್ಚಿಡುತ್ತಾ ನಿರ್ದೇಶಕರು ಮುಗಿಲುಪೇಟೆಯ ಗುಡ್ಡ ಬೆಟ್ಟಗಳ ದಾರಿಯುದ್ದಕ್ಕೂ ವಟವಟ ಮಾತಾಡುತ್ತಾರೆ. ಹಾಡಿಸುತ್ತಾರೆ. ಕುಣಿಸುತ್ತಾರೆ. ಕನಸುಗಳ ಗಾಳಿಪಟ ತೇಲಿಬಿಡುತ್ತಾರೆ. ಕತೆಗಿಂತ ಚಿತ್ರಕತೆಯ ಮೂಲಕವೇ ಕುತೂಹಲ ಉಳಿಸಿಕೊಳ್ಳುತ್ತ ಹೋಗುವ ಭಟ್‌ ಪಾತ್ರಗಳನ್ನು ಪರಿಚಯಿಸಿ, ಬೆಳೆಸುವ ರೀತಿಯೂ ಕುತೂಹಲಕರ. ಉದಾಹರಣೆಗೆ ಹಂದಿ ಪಾತ್ರಕ್ಕೆ ಅರ್ಹವಾಗಿ ಹೀರೋ ಇಂಟ್ರೊಡಕ್ಷನ್‌ ಸಿಕ್ಕಿದೆ. ಹಂದಿ ಶಿಕಾರಿಯಿಂದಾಗಿ ಚಿತ್ರಕತೆಗೆ ಬೇಕಾದ ನಾಟಕೀಯತೆ ಮತ್ತು ಕುತೂಹಲದ ಗುಣ ಪ್ರಾಪ್ತವಾಗಿದೆ. ಚಿತ್ರಕತೆ ಪಂಡಿತರು ಹೇಳುವ ಥ್ರೀ ಆ್ಯಕ್ಟ್‌ ಶೈಲಿಯಲ್ಲಿ ಕತೆ ಕಟ್ಟುವ ಯೋಗರಾಜ್‌ ಭಟ್‌ ತಮ್ಮ ಹಿಂದಿನ ಚಿತ್ರಗಳಿಗಿಂತ ಹೆಚ್ಚು ಪ್ರಬುದ್ಧತೆ ಮತ್ತು ಜಾಣತನದೊಂದಿಗೆ ಅಧಿಕಾರಯುತವಾಗಿ ಕತೆ ಹೇಳಿದ್ದಾರೆ.

ಹೊಸತಲೆಮಾರಿನ ಹುಡುಗರ ಆಡುಭಾಷೆ ಇಲ್ಲಿ ಸಂಭಾಷಣೆಯಾಗಿದೆ. ಆ ಸಂಭಾಷಣೆಯಲ್ಲಿ ತುಂಟತನವಿದೆ. ಕಿಲಾಡಿ ಮನಸ್ಸಿದೆ. ಆರೋಗ್ಯಕರ ಬಯ್ಗುಳವಿದೆ. ತಿರಸ್ಕಾರದ ಸ್ಪರ್ಶವಿರುವ ಮಾತುಗಳಿದ್ದರೂ ಕೆಲವೆಡೆ ವಾಚಾಳಿಯಾಗಿಬಿಟ್ಟರೂ ಯೋಗರಾಜ್‌ ಭಟ್‌ ಸಂಭಾಷಣೆ ಚಿತ್ರದ ಹೈಲೈಟ್‌. ಮಾಂಸದ ಅಂಗಡಿಯಲ್ಲಿ ಐಸ್‌ಕ್ರೀಮ್‌ ಹುಡುಕಿದಂತೆ ಎಂಬಂಥ ಸಾಲುಗಳಿಂದ ಕವಿಯಾಗುವ ಭಟ್‌ ಅನ್ಯಾಯವಾಗಿ ಕವಿಯಾಗಿಬಿಟ್ಟೆ ಎನ್ನುತ್ತ `ಪ್ರೇಮಕವಿ’ಗಳ ಲೇವಡಿ ಮಾಡುತ್ತಾರೆ. ಪಾಪದ ಹುಡುಗನನ್ನು ತಂಗಿಯಾಗಿಸುತ್ತ ಜೋರಿನ ಹುಡುಗಿಯನ್ನು ಅಣ್ಣನಾಗಿಸುತ್ತಾರೆ! ಒಂದಿಷ್ಟು ಮೌನವೂ ಚಿತ್ರದಲ್ಲಿದ್ದರೆ ಈ ಮಾತುಗಳು ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು.

ಕತೆಯುದ್ದಕ್ಕೂ ಸೌತೆಕಾಯಿ, ಚಿಪ್ಸು ಇತ್ಯಾದಿಗಳನ್ನು ಗಣೇಶ್‌ ತಿನ್ನುತ್ತಲೇ ಇರುತ್ತಾರೆ. ಜೊತೆಯಲ್ಲಿ ತಲೆ ತಿನ್ನುತ್ತಾರೆ! ವಾಚಾಳಿಯ ಪಾತ್ರವನ್ನು ಅವರು ಅಗಾಧವಾದ ಪ್ರಬುದ್ಧತೆಯೊಂದಿಗೆ ನಿಭಾಯಿಸಿದ್ದಾರೆ. ಪಾತ್ರಕ್ಕಿರುವ ಸ್ವಾತಂತ್ರ್ಯದ ಸೌಂದರ್ಯ ಅವರ ನಟನೆಯಿಂದ ಇನ್ನಷ್ಟು ಸುಂದರವಾಗಿದೆ. ಸಂಕೋಚದ ಮುದ್ದೆಯ ಪಾತ್ರದಲ್ಲಿ ದಿಗಂತ್‌ ಅಚ್ಚರಿಹುಟ್ಟಿಸಿದರೆ ಬೇಟೆಗಾರನ ಪಾತ್ರದಲ್ಲಿ ಅನಂತ್‌ ಎಂದಿನಂತೆ ಲೀಲಾಜಾಲ. ತನಗೆ ಸಿಕ್ಕಿದ ಪುಟ್ಟ ಅವಕಾಶದಲ್ಲಿ ನೀತು ಇವರೆಲ್ಲರನ್ನೂ ಮೀರಿಸುತ್ತಾರೆ. ದಯಾಳ್‌ ಮಾತಾಡದೇ ನಗಿಸುತ್ತಾರೆ.

ಹರಿಕೃಷ್ಣ ಸಂಗೀತವನ್ನು ಜಯಂತ್‌ ಮತ್ತು ಭಟ್‌ ಸಾಹಿತ್ಯ ಮೀರಿಸುತ್ತದೆ. ಉದಾಹರಣೆ: ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ. ಸುರೇಶ್‌ ಅರಸ್‌ ಲಾಲಿತ್ಯಪೂರ್ಣ ಸಂಕಲನದಿಂದ ಇಷ್ಟವಾಗುತ್ತಾರೆ. ವೈಡ್‌ಲೆನ್ಸ್‌ ಬಳಸಿ ನಾಟಕೀಯ ಪ್ರಸಂಗಗಳನ್ನು ಪರಿಣಾಮಕಾರಿಯಾಗಿಸುವ ರತ್ನವೇಲು ಛಾಯಾಗ್ರಾಹಕರಾಗಿ ನಿರೀಕ್ಷೆ ಉಳಿಸಿಕೊಳ್ಳುತ್ತಾರೆ. ಕಂಪೊಸಿಷನ್‌ ಮತ್ತು ಲೆನ್ಸಿಂಗ್‌ ಮೂಲಕ ಗಮನ ಸೆಳೆಯುತ್ತಾರೆ. ಬೆದರು ಬೊಂಬೆಯೇ ಹಾಡನ್ನು ಅವರು ಚಿತ್ರಿಸಿದ ರೀತಿ ಚಿತ್ತಾಕರ್ಷಕ. ಪರಿಣಾಮಕಾರಿಯಾದ ಧ್ವನಿಸಂಯೋಜನೆ ಈ ಚಿತ್ರದ ಇನ್ನೊಂದು ಅಚ್ಚರಿ.

Post a Comment

Your email is never published nor shared. Required fields are marked *
*
*