ಪುಸ್ತಕ ಓದುವಾಗ ನಮ್ಮ ತಲೆಯಲ್ಲಿ ನಮ್ಮದೇ ಜಗತ್ತಿನಿಂದ ಹುಟ್ಟಿಕೊಂಡ ಚಿತ್ರಗಳು ಮೂಡುತ್ತಿರುತ್ತವೆ. ಕೊತ್ವಾಲ ಅಂತ ರೌಡಿ ಇದ್ದ ಎಂದರೆ ನಮ್ಮ ತಲೆಯಲ್ಲಿ ನಮ್ಮ ಭಾವಕ್ಕೆ, ನಮ್ಮ ಗ್ರಹಿಕೆಗೆ ತಕ್ಕುದಾದ ಕೊತ್ವಾಲ ಕಾಣತೊಡಗುತ್ತಾನೆ. ಸಿನಿಮಾ ಆಗುವಾಗ ನಮ್ಮ ಎದುರು ಸ್ಪಷ್ಟ ಚಿತ್ರ ಕಾಣಿಸತೊಡಗುತ್ತದೆ. ಅದು ನಮ್ಮ ಕಲ್ಪನೆಯ ಚಿತ್ರಕ್ಕಿಂತ ಬೇರೆ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಪುಸ್ತಕವೊಂದನ್ನು ಓದಿ ಅದನ್ನು ಆಧರಿಸಿದ ಸಿನಿಮಾ ನೋಡುವಾಗ ನಮಗೆ ಗೊಂದಲವಾಗುತ್ತದೆ. `ದಾದಾಗಿರಿಯ ದಿನಗಳು’ ಪುಸ್ತಕವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನನಗೆ `ಆ ದಿನಗಳು’ ಚಿತ್ರವನ್ನು ನೋಡುವಾಗ ಹಲವು ಸಲ ಇಂಥ ಗೊಂದಲ ಕಾಡಿತು. ಇದರ ನಡುವೆಯೂ ಚಿತ್ರ ಮನಸ್ಸು ತಟ್ಟಿತು. ಚಿತ್ರದ ಕುರಿತು ಅನಿಸಿದ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದೇನೆ.
ಭೂಗತ ಜಗತ್ತಿನ ಕತೆ ಹೇಳುವ ಕನ್ನಡ ಚಿತ್ರಗಳ ಗುಣಲಕ್ಷಣಗಳೇನು? ಹಳ್ಳಿಯಿಂದ ಬಂದ ಹುಡುಗ, ಮುಗ್ಧ, ಪರಿಸ್ಥಿತಿಯ ಪಿತೂರಿಯಿಂದ ರೌಡಿ, ಮುಚ್ಚು, ಹೊಡೆದಾಟ, ಹಿರೋಯಿಸಂ, ನಡುವೆ ಹುಡುಗಿ ಪ್ರೀತಿ, ತಾಯಿ ಸೆಂಟಿಮೆಂಟ್, ರಾಜಕಾರಣಿಗಳಿಂದ ಕುಮ್ಮಕ್ಕು, ಪೊಲೀಸರಿಂದ ಎನ್‌ಕೌಂಟರ್! `ಆ ದಿನಗಳು’ ಚಿತ್ರದಲ್ಲಿ ಇದೆಲ್ಲ ಇಲ್ಲ. ಭೂಗತ ಜಗತ್ತನ್ನು ಪರಿಸ್ಥಿತಿಯ ಪಿತೂರಿಯಿಂದ ಪ್ರವೇಶಿಸುವ ಒಬ್ಬ ಪ್ರೇಮಿಯ ಕುರಿತು ನಿರ್ದೇಶಕ ಚೈತನ್ಯ ಹೇಳಿದರೂ ಅದು ಮೇಲೆ ಹೇಳಿದ ಜನಪ್ರಿಯ ಲಕ್ಷಣಗಳಿಂದ, ಕ್ಲಿಷೆಗಳಿಂದ ಮುಕ್ತವಾದ ಚಿತ್ರ.
ಇಲ್ಲಿ ಮಚ್ಚು ಇದೆ. ಕೊಚ್ಚುವವರಿಲ್ಲ. ಪ್ರೀತಿ ಇದೆ. ಹುಸಿ ರಮ್ಯತೆ ಹೆಚ್ಚೇನಿಲ್ಲ. ಸಿಟ್ಟು, ಸಣ್ಣತನ, ದ್ವೇಷಗಳೆಲ್ಲ ಇವೆ. ಹೊಡೆದಾಟಗಳಿಲ್ಲ. ಅಮ್ಮ, ತಂಗಿ ಇದ್ದಾರೆ. ಸೆಂಟಿಮೆಂಟಿಗೆ ಜಾಗವಿಲ್ಲ. ಕೊಲೆ ಕೊನೆಗೂ ನಡೆದೇ ಹೋಗುತ್ತದೆ. ಆದರೆ ವೈಭವೀಕರಣ ಇಲ್ಲ! ಭೂಗತ ಜಗತ್ತಿನ ಮೋಸ, ರಾಜಕೀಯ, ಚಿಲ್ಲರೆತನ, ಕ್ರೌರ್ಯ ಎಲ್ಲವೂ ಸರಕಾರಿ ಒಕ್ಕಣೆಯಂತೆ ನಿರ್ಭಾವುಕವಾಗಿ ನಡೆಯುತ್ತವೆ. ಶ್ರೀಧರ್ ಬರವಣಿಗೆಯಂತೆ ತಣ್ಣಗೆ ಹರಿಯುತ್ತದೆ. ಭೂಗತ ಜಗತ್ತಿನ ಚಿತ್ರಗಳ ರೋಚಕ ಶೈಲಿಯ ನಿರೂಪಣೆಯನ್ನು ಆರಿಸಿಕೊಳ್ಳದೇ ನಿರ್ದೇಶಕರು ಕುತೂಹಲ ಉಳಿಸಿಕೊಂಡಿರುವ ರೀತಿ ಗಮನಾರ್ಹ.
`ಆ ದಿನಗಳು’ ಚಿತ್ರ ಕೋತ್ವಾಲ ರಾಮಚಂದ್ರನ ಕೊನೆಯ ದಿನಗಳನ್ನು ಹೇಳುತ್ತದೆ. ನಗರದಲ್ಲಿರುವ ಉದ್ಯಮಿಯೊಬ್ಬರ ಮಗ ಒಬ್ಬಳು ಹುಡುಗಿಯನ್ನು ಪ್ರೀತಿಸಿದ್ದಾನೆ. ಆ ಹುಡುಗಿಯನ್ನು ಸೊಸೆ ಮಾಡಿಕೊಳ್ಳಲು ಉದ್ಯಮಿಗೆ ಇಷ್ಟವಿಲ್ಲ. ಅದಕ್ಕಾಗಿ ಮಗನ ವಿರುದ್ಧ ಕೋತ್ವಾಲನನ್ನು ಛೂ ಬಿಡುತ್ತಾನೆ. ಮಗ ಕೋತ್ವಾಲನನ್ನೇ ಸಾಯಿಸಿ ತನ್ನ ಪ್ರೀತಿಯನ್ನು ಬದುಕಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಈ ನಡುವೆ ಕೋತ್ವಾಲನನ್ನು ಮುಗಿಸಲು ಜಯರಾಜ್ ಕಾಯುತ್ತಿದ್ದಾನೆ. ಬಚ್ಚನ್-ಶ್ರೀಧರ್ ಕಾಯುತ್ತಿದ್ದಾರೆ. ಇವರ ಜೊತೆಯಲ್ಲಿ ಉದ್ಯಮಿಯ ಮಗನೂ ಸೇರಿಕೊಳ್ಳುತ್ತಾನೆ. ಇದು ಕತೆ.
ಈ ಕತೆಯನ್ನು ಹೇಳಲು ನಿರ್ದೇಶಕರು ದೃಶ್ಯ ಸಾಧ್ಯತೆಗಳಿಗಿಂತ ಹೆಚ್ಚಾಗಿ ಸಂಭಾಷಣೆಗಳನ್ನೇ ಬಳಸಿಕೊಂಡಿದ್ದಾರೆ. ಹಳೆಯ ಕಾರುಗಳು, ಅರೆ ಹಳದಿ ಕಲರ್ ಟೋನ್ ಮತ್ತು ಉದಾರೀಕರಣದ ನಂತರದ ಜಗತ್ತಿನ ಕೆಲ ಸಂಗತಿಗಳು ಇಲ್ಲದಿದ್ದರೆ ಇಪ್ಪತ್ತು ವರ್ಷಗಳ ಹಿಂದಿನ ಬೆಂಗಳೂರು ಸೃಷ್ಟಿಯಾಗಿಬಿಡುತ್ತದೆ ಎಂದು ಭಾವಿಸಿಕೊಂಡಿರುವುದೂ ಕುತೂಹಲಕರವಾಗಿದೆ. ಜೊತೆಯಲ್ಲಿ ಕತೆಯ ಟೇಕಾಫ್ ಮತ್ತು ಲ್ಯಾಂಡಿಂಗ್‌ಗಳ ಕುರಿತೂ ಒಂದಿಷ್ಟು ಪ್ರಶ್ನೆಗಳನ್ನು ಕೇಳಬಹುದು. ಹೀಗಿದ್ದರೂ ಭೂಗತ ಜಗತ್ತಿನ ಕತೆಯನ್ನು ಸಾಮಾನ್ಯ ಜಗತ್ತಿನ ವಿಸ್ತತ ಭಾಗದಂತೆ ನೋಡಿ ಸಂಯಮದೊಂದಿಗೆ ನಿರೂಪಿಸಲಾಗಿರುವುದು `ಆ ದಿನಗಳು’ ವಿಶೇಷ. ಶ್ರೀಧರ್ ಬರೆದ ಕತೆಗೇ ಅಂಥ ತಣ್ಣಗಿನ ಗುಣವಿತ್ತು. ಗಿರೀಶ್ ಕಾರ್ನಾಡ್ ಜೊತೆ ಸೇರಿ ಅವರು ಬರೆದ ಚಿತ್ರಕತೆ ಮತ್ತು ಸಂಭಾಷಣೆ ಆ ಗುಣವನ್ನು ಇನ್ನಷ್ಟು ದಟ್ಟಗೊಳಿಸಿದೆ. ಅತುಲ್ ಕುಲಕರ್ಣಿ, ಗಿರೀಶ್ ಕಾರ್ನಾಡ್, ಚೇತನ್, ಆಶೀಷ್ ವಿದ್ಯಾರ್ಥಿಯ ಅಭಿನಯ ಅದನ್ನು ಸಮರ್ಥವಾಗಿ ತೆರೆಗೆ ವರ್ಗಾಯಿಸಿದ್ದಾರೆ. ಮುಗುಳ್ನಗುವ ಕೊಲೆಗಾರನ ಪಾತ್ರದಲ್ಲಿ ಅತುಲ್ ಕುಲಕರ್ಣಿ ಅಭಿನಯ ಬೆರಗು ಹುಟ್ಟಿಸುತ್ತದೆ. ಇಳೆಯರಾಜ ಸಂಗೀತ, ಹಿನ್ನೆಲೆ ಸಂಗೀತ ಕತೆಗೆ ಪೂರಕ. ನಾಯಕಿಯ ಅಭಿನಯದ ಕುರಿತು ಇದೇ ಮಾತು ಹೇಳುವಂತಿಲ್ಲ. ವೇಣು ಛಾಯಾಗ್ರಹಣ ಕತೆಯ ನಿರೂಪಣೆಗೆ ಪೂರಕವಾಗಿದೆ. ಹುಡುಕಾಟದ ಸನ್ನಿವೇಶಗಳಲ್ಲೂ ಸ್ಟೆಡಿಕ್ಯಾಮ್ ಫೀಲ್ ಇಲ್ಲ ಎನ್ನುವುದೇ ಅದಕ್ಕೊಂದು ಉದಾಹರಣೆ.
`ದಾದಾಗಿರಿಯ ದಿನಗಳು’ ಪುಸ್ತಕದಲ್ಲಿ 1980 ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ರೌಡಿ ಜಗತ್ತಿನ ಚಟುವಟಿಕೆಗಳನ್ನು ತಣ್ಣಗಿನ ಶೈಲಿಯಲ್ಲಿ ಹೇಳುತ್ತಾ, ಆ ದಿನಗಳ ರಾಜಕೀಯವನ್ನು ಶ್ರೀಧರ್ ಹೇಳಿದ್ದರು. ಆ ದಿನಗಳ ಸಾಮಾಜಿಕ ಸ್ಥಿತಿ, ಜಾತಿ ಜಗಳಗಳ ಕುರಿತು ಬೆಳಕು ಚೆಲ್ಲಿದ್ದರು. ರಾಜಕಾರಣಿಗಳು ಮತ್ತು ರೌಡಿಗಳ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ವಿವರಣೆಗಳೂ ಸೇರಿಕೊಂಡು ಕತೆ ಬೇರೆ ಬೇರೆ ಸ್ತರಗಳಲ್ಲಿ ತೆರೆದುಕೊಂಡಿತ್ತು. `ಆ ದಿನಗಳು’ ಚಿತ್ರ ಹೀಗೆ ಬೇರೆ ಬೇರೆ ಸ್ತರಗಳಲ್ಲಿ ಬೆಳೆಯದಿದ್ದರೂ ರೌಡಿ ಜಗತ್ತಿನ ನೈಜ ಚಿತ್ರಣವಾಗಿ ಗಮನ ಸೆಳೆಯುತ್ತದೆ.
6 Comments
I am waiting to watch the movie. Thanks for the review
Dear Parameshwar,
Thanks for the review of the movie. Is the book on which this movie is based still available in Bangalore, if so where?
Thanks and regards,
Mayura
ಸರ್ ನೀವೂ ಬ್ಲಾಗ್ ಜೀವಿನಾ? ನಿಮ್ಮ ಬ್ಲಾಗನ್ನು ನೋಡಿ ಆಶ್ಚರ್ಯವಾಯಿತು ಜೊತೆಗೆ ಸಂತೋಷನೂ ಆಯಿತು.ಇನ್ನು ಮುಂದೆ ನಿಮ್ಮ ಬ್ಲಾಗಿಗೆ ನಾ ಬರ್ತಾನೇ ಇರುತ್ತೇನೆ.
Film is very good
ಚಿತ್ರಕ್ಕಿಂತ ಚಿತ್ರದ ಬಗ್ಗೆ ನಿಮ್ಮ ಬರವಣಿಗೆ ಇಷ್ಟವಾಯಿತು.
ಧನ್ಯವಾದಗಳು.
ಜೋಮನ್.
ಇದರಲ್ಲಿ ಶ್ರಿಧರ್ ನಟನೆ ಬಹಳ ಪ್ರಭಾವಶಾಲಿಯಾಗಿ ಮೂಡಿಬಂದಿದೆ.ಇಷ್ಟವಾಯಿತು. ಮತ್ತೆ ಮತ್ತೆ ನೊಡಬಹುದಾದ ಚಿತ್ರ
Post a Comment