ಅಂತ್ಯಸಂಸ್ಕಾರ

ಪೊಲೀಷ್‌ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿ ಪ್ರಯತ್ನಪಟ್ಟಿದ್ದಾರೆ!`ಇಷ್ಟು ಬೇಗ, ಹೀಗಾಗುತ್ತೆ ಅಂತ ಯಾರೂ ಕನಸು ಮನಸಲ್ಲೂ ಎಣಿಸಿರಲಿಕ್ಕಿಲ್ಲ’.`ಒತ್ತಡ ಮತ್ತೆ ಸಿಗರೇಟು, ನಾನು ಎಷ್ಟು ಸಲ ಹೇಳಿದ್ದೆ’.

`ಸದ್ಯ ಹಾಗಾಗಲಿಲ್ಲವಲ್ಲಾ, ಥ್ಯಾಂಕ್ಸ್‌’.

`ಆ ಹೂವಿನ ಬೊಕೆನ ತೆಗೆದುಕೊಡು’.

`ಅವನ ತಮ್ಮ ಇದ್ದನಲ್ಲಾ, ಅವನಿಂದಲೇ ಆಗಿದ್ದು. ಇಡೀ ಸಂಸಾರ ನೋಡಿಕೊಳ್ಳಬೇಕಿತ್ತು’.

`ಅರೆ ನೀನು ಗಡ್ಡ ಬಿಟ್ಟು, ನನಗೆ ಅದು ನೀನೇ ಅಂತ ಗುರುತೇ ಸಿಗಲಿಲ್ಲ ನೋಡು’.

`ಅದು ಅವನದೇ ತಪ್ಪು ಬಿಡು, ಯಾವಾಗಲೂ ಯಾವುದಾದರೂ ಒಂದರಲ್ಲಿ ಸಿಕ್ಕಿಬೀಳುತ್ತಲೇ ಇದ್ದ’.

`ಆ ಹೊಸ ಹುಡುಗ ಏನೋ ಹೇಳೋಕೆ ನೋಡ್ತಿದಾನೆ. ನಾನೆಲ್ಲೂ ಅವನನ್ನು ನೋಡಿದ ನೆನಪಿಲ್ಲವಪ್ಪಾ’.

`ಪ್ರಭಾಕರ ಚಿಕ್ಕಮಗಳೂರಿಗೆ ಹೋಗಿದ್ದಾನೆ, ಪ್ರಶಾಂತ ಯು ಎಸ್‌ನಲ್ಲಿದ್ದಾನಂತೆ’.

`ನೀನೊಬ್ಬನೇ ನೋಡು ಸರಿಯಾಗಿ ನೆನಪಿಟ್ಟುಕೊಂಡು ಕೊಡೆ ತಂದಿದೀಯಾ ಇವತ್ತು’.

`ಅವರೆಲ್ಲರಿಗಿಂತ ಇವನು ಬುದ್ದಿವಂತನಾಗಿದ್ದ ಹೌದು, ಏನಾಯ್ತು?’.

`ಅದು ಹೊಕ್ಕು ಹೊರಡೋ ಮನೆ, ಅಲ್ಲಿಗೆ ಹೋಗಲಿಕ್ಕಿಲ್ಲ ಬಿಡು’.

`ಸರಿ, ಇವನು ಹೇಳಿದ್ದು ಸರೀನೇ. ಆದರೆ ಅದೊಂದೇ ಕಾರಣ ಅಂತ ನನಗೆ ಅನ್ನಿಸೋದಿಲ್ಲವಪ್ಪಾ’.

`ಹೌದು, ಎರಡೂ ಬಾಗಿಲಿಗೆ ಪೈಂಟ್‌ ಮಾಡಬೇಕು, ಎಷ್ಟು ಆಗುತ್ತದೆ ಹೇಳು’.

`ಎರಡು ಕೋಳಿ ಮೊಟ್ಟೆ, ಒಂದು ಟೀಸ್ಪೂನ್‌ ಸಕ್ಕರೆ’.

`ಅದು ಅವನ ಕೆಲಸವೇ ಆಗಿರಲಿಲ್ಲ, ಯಾಕೆ ಸುಮ್ಮನೆ ಸಿಕ್ಕಿ ಹಾಕಿಕೊಳ್ಳಬೇಕಿತ್ತು?’

`ಹೌದು, ನೀಲಿ ಬಣ್ಣದ್ದು, ಸಣ್ಣ ಸೈಜಿಂದು ಬೇಕು’.

`ಐದು ಸಲ ಕೇಳಿದೆ, ಉತ್ತರವೇ ಇಲ್ಲ’.

`ಒಳ್ಳೇದು, ಪಾರ್ಟ್‌ ಟೈಂ ಕೆಲಸವಾದರೂ ಇದೆಯಲ್ಲಾ ಅವಳಿಗೆ ಸದ್ಯ’.

`ನನಗೆ ಗೊತ್ತಿಲ್ಲಪ್ಪಾ, ಅವನ ನೆಂಟರಿರಬೇಕು’.

`ನಾನು ಇಲ್ಲಿಗೆ ಬಂದಿದ್ದೆ, ಆದರೆ ಈ ಜಾಗಕ್ಕೆ ಬಂದಿರಲೇ ಇಲ್ಲ ನೋಡು’.

`ನಿನ್ನೆ ತಾನೇ ನಾನು ಅವನನ್ನು ಕನಸಲ್ಲಿ ಕಂಡಿದ್ದೆ, ಥಟ್ಟನೆ ಎಚ್ಚರವಾಯ್ತು’.

`ಮಗಳು ಅಷ್ಟು ಕೆಟ್ಟದಾಗೇನೂ ಇಲ್ಲ’.

`ಹೌದೌದು, ಅದು ನಮ್ಮೆಲ್ಲರಿಗೂ ಆಗಿದೆ’,

`ಆ ವಿಧವೆಗೆ ನನ್ನ ಹಾರೈಕೆ ಹೇಳಿಬಿಡು’.

`ಇದು ಲ್ಯಾಟೀನ್‌ ಮಂತ್ರದ ಥರ ಕೇಳತ್ತೆ’.

`ಅದು ಬಂತು ಹೋಯ್ತು’.

`ಬರ್ತೀನಿ ಮೇಡಮ್‌’.

`ಎಲ್ಲಾದರೂ ಬಿಯರ್‌ ಸಿಕ್ಕರೆ ತಗೊಂಡು ಹೋಗೋಣ’.

`ಸರಿ ಫೋನ್‌ ಮಾಡು, ಮಾತಾಡೋಣ’.

`ನಾಲ್ಕನೇ ನಂಬರ್ರೋ ಹನ್ನೆರಡನೇ ನಂಬರ್ರೋ’.

`ನಾನು ಈಕಡೆಯಿಂದ ಹೋಗ್ತೀನಿ’.

`ಇಲ್ಲ ಇಲ್ಲ ನಾನು ಬರಲ್ಲ’.

ಪೊಲೀಷ್‌ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿ ಪ್ರಯತ್ನಪಟ್ಟಿದ್ದಾರೆ!

4 Comments

  1. Tina
    Posted September 12, 2007 at 6:55 am | Permalink

    ವಿಕಾಸ,
    ಬಹಳ ಚೆನ್ನಾಗಿದೆ.
    ವಿಸ್ಲಾವಾಳ ಈ ಕವಿತೆಯನ್ನು ಆಂಗ್ಲದಲ್ಲಿ ಓದಿದ ಮೇಲೆ ಇನ್ನೂ ಚೆನ್ನಾಗಿದೆ ಅನ್ನಿಸಿತು.
    ಬಹಳ ಜನರು ಇದನ್ನು ಕವಿತೆ ಎಂದೇ ಒಪ್ಪಿಕೊಳ್ಳಲಿಕ್ಕಿಲ್ಲ!!
    ಓದುತ್ತ ನಿಸ್ಸೀಂ ಎಜೆಕಿಯೆಲರ ಕವಿತೆಗಳು ನೆನಪಾದವು.

  2. Posted September 22, 2007 at 6:16 pm | Permalink

    ಬುದ್ಧಿವಂತಿಕೆಯಿಂದ ಬರೆದ ಕವನ. ಟ್ರಕ್ಕಿ ರೈಟಿಂಗ್ ಅನ್ನುತ್ತಾರಲ್ಲ, ಆ ಥರದ್ದು. ನನಗೆ ಯಾಕೋ ಅಷ್ಟೊಂದು ಇಷ್ಟವಾಗಲಿಲ್ಲ. ಇರಲಿ ಹೀಗೇ ಅನುವಾದಕ್ಕೆ ಪ್ರಯತ್ನ ಮಾಡುತ್ತಾನೇ ಇರಿ !
    ಅಂದಹಾಗೆ ನಿಮ್ಮ ಬ್ಲಾಗ್‌ಗೆ ಬಾಗಿಲಲ್ಲಿ ಬಾಗುತ್ತಲೇ ಇರುತ್ತೇನೆ ಆಗಾಗ. ಇಬ್ಬರೂ ಚೆನ್ನಾಗಿ ಬರೆಯುತ್ತೀರಿ. ಮುಂದುವರಿಸಿ.
    - ಸಮ್ಮತಿ

  3. Posted September 25, 2007 at 6:06 am | Permalink

    ಮುಲ ಕವಿತೆಯನ್ನು ಓದಿಲ್ಲ. ಆದ್ರೂ ಇದು ಒಂಥರಾ ಚೆನ್ನಾಗಿದೆ. ಬಹುಶಃ ಇಂತಹ ಕವಿತೆಗಳನ್ನು ನಾನು ಈ ಮುಂಚೆ ಓದಿಲ್ಲ ಅನ್ನಿಸುತ್ತೆ.

  4. Posted October 20, 2007 at 2:39 pm | Permalink

    ಸೊಗಸಾಗಿದೆ ವಿಕಾಸ್.
    ನೆಲದ ಸೊಗಡಿನ ಅನುವಾದ.

    ಇನ್ನೂ ಬರೆಯಿರಿ.

    - ಚೇತನಾ ತೀರ್ಥಹಳ್ಳಿ

One Trackback/Pingback

  1. [...] ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆಯೊಂದನ್ನು ಕನ್ನಡಕ್… ವಿಕಾಸ್ ನೇಗಿಲೋಣಿ ತಂದಿದ್ದಾರೆ. ಹಲವು [...]

Post a Comment

Your email is never published nor shared. Required fields are marked *
*
*