ಇದು ವಿಕಾಸ ನೇಗಿಲೋಣಿ ಬರಹ: ನಾನು ಬೆಳಿಗ್ಗೆ ಊಟಕ್ಕಿಂತ ಮೊದಲು ನೋಡುತ್ತಿದ್ದುದು ಕೃಷ್ಣನನ್ನೇ. ಆ ಕೃಷ್ಣ ಆಗ ಕೌಪೀನಧಾರಿಯಾಗಿರುತ್ತಿದ್ದ, ಚಿನ್ನದ ಜನಿವಾರ ಇರುತ್ತಿತ್ತು, ಸೊಂಟದಲ್ಲಿ ಮಕ್ಕಳಿಗೆ ಹಾಕಿದಂಥ ನೇವಳ ಇರುತ್ತಿತ್ತಾದ್ದರೂ ಅದು ನಮಗೆ ನಿಮಗೆ ಸಿಗದ ಚಿನ್ನದ ತೊಡುಗೆ. ಒಂದು ಕೈಯಲಿ ಕಡಗೋಲು, ಅತ್ತ ಅಮ್ಮ ಮೊಸರು ಕಡೆಯಲು ಕಡಗೋಲು ಹುಡುಕುತ್ತಿದ್ದರೆ ಅದನ್ನು ಬೆಳಬೆಳಗ್ಗೆ ಕೃಷ್ಣ ಕದ್ದು ಇಟ್ಟುಕೊಂಡಿದ್ದಾನೋ ಎಂದು ಭಾಸವಾಗುವಂತೆ. ಅದಕ್ಕಾಗಿಯೇ ಇರಿಸಿಕೊಂಡಂತೆ ಕಣ್ಣಲ್ಲಿ ಒಂದು ತುಂಟತನ, ಕಳ್ಳನಂತೆ ತುಟಿಯ ಕೊಂಕಲ್ಲೊಂದು ಕಿರುನಗು.ಕೃಷ್ಣನನ್ನು ಸುಮಾರು ನಾಲ್ಕು ವರ್ಷಗಳ ಕಾಲ ಬಿಡದೇ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ನೋಡಿದವನು ನಾನು. ಅವನನ್ನು ನೋಡುತ್ತಾ ನೋಡುತ್ತಲೇ ನನ್ನ ತುಟಿಯ ಮೇಲೆ ಮೀಸೆ ಬಂತು, ನನ್ನ ಧ್ವನಿ ಗಡಸಾಯಿತು, ನನ್ನ ಕಾಲುಗಳಿಗೆ ಉತ್ಸಾಹ ಬಂತು, ನನ್ನ ಕಣ್ಣುಗಳಲ್ಲಿ ಒಮ್ಮೊಮ್ಮೆ ಕಣ್ಣೀರೂ ಬಂತು, ದೂರದ ಅಮ್ಮನನ್ನು ಕಾಣದೇ ತುಂಬ ದಿನಗಳಾದವಲ್ಲಾ ಎಂದು ನೆನೆದು. ಕೃಷ್ಣನನ್ನು ಭಕ್ತಿಯಿಂದ ನೆನೆಯುತ್ತಾ ನನ್ನ ಏಳನೇ ಕ್ಲಾಸ್ ಓದಲು ಪ್ರಾರಂಭ ಮಾಡಿದೆ ಮತ್ತು ಎಂಟನೇ ಕ್ಲಾಸ್ ಆಗುವಾಗ ನಿಧಾನವಾಗಿ ಭಕ್ತಿ ಸ್ನೇಹಕ್ಕೆ ತಿರುಗಿತು. ಒಂಬತ್ತು ಹತ್ತನೇ ಕ್ಲಾಸ್‌ಗೆ ಬರುವಾಗ ಕಿಂಡಿಯಲ್ಲಿ ಕೃಷ್ಣನನ್ನು ನೋಡುತ್ತಲೇ ಪಕ್ಕದಲ್ಲಿ ನಿಂತ ಯಾವುದೋ ಹುಡುಗಿಯನ್ನು ಕಳ್ಳನಂತೆ ನೋಡಿದೆ, ಅದನ್ನು ನೋಡಿ ಕೃಷ್ಣ ಕೂಡ ನಕ್ಕಿರಬೇಕು. ಯಾಕೆಂದರೆ ಅವನು ಎಷ್ಟು ಸಹಸ್ರ ಹೆಣ್ಣು ಮಕ್ಕಳನ್ನು ನೋಡಿದವನಲ್ಲವೇ, ಮೋಹಿಸಿದವನಲ್ಲವೇ? ಕೃಷ್ಣ, ಅದು ನನ್ನ ತಪ್ಪಾಗಿದ್ದರೆ ದಯವಿಟ್ಟು ನನ್ನ ಹರೆಯವನ್ನು ಕ್ಷಮಿಸು!
ನಾನು ನಾಲ್ಕು ವರ್ಷಗಳ ಕಾಲ ಉಡುಪಿಯಲ್ಲಿ ಓದಿದವನು, ಸಂಸ್ಕೃತ ಕಾಲೇಜಿನಲ್ಲಿ ಹೈಸ್ಕೂಲು ಓದುತ್ತಾ ಕೃಷ್ಣಮಠದಲ್ಲಿ ಉಂಡವನು, ಅಲ್ಲಿ ಅಷ್ಟು ವರ್ಷಗಳ ಕಾಲ ಬಡಿಸಿದ ಗಂಜಿ ಊಟಕ್ಕಿದ್ದ ರುಚಿ ಇಷ್ಟು ವರ್ಷ ಕಳೆದರೂ ಬೇರೆಲ್ಲೂ ಸಿಗಲಿಲ್ಲವಲ್ಲಾ ಎಂದು ನೊಂದವನು. ಕೃಷ್ಣನಿಗೆ ಹಾಕಿದ ಕಾಣಿಕೆಗಳನ್ನು ನಾಣ್ಯ- ನೋಟುಗಳ ಸಮೇತ ರಾಶಿ ಹಾಕಿಕೊಂಡು `ಎಣಿಸಲು ಬನ್ನಿ’ ಎಂದು ಪಾರುಪತ್ಯೆದಾರರು ಕರೆ ಕೊಟ್ಟಾಗ ಎಲ್ಲರ ಜತೆ ಓಡಿದವನು. ಕೃಷ್ಣನ ದೈನಂದಿನ ಸಂಪತ್ತನ್ನು ಎಣಿಸಿ ಎಣಿಸಿ ಕೈ ಸೋತಾಗ ಸಂಜೆ ಸಿಗುವ ಐದು ರೂಪಾಯಿಯ ಎರಡು ಕಾಯಿನ್ನನ್ನು ಕಣ್ತುಂಬಿಕೊಂಡು ಸಂತುಷ್ಟನಾದವನು. ಹಾಗೆ ಹಣ ಕೊಟ್ಟು ನಮ್ಮನ್ನೆಲ್ಲಾ ಟಾಕೀಸಿಗೆ ಕಳಿಸಿ ಸಿನಿಮಾ ನೋಡಲು ಕೃಷ್ಣ ಕರುಣಿಸಿದವನು!
ಕೃಷ್ಣಾಷ್ಟಮಿ ಬಂದರೆ ಉಂಡೆಗಳನ್ನು ಮೆಲ್ಲುವ ಸಂತೋಷ, ಬೀದಿಬೀದಿಗಳಲ್ಲಿ ವಿಟ್ಲಪಿಂಡಿ (ಕೃಷ್ಣಾಷ್ಟಮಿಯ ಮರುದಿನದ ಉಡುಪಿಯ ಒಂದು ಆಚರಣೆ) ಕಾಣುವ ಸೌಭಾಗ್ಯ. ಎಲ್ಲೆಲ್ಲೂ ಬರುವ ಹುಲಿವೇಷಗಳನ್ನು ಕಾಂಬ ತವಕ. ರಜೆ ಸಿಗುವ ಸಂಭ್ರಮ, ಆರ್ಕೆಷ್ಟ್ರಾಗಳಲ್ಲಿ ಹಾಡುಗಳನ್ನು ಕೇಳುವ ಉಲ್ಲಾಸ. ಕೃಷ್ಣಮಠದ ರಾಜಭವನದಲ್ಲಿ ಯಕ್ಷಗಾನ ವೇಷದ ಕುಣಿತವನ್ನೋ, ತಾಳಮದ್ದಲೆಯ ಪದ್ಯ- ಅರ್ಥಗಳನ್ನೋ ಕಣ್ತುಂಬಿಕೊಳ್ಳುವ ಉತ್ಕಟತೆ. ಆಗೆಲ್ಲಾ ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯನೂ ಅಲ್ಲ, ನಾದಪ್ರಿಯನು ನಮ್ಮ ಕೃಷ್ಣ ಪರಮಾತ್ಮ!
ಈ ಕೃಷ್ಣ ನಮಗೆ ಎಲ್ಲವೂ ಆಗಿ ಕಂಡವನು. ಪುಷ್ಕರಣಿಯಲ್ಲಿ ನಾವು ನೀರಾಡಿ ಬಂದ ಹೊತ್ತಿಗೆ ಆತ ಬರೀಮೈಯ್ಯಲ್ಲಿ ನಿಂತ ಮಗುವಾಗಿರುತ್ತಿದ್ದ, ರಥಬೀದಿ, ಅಷ್ಟಮಠಗಳ ಸಾಲು, ಕಟ್ಟಿಗೆ ರಥ, ಚಿನ್ನದ ರಥ, ಬೆಳ್ಳಿರಥ, ರಾಜಾಂಗಣ, ಅಂಗಡಿ ಮುಂಗಟ್ಟುಗಳ ಸಾಲು, ಸರೋವರಕ್ಕೆ ಹಾಕಿದ ವಿವಿಧ ಮಿಣುಕಿನ ಸೀರಿಯಲ್ ಲೈಟ್‌ಗಳ ನಡುವೆ ತೆಪ್ಪವೇರಿಯೋ, ರಥವೇರಿಯೋ ಬರುವ ಕೃಷ್ಣ ನಮಗೆ ಶ್ರೀಮಂತರ ಮನೆಯ ಹುಡುಗನ ಥರ ಕಾಣುತ್ತಿದ್ದ, ಅಪ್ಪ- ಅಮ್ಮ ಬಿಟ್ಟುಕೊಟ್ಟರೆ ಅಲ್ಲೇ ನಮ್ಮೊಡನೆ ಆಟಕ್ಕೆ ಇಳಿದುಬಿಡುವ ಪುಂಡನಂತೆ. ಅದೇ ಗೋವರ್ಧನ ಗಿರಿಯೆತ್ತಿದ ಅಲಂಕಾರದಲ್ಲಿ, ರಾಧೆಯೊಂದಿಗೆ ನಿಂತ ಮಾಧವನ ರೂಪಿನಲ್ಲಿ, ಪೂತನಿಯ ವಿಷ ಹೀರಿದ ಬಾಲಕೃಷ್ಣನ ಕಣ್ಣಲ್ಲಿ, ಶಕಟಾಸುರನನ್ನು ಕೊಂದ ಶಕಪುರುಷನ ಶೌರ್ಯದಲ್ಲಿ ಅವನು ಹರೆಯದವನಂತೆ ಪ್ರಬುದ್ಧನಾಗಿ ತೋರುತ್ತಿದ್ದ. ಕೃಷ್ಣನಿಗೆ ಗೀತೋಪದೇಶ ಮಾಡುವಾಗ ಅವನು ನಮ್ಮಪ್ಪನ ಹಿತೋಪದೇಶದಂತೆ ಕಾಣುತ್ತಿದ್ದ, ದಶಾವತಾರದ ವಿರಾಡ್ರೂಪ ತೋರುವಾಗ ಮಾತ್ರ ಬೀದಿಯಲ್ಲಿ ನಾವು ಹರವಿಕೊಂಡು ಕುಳಿತ ಆಟಿಕೆಯನ್ನು, ನಮ್ಮ ಹರೆಯದ ಚೆಲ್ಲಾಟವನ್ನೂ, ನಮ್ಮ ಮುಗ್ಧ ಕನಸು- ಕನವರಿಕೆಗಳನ್ನೂ ಮೀರಿ ದೂರ ಹೊರಟು ಹೋಗಿ ವಿಶ್ವವಿಖ್ಯಾತನಾದ `ದೊಡ್ಡ ಮನುಷ್ಯ’ನಂತಾಗಿರುತ್ತಿದ್ದ.
ಆದರೆ ಮತ್ತೆ ಬೆಳಿಗ್ಗೆ ಬಂದು, ಎಂಟಕ್ಕೆ ಕನಕನ ಕಿಂಡಿಯಲ್ಲಿ ಭೀತಿಯಿಂದ ಹಣಕಿದರೆ ಅದೇ ಬೆತ್ತಲು ನಿಂತ, ಕಡಗೋಲು ಪಿಡಿದ, ಗೋಪೀಚಂದನ ಬಳಿದ ಬಾಲಕೃಷ್ಣ. ಅವನ ಅವತಾರಗಳನ್ನು ನೋಡಿ, ಭಯಗ್ರಸ್ಥನಾದ ನನ್ನಂಥವನ ಮುಂದೆ ದಿನಾ ಬೆಳಿಗ್ಗೆ ಮತ್ತೆ `ಶಾಂತರೂಪದಲ್ಲಿ ಮೈದೋರಿದ’ ಶ್ರೀಕೃಷ್ಣಪರಮಾತ್ಮ.
ಉಡುಪಿಯಲ್ಲಿ, ಅದರಲ್ಲೂ ಮಠದಲ್ಲಿ ಓದಿದವರಿಗೆ ಗೊತ್ತು. ಕೃಷ್ಣನಿಗಿಲ್ಲದ ಮಡಿ ಅಲ್ಲಿ ಕೃಷ್ಣನನ್ನು ಪೂಜಿಸುವವರಿಗಿದೆ, ಅವನಿಗಿಲ್ಲದ ಮೈಲಿಗೆ ಅಲ್ಲಿನ ಮಠಗಳಿಗಿದೆ, ಮಠಗಳಲ್ಲಿ ಪ್ರತ್ಯೇಕ ಕೃಷ್ಣ ವಿಗ್ರಹವನ್ನಿಟ್ಟು ಪೂಜೆ ಮಾಡುವವರಿಗಿದೆ, ಪಾರುಪತ್ಯೆದಾರರಿಗಿದೆ. ಆದರೆ ಕೃಷ್ಣ ಯಾವತ್ತೂ ಸ್ನಾನ ಮಾಡಿಕೊಂಡು ಬರದ ನನ್ನನ್ನು ಬೈಯಲಿಲ್ಲ. ಜ್ವರ ಬಂದಿದೆ ಎಂದು ಬೆಳಿಗ್ಗೆ ನಾಲ್ಕು ಗಂಟೆಗೆ ತಣ್ಣೀರು ಮೀಯುವುದನ್ನು ತಪ್ಪಿಸಿಕೊಂಡು ಕಳ್ಳನಂತೆ ಕನಕನ ಕಿಂಡಿಯಲ್ಲಿ ಬಂದು ನಿಂತರೆ ಕೃಷ್ಣ ಕಣ್ಣಲ್ಲೇ `ಬಲೇ ನಿನ್ನ ಧೈರ್ಯವೇ’ ಎಂದು ತಮಾಷೆ ಮಾಡಿದ್ದನೇನೋ, ಈಗ ನನಗೆ ಹಾಗನಿಸುತ್ತದೆ.
***
ಈ ಸಲ ಕೃಷ್ಣಾಷ್ಟಮಿ ಬಂದಾಗ ಥಟ್ಟನೆ ಇವೆಲ್ಲಾ ನೆನಪಾಗಿದೆ. ಕೃಷ್ಣನ ಸ್ನೇಹದ ಸಾನ್ನಿಧ್ಯವನ್ನು ನಾನು ಕಳೆದುಕೊಂಡು ಹತ್ತಿರತ್ತಿರ ಹತ್ತು ವರ್ಷಗಳಾಗಿವೆ. ಹತ್ತು ಕೃಷ್ಣಾಷ್ಟಮಿಗಳು ಬಂದು ಹೋಗಿವೆ. ಕೃಷ್ಣಗಿಗೆ ಯಾರ್ಯಾರೋ ಹೊಸ ಹೊಸ ಅಲಂಕಾರಗಳನ್ನು ಮಾಡಿ, ಘನಸೇವೆ ಮಾಡಿಸಿ ತಮ್ಮ `ಹಣಭಾರ’ವನ್ನು ಕಳೆದುಕೊಂಡು ತೆರಿಗೆ ಅಧಿಕಾರಿಗಳಿಂದ ಬಚಾವಾಗಿದ್ದಾರೆ. ಕನಕನ ಗೋಪುರ ವಿವಾದಕ್ಕೊಳಗಾಗಿದೆ, ಅನೇಕ ಪರ್ಯಾಯಗಳು ಕಳೆದು ಪೂಜೆ ಮಾಡುವ ಮಠಾದೀಶರು ಬದಲಾಗುತ್ತಲೇ ಇದ್ದಾರೆ. ಆದರೆ ಕೃಷ್ಣ ಉಡುಪಿಯಲ್ಲೇ ಝಂಡಾ ಊರಿದಂತೆ ಕಾಣುವುದಿಲ್ಲ. ಉಜಿರೆಯಲ್ಲಿ ಓದುತ್ತಿದ್ದಾಗ ಅವನು ಯಾವುದೋ ರೂಪದಲ್ಲಿ ನಮ್ಮ ರೂಮ್ ಮೇಟ್ ಆಗಿದ್ದ. ಹೆಗ್ಗೋಡಿನ ಹುಡುಗ ರಮಾನಂದನಾಗಿದ್ದ, ಅವನು ಯಾವುದೋ ವರ್ಷ ಫೇಲಾಗಿ ನೇಣು ಹಾಕಿಕೊಂಡು ಸತ್ತ ಎಂಬ ಸುದ್ದಿ ಬಂದಾಗ ಅವನಲ್ಲಿದ್ದ ಕೃಷ್ಣ ನನ್ನ ಫೈನಲ್ ಐಯರ್ ಬಿಎಯಲ್ಲಿ ಗೆಳೆಯನಾದ ದಿನಕರನಲ್ಲಿ ಸೇರಿಕೊಂಡ. ಆಮೇಲೆ ಕೆಲಸವಿಲ್ಲದೇ, ಮುಂದೆ ಓದುವುದಕ್ಕೆ ಕೂಡ ಸೀಟು ಸಿಗದೇ ಮನೆಯಲ್ಲಿ ಅಧೀರನಾಗಿದ್ದಾಗ ಅಮ್ಮನೊಳಗೆ ಕುಳಿತು ಸಾಂತ್ವನವಾಗಿದ್ದ. ಆಮೇಲೆ ಬೆಂಗಳೂರಿನಲ್ಲಿ ಬಾಡಿಗೆ ಹಿಡಿದ ಕೋಣೆಯ ಎದುರು ಮನೆಯ ಚಿಕ್ಕ ಹುಡುಗನಾಗಿ, ಬೀದಿಯಲ್ಲಿ ಸಿಕ್ಕ ಒಂದು ವರ್ಷದ ಮಗುವಾಗಿ, ಇದೀಗ ನಮ್ಮ ಪಕ್ಕದ ಮನೆಯ ಭೂಮಿಕಾ ಆಗಿದ್ದಾನೆ.
ಉಜಿರೆ ರೂಮ್‌ಮೇಟ್, ಸತ್ತ ರಮಾನಂದ, ಮಡಿಕೇರಿಯಲ್ಲಿ ಲೆಕ್ಚರರ್ ಆಗಿರುವ ದಿನಕರ್, ಆಗಾಗ ಫೋನ್ ಮಾಡುವ ಅಮ್ಮ, ಬಾಡಿಗೆ ಮನೆ ಎದುರಿನ ಹುಡುಗ, ಬೀದಿಯಲ್ಲಿ ಸಿಕ್ಕ ಮಗು, ಪಕ್ಕದ ಮನೆ ಭೂಮಿಕಾ-ರ ಜನ್ಮ ದಿನ ಮರೆತಂತೆ ಕೃಷ್ಣನ ಜನ್ಮದಿನವನ್ನೂ ಮರೆತಿದ್ದೇನೆ. ಆದರೆ ಅವರೆಲ್ಲಾ ಇನ್ಯಾವತ್ತೋ ಇನ್ಯಾರದೋ ರೂಪದಲ್ಲಿ ಥಟ್ಟನೆ ನನಗೆ ಎದುರು ಸಿಗುತ್ತಾರೆ, ಕೃಷ್ಣನಾಗುತ್ತಾರೆ.
ಅವತ್ತೇ ನಾನು ಕೃಷ್ಣಾಷ್ಟಮಿ ಆಚರಿಸುತ್ತೇನೆ.
9 Comments
ತುಂಬಾ ಚೆಂದ ನೀವು ಶ್ರೀ ಕೃಷ್ಣನನ್ನು ಕಲ್ಪಿಸಿಕೊಂಡಿರುವ ರೀತಿ,ಮೊದಲು ಸ್ನೇಹ ಆನಂತರ ಭಕ್ತಿ. ಪುಣ್ಯವಂತರು ನೀವು ಕೃಷ್ಣಾಷ್ಟಮಿಯ ವೈಭವವನ್ನು ಹತ್ತಿರದಿಂದ ನೋಡಿದವರು.
ಅತ್ಯಂತ ಸುಂದರವಾಗಿ ಬರೆದಿದ್ದೀರಿ. ಓದುತ್ತಾ ನಿಮ್ಮ ಲೇಖನದ ಜೊತೆಗೆ ನಾನೂ ಉಡುಪಿಯಲ್ಲಿ ಸುತ್ತಾಡಿ ಕೃಷ್ಣನ ದರ್ಶನ ಪಡೆದಂತೆ ಭಾಸವಾಯಿತು.
ಧನ್ಯವಾದಗಳು
ಮೀರಾ.
thanks meera,
U have visualized so rightly. I can still dream sri krishna, after 10 year gap. I think that is naot for bhakti, but it is sneha.
vikas
ವಿಕಾಸ್, ಕೃಷ್ಣನೊಡನೆ ಭಕ್ತಿಯನ್ನೂ ಮೀರಿದ ಒಂದು ಸಂಬಂಧವನ್ನು ನೀವು ಹುಡುಕಿಕೊಂಡ ಪರಿಯೇ ಬೆರಗು ಹುಟ್ಟಿಸುತ್ತದೆ. ನಿಮ್ಮ ಸರ್ವತೋಮುಖ ’ವಿಕಾಸ’ದಲ್ಲಿ ಕೃಷ್ಣನದ್ದೂ ಸಾಕಷ್ಟು ಪಾತ್ರವಿದೆ ಅಂತಾಯಿತು!ನಿಮ್ಮ ’ಕೆಂಪು ರಕ್ತ ಕಣಗಳು’ ಕತೆಯ ನಂತರ ವೈಯಕ್ತಿಕವಾಗಿ ನನಗೆ ತುಂಬಾ ಖುಷಿಕೊಟ್ಟ ಬರೆಹವಿದು. ಅಭಿನಂದನೆಗಳು.
-ಸುರೇಶ್ ಕೆ.
chennagide sir
Hi, naanu e baraha oduvaaga Krshnasthami mugide hogide. Irali bidi. Nimmante naavandukonda dinave namge Krishnasthami. Enantheeri? bareha aapthavaagide. Khushiyaaythu.
- Godlabeelu
kalpane adbhuth, andada akshara roopa…vikas
TUUUUUUUUUMBA CHENNAGIDE ,,, krishna krishna.
Your Krishna made me cry. Lovely friendship with Krishna. It doesnt matter if you have forgotten his birthday, you are remembering him every second I think! I pray Krishna to be in all phases of your life
i like you ganesh
Post a Comment