ಬಾಲು ಮತ್ತು ಹುಣ್ಣಿಮೆ ಚಂದಿರ

puttu-021.jpg

ಕೃಷ್ಣಾಷ್ಟಮಿ ಬಂತು. ಹೋಯಿತು. ಗೊತ್ತಾಗಲಿಲ್ಲ. ಇದಕ್ಕೂ ಮೊದಲು ನಾಗರಪಂಚಮಿ ಬಂದಿತ್ತು. ಹೋಯಿತು. ಅದೂ ಗೊತ್ತಾಗಿರಲಿಲ್ಲ. ಗಣೇಶನ ಹಬ್ಬ ಬರುತ್ತದೆ. ಹೋಗುತ್ತದೆ. ಅದೂ ಗೊತ್ತಾಗುವುದಿಲ್ಲ. ಹೀಗಾದರೆ ಮಗನಿಗೆ ಏನು ಕಲಿಸುತ್ತೇವೆ?ಅವಳು ತಣ್ಣಗಿನ ದನಿಯಲ್ಲಿ ಕೇಳುತ್ತಾಳೆ. ಅವನು ಗೊಂದಲಗೊಳ್ಳುತ್ತಾನೆ.

ಯಾಕೋ ಇಬ್ಬರ ಮನಸ್ಸಿಗೂ ಕಸಿವಿಸಿಯಾಗುತ್ತದೆ. ಏಕೆಂದರೆ ಅವರು ಇದನ್ನೆಲ್ಲ ವಿವರವಾಗಿ ಆಚರಿಸುತ್ತಿದ್ದ ಪರಿಸರದಲ್ಲಿ ಬೆಳೆದು ಬಂದವರು. ಅವಳ ಮನೆಯಲ್ಲಿ ಗಣೇಶನ ಹಬ್ಬ ದೊಡ್ಡ ಹಬ್ಬ. ಮಣ್ಣಿನ ಗಣಪತಿ ಬರುತ್ತದೆ. ಪೂಜೆ ನಡೆಯುತ್ತದೆ. ಚಕ್ಕುಲಿ, ಅತ್ರಾಸ, ಖರ್ಜಿಕಾಯಿ, ಎಳ್ಳುಂಡೆ, ಪಂಚಕಜ್ಜಾಯಗಳ ಭೋಜನ ನಡೆಯುತ್ತದೆ. ನೆಂಟರು ಬರುತ್ತಾರೆ. ಗಣಪತಿ ಮುಳುಗಿಸುತ್ತಾರೆ. ಇದೆಲ್ಲದರೊಂದಿಗೆ ಅವಳು ಬೆಳೆದುಬಂದಿದ್ದಾಳೆ.

ಅವನ ಮನೆಯಾದರೂ ಅಷ್ಟೇ. ಅಲ್ಲಿ ನಾಗರಪಂಚಮಿ ಇತ್ತು. ನಾಗರಪಂಚಮಿಯ ದಿನ ಕಡ್ಡಾಯವಾಗಿ ಸುರಿಯುತ್ತಿದ್ದ ಮಳೆನಾಡಿನ ಮಳೆಯಲ್ಲಿ ಕೊಡೆ ಅರಳಿಸಿಕೊಂಡು ನಾಗರಮನೆ ತಗ್ಗಿಗೆ ಹೋಗಿ, ಕಲ್ಲಿಗೆ ಹಾಲು ಎರೆದು, ಮನೆಗೆ ಬಂದು ಲಗುಬಗೆಯಿಂದ ಚಪ್ಪೆ ರೊಟ್ಟಿ ತಿಂದು ಊಟ ಮುಗಿಸಿ ಜೋಕಾಲಿ ಆಡಿದ್ದು ಅವನಿಗೆ ಈಗಲೂ ನೆನಪಿದೆ. ಆ ದಿನ ಬಿಟ್ಟರೆ ಬೇರೆ ದಿನ ಜೋಕಾಲಿ ಸಿಗುತ್ತಿರಲಿಲ್ಲ! ಈಗ ಇಬ್ಬರೂ ಬೆಂಗಳೂರಿನ ಗದ್ದಲದಲ್ಲಿ ಕಳೆದು ಹೋಗುತ್ತ, ಯಾವಾಗಾದರೊಮ್ಮೆ ಪರಸ್ಪರ ಭೇಟಿಯಾಗುತ್ತ ಬದುಕಿನ ಜೋಕಾಲಿಗೆ ಸಿಕ್ಕು ಗೊಂದಲಗೊಂಡಿದ್ದಾರೆ. ಬೆಂಗಳೂರಿನ ಅವರ ಗೂಡಿನಲ್ಲಿ ಚೌತಿಯಿಲ್ಲ. ಸಂಕ್ರಾಂತಿಯಿಲ್ಲ. ಯುಗಾದಿಯಿಲ್ಲ, ನಾಗರಪಂಚಮಿಯಿಲ್ಲ. ದಸರಾ ಗೊತ್ತಿಲ್ಲ. ಶಾರದಾಪೂಜೆ ನಡೆಯುವುದಿಲ್ಲ!ಹಾಗಾದರೆ ಬೆಂಗಳೂರಿನಲ್ಲೂ ಹಬ್ಬಗಳನ್ನು ಆಚರಿಸಬೇಕೇ? ಅವನಿಗೆ ಪುನಃ ಗೊಂದಲವಾಗುತ್ತದೆ. ಈ ಹಬ್ಬಗಳು ಒಂದು ವಿಶಿಷ್ಟ ವಾತಾವರಣದಲ್ಲಿ ಮಾತ್ರ ಸರಿ ಕಾಣುತ್ತವೆ. ನಾಗರಮನೆ ತಗ್ಗಿನ ನಾಗರ ಕಲ್ಲಿಗೆ ಹೋಗಿ ಪೂಜೆ ಮಾಡುವ ಕ್ರಿಯೆಗೆ ಇರುವ ಶಕ್ತಿ ನಾಗರಕಲ್ಲನ್ನು ತಂದು ಅಪಾರ್ಟ್‌ಮೆಂಟ್‌ ಎಂಬ ಗೂಡಿನಲ್ಲಿಟ್ಟು ಮಾಡುವ ಪೂಜೆಗೆ ಇಲ್ಲ!

ನಾಗರಪಂಚಮಿ ಅವನಿಗೆ ಅದ್ಭುತ ಸಂಗತಿಯಾಗಿದ್ದು ಅದರ ಜೊತೆಗಿದ್ದ ವಿಶಿಷ್ಟವಾದ ಪರಿಸರದ ಕಾರಣದಿಂದ. ಆತ ಮಳೆಯಲ್ಲಿ ನಡೆದುಕೊಂಡು ಸ್ಕೂಲಿಗೆ ಹೋಗುತ್ತಿದ್ದ. ತೋಟ, ಗದ್ದೆಗಳಲ್ಲಿ ಯಥೇಚ್ಛವಾಗಿ ಹಾವುಗಳನ್ನು ನೋಡಿದ್ದ. ನೀರೊಳ್ಳೆ ಹಾವು, ಕೇರೆ ಹಾವು, ಹಾವ್‌ಸುಂಬ್‌ ಹಾವು, ಬಳಗನ ದಡಿ ಹಾವುಗಳನ್ನು ನೋಡಿ ಬೆಚ್ಚಿಬಿದ್ದಿದ್ದ. ಸಾಕ್ಷಾತ್‌ ನಾಗರಹಾವನ್ನೇ ನೋಡಿ, ಅದರ ಹೆಡೆಯ ಚೆಂದಕ್ಕೆ ಮಾರುಹೋಗುತ್ತ ಭಯದಿಂದ ಓಟ ಕಿತ್ತಿದ್ದ. ಹೀಗಾಗಿ ನಾಗರಮನೆ ತಗ್ಗಿನ ಸುತ್ತಲೂ ಇರುವ ಮರಗಳ ನಡುವೆ ಎಲ್ಲಿಯಾದರೂ ನಾಗರ ಹಾವು ಇರಬಹುದು ಎಂಬುದನ್ನು ಅವನು ಅನುಮಾನ ಪಟ್ಟುಕೊಳ್ಳುತ್ತಲೇ ನಂಬುತ್ತಿದ್ದ. ಉಳಿದ ಹಾವುಗಳಿಗೆ ಇಲ್ಲದ ಮಾಂತ್ರಿಕ ಶಕ್ತಿ ನಾಗರಹಾವಿಗೆ ಇದೆ ಎಂದುಕೊಳ್ಳುವುದರಲ್ಲಿ ಒಂದು ವಿಚಿತ್ರವಾದ ಸಂಭ್ರಮ ಇತ್ತು. ಬಹುಶಃ ಇದೇ ಪರಿಸರದಲ್ಲಿ ಬೆಳೆದುಬಂದಿದ್ದ ಅವಳೂ ಹೀಗೇ ಅಂದುಕೊಂಡಿದ್ದಿರಬೇಕು. ಹೀಗಾಗಿ ಮಗನಿಗೆ ಇದೆಲ್ಲ ಸಿಗುತ್ತಿಲ್ಲವಲ್ಲ ಎಂಬ ಗೊಂದಲ ಅವಳಿಗೆ. ಯೋಚಿಸಿ ನೋಡಿದರೆ ಈ ಗೊಂದಲಕ್ಕೆ ಅರ್ಥವಿಲ್ಲ. ಮಗುವಿನ ಗ್ರಹಿಕೆಗಳು ಅದರ ಸುತ್ತಲಿರುವ ಪರಿಸರಕ್ಕೆ ತಕ್ಕುದಾಗಿರುತ್ತದೆ. ನಾಗರಮನೆಯಲ್ಲಿ ನಾಗರಹಾವು ಇದ್ದಿರಬಹುದು ಎನ್ನುವುದರಲ್ಲಿ ಮಲೆನಾಡಿನ ಹುಡುಗರಿಗೆ, ಹುಡುಗಿಯರಿಗೆ ಸಿಗುತ್ತಿದ್ದ ವಿಚಿತ್ರವಾದ ಸಂಭ್ರಮ ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಹುಡುಗರಿಗೆ ಬೇರೆ ರೀತಿ, ಬೇರೆ ವಿಧಗಳಲ್ಲಿ ಸಿಗುವ ಸಾಧ್ಯತೆ ಇದೆ.

ಉದಾಹರಣೆಗೆ ಇದೇ ಅಪ್ಪ ಮತ್ತು ಮಗನನ್ನೇ ತೆಗೆದುಕೊಳ್ಳೋಣ. ಈ ಅಪ್ಪ ಮಲೆನಾಡಿನಲ್ಲಿ ಹುಟ್ಟಿದವನು. ಅವನು ಕ್ರಿಕೆಟ್‌ ಎಂಬ ಪದವನ್ನು ಮೊದಲ ಸಲ ಕೇಳಿದ್ದು ಮೂರನೇ ಕ್ಲಾಸಿನಲ್ಲಿದ್ದಾಗ. ಅಷ್ಟೊತ್ತಿಗೆ ಕಪಿಲ್‌ದೇವ್‌ನ ಹುಡುಗರು ವಿಶ್ವಕಪ್‌ ಗೆದ್ದು, ಬೆನ್ಸನ್‌ ಆ್ಯಂಡ್‌ ಹೆಜೆಸ್‌ ಕಪ್‌ ಗೆದ್ದು, ಶ್ರೀಲಂಕಾದ ಕ್ಯಾಂಡಿಯಲ್ಲಿ ಟೆಸ್ಟ್‌ ಮ್ಯಾಚ್‌ ಆಡುತ್ತಿದ್ದರು. ಆಗ ಅವನ ಮನೆಯಲ್ಲಿ ಟೀವಿಯಿರಲಿಲ್ಲ. ಹಳ್ಳಿಯಲ್ಲಿ ಬೆಳೆದ ಆತನಿಗೆ ಆಡುವುದಕ್ಕೆ ಕ್ರಿಕೆಟ್‌ ಬ್ಯಾಟಿರಲಿಲ್ಲ. ಚೆಂಡನ್ನು ಆತ ಸರಿಯಾಗಿ ನೋಡಿರಲಿಲ್ಲ. ಸರಿಯಾಗಿ ಹೇಳಬೇಕೆಂದರೆ ಕ್ರಿಕೆಟ್‌ ಚೆಂಡನ್ನು ನೋಡುವುದಕ್ಕೆ ಮೊದಲೇ ಆತ ಸೂರ್ಯೋದಯ ನೋಡಿದ್ದ. ಹುಣ್ಣಿಮೆ ಚಂದ್ರನನ್ನು ನೋಡಿ ಸಂಭ್ರಮಿಸಿದ್ದ!

ಅಪ್ಪನ ಕ್ರಿಕೆಟ್‌ ಹುಚ್ಚಿನ ಜೀನ್‌ ಬಹುಶಃ ಮಗನಿಗೆ ಬಂದಿರಬಹುದು. ಮಗ ಈಗ ಬೆಂಗಳೂರಿನಲ್ಲಿ ಬೆಳೆಯುತ್ತಿದ್ದಾನೆ. ಟೀವಿ ಮುಂದೆ ಠೀವಿಯಿಂದ ಕುಳಿತು ಕ್ರಿಕೆಟ್‌ ನೋಡಲು ಜಗಳ ಮಾಡುತ್ತಾನೆ. ಹುಟ್ಟಿ ಮೂರು ಸೋಮವಾರ ಆಗುವ ಮೊದಲೇ ಇದೆಲ್ಲಾ ಕಲಿತಿದ್ದಾನ ಎಂದು ಕೇಳುವಂತೆಯೇ ಇಲ್ಲ. ಆಗಲೇ ಆತ ಹುಟ್ಟಿ 88 ಸೋಮವಾರಗಳು ಕಳೆದಿವೆ! ಆತನ ಬಳಿ ಬೆಂಗಳೂರಿನಲ್ಲಿ ಸಿಗಬಹುದಾದ ಎಲ್ಲಾ ರೀತಿಯ, ಎಲ್ಲಾ ಬಣ್ಣದ, ಎಲ್ಲಾ ಆಕಾರದ ಚೆಂಡುಗಳಿವೆ ಮತ್ತು ಚೆಂಡನ್ನು ಆತ `ಬಾಲು’ ಎಂದು ಕರೆಯುತ್ತಾನೆ! ಎಲ್ಲಕ್ಕಿಂತ ಮುಖ್ಯವಾಗಿ ಸೂರ್ಯ ಮತ್ತು ಹುಣ್ಣಿಮೆ ಚಂದ್ರರನ್ನು ನೋಡುವ ಮೊದಲೇ ಆತ ಕ್ರಿಕೆಟ್‌ ಬಾಲನ್ನು ನೋಡಿದ್ದಾನೆ.

ಈಗ ಆತನಿಗೆ ಇಪ್ಪತ್ತು ತಿಂಗಳು. ಸರಿಯಾಗಿ ಮಾತಾಡಲೂ ಬರುವುದಿಲ್ಲ. ಆದರೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಬಾಲೂ ಆತನ ಕಣ್ಣಿಗೆ ಕಾಣುತ್ತಿರುತ್ತದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಪ್ಲಾಸ್ಟಿಕ್‌ ಅಂಗಡಿಯವನು ಹೊರಗಡೆ ತೂಗಿ ಹಾಕಿರುವ ಪ್ಲಾಸ್ಟಿಕ್‌ ಕೊಡಗಳೂ ಆತನಿಗೆ ಬಾಲಿನಂತೆ ಕಾಣಿಸುತ್ತವೆ. ರಾಜರಾಜೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ರಥದ ಮಂಟಪದ ಮೇಲೆ ಬಿಡಿಸಿರುವ ಗುಂಡಗಿನ ಆಕಾರದ ರಂಗೋಲಿಗಳೂ ಬಾಲಿನಂತೆ ಕಾಣಿಸುತ್ತದೆ. ದೂರದಲ್ಲಿ ಪಾರ್ಕಿನಲ್ಲಿ ಯಾರೋ ಆಡುತ್ತಿರುವ ಬಾಲು, ಇನ್ಯಾವುದೋ ಮಗುವಿನ ಕೈಯ್ಯಲ್ಲಿರುವ ಬಾಲು, ಸೇಬು ಹಣ್ಣು, ಟೊಮೆಟೋ, ನಿಂಬೆ, ಮುಸುಂಬಿ… ಆಹಾ, ಜಗತ್ತಿನಲ್ಲಿ ಎಷ್ಟೆಲ್ಲ ಬಾಲುಗಳಿವೆ!

ಈತನ ಬಾಲುಗಳ ಪ್ರೀತಿಯ ಕ್ಲೈಮ್ಯಾಕ್ಸ್‌ ನೋಡಲು ಸಿಕ್ಕಿದ್ದು ಇತ್ತೀಚೆಗೆ. ಅಪರೂಪಕ್ಕೆ ಅವರಿಬ್ಬರೂ ಒಂದು ದಿನ ನಸುಕಿನಲ್ಲಿಯೇ ಎದ್ದಿದ್ದರು. ಜೊತೆಯಲ್ಲಿ ಮಗುವಿಗೂ ಎಚ್ಚರವಾಗಿತ್ತು. ಎರಡನೇ ಮಹಡಿಯಲ್ಲಿರುವ ಅವರ ಬಾಡಿಗೆ ಮನೆಯ ಬಾಡಿಗೆ ಬಾಲ್ಕನಿಯಿಂದ ಎಲ್ಲರೂ ಸೂರ್ಯೋದಯ ನೋಡುತ್ತಿದ್ದರು. ಸೂರ್ಯ ಎಷ್ಟು ಚೆಂದ ಕಾಣುತ್ತಿದ್ದಾನಲ್ವಾ ಎಂದು ಆತ ಇನ್ನೇನು ಅವಳ ಬಳಿ ಹೇಳಬೇಕು. ಅಷ್ಟರಲ್ಲಿ ಮಗ ಖುಷಿಯಿಂದ ಕುಣಿಯುತ್ತ ಹೇಳಿದ: ಅಪ್ಪಾಜಿ…ಬಾಲು, ಬಾ..ಲು!

ವಿಚಿತ್ರವೆಂದರೆ ಈ ಮಗನ ಅಪ್ಪನಿಗೆ ಆತನ ಅಪ್ಪ ಮೊದಲ ಸಲ ಹೊಚ್ಚಹೊಸ ಟೆನಿಸ್‌ ಬಾಲನ್ನು ತಂದುಕೊಟ್ಟಾಗ ಅದು ಹುಣ್ಣಿಮೆ ಚಂದ್ರನಂತೆ ಕಾಣಿಸಿತ್ತು. ಈ ಮಗನಿಗೆ ಮೊದಲ ಸಲ ಸೂರ್ಯನನ್ನು ನೋಡುವಾಗ ಅದು ಕ್ರಿಕೆಟ್‌ ಬಾಲಿನಂತೆ ಕಾಣಿಸುತ್ತಿದೆ!

6 Comments

  1. Suresh K
    Posted September 3, 2007 at 9:06 am | Permalink

    ಪರಮೇಶ್, ಆಹಾ! ಓಹೋ ಎನ್ನುವಷ್ಟು ಚೆನ್ನಾಗಿದೆ.
    -ಸುರೇಶ್ ಕೆ.

  2. Bharati Hegade
    Posted September 3, 2007 at 9:13 am | Permalink

    Tumba chennagide. Obba Hegadeyegiyuoo idannu oppikolluttiddene. makkalendare hage. avaru beleyuttiruva parisara avara meele prabhava beeruttade. Namagella neeru, gudda, maragidagalle pramukhavadare ivrige karu, vimanagalu akarshaneeyavaguttave. huttutta avaru noodiddu adnne. nanna maga aginnu lkgyallidda. agale aata tanna birthdayia gift keliddu computer annu.

  3. mrignayani
    Posted September 3, 2007 at 10:07 am | Permalink

    Eee Bhatru mattu Hegade kaige ondondu balu kottu hodkolli ennabeku! Aparoopakke Bharti Hegadeyavarannoo kushi padisida baraha nodi tumbaa kushiyayitu.

  4. Sindhu
    Posted September 4, 2007 at 8:32 am | Permalink

    “ವಿಚಿತ್ರವೆಂದರೆ ಈ ಮಗನ ಅಪ್ಪನಿಗೆ ಆತನ ಅಪ್ಪ ಮೊದಲ ಸಲ ಹೊಚ್ಚಹೊಸ ಟೆನಿಸ್‌ ಬಾಲನ್ನು ತಂದುಕೊಟ್ಟಾಗ ಅದು ಹುಣ್ಣಿಮೆ ಚಂದ್ರನಂತೆ ಕಾಣಿಸಿತ್ತು. ಈ ಮಗನಿಗೆ ಮೊದಲ ಸಲ ಸೂರ್ಯನನ್ನು ನೋಡುವಾಗ ಅದು ಕ್ರಿಕೆಟ್‌ ಬಾಲಿನಂತೆ ಕಾಣಿಸುತ್ತಿದೆ!”

    -ಇಡೀ ಬರಹದ ಸತ್ವ ಮತ್ತು ನಮ್ಮ ನಡುವೆ ದಿನದಿನವೂ ಹೊಸದಾಗಿ ಅರಳುತ್ತಿರುವ ಬದುಕಿನ ಪರಿಯನ್ನು ಈ ಎರಡು ಸಾಲುಗಳು ಹಿಡಿದಿಟ್ಟಿವೆ.

    ತುಂಬ ಇಷ್ಟವಾಯಿತು,
    ಸಿಂಧು

  5. raghavendra
    Posted September 11, 2007 at 3:38 pm | Permalink

    REALLY NICE … WE ARE MISSING SOMETHING TO GET SOMETHING …..

  6. Posted October 17, 2007 at 12:29 pm | Permalink

    ಸರಳ ,ಸುಂದರ, ತೂಕವೆತ್ತ ಬರಹ.
    ಹಳ್ಳಿಯ ಹಬ್ಬದ ಸಡಗರವನ್ನು ನೆನಪಿಸಿತು..

Post a Comment

Your email is never published nor shared. Required fields are marked *
*
*