ಮೊನ್ನೆ ಸಂಜೆ `ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರ ನೋಡಿ ಐನಾಕ್ಸ್‌ನಿಂದ ಹೊರಕ್ಕೆ
ಬಂದು ಮೆಟ್ಟಿಲು ಇಳಿಯುತ್ತಿದ್ದರೆ ನಾಗತಿಹಳ್ಳಿ ಚಂದ್ರಶೇಖರ್ ಬರೆದ ಕತೆಗಳೆಲ್ಲ ನೆನಪಾಗುತ್ತಿದ್ದವು. `ಮಲೆನಾಡಿನ ಹುಡುಗಿ ಮತ್ತು ಬಯಲು ಸೀಮೆಯ ಹುಡುಗ’ ಎಂಬ ಅವರ ಕತೆಯನ್ನು ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಹದಿನೈದು ವರ್ಷಗಳ ಹಿಂದೆ, ಪ್ರೀತಿಯ ಅಮೂರ್ತತೆಯನ್ನು ಅರ್ಥಮಾಡಿಕೊಳ್ಳಲಾಗದೇ ಒದ್ದಾಡುತ್ತ, ಸಹಪಾಠಿ ಹುಡುಗಿಯರನ್ನು ಮನಸ್ಸಿನಲ್ಲೇ ಗುಟ್ಟಾಗಿ ಪ್ರೀತಿಸಿಬಿಡುತ್ತ ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಓದಿದ ಕತೆಯದು. ಆ ಕತೆಯನ್ನು ಗುಂಡ್ಕಲ್ಲಿನ ಹೆಂಚಿನ ಮನೆಯ ಮಹಡಿಯಲ್ಲಿ ಕುಳಿತು ಓದಿದ ಆ ಸಂಜೆ ಹೊರಗಡೆ ಜೋರಾಗಿ ಮಳೆ ಸುರಿಯುತ್ತಿತ್ತು! ಮಳೆಯ ಹಿನ್ನೆಲೆಯಲ್ಲಿ, ಮುಗ್ಗು ವಾಸನೆಯ ನಡುವೆ ಅಂಥದ್ದೊಂದು ಪ್ರೇಮಕತೆ ಓದಿದ ನೆನಪು ಈಗಲೂ ನಿಚ್ಚಳವಾಗಿದೆ.ಅದಾದ ನಂತರ ಓದಿದ್ದು `ಚುಕ್ಕಿಚಂದ್ರಮರ ನಾಡಿನಲ್ಲಿ’ ಕಾದಂಬರಿಯನ್ನು. ಅದೂ ಇಷ್ಟವಾಗಿತ್ತು. ಈಗ ಇನ್ನೊಮ್ಮೆ ಓದೋಣ ಅನಿಸುತ್ತದೆಯಾದರೂ ಆಗ ದಕ್ಕಿದ ಅನುಭವವನ್ನು ಹಾಗೇ ಉಳಿಸಿಕೊಳ್ಳೋಣ ಎಂದು ಅದನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದೇನೆ. ಮಳೆ, ಪ್ರೇಮಕತೆ, ಮುಗ್ಗಿದ ಬಟ್ಟೆಯ ವಾಸನೆ, ಮಲೆನಾಡಿನ ಬೇಸರದ ಸಂಜೆ ಮತ್ತು ಆ ವಯಸ್ಸು ಇದೆಲ್ಲವೂ ಸೇರಿ ಸೃಷ್ಟಿಯಾದ ಅನುಭವ ಈಗ ಸಿಗದೇ ಹೋಗುವ ಅಪಾಯವಿದೆ.ವಿಚಿತ್ರವೆಂದರೆ ನಾಗತಿಹಳ್ಳಿಯವರ ಸಿನಿಮಾ ನೋಡುವಾಗಲೆಲ್ಲ ಮಲೆನಾಡಿನ ಹುಡುಗಿಯ ಕತೆ ನೆನಪಾಗಿ ಕಸಿವಿಸಿಯಾಗುತ್ತದೆ. ಕಾರಣವಿಲ್ಲದೇ ಚುಕ್ಕಿಚಂದ್ರಮರ ಕತೆ ತಲೆಯಲ್ಲಿ ನಡೆಯತೊಡಗುತ್ತದೆ. ಮೊನ್ನೆ `ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರ ನೋಡುವಾಗಲೂ ಹಾಗೇ ಆಯಿತು. ಚಿತ್ರ ನೋಡುತ್ತ ನೋಡುತ್ತ `ಮಲೆನಾಡಿನ ಹುಡುಗಿಯ’ ಕತೆ ಎಷ್ಟು ಚೆನ್ನಾಗಿತ್ತಲ್ಲ ಅನಿಸತೊಡಗಿತು.
ಹಾಗಾದರೆ ಸಿನಿಮಾ ಹೇಗಿತ್ತು? ವಿವರವಾಗಿ ಚರ್ಚಿಸೋಣ. ಹೂ ಮನಸಿನ ಹೂವಯ್ಯ ಉಪವಾಸ ಸತ್ಯಾಗ್ರಹ ಮಾಡಿ ಮಲ್ಲಿಗೆ ಬೆಳೆಯುವ ಹತ್ತು ಹಳ್ಳಿಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಂದ ಉಳಿಸಿಕೊಳ್ಳುವುದು `ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರದ ಕತೆ. ಡಾಕ್ಯು- ಡ್ರಾಮಾ ಶೈಲಿಗೆ ಸುಲಭವಾಗಿ ಒಗ್ಗುವ ಈ ಕತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಎಂದಿನ ನಾಟಕೀಯ ಶೈಲಿಯಲ್ಲಿ ಹೇಳಿಬಿಡುತ್ತಾರೆ. ನಾಗತಿಹಳ್ಳಿಯವರಿಗೆ ಹಳ್ಳಿ ಹೊಸತಲ್ಲ. ಅವರ ಹೆಸರಿನಲ್ಲೇ ಒಂದು ಹಳ್ಳಿಯಿದೆ. ಹೀಗಿದ್ದರೂ ಅವರು ಹಳ್ಳಿಯನ್ನು ಮತ್ತು ಅಲ್ಲಿರುವ ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವ ರೀತಿ ಕುತೂಹಲಕರವಾಗಿದೆ. ಎತ್ತಂಗಡಿ ಎದುರಿಸುತ್ತಿರುವ ಹತ್ತು ಹಳ್ಳಿಯ ಜನ ಎದುರಿಸುವ ಗೊಂದಲ, ಅಸ್ಥಿರತೆ ಮತ್ತು ಆತಂಕವನ್ನು ಹೇಳುವ ಭರವಸೆಯನ್ನು ಮಾತ್ರ ಈ ಕತೆ ಹುಟ್ಟಿಸುತ್ತದೆ!
ಈ ಕತೆಗೆ ಬೇಕಾದ ನಾಟಕೀಯ ಭೂಮಿಕೆಯನ್ನು ನಿರ್ದೇಶಕರು ಲೀಲಾಜಾಲವಾಗಿ ಸೃಷ್ಟಿಸುತ್ತಾರೆ. ಮಲ್ಲಿಗೆ ಬೆಳೆಯುವ ಹತ್ತು ಹಳ್ಳಿಯ ಮೇಲೆ ಅಮೆರಿಕಾದ ಕಂಪೆನಿಗಳ ಕಣ್ಣು ಬೀಳುವುದು, ಅದಕ್ಕೆ ಅಧಿಕಾರಿಗಳು, ರಾಜಕಾರಣಿಗಳು ಸಹಕರಿಸುವುದು ಮತ್ತು ಎತ್ತಂಗಡಿಯಾಗುವ ಊರಿನಲ್ಲೇ ಅದಕ್ಕೆ ಬೆಂಬಲ ಇರುವುದು ಎಲ್ಲವೂ ಈ ಕತೆಯಲ್ಲಿದೆ. ಇದನ್ನೆಲ್ಲ ಎದುರಿಸುವ ಕಥಾನಾಯಕ ಹೂವಯ್ಯ ಏಕಾಂಗಿಯಾಗುತ್ತಾನೆ. ಆತನ ಸಾಮಾಜಿಕ ಬದುಕು ಖಾಸಗೀ ಬದುಕಿನ ಮೇಲೆ ಒತ್ತಡ ಸೃಷ್ಟಿಸುತ್ತದೆ. ಆತನ ಖಾಸಗೀ ಬದುಕಿನ ಗೊಂದಲಗಳು ಸಾಮಾಜಿಕ ಹೋರಾಟದ ದಿಕ್ಕು ತಪ್ಪಿಸುತ್ತವೆ. ಈ ಸಂದರ್ಭದಲ್ಲಿ ಎಲ್ಲ ಸಮಸ್ಯೆಗಳಿಗೂ ಬಂದೂಕೇ ಪರಿಹಾರ ಎಂಬ ನಂಬಿಕೆ ಸೃಷ್ಟಿಯಾಗುತ್ತದೆ. ಹೀಗೆ ಒಂದು ಸಶಕ್ತವಾದ ಕತೆಗೆ ಬೇಕಾದ ಎಲ್ಲ ಅಂಶಗಳೂ ನಾಗತಿಹಳ್ಳಿಯವರ `ಮಲ್ಲಿಗೆ’ ಕತೆಯಲ್ಲಿದ್ದವು.
ಇಂಥ ಕತೆಯನ್ನು ನಿರ್ದೇಶಕರು ಕಪ್ಪು ಬಿಳುಪಿನ ಪಾತ್ರಗಳನ್ನು ಸೃಷ್ಟಿಸಿ ಜೊಳ್ಳಾಗಿಸುತ್ತಾ ಹೋಗುವುದನ್ನು ನೋಡುವಾಗ ಪುನಃ `ಮಲೆನಾಡಿನ ಹುಡುಗಿ’ ಕತೆ ನೆನಪಾಗತೊಡಗುತ್ತದೆ. ನಾಯಕ ಮತ್ತು ಖಳನಾಯಕನ ನಡುವಿನ ಸ್ಥಿತಿಯಲ್ಲಿರುವ ಪಾತ್ರಗಳಿದ್ದರೆ ಈ ಕತೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು. ಎತ್ತಂಗಡಿ ಎದುರಿಸುವ ರೈತರ ಇತರ ಸಮಸ್ಯೆಗಳು ಪರಿಣಾಮಕಾರಿಯಾಗಿದ್ದರೆ ಸಂರಚನೆ ಹೆಚ್ಚು ಸಂಕೀರ್ಣವಾಗಬಹುದಿತ್ತು. ಕತೆ ನಡೆಯುವ ಪರಿಸರದ ಸೃಷ್ಟಿ ಇನ್ನಷ್ಟು ಸೂಕ್ಷ್ಮಗಳೊಂದಿಗೆ ಆಗಿದ್ದರೆ ಮಲ್ಲಿಗೆಯ ಘಮ ಹೆಚ್ಚು ಗಾಢವಾಗುವುದು ಸಾಧ್ಯವಿತ್ತು. ಉತ್ತರ ಕರ್ನಾಟಕ ಶೈಲಿಯ ಮಾತು, ಮಲೆನಾಡಿನ ಶೈಲಿಯ ಮನೆ, ಮಳೆ, ಮನಸ್ಸು, ಕರಾವಳಿ ಶೈಲಿಯ ಪರಿಸರ, ಮಂಡ್ಯದ ಕಟ್ಟೆ ಪುರಾಣ, ಊಟಿಯ ಚಹಾ ತೋಟಗಳು, ಬೆಂಗಳೂರಿನ ಬದುಕಿನ ಶೈಲಿಯನ್ನು ನಾಗತಿಹಳ್ಳಿ ಇಲ್ಲಿ ಕೋಲಾಜ್ ಮಾಡಿಬಿಟ್ಟಿದ್ದಾರೆ. ಹೀಗೆ ಮಲ್ಲಿಗೆ ತೋಟ, ಅಘನಾಶಿನಿ ನದಿ, ಚಹಾ ತೋಟಗಳ ಪರಿಸರ ಸಿನಿಮಾದಲ್ಲಿ ಸೃಷ್ಟಿಯಾಗುತ್ತದೆ!
ನಾಗತಿಹಳ್ಳಿಯವರಿಗೆ ಈ ಚಿತ್ರದಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಹೇಳುವ ಕಾಳಜಿ, ತವಕ. ಹೀಗಾಗಿ ಬೆಂಗಳೂರಿನಲ್ಲಿ ಮಕ್ಕಳಿಗೆ ನಾಯಿ ಕಚ್ಚುವುದರಿಂದ ಆರಂಭಿಸಿ ರೈತರ ಆತ್ಮಹತ್ಯೆಯ ತನಕ ಎಲ್ಲವೂ ಸಂಭಾಷಣೆಗಳಲ್ಲಿ ಹಾದು ಹೋಗುತ್ತವೆ. ಜಾಗತೀಕರಣದ ಪರಿಣಾಮಗಳನ್ನು ಹೇಳುವ ಆಸೆ ಅವರು ಹೇಳಿಸಿದ ಪ್ರತಿ ಅಂಕಿಅಂಶದಲ್ಲೂ ವ್ಯಕ್ತವಾಗುತ್ತದೆ. ಸಿನಿಮಾವನ್ನು ಜನಪ್ರಿಯ ಶೈಲಿಯಲ್ಲಿ ಮಾಡಬೇಕು ಎಂಬ ಹಂಬಲದಲ್ಲಿ ಅವರು ಹಾಡಿಸಿದ್ದಾರೆ. ಕುಣಿಸಿದ್ದಾರೆ. ಹಾಸ್ಯ ಪ್ರಸಂಗಗಳನ್ನಿಟ್ಟು ನಗಿಸಿದ್ದಾರೆ. ವಿಷ್ಣುವರ್ಧನ್‌ರಿಂದ ಬಣ್ಣದ ಚಿಟ್ಟೆ ಹಿಡಿಸಿ ಅಲ್ಲಲ್ಲಿ ರೋಮ್ಯಾಂಟಿಕ್ ಕೂಡ ಆಗಿದ್ದಾರೆ!
ಈ ಕತೆಯನ್ನು ಬಣ್ಣ ಬಣ್ಣದ ಚಿತ್ರಗಳೊಂದಿಗೆ, ಮನೋಮೂರ್ತಿಯವರ ಸಂಗೀತದೊಂದಿಗೆ, ವಿಷ್ಣುವರ್ಧನ್, ಸುಹಾಸಿನಿ, ಸುದೀಪ್‌ರಂಥ ಕಲಾವಿದರ ಅಭಿನಯದೊಂದಿಗೆ ನೋಡಿದಾಗ ಸಹ ಹಳೇ ಮಯೂರದಲ್ಲಿ ಓದಿದ `ಮಲೆನಾಡಿನ ಹುಡುಗಿ’ ಕತೆ ನೆನಪಾಗುವುದು ವಿಚಿತ್ರವಲ್ಲವೇ?
ನಿಜ ಹೇಳಬೇಕೆಂದರೆ ಮಲೆನಾಡಿನ ಹುಡುಗಿಯ ಆ ಕತೆ ಓದುವಾಗ ನಾನು ಸಿನಿಮಾ ನೋಡಿದ್ದೆ! ರೀಲುಗಳು, ಪ್ರೊಜೆಕ್ಷನ್‌ಗಳು ಇಲ್ಲದೆಯೇ ನೋಡಿದ್ದೆ. ಅದು ನಾಗತಿಹಳ್ಳಿಯವರು ನನಗೆ ತೋರಿಸಿದ ಅದ್ಭುತ ಸಿನಿಮಾ!
9 Comments
ನಾಗತಿಹಳ್ಳಿಯವರು ಬರೆದ ಮೊದಲ ಕತೆಗಳು ನನಗೂ ತುಂಬ ಇಷ್ಟ.
ಅವರ ಸ್ವಸಂತ್ರ ಮತ್ತು ಅವರ ಅಪ್ಪ ಗೌಡರ ಕತೆ (ಟೈಟಲ್ ಮರೆತೋಗಿದೆ) ತುಂಬ ಇಷ್ಟವಾದ ಕತೆ.
ಆಮೇಲೆ ಚುಕ್ಕಿಚಂದ್ರಮರ ನಾಡಿನಲ್ಲಿ ನನ್ನ all time fav.
ನಿಮ್ಮ ಬರಹ ಅವರ ಬರಹದಷ್ಟೇ ಸೊಗಸಾಗಿ ಅವರ ಭಾವವನ್ನ ಹಿಡಿದಿಟ್ಟಿದೆ.
ಧನ್ಯವಾದಗಳು.
ಲೇಖನ ತುಂಬಾ ಚೆನ್ನಾಗಿದೆ..
ಈ ವೀಕು ಹೋಗ್ಲೇಬೇಕು.
ಉತ್ತರ ಕರ್ನಾಟಕ ಶೈಲಿಯ ಮಾತು, ಮಲೆನಾಡಿನ ಶೈಲಿಯ ಮನೆ, ಮಳೆ, ಮನಸ್ಸು, ಕರಾವಳಿ ಶೈಲಿಯ ಪರಿಸರ, ಮಂಡ್ಯದ ಕಟ್ಟೆ ಪುರಾಣ, ಊಟಿಯ ಚಹಾ ತೋಟಗಳು, ಬೆಂಗಳೂರಿನ ಬದುಕಿನ ಶೈಲಿಯನ್ನು ನಾಗತಿಹಳ್ಳಿ ಇಲ್ಲಿ ಕೋಲಾಜ್ ಮಾಡಿಬಿಟ್ಟಿದ್ದಾರೆ.
ಟೆಕ್ನಿಕಲ್ ಆಗಿ ಕರೆಕ್ಟ್ ಆಗಿರಬೇಕೆಂಬ ನಿಮ್ಮ ವಾದವನ್ನು ಒಪ್ಪುತ್ತೇನೆ. ಅದರೆ ಈ ಸಿನಿಮಾ ಮಟ್ಟಿಗೆ ನಿರ್ದೇಶನದಲ್ಲಿ ಹಾಡು, ಕುಣಿತದಷ್ಟು ಸ್ವಾತಂತ್ರ್ಯವಿರುವಾಗ ಕರ್ನಾಟಕದ ವಿವಿಧ ಸಂಸ್ಕೃತಿಯ ಮಿಶ್ರಣ ನಗಣ್ಯ.
ನಾನು ಈ ಸಿನಿಮಾ ನೋಡಿಲ್ಲ. ಹೀಗಾಗಿ ಈ ಮಿಶ್ರಣ ಎಷ್ಟರಮಟ್ಟಿಗೆ conspicuous ಆಗಿದೆ ಎಂಬುದು ತಿಳಿದಿಲ್ಲ. ಒಟ್ಟಾರೆ ಫ್ರೀ ಹ್ಯಾಂಡ್ ಇಟ್ಟುಕೊಂಡು ಕಮರ್ಶಿಯಲ್ ಸಿನಿಮಾ ಮಾಡುವಾಗ ಇಂತಹ ವಿಷಯಗಳು ಲೆಕ್ಕಕ್ಕೆ ಬರುವುದಿಲ್ಲ ಎನಿಸುತ್ತದೆ. ಸಿನಿಮಾ ನೋಡುಗರಿಗೆ ಮನರಂಜನೆ ನೀಡಿದರಾಯ್ತು… ನೋಡಿದವರಿಂದ ನಿರ್ಮಾಪಕರಿಗೂ ಹಣ ಬಂದರಾಯ್ತು. ಅಲ್ವೆ?
ನೀವು ಹೇಳುವುದು ಸರಿ, ಈ ಚಿತ್ರದಲ್ಲಿ ಕತೆ ಹೇಳುವ ರೀತಿ ಇನ್ನೂ ಸೂಕ್ಷ್ಮವಾಗಿರಬಹುದಿತ್ತು… ಆದ್ರೆ,ಹಾಗೆ ಮಾಡಿದ್ರೆ ಹೆಚ್ಚು ಜನ ನೋಡ್ತಿರಲಿಲ್ಲ,ಮತ್ತೆ ಅವಾರ್ಡ್-ಗೋಸ್ಕರ ಮಾಡಿದ ಸಿನಿಮಾ ಅನ್ನುವ ಹಣೆಪಟ್ಟಿ ಬಂದಿರುತ್ತಿತ್ತು. ಈಗ ಇದರಲ್ಲಿರುವ feel-good factorಗಳಿಂದಾಗಿ, ವಿಷ್ಣುವರ್ಧನರ image-boostingನಿಂದಾಗಿ ಜನರಿಗೆ ಇದನ್ನ ನೋಡಲಿಕ್ಕೊಂದು ಕಾರಣ ಇದೆ. ನಾಗತಿಹಳ್ಳಿ ಹೇಳಬೇಕಿದ್ದಿದ್ದು ಹೆಚ್ಚು ಜನರಿಗೆ ಮುಟ್ಟುತ್ತದೆ, ಮತ್ತು ಅವರ ಮೂಲ ಉದ್ದೇಶ ಸಫಲವಾಗುತ್ತದೆ. The Hindu ಪೇಪರ್ ತಗೆದು ನೋಡಿದರೆ ದಿನಾ globalization ವಿರುದ್ಢ ಒಂದೊಂದು ಲೇಖನ ಇದ್ದೇ ಇರ್ತದೆ,ಆದ್ರೆ ಅದನ್ನು ಎಷ್ಟು ಜನ ಓದುತ್ತಾರೆ? ಎಷ್ಟು ಜನರಿಗೆ globalizationನ ಹರಿಣಾಮ ಏನು ಅಂತ ಅರ್ಥ ಆಗಿರ್ತದೆ?
ಅದೇನೋಪ್ಪ,ನಮ್ಮ ಸುತ್ತಲ ಜನಕ್ಕೆ ಕಪ್ಪು-ಬಿಳುಪು ಅಂತ ಇಟ್ಟುಕೊಂಡು ಕತೆ ಹೇಳಿದರೆ ಮಾತ್ರ ಚೆನ್ನಾಗಿ ಅರ್ಥವಾಗುವುದು ಯಾಕೆ ಅಂತ ಗೊತ್ತಿಲ್ಲ. ನಮ್ಮಲ್ಲಿ film appreciation ಅನ್ನುವ ಪರಿಜ್ಞಾನ ಇಲ್ಲದಿರುವುದಕ್ಕೋ,ಅಥವಾ ನಮ್ಮ mind ಅಷ್ಟು matured ಅಲ್ಲದಿರುವುದಕ್ಕೋ… ಕಾರಣ ಹುಡುಕುತ್ತಿದ್ದೇನೆ, ಇನ್ನೂ ಸಿಕ್ಕಿಲ್ಲ.
ಈ ಚಿತ್ರದಲ್ಲಿರುವ ಒಂದೊಂದು ಅಂಶವೂ ನೋಡ್ತಾ ಹೋದಹಾಗೆ ನನಗೆ, ನಾಗತಿಹಳ್ಳಿ ಸುತ್ತಲ ಜನವನ್ನ, ಮಾಧ್ಯಮವನ್ನ ಅರ್ಥ ಮಾಡ್ಕೊಂಡು ಯಾರಿಗೇನು ಬೇಕೋ ಅದು ಇಟ್ಟುಕೊಂಡು ಚಿತ್ರ ತೆಗೆದ genius ಅಂತ ಅನಿಸಿದ್ದು ಮಾತ್ರ ನಿಜ…
ಪ್ರಶ್ನೆ ಇಲ್ಲಿ ಹೆಚ್ಚಿನ ಜನ ನೋಡುತ್ತಿದ್ದರಾ ಇಲ್ಲವಾ ಎನ್ನುವುದಲ್ಲ. ಪ್ರಶ್ನೆ ಕಲೆಯದ್ದು, ಮಾಧ್ಯಮ ನಿಷ್ಟೆಯದ್ದು.
ಟೈಂಸ್ ಆಫ್ ಇಂಡಿಯಾದ ಸಂಪಾದಕರೊಮ್ಮೆ ಹೇಳಿದ್ದರಂತೆ, “ನಾನು ನ್ಯೂಸನ್ನು ‘ದ ಹಿಂದೂ’ವಿನಲ್ಲಿ ಓದುತ್ತೇನೆ. ನನ್ನ ಪೇಪರ್ ಒಂದು ವ್ಯಾಪಾರ ಅಷ್ಟೆ” ಅಂತ. ‘ದ ಹಿಂದು’ವಿನ ಗುಣ ಮಟ್ಟ ಹೆಚ್ಚಿನ ಜನರಿಗೆ ತಲಪುವಂತೆ ಮಾಡುವಲ್ಲಿ ನಮ್ಮ ಪ್ರಯತ್ನ ಇರಬೇಕೇ ವಿನಃ ಗುಣಮಟ್ಟ ನಮಗೆ ಬೇಡ. ಸರಳವಾದ ಡೈಲ್ಯೂಟ್ ಮೆಸೇಜ್ ನಮಗೆ ಸಾಕು ಅನ್ನುವುದಲ್ಲ.
ಲೇಖಕರು ನಾಗತಿಹಳ್ಳಿಯವರ ಕಥಾ ಶಕ್ತಿಯನ್ನು ಹೇಗೆ ಮೆಚ್ಚುತ್ತಾರೋ ಹಾಗೇ ಚಿತ್ರ ಶಕ್ತಿಯ ಐಬಿನ ಬಗ್ಗೆ ಕೊರಗಿದ್ದಾರೆ. ಕಥೆಯನ್ನು ಓದುವಾಗ ಸಿನೆಮಾ ಓದುಗರ ತಲೆಯಲ್ಲಿ ರೂಪವಾಗುತದೆ. ಆದರೆ ಸಿನೆಮಾ ರೂಪದಲ್ಲಿ ಕಥೆ ಹೊರಬರುವಾಗ ಚಿತ್ರಗಳು ಕಾಂಕ್ರೀಟ್ ಆಗಿ ಬಿಡುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವಾಗುತ್ತದೆ. ಒಟ್ಟಾರೆ ಒಳ್ಳೆಯ ಮೆಸೇಜ್ ಕೊಟ್ಟರೆ ಸರಿಯಾಗಲಿಲ್ಲ. ಯಾಕೆಂದರೆ ಮೆಸೇಜ್ ಕೊಡಲು ಸಿನೆಮವೇ ಆಗಬೇಕಿಲ್ಲವಲ್ಲಾ? ಅದನ್ನು ಬರೆದು ಪಾಂಪ್ಲೆಟ್ ಮಾಡಿ ಹಂಚಬಹುದಲ್ಲಾ? ಅಥವಾ ಪುಸ್ತಕ ಬರೆಯಬಹುದಲ್ಲಾ? ಒಂದು ಮಾಧ್ಯಮವನ್ನು ಬಳಸಿಕೊಂಡ ಮೇಲೆ ಆ ಮಾಧ್ಯಮಕ್ಕೆ ನಾವು ಬದ್ಧರಾಗಿರುವುದು ಅಗತ್ಯವಲ್ಲವೇ?
ಇನ್ನು ನಮ್ಮ ಸುತ್ತಮುತ್ತಲಿನ ಜನ ಯಾಕೆ ಜಾಗೃತರಾಗಿಲ್ಲ ಎಂಬ ಪ್ರಶ್ನೆಯೇ ನನಗೆ ವಿಚಿತ್ರ ಅನ್ನಿಸುತ್ತದೆ. ಸುತ್ತಮುತ್ತಲಿನ ಜನ ಬಿಡಿ, ನಾವೆಷ್ಟು ಜಾಗೃತರು? ಫೀಲ್-ಗುಡ್ ಚಿತ್ರದಿಂದ ಮಜಾಬಂತು, ಮೆಸೇಜ್ ಸಿಕ್ಕಿತು ಎಂದು ನಾವು ಅಂದುಕೊಳ್ಳುವುದಾದರೆ, ನಮ್ಮ ಸಿನೆಮಾಗಳ ಅಧೋಗತಿಗೆ ಬೇರೆಯವರಲ್ಲಿ ಕಾರಣ ಹುಡುಕುವುದು ಅಸಂಬದ್ಧ. ಇನ್ನು ಕನ್ನಡದ ಜನರ ಮಾನಸಿಕ ಮೆಚ್ಯೂರೆಟಿ ಬಗ್ಗೆ ಮಾತನಾಡಿದ್ದೀರಿ. ನೀನಾಸಂನಂಥಾ ಜಾಗದಲ್ಲಿ ಹಲವು ದಶಕಗಳಿಂದ ಸಶಕ್ತ ಸಿನೆಮಾ ರಸಗ್ರಹಣ ಶಿಕ್ಷಣ ನಡೆದು ಬಂದಿದೆ, ಕಾಸರವಳ್ಳಿ, ಶೇಷಾದ್ರಿ, ಸತ್ಯು ಈ ರೀತಿ ಹೆಸರಿಸುತ್ತಾ ಹೋಗಬಹುದಾದ ಚಿತ್ರ ನಿರ್ದೇಶಕರಿದ್ದಾರೆ ನಮ್ಮಲ್ಲಿ. ಜ್ಞಾನಪೀಠ ವಿಜೇತರ ಸಾಲು ಸಾಲೇ ನಮ್ಮಲ್ಲಿದೆ. ಹಾಗಾದರೆ ಸಮಸ್ಯೆ ಎಲ್ಲಿದೆ? ನನ್ನ ಪ್ರಕಾರ ಸಮಸ್ಯೆ ಇರುವುದು ನಮ್ಮ ಈ ಉದಾರ ಮನೋಭಾವದಲ್ಲಿ. ಕನ್ನಡ ಸಿನೆಮಾ ಇಷ್ಟಾದರೂ ಉಂಟಲ್ಲ ಸಾಕು ಸಧ್ಯ ಎನ್ನುವ ಕರುಣೆ ಇಟ್ಟೇ ನಾವು ಸಿನೆಮಾ ನೋಡುವುದು. ಹಾಗಿದ್ದರೆ, ಕನ್ನಡ ಸಿನೆಮಾ ಉದ್ಯಮ ಚೆನ್ನಾಗಿಲ್ಲ, ಕ್ವಾಲಿಟಿ ಬಗ್ಗೆ ದೂರು ಇದನ್ನೆಲ್ಲಾ ನಿಲ್ಲಿಸಿ ನಾವು ಸಂತೋಷದಿಂದಲೇ ಬದುಕಬೇಕು. ಸಾಕು ಮಾಡುವ ಈ ಕೊರಗಿನ ಬೂಟಾಟಿಕೆ.
ನಾನೂ ಚಿತ್ರ ನೋಡಿದೆ. ಭಾರಿ ನಿರಾಶೆ ಮತ್ತು ವಿಷಾದ ಎನಿಸಿತು. ನಿರಾಶೆ ಏಕೆಂದರೆ, ಜಾಗತೀಕರಣದ ಅಡಕತ್ತರಿಯಲ್ಲಿ ಸಿಕ್ಕ ರೈತನ ಬದುಕು ಮತ್ತು ನಕ್ಸಲೀಯ ಸಮಸ್ಯೆಯನ್ನು ಬಿಂಬಿಸುವ ಚಿತ್ರ ಎಂದೆಲ್ಲಾ ನಮ್ಮ ಮಾಧ್ಯಮಗಳ ಬೊಗಳೆ ಮಾತು ಕೇಳಿ ಚಿತ್ರದ ಬಗ್ಗೆ ಭಾರಿ ಭರವಸೆ ಇಟ್ಟುಕೊಂಡು ಹೋಗಿದ್ದ ನನಗೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಕಾಡುವಂತಹ ಯಾವುದೇ ಅಂಶ ಅದರಲ್ಲಿರಲಿಲ್ಲ. ಅಂತಹ ಪರಿಣಾಮಕಾರಿಯಾಗಬಹುದಾಗಿದ್ದ ವಸ್ತುವನ್ನು ಇಟ್ಟುಕೊಂಡೂ ಚಿತ್ರ ಅದನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಮಕಾಡೆ ಬಿದ್ದಿದೆ. ವಿಷಾದ ಏಕೆಂದರೆ, ‘ಕೊಟ್ರೇಶಿಯ ಕನಸು’ನಂತಹ ನಮ್ಮನ್ನು ಕಾಡುವ ಸಾಮಾಜಿಕ ಪರಿಣಾಮದ ಚಿತ್ರ ಕೊಟ್ಟ, ‘ಬಾ ನಲ್ಲೆ ಮಧುಚಂದ್ರಕೆ’ನಂತಹ ಕುತೂಹಲಕಾರಿ ಪ್ರೇಮಕಥೆ ಕೊಟ್ಟ ನಾಗತಿಹಳ್ಳಿ ಅವರು ‘ಮಲ್ಲಿಗೆ’ ಮಾಡುವ ಹೊತ್ತಿಗೆ ‘ಮಾತಿನ’ ಬಿಸುಪು ಕಳೆದುಕೊಂಡುಬಿಟ್ಟರಲ್ಲ ಎಂಬುದಕ್ಕಾಗಿ. ದೊಡ್ಡ ನಟರ ಇಮೇಜ್,ಕಮರ್ಶಿಯಲ್ ಶಕ್ತಿಗಳ ಒತ್ತಡದ ಭಾರಕ್ಕೆ ಅವರು ಕುಸಿದರೆ ಅಥವಾ ತಮ್ಮೊಳಗಿನ ದ್ವಂದ್ವಗಳಿಗೇ ಚಿತ್ರವನ್ನು ಬಲಿಕೊಟ್ಟರೆ ಎಂಬುದು ಮಾತ್ರ ಇನ್ನೂ ಚರ್ಚೆಯಾಗಬೇಕಿದೆ. ಇನ್ನು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ಸಿನಿಮಾ ವಿಮರ್ಶಕರ ಮಾನಸಿಕ ಸ್ಥಿಮಿತದ ಬಗ್ಗೆ ಮಾತ್ರ ಅನುಮಾನ ಸಹಜವಾಗೇ ಎದ್ದಿದೆ!
Mathad mathad mallige is super film
Vishnu sir acting pantastic
Sudeep is actin super
BETALA..
SORRY FOR DELAY IN RESPONDING.
FIRST OF ALL I WOULD LIKE TO SAY THAT BETWEEN THE SAID WORDS AND EXHIBITED FEELINGS LIES THE UNSAID… THERE IS SOMETHING CALLED READING BETWEEN THE LINES, WHICH LEADS TO PROPER OR IMPROPER UNDERSTANDING.
NANU HINDU-NA DODDA ABHIMAANI, IVATTIGU NANNA MANEYALLI HINDU THAPPILLA, THAPPODU ILLA. ADU KETTA KELASA MADUTTIDE, NANGE JOLLU CONTENT SAKU AMTA NANU HELILLA. AADARE, BEING IN MEDIA I STUDY WHAT PEOPLE WANT AND WHAT PEOPLE WATCH, THAT MAKES ME SAD. AND THE DISTRESS OF JOURNALISTS WHO CAN MAKE A CHANGE IF THEY ARE WILLING TO, AND THE WAY THEY COMPROMISE - MAKES ME EVEN MORE SAD.
ಫೀಲ್-ಗುಡ್ ಚಿತ್ರದಿಂದ ಮಜಾಬಂತು, ಮೆಸೇಜ್ ಸಿಕ್ಕಿತು …
- IDU NANAGE AGILLAA. BANDAVARU IDDARE ANTA NANU HELIDDARA AASHAYA ASHTE.
NEENASAM RASAGRAHANA SHIBIRADALLI BARUVAVARELLA ALLI HELUVUDANNU, ALLIYA ASHYAVANNU ARTHA MADIKOLLUVAVARU AMTA NIMAGE ANISIDDARE ADU THAPPUKALPANE, NANU NODIDA SHIBIRAGALALLI ELLA REETHIYA JANARUU IDRU.
MAY BE, MY STYLE OF EXPRESSION ITSELF IS MISLEADING, SORRY FOR THAT. NO MORE COMMENTS FROM ME
Post a Comment