ಮಲ್ಲೇಶ್ವರಂ ಸುಂದರಿಯರು ಕತೆಗೆ ಸೋಜಿಗ ತರುವಂಥ ಪ್ರತಿಕ್ರಿಯೆಗಳು ಬಂದಿವೆ. ಹಲವರು ಇದರಲ್ಲಿ ಬರುವ ಪಾರ್ವತಿ ಮತ್ತು ಪರಮೇಶ್ವರರ ಕತೆ ಬರೀ ಕತೆಯಿರಬಹುದು ಎಂದು ಅಪಾರ್ಥ ಮಾಡಿಕೊಂಡಿದ್ದಾರೆ! ನಿಮ್ಮ ಹೆಂಡತಿ ಇದನ್ನು ಓದಿದ್ದಾರಾ ಎಂದು ಕೇಳುತ್ತ ಕೆಲವರು ನನ್ನನ್ನು ಅಡಿಯಿಂದ ಮುಡಿಯ ತನಕ ಪರೀಕ್ಷಾದೃಷ್ಟಿಕೋನದೊಂದಿಗೆ ನೋಡಿದ್ದೂ ಆಗಿದೆ. ಕೇಳಿದ್ದೂ ಆಗಿದೆ. ಈ ನಡುವೆ ಹಿಂದೆ ಯಾವಾಗಲೋ ಓದಿದ ತಮಾಷೆ ಪ್ರಸಂಗವೊಂದು ನೆನಪಾಗಿ `ಮಲ್ಲೇಶ್ವರಂ ಸುಂದರಿಯರು’ ಕತೆಯ ಎರಡನೇ ಭಾಗವನ್ನು ಬರೆಯೋಣ ಅನಿಸಿತು. ಇದೇನೂ ಕತೆಯಲ್ಲ. ಈ ತಮಾಷೆ ಪ್ರಸಂಗವನ್ನು ನೀವು ಮೊದಲೇ ಕೇಳಿರುವ ಸಾಧ್ಯತೆಯೂ ಇದೆ. ಕೇಳಿದ್ದರೂ ಇದನ್ನು ಪುನಃ ಓದಿಕೊಳ್ಳಿ!
ರಾಜರಾಜೇಶ್ವರಿ ನಗರದಲ್ಲಿ ಜಗಳ ಮಾಡಿಕೊಳ್ಳುತ್ತ ಸುಖವಾಗಿದ್ದ ಪಾರ್ವತಿ ಪರಮೇಶ್ವರರು ಒಂದು ದಿನ ಮಲ್ಲೇಶ್ವರಂ ಏ್ತ್ ಕ್ರಾಸಿನ ಕಾಫಿ ಹೌಸಿನಲ್ಲಿ ಕುಳಿತು ಕೊನೆಯ ಸುತ್ತಿನ ಜಗಳ ಮುಗಿಸಿ ಬೇರೆಬೇರೆಯಾಗಲು ತೀರ್ಮಾನಿಸಿದ ಕತೆ ನಿಮಗೆ ಗೊತ್ತಿದೆ. ಆದರೆ ಲಾಯರ್ ಆಫೀಸಿನಲ್ಲಿ ಅವರಿಬ್ಬರೂ ಭೇಟಿಯಾಗುವ ಹೊತ್ತಿಗೆ ಕರ್ನಾಟಕ ಗವರ್ನಮೆಂಟು ಬಿದ್ದು ಹೋಗಿ, ಭಾರತದವರು ಇಂಗ್ಲೆಂಡಿನಲ್ಲಿ ಕ್ರಿಕೆಟ್ ಸರಣಿ ಗೆದ್ದು, ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯೆಲ್ಲಾ ಬಂದು ಅವರು ಬೇರೆಬೇರೆಯಾಗುವ ತೀರ್ಮಾನವನ್ನು ಕೈಬಿಡುತ್ತಾರೆ. ಹಾಗೆ ಕೈ ಬಿಟ್ಟು ಅವರು ಮೊದಲಿನಂತೆ ಜಗಳ ಮಾಡಿಕೊಳ್ಳುತ್ತ ರಾಜರಾಜೇಶ್ವರಿ ನಗರದ ತಮ್ಮ ಗೂಡಿನಲ್ಲಿ ಸಂಸಾರ ಮುಂದುವರೆಸುತ್ತಾರೆ. ಇವರ ಸಂಸಾರ ರಥ ಹಾಗೇ ಸಾಗುತ್ತಿರುತ್ತದೆ. ಅವಳು ಮತ್ತು ಅವನಿಗೆ ಒಂದು ಪುಟ್ಟ ಮಗುವೂ ಆಗಿ, ಅವನು ಶಾಲೆಗೆ ಹೋಗವಷ್ಟು ದೊಡ್ಡವನಾಗಿ, ಅವನ ಹೋಮ್‌ವರ್ಕ್ ಯಾರು ಮಾಡಿಸಬೇಕು ಎಂದು ಇನ್ನೊಂದು ಸುತ್ತಿನ ಜಗಳವಾಗಿ ಅವರು ಸುಖವಾಗಿರುತ್ತಾರೆ. ಹಾಗೆ ಇರಬೇಕಾದರೆ ಒಂದು ದಿನ ಸಂಜೆ ಅವನಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಎದೆ ನೋವು ಹೆಚ್ಚಾಗಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡುಹೋಗುವಷ್ಟರಲ್ಲಿ ಆತ ಅಸುನೀಗುತ್ತಾನೆ.
ಶವವನ್ನು ಮನೆಗೆ ತರಲಾಗುತ್ತದೆ. ಬಂಧುಗಳೆಲ್ಲಾ ಸೇರುತ್ತಾರೆ. ಆತ ಎಷ್ಟು ಒಳ್ಳೆಯ ಗಂಡನಾಗಿದ್ದ, ಅಪ್ಪನಾಗಿದ್ದ, ಎಷ್ಟು ಒಳ್ಳೆಯ ಸಾಲಗಾರನಾಗಿದ್ದ ಎಂಬಿತ್ಯಾದಿ ವಿಷಯಗಳ ಕುರಿತು ಸಣ್ಣದೊಂದು ಸೆಮಿನಾರು ನಡೆಯುವಷ್ಟರಲ್ಲಿ ಮನೆಯ ಬಳಿ ಶವ ತೆಗೆದುಕೊಂಡು ಹೋಗುವ ಗಾಡಿ ಬರುತ್ತದೆ. ಅಲ್ಲಿಂದ ಶವವನ್ನು ಬಾಪೂಜಿ ನಗರದ ಚಿತಾಗಾರರಕ್ಕೆ ತೆಗೆದುಕೊಂಡು ಹೋಗುವುದೆಂದು ತೀರ್ಮಾನವಾಗುತ್ತದೆ.
ಅವಳು ಮನೆಯಲ್ಲೇ ಅಳುತ್ತ ಕುಳಿತುಕೊಳ್ಳುತ್ತಾಳೆ. ಶವದ ವಾಹನದಲ್ಲಿ ಆತನ ಸ್ನೇಹಿತರು ಕುಳಿತುಕೊಂಡು ಶವವನ್ನು ಬಾಪೂಜಿ ನಗರದ ಕಡೆ ಕರೆದುಕೊಂಡು ಬರುತ್ತಾರೆ. ಬಾಪೂಜಿ ನಗರದ ಚಿತಾಗಾರಕ್ಕೆ ಹೋಗುವ ಹಾದಿ ಕೊಂಚ ದುರ್ಗಮ. ವಿಜಯನಗರದ ಪೈಪ್‌ಲೈನ್ ರೋಡಿನಿಂದ ಬಲಕ್ಕೆ ಗೋರಿಪಾಳ್ಯದ ಕಡೆಗೆ ತಿರುಗಿ ರೈಲ್ವೇ ಬ್ರಿಜ್ ಹಾದು ಪುನಃ ಬಲಕ್ಕೆ ತಿರುಗಿ ಇಕ್ಕಟ್ಟಾದ ರಸ್ತೆಯಲ್ಲಿ ವಾಹನವನ್ನು ತಿರುಗಿಸುವಾಗ ಪುಟ್ಟದೊಂದು ಅವಘಡ ನಡೆಯುತ್ತದೆ. ಶವದ ವಾಹನ ಅಲ್ಲಿದ್ದ ಕರೆಂಟ್ ಕಂಬಕ್ಕೆ ಢಿಕ್ಕಿಯಾಗುತ್ತದೆ.
ಢಿಕ್ಕಿಯಾಗುತ್ತಲೇ ಕುಳಿತಿದ್ದವರೆಲ್ಲ ಮುಗ್ಗರಿಸುತ್ತಾರೆ. ಮಲಗಿದ್ದ ಶವ ಎದ್ದು ಕುಳಿತುಕೊಳ್ಳುತ್ತದೆ ಮತ್ತು ಮಾತಾಡತೊಡಗುತ್ತದೆ. ಒಂದು ಕ್ಷಣ ಸ್ನೇಹಿತರಿಗೆ ಗಾಬರಿಯಾದರೂ ಅವರು ಬಹಳ ಬೇಗ ಚೇತರಿಸಿಕೊಳ್ಳುತ್ತಾರೆ. ಅಲ್ಲಿಂದ ಗಾಡಿ ತಿರುಗಿಸಿಕೊಂಡು ಪುನಃ ರಾಜರಾಜೇಶ್ವರಿ ನಗರಕ್ಕೆ ತಂದು ಆತನನ್ನು ಇಳಿಸಿ ಹೊರಟು ಹೋಗುತ್ತಾರೆ. ಪಾರ್ವತಿ ಮತ್ತು ಪರಮೇಶ್ವರರ ಸಂಸಾರ ರಥ ಪುನಃ ನಿಟ್ಟುಸಿರು ಬಿಡತೊಡಗುತ್ತದೆ.
ಇದೊಂದಿಷ್ಟು ದಿನ, ತಿಂಗಳು, ವರ್ಷ ನಡೆದು ಒಂದು ದಿನ ರಾತ್ರಿ ಪುನಃ ಆತನಿಗೆ ಎದೆನೋವು ಕಾಣಿಸಿಕೊಳ್ಳುತ್ತದೆ. ಆ ನೋವು ತೀವ್ರವಾಗಿ ಆತ ಎರಡನೇ ಬಾರಿ ಅಸುನೀಗುತ್ತಾನೆ. ಈ ಸಲ ಪುನಃ ಬಂಧುಬಳಗದವರೆಲ್ಲಾ ಸೇರುತ್ತಾರೆ. ಆತ ಎಷ್ಟು ಒಳ್ಳೆಯ ಗಂಡನಾಗಿದ್ದ, ಅಪ್ಪನಾಗಿದ್ದ, ಸಾಲಗಾರನಾಗಿದ್ದ ಎಂದೆಲ್ಲಾ ಪುನಃ ಭಾಷಣಗಳಾಗುತ್ತವೆ. ಅಷ್ಟೊತ್ತಿಗೆ ಶವದ ಗಾಡಿ ಬರುತ್ತದೆ. ಪುನಃ ಬಾಪೂಜಿ ನಗರದ ಚಿತಾಗಾರಕ್ಕೆ ತೆಗೆದುಕೊಂಡು ಹೋಗುವುದು ಎಂದು ತೀರ್ಮಾನವಾಗುತ್ತದೆ.
ಈ ಸಲವೂ ಸ್ನೇಹಿತರೇ ಈ ಕೆಲಸ ಮುಗಿಸಲು ತೀರ್ಮಾನಿಸುತ್ತಾರೆ. ಅವರನ್ನು, ಶವವನ್ನು ಬೀಳ್ಕೊಡಲು ಅವಳು ಗೇಟಿನ ತನಕ ಬರುತ್ತಾಳೆ. ಇನ್ನೇನು ಶವದ ಗಾಡಿ ಹೊರಡಬೇಕು ಎನ್ನುವಷ್ಟರಲ್ಲಿ ಅವಳು ಗದ್ಗದಿತಳಾಗಿ, ಆದರೆ ಸ್ಪಷ್ಟವಾಗಿ ಹೇಳುತ್ತಾಳೆ: ನಿಧಾನವಾಗಿ ಹೋಗಿ. ಬಾಪೂಜಿ ನಗರದ ಆ ಕರೆಂಟ್ ಕಂಬದ ಬಳಿ ಸ್ವಲ್ಪ ಹುಶಾರು!
ಶವ ಅಲ್ಲಿಂದ ಹೊರಟು ಹೋಗುತ್ತದೆ!
11 Comments
ಹಹ್ಹಹ್ಹಹ್ಹ! ವಂಡ್ರಫುಲ್! ಇನ್ನು ಭಾಗ-೩ ನೂ ಬರೀತೀರೋ ಹೇಗೆ?
ಇದು ಇನ್ನೂ ಗಮ್ಮತ್ತಾಗಿದೆ. ನನ್ನ-ಶಶಿಯ(ನನ್ನವ)ತರಹದ ಅನೇಕ ಕಲಹಪ್ರಿಯ ಜೋಡಿಗಳು ಓದಿ ಎಂಜಾಯ್ ಮಾಡಬಹುದಾದಂಥದು. ಆದ್ರೆ..
ಮೊದಲನೆ ಭಾಗದಲ್ಲಿದ್ದ ಡಯಲಾಗುಗಳ, ಸೂಕ್ಷ್ಮ ಅಬ್ಸರ್ವೇಷನ್ನುಗಳ ಕೊರತೆ ಕಾಣುತ್ತಿದೆ. ಈ ಮಲ್ಲೇಶ್ವರಂ ಪುರಾಣ ನೀವು ಬಯಸಿದರೆ ಅದ್ಭುತವಾಗಿ ಮುಂದುವರಿಯಬಹುದು.
ನಿಮ್ಮ ಹೆಂಡತಿ ಇದನ್ನು ಓದಿದ್ದಾರಾ?
sakkath! i liked both the parts.
ಟೀನಾ,
ನೀವು ಹೇಳಿದ್ದು ನೂರಕ್ಕೆ ನೂರು ನಿಜ. ಇದೊಂದು ಅವಸರದ ಪ್ರಸವ. ಇದನ್ನು ಇನ್ನೊಂದಿಷ್ಟು ಹೊತ್ತು ಧ್ಯಾನಿಸಿದ್ದರೆ ಖಂಡಿತವಾಗಿ ಇನ್ನೂ ಚೆನ್ನಾಗಿ ಬರೆಯಬಹುದಿತ್ತು.
ಶ್ರೀ,
ಇದನ್ನು ನನ್ನ ಹೆಂಡತಿ ಓದಿದ್ದಾರಾ ಎಂದರೆ ಏನರ್ಥ? ಗಂಡ ಬರೆದಿದ್ದನ್ನು ಮಾತ್ರ ಓದುವವಳು ಹೆಂಡತಿಯಾಗುವುದಿಲ್ಲ. ಗಂಡ ಬರೆಯದಿರುವುದನ್ನೂ ಓದುವ ಶಕ್ತಿ ಅವಳಿಗಿರಬೇಕು. ಸಾಮಾನ್ಯವಾಗಿ ಈ ಶಕ್ತಿ ಜಗತ್ತಿನ ಎಲ್ಲ ಹೆಂಡತಿಯರಿಗೂ ಇರುತ್ತದೆ ಎಂಬ ಅನುಮಾನ ನನಗಿದೆ.
ಸುಶ್ರುತ್,
ಸುಂದರಿಯರ ಮೂರನೇ ಭಾಗ ಬರೆಯುತ್ತೀರಾ ಎಂದು ಕೇಳಿದ್ದೀರಿ. ಅಂದರೆ ನನ್ನ ಕುರಿತು ನಿಮಗೆ ಸಿಂಪತಿ ಇದ್ದಂಗಿಲ್ಲ.
ರಾಘವೇಂದ್ರ,
ನಿಮ್ಮ ಪ್ರೀತಿಗೆ ಧನ್ಯವಾದಗಳು. ಅಂದಹಾಗೆ ನಿಮ್ಮ ಸಂಸಾರರಥ ಹೇಗೆ ನಡೆಯುತ್ತಿದೆ?
ನಾನು ಆಫೀಸಿನಲ್ಲಿ ಕುಳಿತು ಕಂಪ್ಯೂಟರ್ ನೋಡುತ್ತಿರುವ ಈ ಹೊತ್ತಿನಲ್ಲಿ ಮಲ್ಲೇಶ್ವರಂ ಏ್ತ್ಕ್ರಾಸಿನಿಂದ ಸಂಪಿಗೆ ಟಾಕೀಸ್ ಕಡೆ ನಡೆದು ಬರುತ್ತಿರಬಹುದಾದ ಸುಂದರಿಯರನ್ನು ನೆನಪು ಮಾಡಿಕೊಳ್ಳುತ್ತ
ನಿಮ್ಮವನು
-ಪರಮೇಶ್ವರ
Hi Parmesh,
Reading your stories itself is a different experience & characters are jut from our day to day lifes. There are so many turns and views crisscrossed that make you to think from your side hoiw can I carryforward this story…
Really nice way of narration which I like most. After eading all your stories I feel, everything is right, evrything is perfect. Let us enjoy as it is
Take care
Love..
Lots of grammer & spelling mistake but never mind as long as it conveys its message!!
ನಾನು ನಿಮ್ಮ ಕಾಲೆಳೆಯಲು ಅಡ್ಡ ಪ್ರಶ್ನೆ ಕೇಳಿದರೆ ನೀವೊಳ್ಳೆ ಮೆಣಸಿನ ಪುಡಿ ಎರಚುವವರ ಥರ ಉತ್ತರ ಕೊಡುತ್ತೀರಲ್ಲ ಸಾರ್.
ಇರ್ಲಿ ಬಿಡಿ. ನಿಮ್ಮ ಅನುಮಾನ ನಿಜವೇ ಅಂತ ನನ್ನ ಅಭಿಪ್ರಾಯ ಕೂಡ. ನನ್ನ ಪ್ರಕಾರ, ಜಗತ್ತಿನ ಪ್ರತಿಯೊಬ್ಬ ಬುದ್ಧಿವಂತ ಹೆಂಗಸಿಗೂ ಗಂಡ ಬರೆಯದಿದ್ದಿದ್ದನ್ನು ಓದುವ ಮತ್ತು ಹೇಳದಿದ್ದಿದ್ದು ಕೇಳಿಸಿಕೊಳ್ಳುವ ಶಕ್ತಿ ಇರ್ತದೆ. ಅದು ಇರದಿದ್ದಾಗಲೇ ತೊಂದರೆಗಳು ಹುಟ್ಕೊಳ್ತವೆ. ಅದು ಇದ್ದ ಸಂಸಾರಗಳು ಮಾತ್ರ ಸುಖವಾಗಿರ್ತವೆ.
ತುಂಬಾ ಚೆನ್ನಾಗಿದೆ ಈ ಪ್ರಸಂಗ, ಕೊನೆಯ ಸಾಲುಗಳನ್ನು ಓದಿ ಸಿಕ್ಕಾಪಟ್ಟೆ ನಗು ಬಂತು. ಸುಂದರಿಯರು ಭಾಗ ಎರಡು ಅಂತ ಬರೆದಿದ್ದೀರಿ ಮೂರನೇದು ಯಾವಾಗ?
ಗುಂಡ್ಕಲ್ ,
ಅಲ್ಲಾ ಕಣ್ರಿ . Heroನ ಸಾಯಿಸಿ ಬಿಟ್ರಿ. ಮುಂದೆ…?
~ಸುನೀಲ
ಗುಂಡ್ಕಲ್,
ಅಲ್ಲಾ ಕಣ್ರಿ .. heroನ್ನೇ ಸಾಯಿಸಿಬಿಟ್ರಿ…
ಹೀಗಾದ್ರೆ ಭಾಗ ಮೂರು …?
~ಸುನೀಲ
Post a Comment