ವಾಟ್‌ ಎ ಶಾಟ್‌!

ಸಿನಿಮಾವೊಂದು ಮಾಮೂಲಿ ಮಾತಿನ ಸನ್ನಿವೇಶದೊಂದಿಗೆ ಶುರುವಾಗಬಹುದು. ಹಾಡಿನೊಂದಿಗೆ, ಹೊಡೆದಾಟದೊಂದಿಗೆ ಶುರುವಾಗಬಹುದು. ಚೇಸ್‌ನೊಂದಿಗೆ, ತಮಾಷೆಯೊಂದಿಗೆ, ಪ್ರಣಯದೊಂದಿಗೆ ಶುರುವಾಗಬಹುದು. ಇವೆಲ್ಲಾ ಪ್ರಯೋಗಗಳೂ ನಡೆದಿವೆ. ಮುಗಿದಿವೆ. ಹೀಗಿದ್ದರೂ ಪ್ರಶ್ನೆ ಹಾಗೇ ಉಳಿಯುತ್ತದೆ. ಪಿಚ್ಚರ್‌ ಹೇಗೆ ಶುರುವಾದರೆ ಚೆನ್ನಾಗಿರುತ್ತದೆ? ಚಿತ್ರಕತೆ ಬರೆಯುವವರನ್ನು, ನಿರ್ದೇಶಕರನ್ನು ಸದಾ ಕಾಡುವ ಗೊಂದಲ ಇದು. ಒಂದು ಆ್ಯಕ್ಷನ್‌ ಸನ್ನಿವೇಶದೊಂದಿಗೆ ಚಿತ್ರ ಶುರುವಾದರೆ ಕತೆಗೊಂದು ಟೇಕಾಫ್‌ ತನ್ನಿಂದ ತಾನೇ ಸಿಕ್ಕಿಬಿಡುತ್ತದೆ ಎಂದು ಭಾವಿಸುವ ಅನೇಕರಿದ್ದಾರೆ. ಈ ಸೂತ್ರ ಅನುಸರಿಸಿ ಕೆಲವರು ಗೆದ್ದಿದ್ದಾರೆ. ಹಲವರು ಸೋತಿದ್ದಾರೆ. ಇದನ್ನು ಧಿಕ್ಕರಿಸಿಯೂ ಕೆಲವರು ಗೆದ್ದಿದ್ದಾರೆ. ಹಲವರು ಸೋತಿದ್ದಾರೆ. ಹೀಗಾಗಿ ಸಿನಿಮಾವನ್ನು ಹೇಗೆ ಶುರು ಮಾಡಬೇಕು ಎಂಬ ಗೊಂದಲ ಹಾಗೆಯೇ ಉಳಿದುಕೊಳ್ಳುತ್ತದೆ.`ಸಿನಿಮಾವನ್ನು ಹೇಗೆ ಮುಗಿಸಬೇಕು ಎಂದು ತೀರ್ಮಾನ ಮಾಡಿಕೊಳ್ಳಿ. ಆಗ ಹೇಗೆ ಆರಂಭಿಸಬೇಕು ಎಂದು ನಿರ್ಧರಿಸುವುದು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸಿಡ್‌ ಫೀಲ್ಡ್‌ರಂಥ ಚಿತ್ರಕತೆ ಪಂಡಿತರು. ಅಂದರೆ ಸಿನಿಮಾದ ಕೊನೆಯೊಂದು ಆರಂಭವನ್ನು ತೀರ್ಮಾನಿಸುತ್ತದೆ. ಮೊದಲ ಶಾಟ್‌ ಏನಿರಬೇಕು ಎನ್ನುವುದನ್ನು ಕೊನೆಯ ಶಾಟ್‌ ಸ್ಪಷ್ಟಪಡಿಸುತ್ತದೆ. ಈ ವಾದವನ್ನೂ ಇದಮಿತ್ಥಂ ಎಂದು ಹೇಳಲಾಗುವುದಿಲ್ಲ. ಸಿನಿಮಾದ ಮೊದಲ ಶಾಟ್‌ ಹುಟ್ಟಿಸಿದ ಸ್ಪಂದನೆಗಳು ಕೊನೆಯ ಶಾಟ್‌ಗೆ ಲೀಡ್‌ ಆಗಿರಬಹುದು. ಅಥವಾ ಕೊನೆಯ ಶಾಟ್‌ಗೆ ಬೇಕಾದ ಲೀಡ್‌ಗಾಗಿ ನಿರ್ದೇಶಕ ಮೊದಲ ಶಾಟ್‌ ಹುಟ್ಟಿಸಿರಬಹುದು. ಎರಡೂ ಒಂದೇ ಸಲಕ್ಕೆ ಹುಟ್ಟಿಕೊಂಡಿರುವುದೂ ಸಾಧ್ಯವಿದೆ. ಏಕೆಂದರೆ ಇದು ಮಾಂತ್ರಿಕ ಜಗತ್ತಿನ ವಿಷಯ.

ಸಿನಿಮಾದ ಕೊನೆಯ ಶಾಟ್‌ ಎನ್ನುವುದು ಕವಿತೆಯೊಂದರ ಕೊನೆಯ ಸಾಲಿದ್ದಂತೆ. ಹೆಚ್ಚಿನ ಸಂದರ್ಭದಲ್ಲಿ ಅದೊಂದು ಪಂಚ್‌ನೊಂದಿಗೆ ಮುಗಿಯುತ್ತದೆ. ಬಹುಶಃ ಅದು ಇಡೀ ಸಿನಿಮಾದ ಸಾರಾಂಶವನ್ನು ಹೇಳುತ್ತ ನೋಡುಗರ ತಲೆಯಲ್ಲಿ ಸಿನಿಮಾದ ಪ್ರದರ್ಶನ ಮುಂದುವರೆಯುವಂತೆ ಮಾಡುತ್ತದೆ. ತನ್ನ ಅತ್ಯುತ್ತಮ ಶಾಟ್‌ ಅನ್ನು ನಿರ್ದೇಶಕನೊಬ್ಬ ಕಟ್ಟಕಡೆಯದಾಗಿ ತೋರಿಸುತ್ತಿರಬಹುದು. ಅಥವಾ ಎದುರಿಗೆ ಕುಳಿತ ಸಹೃದಯನ ಮನಸ್ಸು ಗೆಲ್ಲುವ ಕೊನೆಯ ಅವಕಾಶವೆಂದು ನಿರ್ದೇಶಕ ತುಂಬಾ ಕಷ್ಟಪಟ್ಟಿರಬಹುದು. ಗೊತ್ತಿಲ್ಲ.

ಸಿನಿಮಾವೊಂದರ ಕೊನೆಯ ಶಾಟ್‌ ಎಂದಾಗ ಇರಾನಿ ನಿರ್ದೇಶಕ ಅಬ್ಬಾಸ್‌ ಕಿರೋಸ್ತಾಮಿಯ `ಥ್ರೂ ದಿ ಆಲೀವ್‌ ಟ್ರೀಸ್‌’ ಸಿನಿಮಾ ನೆನಪಾಗುತ್ತದೆ. ಆ ಚಿತ್ರದಲ್ಲಿ ಒಬ್ಬ ಹುಡುಗಿಯಿದ್ದಾಳೆ. ಅವಳು ತಾಹಿರಾ. ಆಕೆಯನ್ನು ಪ್ರೀತಿಸುವ ಹುಡುಗನಿದ್ದಾನೆ. ಅವನು ಹುಸೇನ್‌. ಆತನಿಗೆ ಮನೆಯಿಲ್ಲ. ಅವಳಿಗೆ ಮನೆಯಿದೆ. ಮನೆಯಿರುವ ಮಗಳನ್ನು ಮನೆಯಿಲ್ಲದವನಿಗೆ ಕೊಡುವುದು ಹೇಗೆ ಎಂದು ಅವಳ ಮನೆಯವರು ಈ ಪ್ರೀತಿಯನ್ನು ನಿರಾಕರಿಸುತ್ತಾರೆ.

ಇದರ ನಡುವೆ ಭೂಕಂಪವಾಗಿ ತಾಹಿರಾಳ ಮನೆಯೂ ಕುಸಿದು ಇಲ್ಲವಾಗುತ್ತದೆ. ಈಗ ಇಬ್ಬರಿಗೂ ಮನೆಯಿಲ್ಲದಿರುವುದರಿಂದ ಪ್ರೀತಿ ನಿಕ್ಕಿಯಾಗಬಹುದು ಎಂದುಕೊಂಡು ಅವರ ಮನೆಯವರನ್ನು ಹುಸೇನ್‌ ಕೇಳುತ್ತಾನೆ. ಅವಳ ಮನೆಯವರು ಈತನ ಪ್ರೀತಿಯನ್ನು ಈಗಲೂ ಒಪ್ಪುವುದಿಲ್ಲ.

ಈ ನಡುವೆ ತಾಹಿರಾ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾಳೆ. ಅದೇ ಸಿನಿಮಾದಲ್ಲಿ ಹುಸೇನ್‌ ಸಹ ಇದ್ದಾನೆ. ಸಿನಿಮಾದಲ್ಲಿ ಅವರಿಬ್ಬರಿಗೆ ಗಂಡ ಹೆಂಡತಿಯ ಪಾತ್ರ. ಈ ಚಿತ್ರೀಕರಣದ ನಡುವಿನಲ್ಲಿ ಹುಸೇನ್‌ ತನ್ನ ಪ್ರೀತಿಯನ್ನು ಗಟ್ಟಿಮಾಡಿಕೊಳ್ಳಲು ಹೆಣಗುತ್ತಾನೆ. ತಾಹಿರಾ ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಇದನ್ನು ಆ ಸಿನಿಮಾದ ನಿರ್ದೇಶಕ ಗಮನಿಸುತ್ತಿರುತ್ತಾನೆ.

ಸಿನಿಮಾದ ಚಿತ್ರೀಕರಣ ಆ ಸಂಜೆ ಮುಗಿಯುತ್ತದೆ. ಪ್ಯಾಕಪ್‌ ಆಗುತ್ತಲೇ ಅವಳು ನಡೆದುಕೊಂಡೇ ಮನೆಯ ಕಡೆಗೆ ಹೊರಡುತ್ತಾಳೆ. ನಿರ್ದೇಶಕನ ಒತ್ತಾಯದ ಮೇರೆಗೆ ತನ್ನ ಪ್ರೀತಿಯನ್ನು ಇನ್ನೊಮ್ಮೆ ನಿವೇದಿಸಲು ಹುಸೇನ್‌ ಅವಳ ಹಿಂದೆ ಹೊರಡುತ್ತಾನೆ. ಅವಳು ಕಾಲು ಹಾದಿಗಳನ್ನು ಹಾದು, ಗುಡ್ಡ ಹತ್ತಿ ಹೋಗುತ್ತಿದ್ದಾಳೆ. ಹುಸೇನ್‌ ಅವಳನ್ನು ಹಿಂಬಾಲಿಸುತ್ತಿದ್ದಾನೆ. ಗುಡ್ಡ ಹತ್ತಿ ಇಳಿಯುವ ತಾಹಿರಾ ಈಗ ಆಲಿವ್‌ ಮರಗಳ ನಡುವೆ ಹೋಗುತ್ತಿದ್ದಾಳೆ. ಒಂದು ಕ್ಷಣ ಗುಡ್ಡದ ಮೇಲೆ ನಿಲ್ಲುವ ಹುಸೇನ್‌ ಈಗ ಅವಳನ್ನು ಹಿಂಬಾಲಿಸತೊಡಗುತ್ತಾನೆ. ಗುಡ್ಡದ ಮೇಲೆ ನಿಶ್ಚಲವಾಗಿ ನಿಲ್ಲುವ ಕ್ಯಾಮರಾ ಇದನ್ನು ದಾಖಲಿಸತೊಡಗುತ್ತದೆ.

ಆತ ಆಲೀವ್‌ ಮರಗಳ ನಡುವೆ ಓಡಿಕೊಂಡು ಅವಳ ಹಿಂದೆ ಹೋಗುತ್ತಿದ್ದಾನೆ. ಅವಳು ಮುಂದಕ್ಕೆ ಮುಂದಕ್ಕೆ ನಡೆದುಕೊಂಡು ಹೋಗುತ್ತಿದ್ದಾಳೆ. ಈಗ ಅವಳು ಗದ್ದೆಯ ಬದುವಿನ ಮೇಲೆ ಹೋಗುತ್ತಿದ್ದಾಳೆ. ಅವನು ಹಿಂಬಾಲಿಸುತ್ತಿದ್ದಾನೆ. ಇದನ್ನು ಗುಡ್ಡದ ಮೇಲಿಂದಲೇ ಕ್ಯಾಮರಾ ದಾಖಲಿಸುತ್ತಿದೆ. ಹಸಿರು ಗದ್ದೆಯ ಬಯಲಿನಲ್ಲಿ ಈಗ ಎರಡು ಬಿಳಿ ಚುಕ್ಕಿಗಳು ಚಲಿಸುತ್ತಿರುವುದು ಕಾಣಿಸುತ್ತಿದೆ. ಈ ಚುಕ್ಕಿಗಳು ನಮ್ಮಿಂದ ದೂರವಾಗುತ್ತಾ, ಪರಸ್ಪರ ಹತ್ತಿರವಾಗುತ್ತಾ ಹೋಗುತ್ತಿವೆ. ಈಗ ಎರಡು ಚುಕ್ಕಿಗಳು ಒಂದೇ ಚುಕ್ಕಿಯಾಗಿದೆ. ಈ ಚುಕ್ಕಿ ಇನ್ನೂ ಚಿಕ್ಕದಾಗಿ ಹಸಿರಿನ ನಡುವೆ ಮಾಯವಾಗುತ್ತಿದ್ದರೆ ಕ್ಯಾಮರಾವಿನ್ನೂ ಗುಡ್ಡದ ಮೇಲಿಂದ ನಿಶ್ಚಲವಾಗಿ ಇದನ್ನು ದಾಖಲಿಸುತ್ತಿದೆ. ನೋಡನೋಡುತ್ತಿದ್ದಂತೆ ಪುನಃ ಬಿಳಿ ಚುಕ್ಕಿ ಮತ್ತೆ ಕಾಣತೊಡಗುತ್ತದೆ. ಅದು ಈಗ ದೊಡ್ಡದಾಗುತ್ತಾ ಹುಸೇನ್‌ನ ಆಕಾರ ಸ್ಪಷ್ಟವಾಗುತ್ತಿದೆ. ಆತ ಗದ್ದೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಕೊಂಡು ಬರುತ್ತಿದ್ದಾನೆ. ತಾಂತ್ರಿಕವಾಗಿ ತುಂಬ ಸರಳವಾಗಿರುವ, ಹಲವು ನಿಮಿಷಗಳ ಈ ಶಾಟ್‌ ಮುಗಿಯುತ್ತಲೇ ಮುಕ್ತಾಯದ ಟೈಟಲ್‌ಗಳು ಕಾಣಿಸತೊಡಗುತ್ತವೆ.

ಆತ ಅವಳಿಗೆ ತನ್ನ ಪ್ರೀತಿಯನ್ನು ನಿವೇದಿಸಿರಬಹುದೇ? ಗೊತ್ತಿಲ್ಲ. ಅವಳು ಪ್ರೀತಿಗೆ ಇಲ್ಲ ಎಂದಳೇ? ಗೊತ್ತಿಲ್ಲ. ಅವಳು ಪ್ರೀತಿಯನ್ನು ಒಪ್ಪಿಕೊಂಡಳೇ? ಗೊತ್ತಿಲ್ಲ. ಪ್ರೀತಿ ನಿಕ್ಕಿಯಾದ ಖುಷಿಯಲ್ಲಿ ಈಗ ತನ್ನ ಗೆಳೆಯನೇ ಆಗಿಬಿಟ್ಟಿರುವ ನಿರ್ದೇಶಕನಿಗೆ ಹೇಳಲು ಆತ ಸಂಭ್ರಮದಿಂದ ಓಡಿಬರುತ್ತಿರಬಹುದೇ? ಹೇಳುವುದು ಕಷ್ಟ. ಪ್ರೀತಿಯನ್ನು ಅವಳು ತಿರಸ್ಕರಿಸಿದ್ದನ್ನು ತಾಳಲಾರದೇ ಭಗ್ನಹೃದಯಿಯಾಗಿ, ಹತಾಶೆಯಿಂದ ಆತ ಓಡೋಡಿ ಬರುತ್ತಿರಬಹುದಾದ ಸಾಧ್ಯತೆಯೂ ಇದೆ. ಹೀಗೆ ಅಬ್ಬಾಸ್‌ ಕಿರೋಸ್ತಾಮಿಯ ಕೊನೆಯ ಶಾಟ್‌ ನೋಡುಗನ ಮನಸ್ಸಿನಲ್ಲಿ ಚಿತ್ರಮಂದಿರದಿಂದ ಹೊರಕ್ಕೆ ಬಂದ ಮೇಲೂ ಪ್ರದರ್ಶನ ಮುಂದುವರೆಯುವಂತೆ ನೋಡಿಕೊಳ್ಳುತ್ತದೆ!

ಇದೇ ರೀತಿ ಕಾಡುವ ಕೊನೆಯ ಶಾಟ್‌ಗಳು ಅನೇಕ ಚಿತ್ರಗಳಲ್ಲಿವೆ. ಡೆನಿಸ್‌ ಟೊನೊವಿಕ್‌ ನಿರ್ದೇಶನದ ಬೋಸ್ನಿಯಾ ಚಿತ್ರ `ನೋ ಮ್ಯಾನ್ಸ್‌ ಲ್ಯಾಂಡ್‌’ ನಿಮಗೆ ನೆನಪಿರಬಹುದು. ಅದು ಬೋಸ್ನಿಯಾ ಮತ್ತು ಸೆರ್ಬಿಯಾಗಳ ನಡುವಿನ ಯುದ್ಧದ ಕತೆ. ಎರಡು ದೇಶಗಳ ಗಡಿಯ ಜಾಗದಲ್ಲಿ ಮೂವರು ಸೈನಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಇಬ್ಬರು ಬೋಸ್ನಿಯಾದವರು. ಒಬ್ಬ ಸೆರ್ಬಿಯಾದವನು. ಬೋಸ್ನಿಯಾದ ಇಬ್ಬರು ಸೈನಿಕರು ಸ್ನೇಹಿತರು. ಅದರಲ್ಲಿ ಒಬ್ಬ ಗಾಯಗೊಂಡು ಮಲಗಿದ್ದಾನೆ. ಕಾರಣಾಂತರಗಳಿಂದಾಗಿ ಆತ ಒಂದು ಬೌನ್ಸಿಂಗ್‌ ಮೈನ್‌ (ಒತ್ತಡ ಇಲ್ಲವಾಗುತ್ತಲೇ ಬೌನ್ಸ್‌ ಆಗಿ ಸಿಡಿಯುವ ಸಿಡಿಮದ್ದು) ಮೇಲೆ ಮಲಗಿಬಿಟ್ಟಿದ್ದಾನೆ. ಆತ ಎದ್ದುಬಿಟ್ಟರೆ ಅದರ ಮೇಲಿದ್ದ ಒತ್ತಡ ಇಲ್ಲವಾಗಿ ಅದು ಸಿಡಿಯುತ್ತದೆ. ಹಾಗಾಗಿ ಆತ ಮಲಗಿಕೊಂಡೇ ಇರಬೇಕು.

ಮಲಗಿಕೊಂಡೇ ಇರುವುದು ಎಷ್ಟೆಲ್ಲ ಕಷ್ಟ? ಆತನ ತಲೆಯಲ್ಲಿ ಏನೇನೋ ಆಲೋಚನೆಗಳು ಬರುತ್ತಿವೆ. ಆತನಿಗೆ ಸಿಗರೇಟ್‌ ಸೇದೋಣ ಅನಿಸುತ್ತಿದೆ. ಎದ್ದು ವಾಕಿಂಗ್‌ಗೆ ಹೋಗುವ ಆಸೆಯಾಗುತ್ತಿದೆ. ನಡುವೆ ಆತ ಟಾಯ್ಲೆಟ್‌ಗೆ ಹೋಗಬೇಕು. ಆದರೆ ಆತ ಹೋಗುವಂತಿಲ್ಲ! `ನಾನು ನಿನ್ನ ಜೊತೆಗೇ ವಾಪಸ್‌ ಹೋಗುವುದು’ ಎಂದು ಆತನ ಸ್ನೇಹಿತ ಕುಳಿತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ವಿಶ್ವಸಂಸ್ಥೆಯ ಅಧಿಕಾರಿಗಳು ಬರುತ್ತಾರೆ. ಪರಿಸ್ಥಿತಿ ಗೊತ್ತಾಗಿ ಬಾಂಬ್‌ ನಿಷ್ಕ್ರಿಯ ದಳ ಬರುತ್ತದೆ. ಮಾಧ್ಯಮಗಳು ಬರುತ್ತಾರೆ.

ಬಾಂಬ್‌ ನಿಷ್ಕ್ರಿಯ ದಳದ ಸದಸ್ಯ ಕೆಲಸ ಮಾಡುವಾಗ ಅಲ್ಲಿ ಯಾರೂ ಇರಬಾರದು ಎಂದು ಹೇಳುತ್ತಾನೆ. ಆದರೆ ಮಲಗಿರುವ ಸೈನಿಕನ ಸ್ನೇಹಿತ ಅಲ್ಲಿಂದ ಹೋಗಲು ಒಪ್ಪುವುದಿಲ್ಲ. ಆತನನ್ನು ಬಲವಂತಾಗಿ ಅಲ್ಲಿಂದ ಹೊರಕ್ಕೆ ಕಳುಹಿಸುವಾಗ ಮಾರಾಮಾರಿಯಾಗಿ ಗುಂಡೇಟು ಬಿದ್ದು ಆತ ಸತ್ತೇ ಹೋಗುತ್ತಾನೆ. ಈ ಕಡೆ ಸಿಡಿಮದ್ದಿನ ಮೇಲೆ ಮಲಗಿದವನು ಮಲಗಿಯೇ ಇದ್ದಾನೆ. ಈ ನಡುವೆ ಬಾಂಬ್‌ ನಿಷ್ಕ್ರಿಯ ದಳದ ಸದಸ್ಯನಿಗೆ ಆತ ಬೌನ್ಸಿಂಗ್‌ ಮೈನ್‌ ಮೇಲೆ ಮಲಗಿದ್ದಾನೆ ಎನ್ನುವುದು ಗೊತ್ತಾಗುತ್ತದೆ. ಆತ ಜಗತ್ತಿನಲ್ಲಿ ಯಾರಿದಂದಲೂ ಆತನನ್ನು ಬದುಕಿಸುವುದು ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲುತ್ತಾನೆ. ಆತ ಆಗಲೇ ಸತ್ತು ಹೋದಂತೆ ಎಂದು ಘೋಷಿಸುತ್ತಾನೆ.

ಈಗ ಒಬ್ಬೊಬ್ಬರಾಗಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಮಾಧ್ಯಮದವರು ಹೋಗುತ್ತಾರೆ. ಬಾಂಬ್‌ ನಿಷ್ಕ್ರಿಯ ದಳದವರು ನಿರ್ಗಮಿಸುತ್ತಾರೆ. ವಿಶ್ವಸಂಸ್ಥೆಯ ಅಧಿಕಾರಿಗಳು ಹೊರಟು ಹೋಗುತ್ತಾರೆ. ಎದ್ದರೆ ಸಿಡಿದುಬಿಡುವ ಸಿಡಿಮದ್ದಿನ ಮೇಲೆ ಮಲಗಿರುವ ಮನುಷ್ಯನನ್ನು ಬಿಟ್ಟು ಎಲ್ಲರೂ ಹೊರಟು ಹೋಗುವ ಹೊತ್ತಿಗೆ ಆ ಕಡೆ ಸೂರ್ಯ ಮುಳುಗುತ್ತಿರುತ್ತಾನೆ. ಅಷ್ಟೊತ್ತಿಗೆ ಅರೇಬಿಯಾದ ಸಂಗೀತವನ್ನು ಹೋಲುವ ಹಾಡೊಂದು ಹಸ್ಕಿಯಾದ ದನಿಯಲ್ಲಿ ಶುರುವಾಗುತ್ತದೆ. ಮಲಗಿರುವ ಆತನಿಂದ ಕ್ಯಾಮರಾ ಮೇಲಕ್ಕೆ, ಮೇಲಕ್ಕೆ ಹೋಗುತ್ತಾ ಹೋಗುತ್ತಾ ಚಿತ್ರ ಮುಗಿದಿದ್ದರ ಸೂಚನೆಯಾಗಿ ಟೈಟಲ್‌ಗಳು ಕಾಣಿಸತೊಡಗುತ್ತವೆ.

ಆತ ಇನ್ನೂ ಮಲಗಿದ್ದಾನೆಯೇ? ಎದ್ದಾಗ ಬಾಂಬ್‌ ಸ್ಫೋಟ ಆಗಿರಬಹುದೇ? ಸ್ಫೋಟ ಆಗದೇ ಆತ ಬದುಕಿ ಬರಬಹುದೇ? ಸ್ಫೋಟ ಆದರೂ ಆತ ಗಾಯಗೊಂಡು ಬದುಕಿರಬಹುದೇ? ಅಥವಾ ಮಲಗಿದಲ್ಲೇ ಹೆದರಿ ಆತ ಸತ್ತು ಹೋದನೇ? ಇದೆಲ್ಲವೂ ನೋಡುಗನ ಮನಸ್ಸಿನಲ್ಲಿ ಮುಂದುವರೆಯುವ ಸಿನಿಮಾಗಳು.

ಪರಿಣಾಮಕಾರಿಯಾದ ಕೊನೆಯ ಶಾಟ್‌ ಒಂದು ನೋಡುಗನ ಮನಸ್ಸಿನಲ್ಲಿ ತೆರೆದುಕೊಳ್ಳುವ ಸಿನಿಮಾಗಳ ಮೊದಲ ಶಾಟ್‌ ಆಗುತ್ತದೆ. ಪ್ರೇಮ ಪತ್ರದ ಕೊನೆಯಲ್ಲಿ ಬರೆದ ಪ್ರೀತಿಯ ಸಾಲಿನಂತೆ ನಿರ್ದೇಶಕ ಅದನ್ನು ಎಚ್ಚರಿಕೆ, ಪ್ರೀತಿ, ಆರ್ದ್ರತೆಗಳೊಂದಿಗೆ ಬರೆದಿರುತ್ತಾನೆ. ಹೀಗಾಗಿಯೇ ಇಂಥ ಚಿತ್ರಗಳ ಕೊನೆಯ ಶಾಟ್‌ಗಳು `ಇಂತಿ ನಿನ್ನ ಪ್ರೀತಿಯ ನಿರ್ದೇಶಕ’ ಎಂದು ಧ್ವನಿಸುತ್ತಿರುವಂಥ ವಿಚಿತ್ರ ಅನುಭವ ಸೃಷ್ಟಿಸುತ್ತವೆ.

One Comment

  1. praveenar
    Posted May 9, 2008 at 10:35 am | Permalink

    comment umbha chenngittu. aa movie galannu naanu nodutine.


Post a Comment

Your email is never published nor shared. Required fields are marked *
*
*