ಮಳೆಗೆ ಹೊರಗೆ

ಇದು ವಿಕಾಸ ನೇಗಿಲೋಣಿ ಬರೆದ ಕವಿತೆ. ಇತ್ತೀಚೆಗೆ `ಮುಂಗಾರು ಮಳೆ’ ಚಿತ್ರ ಚೆನ್ನಾಗಿ ಓಡುತ್ತಿರುವುದರಿಂದ, ವಿಕಾಸ್‌ ಸಿನಿಮಾ ಪತ್ರಕರ್ತರಾಗಿರುವುದರಿಂದ, ಈ ಕವಿತೆ ಅದರ ದುಷ್ಪರಿಣಾಮ ಇರಬಹುದು ಎಂದು ಸಹಜವಾಗಿಯೇ ಅನಿಸುತ್ತದೆ. ಆದರೆ, ಅಂಥದ್ದೇನೂ ಇಲ್ಲವೆಂದೂ, ಇದು ಇನ್ಯಾವುದರದೋ ದುಷ್ಪರಿಣಾಮ ಎಂದು ಸ್ವತಃ ವಿಕಾಸ್‌ ಒಪ್ಪಿಕೊಂಡಿದ್ದಾರೆ! ಬೆಂಗಳೂರು ಮಳೆಯನ್ನು ನೋಡುತ್ತ ಮಲೆನಾಡಿನ ಮಳೆಯನ್ನು ನೆನಪಿಸಿಕೊಳ್ಳುತ್ತ ಇದನ್ನು ಬರೆದಂತಿದೆ. ಹೇಗೂ ಮಳೆ ಸುರಿಯುತ್ತಿದೆ. ಬೆಚ್ಚಗೆ ಓದಿಕೊಳ್ಳಿ.

 

ಒಂದು ಸಂಜೆ

ಹುಯಿಲೆಬ್ಬಿಸಿ ಹುಯದ

ಹುಲುಸು ಮಳೆಯ ಕೆಳಗೆ

ಸಾರ್ವತ್ರಿಕ ಅಭಿಷೇಕ,

ತೊರೆಗೆ ತೇಲಿ ಬಿಟ್ಟ

ನೆನಪುಗಳ ಕಾಗದದ ದೋಣಿ ಹಿಂದೆ

ಮನಸುಗಳ ಸರತಿಯ ಸಾಲು

ಸಹಸ್ರನಾಮ ಪಠಿಸು,

ಬಾಗು,

ಇಪ್ಪತ್ತೊಂದು ನಮಸ್ಕಾರಗಳ

ಹೇಳು.

 

ಮೋರಿಗೆ

ಮೊಗೆದಷ್ಟೂ ಮುಗಿಯುವುದಿಲ್ಲ

ಮಳೆ,

ಕಾಲು ಹಾದಿಯೋ

ಹರಿವ ಹೊಳೆ

ಓಣಿ ಓಣಿಯ ಮೈಗೆ ಈಗ

ಚುಮು ಚುಮು ಹನಿ ಮುತ್ತು.

ಶುಭ ಮುಹೂರ್ತ

ನೀರಿಗೆ-ನೆಲಕೆ

ಕವಿದ ಮೋಡದ ಮುಂದೆ

ನಿಶ್ಚಿತಾರ್ಥ!

 

ನಡುಗಡ್ಡೆಯ ಮೈ

ನೆರೆಗೆ ನೆನೆದು

ಮೈ ನೆರೆದ ಹುಡುಗಿಯಂತೆ

ಏನನ್ನಾದರೂ ಬೆಚ್ಚಗೆ

ಹೊದೆವ ನಡುಕ

ನೆಗೆ ನೆಗೆದು ಬರುವ ತುಂಬು ಹೊಳೆಯ

ನೀರಿಗೋ

ಮತ್ತೂ ಮುತ್ತಿಕ್ಕುವ ತವಕ.

ಊರೂರಿನ ಅವೆಷ್ಟೋ ನಾಲೆಯ

ಮೇಲೆ

ಕ್ಷಣಕ್ಕೆ ಒಣಗಲು

ಕುಳಿತಿದ್ದವಲ್ಲಿ ಅರಿವೆಗಳು.

ಒದ್ದೆಯುಂಡು

ವಾತಾವರಣದ ಒಡೆತನ

ಸಾಧಿಸುಷ್ಟರಲ್ಲೇ ದಪದಪ

ಸುರಿದ ಮಳೆಗೆ

ತಗುಲಿ ಕುಳಿತ ವಸ್ತ್ರಗಳಿಗೀಗ

ಪಚ ಪಚ ಆಡುವ ಮಕ್ಕಳಂತೆ

ಕಳ್ಳ ಖುಷಿ.

 

ಶಾಲೆಯ ಗಂಟೆ ಬಾರಿಸಿತು

ಮೈಗಂಟಿದ ಅಂಗಿ

ಒದ್ದೆ ತಲೆಯ ಅನಾಮಿಕ ಭಂಗಿಗಳ

ಕಂಡರೆ

ಕೊಡೆಯ ಕೆಳಗಿನ ಗೆಳೆಯರಿಗೆ,

ಗರ್ಭ ಗುಡಿಯ ದೇವರಿಗೆ

ನಿರಾಶೆ,

ಬೀಗ ಹಾಕಿರದಿದ್ದರೆ

ದೇವ

ಮಳೆಗೆ ಹೊರಗೆ!

One Comment

  1. arohana
    Posted August 17, 2007 at 3:53 pm | Permalink

    tumba chennagide nimma kavite. male haniya tunturu maimele chumukisidantayitu.

One Trackback/Pingback

  1. [...] Badami-1, 2, 3]. Parameshwar Gundkal reproduces a poem by Vikas Negiloni, a cinema journalist. A very nice rain poem. Sushruta is irritated with his (self-proclaimed) mediocre blog posts and decides to throw away his [...]

Post a Comment

Your email is never published nor shared. Required fields are marked *
*
*