ಮಲ್ಲೇಶ್ವರಂ ಸುಂದರಿಯರು

pg.jpgದೊಂದು ಪುಟ್ಟ ಕತೆ. ಇರ್ವಿನ್‌ ಶಾರ ಕತೆಯೊಂದನ್ನು ಓದುತ್ತಿರುವಾಗ ಈ ಕತೆ ರೂಪುಗೊಂಡಿತು. ಇದು ಆ ಕತೆಯ ರೂಪಾಂತರ ಎನ್ನಬಹುದು. ಅಥವಾ ಆ ಕತೆಗೊಂದು ಪುಟ್ಟ ಪ್ರತಿಕ್ರಿಯೆ ಎನ್ನಬಹುದು. ಜಗಳವಾಡುತ್ತಲೇ ಸುಖವಾಗಿರುವ ಬೆಂಗಳೂರಿನ ಸಮಸ್ತ ಗಂಡ ಹೆಂಡತಿಯರನ್ನು ನೆನಪು ಮಾಡಿಕೊಳ್ಳುತ್ತಾ, ಮಲ್ಲೇಶ್ವರಂ ಸುಂದರಿಯರ ಕುರಿತು ಅಸೂಯೆ ಪಡುತ್ತಾ ಇದನ್ನು ಓದಿಕೊಳ್ಳಬಹುದು.

ರಾಜೇಶ್ವರಿ ನಗರದ ಮೂರನೇ ಕ್ರಾಸಿನಲ್ಲಿರುವ ಪುಟ್ಟ ಮನೆಯಲ್ಲಿ ಪಾರ್ವತಿ ಮತ್ತು ಪರಮೇಶ್ವರ ಯಾವುದೇ ಗಂಡಹೆಂಡತಿಯರಂತೆ ಜಗಳ ಮಾಡಿಕೊಳ್ಳುತ್ತ ಸುಖವಾಗಿದ್ದರು!

ಟೀವಿ ವಾಲ್ಯೂಮ್‌ ಅಷ್ಟು ಜಾಸ್ತಿ ಯಾಕೆ ಎಂದು ಅವಳು ದಿನಾಲೂ ಗಲಾಟೆ ಮಾಡುತ್ತಿದ್ದಳು. ಇವನು ದಿನಾಲೂ `ಸಾರಿ’ ಹೇಳುತ್ತಾ ವಾಲ್ಯೂಮ್‌ ಜಾಸ್ತಿ ಮಾಡುತ್ತಿದ್ದ. ಒದ್ದೆ ಟವೆಲನ್ನು ಹಾಸಿಗೆ ಮೇಲೆ ಯಾಕೆ ಇಡುತ್ತಿ ಎಂದು ಅವಳು ಸಿಡಿಮಿಡಿಗುಟ್ಟುತ್ತಿದ್ದಳು. ಇವನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರತಿದಿನ ರಾತ್ರಿ ಯಾಕೆ ಬ್ರಶ್‌ ಮಾಡಬೇಕು, ಚಪ್ಪಲಿಯನ್ನು ಶೂ ಸ್ಟ್ಯಾಂಡಿನಲ್ಲಿಯೇ ಯಾಕೆ ಇಡಬೇಕು, ಕಮೋಡ್‌ನ ಮುಚ್ಚಳವನ್ನು ಯಾಕೆ ಯಾವಾಗಲೂ ಹಾಕಿಡಬೇಕು, ಹಳೆ ಪೇಪರ್‌ಗಳನ್ನು ಯಾಕೆ ಮಂಚದ ಕೆಳಗೆ ಅಂದವಾಗಿ ಜೋಡಿಸಿಡಬೇಕು ಎಂದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಇವನಿಗೆ ಇದೆಲ್ಲಾ ಯಾಕೆ ಅರ್ಥ ಆಗುತ್ತಿಲ್ಲ ಎಂದು ಅವಳಿಗೆ ಅರ್ಥವಾಗುತ್ತಿರಲಿಲ್ಲ!

ಅವರು ಯಾವಾಗಲೂ ಜಗಳವಾಡುತ್ತಲೇ ಬದುಕುತ್ತಿದ್ದರು ಎಂದು ಅರ್ಥವೇನಲ್ಲ. ಸಾಮಾನ್ಯವಾಗಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಅವರಿಗೆ ಏನಾದರೂ ಒಂದು ವಿಷಯಕ್ಕೆ ಮಾತಿಗೆ ಮಾತು ಬೆಳೆಯುತ್ತಿತ್ತು. ರವಿವಾರದ ದಿನವೂ ಓವರ್‌ ಡ್ಯೂಟಿ ಮಾಡುವ ಕಾರ್ಮಿಕರಂತೆ ಕಿತ್ತಾಡುತ್ತಿದ್ದ ಅವರು ರಜಾದಿನದ ಒಂದು ಸಂಜೆ ಮಲ್ಲೇಶ್ವರಂ ಏ್ತ್‌ ಕ್ರಾಸಿಗೆ ಹೋಗಿ ಶಾಪಿಂಗ್‌ ಮಾಡಲು ತೀರ್ಮಾನಿಸಿದರು. ಆ ದಿನ ಆಹ್ಲಾದಕರವಾಗಿತ್ತು. ಹಿಂದಿನ ದಿನವಷ್ಟೇ ಮಳೆ ಸುರಿದು ಆಕಾಶ ಶುಭ್ರವಾಗಿತ್ತು. ಬಿಸಿಲೂ ಹಿತವಾಗಿತ್ತು. ರಜಾದಿನವಾಗಿದ್ದರಿಂದ ಟ್ರಾಫಿಕ್‌ ಇರಲಿಲ್ಲ. ಆಟೋ ದುಡ್ಡು ತುಂಬಾ ಆಯಿತಲ್ಲ ಎಂದುಕೊಳ್ಳುತ್ತ ಸಂಪಿಗೆ ಟಾಕೀಸ್‌ ಬಳಿಯಲ್ಲಿಯೇ ಇಳಿದುಕೊಂಡು ಅಲ್ಲಿಂದ ನಡೆದುಕೊಂಡೇ ಹೋಗಲು ಇಬ್ಬರೂ ತೀರ್ಮಾನಿಸಿದರು. `ದಿನಕ್ಕೆ ಸ್ವಲ್ಪವಾದರೂ ವಾಕಿಂಗ್‌ ಮಾಡಬೇಕು’ ಎಂದು ಸಮಾಧಾನ ಹೇಳಿಕೊಂಡರು. ಹಾಗೆ ನಡೆದುಕೊಂಡು ಹೋಗುವಾಗ ಜಗತ್ತಿನ ಅತ್ಯಂತ ಸಂಕಷ್ಟಮಯವಾದ pg.jpgಸಂತೋಷ ಅವನಿಗೆ ಎದುರಾಗತೊಡಗಿತು. ಬೆಂಗಳೂರಿನಲ್ಲಿರುವ ಸಮಸ್ತ ಸುಂದರಿಯರೆಲ್ಲ ಏ್ತ್‌ ಕ್ರಾಸಿನಿಂದ ಸಂಪಿಗೆ ಟಾಕೀಸ್‌ ಕಡೆ ಮೆರವಣಿಗೆ ಹೊರಟಂತಿದ್ದರು. ಅವನು ಗೊಂದಲಗೊಂಡಿದ್ದ. ಏಕೆಂದರೆ ಪಕ್ಕದಲ್ಲೇ ಹೆಂಡತಿಯಿದ್ದಳು! ಇಂಥದ್ದೊಂದು ಸಂಕಟದ ನಡುವೆಯೇ ಸಂತೋಷ ಅನುಭವಿಸುತ್ತಲೋ ಇಂಥ ಸಂತೋಷದ ನಡುವೆಯೇ ಸಂಕಟ ಅನುಭವಿಸುತ್ತಲೋ ನಡೆದುಕೊಂಡು ಹೋಗುತ್ತಿರುವಾಗ ಆತ ಸಿಕ್ಕಿಬಿದ್ದ!ಹುಡುಗಿಯೊಬ್ಬಳನ್ನು ನೋಡುವಾಗ ಅವಳು ಅವನನ್ನು ಹಿಡಿದುಬಿಟ್ಟಳು.

`ನೀವು ಅವಳನ್ನು ನೋಡುತ್ತಿದ್ದಿರಿ!’

ಹಿಡಿದುಬಿಟ್ಟೆ ಎನ್ನುವಂತೆ ಅವಳು ಹೇಳಿದಳು.

`ಹೇ..ಇಲ್ಲ ಇಲ್ಲ!’

ಇವನು ಸಮಜಾಯಿಷಿ ಕೊಟ್ಟ.

`ಇಲ್ಲ, ನೋಡುತ್ತಿದ್ದಿರಿ. ನಾನು ನೋಡಿದೆ’

`ಹೌದಾ?’

`ಅವಳು ನಡೆದುಕೊಂಡು ಹೋಗುತ್ತಿದ್ದರೆ ನಿಮ್ಮ ಕುತ್ತಿಗೆ ತಿರುಗುತ್ತಿತ್ತು’

`ಹೌದಾ?’

`ನಾನು ನಿಲ್ಲಿಸದಿದ್ದರೆ ನೀವು ಕುತ್ತಿಗೆ ಮೂಳೆ ಮುರಿದುಕೊಳ್ಳುತ್ತಿದ್ದಿರಿ’

ಅವಳು ನಗುತ್ತ ಹೇಳಿದಳು.

`ಅವಳು ನಿಜವಾಗಿಯೂ ಅಷ್ಟು ಚೆಂದವಿದ್ದಳು’

ಇವನೂ ಸತ್ಯ ಒಪ್ಪಿಕೊಳ್ಳುತ್ತ ಹೇಳಿದ.

`ನೀವು ಹೀಗೆ ನಡೆದುಕೊಂಡು ಹೋಗುವಾಗಲೆಲ್ಲ ಹುಡುಗಿಯರನ್ನು ನೋಡುತ್ತಿರುತ್ತೀರಿ’

ಅವಳು ಹೇಳಿದಳು.

`ಇಲ್ಲ ಇಲ್ಲ’

ಇವನು ಹೇಳಿದ.

`ನಾನು ತುಂಬಾ ದಿನಗಳಿಂದ ಗಮನಿಸುತ್ತಿದ್ದೇನೆ’

ಅವಳು ಬಿಡಲಿಲ್ಲ. ಹೀಗೆ ಅವಳು ವಾದ ಮಾಡುತ್ತ ಹೋದಳು. ಅವನು ಸೋಲುತ್ತ ಹೋದ. ಇದು ಏ್ತ್‌ ಕ್ರಾಸಿನ ತುದಿಯ ತನಕ ನಡೆಯಿತು. ಕಾಫಿ ಡೇಯ ಕಾಫಿಯ ಎದುರು ಇದೇ ವಾದ ಮುಂದುವರೆದು ಹೆಚ್ಚು ಬಿಸಿಯಾಯಿತು. ಈ ಬಿಸಿಯಲ್ಲಿ ಆತ ಹುಡುಗಿಯರೆಡೆಗೆ ಕಣ್ಣು ಹಾಯಿಸುವುದನ್ನು ಒಪ್ಪಿಕೊಂಡ.

`ಸ್ಕರ್ಟ್‌ನಲ್ಲಿ ಹುಡುಗಿಯರು ಚೆಂದ ಕಾಣುತ್ತಾರೆ. ಜೀನ್ಸ್‌ನಲ್ಲಿ ಇರುವವರು ಇನ್ನೊಂಥರಾ ಚೆಂದ. ಚೂಡಿದಾರ್‌ ಹುಡುಗಿಯರ ಚೆಂದವೇ ಬೇರೆ. ಸ್ಲೀವ್‌ಲೆಸ್‌ ಹುಡುಗಿಯರು ಮತ್ತೊಂದು ಥರ…’ ಈತ ಹೇಳುತ್ತ ಹೋದ. ಅವಳು ಇನ್ನಷ್ಟು ಬಿಸಿಯಾಗುತ್ತ ಹೋದಳು.

`ನೀವು ಹುಡುಗಿಯರನ್ನು ನೋಡುವುದು ಹೇಗಿರುತ್ತದೆ ಗೊತ್ತಾ?’

ಅವಳು ಕೇಳಿದಳು.

`ಹೇಗೆ?’

ಅವನು ಕೇಳಿದ.

`ನೀವು ಮೊದಲ ಸಲ ನನ್ನನ್ನು ಕಾಫಿ ಬಾರ್‌ನಲ್ಲಿ ಕುಳಿತು ನೋಡಿದಿರಲ್ಲ. ಹಾಗಿರುತ್ತದೆ’

ಅವಳು ಹೇಳಿಯೇ ಬಿಟ್ಟಳು. ಇಲ್ಲ ಎಂದು ಹೇಳುವುದು ಅವನಿಗೆ ಸಾಧ್ಯವೇ ಇರಲಿಲ್ಲ.

`ಚೆಂದ ಇರುವ ಹುಡುಗಿಯರನ್ನು ನೋಡುವುದರಲ್ಲಿ ತಪ್ಪೇನಿದೆ?’

ಅವನು ಕೇಳಿದ.

`ಆದರೆ ಚೆನ್ನಾಗಿದ್ದಾರೆಂದು ನಾನು ಹುಡುಗರನ್ನು ನೋಡುವುದಿಲ್ಲ’

ಅವಳು ಸಿಡುಕಿದಳು. ಅವನು ಮಾತಾಡಲಿಲ್ಲ.

`ನಾನೂ ಜೀನ್ಸ್‌ ಹಾಕುತ್ತೇನೆ. ಸ್ಲೀವ್‌ಲೆಸ್‌ ಹಾಕುತ್ತೇನೆ. ಸ್ಕರ್ಟ್‌ ಹಾಕುತ್ತೇನೆ. ಆದರೆ ನೀವು ಇಷ್ಟು ಪ್ರೀತಿಯಿಂದ ನೋಡಿದ್ದೇ ಇಲ್ಲ’

ಅವಳು ಹಟ ಮಾಡುವವಳಂತೆ ಹೇಳಿದಳು. ಅವನಿಗೆ ಮಾತಾಡುವುದು ಸಾಧ್ಯವಾಗಲಿಲ್ಲ.

`ಹೇಳಿ. ನೀವು ನನ್ನನ್ನು ಅಷ್ಟು ಪ್ರೀತಿಯಿಂದ ನೋಡಿದ್ದೇ ಇಲ್ಲ ಅಲ್ವಾ?’

ಅವಳು ಪುನಃ ಕೇಳಿದಳು. `ಇಲ್ಲ, ನೋಡಿದ್ದೇನೆ’ ಎಂದು ಅವನು ಹೇಳಲಿ ಎನ್ನುವುದು ಅವಳ ಆಸೆಯಾಗಿತ್ತು. ಆದರೆ ಅವನಿಗೆ ಏನಾಗಿತ್ತೋ. ಅವನು ಹೇಳಲಿಲ್ಲ.

`ನಾನು ಚೆನ್ನಾಗಿಲ್ಲವಾ?’

ಅವಳು ಕೇಳಿದಳು. `ಇಲ್ಲ, ನೀನು ತುಂಬಾ ಸುಂದರವಾಗಿ ಕಾಣುತ್ತಿ’ ಎಂದು ಅವನು ಹೇಳುತ್ತಾನೆ ಎಂದುಕೊಂಡೇ ಅವಳು ಕೇಳಿದ್ದಳು. ಹಾಗೆ ಅವನು ಅನೇಕ ಸಲ ಸುಳ್ಳು ಹೇಳಿದ್ದ. ಆದರೆ ಈ ದಿನ ಅದ್ಯಾಕೋ ಅವನ ನಾಲಿಗೆಯಿಂದ ಮಾತುಗಳೇ ಹೊರಡಲಿಲ್ಲ.

ಅವಳ ಮಾತು ಹೆಚ್ಚಾಗುತ್ತಾ ಹೋಯಿತು. ಇವನು ಮಾತಾಡದೇ ಅದನ್ನು ಸಮ್ಮತಿಸುತ್ತಾ ಹೋದ. ಆ ದಿನದ ಸಂಜೆಗೆ ಅದೇನು ಶಕ್ತಿಯಿತ್ತೋ? ಎರಡು ಕಾಫಿ, ಎರಡು ಸ್ಯಾಂಡ್‌ವಿಚ್‌ಗಳನ್ನು ತಿಂದುಮುಗಿಸುತ್ತ ಆಡಿದ ಮಾತುಗಳು ಅವರ ಬದುಕನ್ನೇ ಸ್ಯಾಂಡ್‌ವಿಚ್‌ ಮಾಡಿ ಬಿಸಾಕಿದವು.

ಅವನು ಮತ್ತು ಅವಳು ಬೇರೆ ಬೇರೆ ಆಗಲು ತೀರ್ಮಾನಿಸಿದರು. ಸಂಪಿಗೆ ಟಾಕೀಸ್‌ನಿಂದ ಏ್ತ್‌ಕ್ರಾಸಿನ ತನಕದ ಸಣ್ಣ ವಾಕ್‌ ಅವರನ್ನು ವಿಚ್ಛೇದನಕ್ಕೆ ತಂದು ನಿಲ್ಲಿಸಿತ್ತು.

`ಸಾಕು ಅನಿಸ್ತಿದೆ. ಇನ್ನು ನನ್ನಿಂದ ಸಾಧ್ಯವಿಲ್ಲ’

ಅವನು ಮಾತಾಡಲಿಲ್ಲ.

`ನೀವು ಹುಡುಗಿಯರನ್ನು ನೋಡುತ್ತಾ ಸಂಪಿಗೆ ಟಾಕೀಸಿಂದ ಏ್ತ್‌ ಕ್ರಾಸಿಗೆ ನಡೆಯುತ್ತಾ ಹಾಯಾಗಿರಿ’

ಅವಳು ವ್ಯಂಗ್ಯವಾಗಿ ಹೇಳಿದಳು. ಪುನಃ ಅವನು ಮಾತಾಡಲಿಲ್ಲ.

`ಲಾಯರ್‌ ಆಫೀಸಿನಲ್ಲಿ ಭೇಟಿಯಾಗೋಣ. ನಾನು ಹೊರಟೆ’

ಅವಳು ಖಚಿತವಾದ ದನಿಯಲ್ಲಿ ಹೇಳಿ ಹೊರಟಳು. ಕಾಫಿ ಡೇಯ ಸ್ಟೂಲಿನ ಮೇಲೆ ಕುಳಿತೇ ಇದ್ದ ಆತನಿಗೆ ಯಾವುದೋ ಭಾರವೊಂದು ಇಳಿದು ಹೋದಂತೆ ಅನಿಸಿ ಯಾಕೋ ನಿರಾಳವಾಯಿತು. ಆ ಕ್ಷಣದಲ್ಲಿಯೇ ಆತ ವಿಲಕ್ಷಣವಾದ ಸಂಭ್ರಮವನ್ನು ಅನುಭವಿಸುತ್ತಾ ಎದ್ದುನಿಂತ.

ಅಷ್ಟರಲ್ಲಿ ಅಲ್ಲಿಂದ ಎದ್ದ ಅವಳು ಒಂದೊಂದೇ ಮೆಟ್ಟಿಲುಗಳನ್ನು ಇಳಿಯುತ್ತಾ ಕೆಳಕ್ಕೆ ಇಳಿದು ಹೋಗುತ್ತಿದ್ದಳು. ನೀಲಿ ಜೀನ್ಸ್‌ ಮತ್ತು ಬೆಳ್ಳಗಿನ ಟೀ ಶರ್ಟ್‌ನಲ್ಲಿದ್ದ ಅವಳನ್ನು ನೋಡುತ್ತಾ ಅವಳು ಹೋದ ಕಡೆ ಕುತ್ತಿಗೆ ತಿರುಗಿಸುತ್ತಾ ತಿರುಗಿಸುತ್ತಾ ತಿರುಗಿಸುತ್ತಾ ಅವನು ತನ್ನಷ್ಟಕ್ಕೇ ಹೇಳಿಕೊಂಡ.

`ಆಹಾ, ಎಷ್ಟು ಸುಂದರ ಹುಡುಗಿ! ಒಳ್ಳೆ ಪಾರಿವಾಳದ ಥರಾ ಕಾಣಿಸ್ತಿದಾಳೆ!’

ಅವನು ಹೀಗೆ ಹೇಳಿಕೊಳ್ಳುವ ಹೊತ್ತಿಗೆ ಏ್ತ್‌ ಕ್ರಾಸಿನ ಕಟ್ಟಡವೊಂದರಲ್ಲಿದ್ದ ಪಾರಿವಾಳಗಳೆಲ್ಲ ಸಂಭ್ರಮದಿಂದ ಸಂಪಿಗೆ ಟಾಕೀಸ್‌ ಕಡೆ ಹಾರತೊಡಗಿದವು.

15 Comments

  1. Posted August 3, 2007 at 10:59 am | Permalink

    ಆಗಸ್ಟ್ 15 ಹತ್ರ ಬರ್ತಿದ್ದಂಗೇ ಸ್ವಾತಂತ್ರ್ಯದ ಹೊಸಾ ಕಥೆ… ಚೆನ್ನಾಗಿದೆ :)

  2. Gundkal
    Posted August 3, 2007 at 2:05 pm | Permalink

    Thank you Shree!
    Thanks for the comment.

  3. Posted August 4, 2007 at 4:40 am | Permalink

    ಸೂಪರ್ ಕತೆ ಪರಮೇಶ್ವರರೇ! ಮಲ್ಲೇಶ್ವರಂ ಸುಂದರಿಯರೆಲ್ಲಾ ಕಣ್ಣೆದುರು ಹಾದುಹೋದರು ಒಮ್ಮೆಲೇ. ಅಂದಹಾಗೇ ಅದು ನಮ್ಮ ಏರಿಯಾ, ನೀವು ಕಣ್ಣು ಹಾಕೀರಿ ಜೋಕೇ! :P

  4. Posted August 4, 2007 at 5:43 am | Permalink

    ಇರುವುದೆಲ್ಲವ ಬಿಟ್ಟು.. ಇರದದರೆಡೆಗೆ ತುಡಿವುದೆ ಜೀವನ…
    ಕಥೆ ಜೆನ್ನಾಗಿದೆ…. :-)

  5. Gundkal
    Posted August 4, 2007 at 8:11 am | Permalink

    Abhaya,
    Thanks for the feedback.

  6. Sundara
    Posted August 5, 2007 at 2:56 pm | Permalink

    Katheyaagiddakke avalu ashtu sulabhavaagi avanannu bittu hodalu. Ee bhaagya eshtu janarigide?

  7. Tina
    Posted August 6, 2007 at 6:19 am | Permalink

    ಪರಮೇಶ್ವರ ಅವರೆ,

    ಬಹಳ ಚೆನ್ನಾಗಿ ಓದಿಸಿಕೊಂಡು ಹೋದವು - ಈ ಕಥೆ ಹಾಗೂ ಈ ಬ್ಲಾಗ್ ಎರಡೂನೂ!! ವಿಕಾಸ ನೇಗಿಲೋಣಿಯವರ ಕವನಗಳು ಖುಶಿ ಕೊಟ್ಟವು. ಈ ಕಥೆ ಓದುವಾಗ ಬಹಳ ಲೈಟ್ ಅನ್ನಿಸಿದ್ರೂ ಆಮೇಲೆ ಯಾಕೊ ಕಾಡತೊಡಗಿತು. ಸುಂದರ ಅವರಿಗೆ ಸುಲಭವಾಗಿ ಹೆಂಡತಿ ಗಂಡನನ್ನು ಬಿಡುವಂತೆ ಆಗುವುದು ’ಭಾಗ್ಯ ’ಅನ್ನಿಸಿಬಿಟ್ಟಿದೆ! ತುಂಬ ಹೊತ್ತು ನಗಾಡಿದೆ. ಕೆಲವೊಂದು contextಗಳಲ್ಲಿ ಅದು ನಿಜವಾಗಿರಬಹುದು ಅನ್ನಿಸಿತು.

  8. Gundkal
    Posted August 6, 2007 at 7:33 am | Permalink

    ಪ್ರೀತಿಯ ಸುಂದರ,
    ನೀವು ಹೇಳಿದ್ದು ನೂರಕ್ಕೆ ನೂರು ನಿಜ. ಹೆಂಡತಿ ಬಿಟ್ಟು ಹೋಗುವ `ಭಾಗ್ಯ’ ತುಂಬಾ ಜನ­ರಿಗೆ ಇರು­ವು­ದಿಲ್ಲ. ಬಹುಶಃ ಇಲ್ಲ­ದಿ­ರುವ ಭಾಗ್ಯದ ಕುರಿತು ಕನ­ವ­ರಿ­ಸಿ­ರು­ವು­ದ­ರಿಂ­ದಲೇ ಈ ಕತೆ ಹುಟ್ಟಿ­ಕೊಂ­ಡಿ­ರ­ಬ­ಹು­ದಾದ ಸಾಧ್ಯ­ತೆ­ಯನ್ನೂ ನಾನು ತಳ್ಳಿ ಹಾಕು­ವು­ದಿಲ್ಲ. ಈ ಹಂತ­ದಲ್ಲಿ ಹೆಂಡ­ತಿ­ಯರು ಯಾಕೆ ಬಿಟ್ಟು ಹೋಗು­ವು­ದಿಲ್ಲ ಎನ್ನು­ವು­ದನ್ನೂ ನಾನು ಅಧ್ಯ­ಯನ ಮಾಡು­ತ್ತಿ­ದ್ದೇನೆ. ಬಹುಶಃ ಸ್ವಭಾ­ವತಃ ಈ `ಹೆಂ­ಡ­ತಿ­ಯರು’ ಅಷ್ಟೊಂದು ಒಳ್ಳೆ­ಯ­ವ­ರಲ್ಲ ಅನಿ­ಸು­ತ್ತದೆ! ನಿಮಗೆ `ದು­ನಿಯಾ’ ಚಿತ್ರ­ದಲ್ಲಿ ರಂಗಾ­ಯಣ ರಘು ಹೇಳಿದ ಡೈಲಾಗ್‌ ನೆನ­ಪಿ­ರ­ಬ­ಹುದು: `ನನ್‌ ಹೆಂಡ್ತಿ ತುಂಬಾ ಒಳ್ಳೆ­ಯ­ವಳು. ಯಾರದೋ ಜೊತೆ ಓಡಿ ಹೋದ್ಲು’.
    ಸಂಬಂ­ಧ­ಗಳ ಹಂಗಿ­ನಿಂದ, ಜವಾ­ಬ್ದಾ­ರಿ­ಗ­ಳಿಂದ ಮುಕ್ತ­ರಾ­ದಾಗ ವ್ಯಕ್ತಿ­ಗಳು ಬೇರೆ­ಯದೇ ರೀತಿ ಕಾಣಿ­ಸ­ಬ­ಹುದು ಎಂದು ಅನ್ನಿಸಿ ಇದನ್ನು ಬರೆ­ದಿದ್ದೆ. ಇದೇ ಥರಾ ಇನ್ನೊಂದು ಕತೆ ಬಂದಿದೆ. ಸಕತ್‌ ಕಮ­ರ್ಷಿ­ಯಲ್ಲು. ಯಾರಾದ್ರೂ ಪಿಚ್ಚರ್‌ ಮಾಡೋ­ರಿಗೆ ಕೊಡೋಣ ಅಂತಿ­ದ್ದೇನೆ.

  9. Suresh K
    Posted August 6, 2007 at 11:44 am | Permalink

    ಪರಮೇಶ್,
    ಗಂಡ-ಹೆಂಡತಿ ಜಗಳವನ್ನ (ಮಲ್ಲೇಶ್ವರಂ) ಬೀದಿವರೆಗೂ ತಂದಿದ್ದಲ್ಲದೆ,ಮನೆಯ ಒಳಗೆ ಸಾಕಾಗಿಲ್ಲ ಅಂತ ಹೊರಗೂ ಎಂಜಾಯ್ ಮಾಡಿ(ಸಿ)ದ್ದೀರಲ್ಲ! ಏನ್ ಹೇಳ್ಲಿ ನಿಮ್ಗೆ! ಒಟ್ನಲ್ಲಿ ಅವ್ನಿಗೆ ಅವ್ಳಿಂದ ಬಿಡುಗಡೆ, ಅವ್ಳಿಗೆ ಅವ್ನಿಂದ. ಸಾಂಸಾರಿಕ ನ್ಯಾಯ! ಚೆನ್ನಾಗಿದೆ ಕತೆ.

  10. vamanpresent
    Posted August 8, 2007 at 7:51 pm | Permalink

    Dear story writer,
    Good story. Keep it up!
    I have also created an account with wordpress.com on yesterday. Will you please tell me how to start kannada font in this web. My e-mail is
    harivayuguru@gmail.com.

  11. aradhanavishvin
    Posted August 16, 2007 at 7:14 am | Permalink

    ಪರಮೇಶ್ವರವರೇ,
    ಕತೆ ತುಂಬಾ ಸೊಗಸಾಗಿದೆ. ಆದರೆ ಅಲ್ಲಿ “ಪಾರ್ವತಿ, ಪರಮೇಶ್ವರ” ಉದ್ದೇಶಪೂರಕವಾಗಿಯೋ ಅಥವಾ ಕಾಕತಾಳೀಯವೋ?

  12. jomon
    Posted August 18, 2007 at 2:20 pm | Permalink

    ಕತೆ ಚೆನ್ನಾಗಿದೆ.ಓದಿಸಿಕೊಂಡು ಹೋಯಿತು.ಪುಟ್ಟ ಪುಟ್ಟ ವಾಕ್ಯ ರಚನೆಗಳು ತುಂಬಾ ಹಿಡಿಸಿದವು.ಹೀಗೆಯೇ ಮುಂದುವರೆಯಲಿ…

  13. Satya
    Posted August 22, 2007 at 6:14 am | Permalink

    madve aagovaregoo beku-beku… aamele ‘bittu hodarene bhagya’!

    anda haage idanne nimm hendti odiddara Paramesh?!

  14. Posted August 23, 2007 at 1:51 pm | Permalink

    ಸೂಪರ್ ಆಗಿದೆ !!! :)

  15. ರೂಪ
    Posted February 21, 2008 at 9:10 am | Permalink

    ಅಲ್ರಿಯಪ್ಪ ಸ್ವಾತಂತ್ರ ಹೋರಾಟಗಾರಾರೆ(ಸಂಸಾರ ಸೆರೆಮನೆ ಯಾದರೆ)
    ಹೆಂಡತಿ ಅಷ್ಟೊಂದು ಕಷ್ಟ ಅನಿಸಿದ್ರೆ ಮದುವೆ ಯಾಕ್ರಿ ಮಾಡ್ಕೊಳ್ತೀರಾ.
    ಹಾಗೆ ಸುಮ್ಮನಿದ್ದುಬಿಡಿ.
    ಸುಮ್ಮನೆ ಹೆಂಡತಿಯರನ್ನು ಹಳಿಯೋದು ತಪ್ಪುತ್ತೆ.

Post a Comment

Your email is never published nor shared. Required fields are marked *
*
*