ಇಪ್ಪತ್ತು ವರ್ಷಗಳ ಹಿಂದೆ ಒಂದು ಚಳಿಗಾಲ. ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸು ತಣ್ಣಗಿತ್ತು. ಅಲ್ಲಿಂದ ಸುಮಾರು ನೂರು ಕಿಲೋಮೀಟರ್ ದೂರದ ಮಲೆನಾಡಿನ ಹಳ್ಳಿಯ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದ ನಾವು ಪ್ರವಾಸಕ್ಕೆಂದು ಧಾರವಾಡಕ್ಕೆ ಬಂದು ಆ ದಿನ ಕ್ಯಾಂಪಸ್ಸಿನಲ್ಲಿ ಹಾಗೇ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆವು.
ಹಾಗೆ ನಡೆದುಕೊಂಡು ಹೋಗುತ್ತಿದ್ದಾಗ ಮೈದಾನವೊಂದು ಎದುರಾಯಿತು. ಅಲ್ಲೊಂದು ಕ್ರಿಕೆಟ್ ಪಂದ್ಯ. ಬಹುಶಃ ಯುನಿವರ್ಸಿಟಿಗಳ ನಡುವಿನ ಪಂದ್ಯ ಇರಬೇಕು. ನಾವು ಹುಡುಗರೆಲ್ಲಾ ನೋಡುತ್ತಾ ನಿಂತುಕೊಂಡೆವು. ಗದ್ದೆಬಯಲಿನ ರಬ್ಬರ್ ಚೆಂಡಿನ ಕ್ರಿಕೆಟ್ ಬಿಟ್ಟು ಬೇರೆ ಪಂದ್ಯವನ್ನು ನೋಡದೇ ಇದ್ದ, ಟೀವಿಯಿನ್ನೂ ಜನಪ್ರಿಯವಾಗಿರದಿದ್ದ ಆ ಕಾಲದಲ್ಲಿ ನನಗಂತೂ ಅದೊಂದು ರೋಮಾಂಚಕಾರಿ ಸಂಗತಿಯಂತೆ ಕಾಣಿಸಿತ್ತು.
ಯಾವುದೋ ತಂಡ ಬ್ಯಾಟ್ ಮಾಡುತ್ತಿತ್ತು. ಯಾರೋ ಬೌಲಿಂಗ್ ಮಾಡುತ್ತಿದ್ದರು. ಹೆಚ್ಚೆಂದರೆ ನಾಲ್ಕು ಓವರ್ ನೋಡಿರಬಹುದು. ಅಷ್ಟರಲ್ಲೇ ಬೌಂಡರಿಗಳನ್ನೂ, ಉದುರುವ ವಿಕೆಟ್‌ಗಳನ್ನೂ ನಾವು ನೋಡಿದ್ದೆವು. ಬಿಳಿ ಬಟ್ಟೆ, ನೀಲಿ ಹೆಲ್ಮೆಟ್, ಅಂಪೈರ್‌ನ ತಲೆಗೊಂದು ಬಿಳಿ ಹ್ಯಾಟು, ಹುಲ್ಲುಗಾವಲಿನಂತೆ ಕಾಣಿಸುತ್ತಿದ್ದ ಹಸಿರು ಮೈದಾನ ನೋಡಿ ನನಗಂತೂ ಕ್ರಿಕೆಟ್ ಮ್ಯಾಚ್ ನೋಡುತ್ತ ಅಲ್ಲೇ ಉಳಿದುಕೊಂಡುಬಿಡುವ ಮನಸ್ಸಾಗಿತ್ತು.
ಅಷ್ಟರಲ್ಲಿ ಅಲ್ಲಿಂದ ಹೊರಡಲು ಮೇಷ್ಟ್ರು ಸೂಚಿಸಿದರು. ಅನಂತರ ನಾವು ಧಾರವಾಡದಲ್ಲಿ ಆಕಾಶವಾಣಿ ಕೇಂದ್ರದಿಂದ ಹಿಡಿದು ರೈಲ್ವೇ ಸ್ಟೇಷನ್ ತನಕ ಏನೆನಲ್ಲ ನೋಡಿದರೂ ನನಗೆ ಏನೂ ಕಾಣಿಸಲಿಲ್ಲ. ಏಕೆಂದರೆ ನನ್ನ ಕಣ್ಣ ಮುಂದೆ ಅರ್ಧಕ್ಕೇ ಬಿಟ್ಟು ಬಂದ ಆ ಕ್ರಿಕೆಟ್ ಮ್ಯಾಚ್ ಮುಂದುವರೆಯುತ್ತಿತ್ತು. ಕಣ್ಮುಂದೆಯೇ ಬೌಲರ್ ಬೌಲ್ ಮಾಡುತ್ತಿದ್ದ. ಬ್ಯಾಟ್ಸ್‌ಮನ್ ಬ್ಯಾಟ್ ಬೀಸುತ್ತಿದ್ದ!
ಇದಾಗಿ ಸುಮಾರು ಹದಿನೆಂಟು ವರ್ಷಗಳಾಗಿವೆ. ಮನೆಮನೆಗೂ ಟೀವಿ ಬಂದಿದೆ. ಐದು ವಿಶ್ವಕಪ್‌ಗಳು ಮುಗಿದಿವೆ. ಸಚಿನ್ ತೆಂಡೂಲ್ಕರ್ ಹುಟ್ಟಿಕೊಂಡು ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ನಾನು ಸ್ಕೂಲನ್ನು ಅರ್ಧಕ್ಕೇ ಬಿಟ್ಟು ಬೆಂಗಳೂರಿಗೆ ಬಂದಿದ್ದಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಪೆವೆಲಿಯನ್ ಪಕ್ಕದ ಪ್ರೆಸ್‌ಬಾಕ್ಸ್‌ನಲ್ಲಿ ಕುಳಿತು ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಿದ್ದಾಗಿದೆ. ಹೀಗಿದ್ದರೂ ಆ ದಿನ ಕರ್ನಾಟಕ ಯುನಿವರ್ಸಿಟಿಯ ಕ್ಯಾಂಪಿಸ್ಸಿನಲ್ಲಿ ನಡೆಯುತ್ತಿದ್ದ, ನಾನು ಅರ್ಧಕ್ಕೆ ಎದ್ದು ಬಂದ ಪಂದ್ಯ ಇನ್ನೂ ನನ್ನ ತಲೆಯಲ್ಲಿ ನಡೆಯುತ್ತಿದೆ. ಈಗ ಎಲ್ಲಿ ಕ್ರಿಕೆಟ್ ಪಂದ್ಯ ನೋಡಿದರೂ ನನಗೆ ಆ ಕ್ಯಾಂಪಸ್ಸು ಮತ್ತು ಕ್ರಿಕೆಟ್ ಪಂದ್ಯ ನೆನಪಾಗುತ್ತದೆ. ಆ ದಿನ ಅಂಪೈರ್‌ಗಳು ಎಲ್‌ಬಿಡಬ್ಲ್ಯೂ ತೀರ್ಮಾನ ಸರಿಯಾಗಿ ಕೊಟ್ಟರಾ, ಯಾರಾದರೂ ಶತಕ ಹೊಡೆದರಾ, ಕ್ಯಾಚ್ ಬಿಟ್ಟರಾ, ಸೋತ ತಂಡದ ಕ್ಯಾಪ್ಟನ್ ಬೇಜಾರು ಮಾಡಿಕೊಂಡನಾ ಅಂತೆಲ್ಲ ಯೋಚನೆಯಾಗುತ್ತದೆ. ರಾತ್ರಿ ಎಚ್ಚರವಾದಗಲೆಲ್ಲ ಇದು ನೆನಪಾಗಿ ಸ್ಕೋರ್ ಕಾರ್ಡ್ ಸಿಕ್ಕಿದ್ದರೆ ಎಂದು ಚಡಪಡಿಸುತ್ತೇನೆ. ಅದೊಂದು ಸಾಮಾನ್ಯ ಪಂದ್ಯವಾಗಿತ್ತು ಮತ್ತು ಬಹುಶಃ ಆ ದಿನ ಅಂಥ ಮಹತ್ತರವಾಗಿದ್ದೇನೂ ಸಂಭವಿಸಲಿಲ್ಲ ಎಂದು ಈಗ ಊಹಿಸಿಕೊಳ್ಳಬಹುದಾದರೂ ಯಾಕೋ ನನಗೆ ಸಮಾಧಾನ ಆಗುತ್ತಿಲ್ಲ.
***
ಇತ್ತೀಚೆಗೆ ನಾವು ನಾಲ್ಕು ಜನ ಕೋಲ್ಕತ್ತಾದಿಂದ ಸಿಲಿಗುರಿಗೆ ಹೊರಟಿದ್ದೆವು.ಬೆಳಗಾವಿಯಲ್ಲಿ ರಾತ್ರಿ ಬಸ್ಸು ಹತ್ತಿ ಬೆಂಗಳೂರಿಗೆ ಬಂದಂತೆ ಇದು ಹತ್ತು ಗಂಟೆಗಳ ಪ್ರಯಾಣ. ಆ ದಿನ ನಮ್ಮ ಅದೃಷ್ಟ ಸರಿಯಿರಲಿಲ್ಲ. ನಸುಕಿನಲ್ಲಿ ಎಚ್ಚರವಾದರೆ ಬಸ್ಸು ರಸ್ತೆಯಲ್ಲಿ ನಿಂತುಕೊಂಡಿತ್ತು ಅಥವಾ ಬಸ್ಸು ನಿಂತುಕೊಂಡಿದ್ದರಿಂದಲೇ ನಮಗೆ ಎಚ್ಚರವಾಯಿತು. ದೂರದ ಊರುಗಳಿಗೆ ಹೋಗುವಾಗ ಬಸ್ಸು ಹೀಗೆ ನಿಂತುಬಿಟ್ಟರೆ ಸಹಜವಾಗಿಯೇ ಕಿರಿಕಿರಿಯಾಗುತ್ತದೆ. ಸ್ವಲ್ಪವೇ ಹೊತ್ತಿನಲ್ಲಿ ನಾವೊಂದು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ನನಗೆ ಅರ್ಥವಾಯಿತು. ಅಷ್ಟರಲ್ಲಿ ಹೊರಗೆ ಬೆಳಕು ನಿಚ್ಛಳವಾಗಿತ್ತು.
ಬಸ್ಸೆಂಬ ವಾಸನಾ ಪ್ರಪಂಚದಲ್ಲಿ ತೆವಳುವುದಕ್ಕಿಂತ ಹೊರಗಡೆ ಇಳಿದು ನಡೆದುಕೊಂಡು ಹೋಗುವುದೇ ಸರಿ ಅನಿಸಿತು. ಬಸ್ಸಿನ ಪಕ್ಕದಲ್ಲಿ ಹೆಜ್ಜೆಹಾಕತೊಡಗಿದೆವು. ನಾವು ಹೋಗುತ್ತಿದ್ದ ರಸ್ತೆಗೆ ಸಮಾನಾಂತರವಾಗಿ ಒಂದು ನದಿ ನಾಲೆಯಿತ್ತು. ಒಂದು ಸಣ್ಣ ನದಿಯಷ್ಟು ಅಗಲವಾಗಿದ್ದ ಆ ನಾಲೆಯನ್ನು ಅಚ್ಚರಿಯಿಂದ ಗಮನಿಸುತ್ತಾ ಹೋಗುತ್ತಿದ್ದರೆ ಶವಾಸನ ಹಾಕಿಕೊಂಡು ಯಾರೋ ತೇಲುತ್ತಿರುವುದು ಕಾಣಿಸಿತು. ಒಂದು ಕೈ ತಲೆಯ ಕೆಳಕ್ಕೆ ಆಧಾರದಂತೆ ಇದ್ದುದರಿಂದ ಧ್ಯಾನಸಕ್ತನಾದ ಮನುಷ್ಯನೊಬ್ಬ ನೀರಲ್ಲಿ ತೇಲುತ್ತ ಯಾವುದೋ ಆಸನ ಹಾಕಿದ್ದಾನೆಂದು ಭಾವಿಸಿದ್ದರಲ್ಲಿ ತಪ್ಪಿರಲಿಲ್ಲ. ಅಥವಾ ಆತ ಈಜುತ್ತಿರಬಹುದು!
ಅಷ್ಟೊತ್ತಿಗೆ ಕಾಗೆಯೊಂದು ಹಾರುತ್ತ ಬಂತು. ಹಾರುತ್ತ ಹಾರುತ್ತ ಅದು ಆತನ ಮುಖದ ಮೇಲೆ ಕುಳಿತುಕೊಂಡಿತು. ಅರೇರೇ ಅಂದುಕೊಳ್ಳುವಷ್ಟರಲ್ಲಿ ಕೊಕ್ಕಿನಿಂದ ಕುಕ್ಕತೊಡಗಿತು. ಆತನ ಕೈ ಹಾಗೇ ಇದೆ. ದೇಹ ತೇಲುತ್ತಿದೆ. ಯಾವುದೇ ಚಲನೆ ಕಾಣಿಸುತ್ತಿಲ್ಲ. ನನಗೆ ಅರ್ಥವಾಯಿತು. ಆತ ಶವಾಸನ ಹಾಕಿಲ್ಲ. ಶವವೇ ಆಗಿದ್ದಾನೆ!
ಅಷ್ಟೊತ್ತಿಗೆ ಟ್ರಾಫಿಕ್ ಜಾಮ್ ಕಡಿಮೆಯಾಗಿತ್ತು. ಬಸ್ಸು ಹತ್ತಿಕೊಳ್ಳಲೇಬೇಕಾಯಿತು. ಆ ದಿನ ಸಂಜೆ ಸಿಲಿಗುರಿ ತಲುಪಿದೆವು. ಅಲ್ಲಿಂದ ಕೇಲಿಮ್‌ಪಾಂಗ್. ಮರುದಿನ ಬೆಳಿಗ್ಗೆ ಪುನಃ ಸಿಲಿಗುರಿ. ಅಲ್ಲಿಂದ ಬಾಗ್ದೋಗ್ರಾ ವಿಮಾನ ನಿಲ್ದಾಣ.
ಅಲ್ಲಿ ಕುಳಿತು ದೆಹಲಿಗೆ ಹೋಗಲು ಕಾಯುತ್ತಿದ್ದರೆ ನನ್ನ ತಲೆಯಲ್ಲಿ ಇನ್ನೂ ಕಾಗೆ ಕುಕ್ಕುವುದು ಮುಂದುವರದಿತ್ತು. ಇದಾಗಿ ಈಗಾಗಲೇ ಎರಡು ತಿಂಗಳುಗಳು ಕಳೆದಿವೆ. ಈಗಲೂ ಕಾಗೆ ಕಂಡರೆ ತಲೆಯನ್ನು ಕೊಕ್ಕಿನಿಂದ ಕುಕ್ಕಿದ ಹಾಗಾಗುತ್ತದೆ! ಆತ ಯಾರೋ, ಯಾವ ಹೆಂಡತಿಯ ಗಂಡನೋ, ಯಾವ ಮಗುವಿನ ಅಪ್ಪನೋ, ಯಾವ ಅಪ್ಪನ ಮಗನೋ ಎಂದು ಮನಸ್ಸಿಗೆ ಕಸಿವಿಸಿಯಾಗುತ್ತದೆ. ಆತನ ಸಂಬಂಧಿಕರಿಗೆ ಆತ ಸತ್ತಿದ್ದು ಗೊತ್ತಾಗಿರಬಹುದಾ ಎಂದು ಅನುಮಾನವಾಗುತ್ತದೆ.
ಈ ನಡುವೆ ಬಾಗ್ದೋಗ್ರಾ ನಿಲ್ದಾಣದ ಲಾಂಜ್‌ನಲ್ಲಿ ಕುಳಿತಾಗ ಒಂದು ಪುಟ್ಟ ಘಟನೆ ನಡೆಯಿತು. ಅಲ್ಲಿನ ಟೀವಿಯಲ್ಲಿ ಯಾವುದೋ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಕುಳಿತು ನೋಡುತ್ತಿದ್ದೆವು. ಒಂದಿಷ್ಟು ಹೊತ್ತು ನೋಡುತ್ತಿದ್ದರೆ ಒಬ್ಬ ಎದ್ದು ಹೋಗಿ ಟೀವಿ ಚಾನೆಲ್ ಬದಲಾಯಿಸಿದ. ಅದೇನಾಯಿತೋ. ಟೀವಿ ಚಿತ್ರ ತೋರಿಸುವುದನ್ನು ನಿಲ್ಲಿಸಿತು. ಆತ ಪುನಃ ಮೊದಲ ಚಾನೆಲ್‌ಗೆ ವಾಪಸ್ ಬರಲು ಪ್ರಯತ್ನಿಸಿದ. ಇಲ್ಲ, ಟೀವಿ ಕೆಲಸ ಮಾಡುತ್ತಿಲ್ಲ. ಅದೆಷ್ಟು ಸಲ ಬದಲಾಯಿಸಿದರೂ ಟೀವಿ ಚಿತ್ರ ತೋರಿಸಲಿಲ್ಲ. ಆತ ಅಲ್ಲಿಂದ ಎದ್ದು ಹೋಗಿ ಯಾರನ್ನೋ ಕರೆದುಕೊಂಡು ಬಂದ. ಆತನೂ ಏನೇನೋ ಮಾಡಿ ನೋಡಿದ. ಕೇಬಲ್ ಕಿತ್ತು ಪುನಃ ಹಾಕಿದ. ಇಲ್ಲ, ಟೀವಿಯಲ್ಲಿ ಚಿತ್ರವಿಲ್ಲ. ಅಷ್ಟರಲ್ಲಿ ನಾವು ಅಲ್ಲಿಂದ ಹೊರಡಬೇಕಾಯಿತು.
ಇದನ್ನು ಅಲ್ಲೇ ಮರೆತುಬಿಡಬೇಕಿತ್ತು. ಆದರೆ ಮರೆಯುವುದು ಸಾಧ್ಯವಾಗುತ್ತಿಲ್ಲ. ಈಗ ಟೀವಿ ನೋಡಿದಾಗಲೆಲ್ಲ ಬಾಗ್ದೋಗ್ರಾ ನಿಲ್ದಾಣದ ಲಾಂಜ್‌ನಲ್ಲಿರುವ ಟೀವಿ ಸರಿಹೋಯಿತೋ ಇಲ್ಲವೋ ಎಂದು ಗೊಂದಲವಾಗಿ ಕಸಿವಿಸಿಯಾಗುತ್ತದೆ. ಯುನಿವರ್ಸಿಟಿ ಕ್ಯಾಂಪಸ್ಸಿನ ಆ ಪಂದ್ಯ ಏನಾಯಿತೋ ಅನಿಸಿದಂತೆಯೇ ನಾಲೆಯಲ್ಲಿ ತೇಲುತ್ತಿದ್ದ ಶವ ನೆನಪುಗಳ ನಡುವೆ ಜಾಗ ಮಾಡಿಕೊಂಡು ಎದ್ದು ಕುಳಿತುಕೊಳ್ಳುತ್ತದೆ. ವಿಚಿತ್ರ. ಕಾಗೆ ಪುನಃ ಕುಕ್ಕುತೊಡಗುತ್ತದೆ!
ಹೇಳಿ, ನಿಮಗೂ ಹೀಗೆಲ್ಲಾ ಆಗುತ್ತದಾ?
4 Comments
August 2, 2007 at 11:25 am
ILLA! Nanage khandithavaagiyoo heegella aaguttilla. Nimagenoo tondare irabeku endu nanange anisutide yako indu!
August 2, 2007 at 2:46 pm
ಸರಳ ವಿಷಯಗಳ ಸಂಕೀರ್ಣತೆಯ ಎಳೆಗಳನ್ನು ನೀವು ಬಿಡಿಸುವ ರೀತಿ ತುಂಬಾ ಚೆನ್ನಾಗಿದೆ.
ನಿಮ್ಮ ಬ್ಲಾಗ್ ಲಿಂಕಿಸಿಕೊಳ್ಳಲೇ?
August 4, 2007 at 5:46 am
ನೋಡುವವರಿಲ್ಲದಾಗ ಕಾಡಿನಲ್ಲಿ ಮರ ಬಿದ್ದರೆ ಸದ್ದಾಗುತ್ತಾ?
ಕಾಡಿನೊಳಗೂ ಕೋಗಿಲೆಯ ಕಂಠ ಹೀಗೇ ಇರುತ್ತಾ?
ನೋಡಿದ್ದೆಲ್ಲವೂ ಸತ್ಯವೇ? ಕೇಳಿದ್ದೆಲ್ಲವೂ ಹಾಗೇ ಇದಾವೆಯೇ?
Check out ‘Blow up’ by Antonioni. its about the same fact. good film brother…
August 4, 2007 at 8:14 am
Abhaya,
Sounds very intresting.Will watch “Blow up’.