ಮೂಡುವನು ರವಿ ಮೂಡುವನು!

ನಟನೆಯಿಂದ ನಿರ್ದೇಶನ, ಅಲ್ಲಿಂದ ಸಂಗೀತ ನಿರ್ದೇಶನ, ಹಾಡು, ಕ್ಯಾಮರಾ, ಸಂಕಲನ ಮತ್ತು ವ್ಯವಕಲನ! ರವಿಚಂದ್ರನ್‌ ಮಾತುಗಳು ಹೀಗೆ ಜಿಗಿದಾಡುತ್ತವೆ. 24 ಫ್ರೇಮುಗಳ ವೇಗವನ್ನು ಮೀರಿ ಎಲ್ಲೆಂದರಲ್ಲಿ ಸರಿದಾಡುತ್ತವೆ. ಈ ಮಾತುಗಳು ಟ್ರಾಲಿಯ ಹಳಿಯ ಮೇಲೆ ಶಿಸ್ತುಬದ್ಧವಾಗಿ ಚಲಿಸುವುದಿಲ್ಲ. ಸ್ಟೆಡಿ ಕ್ಯಾಮರಾದಂತೆ ಸಿಕ್ಕಿದಲ್ಲೆಲ್ಲ ನುಗ್ಗುತ್ತವೆ. ಏಕೆಂದರೆ ಸಿನಿಮಾ ಕುರಿತು ಮಾತಾಡತೊಡಗಿದರೆ ರವಿಚಂದ್ರನ್‌ ಕ್ರೇಜಿಯಾಗುತ್ತಾರೆ!

ಸಿನಿಮಾವನ್ನು ಹುಚ್ಚನಂತೆ ಪ್ರೀತಿಸುವ ರವಿಚಂದ್ರನ್‌ ಬಳಿ `ಮಂಜಿನ ಹನಿ’ ಎಂದು ಮಾತು ಶುರುಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ಅವರು `ಅಂತರ್ಯಾಮಿ’ ಅಂತ ಹೊಚ್ಚ ಹೊಸ ಸಿನಿಮಾ ಕುರಿತು ಹೇಳತೊಡಗುತ್ತಾರೆ. ಅದೇನು ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ `ಕಂಬನಿ’ ಅಂತ ಇನ್ನೊಂದು ಸಿನಿಮಾದ ಕತೆ ಹೇಳಿ ಮುಗಿಸಿರುತ್ತಾರೆ. ಅಬ್ಬಬ್ಬಾ ಎಂದು ಕಿಟಕಿಯಾಚೆ ಕಣ್ಣು ಹಾಯಿಸುವಷ್ಟರಲ್ಲಿ `ವಿಂಡೋ’ ಅಂತ ಒಂದು ಚಿತ್ರ ಮಾಡಬೇಕು ಎಂದಿದ್ದೇನೆ ಎನ್ನುತ್ತಾರೆ ರವಿ. `ಕ್ಯಾಮರಾ ಒಂದೇ ಕಡೆ ಇರುತ್ತದೆ. ಕಿಟಕಿಯ ಕರ್ಟನ್‌ ಆಚೆ ಏನೇನೋ ನಡೆಯುತ್ತದೆ’ ಎಂದು ಕ್ರೇಜಿ ಐಡಿಯಾಗಳ ಜಗತ್ತಿನಲ್ಲಿ ಬದುಕುವ ಜನರೇ ಕ್ರೇಜಿಯಾಗುವಂಥ ಐಡಿಯಾ ಮುಂದಿಡುತ್ತಾರೆ.

ರವಿಚಂದ್ರನ್‌ ಸಿನಿಮಾ ಬಿಟ್ಟು ಬೇರೆ ಯೋಚನೆ ಮಾಡುವುದಿಲ್ಲ. ಮೂರು ಮೊಬೈಲುಗಳನ್ನು ಇಟ್ಟುಕೊಂಡರೂ ಗೊತ್ತಿಲ್ಲದ ನಂಬರುಗಳಿಂದ ಬರುವ ಕರೆಗಳನ್ನು ಸ್ವೀಕರಿಸುವುದಿಲ್ಲ. ಕೆಲವು ನಂಬರುಗಳು ಗೊತ್ತಿರುವುದರಿಂದಲೇ ಸ್ವೀಕರಿಸುವುದಿಲ್ಲ! ಹೀಗಿದ್ದರೂ ಬಿಡುವಿನ ಸಮಯದಲ್ಲಿ ಮುಖವನ್ನೇ ನೋಡದ ಹದಿನಾರೋ ಹದಿನೇಳೋ ವರ್ಷದ ಅನಾಮಿಕ ಅಭಿಮಾನಿ ಹುಡುಗಿಯೊಂದಿಗೆ ಮಾತಿಗಿಳಿಯುತ್ತಾರೆ. ಹಾಗೆ ಮಾತಾಡುತ್ತಲೇ ನೀಲಿ ನೋಟ್‌ಬುಕ್‌ ತೆಗೆದು ತಾವು ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಕೇಳಿಸತೊಡಗುತ್ತಾರೆ.

ರವಿಚಂದ್ರನ್‌ ನೂರಾರು ರಾಗಗಳನ್ನು ಸಂಯೋಜಿಸಿ ಇಟ್ಟಿದ್ದಾರೆ. ಹತ್ತಾರು ರಾಗಗಳಿಗೆ ಹಾಡುಗಳನ್ನು ಬರೆದಿಟ್ಟಿದ್ದಾರೆ. ಕೆಲವು ಹಾಡುಗಳ ಪಲ್ಲವಿ ಮುಗಿದಿದೆ. ಇನ್ನು ಕೆಲವು ಹಾಡುಗಳ ಚರಣ ಮುಗಿದಿದೆ. ಸರಳ ಶಬ್ದಗಳನ್ನೇ ಆರಿಸಿ ಆರಿಸಿ ಹಾಡುಗಳ ಮಾಲೆ ಪೋಣಿಸುತ್ತಾರೆ ರವಿಚಂದ್ರನ್‌. ಈ ಸರಳ ಹಾಡುಗಳ ಮೂಲಕವೇ ಕೆಲವೊಮ್ಮೆ ಗಾಢವಾಗಿ ತಟ್ಟುವುದೂ ಅವರಿಗೆ ಗೊತ್ತಿದೆ. `ಹನಿ ಹನಿ ಸೇರಿ ನೀರಾದೆ’ ಎಂದು ಮೊದಲ ಸಾಲು ಬರೆಯವ ರವಿ `ಹರಿಕೃಷ್ಣನ ಪ್ರೇಮಿ ನೀ ರಾಧೆ!’ ಎಂದು ಬರೆಯುತ್ತ ಕಾಣದ್ದನ್ನು ಹುಡುಕುವ ಕವಿಯಾಗುತ್ತಾರೆ!

ಖುಷಿಗೊಂದು ಹಾಡು. `ಕಂಬನಿ’ಗೊಂದು ಹಾಡು. ಮಗನ ಇಂಟ್ರಡಕ್ಷನ್‌ಗೆ ಇನ್ನೊಂದೇ ಹಾಡು. ಹಾಡು ಹಾಡು ಹಾಡು ಎಂದು ರವಿಚಂದ್ರನ್‌ ಒಂದು ರಾಶಿ ಹಾಡುಗಳನ್ನು ಪೇರಿಸಿ ಇಟ್ಟಿದ್ದಾರೆ. ಇನ್ನು ಐದು ವರ್ಷ ರಾಗ ಸಂಯೋಜನೆ ಮಾಡುವುದೇ ಬೇಡ ಎನ್ನುವಷ್ಟು ಹಾಡುಗಳು ಅವರ ಖಜಾನೆಯಲ್ಲಿವೆ.

ಇಬ್ಬನಿಯ ಸೃಷ್ಟಿ

ಹುಚ್ಚು ಪ್ರೇಮಿಯಂತೆ ರವಿಚಂದ್ರನ್‌ ಪ್ರೀತಿ ಮಾಡುತ್ತ `ಮಂಜಿನ ಹನಿ’ ಮಾಡುತ್ತಿದ್ದಾರೆ. ಸಿಗದಿರುವ ಶಾಟ್‌ಗಾಗಿ ಅವರು ಎಲ್ಲೆಲ್ಲೋ ಅಲೆದಾಡಿದ್ದಾರೆ. ಮಂಜು ಮತ್ತು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ವಾಪಸಾಗಿದ್ದಾರೆ. ದಿನಕ್ಕೊಂದು ಜಾಗಗಳಲ್ಲಿ ಸುತ್ತಾಡುತ್ತ, ಸೀತಾರಾಮ್‌ ಜೊತೆಯಲ್ಲಿ `ಮಂಜಿನ ಹನಿ’ಗಳನ್ನು ಪೋಣಿಸಿದ್ದಾರೆ!

`ಸೆಂಚುರಿ ಗ್ಯಾರಂಟಿ. ಮುಂದಿನದು ದೈವೇಚ್ಛೆ’ ಎನ್ನುತ್ತಾ `ಮಂಜಿನ ಹನಿ’ ಕುರಿತು ಮಾತಾಡತೊಡಗುತ್ತಾರೆ ರವಿಚಂದ್ರನ್‌. `ಈ ಸಿನಿಮಾದಲ್ಲಿ ನಾನು ಇಲ್ಲಿಯ ತನಕ ಅನುಸರಿಸಿಕೊಂಡು ಬಂದಿದ್ದ ಗ್ರಾಮರ್‌ಗಳನ್ನೆಲ್ಲಾ ಮುರಿದಿದ್ದೇನೆ’ ಎನ್ನುವ ಅವರಿಗೆ ಈ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಸಂದೇಶ್‌ ನಾಗರಾಜ್‌ಗಾಗಿ ಈ ಸಿನಿಮಾ ಮಾಡಿಕೊಡುತ್ತಿದ್ದರೂ ಅವರು ಒಂದು ದಿನವೂ ಚಿತ್ರೀಕರಣ ನಡೆಯುತ್ತಿರುವ ತಾಣಕ್ಕೆ ಬಂದಿದ್ದಿಲ್ಲವಂತೆ. ಎಲ್ಲವೂ ಸರಿ ಹೋದರೆ ನವೆಂಬರ್‌ ಮೊದಲ ವಾರ ಚಿತ್ರದ ಬಿಡುಗಡೆ.

ಚಿತ್ರಕತೆ ಕತೆ!

ರವಿಚಂದ್ರನ್‌ ಸ್ಕ್ರಿಪ್ಟ್‌ ಸಿದ್ಧಪಡಿಸುವ ರೀತಿ ವಿಶಿಷ್ಟ. ಚಿತ್ರಕತೆಯೆಂದರೆ ತಯಾರಾಗಲಿರುವ ಸಿನಿಮಾದ ನೀಲಿನಕ್ಷೆ ಮಾತ್ರ ಎಂದು ಅವರಿಗೆ ಅನಿಸುವುದಿಲ್ಲ. ಸಿಡ್‌ ಫೀಲ್ಡ್‌ರಂಥ ಚಿತ್ರಕತೆ ಪಂಡಿತರು ಹೇಳುವ ಸೂತ್ರಗಳ ಕುರಿತೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಅದಕ್ಕೆ ತಮ್ಮದೇ ಶೈಲಿಯನ್ನು ಅನುಸರಿಸುತ್ತಾರೆ.

ಚಿತ್ರಕತೆಯನ್ನು ಇಂಗ್ಲಿಷಿನಲ್ಲಿ ಬರೆಯುತ್ತಾರೆ. ಅದಕ್ಕಾಗಿಯೇ ಲ್ಯಾಪ್‌ಟಾಪೊಂದು ಅವರ ಜೊತೆಯಿರುತ್ತದೆ. ಚಿತ್ರಗಳನ್ನೆಲ್ಲ ಕಂಪ್ಯೂಟರ್‌ನಲ್ಲಿಯೇ ಕತ್ತರಿಸಿ, ಅಕ್ಷರಗಳನ್ನೆಲ್ಲ ಸಿಂಗರಿಸಿ ಅವರು ಚಿತ್ರಕತೆ ಸಿದ್ಧಪಡಿಸುತ್ತಾರೆ. ಹೀಗೆ ಸಿದ್ಧವಾದ ಚಿತ್ರಕತೆಯನ್ನು ಅತ್ಯುತ್ತಮವಾದ ಆರ್ಟ್‌ ಪೇಪರ್‌ನಲ್ಲಿ ಬಣ್ಣ ಬಣ್ಣಗಳೊಂದಿಗೆ ಮುದ್ರಿಸಿ ಅದನ್ನು ಬೈಂಡ್‌ ಮಾಡಿಸುತ್ತಾರೆ. ಚಿತ್ರಕತೆಯ ಹಿನ್ನೆಲೆಯಲ್ಲಿ ರವಿಚಂದ್ರನ್‌ ಅವರ ಬಣ್ಣ ಬಣ್ಣದ, ವಿಧವಿಧವಾದ ಚಿತ್ರಗಳು ಸೇರಿಕೊಂಡು ಅದು ನಿಜ ಅರ್ಥದಲ್ಲಿ ಚಿತ್ರಕತೆಯಾಗುತ್ತದೆ! ಈ ಪುಸ್ತಕದ ಕುರಿತು ಅವರಿಗೆ ಇನ್ನಿಲ್ಲದ ಪ್ರೀತಿ. ಇದು ಅವರ ಸೂಟ್‌ಕೇಸಿನಲ್ಲಿ ಭದ್ರವಾಗಿರುತ್ತದೆ. ಚಿತ್ರೀಕರಣ ನಡೆಯುವಾಗ ಚಿತ್ರಕತೆ ಪುಸ್ತಕವನ್ನು ಯಾರಾದರೂ ಗಡಿಬಿಡಿಯಿಂದ ತಿರುವಿ ಹಾಕುತ್ತಿದ್ದರೆ ಅವರು ಚಡಪಡಿಸುತ್ತಾರೆ. ಈಗಷ್ಟೇ ಪ್ರಸವವಾಗಿರುವ ಮಗುವಿನಷ್ಟೇ ಜೋಪಾನದಿಂದ ಅದನ್ನು ಎತ್ತಿಕೊಳ್ಳಬೇಕು ಎನ್ನುವುದು ಅವರ ಆಸೆ.

ಹೊಕ್ಕಳು, ದ್ರಾಕ್ಷಿ ಮತ್ತು ನವಿಲುಗರಿ

ಹೊಕ್ಕಳ ಮೇಲೆ ದ್ರಾಕ್ಷಿ ಉದುರಿಸುತ್ತಾರೆ ಎಂದು ತಮಾಷೆ ಮಾಡಿದರೆ ರವಿಚಂದ್ರನ್‌ಗೆ ಇಷ್ಟವಾಗುವುದಿಲ್ಲ. `ಹೊಕ್ಕಳು ಅಥವಾ ಹೊಟ್ಟೆ ನನಗೆ ಯಾವಾಗಲೂ ಅಷ್ಟು ಚೀಪ್‌ ಆಗಿ ಕಂಡಿಲ್ಲ’ ಎನ್ನುತ್ತ ಫಿಲಸಫಿಕಲ್‌ ಆಗುತ್ತಾರೆ ರವಿ. `ನಾನು ಹುಟ್ಟಿರುವುದೇ ಹೊಟ್ಟೆಯಲ್ಲಿ. ಅದರ ಕುರಿತು ನನಗೆ ಅಪಾರವಾದ ಗೌರವ’ ಎನ್ನುವುದು ಅವರ ಅಭಿಪ್ರಾಯ.

ಹುಡುಗಿ ಮತ್ತು ನವಿಲುಗರಿ ವಿಷಯದಲ್ಲಿ ಅವರು ಯಾವಾಗಲೂ ರಾಜಿಯಾಗುವುದಿಲ್ಲ. `ನವಿಲುಗರಿ ಇರುವ ಒಂದಾದರೂ ಶಾಟ್‌ ಇರಬೇಕು ಅಂತ ನನಗೆ ಆಸೆ’ ಎನ್ನುತ್ತಾರೆ ಅವರು. ನವಿಲುಗರಿ ಇದ್ದಮೇಲೆ ಕೇಳಬೇಕೇ? ಪಕ್ಕದಲ್ಲೇ ನಾಯಕಿಯಿರುತ್ತಾಳೆ. ಅವಳ ಪಕ್ಕದಲ್ಲಿ ನಿಲ್ಲುವ ನಾಯಕ ಕನಸುಗಾರನಾಗಿರುತ್ತಾನೆ. ಅದಕ್ಕೆ ಸೀತಾರಾಮ್‌ ಬೆಳಕುಗಳ ಅಲಂಕಾರ ಮಾಡುತ್ತಾರೆ. ಕನಸುಗಾರನ ಬಣ್ಣದ ಕನಸು ಹೀಗೆ ಮುಂದುವರೆಯುತ್ತದೆ!

Post a Comment

Your email is never published nor shared. Required fields are marked *
*
*