ವಿಕಾಸ ನೇಗಿಲೋಣಿ ಇತ್ತೀಚೆಗೆ ಬರೆದ ಕವಿತೆ ಇದು. ಬಹಳ ದಿನಗಳ ಕಾಲ ಕವಿತೆ, ಕತೆ ಇತ್ಯಾದಿಗಳನ್ನೇನೂ ಬರೆಯದೇ ಮದುವೆಯಾಗಿ ಮನೆಯಲ್ಲಿ ಹಾಯಾಗಿ ಇದ್ದುಬಿಟ್ಟಿದ್ದ ವಿಕಾಸ್ ಈ ನಡುವಿನ ಬೇಸರದಲ್ಲೋ ಖುಷಿಯಲ್ಲೋ ಇದನ್ನು ಬರೆದಿದ್ದಾರೆ. ಓದಿ ನೋಡಿ.
ಈ ಸಂತೆಯಲ್ಲೂ ಕಳೆದು ಹೋಗುವುದು ಎಷ್ಟು ಕಷ್ಟ?
ನಾವು ಕಳೆದು ಹೋದರೆ
ಮನೆಯಿಂದ ಫೋನು ಬರುತ್ತದೆ,
ಸಂಬಂಧಿಕರಿಗೆಲ್ಲಾ ಮೆಸೇಜು ಹೋಗುತ್ತದೆ.
ಅಕ್ಕಪಕ್ಕದವರ ಸಂಜೆ ಪಟ್ಟಾಂಗಕ್ಕೆ
ಚಹಾ ಮತ್ತು ಚೂಡಾ ಸಿಗುತ್ತದೆ.
ಇಷ್ಟು ವರ್ಷ ನಾವು ಕೂಡಿಟ್ಟ ನಿಯತ್ತಿಗೂ
ಅನುಮಾನ, ಅನುಕಂಪಗಳ ಪೊರೆ ಮೂಡುತ್ತದೆ.
***
ಅವನ ಹೆಂಡತಿ ಹೊರಹೊರಡುವಾಗ
ಅವಳ ಕಣ್ಣಂಚಲ್ಲಿ ನೀರಿರುತ್ತಿತ್ತು,
ಮಗುವಿನ ಶೂ ಹಿಂಬದಿ ಚೂರು ಹರಿದಿರುತ್ತಿತ್ತು,
ಆ ದಿನ ಅವರಿಬ್ಬರೂ ಊಟ ಮಾಡದೇ ಹಾಗೇ ಮಲಗಿದರು.
ಮನೆಯೊಳಗೆ ದಡದಡ ಪಾತ್ರೆಯ ಸದ್ದು ಒಮ್ಮೆ,
ಒಮ್ಮೊಮ್ಮೆ ಮನೆಯಲ್ಲಾಗಿದ್ದೇನೂ ಗೊತ್ತಾಗಬಾರದೆಂದು
ಸದಾ ಸುರಿಯಲು ಬಿಟ್ಟ ಕೊಳಾಯಿ.
ಒಮ್ಮೆ ಇಬ್ಬರ ಸತತ ಮಾತು
ಮತ್ತೊಮ್ಮೆ ಇಡೀ ದಿನ ಮನೆಯೊಳಗೆ ಮೌನ
ಹೆಂಡತಿ ನಕ್ಕರೂ ಅಪರೂಪಕ್ಕೊಮ್ಮೆ ನಕ್ಕಳೆಂಬ ಷರಾ
ಆಕೆ ಅತ್ತರಂತೂ ಗಂಡ ಅಳಿಸುವ ಗಂಡಸರ ಪರ.
… ಆಡಿಕೊಳ್ಳುವವರ ನಾಡಲ್ಲಿ ಕಳೆದು ಹೋಗುವುದು ಬಹಳ ಕಷ್ಟ
***
ಬುದ್ಧ ರಾತ್ರೋರಾತ್ರಿ ಮನೆ ಬಿಟ್ಟಾಗ
ಜಗತ್ತು ಒಳ್ಳೆಯದಾಗಿತ್ತು
ವೈರಾಗ್ಯ ಅರಸಿ ಹೋದವನನ್ನು
ಶಾಶ್ವತವನ್ನು ಅರಸಿ ಹೋದವನನ್ನು ಏನೂ ಅನ್ನಲಿಲ್ಲ.
ಯಶೋಧರೆ ಕಳೆದುಕೊಂಡ ತಥಾಗಥ
ಇಡೀ ಧರೆಗೆ ಬುದ್ಧನಾಗಿ ಸಿಕ್ಕ
ಯಶೋಧರೆ ಅಳುವಾಗಲೂ ಬುದ್ಧ ನಕ್ಕ!
ಆದರೆ ನಾವು
ಶಾಶ್ವತವನ್ನು ಹುಡುಕಿಹೋದರೂ
ಮನೆ ಬಿಟ್ಟು ಓಡಿಹೋದವರು
ಪೊಲೀಸರಿಗೆ ಬೇಕಾದವರು
ಮನೆಯಿಂದ ಒಡವೆ ವಸ್ತ್ರ ಹೊತ್ತೊಯ್ದೆವಾ
ಎಂಬ ಅನುಮಾನಕ್ಕೆ ಎಡೆಯಾದವರು
ಸಂತೆಯಲ್ಲಿ ಓಡಿಹೋದರೆ ಮುಂದೆ ವಿಚಾರಣೆ ಕಾದಿದೆ.
3 Comments
ವಿಕಾಸವಾದ…. ಸಂತೆಯೊಳಗೆ ಕಳೆದು …ಚೆನ್ನಾಗಿದೆ.
Ishtu bega inthaha kavana barediruva guttenu?
maduve madikondu hage bejarenu agilla. chennagiye ide dampatya, sundara. heegondu kavithe yesto dinadinda kadithu, monne barede aste.
Post a Comment