ಉಪ್ಪಿಯ ನೆನಪುಗಳು

uppi-gokarna.jpgಡಾ.ರಾಜ್‌ಕುಮಾರ್‌ ಇಲ್ಲದೇ ಒಂದು ವರ್ಷ. 365 ದಿನಗಳ ನಂತರವೂ ವರನಟನ ಸಾವು ನಮ್ಮ ಮನಸ್ಸಿನಲ್ಲಿನ್ನೂ ಜೀವಂತವಾಗಿದೆ. `ಓಂ’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ರಾಜ್‌ಕುಮಾರ್‌ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರು ನಟ, ನಿರ್ದೇಶಕ ಉಪೇಂದ್ರ. ತಮ್ಮ ಮನೆಯ ಟೆರೇಸಿನ ಮೇಲೆ ಕುಳಿತು ಆ ದಿನಗಳನ್ನು ಉಪ್ಪಿ ನೆನಪು ಮಾಡಿಕೊಂಡರು. ಆಗ ಹೆಕ್ಕಿಕೊಂಡ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ.…….…….

…….

ರಾಜ್‌ಕುಮಾರ್‌ ಅವರನ್ನು ಮೊದಲೂ ನಾನು ಭೇಟಿ ಮಾಡಿದ್ದೆ. ಆ ಸಮಾರಂಭದಲ್ಲಿ, ಈ ಸಮಾರಂಭದಲ್ಲಿ, ಜನಗಳ ನಡುವೆ ಹೀಗೆ ಅವರನ್ನು ಕಂಡಿದ್ದೆ. ಹೀಗಿದ್ದರೂ ಅವರು ನನಗೆ ಸರಿಯಾಗಿ ಸಿಕ್ಕಿದ್ದು ಮಾತ್ರ `ಓಂ’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ.

ಇನ್ನೂ ನೆನಪಿದೆ. `ಓಂ’ ಚಿತ್ರದ ಕತೆ ಹೇಳಲು ಹೋಗುವಾಗ ನಾನು ಜೊತೆಯಲ್ಲಿ ಪೇಪರ್‌ ಕಟ್ಟಿಂಗ್‌ಗಳನ್ನು ಇಟ್ಟುಕೊಂಡು ಹೋಗಿದ್ದೆ. ಆಯಿಲ್‌ ಧಂಧೆಯ ಕುರಿತು ಕಲೆ ಹಾಕಿದ ಮಾಹಿತಿಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದೆ. ಅದನ್ನೆಲ್ಲ ಅವರಿಗೆ ಆರಂಭದಲ್ಲಿಯೇ ವಿವರಿಸಿದೆ. ಹೀಗೊಂದು ಧಂಧೆಯಿದೆ ಮತ್ತು ಅದರಲ್ಲಿ ಈ ರೀತಿಯ ಜನರೆಲ್ಲಾ ಇದ್ದಾರೆಂದು ಹೇಳುತ್ತ ಹೀರೋ ಕ್ಯಾರೆಕ್ಟರ್‌ ಕುರಿತು ಹೇಳಿದೆ. ಇದನ್ನು ಆದಷ್ಟು ನೈಜವಾಗಿ ಚಿತ್ರೀಕರಿಸೋಣ ಅಂತ ನನಗಿರುವ ಆಸೆಯನ್ನು ಹೇಳಿಕೊಂಡಿದ್ದೆ.

ರಾಜ್‌ಕುಮಾರ್‌ ಖುಷಿಪಟ್ಟರು. ಚಿತ್ರದ ಕತೆಗಾಗಿ ಮಾಡಿಕೊಂಡ ತಯಾರಿಗಳನ್ನೆಲ್ಲ ಆಸಕ್ತಿಯಿಂದ ಗಮನಿಸಿ ಒಳ್ಳೆಯ ನಿರ್ದೇಶಕನಾಗುತ್ತೀಯಾ ಎಂದು ಮೆಚ್ಚಿಕೊಂಡರು. ಆಮೇಲೆ ನಾನು ಕತೆ ಹೇಳಿದೆ. ಸರಿಯಾಗಿ ನೆನಪಿಲ್ಲ. ಸಾಮಾನ್ಯವಾಗಿ ನಾನು ಕತೆ ಹೇಳುವಾಗ ಒಂದು ಟ್ರಾನ್ಸ್‌ನಲ್ಲಿ ಹೇಳುತ್ತ ಹೋಗುತ್ತೇನೆ. ಬಹುಶಃ ಆ ದಿನವೂ ನಾನು ಅದೇ ರೀತಿ ಕತೆ ಹೇಳಿರಬೇಕು.

ಡಾ.ರಾಜ್‌ಕುಮಾರ್‌ ಆಸಕ್ತಿಯಿಂದ ಕತೆ ಕೇಳುತ್ತಿದ್ದರು. ಅವರ ಜೊತೆಯಲ್ಲಿ ಕತೆ ಕೇಳಲು ವರದಪ್ಪ ಇರಲೇಬೇಕಿತ್ತು. ನನಗೆ ಅನ್ನಿಸುವ ಪ್ರಕಾರ ಅವರಿಬ್ಬರೂ ಸೇರಿದಾಗ ಅದೊಂದು ಪರಿಪೂರ್ಣ ಚರ್ಚೆಗೆ ಅವಕಾಶ ಒದಗಿಸುತ್ತಿತ್ತು. ಏಕೆಂದರೆ ವರದಪ್ಪ ಒಟ್ಟಾರೆ ಕತೆಯ ಗ್ರಾಫ್‌ ನೋಡುತ್ತಿದ್ದರು. ಓಹೋ, ಕತೆ ಹೀಗೆ ಶುರುವಾಗಿ ಹೀಗೆಲ್ಲಾ ಆಗಿ ಅಲ್ಲೊಂದು ತಿರುವು ಬಂದು ಹೀಗೆ ಮುಗಿಯುತ್ತದೆ ಎಂದು ಚಿತ್ರದ ಕತೆಯನ್ನು ಅವರು ಒಟ್ಟಾರೆಯಾಗಿ ಗ್ರಹಿಸುತ್ತಿದ್ದರು. ರಾಜ್‌ಕುಮಾರ್‌ ಹೇಳಿಕೇಳಿ ಒಬ್ಬರು ಕಲಾವಿದರು. ಅವರು ಪ್ರತಿ ಸೀನ್‌ನ ಒಳಕ್ಕೆ ಇಳಿಯುತ್ತಿದ್ದರು. ಯಾವ್ಯಾವ ಸೀನ್‌ನಲ್ಲಿ ಏನೇನಿದೆ ಎಂದು ಕೇಳುತ್ತ ಅದರೊಳಕ್ಕೆ ಪ್ರವೇಶ ಮಾಡುತ್ತಿದ್ದರು. `ಅಲ್ಲಿ ಕಾರು ನಿಲ್ಲುತ್ತೆ. ಅಲ್ಲಿಂದ ಇಳಿದ ಹೀರೋ ಹಾಗೆ ಮುಂದೆ ಬಂದು ಹೀಗೆ ಮಾಡುತ್ತಾನೆ’ ಎಂದೆಲ್ಲ ಮನನ ಮಾಡುತ್ತ ಅವರು ಕತೆಯನ್ನು ಕೇಳುತ್ತಿದ್ದರು. ಅಲ್ಲೇ ಮೆಚ್ಚುಗೆ ವ್ಯಕ್ತಪಡಿಸುತ್ತ ಹೇಳುವಾತನಿಗೆ ಖುಷಿ ಕೊಡುತ್ತಿದ್ದರು.

ಆದರ್ಶಗಳ ಚಿಂತನೆಯಲ್ಲಿ ಇದ್ದ ಕಾಲ ಅದು. ನಾನು ಅವರಿಗೆ ಕೇಳಿದ ಮೊದಲ ಪ್ರಶ್ನೆ ನನಗೆ ಈಗಲೂ ನೆನಪಿದೆ. ನಾನು ಕೇಳಿದ್ದೆ: `ನಿಮ್ಮ ದೃಷ್ಟಿಯಲ್ಲಿ ಸಮಾಜ ಸೇವೆ ಅಂದರೆ ಏನು?’ ಅಂತ. `ಸಮಾಜ ಅಂದರೆ ಯಾರು? ನಾನು, ನೀವು, ಅಕ್ಕ, ತಂಗಿ, ಅಣ್ಣ, ಅಪ್ಪ ಇವರೆಲ್ಲ ತಾನೇ? ಅವರೆಲ್ಲ ಅವರವರ ಸೇವೆಯನ್ನು ಸರಿಯಾಗಿ ಮಾಡಿಕೊಂಡರೆ ಅದೇ ಸಮಾಜಸೇವೆ’ ಎಂದು ರಾಜ್‌ಕುಮಾರ್‌ ಉತ್ತರ ಕೊಟ್ಟಿದ್ದರು. ಈ ಮಾತಿನಲ್ಲಿ ಎಷ್ಟು ಸೊಗಸಾದ ಅರ್ಥ ಇದೆ ನೋಡಿ.

`ಓಂ’ ಚಿತ್ರೀಕರಣ ಶುರುವಾಯಿತು. ಒಂದು ದೃಷ್ಟಿಯಲ್ಲಿ ನನಗೆ ಸರಿಯಾದ ಬ್ಯಾನರ್‌, ಸರಿಯಾದ ಹೀರೋ ಸಿಕ್ಕಿದ ಮೊದಲ ಚಿತ್ರ ಅದು. ಕತೆಯನ್ನು ವರದಪ್ಪ ಮತ್ತು ರಾಜ್‌ಕುಮಾರ್‌ ಇಷ್ಟಪಟ್ಟಿದ್ದರು. ಚಿತ್ರೀಕರಣ ನಡೆಯುತ್ತಿರುವಾಗಲೂ ಯಾವಾಗೋ ಒಮ್ಮೆ ಬಂದಿದ್ದರು. ಶಿವರಾಜ್‌ಕುಮಾರ್‌ ಅವರಿಗಂತೂ ನಾಲ್ಕನೇ ದಿನಕ್ಕೇ ಚಿತ್ರೀಕರಣ ಖುಷಿಕೊಟ್ಟು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ನನ್ನನ್ನು ಹೋಲಿಸಿದ್ದರು. ಹೀಗಿದ್ದರೂ ಕೆಲವರಿಗೆ ಅನುಮಾನಗಳಿದ್ದವು. `ಅವರನ್ನು ಯಾರೂ ಏನೂ ಡಿಸ್ಟರ್ಬ್‌ ಮಾಡಬೇಡಿ’ ಅಂತ ಈ ಹಂತದಲ್ಲಿ ವರದಪ್ಪನವರು ಹೇಳಿದ್ದರಂತೆ. ಹೀಗಾಗಿ ಚಿತ್ರವನ್ನು ಅಂದುಕೊಂಡಂತೆ ಚಿತ್ರೀಕರಿಸುವುದು ಸಾಧ್ಯವಾಯಿತು.

ಚಿತ್ರೀಕರಣ ಮುಗಿಯಿತು. ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೆಲ್ಲ ಮುಗಿದು ಮೊದಲ ಕಾಪಿ ಬಂತು. ಸಿನಿಮಾ ಸೆನ್ಸಾರ್‌ ಆಗಬೇಕು. ಈ ಹಂತದಲ್ಲಿ ವರದಪ್ಪ ಮತ್ತು ರಾಜ್‌ಕುಮಾರ್‌ ಗಾಜನೂರಿಗೆ ಹೋಗಿಬಿಟ್ಟಿದ್ದರು. ಹೀಗಾಗಿ ಅವರು ಸಿನಿಮಾ ನೋಡಿರಲಿಲ್ಲ.

ಸೆನ್ಸಾರ್‌ ಮಂಡಳಿ ಒಂದಿಷ್ಟು ಕಟ್‌ಗಳನ್ನು ಸೂಚಿಸಿತ್ತು. ಅದರಲ್ಲಿ ಕೆಲವಷ್ಟನ್ನು ನಾನು ಅರೆಮನಸ್ಸಿನಿಂದ ಒಪ್ಪಿಕೊಂಡಿದ್ದೆ. ಬೇರೆ ಕಟ್‌ಗಳನ್ನೂ ಒಪ್ಪಿಕೊಂಡುಬಿಡೋಣ ಎಂಬ ಒತ್ತಡ ಇತ್ತು. ಆದರೆ ಯಾಕೋ ನನಗೆ ಚಿತ್ರವನ್ನು ವರದಪ್ಪ ಮತ್ತು ರಾಜ್‌ಕುಮಾರ್‌ ನೋಡಬೇಕು ಅನಿಸಿತು. ಅವರೂ ಈ ಕಟ್‌ಗಳನ್ನು ಸೂಚಿಸಿದರೆ ಸೆನ್ಸಾರ್‌ ಜೊತೆ ವಾದ ಮಾಡುವುದು ಬೇಡ ಅಂದುಕೊಂಡಿದ್ದೆ. ಗಾಜನೂರಿನಿಂದ ಹಿಂದಿರುಗಿದವರೇ ಸಿನಿಮಾ ನೋಡಿದರು. ನಾನು ಕಟ್‌ಗೆ ಒಪ್ಪಿಕೊಂಡಿದ್ದನ್ನೂ ಕಟ್‌ ಮಾಡಕೂಡದು ಎಂದು ಇಬ್ಬರೂ ಹೇಳಿದರು. ಕೊನೆಗೆ ಸಿನಿಮಾ ಹೇಗಿದೆಯೋ ಹಾಗೆಯೇ ಹೊರಕ್ಕೆ ಬಂತು. ಜನರು, ವಿಮರ್ಶಕರು, ಬೇರೆ ಭಾಷೆಯವರು ಹೀಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.

ಇದಾಗಿ ಒಂದೆರಡು ವಾರ ಕಳೆದಿರಬೇಕು. ಸಿನಿಮಾ ಎಲ್ಲಾ ಕಡೆ ಚೆನ್ನಾಗಿ ಓಡುತ್ತಿತ್ತು. ಜನರಿಂದಲೂ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ. ಈ ಹಂತದಲ್ಲಿ ರಾಜ್‌ಕುಮಾರ್‌ ಮನೆಗೆ ಹೋದೆ. `ಓಂ’ ಚಿತ್ರಕ್ಕೆ ಸಿಕ್ಕಿದ ಪ್ರತಿಕ್ರಿಯೆಯಿಂದ ಮನಸ್ಸು ಬ್ಲ್ಯಾಂಕ್‌ ಆಗಿತ್ತು. ಮುಂದೇನು ಎನ್ನುವುದು ಗೊತ್ತಿರಲಿಲ್ಲ.

ಹೋಗುತ್ತಲೇ ನನ್ನ ಮುಖ ನೋಡಿದ ರಾಜ್‌ಕುಮಾರ್‌ ಆಶ್ಚರ್ಯಪಟ್ಟರು. ಯಾಕೆ ಹೀಗಿದ್ದೀರಿ ಎಂದು ಕೇಳಿದರು. `ಸಿನಿಮಾ ಚೆನ್ನಾಗಿ ಓಡುತ್ತಿದೆ. ನೀವು ಫ್ಲಾಪ್‌ ಸಿನಿಮಾ ಕೊಟ್ಟವರಂತೆ ಮುಖ ಮಾಡಿಕೊಂಡಿದ್ದೀರಿ’ ಎಂದು ಪ್ರೀತಿಯಿಂದ ಗದರಿದರು. ನನಗೆ ಆ ದಿನ ಕಣ್ಣೀರೇ ಬಂದುಬಿಟ್ಟಿತ್ತು.

ಹೀಗೆ `ಓಂ’ ಚಿತ್ರ ಮಾಡಿದ ದಿನಗಳನ್ನು ಮಾಡಿಕೊಂಡರೆ ರಾಜ್‌ಕುಮಾರ್‌ ಜೊತೆ ಕಳೆದ ಕ್ಷಣಗಳೇ ಬುತ್ತಿ ಬಿಚ್ಚಿಕೊಳ್ಳುತ್ತವೆ.

(`ಓಂ’ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್‌ ವತಿಯಿಂದ ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಿಸಿದ್ದರು. ಆ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭೂಗತ ಜಗತ್ತು, ಅಲ್ಲಿರುವ ಆಯಿಲ್‌ ಧಂಧೆಯ ನಡುವೆ ಅರಳುವ ಪ್ರೇಮಕತೆಯ ಚಿತ್ರ ಆ ದಿನಗಳಲ್ಲಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತ್ತು)

3 Comments

  1. Posted April 11, 2007 at 12:53 pm | Permalink

    Dr. Rajkumar will be remembered for his simplicity and his love for the society.

  2. Posted April 27, 2007 at 12:47 pm | Permalink

    *****
    ****
    ***
    **
    *
    http://feketefene.wordpress.com/2007/04/26/ignite-rocks/
    GOOD MUSIC! Check it out!

  3. raja
    Posted August 18, 2007 at 6:25 am | Permalink

    rajkumar was selfish and gaandu he did nothing to the people after is death lot of properties ware lossed. after his death the kannada film industry has improved, no politics,

Post a Comment

Your email is never published nor shared. Required fields are marked *
*
*