ಕತೆ: ಚಿಲ್ಲರೆ

ಹೋದ್ಯೋಗಿ ವಿಕಾಸ್‌ ಜೊತೆ ಮಣಿಪಾಲ್‌ ಸೆಂಟರ್‌ನ ಎರಡನೇ ಮಹಡಿಯಲ್ಲಿ ಕುಳಿತು ಮೊನ್ನೆ ಹರಟೆ ಹೊಡೆಯುತ್ತಿದ್ದೆ. ಹಾಗೆ ಹರಟೆ ಹೊಡೆಯುತ್ತಿದ್ದ ಹಂತದಲ್ಲಿ ಥಟ್ಟನೇ ಏನೋ ಹೊಳೆದಂತಾಗಿ ಇಂಥದ್ದೊಂದು ಕತೆ ಬರೆಯೋಣ ಅನಿಸಿತು. ಹಾಗೆ ಅನಿಸಿದ ತಕ್ಷಣ ಅರ್ಧ ಗಂಟೆ ಕುಳಿತು ಇದನ್ನು ಬರೆದೆ. ಓದಿ ಪ್ರತಿಕ್ರಿಯಿಸಿ. ಅಂದಹಾಗೆ ಈ ಕತೆಯಲ್ಲಿ ಬರುವ ಪಾತ್ರಕ್ಕೂ ವಿಕಾಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ.…………………………

…………… 

ಇನ್ನೂರು ಚಿಲ್ಲರೆ ದೇಶಗಳ ಹಿರಿಯಣ್ಣ ಅಮೆರಿಕಾ. ಆ ದೇಶದಲ್ಲಿರುವ ಎಷ್ಟೋ ನಗರಗಳಲ್ಲಿ ಯಾವುದೋ ಒಂದು ನಗರ ವಾಷಿಂಗ್ಟನ್‌. ಅಮೆರಿಕದ ನಕ್ಷೆಯಲ್ಲಿ ಕ್ಷುದ್ರ ಹುಳುವಿನಂತೆಯೂ ಕಾಣಿಸದ ವಾಷಿಂಗ್ಟನ್‌ ಎಂಬ ನಗರದಲ್ಲಿ ಜೇಡರ ಬಲೆಯಂತೆ ಹಬ್ಬಿರುವ ಎಷ್ಟೋ ಬಡಾವಣೆಗಳಲ್ಲಿ ಯಾವುದೋ ಒಂದು ಬಡಾವಣೆ. ಆ ಬಡಾವಣೆಗಳಲ್ಲಿ ಉದ್ದಕ್ಕೂ ಅಡ್ಡಕ್ಕೂ ಎಳೆಯಲಾದ ಗೆರೆಗಳಂತೆ ಕಾಣಿಸುವ ಎಷ್ಟೋ ರಸ್ತೆಗಳಲ್ಲಿ ಯಾವುದೋ ಒಂದು ರಸ್ತೆ. ಆ ರಸ್ತೆಯಲ್ಲಿರುವ ಎಷ್ಟೋ ಕಟ್ಟಡಗಳಲ್ಲಿ ಒಂದು ಕಟ್ಟಡ.

ಅದು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಕಚೇರಿ.

ಆ ಕಚೇರಿಯ ಕಟ್ಟಡದಲ್ಲಿರುವ ಎಷ್ಟೋ ಮಹಡಿಗಳಲ್ಲಿ ಒಂದು ಹದಿಮೂರನೇ ಮಹಡಿ. ಆ ಮಹಡಿಯಲ್ಲಿ ಕಾಣಿಸುವ ಎಷ್ಟೋ ಚೌಕಗಳಲ್ಲಿ ಯಾವುದೋ ಒಂದು ಚೌಕದಲ್ಲಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಸಂಪಾದಕೀಯ ಆಫೀಸು. ಆ ಆಫೀಸಿನಲ್ಲಿರುವ ಹತ್ತಾರು ಜನರಲ್ಲಿ ಎಷ್ಟೋ ಜನರು ಸಂಪಾದಕೀಯ ವಿಭಾಗದವರು. ಅವರಲ್ಲಿ ಒಬ್ಬೊಬ್ಬರದು ಒಂದೊಂದು ವಿಭಾಗ. ರಾಜಕೀಯ, ಕ್ರೈಮು, ಸಿನಿಮಾ, ಸಮಾಜ, ಸೆಕ್ಸು, ಒಪ್ಪಿಗೆ, ತಪ್ಪೊಪ್ಪಿಗೆ ಹೀಗೆ. ಇಂಥಾ ಹತ್ತಾರು ವಿಭಾಗಗಳಲ್ಲಿ ವಿಜ್ಞಾನ ಪುಟವೂ ಒಂದು. ಆ ವಿಭಾಗದಲ್ಲಿ ಕೆಲಸ ಮಾಡುವ ಹತ್ತಾರು ಪತ್ರಕರ್ತರಲ್ಲಿ ಲಕ್ಷಣ್‌ ಹೂಗಾರ್‌ ಅಲಿಯಾಸ್‌ ಲ್ಯಾಕ್ಸ್‌ನ್‌ ಹ್ಯೂಗರ್‌ ಸಹ ಒಬ್ಬ.

ಲಕ್ಷಣ್‌ ಭಾರತವೆಂಬ ದೇಶದ ನಕಾಶೆಯಲ್ಲಿ ಅವರೆಕಾಳಿನಂತೆ ಕಾಣಿಸುವ ಕರ್ನಾಟಕವೆಂಬ ರಾಜ್ಯದಲ್ಲಿರುವ ಎಷ್ಟೋ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡದ ಎಷ್ಟೋ ತಾಲೂಕುಗಳಲ್ಲಿ ಒಂದಾಗಿರುವ ಯಲ್ಲಾಪುರದವನು. ಹುಟ್ಟಿದ್ದು ಯಲ್ಲಾಪುರ. ಓದಿದ್ದು ಧಾರವಾಡ, ದೆಹಲಿ, ಲಂಡನ್‌. ವಿಷಯ: ಪತ್ರಿಕೋದ್ಯಮ. ದೇಶ ವಿದೇಶಗಳಲ್ಲಿ ಓದಿದ ಲಕ್ಷಣ್‌, ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ವಿಜ್ಞಾನ ಪುಟದ ಜವಾಬ್ದಾರಿ ಹೊತ್ತುಕೊಳ್ಳುವ ಹಾದಿಯಲ್ಲಿ ಲ್ಯಾಕ್ಸ್‌ನ್‌ ಹ್ಯೂಗರ್‌ ಆಗಿ ಬದಲಾಗಿದ್ದ.

ಇಂಥ ಈತ ಯಾವುದೋ ಇಸಿವಿಯ ಯಾವುದೋ ತಿಂಗಳಿನ ಯಾವುದೋ ದಿನ ರಾತ್ರಿ ಎಷ್ಟೋ ಗಂಟೆಯ ಹೊತ್ತಿಗೆ ಮೊದಲೇ ವಿವರಿಸಿದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಕಚೇರಿಯ ಮೂಲೆಯಲ್ಲಿ ಕುಳಿತು ಒಂದು ಲೇಖನವನ್ನು ತಿದ್ದುತ್ತಿದ್ದ. ಆ ಲೇಖನದ ವಸ್ತು: ಬಿಗ್‌ಬ್ಯಾಂಗ್‌ ಥಿಯರಿ.

ಬಿಲಿಯಂತರ ವರ್ಷಗಳ ಹಿಂದೆ ಮಹಾಸ್ಫೋಟವೊಂದು ಸಂಭವಿಸಿ ಅದರಿಂದ ಆದ ಬಿಲಿಯಂತರ ತುಣುಕುಗಳಲ್ಲಿ ಇರುವ ಸಣ್ಣ ತುಣುಕುಗಳಲ್ಲಿ ಒಂದು ಸಣ್ಣ ತುಣುಕಾದ ಭೂಮಿ ಅನಂತದಲ್ಲಿ ಈಗಲೂ ಚಲಿಸುತ್ತಿದೆ ಇತ್ಯಾದಿ ವಿಷಯಗಳಿದ್ದ ಲೇಖನ ಅದು. ಹೀಗೆ ಈ ಲೇಖನದ ತಿದ್ದುವಿಕೆಯ ಕೆಲಸದಲ್ಲಿ ಕಳೆದು ಹೋಗಿದ್ದಾಗ ಆತನಿಗೆ ಅಂದರೆ ಲಕ್ಷಣ್‌ ಹೂಗಾರನೆಂಬ ಯಲ್ಲಾಪುರ ಮೂಲದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ವಿಜ್ಞಾನ ವಿಭಾಗದ ಸಂಪಾದಕನಿಗೆ ತನ್ನ ಜೊತೆ ಧಾರವಾಡದಲ್ಲಿ ಪತ್ರಿಕೋದ್ಯಮ ಓದಿದ ಸಹಪಾಠಿ ರವಿ ಪವಾರ್‌ ಏನು ಮಾಡುತ್ತಿರಬಹುದು ಎಂಬ ಆಲೋಚನೆ ಬಂದು ಕೆಲಸ ಮುಂದುವರೆಸುವುದು ಸಾಧ್ಯವಾಗಲೇ ಇಲ್ಲ.

ಲಕ್ಷಣ್‌ ಲೇಖನ ತಿದ್ದುವ ಕೆಲಸವನ್ನು ನಿಲ್ಲಿಸಿ ಎದ್ದು ನಿಂತ. ಕಿಟಕಿಯ ಪಕ್ಕ ಬಂದು ನಿಂತು ಕಾಣುತ್ತಿದ್ದ ಲಕ್ಷಾಂತರ ಬೆಳಕಿನ ಬಿಂದುಗಳನ್ನು ನೋಡಿ ಪುನಃ ಕೆಲಸಕ್ಕೆ ಕೂರಲು ವಿಫಲ ಪ್ರಯತ್ನ ನಡೆಸಿದ. ರವಿ ಪವಾರ್‌ ಈ ಕ್ಷಣದಲ್ಲಿ ಏನು ಮಾಡುತ್ತಿರಬಹುದು ಎನ್ನುವ ವಿಷಯ ಅವನನ್ನು ತೀವ್ರವಾಗಿ ಕಾಡತೊಡಗಿತು.

ಬರೆಯಲಾಗುತ್ತಿಲ್ಲ.

ರವಿ ಏನು ಮಾಡುತ್ತಿರಬಹುದು?

ಓದಲಾಗುತ್ತಿಲ್ಲ.

ರವಿ ಏನು ಮಾಡುತ್ತಿರಬಹುದು?

ತಿದ್ದಲಾಗುತ್ತಿಲ್ಲ.

ರವಿ ಏನು ಮಾಡುತ್ತಿರಬಹುದು?

ಆತನಿಗೆ ಕೆಲಸ ಮುಂದುವರೆಸುವುದೇ ಕಷ್ಟವಾಗಿ ತಕ್ಷಣ ರವಿಯನ್ನು ಸಂಪರ್ಕಿಸಬೇಕು ಅನಿಸತೊಡಗಿತು. ಇಷ್ಟಕ್ಕೂ ರವಿ ಯಾಕೆ ನೆನಪಾದ ಮತ್ತು ಆತ ಈಗ ಏನು ಮಾಡುತ್ತಿದ್ದಾನೆ ಎಂದು ಗೊತ್ತಾಗಿ ತನಗೆ ಏನಾಗಬೇಕು ಎಂದು ಅವನಿಗೆ ಅರ್ಥವಾಗಲಿಲ್ಲ.

ರವಿ ಪವಾರ್‌ನನ್ನು ಆತ ಕೊನೆಯ ಸಲ ನೋಡಿ ಈಗ ಕನಿಷ್ಠ ಹತ್ತು ವರ್ಷಗಳಾದರೂ ಆಗಿರಬೇಕು. ಮೊದಲೇ ಹೇಳಿದಂತೆ ಅವರೆಕಾಳಿನಂತೆ ಕಾಣುವ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಹೊರಡುವ ನೂರಾರು ಪತ್ರಿಕೆಗಳಲ್ಲಿ ಒಂದು ಕನ್ನಡ ಪತ್ರಿಕೆಯಲ್ಲಿ ಈಗ ರವಿ ಪವಾರ್‌ ಕೆಲಸ ಮಾಡುತ್ತಿದ್ದಾನೆ ಎನ್ನುವುದಷ್ಟೇ ಆತನಿಗೆ ನೆನಪಿತ್ತು. ಹೀಗಿದ್ದರೂ ಆತನನ್ನು ಹುಡುಕುವುದು ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಲಕ್ಷಣ್‌ಗೆ ಕಷ್ಟವಾಗಲಿಲ್ಲ.

ಆತ ಪತ್ತೆ ಹಚ್ಚಿದ. ಬಿಗ್‌ ಬ್ಯಾಂಗ್‌ ಥಿಯರಿ ಲೇಖನವನ್ನು ತಾನು ತಿದ್ದುತ್ತಿದ್ದ ಹೊತ್ತಿನಲ್ಲಿ ರವಿ ಪವಾರ್‌ ಏನು ಮಾಡುತ್ತಿದ್ದ ಎನ್ನುವುದು ಆತನಿಗೆ ಗೊತ್ತಾಯಿತು.

ಅಷ್ಟೊತ್ತಿಗೆ ಬೆಂಗಳೂರು ನಗರದಲ್ಲಿ ಇನ್ನೂ ಬೆಳಿಗ್ಗೆ. ರವಿ ಪವಾರ್‌ ಆ ದಿನ ಬೆಳಿಗ್ಗೆ ಲಗುಬಗೆಯಿಂದ ಎದ್ದಿದ್ದ. ಆತ ಸಾಮಾನ್ಯವಾಗಿ ನೋಡಿಕೊಳ್ಳುತ್ತಿದ್ದುದು ಕಾರ್ಪೊರೇಷನ್‌ ಬೀಟ್‌. ಆ ದಿನ ಯಾರೋ ರಜೆ ಹೋಗಿ ರವಿ ಪವಾರ್‌ಗೆ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯನ್ನು ವರದಿ ಮಾಡುವ ಕೆಲಸ ವಹಿಸಲಾಗಿತ್ತು. ಲಗುಬಗೆಯಿಂದ ತಿಂಡಿ ತಿಂದು ಹೊರಡುತ್ತಿದ್ದ ರವಿ ಪವಾರ್‌ ಹಾಗೇ ಹೊರಟು ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಅಷ್ಟರಲ್ಲಿ ಆತನ ಮೊಬೈಲು ರಿಂಗಣಿಸಿತು. ಆ ಕಡೆ ಚೀಫ್‌ ರಿಪೋರ್ಟರ್‌ ಲೈನಿನಲ್ಲಿದ್ದ.

`ರವಿ ಏನ್‌ ಮಾಡ್ತಿದೀರಿ?’

`ಅದೇ ಸಾರ್‌ ಕಡ್ಲೆಕಾಯಿ ಪರಿಷೆ ಕವರ್‌ ಮಾಡೋದಕ್ಕೆ ಹೊರಡ್ತಿದೀನಿ’

`ಓಹ್‌, ಇನ್ನೂ ನೀವು ಹೊರಟಿಲ್ವಾ?’

`ಅಯ್ಯೋ ಈಗ ಹೊರಟೆ ಸಾರ್‌. ಗೇಟ್‌ ಹತ್ರ ಇದೀನಿ’

`ಪರವಾಗಿಲ್ಲ. ಹೊರಡದೇ ಇರೋದೆ ಒಳ್ಳೆಯದಾಯಿತು. ಈಗ ನೀವು ಒಂದು ಕೆಲಸ ಮಾಡಬೇಕು’

`ಅಯ್ಯೋ ಏನ್ಸಾರ್‌?’

`ಸೀದಾ ಹೋಟೆಲ್‌ ಕಾನಿಷ್ಕ ಹತ್ರ ಹೋಗಿ. ಅಲ್ಲಿಂದ ಕ್ಯಾಬ್‌ನಲ್ಲಿ ನಂದಿನಿ ಲೇಔಟಿನಲ್ಲಿ ಇರುವ ಪ್ಲೇಗ್‌ ಮಾರಮ್ಮನ ದೇವಸ್ಥಾನಕ್ಕೆ ಕರ್ಕೊಂಡ್‌ ಹೋಗ್ತಾರೆ. ಅಲ್ಲೊಂದು ಪಿಚ್ಚರ್‌ ಮುಹೂರ್ತ ಇದೆ’

`ಹಾಗಿದ್ರೆ ಕಡ್ಲೆಕಾಯಿ ಪರಿಷೆ?’

`ಅಯ್ಯೋ ಅದನ್ನ ಕಲೆಕ್ಟ್‌ ಮಾಡಿದ್ರಾಯ್ತು ಬಿಡ್ರಿ’

ಹೀಗೆ ರವಿ ಪವಾರ್‌ ಹೋಗುವ ದಿಕ್ಕು ಬದಲಾಯಿತು. ಬಸವನಗುಡಿ ಕಡೆ ಹೊರಟಿದ್ದವನು ಕಾನಿಷ್ಕ ಕಡೆ ಹೊರಟ. ಪಿಚ್ಚರ್‌ ಬ್ಯಾನರ್‌ ಹೆಸರಲ್ಲೊಂದು ಜ್ಯೂಸ್‌ ಕುಡಿದು ಕಾನಿಷ್ಕಾದಿಂದ ಕ್ಯಾಬ್‌ ಹತ್ತಿ ಪ್ಲೇಗ್‌ಮಾರಮ್ಮನ ದೇವಸ್ಥಾನದ ಬಳಿ ಬರಲಾಯಿತು.

ಬಹುಶಃ ಪ್ಲೇಗ್‌ ಮಾರಮ್ಮನ ಗುಡಿಯ ಬಳಿ ಸಿನಿಮಾ ಪತ್ರಕರ್ತರ ಕ್ಯಾಬ್‌ ಬಂದು ನಿಲ್ಲುವ ಹೊತ್ತಿಗೆ ಸರಿಯಾಗಿ ಪಶ್ಚಿಮದ ವಾಷಿಂಗ್ಟನ್‌ ಎಂಬ ನಗರದಲ್ಲಿ ರಾತ್ರಿಯಾಗಿತ್ತು ಮತ್ತು ಲಕ್ಷಣ್‌ ಹೂಗಾರ್‌ ಕಂಪ್ಯೂಟರ್‌ ಎದುರು ಕುಳಿತಿದ್ದ. ಕುಳಿತು ದೊಡ್ಡ ದೊಡ್ಡ ಬಿಂದುಗಳ ನಡುವೆ ಇರುವ ಸಣ್ಣ ಬಿಂದುಗಳಲ್ಲಿ ಅತಿ ಸಣ್ಣ ಬಿಂದುವಿನಂತಿರುವ ಭೂಮಿ ಈಗಲೂ ಅನಂತದಲ್ಲಿ ಚಲಿಸುತ್ತಿದೆ ಇತ್ಯಾದಿ ಸಂಗತಿಗಳನ್ನು ಓದುತ್ತಿದ್ದ. ಹಾಗೆ ಓದುತ್ತಿದ್ದ ಹೊತ್ತಿನಲ್ಲಿ ಈ ಕಡೆ ಪತ್ರಿಕಾಗೋಷ್ಠಿ ಶುರುವಾಗಿತ್ತು.

ಪ್ಲೇಗಮ್ಮ ಪಿಚ್ಚರ್ಸ್‌ ಬ್ಯಾನರ್‌ ವತಿಯಿಂದ ತಯಾರಾಗುತ್ತಿರುವ ಮಹತ್ವಾಕಾಂಕ್ಷೆಯ ಡಿಫ್ರೆಂಟ್‌ ಚಿತ್ರ ಇದು ಎಂದು ಹತ್ತು ನಿರ್ಮಾಪಕರ ತಂಡದಲ್ಲಿ ಒಬ್ಬರಾದ ಮತ್ತು ಚಿತ್ರದಲ್ಲಿ ಒಂದು ಪಾತ್ರವನ್ನೂ ನಿರ್ವಹಿಸುತ್ತಿರುವ ಮರಿಸ್ವಾಮಿ ಗೌಡ್ರು ಮಾತಾಡುತ್ತಿದ್ದರು. ಹಾಗೆ ಮಾತಾಡುತ್ತಿದ್ದ ಹೊತ್ತಿನಲ್ಲಿ ಕುರ್ಚಿಯಲ್ಲಿ ಕುಳಿತು ಪತ್ರಕರ್ತರು ಬರೆದುಕೊಳ್ಳುತ್ತಿದ್ದರು. ಛಾಯಾಗ್ರಾಹಕರು ಫೋಟೋ ತೆಗೆದುಕೊಳ್ಳುತ್ತಿದ್ದರು. ಟೀವಿ ಕ್ಯಾಮರಾಗಳು ಮರಿಸ್ವಾಮಿ ಗೌಡ್ರ ವಿವಿಧ ಭಂಗಿಗಳನ್ನು ಸೆರೆಹಿಡಿಯಲು ಮುತ್ತಿಗೆ ಹಾಕಿದ್ದವು.

ಇಂಥದ್ದೊಂದು ವಿಲಕ್ಷಣ ವಾತಾವರಣದಲ್ಲಿ ಇದ್ದಕ್ಕಿದ್ದಂತೆ ಸಂಚಲನೆ ಸೃಷ್ಟಿಯಾಯಿತು. ರವಿ ಪವಾರ್‌ ಮುಂದಿನ ಸಾಲಿನಲ್ಲಿ ಕುಳಿತಿದ್ದ. ಹಿಂದಿನ ಸಾಲಿನಲ್ಲಿದ್ದ ಮುದ್ರಣ ಮಾಧ್ಯಮದ ಪತ್ರಕರ್ತರು, ಟೀವಿ ಕ್ಯಾಮರಾಮನ್‌ಗಳಿಂದಾಗಿ ಮರಿಸ್ವಾಮಿ ಗೌಡ್ರ ಮುಖವೇ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾ ಛಾಯಾಗ್ರಾಹಕರು ಟೀವಿಯವರಿಗೆ ಬೇರೆ ಪ್ರೆಸ್‌ಕಾನ್ಫೆರೆನ್ಸ್‌ ಮಾಡಿಸಬೇಕು ಇತ್ಯಾದಿ ಮಾತಾಡುತ್ತಿರುವಾಗ ಮುಂದಿನ ಸಾಲಿನಲ್ಲಿದ್ದ ಯಾವುದೋ ಕ್ಯಾಮರಾಮನ್‌ ಇನ್ಯಾವುದೋ ಟೀವಿ ಕ್ಯಾಮರಾಮನ್‌ರನ್ನು ಉದ್ದೇಶಪೂರ್ವಕವಾಗಿಯೋ ಅಕಸ್ಮಾತ್ತಾಗಿಯೋ ದೂಡಿಬಿಟ್ಟ.

ಇದರಿಂದ ಅಲ್ಲಿ ಹಠಾತ್ತನೆ ಗೊಂದಲಮಯ ಪರಿಸ್ಥಿತಿ ಉಂಟಾಯಿತು. ಮರಿಸ್ವಾಮಿ ಗೌಡ್ರು ಮಾತು ನಿಂತುಹೋಯಿತು. ಹಾಗೆ ದೂಡಿದ್ದರಿಂದ ಬಿದ್ದ ಟೀವಿ ಕ್ಯಾಮರಾಮನ್‌ ಎದ್ದು ನಿಂತು ಸ್ಟಿಲ್‌ ಕ್ಯಾಮರಾಮನ್‌ ಕಡೆ ಕೈ ಎತ್ತಿಕೊಂಡು ರಭಸದಿಂದ ನುಗ್ಗಿದ.

ಇದ್ಯಾವುದರ ಪರಿವೆಯೇ ಇಲ್ಲದ ರವಿ ಪವಾರ್‌ ಎಂಬ ಕಡ್ಲೆಕಾಯಿ ಪರಿಷೆ ಕವರ್‌ ಮಾಡಬೇಕಿದ್ದ ಕಾರ್ಪೊರೇಷನ್‌ ವ್ಯವಹಾರಗಳನ್ನು ನೋಡಿಕೊಳ್ಳುವ ಪತ್ರಕರ್ತ ಗೊಂದಲದಿಂದ ಈಚೆ ಬರಬೇಕೆಂದು ತೀರ್ಮಾನ ಮಾಡಿ ಎದ್ದು ನಿಂತ. ಆತ ಎದ್ದು ನಿಲ್ಲುವುದು ಮತ್ತು ಟೀವಿ ಕ್ಯಾಮರಾಮನ್‌ ಕೈ ಬೀಸುವುದು ಸರಿ ಹೋಗಿ ಜೋರಾಗಿ ಒಂದು ಹೊಡೆತ ಬಿತ್ತು.

ಹೀಗೆ ರವಿ ಪವಾರ್‌ಗೆ ಅನಿರೀಕ್ಷಿತವಾಗಿ ಕಪಾಳಮೋಕ್ಷವಾಯಿತು.

ಬಹುಶಃ ಸರಿಯಾಗಿ ಇದೇ ಸಮಯಕ್ಕೆ ದೂರದ ವಾಷಿಂಗ್ಟನ್‌ನಲ್ಲಿ ಲಕ್ಷಣ್‌ ಹೂಗಾರ್‌ಗೆ ಈ ಕ್ಷಣದಲ್ಲಿ ರವಿ ಏನು ಮಾಡುತ್ತಿರಬಹುದು ಎಂಬ ಯೋಚನೆ ಬಂದಿದ್ದಿರಬೇಕು. ರವಿ ಇಂತಿಂಥಾ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡು ಹೀಗೆ ವಿಚಿತ್ರವಾಗಿ ಹೊಡೆತ ತಿಂದ ಎನ್ನುವ ವಿಷಯ ಆತನಿಗೆ ಗೊತ್ತಾಯಿತು. ಹಾಗೆ ಗೊತ್ತಾದ ಆ ಕ್ಷಣದಲ್ಲಿ ಆತನ ಇಡೀ ದೇಹ ಕಂಪಿಸಿ ಕೈಯ್ಯಲ್ಲಿದ್ದ ಬಿಗ್‌ ಬ್ಯಾಂಗ್‌ ಥಿಯರಿ ಲೇಖನದ ಕರಡು ಪ್ರತಿ ನೆಲಕ್ಕೆ ಬಿದ್ದು ಸದ್ದಾಯಿತು. ಹಾಗೆ ಸದ್ದಾದ ಕ್ಷಣದಲ್ಲಿ ಆತನಿಗೆ ಏನೇನೋ ಸಂಗತಿಗಳು ಹೊಳೆದು ಆತ ಅನಂತದಲ್ಲಿರುವ ಸಣ್ಣ ಸಣ್ಣ ಬಿಂದುಗಳಲ್ಲಿ ಅತಿ ಸಣ್ಣ ಬಿಂದುವಾಗಿ ಬದಲಾಗಿ ಚಲಿಸತೊಡಗಿದ.

10 Comments

  1. Prashanth Rai
    Posted April 9, 2007 at 9:49 am | Permalink

    Fatastic short story.

  2. Prashanth Rai
    Posted April 9, 2007 at 9:51 am | Permalink

    Oops, it was fantastic infact, not fatastic. Spelling was always my problem, you know.

  3. Gundkal
    Posted April 9, 2007 at 10:50 am | Permalink

    Prashanth,
    Thank you very much for the comments.

  4. Posted April 10, 2007 at 12:06 pm | Permalink

    ನಮ್ಮ ದೈನಿಕದ ವಾಸ್ತವವನ್ನು ಫ್ಯಾಂಟಸಿಗೆ ತಿರುಗಿಸಿದ ಕ್ರಮ ಖುಷಿಕೊಟ್ಟಿತು. ಕತೆಗೊಂದು ಅಚಾನಕ್ ತಿರುವು ಕೂಡ ಸಿಕ್ಕಿದೆ. ಆದರೆ ಕತೆ ಇನ್ನೂ ಇದೆ ಅನ್ನಿಸುವಂತಿದೆ. ಉಳಿದ ಕತೆ ಅವರವರ ಭಾವಮಂಡಲದಲ್ಲಿ ಅರಳಿಕೊಳ್ಳಲಿ ಬಿಡಿ.
    ಜೋಗಿ

  5. Posted April 10, 2007 at 12:36 pm | Permalink

    Thank you for the comment.
    Yes, you are right. I have not finished the story. Will complete it some day.
    -Parameshwar

  6. Posted April 18, 2007 at 4:37 am | Permalink

    franz kafka na kathe nenpaithu.. nice one!

  7. krisgirish
    Posted June 2, 2007 at 9:01 pm | Permalink

    ಎನ್ರಿ ಸ್ವಾಮಿ ಇದು ಇಂಟ್ರಸ್ಟಿಂಗ್ ಆಗಿ ಎಂಡ್ ಮಾಡಿದೀರ,ಚನ್ನಾಗಿದೆ

  8. 1vibhu
    Posted June 18, 2007 at 8:30 pm | Permalink

    chennagide sir…
    melnotakke kathe sannadadaru
    vasthavada kade belaku chellutte
    lekhana shili chennagi mudidhe

  9. Vikram Hathwar
    Posted June 24, 2007 at 4:20 pm | Permalink

    ತಾನು ಅಭ್ಯಾಸ ಮಾಡುತ್ತಿರುವ ತತ್ವ ತನ್ನ ಮೇಲೆಯೇ ಅದರ ಲೀಲೆಗಳನ್ನು ತೋರುವ, ತೋರಿ ಹರಸಿದಂತಾಗಿ ಅವುಗಳು ತಂದೊಡ್ಡುವ ಸಾಕ್ಷಾತ್ಕಾರದ ವಿಚಿತ್ರ ಭಾವಮೌನದ ಬಗ್ಗೆ ಬರೆದಾಗ ಯಾರಿಗೆ ತಾನೆ ಇಷ್ಟವಾಗೊಲ್ಲ.

    ಕತೆ ಪೂರ್ತಿ ಮಾಡುವ ನಿಮ್ಮ ಆ ’ಸಮ್ ಡೇ’ ಎಂದೂ ಬಾರದಿರಲಿ :-)

    -ವಿಕ್ರಮ ಹತ್ವಾರ

  10. raghavendra
    Posted July 23, 2007 at 5:22 pm | Permalink

    NICE ONE …BUT kone sariyagillla ….

Post a Comment

Your email is never published nor shared. Required fields are marked *
*
*