ವಿಕಾಸ ನೇಗಿಲೋಣಿ ಬರಹ:ಈಸಬೇಕು ಇದ್ದು ಜೈಸಬೇಕು. ನಿಜ, ಕನ್ನಡದ ಹೀರೋಯಿನ್‌ಗಳೂ ಕೆಲವೊಮ್ಮೆ ಈಜುಡುಗೆ ತೊಡಬೇಕು, ಬರದಿದ್ದರೂ ಈಸಬೇಕು. ನಾಯಕಿಯರ ಮೈತುಂಬ ಬಟ್ಟೆ ಕೆಲವು ನಿರ್ಮಾಪಕರ ಸಾಮಾಜಿಕ ಸಮಸ್ಯೆ. ಅವರ ಪ್ರಕಾರ ಬಟ್ಟೆ ಕಿರಿದಾದರೆ ಅನುಮಾನವಿಲ್ಲ, ಸಿನಿಮಾ ಹಿಟ್ಟೇ, ಬಟ್ಟೆ ನಂಬಿದರೆ ನಿರ್ಮಾಪಕ ತಾ ಕೆಟ್ಟೆ!ಹೀರೋಯಿನ್‌ಗಳಿಗೆ ಬಟ್ಟೆ ಕೆಟ್ಟದು. ಐಟಂ ಸಾಂಗ್ ಸಿನಿಮಾಗಳ ಆರೋಗ್ಯಕ್ಕೆ ಒಳ್ಳೆಯದು. ಅವರ ಬಟ್ಟೆಯ ಅಳತೆ ಕಡಿಮೆಯಾದಷ್ಟೂ ಸಿನಿಮಾ ಗೆಲ್ಲುವ ಪ್ರಮೇಯ ಹೆಚ್ಚು. ಈ ಬಗ್ಗೆ ಸಂಶೋಧನೆ ಮಾಡಿದ ನಿರ್ಮಾಪಕರ ಪಟ್ಟಿ ದೊಡ್ಡದು. ಕಾಲೇಜಿನಲ್ಲಿ ಹುಡುಗಿಯರ ಬಟ್ಟೆ ಕಿರಿದಾದರೆ ಆಡಳಿತವರ್ಗ ಸಿಟ್ಟಾಗುತ್ತದೆ. ಡ್ರೆಸ್‌ಕೋಡ್ ಬಗ್ಗೆ ಕಾಲೇಜಲ್ಲಿ ಸೆಮಿನಾರು, ಪತ್ರಿಕೆಗಳಲ್ಲೂ ಸೆಮಿನಾರು, ಸಂಪ್ರದಾಯಸ್ಥ ಕುಟುಂಬದಲ್ಲಂತೂ ಈ ಬಗ್ಗೆ ಹುಯಿಲೋ ಹುಯಿಲು. ಸಾನಿಯಾ ಮಿನಿ ತೊಟ್ಟರೆ ಕಷ್ಟ, ಕಾಲ್‌ಸೆಂಟರ್ ಹುಡುಗಿಯರು ಸ್ಕರ್ಟ್‌ನಲ್ಲಿ ರಾತ್ರಿ ಮನೆ ಸೇರಿದರೆ ಕಷ್ಟ. ಆ ಆಕ್ಷೇಪ ಸಿನಿಮಾದ ವಿಷಯಕ್ಕೆ ಬಂದರೆ ಮೆಚ್ಚುಗೆ. ಇದಕ್ಕೆ ಕಾರಣ ಇಷ್ಟೇ, ಸಿನಿಮಾದ ಉದ್ದೇಶ ಜನರ ಮನರಂಜನೆ, ಮನರಂಜನೆಗೆ ಮೊದಲು ಕಣ್ಣಿಗೆ ರಂಜನೆ. ಕಣ್ಣಿಗೆ ರಂಜನೆ ಬೇಕಾದರೆ ಹೆಣ್ಣು ಇನ್ನಷ್ಟು ರೋಚಕವಾದರೆ ಚೆನ್ನ. ರೋಚಕತೆಗೆ ಇನ್ನೊಂದು ಹೆಸರೇ ಕನಿಷ್ಠ ವಸ್ತ್ರಸಂಹಿತೆ. ಏಕೆಂದರೆ ಹೋಗಿಹೋಗಿ ಸಿನಿಮಾ ಕಾಂತಾಸಂಹಿತೆ!
ಬಯಲಾಗದೇ ಯಾವ ಹೀರೋಯಿನ್‌ಗಳಿಗೂ ಆಲಯ ಸಿಗದಿಲ್ಲಿ. ರಾಧಿಕಾ ಎಂಬ ಹೀರೋಯಿನ್ ಕನ್ನಡದ ತೆರೆ ಮೇಲೆ ಬಟ್ಟೆಯೊಂದಿಗೆ ಬಂದರೂ ಕೊನೆಕೊನೆಗೆ ಬಟ್ಟೆಯ ಅಳತೆ ಇಳಿಸಿಕೊಂಡರು, ಅದರಿಂದಲೇ ಚಿತ್ರರಂಗದಲ್ಲಿ ಉಳಿದೆ ಎಂದುಕೊಂಡರು. ರಕ್ಷಿತಾ ಚಿತ್ರರಂಗ ಪ್ರವೇಶಿಸಿದಾಗಲೂ ಅವರಿಗೆ ಅರಿವೇ ಗುರುವಾಗಿತ್ತು. ಆಮೇಲೆ ಅರಿವೆ ವೈರಿಯಾಯಿತು. ಅವರದೇ ಹೇಳಿಕೆ ಪ್ರಕಾರ `ಕಲಾಸಿಪಾಳ್ಯ ಸಿನಿಮಾ ಗೆದ್ದಿದ್ದು ನನ್ನ ವಸ್ತ್ರತ್ಯಾಗದಿಂದ’. ನಂತರದಲ್ಲಿ ಅವರು ಎಕ್ಸ್‌ಪೋಸಿಂಗ್‌ಗೆ ಅಣಿಯಾದರು, ನಿರ್ಮಾಪಕರು ಅವರಿಗೆ ಋಣಿಯಾದರು, ಒಂದು ಸಿನಿಮಾದಲ್ಲವರು ಲಂಗ ಧಾವಣಿ ತೊಡಲುಹೋಗಿ ಅಭಿಮಾನಿಗಳು ಬೇಜಾರಾಗಿದ್ದರು. ಆಮೇಲೆ ಸುಮಾರು ಸಿನಿಮಾಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ಮದುವೆ ಸಂದರ್ಭದಲ್ಲಿ ಮೈತುಂಬ ಉಡುಗೆ ತೊಟ್ಟು ಅಭಿಮಾನಿಗಳ ಶಾಶ್ವತ ವೈರತ್ವ ಕಟ್ಟಿಕೊಂಡರು.
ಕೆಲವು ನಿರ್ಮಾಪಕರು ತಮ್ಮ ಅನೇಕ ಸಿನಿಮಾಗಳು ಗೆಲ್ಲಲು ಕನಿಷ್ಠ ಉಡುಪು ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅದು `ಊಟದ ಜತೆಗಿನ ಉಪ್ಪಿನಕಾಯಿ ಗುರುವೇ’ ಎಂದಿದ್ದಾರೆ. ಸಿನಿಮಾ ನೋಡಲು ಬರುವಂತೆ ಮಾಡಬೇಕಾದರೆ ಇದು ಅನಿವಾರ್ಯ ಎಂಬ ಹಿತವಚನ ನೀಡಿದ್ದಾರೆ. ಹಿಂದಿ ಸಿನಿಮಾ ನೋಡಿ, ಅದಕ್ಕೆ ಹೋಲಿಸಿದರೆ ಕನ್ನಡ ಸಿನಿಮಾದಲ್ಲಿ ಬಟ್ಟೆ ಬಿಚ್ಚುವುದು ಏನೇನೂ ಅಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಾತನ್ನೇನೂ ಎಲ್ಲಾ ಹೀರೋಯಿನ್‌ಗಳು ಒಪ್ಪಿಕೊಂಡಿಲ್ಲ. ಮೈತುಂಬ ಬಟ್ಟೆ ತೊಟ್ಟ ಗೌರಮ್ಮಂದಿರು ಸಿನಿಮಾ ಗೆಲ್ಲಿಸಿದ ಉದಾಹರಣೆ ಇಲ್ಲವೇ ಎಂದಿದ್ದಾರೆ ಕೆಲವರು. `ಹಿಂದಿಯದು ಮೆಟ್ರೋ ಕಲ್ಚರ್, ನಮ್ಮದು ಗ್ರಾಮೀಣ ಕಲ್ಚರ್. ಅದನ್ನು ನಾವು ಒಪ್ಪಿಕೊಳ್ಳಬೇಕಾಗಿಲ್ಲ’ ಎಂದು ಗುಡುಗಿದ್ದಾರೆ.
`ಈಗೆಲ್ಲಾ ನಾಯಕಿಯರು ಬಂದು ನಮಗೆ ಕೆಲಸವೇ ಇಲ್ಲ’ ಎಂದು ಗುಡುಗಿದವರು ಅನೇಕ ನಿರುದ್ಯೋಗಿಗಳು. ಅವರ್ಯಾರೆಂದರೆ ಹಿಂದೆ `ಕ್ಯಾಬರೆ’ ಹೆಸರಿನ ನೃತ್ಯ ಮಾಡಿದವರು. ಕ್ಯಾಬರೆ ಟ್ಯಾನ್ಸ್ ಇದ್ದ ಕಾಲಕ್ಕೆ ನಾಯಕಿಯರ ಮೈಮೇಲೆ ತುಂಬು ಬಟ್ಟೆ ಇರುತ್ತಿತ್ತು. ಮೈ ತೋರಿಕೆಯೇ ನಾಯಕಿಯರ ಅನಿವಾರ್ಯ ಎಂದಾಗಿದ್ದರೆ ಅಭಿನಯವೇ ಬಂಡವಾಳ ಎಂದುಕೊಂಡಿದ್ದರೆ ಸರಿತಾ ಎಲ್ಲಿರುತ್ತಿದ್ದರು. ಅಭಿನಯದಿಂದಲೇ ಈವರೆಗೂ ಚಾರ್ಮ್ ಉಳಿಸಿಕೊಂಡ ಸುಹಾಸಿನಿ ಯಾಕಿರಬೇಕಾಗಿತ್ತು? ವಸ್ತ್ರ ತ್ಯಾಗವನ್ನು ವಿರೋಧಿಸಲು ಇನ್ನೂ ಅನೇಕ ಕಾರಣಗಳು ಸಿಗುತ್ತಲೇ ಹೋಗುತ್ತವೆ.
ಆದರೂ ಇದು ನಿರಂತರ ವಿಚಾರ ಸಂಕಿರಣ. ದೃಶ್ಯ ಮಾದ್ಯಮದ ವ್ಯಾಕರಣವನ್ನು ಸರಿಯಾಗಿ ತಿಳಿಯುವವರೆಗೂ ಬಯಲಾಗುವವರು ಬಯಲಾಗುತ್ತಾರೆ, ಕಳೆದುಕೊಳ್ಳುತ್ತಾ ಗಳಿಸಿಕೊಳ್ಳುತ್ತಾರೆ. ಅಲ್ಲಿವರೆಗೂ ಕಳಚುವಿಕೆಗಿಂತನ್ಯ ತಪವು ಇಲ್ಲ!
2 Comments
ತೊಟ್ಟ ಬಟ್ಟೆಯ ಮರಳಿ ತೊಡದಿರು ಎಂದು ವಾಗ್ದಾನ ಪಡೆದವರಂತೆ ಕ್ಷಣ ಕ್ಷಣಕ್ಕೂ ಬಟ್ಟೆಬಣ್ಣ ಬದಲಾಯಿಸುವ ನಾಯಕಿಯರ ಬಗ್ಗೆ ಬರೆದದ್ದು ಚೆನ್ನಾಗಿತ್ತು. ಹಿಂದೊಮ್ಮೆ ಪೂಜಾ ಬೇಡಿಯನ್ನು ಪಾರ್ಟಿಗೆ ಬಂದಾಗ ಗುಲ್ಷನ್ ಗ್ರೋವರ್ ಆಕೆಯನ್ನು ಗುರುತಿಸಲೇ ಇಲ್ಲ. ಕೇಳಿದ್ದಕ್ಕೆ ಹೌ ಕುಡ್ ಐ, ವಿತ್ ಯುವರ್ ಕ್ಲೋತ್ಸ್ ಆನ್ ಅಂದನಂತೆ. ಮರ್ಲಿನ್ ಮನ್ರೋಳನ್ನು ಫೋಟೋಗ್ರಾಫರ್ ಫೋಟೊ ಸೆಷನ್ ಮುಂಚೆ ಏನು ಹಾಕ್ಕೋತೀಯ ಅಂದಾಗ ರೇಡಿಯೋ ಹಾಕ್ಕೋತೀನಿ, ಐ ವಿಲ್ ಹ್ಯಾವ್ ಮೈ ರೇಡಿಯೋ ಆನ್ ಅಂದಿದ್ದಳಂತ.
ಮುಚ್ಚಿಡಬೇಕು ಕೆಲವನ್ನಾದರೂ ಬಿಚ್ಚಿಡುವುದಕ್ಕೆ ಅಂತ ತಿರುಮಲೇಶ್ ಬರೆದ ನೆನಪಿನೊಂದಿಗೆ ನಿಮಗೊಂದು ಸಲಾಮು
ಜೋಗಿ
thanks sir!
neeevu idara bagge baredare innu rochakavagiruthade! nimma bhashege antha shakthi ide. thanks 4 response
Post a Comment