ವರದಿ:ಪ್ರೇಮ್‌ ಗೀತೆ

prem-rakshitha-1.jpgಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್‌ ಹೊರಟಾಗ ಬೇಡ ಎಂದವರೇ ಹಲವರು. ಹೀಗಿದ್ದರೂ ಪ್ರೇಮ್‌ ಹೀರೋ ಆಗಿದ್ದಾರೆ. `ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಈ ನಡುವೆ ರಕ್ಷಿತಾ ಜೊತೆ ಮದುವೆಯಾಗಿದೆ. `ಪ್ರೀತಿ’ಯ ಹಾಡುಗಳು ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರೇಮ್‌ ಮೊನ್ನೆ ಪತ್ರಕರ್ತರ ಜೊತೆ ಮಾತಾಡಿದರು. ಅದರ ವರದಿ ಇಲ್ಲಿದೆ.

ರಾಮ್‌ಪ್ರಸಾದ್‌ ಮತ್ತು ಪ್ರೇಮ್‌ ಎಂದಿನಂತೆ ಅತ್ಯುತ್ಸಾಹದಲ್ಲಿದ್ದಾರೆ. ಕಾರಣ: `ಪ್ರೀತಿ ಏಕೆ ಭೂಮಿ ಮೇಲಿದೆ?’ ಹಾಡುಗಳು ಮಾರುಕಟ್ಟೆಯಲ್ಲಿವೆ. `ಹುಡುಗರಿಗೆ ಮಲ್ಲಿಕಾ ಶೆರವಾತ್‌ ಹಾಡು ಇಷ್ಟವಾಗಿದೆ. ಕೆಲವರಿಗೆ ಸುಳ್ಳೇ ಸುಳ್ಳು ಹಾಡು ಖುಷಿಕೊಟ್ಟಿದೆ. ಫ್ಯಾಮಿಲಿಗೆ ಚಂದಮಾಮ ಹಾಡು. ನನಗೆ ಎಲ್ಲಾ ಹಾಡುಗಳೂ ಖುಷಿಕೊಟ್ಟಿವೆ’ ಎನ್ನುತ್ತಾರೆ ನಿರ್ದೇಶಕ ಪ್ರೇಮ್‌. ಸಿಡಿಗಳ ಗುಣಮಟ್ಟವೂ ಅತ್ಯುತ್ತಮವಾಗಿದೆ ಎನ್ನುತ್ತಾ ತಯಾರಿಕೆ ನಡೆದಿದ್ದು ವಿದೇಶದಲ್ಲಿ ಎಂದು ವಿವರಣೆ ಒಪ್ಪಿಸುತ್ತಾರೆ ನಿರ್ಮಾಪಕ ರಾಮ್‌ಪ್ರಸಾದ್‌.ಹೀಗೆ ಸಂಭ್ರಮದಲ್ಲಿರುವ ಚಿತ್ರತಂಡ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ಪುರಾವೆಯಾಗಿ ಆಡಿಯೋ ಬಿಡುಗಡೆಯ ಔಪಚಾರಿಕ ಸಮಾರಂಭ ಧಾರವಾಡದಲ್ಲಿ ಏರ್ಪಾಟಾಗಿದೆ. ಏಪ್ರಿಲ್‌ ಮೊದಲ ವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಂದಿನಂತೆ ಸಾವಿರಾರು ಜನರನ್ನು ಸೇರಿಸುವ ಕುರಿತು ಪ್ರೇಮ್‌ ಯೋಚಿಸುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಬಿಡುಗಡೆ ಮಾಡುವುದೆಂದು ಪುನಃ ನಿಕ್ಕಿ ಮಾಡಿಕೊಳ್ಳಲಾಗಿದೆ.ಹಾಗಾದರೆ ಚಿತ್ರೀಕರಣ ಎಲ್ಲಿಯ ತನಕ ಬಂದಿದೆ? ನಿರ್ದೇಶಕ ಪ್ರೇಮ್‌ ಫುಲ್‌ ಸ್ವಿಂಗ್‌ನಲ್ಲಿ ವಿವರಿಸತೊಡಗುತ್ತಾರೆ. ಸುಮಾರು ಅರವತ್ತು ಶೇಕಡಾದಷ್ಟು ಚಿತ್ರೀಕರಣ ಪೂರ್ತಿಯಾಗಿದೆ . ಹಾಡುಗಳನ್ನು ಬೇರೆ ರೀತಿ ಚಿತ್ರೀಕರಿಸಲಾಗಿದೆ. ಮರಸುತ್ತುವ ಹಾಡುಗಳನ್ನು ಸುತ್ತಲು ನನಗೆ ಯಾವಾಗಲೂ ಇಷ್ಟವಿಲ್ಲ. ಹೀಗೆ ಅವರ ವಿವರಣೆ ಮುಂದುವರೆಯುತ್ತದೆ. ಹೀಗಿದ್ದರೂ ಪೊಲ್ಲಾಚಿಯಲ್ಲಿ ಅರ್ಧ ಚಿತ್ರೀಕರಣ ನಡೆಸಿರುವ ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆಯಂತೆ. ಅದನ್ನು ಎಲ್ಲಿ ಚಿತ್ರೀಕರಿಸುವುದು ಮತ್ತು ಹೇಗೆ ಮ್ಯಾಚ್‌ ಮಾಡುವುದು ಎಂದು ಈಗ ಪ್ರೇಮ್‌ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ನಿರ್ದೇಶನದ ಜೊತೆಯಲ್ಲಿ ನಟನೆ ಕಷ್ಟವಾಗುವುದಿಲ್ಲವೇ ಎಂದು ಪ್ರೇಮ್‌ರನ್ನು ಕೇಳಿನೋಡಿ. ಕಷ್ಟ ಕಷ್ಟ ಎಂದು ಅವರು ಒಪ್ಪಿಕೊಳ್ಳುತ್ತಾರೆ. `ಕೆಲಸದ ವಿಷಯದಲ್ಲಿ ನನ್ನನ್ನೇ ನಾನು ನಂಬುವುದಿಲ್ಲ’ ಎನ್ನುತ್ತ ಪ್ರತಿ ಶಾಟ್‌ ತೆಗೆದ ನಂತರ ವಿಡಿಯೋ ನೋಡಿ ತೀರ್ಮಾನಕ್ಕೆ ಬರುವುದನ್ನೂ ರಸವತ್ತಾಗಿ ವಿವರಿಸುತ್ತಾರೆ. `ನಾನು ಇಲ್ಲದ ಶಾಟ್‌ಗಳು ಸಮಸ್ಯೆ ಇಲ್ಲ. ನಾನು ಇರುವ ಶಾಟ್‌ಗಳು ಯಾವಾಗಲೂ ಕಷ್ಟ. ಹಾಗಾಗಿಯೇ ವಿಡಿಯೋ ಕ್ಯಾಮರಾದಲ್ಲೂ ಅದನ್ನು ಚಿತ್ರೀಕರಿಸಿಕೊಳ್ಳುತ್ತಿದ್ದೇವೆ. ಅದನ್ನು ಹಾಕಿ ಹಾಕಿ ನೋಡಿ, ಮತ್ತೆ ಮತ್ತೆ ವಿಮರ್ಶೆ ಮಾಡಿ ಚಿತ್ರೀಕರಣ ಮುಂದುವರೆಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಸಿಂಗಲ್‌ ಶಾಟ್‌ ಫೈಟ್‌

ಮೈಸೂರು ಲ್ಯಾಂಪ್ಸ್‌ನಲ್ಲಿ ಫೈಟ್‌ ಚಿತ್ರೀಕರಣ. ಸ್ಟೆಡಿ ಕ್ಯಾಮ್‌ ಬಳಸಿ ಚಿತ್ರೀಕರಣ ಮಾಡೋಣ ಎಂದು ಪ್ರೇಮ್‌ ತೀರ್ಮಾನಿಸಿದರು. ನಾಲ್ಕೂವರೆ ನಿಮಿಷದ ಫೈಟ್‌ ಅದು. ಒಂದೇ ಒಂದು ಶಾಟ್‌ನಲ್ಲಿ ಫೈಟ್‌ ಮುಗಿಯಬೇಕು ಎನ್ನುವುದು ಅವರ ಆಸೆ. ಅದಕ್ಕಾಗಿ ಅವರು ಮೂರು ದಿನ ರಿಹರ್ಸಲ್‌ ನಡೆಸಿದರು. ನಾಲ್ಕನೇ ದಿನ ಚಿತ್ರೀಕರಣ. ನಾಲ್ಕುವರೆ ನಿಮಿಷಗಳ ಫೈಟ್‌ ನಡೆಸಿ ಶಾಟ್‌ ಓಕೆ ಆಗುತ್ತಲೇ ಪ್ರೇಮ್‌ ನೆಲಕ್ಕೆ ಮಲಗಿಬಿಟ್ಟರು.`ಅಷ್ಟು ಸುಸ್ತಾಗಿಬಿಟ್ಟಿತ್ತು. ಕೈಗೆಲ್ಲಾ ರಕ್ತ ಬಂದುಬಿಟ್ಟಿತ್ತು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಪ್ರೇಮ್‌. ಈ ಚಿತ್ರದ ಹೈಲೈಟ್‌ಗಳಲ್ಲಿ ಈ ಫೈಟ್‌ ಕೂಡ ಒಂದು. ಕಟ್‌ ಮಾಡಿ ಫೈಟ್‌ಗಳನ್ನು ಸಂಕಲಿಸಿದರೆ ಫೀಲ್‌ ಹೋಗಿಬಿಡುತ್ತದೆ ಎಂಬ ಕಾರಣಕ್ಕೆ ಅವರು ಹೀಗೆ ಒಂದೇ ಶಾಟ್‌ನಲ್ಲಿ ಫೈಟ್‌ ಚಿತ್ರೀಕರಣ ನಡೆಸಿದರಂತೆ.

ಕಾಲೇಜ್‌ ಪ್ರೀತಿ

ಬೆಂಗಳೂರಿನ ಹನ್ನೆರಡು ಬೇರೆ ಬೇರೆ ಕಾಲೇಜುಗಳಲ್ಲಿ ಬೇರೆ ಬೇರೆ ರೀತಿಯ ಪ್ರೀತಿಗಳಿವೆ ಎಂಬ ಕಾನ್ಸೆಪ್ಟನ್ನು ಪ್ರೇಮ್‌ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ ನ್ಯಾಷನಲ್‌ ಕಾಲೇಜ್‌ದು ಫ್ಲ್ಯಾಶ್‌ಬ್ಯಾಕ್‌ ಲವ್‌. ಜೈನ್‌ ಕಾಲೇಜಿನದು ಒನ್‌ ವೇ ಲವ್‌. ಮೌಂಟ್‌ ಕಾರ್ಮೆಲ್‌ ಕಾಲೇಜಿನದು ಇನ್ನೊಂಥರಾ ಲವ್‌ ಆದರೆ ಮತ್ಯಾವುದೋ ಕಾಲೇಜಿನದು ರಫ್‌ ಲವ್‌.

`ಇದನ್ನೆಲ್ಲಾ ಕಾಲೇಜು ಮುಂದೆ ನಿಂತು ನಾನು ಗಮನಿಸಿದ್ದೇನೆ. ರಿಸರ್ಚ್‌ ಮಾಡಿದ್ದೇನೆ’ ಎನ್ನುತ್ತಾರೆ ಪ್ರೇಮ್‌. ಹಿಂದಿನ ಚಿತ್ರಗಳನ್ನು ಮಾಡುವಾಗಲೂ ಅವರು ಇಂಥ ಹೋಮ್‌ವರ್ಕ್‌ ಮಾಡಿಕೊಂಡಿದ್ದುಂಟು. ಸಹಜತೆಯ ಫೀಲ್‌ ಕೊಡಲು ಇದೆಲ್ಲಾ ಅವಶ್ಯಕ ಎನ್ನುತ್ತಾರೆ ಪ್ರೇಮ್‌.

ಅರಳುವ ಹೂವುಗಳು

`ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರದ ಸೀಡಿ ಕವರ್‌ ಭಿನ್ನವಾಗಿದೆ. ಭೂಮಿ ಆಕಾರದಲ್ಲಿ ಇರುವ ಸಿಡಿ ಕವರ್‌ ಬಿಚ್ಚಿದರೆ ಹೂ ಕಾಣಿಸುತ್ತದೆ. ಅದನ್ನು ಬಿಚ್ಚಿದರೆ ಪ್ರೀತಿಯ ಸೀಡಿ. `ಈ ರೀತಿಯ ಕವರ್‌ ತಯಾರಿಕೆಗೆ ನಮಗೆ ಒಂದಕ್ಕೆ ಮೂರು ಖರ್ಚಾಯಿತು’ ಎಂದು ಪುನಃ ಉತ್ಸಾಹದಿಂದ ಮಾತಾಡತೊಡಗುತ್ತಾರೆ ರಾಮ್‌ಪ್ರಸಾದ್‌. ಪ್ರೇಮ್‌ ಪ್ರಕಾರ ಈಗ ಹಳ್ಳಿ ಹಳ್ಳಿಗಳಲ್ಲೂ ಜನ ಸೀಡಿ ಕೇಳುತ್ತಿದ್ದಾರೆ. `ಜೋಗಿ ಚಿತ್ರದ ಹಾಡುಗಳು ಶೇಕಡಾ ಎಂಬತ್ತರಷ್ಟು ಕ್ಯಾಸೆಟ್‌ಗಳಲ್ಲಿ ಖರ್ಚಾಗಿತ್ತು. ಉಳಿದಿದ್ದು ಸೀಡಿ. ಈ ಸಲ ಅರ್ಧದಷ್ಟು ಸೀಡಿಗಳೇ ಖರ್ಚಾಗುತ್ತಿವೆ’ ಎನ್ನುತ್ತಾರೆ ಅವರು.

ಜೋಗಿ ಸ್ಟೈಲ್‌

ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಪ್ರಚಾರ ತಂತ್ರಗಳಲ್ಲಿ `ಜೋಗಿ’ ಛಾಯೆ ಸ್ಪಷ್ಟವಾಗಿ ಕಾಣಿಸುತ್ತದೆ. `ಜೋಗಿ’ ಹಾಡುಗಳ ಸೀಡಿಗಳನ್ನು ರಾಮ್‌ಪ್ರಸಾದ್‌ ಜೋಳಿಗೆಯ ಆಕಾರದ ಕವರ್‌ಗಳಲ್ಲಿ ಬಿಡುಗಡೆ ಮಾಡಿದ್ದರೆ ಇಲ್ಲಿ ಭೂಮಿ ಆಕಾರದ ಕವರ್‌ಗಳನ್ನು ಬಳಸಿದ್ದಾರೆ. `ಜೋಗಿ’ ಹಾಡುಗಳು ಹುಬ್ಬಳ್ಳಿಯಲ್ಲಿ ಬಿಡುಗಡೆಯಾದರೆ ಇದು ಧಾರವಾಡದಲ್ಲಿ ಬಿಡುಗಡೆಯಾಗಲಿದೆ. ಹಾಡುಗಳ ಧಾಟಿಯಲ್ಲೂ ಜೋಗಿ, ಎಕ್ಸ್‌ಕ್ಯೂಸ್‌ಮಿ ಚಿತ್ರಗಳ ಕೋಲಾಜ್‌ ಕಾಣಿಸುತ್ತದೆ. ಒಟ್ಟಾರೆ ಯಶಸ್ಸಿಗೆ ಹೊಸ ಸೂತ್ರ ಕಂಡುಕೊಂಡಿದ್ದ ರಾಮ್‌-ಪ್ರೇಮ್‌ ಜೋಡಿ ಈಗ ಅದೇ ಸೂತ್ರದೊಂದಿಗೆ ಪುನಃ ಯಶಸ್ಸಾಗಲು ಹೊರಟಿರುವುದು ಕುತೂಹಲಕರ. ಅಂದಹಾಗೆ ಈ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ರಕ್ಷಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮ್‌ ಹೇಳುವ ಪ್ರಕಾರ ಅದು ರಕ್ಷಿತಾರ ಕೊನೆಯ ಚಿತ್ರ.

3 Comments

  1. DEEPAK.C
    Posted April 19, 2007 at 7:12 am | Permalink

    please give me one role

  2. Posted July 19, 2007 at 8:23 am | Permalink

    Your family leave long live ok this a best couple of this year
    WISH YOU A HAPPY MARRIDE LIFE OF

    from:VINAY.G

  3. Posted December 26, 2007 at 7:49 am | Permalink

    whish you a marride life and you first act and derection movie pymk whish succeces of kannada industries block buster movie i wish and god blesh you ok sir gundkal sir this report is good sir, prem and rakshita whish you best of luck, ok bye sir have niday vvgoodafternoon.


Post a Comment

Your email is never published nor shared. Required fields are marked *
*
*