ಇದನ್ನು ಪುಟ್ಟ ಕತೆಯೆನ್ನಬಹುದು. ಆತ್ಮಕತೆಯೆನ್ನಬಹುದು. ಡೈರಿ ಬರವಣಿಗೆ ಎನ್ನಬಹುದು. ಗೊತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನನ್ನ ಪ್ರೀತಿಯ ಹುಟ್ಟಿನ ಕತೆ. ಅಥವಾ ಅವಳು ಹುಟ್ಟಿದ ಕತೆ. ಅವಳು ಬೆಳೆದ ಕತೆ. ಬೆಳೆಯುತ್ತ ಬೆಳೆಯುತ್ತ ಅವಳು ಬದಲಾದ ಕತೆ. ಬದಲಾಗುತ್ತ ಬದಲಾಗುತ್ತ ಬದಲಾಗುತ್ತಲೇ ಹೋದ ಕತೆ. ಅಥವಾ ಬದಲಾಗಿದ್ದು ನಾನಾ? ಓದಿದ ನೀವೇ ಹೇಳಬೇಕು.
ಬಿನ್ನೆ ಯತ್ತೆ
ಒಂದನೇ ಕತ್ತೆ
ಎರಡನೇ ಯತ್ತೆ
ಮೂರನೇ ಕತ್ತೆ
ನಾಲ್ಕನೇ ಯತ್ತೆ
ಗುಡ್ಡದ ಮೇಲಿರುವ ಸಂಪಿಗೆ ಕಾಡು ಶಾಲೆಯ ವರಾಂಡದ ತುದಿ ಕಂಬಕ್ಕೆ ನೇತು ಹಾಕಿದ್ದ ಗಂಟೆ ಢಣಢಣನೇ ಬಾರಿಸಿಕೊಂಡಿತು. ನಾಲ್ಕನೇ ಇಯತ್ತೆಯವರೆಗೆ ಕಲಿಸುವ ಲೋಯರ್ ಪ್ರೈಮರಿ ಸ್ಕೂಲು ಅದು. ಎದುರಿಗೆ ಎರಡು ತೆಂಗಿನ ಸಸಿಗಳು. ಸಾಲಾಗಿ ಗೆಂಟಗೆ,ಜಿನಿಯಾ, ಸೋಣೆ ಗಿಡಗಳು. ಅದರ ಮಧ್ಯದಲ್ಲೇ ಜನವರಿ ಇಪ್ಪತ್ತಾರು ಮತ್ತು ಅಗಸ್ಟ್ ಹದಿನೈದಕ್ಕೆ ಮದುಮಗಳಂತೆ ಸಿಂಗರಿಸಿಕೊಳ್ಳುವ ಧ್ವಜಗಂಬ. ಎದುರಿಗೆ ಬೇಲಿ.
ಆಗ ನನಗೆ ಏಳು ವರ್ಷಗಳಾಗಿತ್ತೆಂದು ಶಾಲಾ ದಾಖಲೆ ಹೇಳುತ್ತಿತ್ತಾದರೂ ನನಗೇ ಗೊತ್ತಿರುವಂತೆ `ನಾನು’ ಹುಟ್ಟಿ ಕೆಲವೇ ದಿನಗಳಾಗಿದ್ದವು. ಅಥವಾ ಆಗಲೂ `ನಾನು’ ಹುಟ್ಟಿರಲೇ ಇಲ್ಲವಾ? ಗೊತ್ತಿಲ್ಲ. ಒಟ್ಟಾರೆ `ನಾನು’ ಹುಟ್ಟಿ ದ ಕೆಲವೇ ದಿನಗಳಲ್ಲಿ ಹೆಚ್ಚೆಂದರೆ ತಿಂಗಳುಗಳಲ್ಲಿ ಅವಳು ಹುಟ್ಟಿದ್ದಳು ಅಥವಾ ಅವಳು ಹುಟ್ಟಿದ ಕ್ಷಣವೇ ನಾನು ಹುಟ್ಟಿಕೊಂಡಿದ್ದೆ. ನನಗೆ ಗೊತ್ತಿಲ್ಲ. ಕ್ಷಮಿಸಿ .
ಅದು ಜುಲೈ ತಿಂಗಳಿರಬೇಕು.
ಮಳೆ ಎಷ್ಟೋ ದಿನಗಳಿಂದ ಹೊಯ್ಯುತ್ತಲೇ ಇರುವಂತಿತ್ತು. ಒಮ್ಮೆ ಸಣ್ಣ ಮಳೆ. ಇನ್ನೊಮ್ಮೆ ದೊಡ್ಡ ಮಳೆ. ಮಧ್ಯದಲ್ಲಿ ಸ್ವಲ್ಪ ಹೊತ್ತು ಪಿರಿ ಪಿರಿ, ಜಿಟಿ ಜಿಟಿ ಮಳೆ, ಸೋನೆ ಮಳೆ! ಶಾಲೆಯ ಎಡ ಪಕ್ಕದ ಮೈದಾನದ ಬದಿಯೆಲ್ಲ ಹಾವಸೆ ಬೆಳೆದು ಹಸಿರಾಗಿತ್ತು. ಅಲ್ಲಿ ಯಾರೋ ಹುಡುಗರು ಜಾರಿ ಬಿದ್ದ ಗುರುತೂ, ಪಕ್ಕದಲ್ಲಿಯೇ ಕಿಲಾಡಿ ಹುಡುಗರು ಮಾಡಿದ ಜಾರುಗುಂಡಿಯೂ ಮಳೆಯಲ್ಲಿ ತೊಯ್ಯುತ್ತಿದ್ದವು.
ಹತ್ತಿರದಲ್ಲಿ ಎಲ್ಲೂ ಮನೆಯಿಲ್ಲ.
ಆ ಶಾಲೆಯಲ್ಲಿ ಹೆಚ್ಚೇನೂ ಮಕ್ಕಳಿರಲಿಲ್ಲ. ಗದ್ದೆಮನೆ ರವಿಯನ್ನೂ ವಿದ್ಯಾರ್ಥಿಯೆಂದು ಒಪ್ಪಬಹುದಾದರೆ ಒಟ್ಟೂ 24 ವಿದ್ಯಾರ್ಥಿಗಳು. ಒಬ್ಬರೇ ಮಾಸ್ತರರು. ಅವರು ಘಟ್ಟದ ಕೆಳಗಿನ ಅಂಕೋಲೆಯವರು. ಒಂದೇ ಕ್ಲಾಸ್ ರೂಮು ಮತ್ತು ಮಾಸ್ತರರು ಇರುವಾಗ ಘಂಟೆ ಯಾಕೆ ಎನ್ನುವ ಪ್ರಶ್ನೆ ಮಾಸ್ತರರು ಸೇರಿದಂತೆ ಯಾರಿಗೂ ಬಂದಿರಲಿಲ್ಲ. ಆ ಗಂಟೆಯನ್ನು ತಂದು ಶಾಲೆ ಚಿಟ್ಟೆ ತುದಿಗೆ ಎಷ್ಟೋ ವರ್ಷಗಳಿಂದ ತಪಸ್ಸು ಮಾಡುವಂತೆ ನಿಂತಿರುವ ನೀಲಿ ಕಂಬಕ್ಕೆ ಮೊಳೆ ಜಡಿದು ಸಿಗಿಸಿದವರೂ ಮಾಸ್ತರರೇ.
ಆ ಘಂಟೆಯೇ ಒಂದು ಮಾಯಾವಿ. ಪ್ರತಿ ಸಲ ಗಂಟೆ ಹೊಡೆದಾಗ ಕೇಳಿಸುವ ಸದ್ದು ಒಂದೇ ರೀತಿ ಇರುತ್ತಿತ್ತಾದರೂ ಹುಟ್ಟಿಸುವ ಭಾವನೆಗಳು ಮಾತ್ರ ತದ್ವಿರುದ್ಧವಾಗಿರುತ್ತಿದ್ದವು. ಬೆಳಿಗ್ಗೆ ಪ್ರಾರ್ಥನೆಗೆ ಹೊಡೆಯುವ ಗಂಟೆ ನನ್ನಲ್ಲಿ ಅವಸರ ಮತ್ತು ತಳಮಳವನ್ನು ಹೆಚ್ಚಿಸಿ ನಾನು ಭಾರವಾಗುತ್ತಿದ್ದೆ. ಮಧ್ಯಾಹ್ನ ಗಂಟೆ ಕೇಳಿದೊಡನೆ ಹಸಿವಾಗುತ್ತಿತ್ತು. ಸಂಜೆ ಬಾರಿಸಿಕೊಳ್ಳುವ ಗಂಟೆಯ ಸದ್ದಿನೊಡನೆ ನಾನು ನೆಹರೂ ಫೋಟೋದ ಸಂದಿಗೆ ಗೂಡು ಕಟ್ಟಿದ ಪಾರಿವಾಳಗಳಷ್ಟು ಹಗುರವಾಗಿಬಿಡುತ್ತಿದ್ದೆ.
ಈ ಸಂಜೆಯೂ ಅದು ಹಾಗೇ ಇತ್ತು.
`ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ’ ಎಂದು ಎಲ್ಲರೂ ದೊಡ್ಡದಾಗಿ ಪ್ರಾರ್ಥನೆ ಹೇಳಿ ಅಲ್ಲಿಂದ ಹೊರಕ್ಕೆ ಬೀಳುತ್ತಲೇ ಮಳೆ ಹೆಚ್ಚಾಗಿ ಆಕಾಶವೇ ಕಳಚಿಬೀಳುತ್ತದೆಯೇನೋ ಎನ್ನುವಂತೆ ಸುರಿಯತೊಡಗಿತು. ಮಾಸ್ತರರು ಬಯ್ದಿದ್ದರಿಂದ ಎಲ್ಲ ಹುಡುಗರೂ ವರಾಂಡಾದ ಮೇಲೆಯೇ ನಿಂತುಕೊಂಡರು. ಅಷ್ಟು ದೊಡ್ಡ ಮಳೆಯಲ್ಲಿ ಮನೆಗೆ ಹೊರಟು ಮಕ್ಕಳು ಏನಾದರೂ ಮಾಡಿಕೊಂಡುಬಿಡಬಹುದು ಎನ್ನುವ ಭಯ ಮಾಸ್ತರರಿಗೆ. ಹತ್ತು ನಿಮಿಷಗಳೇ ಕಳೆದಿರಬಹುದು.
ಸುಮ್ಮನೇ ನಿಂತಿದ್ದೆ, ಎಲ್ಲರಂತೆ.
ಸಂಜೆ ಹೊತ್ತು ಮಳೆ ಅಷ್ಟು ಜೋರಾಗಿ ಸುರಿದದ್ದು ಕೆಲ ಹುಡುಗರಿಗೆ ಅಷ್ಟೇನೂ ಇಷ್ಟವಾಗಲಿಲ್ಲ. ಸಂಜೆ ಮಳೆ ಬಂದರೆ ಹೊಟ್ಟೆ ಉರಿಯುತ್ತಿತ್ತು. ಬೆಳಿಗ್ಗೆ ಜೋರಾಗಿ ಮಳೆ ಸುರಿದರೆ ಬೇರೆ ರೀತಿಯ ಅನುಕೂಲಕಗಳಿದ್ದವು. ಹಾಗೆ ಮಳೆ ಸುರಿಯುತ್ತಲೇ ಉಳಿದರೆ ಸೈಕಲ್ ತುಳಿದು ಬರಬೇಕಾಗಿರುವ ಮಾಸ್ತರರು ಒಮ್ಮೊಮ್ಮೆ ಬರುತ್ತಿರಲಿಲ್ಲ. ಅಂದರೆ ಆ ದಿನ ರಜೆ. ಇನ್ನು ಕೆಲವರು ಹಾಗೆ ಮಳೆ ಸುರಿದ ದಿನ ಹಳ್ಳ ದಾಟಲಾಗುವುದಿಲ್ಲವೆಂದು ಶಾಲೆಗೇ ಬರುತ್ತಿರಲಿಲ್ಲ. ಹಾಗೆ ಹಳ್ಳ ತುಂಬಿ ಹರಿಯುವ ದಿನ ಶಾಲೆಗೆ ಬರಬೇಡಿ ಎಂದು ಮಾಸ್ತರರೇ ಹೇಳಿಬಿಟ್ಟಿದ್ದರು. ಮಾಸ್ತರರು ಹಾಗೆ ಹೇಳಿದ ಅನಂತರ ಸಣ್ಣ ಸಣ್ಣ ಮಳೆಗೂ ಹಳ್ಳ ತುಂಬಿ ಹರಿಯತೊಡಗಿತ್ತು!
ನಾನು ಅಂಥದ್ದನ್ನೇನೂ ಯೋಚಿಸುತ್ತಿರಲಿಲ್ಲ.
ಏಕೆಂದರೆ ನಮ್ಮನೆ ಹಾದಿಯಲ್ಲಿ ದೊಡ್ಡ ಹಳ್ಳವೂ ಇರಲಿಲ್ಲ.
ಮತ್ತೂ ಐದು ನಿಮಿಷ ಕಳೆದಿರಬಹುದು. ಮಳೆ ಸ್ವಲ್ಪ ಸಣ್ಣದಾಯಿತು. ಆಗಲೇ ಆಕಳಿಸುತ್ತಿದ್ದ ಮಾಸ್ತರರು ಹೋಗುವುದಕ್ಕೆ ಅನುಮತಿ ನೀಡಿ ತಾವೂ ಹೊರಡುವುದಕ್ಕೆ ಕೊಡೆ ಬಿಚ್ಚಿ ಸೈಕಲ್ ಸ್ಟ್ಯಾಂಡ್ ತೆಗೆದರು. ಇದ್ಯಾವುದರ ಬಗ್ಗೂ ಅಷ್ಟೇನೂ ತಲೆ ಕೆಡಿಸಿಕೊಳ್ಳದೇ ಕೊಡೆ ಅರಳಿಸಿ ಅಂಗಳಕ್ಕಿಳಿದೆ. ಕಾಲಿಗೆ ಆಗ ಚಪ್ಪಲಿಯೂ ಇರಲಿಲ್ಲ ಎನ್ನುವಂತೆ ನೆನಪು. ಕಾಡಿನ ನಡುವೆ ಇರುವ ಕಾಲು ಹಾದಿಯಲ್ಲಿ ಮಳೆ ನೀರು ಆಡುತ್ತ ಸುಮ್ಮನೇ ನಡೆಯತೊಡಗಿದೆ. ಜೊತೆಗೆ ಪಕ್ಕದ ಮನೆಯಿಂದ ಶಾಲೆಗೆ ಬರುವ ಮೂರನೇ ಕ್ಲಾಸಿನ ಹುಡುಗ ಮೂರ್ತಿಯೂ ಇದ್ದ.
ಶಾಲೆಯ ಅಂಗಳದಿಂದ ದಣಪೆ ದಾಟಿ ಎಡಕ್ಕೆ ಹೊರಳಿದೊಡನೆ ಕಾಲುಗಳು ಗುಡ್ಡೆಯಿಳಿಯತೊಡಗಿದವು. ಹೋಗುತ್ತ ಹೋಗುತ್ತ ಸಿಂಬಳ್ಳಿ ಕಡೆ ಹೊರಟಿದ್ದ ಭಾಗೀರಥಿ ಮತ್ತು ಗಣಪತಿಯನ್ನು ನೋಡಿದವರು ಒಂದು ಕ್ಷಣ ಹಾಗೇ ನಿಂತುಕೊಂಡೆವು. ವಿಶೇಷವೆಂದರೆ ಭಾಗೀರಥಿ ಮತ್ತು ಗಣಪತಿ ಒಂದೇ ಕೊಡೆಯಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ನಡೆದು ಹೋಗುತ್ತಿದ್ದರು. ಅವರು ಕಾಣದಾಗುವ ತನಕ ಮೂರ್ತಿ ಆಸಕ್ತಿಯಿಂದ ಅವರನ್ನು ನೋಡುತ್ತಲೇ ಇದ್ದ.
ನನಗೆ ಅವರಿಬ್ಬರೂ ಅಷ್ಟೇನೂ ಹತ್ತಿರದವರಲ್ಲ. ನಾಲ್ಕನೇ ಕ್ಲಾಸಿನವರಾಗಿದ್ದರಿಂದ ಗಣಪತಿ ಆವಾಗಾವಾಗ ಒಂದನೇ ಕ್ಲಾಸಿನ ನಮ್ಮ ಮೇಲೆ ದಬ್ಬಾಳಿಕೆ ಮಾಡುವುದಿತ್ತು. ಆದರೆ ಭಾಗೀರಥಿ ಯಾವಾಗಲೂ ಹಾಗಲ್ಲ. ಉಪ್ಪಿನಕಾಯಿ ಮಿಡಿ, ಹುಣಸೆ ಹಣ್ಣು ಕೊಡುತ್ತ ಕಿಸಕ್ಕನೇ ವಿನಾಕಾರಣ ನಗುತ್ತ ಇರುತ್ತಿದ್ದ ಹುಡುಗಿ.
ಅವರಿಬ್ಬರೂ ಹಾಗೆ ಒಂದೇ ಕೊಡೆಯಲ್ಲಿ ಹೊಕ್ಕಿ ಹೊರಟಿದ್ದು ವಿಶೇಷವೆನಿಸಿದರೂ ಬೇರೇನೂ ಅನಿಸಿರಲಿಲ್ಲ. ಗಣಪತಿಯೋ ಭಾಗೀರಥಿಯೋ ಕೊಡೆ ಬಿಟ್ಟು ಬಂದಿರಬಹುದು. ಒಂದೇ ಊರಿನವರಾಗಿದ್ದರಿಂದ ಒಟ್ಟಿಗೇ ಹೋಗುತ್ತಿದ್ದಾರೆ ಎಂದು ಅಂದುಕೊಂಡು ಸುಮ್ಮನಾಗಿ ಮನೆ ಕಡೆ ಹೊರಟೆ.
ಮಳೆ ಮತ್ತೆ ಜೋರಾಗಿ ಸುರಿಯತೊಡಗಿತು. ಕಪ್ಪೆಗಳು ವಟಗುಡುತ್ತಿದ್ದವು. ಸಂಜೆಯಾಗುತ್ತ ಬಂದಿದ್ದರಿಂದ ಅವುಗಳ ಜೊತೆ ಜೀರುಂಡೆ-ನೊರಜುಗಳೂ ಸೇರಿಕೊಂಡು ಗೌಜೆಬ್ಬಿಸುತ್ತಿದ್ದವು. ರಭಸದಿಂದ ಹರಿಯುವ ಹಳ್ಳದ ಸದ್ದು ಈ ಸದ್ದಿನೊಂದಿಗೆ ಸ್ಪರ್ಧೆಗೆ ಇಳಿದಂತಿತ್ತು.
ಮೂರ್ತಿಯೊಂದಿಗೆ ಜಾರಿಕೆ ನೆಲದ ಮೇಲೆ ಹುಶಾರಿಯಿಂದ ಗುಡ್ಡ ಇಳಿದು ಹಳ್ಳಕ್ಕೆ ಸಮಾನಾಂತರವಾದ ಪುಟ್ಟ ಹಾದಿಯಲ್ಲಿ ನಡೆಯತೊಡಗಿದೆ. ಯಾಕೋ ಮೂರ್ತಿ ಒಂಥರಾ ಇದ್ದಾನೆ ಅಂತ ಅನಿಸಿತ್ತು. ಒಂದು ಏರು ಏರಿ ದಣಪೆ ದಾಟುವ ಹೊತ್ತಿಗೆ- ಆ ಗೇರು ಗಿಡದ ಬುಡದ ಕಪ್ಪು ಎಲೆಗಳ ಹಾಸಿನ ಮೇಲೆ , ಸರಿಯಾಗಿ ಆ ಬಿದಿರು ಮೆಳೆ ಪಕ್ಕ ಅಂದರೆ ಕರಿಮುಳ್ಳೆಣ್ಣು ಗಿಡದ ಎದುರು ನಿಂತು- ಗುಟ್ಟು ಹೇಳುವವನಂತೆ ಮೂರ್ತಿ ಹೇಳಿದ್ದ.
`ಭಾಗೀರಥಿ ಮತ್ತು ಗಣಪತಿ ಒಂದೇ ಕೊಡೆ ಹಿಡಿದು ಜೊತೆಯಾಗಿ ಹೋಗಿದಾರೆ’
ಅದನ್ನು ಯಾಕೆ ಹೇಳುತ್ತಿದ್ದಾನೆಂದು ಅರ್ಥವಾಗಲಿಲ್ಲ. ಆಗಲೇ ನಾನು ಗಣಪತಿ-ಭಾಗೀರಥಿಯನ್ನು ಮರೆತುಬಿಟ್ಟಾಗಿತ್ತು. ಮೂರ್ತಿ ವಿವರಿಸಿ ಹೇಳಿದ. ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಅನಂತರ ಅವನಿಗೆ ತಿಳಿದಂತೆ ಗಣಪತಿ-ಭಾಗೀರಥಿಯರ ಮಿಥುನ ಭಂಗಿಗಳನ್ನೆಲ್ಲ ವಿವರಿಸಿದ. ಆಗಲೂ ಅರ್ಥವಾಗದಿದ್ದಾಗ ನೀನು ಹುಟ್ಟಿದ್ದೇ ಹೀಗೆ ಎಂದುಬಿಟ್ಟ.
ಏನೋ ಹೊಳೆದಂತಾಯಿತು. ಹಾಗೆ ಹೊಳೆದಂತಾದಾಗ ಯಾಕೋ ಒಂಥರಾ ಪುಳಕವಾಯಿತು. ಹಾಗೆ ನೋಡಿದರೆ ಅವನು ಹೇಳಿದ್ದು ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ ಆದರೂ ಅರ್ಥವಾಗಿ ಮೈ ಬಿಸಿಯಾಗಿತ್ತು!
ಹಾಗೆ `ಅರ್ಥ’ವಾದ ಆ ಕ್ಷಣದಲ್ಲಿ ಕ್ರೋಮೋಸೋಮ್‌ಗಳು ಸಂಯೋಜನೆಗೊಂಡವು.
ಇಪ್ಪತ್ಮೂರಕ್ಕೆ ಇಪ್ಪತ್ಮೂರು ಸೇರಿ ನಲವತ್ತಾರಾಯಿತು.
ಅವಳ ಜೀವಕೋಶವೊಂದು ಹುಟ್ಟಿಕೊಂಡಿತು.
ಆ ಕೋಶ ಎರಡಾಯಿತು.
ಎರಡು ನಾಲ್ಕಾಯಿತು.
ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಎರಡನೂರಾ ಐವತ್ತಾರಾಯಿತು.
ಅದು ಮತ್ತೆ ದ್ವಿಗುಣಿಸಲ್ಪಡುತ್ತ ಹೋಗಿ ಮನಸ್ಸಿನ ಗರ್ಭದಲ್ಲಿ ಅವಳ ಭ್ರೂಣ ರೂಪುಗೊಂಡಿತು.
ಅವಳಿಗೆ ಕಣ್ಣಿರಲಿಲ್ಲ. ಕಿವಿ, ಮೂಗು, ಬಾಯಿ, ಕಾಲು-ಕೈ,ತೊಡೆ, ಮನಸ್ಸು, ಮೊಲೆ, ಮಾಲೆ,ಮೈಲಿಗೆ ಏನೂ ಇರಲಿಲ್ಲ.
***
ಸಂಪಿಗೆಕಾಡು ಶಾಲೆಗೆ ಹೋಗುವುದು ಬರುವುದು ಮುಂದುವರೆದಿತ್ತು. ಶಾಲೆಗೆ ಹೋಗುವುದರಲ್ಲಿ ಉತ್ಸಾಹವೇ ಇರಲಿಲ್ಲ. ಸುಮ್ಮನೇ ಎಲ್ಲಾದರೂ ಮುಳ್ಳೆಣ್ಣು ಕೊಯ್ಯುತ್ತ ಉಳಿದುಬಿಡುವ ಮನಸ್ಸಾಗುತ್ತಿತ್ತು. ಇಲ್ಲದಿದ್ದರೆ ನಾಯ್ಕನ ಮನೆ ರಾಮಚಂದ್ರನ ಜೊತೆ ಸೇರಿ ಅಥವಾ ಅಚ್ಚೆ ಮನೆ ಮೂರ್ತಿಯೊಂದಿಗೆ ಸೇರಿ ಗೋಲಿ ಆಡುತ್ತ ಉಳಿದುಬಿಡೋಣ ಎನಿಸುತ್ತಿತ್ತ್ತು. ಆದರೂ ಯಾರದೋ ಆಜ್ಞೆಗೆ ಬದ್ಧವಾದವನಂತೆ ಹೋಗುತ್ತಿದ್ದೆ.
ಹಾಗೆ ಒಂದು ವಾರ ಅಥವಾ ತಿಂಗಳೇ ಕಳೆದಿರಬಹುದು.
ಮಳೆ ಒಂದು ಸುತ್ತಿನ ತನ್ನ ಆರ್ಭಟ ಮುಗಿಸಿತ್ತು. ವಟರುಗುಟ್ಟುವ ಕಪ್ಪೆಗಳು, ಸುರಿಯುವ ಮಳೆ ಮತ್ತು ಹೊಸ ಸಂಗತಿಗಳಿಗೆ ತೆರೆದುಕೊಳ್ಳುವ ಪುಳಕದಲ್ಲಿ ತೇಲಿಹೋಗುತ್ತಿದ್ದಾಗ ಭ್ರೂಣ ಒಂದು ರೂಪವಾಗಿ ಬದಲಾಗತೊಡಗಿತು.
ಮೊದಲು ಅವಳಿಗೆ ಕಣ್ಣು ಬಂತು. ಕೈ ಕಾಲು, ಮೂಗು, ಬಾಯಿ, ಕಿವಿ ಮತ್ತು ಜಡೆ . ಜಡೆಗೆ ಮಲ್ಲಿಗೆ ದಂಡೆ. ಬೆನ್ನಿಗೆ ಪಾಟೀ ಚೀಲ, ಹಣೆಗೆ ಕಾಡಿಗೆ, ಕೈಯ್ಯಲ್ಲಿ ಕೊಡೆ ಮತ್ತು ಬೆಳ್ಳಕ್ಕಿಯಷ್ಟು ಬೆಳ್ಳಗಿನ ಮೈಗೆ ಲಂಗ-ಪಲಕ. ಇದೆಲ್ಲ ಬಹಳ ಬೇಗ ನಡೆದುಹೋಯಿತು.
ಅವಳು ಹುಟ್ಟಿಕೊಂಡಿದ್ದಳು.
ಹುಟ್ಟುವಾಗಲೇ ಅವಳಿಗೆ ಏಳು ವರ್ಷ ವಯಸ್ಸಾಗಿತ್ತು!
ಅವಳು ಸೀತಾಲಕ್ಷ್ಮಿ
ಸೀತಾಲಕ್ಷ್ಮಿ ನನ್ನ ಕ್ಲಾಸಿನವಳೇ. ನಮ್ಮದೇ ಬೇಂಚಿನಲ್ಲಿ ಸುಬ್ರಾಯನ ಪಕ್ಕ ಕೂರುತ್ತಿದ್ದ ಹುಡುಗಿ. ಯಾರೊಂದಿಗೂ ಹೇಳಿಲ್ಲ. ಈಗ ಹೇಳುತ್ತಿದ್ದೇನೆ. ಅವಳು ನನ್ನ ಮೊದಲ ಪ್ರೀತಿ.
***
ಈ ಪ್ರೀತಿ ಅಂದರೆ ಅವಳು ಅಂದರೆ ಸೀತಾಲಕ್ಷ್ಮಿ ಏನೆಲ್ಲಾ ಆಗಿ ನನ್ನ ಮನಸ್ಸಿನಲ್ಲಿ ಬೆಳೆದಳು, ಹೇಗೆಲ್ಲಾ ಮುಖ, ಮೈ, ಹೆಸರು ಬದಲಿಸಿಕೊಂಡಳು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಾನು ಐದನೇ ಕ್ಲಾಸಿಗೆ ಬರುವಾಗ ಸೀತಾಲಕ್ಷ್ಮಿ ಸವಿತಾ ಆಗಿ ಬದಲಾಗಿದ್ದಳು. ಆರನೇ ಕ್ಲಾಸಿಗೆ ಬರುವಷ್ಟರಲ್ಲಿ `ಅವಳು’ ಟೀಚರ್ ಆಗಿಬಿಟ್ಟಿದ್ದಳು! ಏಳನೇ ಕ್ಲಾಸಿನಲ್ಲಿ ಅವಳು ಬದಲಾಗಿ ಬೇರೆ ಹುಡುಗಿಯಾದಳು. ಆ ಹುಡುಗಿಗೂ ಒಂದು ಹೆಸರಿತ್ತು. ಅದು ಈಗ ಮರೆತು ಹೋಗಿದೆ. ಎಂಟನೆ ಕ್ಲಾಸಿಗೆ ಬರುವ ಹೊತ್ತಿಗೆ ನಾನು ಪತ್ರಿಕೆಯೊಂದರಲ್ಲಿ ನೋಡಿದ ಸುಂದರ ಹುಡುಗಿಯ ಚಿತ್ರವಾದಳು. ಮೂಕಾಂಬಿಕೆಯಾದಳು. ಕಮಲಾಂಬಿಕೆಯಾದಳು. ದೀಪ್ತಿಯಾದಳು. ತಬಸ್ಸುಮ್ ಆದಳು. ವಿಜಯಲಕ್ಷ್ಮಿಯಾದಳು.
ಅಷ್ಟರಲ್ಲಿ ಎಸ್ಸೆಸ್ಸೆಲ್ಸಿ ಮುಗಿಯಿತು.
ನಂತರದ ದಿನಗಳಲ್ಲಿ ಅವಳು ಇನ್ನೇನೇನೋ ರೂಪಾಂತರಗಳನ್ನು ಪಡೆಯುತ್ತ `ಕಾದಲಕ್ಕು ಮರ್ಯಾದೈ’ ಸಿನಿಮಾ ನೋಡುವ ಹೊತ್ತಿಗೆ ಶಾಲಿನಿಯಾದಳು. ಬೆಂಗಳೂರಿಗೆ ಬಸ್ಸಿನಲ್ಲಿ ಬರುತ್ತ ಪಕ್ಕಕ್ಕೆ ಸಿಕ್ಕಿದ ಜಾನಕಿಯಾದಳು. ಚಾಲುಕುಡಿಯಿಂದ ವಾಪಸಾಗುತ್ತ ಎದುರಿಗೆ ಕುಳಿತ ಘಲ್ ಘಲ್ ಗೆಜ್ಜೆಯ ಹುಡುಗಿಯಾದಳು. ಎಂಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸಿಕ್ಕಿದ ಹೆಸರು, ವಿಳಾಸಗಳೇ ಗೊತ್ತಿಲ್ಲದ ಹೈಹೀಲ್ಡ್ ಸುಂದರಿಯಾದಳು. ಸಪ್ನಾ ಬುಕ್ ಸ್ಟಾಲಿನಲ್ಲಿ ಅರ್ಧ ಮಾತ್ರ ನೋಡಲು ಸಿಕ್ಕಿದ ಜಿಂಕೆಮರಿಯಾದಳು. ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ ಚೆಂದದ ಅಕ್ಕ ತಂಗಿಯರಲ್ಲಿ ಒಮ್ಮೆ ಅಕ್ಕ ಆದಳು. ಇನ್ನೊಮ್ಮೆ ತಂಗಿಯಾದಳು. ಒಮ್ಮೆ ಜೀನ್ಸ್ ಹಾಕಿದಳು. ಇನ್ನೊಮ್ಮೆ ಮಿಡಿ ತೊಟ್ಟಳು.
ಹೀಗೆಲ್ಲಾ ಆಗಿ ಇನ್ನೇನೇನೋ ಆಗಿ ಒಮ್ಮೆ ಫೋನಿನಲ್ಲಿ ಕೇಳಿದ ಸುಂದರ ದನಿಯಾದಳು. ಎಫ್ ಎಂ ನಲ್ಲಿ ರಾತ್ರಿ ತೇಲಿ ಬಂದ ಅಭಿಸಾರಿಕೆಯಾದಳು. ಇಂಟರ್ನೆಟ್‌ನಲ್ಲಿ ಸಿಕ್ಕಿದ ಇನ್ನೇನೋ ಹೆಸರಿನವಳಾದಳು. ಹೆಸರೇ ಗೊತ್ತಿಲ್ಲದ ಅವಳಾದಳು. ಅವಳಾದಳು ಮತ್ತು ಅವಳಾದಳು. ಕೊನೆಗೊಮ್ಮೆ ಲಾಲ್‌ಬಾಗ್‌ನಲ್ಲಿ ಸಿಕ್ಕುವ ಹುಡುಗಿಯಾದಳು.
ದಾಖಲಿಸಲೇಬೇಕಾದ ಸಂಗತಿಯೆಂದರೆ ಅವಳು ಒಮ್ಮೆ ನನ್ನ ಹೆಂಡತಿಯೂ ಆಗಿದ್ದಳು!
6 Comments
Abosolutely wonderful shortstory.
Dear Raghavendra,
Thank you for
the feedback.
I am honoured!
Sir, ella helidri, bhagirathi yenadlu antha helale illa??
A really wonderful story.. nimma train nalli sikkidavala storynu nange istha aagittuu… this is equally interesting.
Gud one…
ಈ ಕತೆ ಯಾವುದಾದರು ಪತ್ರಿಕೆಯಲ್ಲಿ ಅಥವ ಬೇರೆ ಪೋರ್ಟಲ್ನಲ್ಲಿ ಪ್ರಕಟವಾಗಿತ್ತ?. ಇಂತಹ ಕತೆಗಳಿಂದಲೇ ರಾಜ್ಕಪೂರ್ ಇಷ್ಟವಾಗೋದು. ಇದು ಎಲ್ಲರ ಕತೆಯೂ ಆಗಿರುತ್ತದೆ.
excellent imagination i felt very happy .
idu pratiyobba hudugana manassinalli huttuva bhavane mattu kalpane …
idanne hudugiya belavanigeyondige besediruva nimma kathavidhana tumba santoshavannuntumaditu…
Post a Comment