ಕತೆ: ಕಾವ್‌ ಕಾವ್‌!

ಯೋ…ಸುಟ್‌ ಕೂಸೇ’ ಎಂದು ಬಯ್ದುಕೊಳ್ಳುತ್ತಾಳೆ ಹಿರ್ಬೆ, ತನ್ನಷ್ಟಕ್ಕೆ.ಹಿರ್ಬೆ ಅಂದರೆ ಗೊತ್ತಲ್ಲ?ಹಿರಿಯಬ್ಬೆ.

ಹಿರಿ ಅಬ್ಬೆ.

ಅಂದರೆ ದೊಡ್ಡಮ್ಮ.

ಅವಳ ಕೆಲಸ ಬೆಳಕು ಹರಿಯುವ ಮೊದಲೇ ಶುರುವಾಗುತ್ತದೆ. ಬಚ್ಚಲ ಒಲೆಗೆ ಬೆಂಕಿ ಹಾಕುವುದರೊಂದಿಗೆ. ಅಷ್ಟಾದ ಮೇಲೆ ಕೊಟ್ಟಿಗೆಗೆ ಹೋಗಿ ದನಗಳನ್ನು ದಣಪೆಯಿಂದ ಆಚೆ ದಾಟಿಸಿ ಬಂದು ಹಿರ್ಬೆ ಮುಖ ತೊಳೆದುಕೊಳ್ಳುತ್ತಾಳೆ. ದೇವರಿಗೊಂದು ನಮಸ್ಕಾರ ಮಾಡಿ ಪುನಃ ಕೊಟ್ಟಿಗೆಗೆ. ಈ ಸಲ ಆಕಳಿಗೆ ಗೋಗ್ರಾಸ. ಮತ್ತೆ ಮನೆಗೆ ಬಂದು ಕಾಲು ತೊಳದುಕೊಂಡವಳು ಹೆಬ್ಬಾಗಿಲು ದಾಟಿ ಅಂಗಳಕ್ಕೆ ಬರುತ್ತಾಳೆ. ಅದರ ತುದಿಯಲ್ಲಿ ತುಳಸಿ ಕಟ್ಟೆಯಿದೆ. ಅದನ್ನು ಮೂರು ಸುತ್ತು ಸುತ್ತುತ್ತಾಳೆ.

`ಏಳು ನಾರಾಯಣನೇ ಏಳು ಲಕ್ಷ್ಮೀರಮಣ…’

ಅದಾದ ಮೇಲೆ ಚೊಬ್ಬೆ ಹಿಡಿದುಕೊಂಡು ಈಶ್ವರನಿಗೆ ಪತ್ರೆ ಕೊಯ್ಯುತ್ತಾಳೆ. ಗಣಪತಿಗೆ ದೂರ್ವೆ ಕೊಯ್ಯುತ್ತಾಳೆ. ಮಲ್ಲಿಗೆ ಹೂವು ಯಾವ ದೇವರಿಗಾದರೂ ಆಗುತ್ತದೆ. ದಾಸವಾಳ ಲಕ್ಷ್ಮೀನಾರಾಯಣನಿಗೆ.

`ಏಳು ನಾರಾಯಣನೇ ಏಳು ಲಕ್ಷ್ಮೀ ರಮಣ…’

ವಿಚಿತ್ರವೆಂದರೆ ಹಿರ್ಪನ ಹೆಸರೂ ನಾರಾಯಣ.

ಹಿರ್ಪ ಎಂದರೆ ಗೊತ್ತಲ್ಲ?

ಹಿರಿ ಅಪ್ಪ.

ಅಂದರೆ ದೊಡ್ಡಪ್ಪ.

ನಾರಾಯಣ ಎಂಬ ಹೆಸರು ಊರವರ ಬಾಯಲ್ಲಿ `ನಾರೇಣ’ ಆಗಿದೆ. ದೊಡ್ಡಪ್ಪ ನನಗೂ ನಾರೇಣ ಹಿರ್ಪ! ಹಿರ್ಬೆಯ ಹೆಸರೇನು ಎನ್ನುವುದು ನನಗಂತೂ ಗೊತ್ತಿಲ್ಲ. ಬಹುಶಃ ಹಿರ್ಬೆಗೂ ಮರೆತುಹೋಗಿರಬೇಕು!

ಪತ್ರೆ ಆಯ್ತು. ಮಲ್ಲಿಗೆ ಆಯ್ತು. ದೂರ್ವೆ ಆಯ್ತು. ದಾಸವಾಳ ಹೂವುಗಳನ್ನೂ ಆರಿಸಿಕೊಂಡಾಯಿತು.

`ಏಳು ನಾರಾಯಣನೇ ಏಳು ಲಕ್ಷ್ಮೀರಮಣ…’

ಹೀಗೆ ಹಿರ್ಬೆ ಮೂರನೇ ಸಲ ಹೇಳುವ ಹೊತ್ತಿಗೂ ನಾರೇಣ ಹಿರ್ಪ ಮಾತ್ರ ಎದ್ದಿರುವುದಿಲ್ಲ. ಆಗಲೇ ರೇಡಿಯೋದಲ್ಲಿ ಸಂಸ್ಕೃತ ವಾರ್ತೆ ಮುಗಿದಿದೆ. ಹಿರ್ಬೆ ಈಗ ಒಳಕ್ಕೆ ಬರುತ್ತಾಳೆ. ಚಿಂತನ ಮುಗಿದಿದೆ. ಒಲೆಗೆ ಬೆಂಕಿ ಹಚ್ಚುತ್ತಾಳೆ. ರೇಡಿಯೋದಲ್ಲಿ ಪ್ರದೇಶ ಸಮಾಚಾರ. ಬಂಡಿಯಿಂದ ಮೊದಲ ದೋಸೆ ಬಟ್ಟಲಿಗೆ ಬರುತ್ತದೆ.

`ಪ್ರದೇಶ ಸಮಾಚಾರದ ಮುಖ್ಯಾಂಶಗಳು’

ಹಿರ್ಬೆ ಕೆಲಸ ಮಾಡುತ್ತಲೇ ಹೋಗುತ್ತಾಳೆ. ನಾನು ಎದುರಾದರೆ `ಯೋ…ಸುಟ್‌ ಕೂಸೇ’ ಎನ್ನುತ್ತಾಳೆ. ಸಾಧ್ಯವಾದಷ್ಟೂ ತಾನೇ ಕೆಲಸ ಮಾಡುತ್ತಾಳೆ. ಸಹಾಯ ಮಾಡುವುದಕ್ಕೆ ಹೋದರೆ ಸಂಕೋಚಪಟ್ಟುಕೊಳ್ಳುತ್ತಾಳೆ. ಎದ್ದಾಗಿನಿಂದ ತಾನು ಕೆಲಸ ಮಾಡುತ್ತಲೇ ಇರುತ್ತಾಳಾದರೂ ನಾನು ಏನಾದರೂ ಮಾಡತೊಡಗಿದರೆ ಎಷ್ಟು ಹೊತ್ತು ಅಂತ ಕೆಲಸ ಮಾಡುವೆ ಎಂದು ಕೇಳುತ್ತ ಒಂದಿಷ್ಟು ಹೊತ್ತು ಸುಮ್ಮನೇ ಕುಳಿತುಕೊಳ್ಳಲು ಹೇಳುತ್ತಾಳೆ.

ನಾನು ಬಂದಿದ್ದೇ ಹಿರ್ಬೆಗೆ ಒಂದಿಷ್ಟು ಸಹಾಯ ಮಾಡೋಣ ಅಂತ. ಹಿರ್ಬೆಯ ಸೊಸೆ, ಅಂದರೆ ಅತ್ತಿಗೆ, ಹೆರಿಗೆಗೆ ಅಂತ ಅಮ್ಮನ ಮನೆಗೆ ಹೋಗಿದ್ದಾಳೆ. ಸುಬ್ಬಣ್ಣ, ಅಂದರೆ ಹಿರ್ಬೆಯ ಮಗ, ಹೊರಗಿನ ಕೆಲಸಗಳಲ್ಲೇ ಸುಸ್ತಾಗುತ್ತಾನೆ. ಹಾಗಾಗಿ ಸಹಾಯ ಕೇಳಲು ಹೋದರೆ ಸುಬ್ಬಣ್ಣನೂ ಒಮ್ಮೊಮ್ಮೆ ಸಿಡುಕಿಬಿಡುವುದಿದೆ. ಹಿರ್ಬೆಗೆ ಇದೆಲ್ಲ ಅಭ್ಯಾಸವಾಗಿ ಹೋಗಿದೆ. ನಾರೇಣ ಹಿರ್ಪನಿಗೆ ಬಯ್ಯುವುದು ಅಭ್ಯಾಸವಾದಂತೆ!

ರೇಡಿಯೋದಲ್ಲಿ ಈಗ ಕನ್ನಡ ವಾರ್ತೆ ಪ್ರಸಾರವಾಗುತ್ತಿದೆ. ಸುಬ್ಬಣ್ಣ ಅಷ್ಟೊತ್ತಿಗೆ ದೋಸೆ ತಿನ್ನಲು ಕುಳಿತಾಗಿದೆ.

ಒಂದು,ಎರಡು,ಮೂರು,ನಾಲ್ಕು…

ಇನ್ನೊಂದು ದೋಸೆ ಹಾಕಿಕೊಳ್ಳಲು ಹಿರ್ಬೆ ಹೇಳುತ್ತಾಳೆ.

`ಈಗ ವಾರ್ತೆಗಳ ಮುಖ್ಯಾಂಶಗಳು’.

ಸುಬ್ಬಣ್ಣ ಸಾಕು ಎನ್ನುತ್ತಾನೆ. ದೋಸೆ ಎರೆದು ಬಡಿಸುತ್ತೇನೆ ಎಂದು ಹೇಳಿ ನಾನು ಹಿರ್ಬೆಗೆ ಬಟ್ಟಲ ಮುಂದೆ ಕುಳಿತುಕೊಳ್ಳಲು ಹೇಳುತ್ತೇನೆ. ಸಂಕೋಚಪಟ್ಟುಕೊಳ್ಳುತ್ತಲೇ ಅವಳು ಕುಳಿತುಕೊಳ್ಳುತ್ತಾಳೆ.

`ಈಗ ಚಿತ್ರಗೀತೆಗಳು’.

ಹಿರ್ಬೆ ಎರಡೇ ಎರಡು ದೋಸೆ ತಿನ್ನುತ್ತಾಳೆ. ಕಹಿ ಚಹಾ ಕುಡಿಯುತ್ತಾಳೆ.

`ಚಿ.ಉದಯಶಂಕರ್‌ ಅವರ ಗೀತೆಗೆ ಆರೆನ್‌ ಜೆಯಗೋಪಾಲ್‌ ಸಂಗೀತ..’

ಈಗ ಹಿರ್ಬೆ ಲಗುಬಗೆಯಿಂದ ಬಂದು ಪುನಃ ಬಂಡಿ ಮುಂದೆ ಕುಳಿತುಕೊಳ್ಳುತ್ತಾಳೆ. ನನ್ನನ್ನು ಎಬ್ಬಿಸಿ ಬಟ್ಟಲ ಮುಂದೆ ಕೂರಿಸುತ್ತಾಳೆ. ಬೆಲ್ಲ ತುಪ್ಪ ಬಡಿಸುತ್ತಾಳೆ. ಮಧ್ಯದಲ್ಲೇ ದೋಸೆ ಎರೆಯುತ್ತಾಳೆ. ಎರಡು ಸಾಕು ಎಂದರೆ ನಾಲ್ಕು ತಿನ್ನಲೇಬೇಕು ಎಂದು ಹಟ ಮಾಡುತ್ತಾಳೆ.`ಸುಟ್‌ ಕೂಸೇ’ ಎಂದು ತನ್ನಷ್ಟಕ್ಕೇ ಹೇಳಿಕೊಳ್ಳುತ್ತ ಸಿಹಿ ಚಹಾ ಮಾಡಿಕೊಡುತ್ತಾಳೆ.

`ಈಗ ರೈಲ್ವೇ ಮಾಹಿತಿ’

ಹಿರ್ಪನ ಕೋಣೆಯಿಂದ ಸದ್ದು ಕೇಳುತ್ತಿದೆ. ಆತ ಎದ್ದಿದ್ದಾನೆ. ಅಂದರೆ ಹಿರ್ಬೆಯ ಕೆಲಸ ಸರಿಯಾಗಿ ಎರಡರಷ್ಟಾಗುತ್ತದೆ. ಆತನಿಗೆ ಎಲ್ಲವನ್ನೂ ಹಿರ್ಬೆಯೇ ಹೊಂದಿಸಿಕೊಡಬೇಕು. ಏನೇ ಬೇಕಾದರೂ ಆತ ಹಿರ್ಬೆಯನ್ನೇ ಕರೆಯುತ್ತಾನೆ. ಏನೇ ಹೆಚ್ಚುಕಡಿಮೆ ಆದರೂ ಹಿರ್ಬೆಯನ್ನೇ ಬಯ್ಯುತ್ತಾನೆ. ಯಾರ ಮೇಲೇ ಸಿಟ್ಟುಬಂದರೂ ಹಿರ್ಬೆ ಅದಕ್ಕೆ ಬೆಲೆ ತೆರುತ್ತಾಳೆ.

`ಈಗ ಸಮಯ ಎಂಟು ಗಂಟೆ. ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ವಾರ್ತೆಗಳು. ದೆಹಲಿ ಕೇಂದ್ರದಿಂದ’

ಹಿರ್ಪ ಎದ್ದು ಬಚ್ಚಲಮನೆಗೆ ಬರುತ್ತಾನೆ.ಕಟ್ಟೆ ತುದಿಗೆ ಕುಳಿತು ಒಂದು ಕವಳ ಹಾಕುತ್ತಾನೆ. ಎದ್ದು ಹೋಗಿ ತೆಂಗಿನ ಮರದ ಬಳಿ ಉಚ್ಚೆ ಹೊಯ್ದು ಕವಳ ಉಗಿದು ಬರುತ್ತಾನೆ. ಹಿರ್ಬೆ ಈಗ ಹಿರ್ಪನಿಗೆ ಬ್ರಶ್ಶು ಮತ್ತು ಪೇಸ್ಟು ಸಿದ್ಧಮಾಡಿದ್ದಾಳೆ. ಅಡುಗೆ ಮನೆಗೂ ಬಚ್ಚಲ ಮನೆಗೂ ಒಂದೇ ಸಮನೆ ಓಡಾಡುತ್ತಿದ್ದಾಳೆ. ಹಿರ್ಪನ ಸ್ನಾನ ಆರಂಭವಾಗಿದೆ.

`ಧಿಸ್‌ ಈಸ್‌ ಆಲ್‌ ಇಂಡಿಯಾ ರೇಡಿಯೋ. ದಿ ಮಾರ್ನಿಂಗ್‌ ನ್ಯೂಸ್‌…’

ಹಿರ್ಪ ಅಲ್ಲಿಂದಲೇ ಏನೇನೋ ಬಯ್ಯುತ್ತಿದ್ದಾನೆ. ಹಿರ್ಬೆ ಸರ್ಕಸ್‌ ಮಾಡುತ್ತಿದ್ದಾಳೆ. ನಾನೂ ಸಹಾಯಕ್ಕೆ ನಿಲ್ಲುತ್ತೇನಾದರೂ ಸಾಕಷ್ಟು ಕೆಲಸ ಹಿರ್ಬೆಯದೇ. ಹೊರಗಡೆ ಆಳುಗಳು ಬಂದಿದ್ದಾರೆ. ಅವರಿಗೆ ಏನೇನೋ ಕೆಲಸ ಹೇಳಬೇಕಾಗಿದೆ. ನಾನೂ ಬರದಿದ್ದರೆ ಹಿರ್ಬೆ ಇದನ್ನೆಲ್ಲ ಒಬ್ಬಳೇ ಹೇಗೆ ಮಾಡುತ್ತಿದ್ದಳು ಎಂದು ಆಶ್ಚರ್ಯ ಪಟ್ಟುಕೊಳ್ಳುತ್ತೇನೆ. ಆದರೆ ಖಂಡಿತಾ ಹಿರ್ಬೆ ಇದನ್ನೆಲ್ಲ ನಿಭಾಯಿಸಿರುತ್ತಿದ್ದಳು. ಏಕೆಂದರೆ ನಾನು ಬಂದು ಒಂದು ದಿನವಾಗಿತ್ತು ಅಷ್ಟೇ. ಅಂದರೆ ಮೊದಲ ದಿನ ಬೆಳಿಗ್ಗೆ ಅವಳು ಒಬ್ಬಳೇ ಇದನ್ನೆಲ್ಲ ಮಾಡಿದ್ದಾಳೆ. ಇಂದು ರಾತ್ರಿಯಿಂದ ಸುಮಾರು ನಾಲ್ಕು ದಿನ ಸುಬ್ಬಣ್ಣ ಮತ್ತು ಹಿರ್ಪ ರಾತ್ರಿಯಿಡೀ ಕೆಲಸ ಮಾಡುವವರಿದ್ದಾರೆ. ಭತ್ತದ ಕಣದಲ್ಲಿ. ಅಲ್ಲಿ ಭತ್ತ, ಹುಲ್ಲು ಬೇರೆ ಮಾಡಲಿಕ್ಕಿದೆ. ಆಳುಗಳು ಬರುತ್ತಾರೆ. ಅವರಿಗೆಲ್ಲ ತಿಂಡಿ ಆಗಬೇಕು. ಸಿಹಿ ಚಹಾ ಆಗಬೇಕು. ಇದೆಲ್ಲ ಹಿರ್ಬೆ ಒಬ್ಬಳಿಂದಲೇ ಸಾಧ್ಯ ಇಲ್ಲ ಎಂದು ಸುಬ್ಬಣ್ಣ ನನ್ನನ್ನು ನಿನ್ನೆ ಇಲ್ಲಿಗೆ ಕರೆದುಕೊಂಡು ಬಂದಿದ್ದು.

ಬಚ್ಚಲಮನೆಯಲ್ಲಿ ಸೀಗೆಕಾಯಿ ಖರ್ಚಾಗಿತ್ತು ಎನಿಸುತ್ತದೆ. ಹಿರ್ಬೆ ಗಮನಿಸಿರಲಿಕ್ಕಿಲ್ಲ. ಗಮನಿಸಿದರೂ ಮರೆತುಹೋಗಿರುತ್ತದೆ. ಈಗ ಹೇಳಿದರೆ ಸೀಗೆಕಾಯಿ ಪುಡಿಯನ್ನು ಬಚ್ಚಲಮನೆಗೆ ತೆಗೆದುಕೊಂಡು ಹೋಗಿ ಕೊಡುವುದು ಅವಳಿಗೊಂದು ಕೆಲಸವೇ? ಆದರೆ ಹಿರ್ಪ ಅದನ್ನೇ ಒಂದು ದೊಡ್ಡ ರಂಪ ಮಾಡುತ್ತಾನೆ.

`ಬೋಸುಡಿರಂಡೆ ನಾಶನಾಯೋಗ್ಲಿ…’

ಹಿರ್ಪ ಬಯ್ಯುತ್ತಾನೆ. ಅವನ ಫೇವರಿಟ್‌ ಬಯ್ಗುಳ ಅದು. ಹಿರ್ಬೆ ಓಡುತ್ತಾಳೆ. ಮತ್ತೂ ಒಂದಷ್ಟು ಬಯ್ಗುಳ ಬರುತ್ತದೆ. ಹಿರ್ಬೆ ತನ್ನ ಪಾಡಿಗೆ ತಾನಿದ್ದಾಳೆ. ಕೆಲಸ ಮುಂದುವರೆದಿದೆ. ಹಿರ್ಪನ ಬಯ್ಗುಳವೂ ನಿಂತಿದೆ.

`ದಟ್ಸ್‌ ದಿ ಎಂಡ್‌ ಆಫ್‌ ದಿ ಮಾರ್ನಿಂಗ್‌ ನ್ಯೂಸ್‌’.

ಹಿರ್ಪ ಸ್ನಾನ ಮುಗಿಸಿ ಬರುತ್ತಾನೆ.

`ಈಗ ಶಾಸ್ತ್ರೀಯ ಸಂಗೀತ’

ದೇವರ ಕೋಣೆಯಲ್ಲಿ ಆತನ ಮಂತ್ರ ಪಠಣ ಆರಂಭವಾಗಿದೆ. ಹಿರ್ಬೆ ಎಲ್ಲವನ್ನೂ ಹೊಂದಿಸಿಟ್ಟಿದ್ದಾಳೆ. ದೇವರ ನೈವೇದ್ಯಕ್ಕೆ ಎಲ್ಲವೂ ಸಿದ್ಧವಾಗಿದೆ. ಮಣೆ ಹಾಕಿಯಾಗಿದೆ. ಬಟ್ಟಲು ತೊಳೆದಾಗಿದೆ. ಕೈಗೆ ಸಿಗುವಂತೆ ಹೂವಿದೆ. ದೇವರನ್ನು ಒಂದೊಂದಾಗಿ ಇಳಿಸುತ್ತ ಆತನ ಮಂತ್ರ ಪಠಣ ಮುಗಿಯುತ್ತದೆ. ಈಗ ಸಣ್ಣಗೆ ಆತ ಗೊಣಗಿಕೊಳ್ಳುತ್ತಿದ್ದಾನೆ. ರೇಡಿಯೋದಲ್ಲಿ ಶಾಸ್ತ್ರೀಯ ಸಂಗೀತ.

ಹಿರ್ಪ ಈಗ ಬೆಳಗಿನ ತಿಂಡಿಗೆ ಬಂದು ಕುಳಿತಿದ್ದಾನೆ. ಹಿರ್ಬೆ ಎಲ್ಲವನ್ನೂ ಎಚ್ಚರಿಕೆಯಿಂದ ಮಾಡುತ್ತಿದ್ದಾಳೆ. ಆದರೂ ಏನೋ ತಪ್ಪಾಗುತ್ತದೆ ಅಥವಾ ಹಿರ್ಪ ತಪ್ಪು ಹುಡುಕುತ್ತಾನೆ.

ಚಹಾ ಹೆಚ್ಚು ಬಿಸಿಯಾದರೆ `ಇಷ್ಟು ಬಿಸಿ ಕುಡಿದರೆ ಬಾಯಿ ಎಂತಾ ಆಗವು?’.

ಕಮ್ಮಿ ಬಿಸಿ ಇದ್ದರೆ `ಬಿಸಿಯಿಲ್ಲದಿದ್ದರೆ ಚಹಾ ಚಹಾವೇ ಅಲ್ಲ’.

ಹಿರ್ಪನ ತಿಂಡಿ ಮುಗಿದಿದೆ. ಈಗ ಹೊರಗಡೆ ಎಲ್ಲಿಗೋ ಹೋಗುತ್ತಾನೆ. ನಿಟ್ಟುಸಿರುಬಿಡುತ್ತಾಳೆ ಎಂದು ಅಂದುಕೊಂಡು ನಾನು ಹಿರ್ಬೆಯ ಮುಖ ನೋಡುತ್ತೇನೆ. ಅಂಥದ್ದೇನೂ ಕಾಣಿಸುವುದಿಲ್ಲ. ರೇಡಿಯೋ ಪ್ರಸಾರ ಆಗಲೇ ನಿಂತಿದೆ. ಹಿರ್ಬೆ ಈಗ ಪುನಃ ಕೊಟ್ಟಿಗೆಗೆ ಹೋಗುತ್ತಾಳೆ. ಸೆಗಣಿ ಗುಡಿಸುತ್ತಾಳೆ. ಎಮ್ಮೆಗಳನ್ನು ಮಾತಾಡಿಸುತ್ತಾಳೆ. ಆಕಳ ಕರುವಿಗೆ ಗಾಯವಾಗಿದೆ. ಅದಕ್ಕೆ ಮದ್ದು ಬಿಡುತ್ತಾಳೆ. ಮುದ್ದು ಮಾಡುತ್ತಾಳೆ. ನಾನೂ ಒಮ್ಮೆ ಕೊಟ್ಟಿಗೆಗೆ ಹೋಗಿ ಬರುತ್ತೇನೆ.

………..

………..

………..

`ಈಗ ಹನ್ನೆರಡು ಗಂಟೆ ಮೂವತ್ತು ನಿಮಿಷ. ಶಾಸ್ತ್ರೀಯ ಸಂಗೀತ’

ಹಿರ್ಪ ಬಂದಿದ್ದಾನೆ. ಆತನ ಗೊಣಗಾಟ ಮುಂದುವರೆದಿದೆ. ಸುಬ್ಬಣ್ಣ ಬಂದಿದ್ದರೂ ಅದು ಗೊತ್ತಾಗುವುದಿಲ್ಲ. ಅವನಾಯಿತು ಅವನ ಕೆಲಸ ಆಯಿತು.

`ಈಗ ಕನ್ನಡದಲ್ಲಿ ವಾರ್ತೆಗಳು’

ಹಿರ್ಪ ಹೊರಗೆ ಕುಳಿತು ಯಾರೊಂದಿಗೋ ಮಾತಾಡುತ್ತಿದ್ದಾನೆ. ಮಧ್ಯೆ ಮಧ್ಯೆ ರೇಗುತ್ತಾನೆ. ಹಿರ್ಬೆಗೆ ಮಜ್ಜಿಗೆ ತರಲು ಹೇಳುತ್ತಾನೆ. ತೆಗೆದುಕೊಂಡು ಹೋಗಿ ಮಜ್ಜಿಗೆ ಕೊಟ್ಟರೆ `ಉಪ್ಪು ಹಾಕಿದ್ದು ಬೇಡ’ ಎನ್ನುತ್ತಾನೆ. ಉಪ್ಪು ಹಾಕಿ ತೆಗೆದುಕೊಂಡು ಹೋದರೆ `ಖಾಲಿ ಮಜ್ಜಿಗೆ’ ಎನ್ನುತ್ತಾನೆ.

`ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು’

ಹಿರ್ಬೆ ಸ್ನಾನ ಮುಗಿಸುತ್ತಾಳೆ. ಸುಬ್ಬಣ್ಣನ ಸ್ನಾನವಂತೂ ಯಾವಾಗಲೋ ಆಗಿದೆ. ಮಧ್ಯಾಹ್ನ ಇಂದು ನಾನೇ ಅಡುಗೆ ಮಾಡಿದ್ದೇನೆ.

`ಈಗ ಚಿತ್ರಗೀತೆಗಳು’

ಸುಬ್ಬಣ್ಣನ ಊಟ ಮುಂದುವರೆದಿದೆ. ಹಿರ್ಪ ಇನ್ನೂ ಹೊರಗೇ ಕುಳಿತು ಕವಳ ಹಾಕುತ್ತಿದ್ದಾನೆ. ಅಲ್ಯಾರೋ ಆಳುಗಳೊಂದಿಗೆ ಹರಟುತ್ತಿದ್ದಾನೆ. ನಾಯಿಗಳು ಕಚ್ಚಾಡುತ್ತವೆ.

`ದೊಡ್ಡರಂಗೇಗೌಡರ ಗೀತೆಗೆ ಹಂಸಲೇಖಾ ಸಂಗೀತ..’

ದೊಡ್ಡಪ್ಪ ನಾಯಿಗಳನ್ನು ಅಟ್ಟಿಸಿಕೊಂಡು ಹೋಗುತ್ತಾನೆ. ಕೊನೆಗೂ ಊಟಕ್ಕೆ ಬರುತ್ತಾನೆ. ಊಟ ಮಾಡುವಾಗ ಒಂದಷ್ಟು ಮಾತುಗಳು ಬರುತ್ತವೆ. ಹಿರ್ಬೆ ಒಂದಷ್ಟು ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

`ಬೋಸುಡಿರಂಡೆ… ನಾಶನಾಯೋಗ್ಲಿ’

`ದ ಆಫ್ಟರ್‌ನೂನ್‌ ನ್ಯೂಸ್‌’

ಊಟ ಮುಂದುವರೆಯುತ್ತದೆ. ಮಾತುಗಳೂ ಮುಂದುವೆಯುತ್ತವೆ. ಬಿಸಿ ಅನ್ನಕ್ಕೆ ಮಜ್ಜಿಗೆ ಹಾಕಿಬಿಟ್ಟಿದ್ದರಿಂದ ಹಿರ್ಪನಿಗೆ ಸಿಟ್ಟುಬರುತ್ತದೆ. ಮತ್ತೊಂದಿಷ್ಟು ಬಯ್ಗುಳ. ಮಾತುಗಳು. `ಬೋಸುಡಿರಂಡೆ… ನಾಶನಾಯೋಗ್ಲಿ!’.

`ಎಂಡ್‌ ಆಫ್‌ದಿ ಆಫ್ಟರ್‌ನೂನ್‌ ನ್ಯೂಸ್‌’

ಇದಾದ ನಂತರ ಹಿರ್ಪ ಮಧ್ಯಾಹ್ನದ ನಿದ್ದೆಗೆ ಹೊರಡುತ್ತಾನೆ. ಅವನಿಗೆ ಹಾಸಿಗೆ ಸರಿ ಮಾಡಿಟ್ಟು, ದಿಂಬು ಜೋಡಿಸಿ ಊಟಕ್ಕೆ ಬರುತ್ತಾಳೆ ಹಿರ್ಬೆ. ಈ ಸಲವೂ ನಾನು ಅವಳ ಮುಖದಲ್ಲೊಂದು ನಿಟ್ಟುಸಿರನ್ನು ಹುಡುಕಲು ಹೋಗಿ ಸೋಲುತ್ತೇನೆ.

ಮಧ್ಯಾಹ್ನದ ರೇಡಿಯೋ ಪ್ರಸಾರ ಮುಗಿಯುತ್ತದೆ.

………

………

………

………

ಸಂಜೆಯಾಗಿ ಕತ್ತಲಾಗುತ್ತಿದೆ.

`ಈಗ ಕೃಷಿರಂಗ’

ಹಿರ್ಪ ತೋಟದಿಂದ ಬಂದಿದ್ದಾನೆ. ಇಂದು ರಾತ್ರಿಯಿಂದ ಭತ್ತದ ಕಣದಲ್ಲಿ ಕೆಲಸ. ಹುಲ್ಲು, ಭತ್ತ ಬೇರೆ ಮಾಡುವ ಕೆಲಸ. ಹಿರ್ಪ ಮತ್ತು ಸುಬ್ಬಣ್ಣ ಲಗುಬಗೆಯಿಂದ ಓಡಾಡುತ್ತಿದ್ದಾರೆ. ನಾನು ಮತ್ತು ಹಿರ್ಬೆ ಆಳುಗಳಿಗೆ ತಿಂಡಿ ಹೊಂದಿಸಲು ಪ್ರಯತ್ನ ಮಾಡುತ್ತಿದ್ದೇವೆ.

`ಈಗ ಕನ್ನಡದಲ್ಲಿ ವಾರ್ತೆಗಳು’

ಹಿರ್ಪನ ಟವೆಲ್‌ ಕಾಣುತ್ತಿಲ್ಲ. ಕೂಗಾಡುತ್ತಿದ್ದಾನೆ. ಒಲೆಯ ಮುಂದೆ ಕುಳಿತಿದ್ದ ಹಿರ್ಬೆ ಎದ್ದು ಹುಡುಕಾಟ ಆರಂಭಿಸುತ್ತಾಳೆ. ಯಾಂತ್ರಿಕವಾಗಿ. ಟವೆಲ್‌ ಸಿಕ್ಕಿರಬೇಕು. ಹಿರ್ಪನ ಬಯ್ಗುಳವೂ ನಿಂತಿದೆ.

`ಬೋಸುಡಿರಂಡೆ…ನಾಶನಾಯೋಗ್ಲಿ’

`ಇಲ್ಲಿಗೆ ಕನ್ನಡ ವಾರ್ತೆಗಳು ಮುಕ್ತಾಯವಾಯಿತು’

ಯುವವಾಣಿ ಬರುವ ಮೊದಲೇ ಸುಬ್ಬಣ್ಣ ಮತ್ತು ಹಿರ್ಪ ಭತ್ತದ ಕಣಕ್ಕೆ ಹೊರಟಿದ್ದಾರೆ. ನಾಳೆ ಬೆಳಗಿನವರೆಗೆ ಯಾವುದೇ ಬಯ್ಗುಳವಿಲ್ಲ ಎಂದುಕೊಂಡು ನಾನು ಹಿರ್ಬೆಯ ಮುಖದಲ್ಲಿ ಸಮಾಧಾನದ ಗೆರೆಗಳನ್ನು ಹುಡುಕುತ್ತೇನೆ. ಅಂಥದ್ದೇನೂ ನನಗೆ ಕಾಣುವುದಿಲ್ಲ.

…………

ಸುಬ್ಬಣ್ಣ ಮತ್ತು ಹಿರ್ಪ ಕಣಕ್ಕೆ ಹೋದ ಮೇಲೆ ಹಿರ್ಬೆ ಮಾತಾಡುತ್ತಾಳೆ. ಅವಳು ಮಾತಾಡುತ್ತಿದ್ದರೆ ಮನೆ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಹಿರ್ಪ ಮಾತಾಡತೊಡಗಿದರೆ ಕರ್ಫ್ಯೂ.

…………

…………

…………

ಬೆಳಿಗ್ಗೆ ಭತ್ತದ ಕಣಕ್ಕೇ ಹೋಗಿ ಎಲ್ಲರಿಗೂ ತಿಂಡಿ-ಚಾ ಕೊಟ್ಟು ಬರುತ್ತೇವೆ. ಕೆಲಸ ಮುಂದುವರೆಯುತ್ತದೆ. ಹಿರ್ಬೆಯ ಕಷ್ಟಗಳು ಹೆಚ್ಚಾಗುತ್ತವೆ. ಹಿರ್ಪ ಮನೆಗೆ ವಾಪಸಾಗುತ್ತಾನೆ.

`ಶಾಸ್ತ್ರೀಯ ಸಂಗೀತ ಕೇಳಿದಿರಿ. ಇನ್ನು ಮುಂದೆ…’

ಅಷ್ಟರಲ್ಲಿಯೇ ಸುಬ್ಬಣ್ಣ ಬಂದು ಸ್ನಾನ ಮುಗಿಸಿ ದೇವರ ನೈವೇದ್ಯ ಮಾಡಿ ತಿಂಡಿ ತಿಂದು ಮಲಗಿಬಿಟ್ಟಿರುತ್ತಾನೆ. ರಾತ್ರಿಯಿಡೀ ನಿದ್ದೆಗೆಟ್ಟದ್ದರಿಂದ ಅವನಿಗೆ ಬೇಗನೇ ನಿದ್ದೆ ಬಂದಿರಬೇಕು. ಹಗಲೆಲ್ಲ ನಿದ್ದೆ ಮಾಡದೇ ಕಳೆದುಬಿಟ್ಟರೆ ಪುನಃ ರಾತ್ರಿ ಕಷ್ಟವಾಗುತ್ತದೆ ಎನ್ನುವುದು ಅವನ ಲೆಕ್ಕಚಾರವಿರಬಹುದು.

ಹಿರ್ಪನೂ ಸ್ನಾನ ಮಾಡಿ ತಿಂಡಿ ಮುಗಿಸುತ್ತಾನೆ. ಮಲಗುವ ಮುನ್ನ ಅವನ ಬೇಡಿಕೆಗಳು ನೂರಾರಿರುತ್ತವೆ. ಹಿರ್ಬೆಗೆ ಬರೀ ಅದೇ ಕೆಲಸ. ಮಲಗುವ ಕೋಣೆಯಿಂದಲೇ ಅವನ ಆದೇಶಗಳು ಬರುತ್ತವೆ. ಹಿರ್ಬೆ ಏನು ಬೇಕು ಅಂತ ಕೇಳಿದರೂ ತಪ್ಪು. ಕೇಳದಿದ್ದರೂ ತಪ್ಪು. ಕೂತರೂ ತಪ್ಪು. ನಿಂತರೂ ತಪ್ಪು. ರಾತ್ರಿಯೆಲ್ಲ ಆರಾಮವಾಗಿ ಮನೆಯಲ್ಲಿ ಮಲಗಿದ ನೀನೇ ಹೀಗಾದರೆ ಹೇಗೆ ಎಂದು ಹಿರ್ಬೆಯನ್ನು ಹೀಗೆಳೆಯಲಾಗುತ್ತದೆ.

`ಬೋಸುಡಿರಂಡೆ ನಾಶನಾಯೋಗ್ಲಿ’

ಹಿರ್ಬೆ ಮಾತ್ರ ಯಾವಾಗಲೂ ಯಾವುದಕ್ಕೂ ಗೊಣಗಿದ್ದೇ ಇಲ್ಲ.

ತಲೆಗೆ ಎರಡು ದಿಂಬು. ಕಾಲಿಗೆ ಎರಡು ದಿಂಬು. ಪಕ್ಕದಲ್ಲಿ ಕುಡಿಯುವುದಕ್ಕೆ ನೀರು. ಕವಳಕ್ಕೆ ಎಲೆ, ಕವಳ ಸಂಚಿ. ಸೆಕೆಗೆ ಫ್ಯಾನು ಸತತವಾಗಿ ಸುತ್ತುತ್ತಲೇ ಇರಬೇಕು. ಕರೆಂಟಿಲ್ಲದಿದ್ದರೂ ಹಿರ್ಬೆಯೇ ಬೈಸಿಕೊಳ್ಳಬೇಕು. ಆತ ನಿದ್ರೆ ಮಾಡುವವನಾಗಿದ್ದರಿಂದ ಯಾರೂ ಮಾತಾಡಬಾರದು. ರೇಡಿಯೋ ಆಫ್‌. ದೊಡ್ಡ ಸಪ್ಪಳ ಮಾಡಬಾರದು. ಪಾತ್ರ ತೆಗೆದದ್ದು ಇಟ್ಟದ್ದು ಉಹೂಂ ಗೊತ್ತಾಗಕೂಡದು. ಹಾಗೇನಾದರೂ ಆಗಿ ಹಿರ್ಪನಿಗೆ ತೊಂದರೆ ಆದರೆ ಹಿರ್ಬೆ ಬೈಸಿಕೊಳ್ಳಬೇಕು!

`ಬೋಸುಡಿರಂಡೆ. ನಾಶನಾಯೋಗ್ಲಿ’

ಸಂಜೆಯ ತನಕ ಮನೆ ತುಂಬ ನಿಶ್ಯಬ್ದ . ಮನೆಯಲ್ಲಿ ಹುಡುಗರಿಲ್ಲ. ಹತ್ತಿರದಲ್ಲಿ ಮನೆಗಳಿಲ್ಲ. ಹಾಗಾಗಿ ನಿಶ್ಯಬ್ದಕ್ಕೆ ಭಂಗ ಬರಲಿಲ್ಲ. ಹಿರ್ಬೆ-ನಾನು ಪಿಸುದನಿಯಲ್ಲೇ ಮಾತು ಮುಗಿಸುತ್ತಿದ್ದೆವು ಮತ್ತು ಆ ದಿನದ ರಾತ್ರಿಯ ಕೆಲಸಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದೆವು.

ಎಲ್ಲವೂ ಸರಿಯಾಗಿತ್ತು, ಸಂಜೆಯ ತನಕ.

ಆ ಸಂಜೆ ಸುಮಾರು ನಾಲ್ಕೈದು ಗಂಟೆ ಹೊತ್ತಿಗೆ ಮನೆ ಎದುರಿಗಿರುವ ತೋಟಕ್ಕೆ ಎಲ್ಲಿಂದಲೋ ಒಂದಷ್ಟು ಕಾಗೆಗಳು ಹಾರಿ ಬಂದವು. ಸಂಖ್ಯೆಯಲ್ಲಿ ಹತ್ತಾರಿರಬಹುದು. ಮಧ್ಯಾಹ್ನ ಚಹಾ ಕುಡಿದವಳು ಸುಮ್ಮನೇ ತೋಟಕ್ಕೆ ಬಂದ ಕಾಗೆಗಳನ್ನು ನೋಡುತ್ತ ಕುಳಿತಿದ್ದೆ.

ಸ್ವಲ್ಪ ಹೊತ್ತಿನಲ್ಲೇ ಕಾಗೆಗಳ ಗಲಾಟೆ ಹೆಚ್ಚಾಯಿತು.

ಕಾವ್‌ ಕಾವ್‌ ಎಂದು ಅವುಗಳು ತಮ್ಮ ಮೀಟಿಂಗ್‌ನಲ್ಲಿ ಸ್ವರ ಏರಿಸಿ ಕೂಗಲಾರಂಭಿಸಿದವು. ಅವರ ಗಲಾಟೆಗೆ ಕೋಣೆಯಲ್ಲಿ ಮಲಗಿದ್ದ ಹಿರ್ಪನಿಗೆ ಎಚ್ಚರವಾಯಿತು.

`ನಾಶನಯೋಗ್ಲಿ’ ಎಂದು ಬಯ್ಯುತ್ತ ಕಣ್ಣುಜ್ಜಿಕೊಳ್ಳತ್ತ ಅಂಡರ್‌ವೇರ್‌ನಲ್ಲೇ ಹಿರ್ಪ ಎದ್ದು ಬಂದಿದ್ದ.

ಮುಖ ತೊಳೆದು ಕವಳ ಹಾಕಿದವನು ಚಾ ಮಾಡುವುದಕ್ಕೆ ಹೇಳಿದ. ಆಗಲೇ ಸಂಜೆಯಾಗಿದ್ದರಿಂದ ಮತ್ತೆ ಮಲಗುವ ಪ್ರಶ್ನೆ ಇರಲಿಲ್ಲ.

***

ಎರಡನೇ ದಿನ ಬೆಳಿಗ್ಗೆ ಕೂಡ ಯಾವ ವ್ಯತ್ಯಾಸವೂ ಇರಲಿಲ್ಲ. ರಾತ್ರಿಯಿಡೀ ಕಳದಲ್ಲಿ ಕೆಲಸ ಮಾಡಿದ್ದ ಸುಬ್ಬಣ್ಣ ಬೆಳಿಗ್ಗೆ ಬಂದವನೇ ಲಗುಬಗೆಯಿಂದ ಮಿಂದು ದೇವರಪೂಜೆ ಮುಗಿಸಿ ಉಂಡು ಮಲಗಿಬಿಟ್ಟಿದ್ದ. ಹಿರ್ಪ ಯಥಾಪ್ರಕಾರ ತಡವಾಗಿ ಬಂದ. ಬಂದವನು ಬೇಗ ಬೇಗ ಸ್ನಾನ ಮುಗಿಸಿ ಮಲಗದೇ ಅದೂ ಇದೂ ಮಾಡಿದ. ಹಿರ್ಬೆಯನ್ನು ಕರೆದ. ಏನೇನನ್ನೋ ಹುಡುಕಿಸಿದ. ಯಾರೊಂದಿಗೋ ಮಾತಾಡಿದ. ಯಾರಿಗೋ ಬಯ್ದ. ನಾನು ನೋಡುತ್ತಲೇ ಇದ್ದೆ.

ಪುನಃ ದಿಂಬುಗಳ ಅಡ್ಜಸ್ಟ್‌ ಮೆಂಟಿನೊಂದಿಗೆ ಮಲಗಿಕೊಂಡ.

ರೇಡಿಯೋ ಕೂಡ ಮಲಗಿತ್ತು.

ಆದರೆ ಇಂದು ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿತ್ತು. ನಿನ್ನೆ ಸಂಜೆ ಬಂದಿದ್ದ ಕಾಗೆಗಳು ತೋಟದಲ್ಲಿಯೇ ಉಳಿದುಬಿಟ್ಟಿದ್ದವು ಎನಿಸುತ್ತದೆ. ಅವು ಆಗ ಈಗ ಒಟ್ಟಾಗಿ ಸೇರಿ ಮೀಟಿಂಗ್‌ ಮಾಡುವುದು, ಕಾವ್‌ ಕಾವ್‌ ಎಂದು ಗಲಾಟೆ ಮಾಡುವುದು ನಡೆದೇ ಇತ್ತು.

ಹಿರ್ಪ ನಿದ್ದೆ ಬರದೇ ಒದ್ದಾಡಿದ.

ಕಾಗೆಗಳನ್ನು ಬಯ್ದ.

`ಬೋಸುಡಿ ರಂಡೆ ನಾಶಾನಯೋಗ್ಲಿ!’

ಹೊರಕ್ಕೆ ಬಂದು ಬಯ್ದು ಹೋಗಿ ಮಲಗಿಕೊಂಡ. ಆದರೆ ಕಾಕೆಗಳು ತಲೆ ಕೆಡಿಸಿಕೊಳ್ಳಲಿಲ್ಲ. ಪುನಃ ಎದ್ದು ಉಚ್ಚೆ ಹೊಯ್ಯಲು ಬಂದ ಹಿರ್ಪ ಕಾಗೆಗಳನ್ನು ಅಟ್ಟಿಸಿಕೊಂಡು ಹೋದ. ಒಂದು ಸ್ವಲ್ಪ ಹೊತ್ತು ಗದ್ದಲ ಇರಲಿಲ್ಲ.

ಆದರೆ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಪ್ರಾರಂಭವಾಗಿತ್ತು.

`ಬೋಸುಡಿರಂಡೆ ನಾಶನಾಯೋಗ್ಲಿ’

ಹಿರ್ಪ ಈಗ ಹಿರ್ಬೆಯನ್ನು ಕರೆದು ಕಾಗೆಗಳನ್ನು ಓಡಿಸುವುದಕ್ಕೆ ಹೇಳಿದ. ಹಿರ್ಬೆ ಒಂದು ಕೋಲು ಹಿಡಿದುಕೊಂಡು ಕಾಗೆಗಳನ್ನು ಬೆದರಿಸತೊಡಗಿದಳು. ಮತ್ತೆ ಕಾಗೆಗಳು ಹಾರಿಹೋದವು.

ಸ್ವಲ್ಪ ಹೊತ್ತು ಅಷ್ಟೇ.

ಕಾಗೆಗಳು ಮತ್ತೆ ಬಂದು ಗಲಾಟೆ ಪ್ರಾರಂಭಿಸಿದ್ದವು. ಹಿರ್ಬೆ ಒಳಗೆ ಏನೋ ಮಾಡುತ್ತಿದ್ದಳು. ಹಿರ್ಪ ಮಲಗಿದಲ್ಲಿಂದಲೇ ಅವುಗಳನ್ನು ಓಡಿಸುವುದಕ್ಕೆ ಹೇಳಿದ. ಸುಬ್ಬಣ್ಣ ನ ನಿದ್ದೆಗೆ ಮಾತ್ರ ತೊಂದರೆಯಿರಲಿಲ್ಲ.

ಹಿರ್ಬೆ ಕೋಲು ಹಿಡಿದುಕೊಂಡು ಕಾಗೆಗಳನ್ನು ಓಡಿಸಿದಳು.

ಓಡಿಸಿ ಸ್ವಲ್ಪ ಹೊತ್ತಿನಲ್ಲಿ ಅವು ಮತ್ತೆ ಪ್ರತ್ಯಕ್ಷವಾದವು. ಹಿರ್ಪ ಅವಳಿಗೆ ಕಾಗೆ ಓಡಿಸುವುದನ್ನೇ ಮಾಡುತ್ತಿರು ಎಂದು ಹೇಳಿಯಾಗಿತ್ತು. ಅವಳು ಕೋಲು ಹಿಡಿದುಕೊಂಡು ತೋಟದ ತುದಿಗೆ ಕುಳಿತುಕೊಳ್ಳುವಂತಾಯಿತು. ಮಧ್ಯಾಹ್ನದ ಊಟಕ್ಕೆ ಅಂತ ಹಿರ್ಬೆ ಮನೆಗೆ ಬಂದಾಗ ಮತ್ತೆ ಕಾಗೆಗಳು ಬಂದು ಗಲಾಟೆ ಮಾಡಿ ಹಿರ್ಪ ಬಯ್ಯುವಂತಾಗಿತ್ತು.

ಹಿರ್ಬೆ ಕೋಲು ಹಿಡಿದುಕೊಂಡು ತೋಟದಲ್ಲಿಯೇ ಕುಳಿತುಬಿಟ್ಟಳು. ಹಿರ್ಪ ಏಳುವ ತನಕ. ಸಂಜೆ ಹಿರ್ಪ ಎದ್ದ ಅನಂತರವೇ ಅವಳು ಅಡುಗೆ ಕೋಣೆಗೆ ಬಂದಿದ್ದು. ಹಿರ್ಪನಿಗೆ ಚಹಾ ಮಾಡಿಕೊಟ್ಟಳು. ಕವಳ ಸಾಮಾನು ಹೊಂದಿಸಿದಳು. ಡಬ್ಬಿಯಲ್ಲಿ ಸುಣ್ಣ ಹಾಕಿದಳು. ತಂಬಾಕು ನೆನೆಸಿಕೊಟ್ಟಳು ಮತ್ತು ಅಂದಿನ ರಾತ್ರಿಯ ತಿಂಡಿ ತಯಾರಿಗೆ ತೊಡಗಿದಳು.

ಅಷ್ಟರಲ್ಲಿ ನನಗೆ ಕಾಯಿ ತುರಿದು ಇಟ್ಟಾಗಿತ್ತು.

***

ಮರುದಿನ ಸಹ ಕಾಗೆಗಳ ಮೀಟಿಂಗ್‌ ನಿಲ್ಲಲಿಲ್ಲ. ಯಾವುದೋ ವಿಷಯವನ್ನು ಭಯಂಕರವಾಗಿ ಚರ್ಚಿಸುವವರಂತೆ ಕಾಗೆಗಳು ತೋಟದಲ್ಲಿ ಗದ್ದಲ ಮಾಡುತ್ತಿದ್ದವು.

ಹಿರ್ಬೆ ಕೋಲು ಹಿಡಿದುಕೊಂಡು ಅವುಗಳನ್ನು ಓಡಿಸುತ್ತ ಕುಳಿತುಕೊಂಡಳು. ಈ ದಿನ ರಾತ್ರಿಗೆ ಕಣದ ಕೆಲಸ ಮುಗಿಯಬಹುದು ಎಂದು ಹೇಳಿದ್ದರಿಂದ ನನಗೆ ಸಮಾಧಾನವಾಗಿತ್ತು. ಹೆಚ್ಚೆಂದರೆ ನಾಳೆ ಒಂದು ದಿನ ಮಾತ್ರ ಹಿರ್ಬೆ ಕೋಲು ಹಿಡಿದು ತೋಟದಲ್ಲಿ ಕೂರಬೇಕಾಗಬಹುದು.

***

ಆ ದಿನ ರಾತ್ರಿ ಕಣದ ಕೆಲಸ ಮುಗಿಯಲಿಲ್ಲ. ಹಾಗೆಂದು ಬೆಳಿಗ್ಗೆ ಬಂದಾಗ ಸುಬ್ಬಣ್ಣ ಹೇಳಿದ್ದ. ಹಾಗಾಗಿ ಆ ದಿನವೂ ತಯಾರಿ ಮಾಡಬೇಕಿತ್ತು.

ಹಿರ್ಪ ಪುನಃ ಬೆಳಿಗ್ಗೆ ಎಂಟೂವರೆ ಮನೆಗೆ ಬಂದ.

`ಈಗ ಶಾಸ್ತ್ರೀಯ ಸಂಗೀತ’

ಸ್ನಾನ ಮಾಡಿ ಊಟ ಮಾಡಿ ಮಲಗಿದ. ರೇಡಿಯೋ ಕೂಡ ತಣ್ಣಗಾಯಿತು. ಮಲಗುವ ತನಕ ಅವನಿಗೆ ಅದೂ ಇದೂ ಹೊಂದಿಸಿಕೊಡುತ್ತಿದ್ದ ಹಿರ್ಬೆ ಆತ ಮಲಗಿದೊಡನೆ ಮನೆ ಮುಂದಿನ ತೋಟದಲ್ಲಿ ಕಾಗೆ ಕಾಯತೊಡಗಿದಳು. ಆ ದಿನ ಕಾಗೆಗಳು ಅವಳಿಗೆ ಊಟಕ್ಕೆ ಬರುವುದಕ್ಕೆ ಸಹ ಅವಕಾಶ ಕೊಡಲಿಲ್ಲ. ನಾನು ಅನ್ನ ಸಾರು ಬಡಿಸಿಕೊಂಡು ಬಟ್ಟಲನ್ನು ತೋಟಕ್ಕೇ ತೆಗೆದುಕೊಂಡು ಹೋಗಿದ್ದೆ. ಅವಳು ಅಲ್ಲೇ ಉಂಡ ಶಾಸ್ತ್ರ ಮಾಡಿದ್ದಳು.

ಮಧ್ಯಾಹ್ನ ಕಳೆಯುತ್ತ ಬಂತು.

ಸುಸ್ತಾಗಿದ್ದರಿಂದ ಆ ದಿನ ಊಟವಾದ ಮೇಲೆ ಸ್ವಲ್ಪ ಹೊತ್ತು ನಾನೂ ನಿದ್ದೆ ಮಾಡಲು ನಿರ್ಧರಿಸಿದೆ. ಮನೆ ತುಂಬಾ ನಿಶ್ಯಬ್ದ ತುಂಬಿಕೊಂಡಿತ್ತು.

ನಿದ್ದೆ ಎಷ್ಟೊತ್ತು ಬಂದಿತ್ತೋ.

ಎಚ್ಚರವಾದಾಗ ತಲೆ ಭಾರವಾಗಿತ್ತು. ಮನೆಯಲ್ಲಿದ್ದೇನೋ ಹಿರ್ಪನ ಮನೆಯಲ್ಲಿದ್ದೇನೋ ಗೊತ್ತಾಗುವಂತಿರಲಿಲ್ಲ. ಸಮಯ ಎಷ್ಟಾಯಿತೋ. ಹಾಗೇ ಎದ್ದು ಅಡುಗೆ ಮನೆಯ ಬಾಗಿಲನ್ನು ಸದ್ದಾಗದಂತೆ ತೆಗೆದು ಹೊರಕ್ಕೆ ಬಂದೆ.

ತೋಟದ ತುದಿಯಲ್ಲಿ ಇನ್ನೂ ಹಿರ್ಬೆ ಕೋಲು ಹಿಡಿದು ಕಾಕೆ ಕಾಯುತ್ತ ಕುಳಿತಿದ್ದಾಳೆ. ಎದ್ದು ಓಡಾಡುತ್ತಿದ್ದಾಳೆ. ಓಡಾಡುವಾಗ ವಾಲುತ್ತಿದ್ದಾಳೆ.

ಮೆಟ್ಟಿಲ ಕಲ್ಲಿನ ಮೇಲೆ ಕುಳಿತು ಹಿರ್ಬೆಯನ್ನು ದಿಟ್ಟಿಸಿ ನೋಡತೊಡಗಿದೆ.

ವಿಚಿತ್ರ.

ಹಿರ್ಬೆಯ ಆಕಾರ ಸಣ್ಣದಾಗುತ್ತ ಹೋಯಿತು. ಎಲ್ಲೆಲ್ಲಿಂದಲೋ ಹಾರಿ ಬರುವ ಕಾಗೆಗಳ ಸಂಖ್ಯೆ ಹೆಚ್ಚಾಗತೊಡಗಿತು. ಕಾಗೆಗಳ ಸಂಖ್ಯೆ ಹೆಚ್ಚಾದಷ್ಟೂ ಹಿರ್ಬೆ ಸಣ್ಣದಾಗುತ್ತ ಹೋದಳು.

ಕೊನೆಯಲ್ಲಿ ಹಿರ್ಬೆ ಎಷ್ಟು ಸಣ್ಣವಳಾದಳೆಂದರೆ ಗಂಗಾಷ್ಟಮಿ ಜಾತ್ರೆಯಲ್ಲಿ ಸಿಗುವ ಬೊಂಬೆಯಂತಾಗಿಬಿಟ್ಟಳು. ಕೈಯಿಂದ ಕೋಲು ನೆಲಕ್ಕೆ ಬಿದ್ದಿತ್ತು. ಬೊಂಬೆಯಂತೆ ಆದವಳು ಕಪ್ಪಾಗತೊಡಗಿದಳು. ನಾನು ನೋಡುತ್ತಲೇ ಇದ್ದೆ. ಕಪ್ಪಾಗಿ ಕಪ್ಪಾಗಿ ಅವಳು ಕಾಗೆಯಷ್ಟಾದಳು. ಮುಖಕ್ಕೆ ಬದಲು ಈಗ ಕೊಕ್ಕು ಹುಟ್ಟಿಕೊಂಡಿತ್ತು. ಅವಳು ಕೊಕ್ಕು ಆಡಿಸುತ್ತಿದ್ದಾಳೆ. ಆ ಕಡೆ ಈ ಕಡೆ ಹೊರಳಿಸುತ್ತಿದ್ದಾಳೆ. ಕಣ್ಣುಗಳು ಕಾಗೆ ಕಣ್ಣಿನಂತಾಗಿವೆ.

ನಂಬಲಾಗುತ್ತಿಲ್ಲ.

ಹಿರ್ಬೆ ಕಾವ್‌ ಕಾವ್‌ ಎನ್ನುತ್ತಿದ್ದಾಳೆ.

ಕಣ್ಣುಜ್ಜಿಕೊಂಡು ನೋಡುತ್ತೇನೆ.

ಕಾಗೆಗಳ ಗಲಾಟೆ ಜಾಸ್ತಿಯಾಗಿದೆ. ಹಿರ್ಪ ಬಯ್ಯುತ್ತಿದ್ದಾನೆ.

ಹಿರ್ಬೆ ಅಲ್ಲೇ ಕೂತು ಕತ್ತನ್ನು ಒಮ್ಮೆ ನನ್ನ ಕಡೆ ಇನ್ನೊಮ್ಮೆ ಆಕಾಶದ ಕಡೆ ಹೊರಳಿಸುತ್ತಿದ್ದಾಳೆ. ನಾನು ಎದ್ದು ಅವಳ ಕಡೆ ಹೊರಡುತ್ತೇನೆ.

ಅವಳೀಗ ಹಾರಿ ಕಾಗೆಗಳ ಗುಂಪು ಸೇರಿಕೊಂಡುಬಿಡುತ್ತಾಳೆ.

ಹಿರ್ಬೆ ಕಾಗೆ ಯಾವುದು ಎಂದು ನನಗೀಗ ಗುರುತಿಸಲಾಗುತ್ತಲೇ ಇಲ್ಲ.

ನಂಬಲಾಗದೇ ಚಡಪಡಿಸುತ್ತೇನೆ. ಬಚ್ಚಲಿಗೆ ಓಡಿಬರುತ್ತೇನೆ. ಕನಸು ಎಂದುಕೊಂಡು ಮುಖ ತೊಳೆದುಕೊಳ್ಳುತ್ತೇನೆ. ಹಿರ್ಬೆ ಅಡುಗೆ ಮನೆಯಲ್ಲೇ ಎಲ್ಲಾದರೂ ಇರಬೇಕು ಎಂದು ಹುಡುಕುತ್ತೇನೆ.

ಹಿರ್ಪ ಬಯ್ಯುತ್ತ ಕರೆಯುತ್ತಿದ್ದಾನೆ.

ಹಿರ್ಬೆಯ ಪತ್ತೆಯಿಲ್ಲ.

ಕಾಗೆಗಳ ಗಲಾಟೆ ಜೋರಾಗಿದೆ.

One Comment

  1. Vikram Hathwar
    Posted June 24, 2007 at 6:42 pm | Permalink

    ಈ ಕತೆಯನ್ನು ಎರಡೆರಡು ಸಲ ಓದಿದೆ. ಓದಿಸಿಕೊಂಡಿತು. ಮಧ್ಯೆ ಸ್ವಲ್ಪ ಎಳೆದ ಹಾಗಾಯಿತು. ಎಷ್ಟೋ ತಾಯಂದಿರನ್ನು ಜ್ಞಾಪಿಸಿತು. ಹಿರ್ಬೆ ಕಾಗೆಗಳ ಗುಂಪಿನಲ್ಲಿ ಒಂದಾಗಿದ್ದು ಯಾವುದರ ಸಂಕೇತ?. ಗಂಡ ಆಜ್ಞಾಪಿಸಿದ ಕಾರ್ಯದಲ್ಲಿ ತನ್ನ ಅಸ್ಥಿತ್ವವನ್ನೇ ಮರೆತು ಒಂದಾಗಿದ್ದಾ? ಅಥವ ಬಂಡಾಯವಾ?.


Post a Comment

Your email is never published nor shared. Required fields are marked *
*
*