ಕ್ರಿಕೆಟ್‌ನಲ್ಲಿ ಸೋತರೆ ಭಾರತಕ್ಕೆ ಒಳ್ಳೆಯದಾಗುತ್ತದೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೋತರೆ ಇನ್ನೂ ಒಳ್ಳೆಯದಾಗುತ್ತದೆ. ಜನ ಕ್ರಿಕೆಟ್ ಬಿಟ್ಟು ಬೇರೆ ಜಗತ್ತನ್ನು ನೋಡತೊಡಗುತ್ತಾರೆ. ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬರದ ನೀರು, ಮುರಿದ ಬಸ್‌ಸ್ಟ್ಯಾಂಡು, ಸರಿಯಿಲ್ಲದ ಫುಟ್‌ಪಾತ್‌ಗಳು ಜನರ ಗಮನಕ್ಕೆ ಬರುತ್ತವೆ. ಬ್ರೆಜಿಲ್ ತಂಡ ಫುಟ್ಬಾಲ್ ವಿಶ್ವಕಪ್ ಸೋತಾಗ ಅಲ್ಲಿನ ಎಕಾನಮಿ ಸುಧಾರಿಸುತ್ತದೆ!ಭಾರತ ವಿಶ್ವಕಪ್ ಸೋತರೆ ಅದೇ ಪರಿಣಾಮ. ಇಲ್ಲದಿದ್ದರೆ ಜನ ಧೋನಿ ಸಿಕ್ಸರ್‌ಗಳ ಕುರಿತು ತಿಂಗಳುಗಟ್ಟಲೆ ಮಾತಾಡುತ್ತಾರೆ. ಸಚಿನ್ ಶತಕದ ಕುರಿತು ವಾರಗಟ್ಟಲೆ ತಲೆ ಕೆಡಿಸಿಕೊಳ್ಳುತ್ತಾರೆ. ಕ್ರಿಕೆಟ್‌ನಲ್ಲಿ ಸೋತರೆ ಜನರಿಗೆ ತಲೆ ಕೆಡಿಸಿಕೊಳ್ಳಲು ಬೇರೆ ವಿಷಯಗಳು ಸಿಗುತ್ತವೆ. ಬೇರೆ ವಿಷಯಗಳ ಕುರಿತು ತಲೆ ಕೆಡಿಸಿಕೊಂಡಷ್ಟೂ ಸಮಾಜಕ್ಕೆ ಅಷ್ಟು ಒಳ್ಳೆಯದು. ಹೇಳಿ ಕೇಳಿ ಸೋತವರ ದೇಶ ಇದು. ಕ್ರಿಕೆಟ್‌ನಲ್ಲೂ ಸೋತಾಗ ಆ ಸೋಲು ಹೆಚ್ಚು, ಇನ್ನೂ ಹೆಚ್ಚು ಸ್ಪಷ್ಟ. ಅಸಲಿ ಸೋಲುಗಳನ್ನು ಕ್ರಿಕೆಟ್‌ನ ಗೆಲುವೊಂದು ಮರೆಸಿಬಿಡುವುದು ಒಳ್ಳೆಯದೋ ಕೆಟ್ಟದ್ದೋ?
ಭಾರತ ಸೋತಿದ್ದರಿಂದ ಕ್ರಿಕೆಟಿಗೆ ಒಂದಿಷ್ಟು ಒಳ್ಳೆಯದಾಗುತ್ತದೆ. ಕ್ರಿಕೆಟ್ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದ ಜನ ಈಗ ನಿಜವಾಗಿಯೂ ಒಂದಿಷ್ಟು ಕ್ರಿಕೆಟ್ ಆಡಬಹುದು. ಎಸ್ಸೆಸ್ಸೆಲ್ಸಿ ಹುಡುಗರ ಸ್ಟ್ರೈಕ್‌ರೇಟ್ ಸುಧಾರಣೆಯಾಗಬಹುದು. ಟೀವಿಯಲ್ಲಿ ಬರುವ ಕ್ರಿಕೆಟ್ ಪಂದ್ಯಗಳನ್ನು ಜನ ಹೆಚ್ಚು ವಸ್ತುನಿಷ್ಠವಾಗಿ ನೋಡಬಹುದು. ಕಮರ್ಷಿಯಲ್ ಫೇವರಿಟ್‌ಗಳ ನಿರ್ಗಮನದಿಂದ ವಿಶ್ವಕಪ್ ಕಡಿಮೆ ಕಮರ್ಷಿಯಲೈಸ್ ಆಗಬಹುದು ಮತ್ತು ಬೆಳಿಗ್ಗೆ ಪತ್ರಿಕೆಗಳ ಮುಖಪುಟ ತೆರೆದರೆ ಕ್ರಿಕೆಟ್ ಹೊರತಾದ ಸುದ್ದಿಯೇ ಮುಖ್ಯ ಸುದ್ದಿಯಾಗಿರಬಹುದು.
ಇದೆಲ್ಲಾ ಒಳ್ಳೆಯದಲ್ಲವೇ?
One Comment
abhava vairagya !
Post a Comment