ಪಾಕಿಸ್ತಾನ ಒಂದು ದಿನ ಕೆಟ್ಟದಾಗಿ ಆಡಿತು. ವಿಶ್ವಕಪ್‌ನಿಂದ ಹೊರ ಬಿತ್ತು. ಭಾರತ ಒಂದು ದಿನ ಕೆಟ್ಟದಾಗಿ ಆಡಿತು. ವಿಶ್ವಕಪ್‌ನಿಂದ ಹೊರಬಿತ್ತು. ಈಗ ಐರ್ಲೆಂಡ್ ಮತ್ತು ಬಾಂಗ್ಲಾದೇಶಗಳು ಸೂಪರ್ ಏ್ಟ್‌ನಲ್ಲಿ ಆಡುತ್ತವೆ. ಎಲ್ಲರಿಗೂ ಗೊತ್ತಿದೆ. ಬಾಂಗ್ಲಾಕ್ಕಿಂತ ಭಾರತ ಸಮರ್ಥ ತಂಡ. ಐರ್ಲೆಂಡಿಗಿಂತ ಪಾಕಿಸ್ತಾನ ಸಮರ್ಥ ತಂಡ. ಇನ್ನೊಂದು ಅವಕಾಶವಿದ್ದರೆ ಬಾಂಗ್ಲಾವನ್ನು ಭಾರತ ಸೋಲಿಸುತ್ತದೆ. ಐರ್ಲೆಂಡನ್ನು ಪಾಕಿಸ್ತಾನವೂ ಸೋಲಿಸುತ್ತದೆ. ಆದರೆ ಈ ವಿಶ್ವಕಪ್‌ನ ಸ್ವರೂಪ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳದ ಕ್ರಿಕೆಟ್ ಪ್ರಿಯರು ಮಾಡುತ್ತಿರುವುದೇನು?
……….
………
……….
ಮನೆಗೆ ಕಲ್ಲು ಹೊಡೆಯುತ್ತಾರೆ. ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುತ್ತಾರೆ. ಪ್ರತಿಕೃತಿ ಸುಡುತ್ತಾರೆ. ಸಿಟ್ಟಿನಿಂದ ನಿಂದಿಸುತ್ತಾರೆ. ಪತ್ರಿಕೆಗಳಲ್ಲಿ ಬರೆಯುತ್ತಾರೆ. ಚಾನೆಲ್‌ಗಳಲ್ಲಿ ಉಗಿಯುತ್ತಾರೆ!
ಏಕೆಂದರೆ ಇವರು ಕ್ರಿಕೆಟ್ ಆಟಗಾರರು ಮತ್ತು ಇವರು ಸೋತಿದ್ದಾರೆ. ನಮ್ಮನ್ನು ಅಂದರೆ ಭಾರತ ದೇಶವನ್ನು ಪ್ರತಿನಿಧಿಸಿದ ಕ್ರಿಕೆಟ್ ತಂಡ ಸೋತಿದೆ. ಈ ಸೋಲು ಒಂದು ಆಟದಲ್ಲಾದ ಸೋಲಿನಂತೆ ಕ್ರಿಕೆಟ್ ಪ್ರಿಯರಿಗೆ ಕಾಣಿಸುತ್ತಲೇ ಇಲ್ಲ. ಆರು ಮರದ ಗೂಟಗಳ ನಡುವೆ ಆಡುವ ಬ್ಯಾಟು, ಬಾಲಿನ ಆಟದಲ್ಲಿ ಹನ್ನೊಂದು ಜನ ವಿಫಲರಾದರು, ಮತ್ತೇನೂ ಆಗಲಿಲ್ಲ ಅಂತ ನಮಗೆ ಅನಿಸುತ್ತಲೇ ಇಲ್ಲ. ಹನ್ನೊಂದು ಜನ ಸೇರಿ ಮೋಸ ಮಾಡಿದ್ದಾರೆ ಮತ್ತು ನಮ್ಮ ಮರ್ಯಾದೆಯನ್ನು ಹರಾಜಿಗೆ ಹಾಕಿದ್ದಾರೆ ಎಂದು ನಮಗೆ ಅನಿಸತೊಡಗಿದೆ. ಸಾಲ ತೀರಿಸದೇ ವಿಮಾನ ಹತ್ತುತ್ತಿದ್ದಾರೆ ಎಂದು ಅನಿಸತೊಡಗಿದೆ. ಇಂಥದ್ದೊಂದು ಅಪರಾಧಕ್ಕೆ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದಾರೆಂದೂ ಅದಕ್ಕೆ ಗ್ರೆಗ್ ಚಾಪೆಲ್ ಮಾರ್ಗದರ್ಶನ ನೀಡಿದ್ದಾರೆಂದೂ ಅನಿಸುತ್ತಿದೆ. ಹೀಗಾಗಿ ಜನ ಪ್ರಶ್ನೆ ಕೇಳುತ್ತಾರೆ. ಬಾಯಿಗೆ ಬಂದಂತೆ ಮಾತಾಡುತ್ತಾರೆ. ಕಲ್ಲು ಹೊಡೆಯುತ್ತಾರೆ, ಭಾವಚಿತ್ರ ಸುಡುತ್ತಾರೆ ಮತ್ತು ಇದೆಲ್ಲ ಮಾಡುವುದು ಸರಿಯೆಂಬಂತೆ ಮಾತಾಡುತ್ತಿದ್ದಾರೆ. ಕ್ರಿಕೆಟ್ ವಿಶ್ವಕಪ್‌ನ ಸೋಲೊಂದು ಈ ದೇಶದಲ್ಲಿ ಹೆಚ್ಚು ಕಡಿಮೆ ರಾಷ್ಟ್ರೀಯ ಸೂತಕದಂತೆ ಕಾಣಿಸತೊಡಗಿದೆ.
ಇದೆಲ್ಲ ಸರಿ ಎಂದು ಹೇಳುವವರು ಇರಬಹುದು. ಏಕೆಂದರೆ ಇದೇ ಜನ ವೆಸ್ಟ್ ಇಂಡೀಸ್‌ಗೆ ಹೋಗುವ ಮೊದಲು ಹೋಮ ಹವನ ಮಾಡಿಸಿದ್ದರು. ಎಸ್ಸೆಮ್ಮೆಸ್ ಅಭಿಯಾನ ನಡೆಸಿದ್ದರು. ಕಟೌಟ್‌ಗಳನ್ನು ನಿಲ್ಲಿಸಿದ್ದರು. ನೀಲಿ ಅಂಗಿಯನ್ನು ದುಡ್ಡುಕೊಟ್ಟು ತಂದು ಹಾಕಿಕೊಂಡಿದ್ದರು. ತಮ್ಮಷ್ಟಕ್ಕೇ ಕನಸು ಕಂಡಿದ್ದರು ಮತ್ತು ಆರು ಗೂಟಗಳ ನಡುವೆ ಬ್ಯಾಟು, ಬಾಲುಗಳನ್ನು ಬಳಸಿ ಆಡುವ ಆಟಗಾರರರನ್ನು ಹೀರೋಗಳೆಂದು ಹೊಗಳಿದ್ದರು. ಇದೆಲ್ಲ ಸೌಭಾಗ್ಯ ಕೇಳದೇ ಬಂದಿತ್ತಾದ್ದರಿಂದ ಈಗ ಸಿಗುವ ಬೈಗುಳಗಳಿಗೆ, ಜೀವಬೆದರಿಕೆಗಳಿಗೆ ಅವರು ಅರ್ಹರು ಎಂದು ಹೇಳುವುದು ಸರಿಯಾಗುತ್ತದೆಯೇ?
ಅತಿ ಹೆಚ್ಚು ನಿಂದೆಗೆ, ಟೀಕೆಗೆ ಗುರಿಯಾಗುತ್ತಿರುವವರು ರಾಹುಲ್ ದ್ರಾವಿಡ್, ಗ್ರೆಗ್ ಚಾಪೆಲ್ ಮತ್ತು ಸಚಿನ್ ತೆಂಡೂಲ್ಕರ್. ಇಷ್ಟೊಂದು ಅನುಭವ ಇದ್ದ ತೆಂಡೂಲ್ಕರ್‌ಗೆ ಒಂದು ರನ್ ಹೊಡೆಯಲೇನು ರೋಗ ಎನ್ನುವಂತಿದೆ ಜನರ ಅಭಿಪ್ರಾಯ. ವಿಚಿತ್ರವೆಂದರೆ ಕ್ರಿಕೆಟ್ ಆಟದಲ್ಲಿ ಹೆಚ್ಚು ಆಟ ಆಡಿದವನು, ಅತಿ ಹೆಚ್ಚು ರನ್ ಗಳಿಸಿದವನು ಸಹ ಔಟಾಗುವುದಕ್ಕೆ ಒಂದೇ ಒಂದು ಬಾಲು ಸಾಕು. ಡಾನ್ ಬ್ರಾಡ್ಮನ್ ಕೂಡ ಸೊನ್ನೆಗೆ ಔಟಾಗಿದ್ದರು. ಶ್ರೀಲಂಕಾ ವಿರುದ್ಧ ರಾಹುಲ್ ದ್ರಾವಿಡ್ ಟಾಸ್ ಗೆದ್ದು ಯಾಕೆ ಬ್ಯಾಟಿಂಗ್ ಮಾಡಲಿಲ್ಲ ಎಂದು ಕೇಳುವವರೂ ಇದ್ದಾರೆ. ಇದೇ ಜನ ಬಾಂಗ್ಲಾದೇಶದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದಾಗ ಯಾಕೆ ಬ್ಯಾಟಿಂಗ್ ತೆಗೆದುಕೊಂಡನೋ ಎಂದು ಬೈದಿದ್ದರು. ಗ್ರೆಗ್ ಚಾಪೆಲ್‌ರನ್ನು ಒದ್ದು ಓಡಿಸಬೇಕು ಎಂದವರೂ ಇದ್ದಾರೆ. ಆದರೆ ಮೈದಾನಕ್ಕೆ ಹೋಗಿ ಆಡುವ ಕೆಲಸವನ್ನೂ ಗ್ರೆಗ್ ಚಾಪೆಲ್ ಮಾಡುವುದು ಸಾಧ್ಯವಿಲ್ಲ.
ಈ ದೇಶದಲ್ಲಿ ಇದೆಲ್ಲಾ ಆಗುತ್ತದೆ. ಏಕೆಂದರೆ ಇಲ್ಲಿ ಜನರಿಗೆ ಕ್ರಿಕೆಟ್ ಆಡಿ ಗೊತ್ತಿಲ್ಲ. ನೋಡಿ ಗೊತ್ತಿದೆ. ಕ್ರಿಕೆಟ್ ಆಡಿದವರಲ್ಲಿ ಹೆಚ್ಚಿನವರು ಟೆನಿಸ್ ಬಾಲ್ ಕ್ರಿಕೆಟರ್‌ಗಳು. ಹಾರ್ಡ್ ಬಾಲ್‌ನಲ್ಲಿ ಕ್ರಿಕೆಟ್ ಆಡಿದವರು ಕಡಿಮೆ. ಹಾಗೆ ಆಡಿದವರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದವರು ಇನ್ನೂ ಕಡಿಮೆ. ಹಾಗಂತ ಬೇರೆ ಆಟವನ್ನೂ ಜನ ಆಡಿರುವುದಿಲ್ಲ. ಹೆಚ್ಚೆಂದರೆ ಕುಳಿತು ಇಸ್ಪೀಟಾಡಿರುತ್ತಾರೆ. ಕಬಡ್ಡಿ, ಹಾಕಿ, ಫುಟ್ಬಾಲ್ ಹೀಗೆ ಯಾವುದಾದರೂ ಸ್ಪರ್ಧಾತ್ಮಕ ಆಟ ಆಡಿದವರಿಗೆ ಮಾತ್ರ ಆಟ ಆಡುವ ಕಷ್ಟ ಗೊತ್ತಿರುತ್ತದೆ.
ಈ ದೇಶದ ಕ್ರಿಕೆಟ್ ಅಭಿಮಾನಿ ಡ್ರಾಯಿಂಗ್ ರೂಮಿನಲ್ಲಿ ಕುಳಿತು ಕಮರ್ಷಿಯಲ್ ಬ್ರೇಕ್‌ಗಳ ಸುಖ ಅನುಭವಿಸುತ್ತಾ ಕ್ರಿಕೆಟ್ ನೋಡುತ್ತಾನೆ. ಆತನಿಗೆ ಹಾರ್ಡ್‌ಬಾಲ್ ಕ್ರಿಕೆಟ್‌ನ ಕಷ್ಟ ಗೊತ್ತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತು ಎಷ್ಟು ಸ್ಪರ್ಧಾತ್ಮಕವಾಗಿದೆ ಎನ್ನುವುದು ಗೊತ್ತಿಲ್ಲ. ಪ್ರತಿ ಸಲ ಹ್ಯಾಪಿ ಎಂಡಿಂಗ್ ಇರುವುದಿಲ್ಲ ಎನ್ನುವುದು ಗೊತ್ತಿಲ್ಲ. ಈ ಸಲದ ವಿಶ್ವಕಪ್ ಪಂದ್ಯಾವಳಿಯನ್ನು ರೂಪಿಸಿದ ರೀತಿಯೇ ವಿಚಿತ್ರವಾಗಿತ್ತು ಎನ್ನುವುದೆಲ್ಲ ಗೊತ್ತಿಲ್ಲ. ಅವರು ಮಾತಾಡುತ್ತಾರೆ. ಬೈಯ್ಯುತ್ತಾರೆ. ಆ ಕ್ಯಾಚ್ ಹಿಡಿಯೋದಕ್ಕೇನು ರೋಗ ಎನ್ನುತ್ತಾರೆ. ಮುಖ್ಯವಾಗಿ ಕ್ರಿಕೆಟ್ ಆಟ ಎನ್ನುವುದು ಅವಕಾಶಗಳ, ಅದೃಷ್ಟದ ಆಟ ಕೂಡಾ ಎನ್ನುವುದು ಮರೆತು ಹೋಗಿರುತ್ತದೆ.
ಪ್ರತಿ ಪಂದ್ಯಾವಳಿಯಲ್ಲೂ ಇಂಥದ್ದೆಲ್ಲಾ ಆಗುತ್ತದೆ. ಕಳೆದ ಸಲ ದಕ್ಷಿಣ ಆಫ್ರಿಕಾದಲ್ಲೇ ವಿಶ್ವಕಪ್ ನಡೆದು ಅಲ್ಲಿನದೇ ತಂಡ ಎರಡನೇ ಸುತ್ತು ತಲುಪಲಿಲ್ಲ. ಕನಿಷ್ಠ ಆರು ಪಂದ್ಯ ಆಡುವ ಅವಕಾಶವಿದ್ದೂ ತಲುಪಲಿಲ್ಲ. 1999ರ ವಿಶ್ವಕಪ್ ಆಯೋಜಿಸಿದ್ದ ಇಂಗ್ಲೆಂಡ್ ಸೂಪರ್ ಸಿಕ್ಸ್ ತಲುಪಲಿಲ್ಲ. 1996ರ ವಿಶ್ವಕಪ್ ಆಯೋಜಿಸಿದ್ದ ಪಾಕಿಸ್ತಾನ ಸೆಮಿಫೈನಲ್ ತಲುಪಲಿಲ್ಲ. 1992ರ ವಿಶ್ವಕಪ್ ಆಯೋಜಿಸಿದ್ದ ಆಸ್ಟ್ರೇಲಿಯಾ ಲೀಗ್ ಹಂತದಲ್ಲೇ ಹೊರನಡೆಯಿತು. ಮೊದಲ ಮೂರು ವಿಶ್ವಕಪ್‌ಗಳನ್ನು ಆಯೋಜಿಸಿದ್ದ ಇಂಗ್ಲೆಂಡ್ ಒಂದು ಸಲವೂ ವಿಶ್ವಕಪ್ ಗೆಲ್ಲಲಿಲ್ಲ.
ಕ್ರಿಕೆಟ್ ಎನ್ನುವುದು ಅಂಥ ಒಂದು ಆಟ. ಇಲ್ಲಿ ಕೌಶಲ್ಯಕ್ಕೆ, ಪರಿಶ್ರಮಕ್ಕೆ ಬೆಲೆ ಇಲ್ಲವೇ ಎಂದು ಕೇಳುವಂತಿಲ್ಲ. ಬೆಲೆ ಇದೆ. ಹಾಗಂತ ಪರಿಶ್ರಮ ಮತ್ತು ಕೌಶಲ್ಯಗಳೇ ನಿಮ್ಮನ್ನು ಗೆಲ್ಲಿಸುವುದಿಲ್ಲ. ಹಾಗೆ ನೋಡಿದರೆ ಪರಿಶ್ರಮ ಮತ್ತು ಕೌಶಲ್ಯಗಳ ದೃಷ್ಟಿಯಿಂದ 1996ರ ವಿಶ್ವಕಪ್ ಆಡಿದ ದಕ್ಷಿಣ ಆಫ್ರಿಕಾ ತಂಡ ಅತ್ಯಂತ ಮೇಲ್ಮಟ್ಟದಲ್ಲಿತ್ತು. ಆ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಗಲೇ ಕೀನ್ಯಾದ ಎದುರು 93 ರನ್‌ಗಳಿಗೆ ಆಲೌಟಾಗಿ ಸುಣ್ಣವಾಗಿದ್ದ ವೆಸ್ಟ್ ಇಂಡೀಸ್ ತಂಡದ ಎದುರು ಸೋತು ಹೋಯಿತು. ಇಲ್ಲಿ ಕೌಶಲ್ಯ, ಪರಿಶ್ರಮಗಳ ಜೊತೆ ಅದೃಷ್ಟ ಬೇಕು. ಹೊಡೆದ ಬಾಲು ಹೆಚ್ಚು ಕಡಿಮೆ ಆಗದೇ ಬೌಂಡರಿ ದಾಟಬೇಕು. ಎಸೆದ ಬಾಲು ಬ್ಯಾಟ್ಸ್‌ಮನ್‌ನ ಬ್ಯಾಟು ವಂಚಿಸಿ ಪ್ಯಾಡಿಗೆ ಬಡಿಯಬೇಕು. ಹಾಗೆ ಬಡಿದ ಪ್ಯಾಡು ಸ್ಟಂಪ್‌ನ ಮುಂದಿರಬೇಕು ಮತ್ತು ಸಲ್ಲಿಸಿದ ಮನವಿಗೆ ಅಂಪೈರ್ ಸಮ್ಮತಿ ಸೂಚಿಸಬೇಕು. ಒಂದು ಬಾಲು, ಒಂದೇ ಒಂದು ಹೊಡೆತ ಇಡೀ ಆಟದ ದಿಕ್ಕು ಬದಲಿಸಬಹುದು. ಒಬ್ಬ ನೋಬಾಲ್‌ಗೆ ಔಟಾಗಬಹುದು ಅಥವಾ ರನೌಟ್ ಆಗಬಹುದು. ಎರಡರಲ್ಲೂ ಎಷ್ಟೊಂದು ವ್ಯತ್ಯಾಸವಿದೆ.
ಮೊದಲ ಮೂರು ಪಂದ್ಯಗಳಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಒಂದು ಸೋಲು ಬಂದಿದ್ದು ಭಾರತದಷ್ಟೇ ಪ್ರಬಲ ತಂಡದ ಎದುರು. ಇನ್ನೊಂದು ಸೋಲು ಬಂದಿದ್ದು ಬಾಂಗ್ಲಾ ಎದುರು. ಮೊದಲ ಮೂರು ದಿನಗಳಲ್ಲಿ ಎರಡು ದಿನ ಕೆಟ್ಟದಾಗಿ ಆಡಿದ ಭಾರತ ಪಂದ್ಯಾವಳಿಯ ಆಸೆಯನ್ನೇ ಬಿಡಬೇಕಾದ ಸ್ಥಿತಿ ತಲುಪಿತು. ಒಂದು ವೇಳೆ ಮೊದಲ ಮೂರು ದಿನಗಳಲ್ಲಿ ಎರಡು ದಿನ ಚೆನ್ನಾಗಿ ಆಡಿದ್ದರೆ ಭಾರತ ಮುಂದಿನ ಹಂತದಲ್ಲಿರುತ್ತಿತ್ತು. ಅಂದರೆ ಒಂದೇ ಒಂದು ದಿನ ಭಾರತ ಕೆಟ್ಟದಾಗಿ ಆಡಿತು. ಬಾಂಗ್ಲಾದ ಎದುರು ಕೆಟ್ಟದಾಗಿ ಆಡಿತು. ಇಂಥ ಸ್ಥಿತಿ ಪ್ರತಿ ತಂಡಕ್ಕೂ ಬಂದಿದೆ. ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು ಸೋಲಿಸಿದೆ. ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನೂ ಸೋಲಿಸಿದೆ. ವಿಶ್ವಕಪ್‌ನಲ್ಲಿ ಅಂಥದ್ದೊಂದು ದಿನ ಎದುರಾಗಿದ್ದು ಅದೂ ಮೊದಲ ದಿನವೇ ಎದುರಾಗಿದ್ದು ದ್ರಾವಿಡ್ ದುರಾದೃಷ್ಟ. ಒಂದು ವೇಳೆ ಮೊದಲ ಎರಡು ದಿನ ಚೆನ್ನಾಗಿ ಆಡಿ ನಂತರ ನಾಲ್ಕು ದಿನ ಕೆಟ್ಟದಾಗಿ ಆಡಿದ್ದರೂ ಭಾರತ ಸೆಮಿಫೈನಲ್ ತಲುಪುವ ಸಾಧ್ಯತೆ ಇತ್ತು. ಈಗಲೂ ಅಂಥದ್ದೊಂದು ತಂಡ ಸೆಮಿಫೈನಲ್ ತಲುಪಬಹುದು. ಆ ಕೆಟ್ಟ ದಿನಗಳು ಯಾವ ದಿನ ಬರುತ್ತವೆ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿಂತಿದೆ. ಉದಾಹರಣೆಗೆ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಫೈನಲ್‌ನಲ್ಲಿ ಮೂರು ಸಲ ಅಂಥ ಕೆಟ್ಟ ದಿನ ಬಂತು!
ಭಾರತ ತಂಡವನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಹನ್ನೊಂದು ಜನ ಆಟಗಾರರು ಸೋತಾಗ ಕೆಟ್ಟದಾಗಿ ಆಡಿದಂತೆ ಕಾಣಿಸುತ್ತಾರೆ. ಹನ್ನೊಂದು ಜನರ ನಾಲ್ಕು ತಂಡಗಳ ನಡುವೆ ಎರಡು ತಂಡಗಳು ಮುಂದಿನ ಗುಂಪಿಗೆ ಆಯ್ಕೆಯಾಗುತ್ತವೆ. ಇದರ ಅರ್ಥ ಎರಡು ತಂಡಗಳು ಕೆಟ್ಟದಾಗಿ ಆಡಿದವು ಎಂದೇನಲ್ಲ. ಎರಡು ತಂಡಗಳು ಉಳಿದ ಎರಡು ತಂಡಗಳಿಗಿಂತ ಚೆನ್ನಾಗಿ ಆಡಿದವು ಎಂದೂ ಅರ್ಥವಾಗುತ್ತದೆ. ಒಂದು ವೇಳೆ ಭಾರತ ತಂಡವಿದ್ದ ಗುಂಪಿನಲ್ಲಿ ಬಾಂಗ್ಲಾದ ಬದಲು ಕೆನಡಾ ತಂಡವಿದ್ದರೆ ಹೀಗೆ ಆಗುವುದು ಸಾಧ್ಯವಿತ್ತೇ? ಭಾರತ ಕಷ್ಟದ ಗುಂಪಿನಲ್ಲಿತ್ತು ಎನ್ನುವುದನ್ನು ಯಾಕೆ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ? ಬಾಂಗ್ಲಾ ತಂಡ ಹದಿಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದೆ. ಅದು ಕ್ರಿಕೆಟ್ ಹುಚ್ಚರ ದೇಶವಾಗಿ ಬದಲಾಗುತ್ತಿದೆ. ಅದನ್ನು ಶಿಶುಗಳೆಂದು ಹೇಳಿದವರು ಯಾರು? ಭಾರತವನ್ನು ಸೋಲಿಸುವ ಮೊದಲು ಅವರು ನ್ಯೂಜಿಲೆಂಡ್ ತಂಡವನ್ನೇ ಸೋಲಿಸಿದ್ದರು!
Post a Comment