March 27, 2007...4:34 am

ಮಾತು ಬಂಗಾರ

Jump to Comments

ಮಾಜಿ ಕ್ರಿಕೆಟ್‌ ಆಟಗಾರರು ವಿರೋಧ ಪಕ್ಷದಲ್ಲಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳು ಅವರಿಗೆ ಹೊರಗಿನಿಂದ ಬೆಂಬಲ ಕೊಡುತ್ತಿದ್ದಾರೆ. ಪತ್ರಿಕೆಗಳು, ಚಾನೆಲ್‌ಗಳದ್ದು ಸಹ ಅದೇ ಪಕ್ಷ. ಒಟ್ಟಾರೆ ರಾಹುಲ್‌ ದ್ರಾವಿಡ್‌ ಈಗ ಗಳಿಸಿದ ರನ್‌ಗಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ತಲೆಗೊಂದು ಸಲಹೆಗಳು ಬರುತ್ತಿವೆ.ಶ್ರೀಲಂಕಾದ ಎದುರು ಸೋತ ನಂತರ ದ್ರಾವಿಡ್‌ ಈ ಪ್ರಶ್ನೆಗಳನ್ನು ಹೇಗೆ ಸ್ವೀಕರಿಸಿದರು? ಏನೆಂದು ಉತ್ತರಿಸಿದರು? ಈ ಉತ್ತರಗಳನ್ನು ಓದುತ್ತಿದ್ದರೆ ರಾಹುಲ್‌ ದ್ರಾವಿಡ್‌ ಪಡೆ ಆಗಷ್ಟೇ ಸೋತ ನೋವು ಮರೆತುಹೋಯಿತು. ದ್ರಾವಿಡ್‌ ಮಾತುಗಳಲ್ಲಿ ಅಷ್ಟು ಸಂಯಮ ಇತ್ತು. ಒಬ್ಬ ವ್ಯಕ್ತಿ ಸೋತಾಗ ಆಡುವ ಮಾತುಗಳು ಆತನ ವ್ಯಕ್ತಿತ್ವವವನ್ನು ಹೆಚ್ಚು ಸ್ಪಷ್ಟಗೊಳಿಸುತ್ತವೆ.

ದ್ರಾವಿಡ್‌ರನ್ನು ಪತ್ರಕರ್ತರು ಕೇಳಿದರು. ಈ ಸೋಲಿಗೆ ಯಾರು ಜವಾಬ್ದಾರರು? ಉತ್ತರ ಬಂತು. `ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದಕ್ಕೆ ಎಲ್ಲರೂ ಜವಾಬ್ದಾರರು ಮತ್ತು ಮೊದಲನೆಯದಾಗಿ ನಾನು ಜವಾಬ್ದಾರ. ನಾನು ಇದನ್ನು ಒಪ್ಪಿಕೊಳ್ಳುತ್ತೇನೆ’ ಎಂದರು ರಾಹುಲ್‌ ದ್ರಾವಿಡ್‌. `ಪಂದ್ಯಕ್ಕೆ ಮೊದಲು ಏನೂ ಆಗಿಲ್ಲ. ನಾವು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಿರಿ. ಈಗ ಸೋತಿದ್ದೀರಲ್ಲ’ ಎಂದು ಕೆಣಕಿದರು ಪತ್ರಕರ್ತರು. ರಾಹುಲ್‌ ದ್ರಾವಿಡ್‌ ಉತ್ತರ ಸ್ಪಷ್ಟವಾಗಿತ್ತು. `ಪಂದ್ಯಕ್ಕೆ ಮೊದಲು ನಾವು ಸೋಲುತ್ತೇವೆ ಎಂದು ಹೇಳಿಕೊಂಡ ನಾಯಕ, ಕೋಚ್‌ ನನಗೆ ಇನ್ನೂ ಸಿಕ್ಕಿಲ್ಲ. ಪಂದ್ಯ ಗೆಲ್ಲಬೇಕು ಎಂದೇ ನಾವು ಆಡುತ್ತೇವೆ ಮತ್ತು ಯಾರು ಯಾವ ಪಂದ್ಯದಲ್ಲಿ ಹೇಗೆ ಆಡುತ್ತಾರೆ ಎನ್ನುವುದು ಮೊದಲೇ ಗೊತ್ತಿರುವುದಿಲ್ಲ’

ಟಾಸ್‌ ಗೆದ್ದು ಬೌಲಿಂಗ್‌ ಮಾಡಿದ್ದನ್ನು ಅವರು ನಯವಾಗಿ ಸಮರ್ಥಿಸಿಕೊಂಡರು. ಬ್ಯಾಟಿಂಗ್‌ ಚೆನ್ನಾಗಿ ಮಾಡಿಲ್ಲ ಎನ್ನುವುದನ್ನು ವಿನಯದಿಂದ ಒಪ್ಪಿಕೊಳ್ಳುತ್ತಲೇ ವಿಶ್ವಕಪ್‌ನ ಸ್ವರೂಪದ ಕುರಿತು ಅನುಮಾನ ವ್ಯಕ್ತಪಡಿಸಿದರು. ಅವರ ಅನುಮಾನ ಸಕಾರಣವಾಗಿತ್ತು. ಕಳೆದ ವಿಶ್ವಕಪ್‌ನಲ್ಲಿ ನಾವು ಕನಿಷ್ಠ ಐದಾರು ಪಂದ್ಯಗಳನ್ನು ಆಡುವುದು ಗ್ಯಾರಂಟಿಯಿತ್ತು. ಇಲ್ಲಿನ ಸ್ವರೂಪ ಬೇರೆಯಾಗಿದ್ದೂ ನಮ್ಮ ಈಗಿನ ಸ್ಥಿತಿಗೆ ಕಾರಣ ಎಂದರು ದ್ರಾವಿಡ್‌. ಅವರ ಮಾತು ನಿಜವೂ ಆಗಿತ್ತು. ಇಷ್ಟೇ ಅಲ್ಲ. ರಾಹುಲ್‌ ದ್ರಾವಿಡ್‌ ಒಪ್ಪಿಕೊಂಡರು: ಮುಂದಿನ ಸುತ್ತಿನಲ್ಲಿ ಆಡುವುದಕ್ಕೆ ನಮಗೆ ನಿಜ ಹೇಳಬೇಕೆಂದರೆ ಅರ್ಹತೆ ಇಲ್ಲ!

Leave a Reply