ವಿಕಾಸ ನೇಗಿಲೋಣಿ ಬರಹ:
ಎಲ್‌ಕೆಜಿ ಓದುತ್ತಿರುವ ಪುಟಾಣಿ ಮಗಳ ಎದುರು ಅವಳಪ್ಪ ಅಮ್ಮ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಸಿವಿಸಿ ಮನಸ್ಸು, ತಡವರಿಸುವ ಹೆಜ್ಜೆ, ಹೊಡೆದುಕೊಳ್ಳುವ ಹೃದಯ ಮತ್ತು ಶಾಶ್ವತ ವೇದನೆಯೊಂದಿಗೆ ಅಪ್ಪ ಹೆಂಡತಿ ಮಗಳನ್ನು ಬಿಟ್ಟು ಹೊರಡುತ್ತಾನೆ. ಕೆನ್ನೆಯ ಮೇಲೆ ಸುರಿಯುವ ಕಣ್ಣೀರನ್ನು ಒರೆಸಿಕೊಳ್ಳಬೇಕೆಂಬುದೂ ಗೊತ್ತಾಗದ ಮಗಳು ದೂರದಲ್ಲಿ ನಿಂತುಕೊಂಡು ಪಿಟೀಲಿನ ತಂತಿಗಳ ಮೇಲೆ ಕಮಾನನ್ನು ಆಡಿಸುತ್ತಾಳೆ. ಅದು ಪುಟಾಣಿ ಕೈಗಳಿಗೆ ಸಿಕ್ಕಿ ಅಪಸ್ವರ ಹೊರಡಿಸುತ್ತದೆ. ಆ ಹೊತ್ತಿನಲ್ಲಿ ಮತ್ತೇನು ಸುಸ್ವರ ಹೊರಟೀತೇ?
ಈಗ ಇಬ್ಬರೂ ವಿಚ್ಛೇದನದ ಫಾರ್ಮ್‌ಗಳನ್ನು ಗತ್ಯಂತರವಿಲ್ಲದೇ ತುಂಬಬೇಕು, ಸಹಿ ಮಾಡೆಂದಲ್ಲಿ ಮಾಡಬೇಕು. ಅದೆಲ್ಲಾ ಆದ ಮೇಲೆ ದಾಖಲೆಗೆ ಬೇಕೆಂದು ಈ ಮಾಜಿ ಗಂಡ ಹೆಂಡಿರಿಬ್ಬರೂ ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಕ್ಕೆ ಹೋಗಿದ್ದಾರೆ. ಹಾಗೆ ನಿಂತುಕೊಳ್ಳಿ, ಹೀಗೆ ನಿಂತುಕೊಳ್ಳಿ, ಕತ್ತೆತ್ತಿ, ಕತ್ತು ಬಗ್ಗಿಸಿ ಎಂದು ಫೋಟೋಗ್ರಾಫರ್ ವೃತ್ತಿ ಸಹಜ ನಿರ್ಭಾವುಕತೆಯಿಂದ ಆದೇಶ ಕೊಡುತ್ತಾನೆ. ಇಬ್ಬರಿಗೂ ಇದು ಅಸಹನೀಯವೆನಿಸಿದರೂ ಮಾಡಲೇಬೇಕು. ಎಲ್ಲಾ ಆದ ಮೇಲೆ ಕೊನೆಯ ಬಾರಿ ಎಂಬಂತೆ ಅವರಿಬ್ಬರನ್ನೂ ನೋಡಿ ಫೋಟೋಗ್ರಾಫರ್ ಹೇಳುತ್ತಾನೆ: ಸ್ಮೈಲ್ ಪ್ಲೀಸ್.
ಗಂಡ ಅಸಹನೆಯಿಂದ ಕಿರುಚಿಕೊಳ್ಳುತ್ತಾನೆ: ಹೌ ಕ್ಯಾನ್ ಐ! ದೃಶ್ಯ ಅಲ್ಲಿಗೆ ಮುಗಿಯುತ್ತದೆ.
`ಎ ಸೈ’ ಎಂಬ ಚೀನೀ ಸಿನಿಮಾದಲ್ಲಿ ಗಂಡ `ಹೇಗೆ ನಗಲಿ’ ಎಂದು ಪ್ರಶ್ನಿಸುವ ಶ್ಯ ಇಡೀ ಸಿನಿಮಾದಲ್ಲಿ ಅನುರಣಿಸುವ ಪ್ರಶ್ನೆಯೂ ಹೌದು. ಅಪ್ಪ, ಅಮ್ಮ, ಅಪ್ಪನ ಪ್ರೇಯಸಿ ಮತ್ತು ಮಗಳು ಈ ಮೂರೂವರೆ ವ್ಯಕ್ತಿಗಳು ಪರಸ್ಪರ ಒಂದಾಗುವ, ಒಡೆಯುವ ನಿರಂತರ ಕತೆ ಇದು. ತನ್ನನ್ನು ಪ್ರೀತಿಸದ ಗಂಡನನ್ನು ಬಿಟ್ಟು ಹೆಂಡತಿ ಇರಲಾರಳು, ತನ್ನನ್ನು ಪ್ರತಿ ಕ್ಷಣವೂ ಪ್ರೀತಿಸುವ ಹೆಂಡತಿಗೆ ವಿಚ್ಛೇದನ ಕೊಟ್ಟು ಗಂಡ ಬದುಕಲಾರ. ಆ ಗಂಡನ ಪ್ರೇಯಸಿ ಆತನನ್ನು ಹೆಂಡತಿಯಿಂದ ಬೇರ್ಪಡಿಸುವುದಕ್ಕೆ ಸಂಪೂರ್ಣ ಮನಸ್ಸು ಮಾಡಲಾರಳು. ಆದರೆ ಆಕೆಗೆ ಆತ ಬೇಕು, ಆತನಿಗೂ ಪ್ರೇಯಸಿ ಬೇಕು. ಹಾಗೆ ನೋಡಿದರೆ ಅವನ ಚಿಕ್ಕ ಮಗಳಿಗೆ ಇದ್ಯಾವುದೇ ಥರದ ದ್ವಂದ್ವಗಳಿಲ್ಲ. ಸದಾ ಬೈಯ್ಯುತ್ತಿದ್ದರೂ ಮುದ್ದುಗರೆವ ಅಮ್ಮ ಆಕೆಗೆ ಬೇಕು, ಯಾವತ್ತೂ ಬೈಯ್ಯದ ಅಪ್ಪನಂತೂ ಬೇಕೇ ಬೇಕು. ಆದರೆ ಪರಸ್ಪರರ ಹಂಗನ್ನು ತೊರೆದುಕೊಂಡರೂ ಆ ಮೂವರಿಗೆ ಮಾತ್ರ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಹೌ ಕ್ಯಾನ್ ದೇ!
2000 ಇಸ್ವಿಯಲ್ಲಿ ಬಿಡುಗಡೆಯಾದ `ಎ ಸೈ’ ಹೀಗೆ ದಟ್ಟ ವಿಶ್ಲೇಷಣೆಯ, ಸೂಕ್ಷ್ಮ ಸಂವೇದನೆಯ, ಜವಾಬ್ದಾರಿಯುತ ವಸ್ತು ನಿಭಾವಣೆಯ ಒಂದು ಚೀನೀ ಚಿತ್ರ. ಹಾಗಂತ ಇದರ ಕತೆ ಸರಳವಾಗಿದೆ. ಯಾವ ದೇಶವನ್ನೂ ಬಿಡದ ವಿವಾಹೇತರ ಸಂಬಂಧದ ಎಳೆಯಿರುವ ಕತೆ ಇದು. ಚೀನಾದಲ್ಲಿ ಈ ಸಮಸ್ಯೆಯ ತೀವ್ರತೆ ಹೆಚ್ಚಿದೆಯಾದ್ದರಿಂದ ಆ ಕತೆ ಅಲ್ಲಿನ ಸಾಮಾಜಿಕ ಸನ್ನಿವೇಶದ ಜ್ವಲಂತ ಕನ್ನಡಿಯಾಗಿ ಹೆಚ್ಚು ತೋರಿರಬಹುದು. `ಲಿಯಾಂಗ್ ಎಜಾವ್’ ಒಬ್ಬ ಲೇಖಕ, ಚಿಂತಕ. ಆತ ಪೇಟೆಯಲ್ಲಿ ರೂಮು ಮಾಡಿಕೊಂಡು ತನ್ನ ಬರವಣಿಗೆ ಕೆಲಸ ಮಾಡುತ್ತಿದ್ದಾನೆ. ಅಲ್ಲಿಗೆ ಒಬ್ಬಳು ಕ್ರಿಯಾಶೀಲೆಯಾದ, ಚುರುಕಿನ, ಸುಂದರ ಹುಡುಗಿ `ಲಿ ಕ್ಸಿಯಾವ್‌ಡನ್’ ಬರವಣಿಗೆಗೆ ಸಹಾಯಕಿಯಾಗಿ ಬರುತ್ತಾಳೆ. ಮಧ್ಯ ವಯಸ್ಸಿನ ಲೇಖಕನೂ, ಹದಿಹರೆಯದ ಹುಡುಗಿಯೂ ಪ್ರೇಮಪಾಶದಲ್ಲಿ ಬೀಳುತ್ತಾರೆ. ದೂರದ ಮನೆಯಲ್ಲಿ ಮಗಳೊಂದಿಗೆ ವಾಸಿಸುತ್ತಿರುವ ಹೆಂಡತಿ `ಸಾಂಗ್ ಕ್ಸಿಯಾಯಿಂಗ್’ ಇದ್ಯಾವುದರ ಪರಿವೆಯೂ ಇಲ್ಲದಂತೆ ಬದುಕುತ್ತಲೇ ಆಗಾಗ ಅನುಮಾನ ಪಡುತ್ತಾ ಹೋಗುತ್ತಾಳೆ. ಹೀಗೆ ಅನುಮಾನಿಸುತ್ತಾ ಒಂದು ದಿನ ಗಂಡನ ವಿವಾಹೇತರ ಸಂಬಂಧ ಹೆಂಡತಿಗೆ ಗೊತ್ತಾಗುತ್ತದೆ. ತನ್ನನ್ನು ಮದುವೆಯಾಗೆಂದು ಪ್ರೇಯಸಿಯೂ, ಅವಳನ್ನು ಬಿಟ್ಟುಬಿಡು ಎಂದು ಹೆಂಡತಿಯೂ ಲೇಖಕ ಗಂಡನ ಎದುರು ಪಟ್ಟಾಗಿ ಕೂರುತ್ತಾರೆ.
ಒಂದು ಹಂತದಲ್ಲಿ ಎಜಾವ್ ಹೆಂಡತಿಗೆ ವಿಚ್ಛೇದನ ನೀಡುವ ನಿರ್ಧಾರ ತೆಗೆದುಕೊಳ್ಳುತ್ತಾನೆ ಮತ್ತು ಆ ನಿರ್ಧಾರವನ್ನು ಒಪ್ಪಿಕೊಳ್ಳಲು, ಪ್ರೇಯಸಿಯ ಜತೆ ವಿವಾಹವಾಗದೇ ಸಂಸಾರ ಮಾಡಲು ಹರಸಾಹಸ ಪಡುತ್ತಾನೆ. ವಿಚ್ಛೇದಿತ ಪತಿಯನ್ನು ಮದುವೆಯಾಗುವುದೋ ಬೇಡವೋ, ವಿಚ್ಛೇದಿತ ಪತ್ನಿಗೆ ತಾನು ಅನ್ಯಾಯ ಮಾಡಿಬಿಟ್ಟೆನೋ ಏನೋ, ತನ್ನ ಹೆಂಡತಿಯ ಒಳ್ಳೆಯತನವನ್ನು ಪ್ರೇಯಸಿ ಪ್ರತಿ ಹೆಜ್ಜೆಗೂ ಅವಮಾನಿಸುತ್ತಿದ್ದಾಳೋ ಏನೋ, ತನ್ನ ಗಂಡನಿಗೆ ತನ್ನ ಅಗತ್ಯ ಕಡಿಮೆಯಾಗಿದೆಯೋ ಏನೋ ಎಂಬೆಲ್ಲಾ ಶಂಕೆಗಳ ಬೆಂಕಿಯಲ್ಲಿ ಮೂರು ಮನಸ್ಸುಗಳು ತುಯ್ಯುತ್ತಾ ಹೋಗುತ್ತಿರುವಾಗ ಹಠಾತ್ ಸುದ್ದಿ ಬರುತ್ತದೆ: ಎಜಾವ್ ಹೆಂಡತಿ ಮನೆಯಲ್ಲಿ ಆಯತಪ್ಪಿ ಬಿದ್ದಿದ್ದಾಳೆ, ಏಳಲಾಗದ ಪರಿಸ್ಥಿತಿಯಲ್ಲಿದ್ದಾಳೆ.
ಎಜಾವ್‌ಗೆ ಆಗ ಏನೂ ನೆನಪಾಗುವುದಿಲ್ಲ. ಪ್ರೇಯಸಿಗೆ ಉತ್ತರಿಸುವ ವ್ಯವಧಾನವೂ ಇಲ್ಲದಂತೆ ಆಸ್ಪತ್ರೆಗೆ ಧಾವಿಸುತ್ತಾನೆ. ಆಸ್ಪತ್ರೆಯಲ್ಲಿರುವ ಪತ್ನಿಯ ಪ್ರತಿ ಅಗತ್ಯಕ್ಕೂ ಸ್ಪಂದಿಸುತ್ತಾನೆ. ಒಂದು ಹಂತದಲ್ಲಿ ಹೆಂಡತಿಗೆ ನೀರು ಕುಡಿಯಲೂ ಸಾಧ್ಯವಾಗದೇ ಹೋದಾಗ ತಾನೇ ಬಾಯಿಗೆ ನೀರು ತುಂಬಿಕೊಂಡು, ಹೆಂಡತಿಯ ತುಟಿಯಲ್ಲಿ ತುಟಿಯಿಟ್ಟು ತನ್ನ ಬಾಯಲ್ಲಿ ಶೇಖರವಾದ ನೀರನ್ನು ಆಕೆಯ ಗಂಟಲಿಗೆ ಧಾರೆ ಎರೆಯುತ್ತಾನೆ. ಆಸ್ಪತ್ರೆಯಿಂದ ಮನೆಗೆ ಬಂದ ಮೇಲೂ ಹೆಂಡತಿಯ ಪರಿಸ್ಥಿತಿ ಸುಧಾರಿಸದಾದಾಗ ಆತನೇ ಮಗಳಿಗೆ ಸ್ನಾನ ಮಾಡಿಸುತ್ತಾನೆ, ಹೆಂಡತಿಯ ಸ್ನಾನೋಪಾದಿ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾನೆ. ಹೀಗೆ ಸೇವೆ ಮಾಡುತ್ತಾ ಮಾಡುತ್ತಾ ಹೆಂಡತಿಯ ಗಂಡನಾಗಿದ್ದವ, ಹೆಂಡತಿಯ ಹೆಂಡತಿಯೇ ಆಗಿಬಿಡುತ್ತಾನೆ!
ಹೆಂಡತಿ ಚೇತರಿಸಿಕೊಳ್ಳುತ್ತಾ, ಗಂಡನಿಗೆ ಪ್ರೇಯಸಿಯ ನೆನಪೇ ಮರೆತು ಹೋಗುವ ಹಂತದಲ್ಲಿ ಒಂದು ದಿನ ಪ್ರೇಯಸಿ ಹೂಗುಚ್ಛ ಹಿಡಿದುಕೊಂಡು ಎಜಾವ್ ಮನೆಗೆ ಬರುತ್ತಾಳೆ. ಗಂಡನಿಗೆ ತಲೆಬಿಸಿಯಾಗುತ್ತದೆ. ಆದರೆ ಆತನ ಹೆಂಡತಿಗೇನೂ ತಲೆಬಿಸಿಯಾಗುವುದಿಲ್ಲ. ಆಕೆಯನ್ನು ಪ್ರೀತಿಯಿಂದ ಒಳಗೆ ಕರೆಯುತ್ತಾಳೆ. ಓಡಾಡಲಾಗದ ಹೆಂಡತಿ ಕುರ್ಚಿಯಲ್ಲೇ ಕುಳಿತು ಉಪಚರಿಸುತ್ತಿರುವಾಗ ಗಂಡನೇ ಕಾಫಿ ಮಾಡಿ ಮಗಳ ಕೈಯ್ಯಲ್ಲಿ ಆಕೆಗೆ ಕೊಡಿಸುತ್ತಾನೆ. (ಮಗಳು ಕಾಫಿಗೆ ಉಪ್ಪು ಹಾಕಿ ಕೊಟ್ಟು ತನ್ನದೇ ಪ್ರತಿಭಟನೆ ವ್ಯಕ್ತಪಡಿಸುತ್ತಾಳೆ!) ನಂತರ ಎಜಾವ್‌ನ ಕಾಲೇಜು ದಿನಗಳನ್ನೂ, ಎಷ್ಟು ಜನ ಪ್ರೇಯಸಿಯರು ಎಜಾವ್‌ನ ಹಿಂದೆ ಬಿದ್ದಿದ್ದರು ಎಂಬುದನ್ನೂ, ಆತನ ಜನ್ಮದಿನವನ್ನು ನೀನೆಷ್ಟು ಚೆನ್ನಾಗಿ ನೆನಪಿಟ್ಟುಕೊಂಡಿದ್ದೀಯ ಎಂಬ ವ್ಯಂಗ್ಯವನ್ನೂ ಹೆಂಡತಿ ತನ್ನ ಗಂಡನ ಪ್ರೇಯಸಿಯೆದುರು ಹರಡಿ ಇಡುತ್ತಾಳೆ. ಎಜಾವ್‌ನ ಪ್ರೇಯಸಿಯಾಗಿ ಬಂದ `ಕ್ಸಿಯಾವ್‌ಡನ್’ ಅಲ್ಲಿಂದ ಮರಳುವಾಗ ಉಪಚಾರ ಮಾಡಿಸಿಕೊಂಡು ಹೊರಟು ನಿಂತ ನೆಂಟರವಳಾಗಿಬಿಟ್ಟಿರುತ್ತಾಳೆ!
ಇಂಥ ಕತೆಗೆ ಒಬ್ಬ ಕ್ರಿಯಾಶೀಲ ನಿರ್ದೇಶಕ ಎಂಥ ಕ್ಲೈಮ್ಯಾಕ್ಸ್ ಕೊಡಬಲ್ಲ? `ಎ ಸೈ’ಯ ಕ್ಲೈಮ್ಯಾಕ್ಸ್ ಸೂಚ್ಯವಾಗಿದೆ. ಈಗ ಸಮುದ್ರ ದಂಡೆಯ ಮೇಲೆ ಪುನಃಸ್ವಯಂವರವಾದ ದಂಪತಿಗಳು ಮಗಳೊಂದಿಗೆ ಆಟ ಆಡುತ್ತಿದ್ದಾರೆ. ಗಂಡನ ಮೊಬೈಲ್ ಹೊಡೆದುಕೊಳ್ಳುತ್ತದೆ. ಆತ ದೂರದ ಸಮುದ್ರ ತೀರದಿಂದ ಬಂದು ಮೊಬೈಲ್ ಎತ್ತಿಕೊಳ್ಳುತ್ತಾನೆ. ಅದು ಅವನ ಪ್ರೇಯಸಿಯ ಕರೆ ಎಂಬುದು ಗೊತ್ತಾಗುವುದರೊಂದಿಗೆ ದೃಶ್ಯ ಸ್ಥಿರವಾಗುತ್ತದೆ. ಅದರರ್ಥ ಬಹುಶಃ ಹೀಗಿರಬಹುದು, ಮತ್ತೆ ಗಂಡ ಪರಸ್ತ್ರೀ ಮೋಹಕ್ಕೆ ಬೀಳುತ್ತಾನೆ, ಪ್ರೇಯಸಿಗೊಬ್ಬ ವಿವಾಹಿತ ಪುರುಷ ಮತ್ತೆ ಸಿಗುತ್ತಾನೆ, ಹೆಂಡತಿಯ ಆಕ್ರಂದನ ಮತ್ತೆ ಪ್ರಾರಂಭವಾಗುತ್ತದೆ. ಮಗಳು ಮತ್ತೆ ತನ್ನ ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಾಳೆ. ವಯೋಲಿನ್‌ನ ಅಪಸ್ವರಗಳು ಮತ್ತೆ ಅನುರಣಿಸುತ್ತವೆ. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವ…
ಎಲ್ಲಾ ಸಂಬಂಧ ಸೂಕ್ಷ್ಮ ಮತ್ತು ಪಾತ್ರ ಸೂಕ್ಷ್ಮಗಳನ್ನು ನಿರ್ದೇಶಕ ಫೆಂಗ್ ಕ್ಸಿಯಾವ್‌ಗಂಗ್ ಹೀಗೆ ಹೊಣೆಗಾರಿಕೆಯಿಂದ ನಿಭಾಯಿಸಿದ್ದಕ್ಕೆ ಆ ಚಿತ್ರಕ್ಕೆ ಆ ವರ್ಷ ಅನೇಕ ಪ್ರಶಸ್ತಿಗಳು ಸಂದವು. ಪ್ರೀತಿ ಹೆಸರಿನ ಮಾಯೆಯೊಂದು ಆಯಾ ಕಾಲಕ್ಕೆ ಒಳ್ಳೆಯ ಸಂಬಂಧವೊಂದನ್ನು ಕಾಪಾಡಿಯೇ ಕಾಪಾಡುತ್ತದೆ ಎಂದು ಕೆಲವರಲ್ಲಿ ಮಾತ್ರ ಮನನ ಮಾಡಿಸುವಲ್ಲಿ ಆ ಚಿತ್ರ ಯಶಸ್ವಿಯಾಯಿತು. ಇಂಥ ಸಮಸ್ಯೆಯನ್ನು ಸೂಕ್ಷ್ಮವಾಗಿ ನೋಡಲಾಗದವರು, ಕಮರ್ಷಿಯಲ್ ಆದ ಪರಿಹಾರವನ್ನು ಸಿನಿಮಾಗಳ ಮೂಲಕ ಯಾವಾಗಲೂ ನಿರೀಕ್ಷಿಸುವವರು, ಅತಿರಂಜಕತೆಯನ್ನು ಅಪೇಕ್ಷಿಸುವವರು `ಚಿತ್ರಕತೆ ದುರ್ಬಲವಾಗಿದೆ’ ಎಂದು ದೂರಿದರು. `ಕ್ಲೈಮ್ಯಾಕ್ಸ್ ಚೆನ್ನಾಗಿಲ್ಲ’ ಎಂದರು. ಅದಕ್ಕೆ ಉತ್ತರವಾಗಿ `ಇದು ಎಲ್ಲರಿಗೂ ಇಷ್ಟವಾಗಬೇಕಾಗಿಲ್ಲ’ ಎಂದ ಫೆಂಗ್. ಎಜಾವ್‌ನ ಪಾತ್ರದ ಅಂತರಾಳವನ್ನು ಅರಿತುಕೊಳ್ಳುತ್ತಾ ಅರಿತುಕೊಳ್ಳುತ್ತಾ ಹೋಗುತ್ತಲೇ ಆ ಪಾತ್ರವನ್ನು ನಿರ್ವಹಿಸಿದ ಜಾಂಗ್ ಗೌಲಿಗೆ `ನಾನು ಈವರೆಗೆ ಮಾಡಿದ ಅತ್ಯುತ್ತಮ ಪಾತ್ರ ಇದು’ ಎಂದನಿಸಿತು.
One Comment
Hi
I could visualise the whole movie on reading your review and it has created a great desire in me to watch it….Dealing with a complex web of emotions is a great challenge, be it in real life or any medium of art!However,to deal with it cinematographically calls for a great effort and the director according to me seems to have succeeded (considering that I have not watched the movie)!
The climax seems to be the best part of the movie, as it doesnot place the ending of the movie in a predictable fashion or in a conventional water tight compartment.It allows enough room for the viewer to decide on the climax on his own depending on his back histories. I t is left to the imagination of the audience. It is interesting to note that the director takes a chance of not crafting the end according to the popular taste…when it comes to human emotions and behaviour, they cannot be judged as mere black and white but can only be treated as shades of grey.The director accomplishes that in his movie.Also the director delves inot one of the finest aspect in human relations ie “…beratharu arithevenu naavu namma antharalava”…superb lines! A very sensitive comment on the institution of marriage, human relationships and emotions….It is a real bold comment on all of these…
Post a Comment