March 23, 2007...11:13 am

ಕವಿತೆ:ನನ್ನಲ್ಲಿಗೆ ಸಂಜೆ ಬಂದಿತ್ತು

Jump to Comments

ವಿಕಾಸ ನೇಗಿಲೋಣಿ ಬರಹ: 

ನಿನ್ನೆ ರಾತ್ರಿ ನಿಮ್ಮ ಸಂಜೆಗಳುನನ್ನ ಮನೆಗೆ ಬಂದಿದ್ದವು

 ಆಗ ನಿಮ್ಮ ಸಂಜೆಗಳು ಸಂಜೆಯಾಗಿಯೇ ಬಂದಿರಲಿಲ್ಲ.

ಅವು ನಾಚಿ ಕೆಂಪಾಗಿರಲಿಲ್ಲ

ಬಿಸಿ ಕಳಚಿ ತಂಪಾಗಿರಲಿಲ್ಲ

ಸಮಾಗಮಕ್ಕೆ ಕಾದ ಹೆಂಚಾಗಿರಲಿಲ್ಲ

ಅಷ್ಟಕ್ಕೂ ಅವು ಸಂಜೆಗಳೇ ಆಗಿರಲಿಲ್ಲ!

ಬಂದವು ಅವೇ ಪರಿಚಯಿಸಿಕೊಂಡವು

ತಾವು ಸಂಜೆಯೆಂದು ಕರೆಸಿಕೊಳ್ಳುವ

ಬಂಜೆಗಳು ಎಂದವು ಅವು,

ಕತ್ತಲಿಗೂ ಬೆಳಕಿಗೂ ಮಧ್ಯೆ ಬದುಕುವ

ಕತ್ತಲ ಕೆಡುಕಿಗೂ ಬೆಳಕಿನ ಒಳಿತಿಗೂ

ಮಧ್ಯೆ ತ್ರಿಶಂಕುವಾಗುವ

ನೆಪವಾಗುವ, ನೆನಪಾಗುವ, ಕನಸಾಗುವ, ಕೊಸರಾಗುವ

ಈ ಸ್ಥಿತಿ ತಮಗೆ ಸಾಕು ಎಂದವು.

ಮುದಿ ಸೂರ್ಯನ ಜತೆ ಅವಕ್ಕೆ

ಮದುವೆ,

ಎಳೆ ಚಂದ್ರನ ಜೊತೆ

ಶೋಭನ

ಗೋಧೂಳಿಯ ಲಗ್ನಕ್ಕೆ ಮದುವೆಯಾಗುತ್ತಲೇ

ಸೂರ್ಯ ತೀರಿಕೊಂಡಿದ್ದ,

ಹಾಸಗೆಯ ಮೇಲೆ ನಾಚಿ ಕುಳಿತದ್ದೇ ಬಂತು

ಸಂಜೆಗಳಿಗೆ

ಆಗಲೇ ಹುಟ್ಟಿಬಿಟ್ಟಿದ್ದ ಚಂದ್ರ,

ತನಗೆ ಅಂತ ಲೆಕ್ಕವಿಲ್ಲದಷ್ಟು

ತಾರೆಗಳನ್ನು

ಕರೆತಂದಿದ್ದ ಮಹಾ ಇಂದ್ರ.

ನಿಮ್ಮ ಸಂಜೆಗಳಿಗೆ ಯಾವತ್ತೂ ಬೆಳಕಾಗಲಿಲ್ಲ

ನಿಮ್ಮ ಸಂಜೆಗಳು ಎಂದಿಗೂ ನಿರ್ಭೀತವಾಗಲಿಲ್ಲ

ನಿಮ್ಮ ಸಂಜೆಗಳಿಗೆ ಹಗಲೇ ಇಲ್ಲವೆಂದಮೇಲೆ

ಎಚ್ಚರವೆಲ್ಲಿಂದ ಬಂತು

ನಿಮ್ಮ ಸಂಜೆಗಳಿಗೆ ವಿರಹವೇ ತೀರದ ಮೇಲೆ

ನಿದ್ದೆಯೂ ಇನ್ನೆಂತು?

ಹಾಗಾಗಿಯೇ ಸಂಜೆಗಳು

ಒಂದು ನಿರ್ಧಾರಕ್ಕೆ ಬಂದಿವೆ

ಕೇಳಿ

ಸಂಜೆಗಳು ಈಗ ಹಗಲಾಗಲು

ನಿರ್ಧರಿಸಿವೆ,

ಒಂದಷ್ಟು ದಿನವಾದರೂ

ಹಗಲು ಸಂಜೆಯಾಗಿ ನೋಡಲಿ ಎಂದು ಹಠ ಹಿಡಿದಿವೆ.

ಹಗಲಾದರೆ ಎಚ್ಚರ, ಹಗಲಾದರೆ ಎತ್ತರ

ಇರುಳಾದಹಾಗೆಲ್ಲಾ ಮಲಗುವ ಸಡಗರ

ಆಗ ನಾವು ನಿಜವಾಗಿಯೂ ನಿಮ್ಮ ಕಲ್ಪನೆಯ ಸಂಜೆಗಳಾಗುತ್ತೇವೆ

ಕ್ಷಮಿಸಿ, ಇದೆಲ್ಲಾ ಸರಿಯಿಲ್ಲ

ಎಂದು ನಾನು ಹೇಳಲಾರೆ.

ಒಮ್ಮೆ ಇದು ಸರಿಯಲ್ಲ ಎಂದು

ಹೇಳಿ ನೋಡಿದೆ

`ಮತ್ತೆ ನೀವು ಹೆಂಗಸರು ಗಂಡಸಾಗುವ

ಹೋರಾಟ ನಡೆಸಿದ್ದೀರಂತೆ,

ಅದು ಸಾಧ್ಯವಾದರೆ ನಮ್ಮ ಆಸೆಯನ್ನೂ ಸಾಧ್ಯವಾಗಿಸು’

ಸಂಜೆಗಳ ನೋವು ನನ್ನ ನೋವೇ ಅಲ್ಲವೇ?

3 Comments

  • ಪ್ರಿಯ ವಿಕಾಸ್
    ಕವಿತೆ ಇಷ್ಟವಾಯ್ತು.
    ಪತ್ರಕರ್ತನಾದ ನಂತರ ಸಂಜೆಗಳನ್ನು ನೋಡದೇ ಯಾವುದೋ ಕಾಲವಾಯ್ತು ಅನ್ನಿಸುತ್ತಿದೆ. ನನಗೆ ಪ್ರಖರ ಸಂಜೆಗಳೆಂದರೆ ಇಷ್ಟ.ಬಕೆಟ್ಟಿನಲ್ಲಿ ಬೆಳಕನ್ನು ಅಂಗಳಕ್ಕೆ ರಾಚಿದಂತೆ ಕಾಣುವ ಸಂಜೆಗಳಲ್ಲಿ ಕುಂಟೋಬಿಲ್ಲೆ ಆಡುತ್ತಿದ್ದ ಚೆಂದ ಚೆಂದದ ಕಂದಮ್ಮಗಳು ನೆನಪಾಗುತ್ತಾರೆ.
    ಸಂಜೆಗಳಿಗೆ ಹಗಲಿಲ್ಲ ಅನ್ನುವ ಕಲ್ಪನೆ ಇಷ್ಟವಾಯಿತು.
    ಹಗಲೂ ಇಲ್ಲದ
    ರಾತ್ರಿಯೂ ಇಲ್ಲದ
    ಸಂಜೆಯ
    ಕಂಡೂ ಕಾಣದ
    ಕಂಡರೂ ಹೇಳದ
    ಸಂಜಯ
    ಧೃತರಾಷ್ಟ್ರನಿಗೆ ಏನು ಹೇಳಿಬಹುದು
    ಬಲ್ಲೆಯಾ?

  • Vikas, nanage nimmashtu athava namma itara hiri-kiriya geleyarante sogasada varnaneyannu sarala bhaasheyalli maadalu baruvudilla. Aadaru nimmodane kelavu sangatigalannu hanchikollabekemba hambala.
    Bhaashe-vyakaranadalli tappiddare, oudaarya tori kshamisi bidi…
    Sanjegalige halavaaru roopagalive, arthagalive-illi taavu avugalannu hindina (illi padagalu siguttilla)… irali bidi, mundendaadaru idara bagge maataadona–samaya saaladu, you know

  • ಕಲ್ಪನೆಗೆ ಕೊನೆಯಿಲ್ಲ ಎಂಬ ಮಾತಿಗೆ ಮಾದರಿಯೇನೋ ಎನ್ನುವಂತಿದೆ ನಿಮ್ಮ ರಚನೆ.. ನಿತ್ಯ-ಸತ್ಯಗಳಿಗೆ ಹೊಸ ರೂಪ ನೀಡುವ ಕಲೆ, ಕೇವಲ ಕವಿಗಳಿಗೆ ದೊರೆತ ಅಪರೂಪದ ಕಾಣಿಕೆ.. :)


Leave a Reply