ಕತೆ:ಮೌಢ್ಯ

ದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದೆ ಬರೆದಿದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಬರೆದಿದ್ದು. ಅದನ್ನು ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ ಕೂಡ. ಯಥಾಪ್ರಕಾರ ಪ್ರಕಟವಾಗಲಿಲ್ಲ. ಕತೆಯ ಇನ್ನೊಂದು ಪ್ರತಿ ನನ್ನ ಬಳಿ ಈಗಲೂ ಇಲ್ಲ. ಆದರೆ ಕತೆ ನನಗೆ ನಿನ್ನೆ, ಮೊನ್ನೆ ಬರೆದಷ್ಟೇ ಚೆನ್ನಾಗಿ ನೆನಪಿದೆ. ಅದನ್ನು ಎರಡು ವರ್ಷಗಳ ಹಿಂದೆ ಇನ್ನೊಂದು ಸಲ ಬರೆದೆ. ಕಥಾ ವಸ್ತು, ನಿರೂಪಣೆಯನ್ನು ಬದಲಾಯಿಸಲಿಲ್ಲ. ಬರಹದ ಶೈಲಿ ಮಾತ್ರ ಬದಲಾಗಿದೆ. ಕತೆಗೆ `ಮೌಢ್ಯ’ ಎಂದು ಹೆಸರು ಏಕೆ ಕೊಟ್ಟಿದ್ದೆ ಎನ್ನುವುದು ಮಾತ್ರ ಈಗಲೂ ನನಗೆ ಅರ್ಥವಾಗುತ್ತಿಲ್ಲ. 

ಳ್ಳ ಅಲ್ಲಿ ಡೊಂಕಾಗಿ ಹರಿದಿದೆ.ಹಾಗಾಗಿ ಅದು ಡೊಂಕಳ್ಳ.ಆ ಹಳ್ಳದ ಪಕ್ಕದಲ್ಲಿ ನಮ್ಮ ಗದ್ದೆಯಿತ್ತು. ಈಗ ನಾಲ್ಕು ವರ್ಷಗಳಿಂದ ಅದು ಅಡಿಕೆ ತೋಟವಾಗಿದೆ. ಅಡಿಕೆ ತೋಟ ಅಂದರೆ ಬರೀ ಅಡಿಕೆ ಗಿಡಗಳಷ್ಟೇ ಅಲ್ಲ. ಅದರ ಮಧ್ಯದಲ್ಲಿ ಬಾಳೆ ಗಿಡಗಳೂ ಇದ್ದವು.ಅಲ್ಲಿ ಅಡಿಕೆ ತೋಟ ಮಾಡುವುದು ಅಜ್ಜನಿಗೆ ಒಂದಿಷ್ಟೂ ಇಷ್ಟವಿರಲಿಲ್ಲ. ಆದರೆ ಎಲ್ಲರೂ ತೋಟ ಮಾಡುವಾಗ ಅಡಿಕೆ ತೋಟ ಮಾಡದಿರುವುದು ಹೇಗೆ ಎನ್ನುವುದು ಅಪ್ಪನ ವಾದವಾಗಿತ್ತು. ಗದ್ದೆಯಲ್ಲಿ ಹುಲ್ಲು ಮಾತ್ರ ಲಾಭ ಎಂದು ಅಪ್ಪ ಪದೇ ಪದೇ ಅಜ್ಜನ ಬಳಿ ವಾದಿಸುತ್ತಿದ್ದ್ದ. ಈ ವಾದ ವಿವಾದ ಒಂದಷ್ಟು ದಿನ ನಡೆಯಿತು.

ಒಂದಷ್ಟು ದಿನ ಅಷ್ಟೇ.

ಕೊನೆಗೂ ಅಪ್ಪನ ವಾದವೇ ಗೆದ್ದಿತು.

ಡೊಂಕಳ್ಳ ಗದ್ದೆ ಅಡಿಕೆ ತೋಟವಾಯಿತು. ಸುತ್ತಲೂ ಇದ್ದ ಗದ್ದೆ ಮಾತ್ರ ಗದ್ದೆಯಾಗಿಯೇ ಉಳಿದಿತ್ತು. ಹಾಗಾಗಿ ಬೇಸಿಗೆಯಲ್ಲಿ ಬಿಸಿಲ ಝಳವನ್ನು ಅಡಿಕೆ ಗಿಡಗಳು ಸಹಿಸಿಕೊಳ್ಳುತ್ತವೆಯೋ ಎನ್ನುವ ಕುರಿತು ಅಜ್ಜನಿಗೆ ಅನುಮಾನಗಳಿದ್ದವು. `ಅಡಿಕೆ ಗಿಡಗಳೆಲ್ಲ ಪಡಿಬಿಸಿಲಿಗೆ ಸುಟ್ಟು ಹರಣಿಯಾಗಿದ್ದರೆ ಕೇಳು’ ಎಂದು ಅಜ್ಜ ಯಾವಾಗಲೂ ಹೇಳುತ್ತಿದ್ದ. ಅಪ್ಪ ಮತ್ತು ಅಪ್ಪಚ್ಚಿ ನಗುತ್ತಿದ್ದರು.

ತೋಟ ಆದ ಮೇಲೆ ಅಜ್ಜ ಎರಡು ವರ್ಷ ಬದುಕಿದ್ದ. ಅಡಿಕೆ ಗಿಡಗಳಿಗೆ ನೀರು ಹಾಕುವಾಗಲೂ ಅವನದು ಅದೇ ಮಾತು -ಪಡಿಬಿಸಿಲು. ಗೊಬ್ಬರ ಹಾಕುವಾಗಲೂ ಅದೇ ಮಾತು. ಪಡಿಬಿಸಿಲು. ಕೊನೆ ಕೊನೆಗೆ ಅಪ್ಪನನ್ನೂ ಈ ಭಯ ಆವರಿಸಿಕೊಂಡಿತ್ತು. ಅಜ್ಜ ಸತ್ತು ಹೋದ ಮೇಲೆ ಸಹ ಇದೇ ಮಾತು ಚರ್ಚೆಯಾಗುವುದಿತ್ತು.

ಇನ್ನೂ ಎರಡು ವರ್ಷಗಳು ಕಳೆದವು.

ಡೊಂಕಳ್ಳ ತೋಟಕ್ಕೆ ತೊಂದರೆ ಅಜ್ಜ ಹೇಳಿದಂತೆ ಬಿಸಿಲಿನಿಂದ ಬರಲಿಲ್ಲ. ಆದರೆ ಬೇರೆ ರೀತಿಯಿಂದ ಎದುರಾಯಿತು.

ಎಲ್ಲವೂ ಆರಂಭವಾಗಿದ್ದು ಡೊಂಕಳ್ಳ ತೋಟಕ್ಕೆ ಒಂದಷ್ಟು ಬೆಳ್ಳಕ್ಕಿಗಳು ಬರುವುದರೊಂದಿಗೆ. ಬೆಳ್ಳಕ್ಕಿಗಳಿಂದ ಯಾರಿಗಾದರೂ ಏನಾದರೂ ತೊಂದರೆ ಆಗಬಹುದು ಎಂದು ಯಾರಿಗೂ ಅನಿಸಿರಲಿಲ್ಲ. ಹಾಗೆ ಬಂದ ಬೆಳ್ಳಕ್ಕಿಗಳು ತೋಟ, ಪಕ್ಕದ ಗದ್ದೆಯಲ್ಲೆಲ್ಲ ಹಾರಾಡಿಕೊಂಡಿದ್ದವು.

ಅಷ್ಟೊಂದು ಬೆಳ್ಳಕ್ಕಿಗಳು ತೋಟಕ್ಕೆ ಏಕೆ ಬಂದವು ಎನ್ನುವುದಕ್ಕೆ ಯಾರೂ ಯಾವಾಗಲೂ ತಲೆ ಕೆಡಿಸಿಕೊಳ್ಳಲಿಲ್ಲ. ತೋಟದ ಪಕ್ಕದಲ್ಲೇ ಬಿಡಾರ ಮಾಡಿಕೊಂಡಿದ್ದ ಲಕ್ಷ್ಮಣ ಸಿದ್ದಿ ಮಾತ್ರ ಒಂದೇ ಒಂದು ಬೆಳ್ಳಕ್ಕಿಯನ್ನು ಹೊಡೆದು ತಿನ್ನಲಾಗದ ತನ್ನ ನಿಷ್ಕ್ರಿಯತೆಯನ್ನು ಬಯ್ದುಕೊಳ್ಳುತ್ತ ಇರುತ್ತಿದ್ದ.

ಹೀಗಿರುವಾಗ ಒಂದು ದಿನ ಹೋಗಿ ನೋಡಿದರೆ ತೋಟದಲ್ಲಿ ಒಂದಷ್ಟು ಕಾಗೆಗಳಿದ್ದವು. ಹತ್ತಿಪ್ಪತ್ತು ಸಂಖ್ಯೆಯಲ್ಲಿ ಬಂದಿದ್ದವು. ನಾಲ್ಕೋ ಆರೋ ಕಾಗೆಗಳನ್ನು ನೋಡಿ ಮಾತ್ರ ಅಭ್ಯಾಸವಿದ್ದ ನಮಗೆ ಹತ್ತಿಪ್ಪತ್ತು ಸಂಖ್ಯೆಯಲ್ಲಿ ಕಾಗೆಗಳನ್ನು ನೋಡಿ ಸ್ವಲ್ಪ ಗಾಬರಿಯೇ ಆಗಿತ್ತು. ಆದರೆ ಮರುದಿನದ ಹೊತ್ತಿಗೆ ಆ ಕಾಗೆಗಳೆಲ್ಲ ಹಾರಿ ಹೋಗಿದ್ದವು.

ಮತ್ತೂ ಎರಡು ದಿನ ಕಳೆಯಿತು.

ಈ ಸಲ ತೋಟಕ್ಕೆ ಹೋದಾಗ ಇನ್ನೂ ಸಂಜೆ ನಾಲ್ಕು ಗಂಟೆ. ಎಲ್ಲಿಂದಲೋ ನಾಲ್ಕು ಕಾಗೆಗಳು ಹಾರಿ ಬಂದವು. ಕೆಲವೇ ನಿಮಿಷಗಳಲ್ಲಿ ಅವು ಎಂಟಾದವು. ಎಂಟು ಹದಿನಾರಾಯಿತು. ಹದಿನಾರು ಮೂವತ್ತೆರಡಾಯಿತು. ಮೂವತ್ತೆರಡು ಅರವತ್ನಾಲ್ಕಾಯಿತು. ಅರವತ್ನಾಲ್ಕು ನೂರಿಪ್ಪತ್ತೆಂಟಾಯಿತು.

ಅಷ್ಟೂ ಕಾಗೆಗಳು ಸಂಜೆ ಹೊತ್ತಿಗೆ ಅಸಾಧ್ಯ ಗಲಾಟೆ ಆರಂಭಿಸಿದ್ದವು. ಕಾಗೆಗಳ ಈ ಸಂಜೆ ಗಲಾಟೆ ನೋಡಿ ನಮಗೆಲ್ಲ ಭಯವೇ ಆಗಿತ್ತು.

ಕಾಗೆಗಳೆಂದರೆ ಅಶುಭ. ಅವು ಗಲಾಟೆ ಮಾಡಿದರೆ ಸತ್ತ ಸುದ್ದಿ ಕೇಳಬೇಕಾಗುತ್ತದೆ!

ರಾತ್ರಿ ಕೂಡ ಕಾಗೆಗಳು ತೋಟದಲ್ಲಿಯೇ ಉಳಿದುಕೊಂಡವು. ರಾತ್ರಿಯೂ ಅವು ಅಲ್ಪ ಸ್ವಲ್ಪ ಗಲಾಟೆ ಮಾಡಿದ್ದವು. ಆದರೆ ಬೆಳಿಗ್ಗೆ ಹಾರಿ ಹೋದವು. ಜೊತೆಗೆ ನಮ್ಮ ಆತಂಕ ಸಹ!

ಸಂಜೆಯಾಯಿತು.

ಗುಂಪು ಗುಂಪಾಗಿ ಕಾಗೆಗಳು ತೋಟಕ್ಕೆ ಲಗ್ಗೆ ಇಡತೊಡಗಿದವು. ಇಂದು ನಿನ್ನೆಗಿಂತ ಹೆಚ್ಚು ಸಂಖ್ಯೆಯಲ್ಲಿವೆ ಎಂದು ನಾನು ಹೇಳಿದ್ದೆ. `ಬೀರಬಲ್ಲನ ಕಾಗೆ ಲೆಕ್ಕ’ ಅಂತ ಗಾದೆಯೇ ಇದೆ ಎಂದು ಅಪ್ಪ ತಮಾಷೆ ಮಾಡಿದ್ದ. ಆದರೆ ತೋಟಕ್ಕೆ ಕಾಗೆಗಳು ಬರುವುದು ಅವನಿಗೆ ತಮಾಷೆಯ ವಿಷಯವಂತೂ ಆಗಿರಲಿಲ್ಲ. ಅದೊಂದು ಕೆಟ್ಟ ಶಕುನದಂತೆ, ಬರಲಿರುವ ಅಪಾಯದ ಮುನ್ಸೂಚನೆಯಂತೆ ಅಪ್ಪನಿಗೆ ಅನಿಸಿತ್ತು.

ಇನ್ನೂ ಒಂದಷ್ಟು ದಿನಗಳು ಕಳೆದವು.

ಕಾಗೆಗಳು ಮಾತ್ರ ತಮ್ಮ ನಿತ್ಯ ಭೇಟಿಯನ್ನು ತಪ್ಪಿಸಲಿಲ್ಲ. ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗತ್ತಿದೆ ಎಂದು ನಮಗೆ ಅನಿಸಲು ಶುರುವಾಗಿತ್ತು.

ಇಡೀ ಊರಿನಲ್ಲಿ ಇದೊಂದು ಚರ್ಚೆಯ ವಿಷಯವಾಯಿತು. ನಮ್ಮ ತೋಟಕ್ಕೆ ಕಾಗೆಗಳು ಬಂದು ಈ ಪ್ರಮಾಣದಲ್ಲಿ ಗಲಾಟೆ ಮಾಡುತ್ತಿರುವುದು ಒಂದು ಭಾರೀ ಅನಾಹುತಕ್ಕೆ ಮುನ್ನುಡಿ ಎಂದು ಎಲ್ಲರೂ ಹೇಳಿದರು. ಒಬ್ಬಬ್ಬರೂ ಒಂದೊಂದು ರೀತಿಯ ಸಲಹೆ ನೀಡಿದರು.

ಶನಿದೇವಸ್ಥಾನಕ್ಕೆ ಹೋಗಿ ಎಂದರು. ಹೋಗಿ ಬಂದಾಯಿತು. ಶನಿಗೆ ಹವನ ಮಾಡಿ ಎಂದರು. ಹವನ ಮಾಡಿದ್ದೂ ಆಯಿತು. ಶನಿವಾರ ವಿಶೇಷ ಪೂಜೆಗಳಾದವು. ಏನನ್ನೋ ತೆಗೆದುಕೊಂಡು ಹೋಗಿ ತೋಟದಲ್ಲಿ ಹುಗಿಯಲಾಯಿತು. ಪೂಜೆ ಮಾಡಲಾಯಿತು. ಶಿರಸಿ ಆಶ್ರಮ ಆಯಿತು. ಸೋಂದಾ ಮಠ ಆಯಿತು. ಡೊಂಕಳ್ಳ ತೋಟದಲ್ಲಿ ಚೌಡಿ ಏನಾದರೂ ಇದೆಯೋ ಎಂದು ಅಷ್ಟಮಂಗಲ ಪ್ರಶ್ನೆ ಹಾಕಿಸಿದ್ದು ಅಂಥ ಪ್ರಯತ್ನಗಳಲ್ಲಿ ಕೊನೆಯದು.

ಎಲ್ಲವೂ ಡೊಂಕಳ್ಳದಲ್ಲಿ ಮಾಡಿದ ಹೋಮವಾಯಿತು!

ಕಾಗೆಗಳ ಭೇಟಿ ನಿಲ್ಲಲಿಲ್ಲ. ಪ್ರತಿದಿನ ಸಂಜೆಯೂ ಅವು ನೂರಾರು ಸಂಖ್ಯೆಯಲ್ಲಿ ನಮ್ಮ ಎರಡೆಕರೆ ತೋಟಕ್ಕೆ ಬಂದು ಅಡಿಕೆ ಗರಿ, ಬಾಳೆ ಎಲೆಗಳ ಮೇಲೆ ಕುಳಿತು ಗದ್ದಲ ಮಾಡುವುದು ಮುಂದುವರೆಯಿತು.

ಸ್ವಲ್ಪವೇ ದಿನ ಅಷ್ಟೇ.

ಕಾಗೆಗಳು ಬರುತ್ತಿದ್ದುದರಿಂದ ಆಗುವ ಆರ್ಥಿಕ ಹಾನಿಗಳು ಗೋಚರಿಸತೊಡಗಿದವು. ಕಾಗೆಗಳು ಸಾಲಾಗಿ ಬಾಳೆ ಎಲೆಯ ಮೇಲೆ ಕುಳಿತುಕೊಳ್ಳುತ್ತಿದ್ದವು. ಕಾಲು ಉಗುರಿಗೆ ಸಿಕ್ಕು ಬಾಳೆ ಎಲೆಗಳೆಲ್ಲ ಹರಿದುಹೋಗುತ್ತಿದ್ದವು. ಅವುಗಳ ಹಿಕ್ಕೆ ಬಿದ್ದು ಬಿದ್ದು ಬಾಳೆ ಎಲೆಗಳು ಗಲೀಜಾದವು. ಅಡಿಕೆ ಗಿಡದ ಸುಳಿ ಮೇಲೆ ಕುಳಿತುಕೊಂಡು ಕಾಗೆಗಳು ಅದನ್ನೂ ಮುರಿದು ಹಾಕುತ್ತಿದ್ದವು. ಇದರಿಂದಾಗಿ ತೋಟ ಬೆಳೆಸುವುದಕ್ಕೆ ಅನಿರೀಕ್ಷಿತ ತೊಂದರೆ ಎದುರಾದಂತಾಗಿತ್ತು.

ಈಗ ಊರ ಜನರಿಂದ ಇನ್ನಷ್ಟು ಸಲಹೆಗಳು ಬರತೊಡಗಿದವು. ಬೆಳ್ಳಕ್ಕಿಗಳು ಬಂದಿದ್ದರಿಂದ ಅವುಗಳ ಮೊಟ್ಟೆ ಹುಡುಕಿಕೊಂಡು ಕಾಗೆಗಳು ಬಂದಿವೆ ಎಂಬುದು ಅದರಲ್ಲಿ ಒಂದು ವಾದ. ಹಾಗಾಗಿ ಬೆಳ್ಳಕ್ಕಿಗಳನ್ನು ಓಡಿಸಿದರೆ ಕಾಗೆಗಳು ಓಡುತ್ತವೆ ಎಂಬ ಸೂತ್ರ ಹುಟ್ಟಿಕೊಂಡಿತು.

ಆದರೆ ಬೆಳ್ಳಕ್ಕಿಗಳನ್ನು ಓಡಿಸುವುದು ಕಾಗೆಗಳನ್ನು ಓಡಿಸಿದಷ್ಟೇ ಕಷ್ಟವಿತ್ತು. ಇಷ್ಟಕ್ಕೂ ಈ ಕಾಗೆಗಳು ಬೆಳ್ಳಕ್ಕಿಗಳ ಮೊಟ್ಟೆ ಹುಡುಕುತ್ತಿರುವಂತೇನೂ ಕಾಣಲಿಲ್ಲ. ಈ ನಡುವೆ ಅಚ್ಚೆಮನೆ ಹಿರ್ಪ ಹೊಸ ಐಡಿಯಾ ಕೊಟ್ಟ. ಅದೆಂದರೆ ಒಂದು ಕಾಗೆಯನ್ನು ಹೊಡೆದು ಅದನ್ನು ತೋಟದ ತುದಿಗೆ ನೇತು ಹಾಕುವುದು!

ಮೊದಲ ಸಲ ಅಪ್ಪ ಕಾಗೆಗಳನ್ನು ಹೊಡೆಸಲು ಮುಂದಾದ. ಒಂದು ಕಾಗೆ ಹೊಡೆಸಿ ಅದನ್ನು ತೋಟದ ತುದಿಗೆ ನೇತು ಹಾಕಲಾಯಿತು. ಸತ್ತ ಕಾಗೆಯ ಸುತ್ತ ಒಂದಷ್ಟು ಕಾಗೆಗಳು ಗಲಾಟೆ ಮಾಡಿದವು. ಆದರೆ ಕಾಗೆಗಳ ಭೇಟಿ ಮಾತ್ರ ನಿಲ್ಲಲಿಲ್ಲ. ಈ ರೀತಿಯ ಬೆದರಿಕೆ ತಂತ್ರಗಳಿಗೆ ಜಗ್ಗದಿರಲು ಕಾಗೆಗಳು ನಿರ್ಧರಿಸಿದಂತಿದ್ದವು.

ಅಪ್ಪನಿಗೂ ಸಾಕು ಸಾಕಾಗಿತ್ತು. ಕಾಗೆಗಳು ತೋಟ ಮಾಡಲು ಬಿಡುವುದಿಲ್ಲ ಎಂದು ನಿರ್ಧರಿಸಿದವನಂತೆ ಆತ ಕಾಗೆಗಳ ಮಾರಣ ಹೋಮಕ್ಕೆ ತೀರ್ಮಾನ ಮಾಡಿದ. ಆರಂಭದಲ್ಲಿ ಒಂದು ಕಾಗೆಗೆ ಹತ್ತು ರೂಪಾಯಿ ಸ್ಕೀಮು ಜಾರಿಗೆ ಬಂತು. ಸಂಜೆಯಾದರೆ ತೋಟದಲ್ಲೇ ಠಳಾಯಿಸುತ್ತಿದ್ದ ಕಾಗೆಗಳನ್ನು ಲಕ್ಷಣ ಸಿದ್ದಿ ಒಂದೊಂದಾಗಿ ಹೊಡೆದು ಹಾಕಿದ. ಅವನು ಎಣಿಸುತ್ತಿದ್ದ ಒಂದೊಂದು ಹತ್ತು ರೂಪಾಯಿ ನೋಟಿನ ಹಿಂದೆಯೂ ಒಂದೊಂದು ಕಾಗೆಯ ಸಮಾಧಿಯಿತ್ತು.

ಕೆಲವು ದಿನ ಅಷ್ಟೇ.

ಈ ಉಪಾಯ ಆರ್ಥಿಕವಾಗಿ ಸಾಕಷ್ಟು ನಷ್ಟದಾಯಕ ಎಂದು ಅಪ್ಪನಿಗೆ ಅನಿಸಲಾರಂಭಿಸಿತು. ಅಲ್ಲದೇ ಅದರಿಂದ ಪ್ರಯೋಜನ ಆದಂತೆಯೂ ಇರಲಿಲ್ಲ. ಈ ಹಂತದಲ್ಲಿ ಯಾರೋ ಒಂದು ಉಪಾಯ ಕೊಟ್ಟರು. ಅನ್ನಕ್ಕೆ ವಿಷ ಬೆರೆಸಿ ಇಡುವ ಅನಾಹುತಕಾರಿ `ಪಾಯ’ ಅದು.

ಒಂದು ದಿನ ಅದನ್ನು ಅಪ್ಪ ಜಾರಿಮಾಡಿಯೇ ಬಿಟ್ಟ. ತೋಟದಲ್ಲಿ ಅಲ್ಲಲ್ಲಿ ಅನ್ನ ಇಡಲಾಯಿತು. ಅದಕ್ಕೆ ವಿಷ ಬೆರಸಲಾಯಿತು. ಅದನ್ನು ತಿನ್ನಲು ಕಾಗೆಗಳು ಸ್ಪರ್ಧೆಯನ್ನೇ ತೋರಿಸಿದವು. ಸಾವಿಗಾಗಿ ಹೋರಾಟ ನಡೆಸಿದವು. ಒಂದೇ ದಿನದಲ್ಲಿ ನೂರಾರು ಕಾಗೆಗಳು ಸತ್ತುಹೋದವು.

ಅದು ಕೊನೆ.

ಡೊಂಕಳ್ಳ ತೋಟಕ್ಕೆ ಕಾಗೆಗಳು ಪುನಃ ಭೇಟಿ ಕೊಡಲಿಲ್ಲ.

***

ಮೂರ್ನಾಲ್ಕು ತಿಂಗಳೇ ಕಳೆದಿರಬೇಕು. ಮನೆಯಲ್ಲಿ ಅಜ್ಜನ ತಿಥಿ. ಊರವರೆಲ್ಲ ಬಂದಿದ್ದರು. ಭಟ್ಟರೂ ಬಂದಿದ್ದರು. ಅಜ್ಜನಿಗೆ ಪಿಂಡ ಪ್ರದಾನ ಆಯಿತು. ದಾನ, ಬ್ರಾಹ್ಮಣರ ಊಟ ಮುಗಿಯಿತು.

ಈಗ ಅಪ್ಪ ಪಿಂಡವನ್ನು ತೆಗೆದುಕೊಂಡು ಕೊಟ್ಟಿಗೆ ತುದಿಗೆ ಹೋದ. ಅಲ್ಲಿ ಅದನ್ನು ಇಟ್ಟು ಎಂದಿನಂತೆ `ಹಾರ್‌ ಹಾರ್‌’ ಎಂದು ಕರೆದ. ಅದನ್ನು ಕಾಗೆಗಳು ಬಂದು ತಿನ್ನಬೇಕು. ತಿಂದ ಮೇಲೇ ಶ್ರಾದ್ಧದಲ್ಲಿ ತೊಡಗಿಕೊಂಡವ ಊಟ ಮಾಡಬೇಕು ಎನ್ನುವುದು ಪದ್ದತಿ.

ಅಪ್ಪ ಕರದೇ ಕರೆದ.

`ಹಾರ್‌ ಹಾರ್‌’

ಕಾಗೆಗಳು ಬರಲಿಲ್ಲ.

`ಹಾರ್‌ ಹಾರ್‌’

ಕಾಗೆಗಳು ಬರಲಿಲ್ಲ.

`ಹಾರ್‌ ಹಾರ್‌ ಹಾರ್‌ ಹಾರ್‌’

ಕಾಗೆಗಳು ಬರಲೇ ಇಲ್ಲ!

2 Comments

  1. Niharika
    Posted March 22, 2007 at 10:32 am | Permalink

    hale katheyadaroo chennagide. antya “politicaly correct’ alla !

  2. Gundkal
    Posted March 22, 2007 at 11:12 am | Permalink

    Dear Niharika,
    Thank you for your comment. Please elaborate the statement: Politically correct alla. That will help me. Thank you.


Post a Comment

Your email is never published nor shared. Required fields are marked *
*
*