ಸಾಧು ಕೋಕಿಲಾ ಕುರಿತು ಅನೇಕರಿಗೆ ತಪ್ಪು ಅಭಿಪ್ರಾಯಗಳಿವೆ. ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ಎಂದರೆ ಹಲವರಿಗೆ ಅಚ್ಚರಿಯಾಗಬಹುದು. ಏಕೆಂದರೆ ಸಾಧು ಕೋಕಿಲಾ ಸಿನಿಮಾದಲ್ಲಿ ಮಾಡುವ ಪಾತ್ರಗಳು ಇದಕ್ಕೆ ತದ್ವಿರುದ್ಧ. ಹೀಗಿದ್ದರೂ ಸಾಧು ಪ್ರತಿಭೆಯನ್ನು ಯಾರೂ ಪ್ರಶ್ನೆ ಮಾಡಲಾರರು. ಅವರು ನಟರಾಗಿಯೂ ಸೈ. ನಿರ್ದೇಶಕರಾಗಿಯೂ ಸೈ. ಅವರ ನಿರ್ದೇಶನದ ಶಕ್ತಿಯನ್ನು ಎತ್ತಿ ಹಿಡಿದದ್ದು ಶಿವರಾಜ್‌ಕುಮಾರ್ ಅಭಿನಯದ `ರಾಕ್ಷಸ’ ಚಿತ್ರ. `ರಕ್ತಕಣ್ಣೀರು’ ಮತ್ತು ಈಗ `ಹರಿಹರ’ ಚಿತ್ರವನ್ನೂ ಸಾಧು ನಿರ್ದೇಶಿಸಿದ್ದಾರೆ. ಆದರೆ ಈ ಚಿತ್ರಗಳು ತಮಿಳಿನ ರೀಮೇಕ್‌ಗಳು. `ಹರಿಹರ’ ಇನ್ನೂ ಬಿಡುಗಡೆ ಕಾಣಬೇಕು. ಈ ನಡುವೆ ಅವರು ಇನ್ನೊಂದು ಚಿತ್ರಕ್ಕೆ ಸ್ಕೆಚ್ ಹಾಕಿದ್ದಾರೆ. ಓದಿನೋಡಿ.
ಕಾಮಿಡಿ ಟೈಮ್ ಗಣೇಶ್ ಒಂದೆಡೆ ಯಶಸ್ಸಿನ ಮಳೆಯಲ್ಲಿ ತೊಯ್ಯುತ್ತ ಗಾಂಧೀನಗರದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಇನ್ನೊಂದೆಡೆ ನೆನಪಿರಲಿ ಪ್ರೇಮ್‌ಗೆ ಯಶಸ್ಸು ಜೊತೆ ಜೊತೆಯಲ್ಲಿದೆ. ಈ ನಡುವೆ `ದುನಿಯಾ’ದ ವಿಜಯ್ ನೆಲೆ ಕಂಡುಕೊಳ್ಳುತ್ತಿದ್ದಾರೆ. ಪ್ರಜ್ವಲ್ ಇನ್ನಷ್ಟು ಸಿಕ್ಸರ್‌ಗಳನ್ನು ಸಿಡಿಸುವ ಭರವಸೆ ಮೂಡಿಸಿದ್ದಾರೆ. ಒಟ್ಟಾರೆ ಗಾಂಧೀನಗರದಲ್ಲಿ ಹೊಸ ಕುದುರೆಗಳು ಓಡುತ್ತಿವೆ.ನಿರ್ದೇಶಕ ಸಾಧು ಕೋಕಿಲಾ ಈಗ ಹೊಸ ಚಿತ್ರಕ್ಕೆ ಸ್ಕೆಚ್ ಹಾಕುತ್ತಿದ್ದಾರೆ. ಅವರ ಚಿತ್ರದಲ್ಲಿ ಹೊಸ ಹುಡುಗ ಪ್ರಜ್ವಲ್ ನಾಯಕ. ಅವರಿಗೆ ಇಬ್ಬರು ನಾಯಕಿಯರಿರುತ್ತಾರೆ. ಈ ಚಿತ್ರಕ್ಕೆ ನಿರ್ಮಾಪಕರನ್ನೂ ಅವರು ಗೊತ್ತುಮಾಡಿಕೊಂಡಿದ್ದಾರೆ. ಸಾಧು ನಿರ್ದೇಶನದ ಚಿತ್ರಕ್ಕೆ ಸಾಧು ಸಂಗೀತವಂತೂ ಇದ್ದೇ ಇರುತ್ತದೆ.`ಗಂಗೆ ಬಾರೇ ತುಂಗೆ ಬಾರೇ’ ಎಂಬ ಶೀರ್ಷಿಕೆ ಇರಲಿ ಎಂದು ಸದ್ಯಕ್ಕೆ ಅಂದುಕೊಂಡಿದ್ದೇವೆ ಎನ್ನುತ್ತಾ ಮಾತಿಗಿಳಿದರು ಸಾಧು ಕೋಕಿಲಾ. ಈ ಚಿತ್ರದಲ್ಲಿ ಪ್ರಜ್ವಲ್‌ಗೆ ಇಬ್ಬರು ನಾಯಕಿಯರು. ಇದೊಂದು ತ್ರಿಕೋನ ಪ್ರೇಮಕತೆ ಎಂಬುದನ್ನೂ ಸಾಧು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಅಂದರೆ ಗಂಗೆ, ತುಂಗೆಯರು ನಾಯಕಿಯರು ಎಂದು ಯಾರಾದರೂ ಊಹಿಸಬಹುದು.ಈ ನಡುವೆ `ಪಿತಾಮಗನ್’ ಚಿತ್ರದ ಕನ್ನಡ ಅವತರಣಿಕೆಯ ಕೆಲಸ ಎಲ್ಲಿಯ ತನಕ ಬಂದಿದೆ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಈಗ `ಹರಿಹರ’ ಎಂದು ಹೆಸರಿಟ್ಟಿದ್ದೇವೆ ಎಂದರು ಸಾಧು. ಇನ್ನೊಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ. ಹೀಗಿದ್ದರೂ ಆ ಹಾಡಿನಲ್ಲಿ ಯಾರು ಕುಣಿಯುತ್ತಾರೆ ಎನ್ನುವ ರಹಸ್ಯವನ್ನು ಅವರು ಬಿಟ್ಟುಕೊಡಲಿಲ್ಲ. ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆ.
`ಹರಿಹರ’ ಚಿತ್ರದ ಹಾಡಿನಲ್ಲಿ ಶಿವರಾಜ್‌ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಅವರು ತಳ್ಳಿ ಹಾಕಿದರು. `ಪಿತಾಮಗನ್’ ಚಿತ್ರ ಪತಿವ್ರತೆಯಿದ್ದಂತೆ. ಅದನ್ನು ಮುಟ್ಟಲು, ಬದಲಾಯಿಸಲು ಹೋಗಬಾರದು ಎನ್ನುವುದು ಅವರ ಹೇಳಿಕೆ. ಈ ನಡುವೆ `ದುನಿಯಾ’ ಚಿತ್ರವನ್ನು ಸಾಧುಕೋಕಿಲಾ ಬಹುವಾಗಿ ಮೆಚ್ಚಿಕೊಂಡರು. ಇದರ ಗೌರವ ಸಂಪೂರ್ಣವಾಗಿ ಸೂರಿಗೆ ಹೋಗಬೇಕು ಎಂದು ಮೆಚ್ಚುಗೆ ಸಲ್ಲಿಸಿದರು. ದುನಿಯಾ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ನೀಡಿದವರು ಸಾಧು ಕೋಕಿಲಾ.
Post a Comment