ವರದಿ: ದುನಿಯಾ ಐ ಲವ್‌ ಯೂ

suri.jpg

ದುನಿಯಾ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೆಜೆಸ್ಟಿಕ್‌ ಚಿತ್ರಮಂದಿರದಲ್ಲಿ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಬ್ಲ್ಯಾಕ್‌ನಲ್ಲಿ ಟಿಕೆಟ್‌ ಮಾರಾಟವಾಗುತ್ತಿದೆ. ಮೆಜೆಸ್ಟಿಕ್‌ನಲ್ಲಿ ಕನ್ನಡ ಚಿತ್ರವೊಂದಕ್ಕೆ ಬ್ಲ್ಯಾಕ್‌ನಲ್ಲಿ ಟಿಕೆಟ್‌ ಕೊಡದೇ ಎಷ್ಟೆಲ್ಲ ವರ್ಷಗಳಾಗಿತ್ತು ಎಂದು ಅಲ್ಲಿನ ಸಿಬ್ಬಂದಿಗಳು ಉದ್ಗರಿಸುತ್ತಿದ್ದಾರೆ.ತಾಂತ್ರಿಕವಾಗಿ ನೋಡಿದರೆ `ದುನಿಯಾ’ ಇತ್ತೀಚೆಗೆ ಬಂದ ಕನ್ನಡ ಚಿತ್ರಗಳಲ್ಲೇ ಅತ್ಯುತ್ತಮ. ಹಳೆಯ ವಸ್ತುವನ್ನೇ ನಿರ್ದೇಶಕ ಸೂರಿ ಹೊಸ ರೀತಿಯಲ್ಲಿ ಟ್ರೀಟ್‌ ಮಾಡಿದ ರೀತಿ ಹಲವರ ಮೆಚ್ಚುಗೆ ಪಡೆಯುತ್ತಿದೆ. ಹೀಗಿದ್ದರೂ `ಮುಂಗಾರು ಮಳೆ’ಗೆ ಹೋಲಿಸಿದರೆ ಚಿತ್ರದ ಗಳಿಕೆ ಹೆಚ್ಚು ದಿನ ನಿಲ್ಲುವ ಸಾಧ್ಯತೆಗಳಿಲ್ಲ. ಕಾರಣ: ಮಹಿಳೆಯರು, ಹುಡುಗಿಯರನ್ನು ಸೆಳೆಯುವಲ್ಲಿ ಚಿತ್ರ ಅಷ್ಟು ಯಶಸ್ವಿಯಾಗಿಲ್ಲ. ಕಾರಣ ಏನು ಎನ್ನುವುದು ಇಡೀ ಗಾಂಧೀನಗರಕ್ಕೆ ಗೊತ್ತು. `ದುನಿಯಾ’ದಲ್ಲಿರುವ ಪ್ರೀತಿಯ ಕತೆಯನ್ನು ಅದರಲ್ಲೇ ಇರುವ ರೌಡಿ ಜಗತ್ತಿನ ದ್ವೇಷದ ಕತೆ ಹಿಂದಕ್ಕೆ ಹಾಕಿದೆ. ರೌಡಿ ಜಗತ್ತಿನ ಸಂಬಂಧಗಳಿಗಿಂತ ಪ್ರೀತಿಯ ಜಗತ್ತಿನ ಸಂಬಂಧಗಳು ಮುಖ್ಯವಾಗಿಬಿಟ್ಟಿದ್ದರೆ ಈ ಸಿನಿಮಾ ಎಲ್ಲರನ್ನೂ ಆಕರ್ಷಿಸುವುದು ಸಾಧ್ಯವಿತ್ತಲ್ಲವೇ ಎನ್ನುವುದು ಈಗ ಚರ್ಚೆಯ ವಿಷಯ.ಅದೇನೇ ಇರಲಿ. ನಿರ್ದೇಶಕ ಸೂರಿಗೆ ಇದು ಮೊದಲ ಸಿನಿಮಾ. ಬಲ್ಲವನೇ ಬಲ್ಲ ಸಿನಿಮಾ ಬಿಡುಗಡೆಯ ವೇದನೆ. ಅದರಲ್ಲೂ ಸ್ಟಾರ್‌ಗಳಿಲ್ಲದ ದುನಿಯಾದಂಥ ಸಿನಿಮಾ ನಿರ್ದೇಶಕನ ಕತೆಯೇನು? ಬಿಡುಗಡೆಗೆ ಮೊದಲಿನ ದಿನ ಸಂಜೆಯಿಂದ ಬಿಡುಗಡೆಯ ದಿನದ ಸಂಜೆಯ ತನಕ ಸೂರಿ ಎದುರಿಸಿದ ಆತಂಕ, ಅಚ್ಚರಿ, ಸಂಭ್ರಮಗಳು ಇಲ್ಲಿ ದಾಖಲಾಗಿವೆ.

ಅದು ಗುರುವಾರ. ಗಾಂಧೀನಗರದಲ್ಲಿರುವ ಕಚೇರಿಯೊಂದರ ಎದುರುಗಡೆ `ದುನಿಯಾ’ ಸಿನಿಮಾದ 19 ಪ್ರಿಂಟ್‌ಗಳ ನಡುವೆ ನಿರ್ದೇಶಕ ಸೂರಿ ನಿಂತಿದ್ದಾರೆ. ಅವರಿಗೆ ಚೊಚ್ಚಲ ಪ್ರಸವ ವೇದನೆ. ಈ ಹಂತದಲ್ಲಿ ಅವರು ಮೆಲುಕು ಹಾಕುತ್ತಿದ್ದುದು `ಮಣಿ’ ಚಿತ್ರ ಮೊದಲ ದಿನ ಬೆಳಿಗ್ಗೆ ಹೌಸ್‌ಫುಲ್‌ ಆಗಿರಲಿಲ್ಲ ಎಂಬ ನೋವಿನ ಸಂಗತಿಯನ್ನು. ಅಷ್ಟೊತ್ತಿಗೆ ಅಲ್ಲಿಗೆ ಯಾರೋ ಬಂದು ಸೂರಿ ಜೊತೆ ಮಾತುಕತೆಗೆ ಇಳಿಯುತ್ತಾರೆ.

`ಇದು ದುನಿಯಾ ಪ್ರಿಂಟ್ಸಾ ಸಾರ್‌?’

`ಹೌದು’

`ನೀವು ಡೈರೆಕ್ಟರಲ್ವಾ ಸಾರ್‌?’

`ಹೌದು’

`ಅಯ್ಯೋ ಒಳ್ಳೆದಾಯ್ತು. ಬೆಳಗಿನ ಶೋಗೆ ಒಂದು ಟಿಕೆಟ್‌ ಕೊಡಿಸಿ ಸಾರ್‌! ನಾಳೆ ಸಿಕ್ಕುತ್ತೋ ಇಲ್ವೋ’

ಆತ ಲಗುಬಗೆಯಿಂದ ನಲವತ್ತು ರೂಪಾಯಿ ತೆಗೆದು ಕೊಡುತ್ತಿದ್ದರೆ ಸೂರಿ ಸಂಭ್ರಮದಿಂದ ಕಂಪಿಸುತ್ತಾರೆ. `ದುನಿಯಾ’ದ ಯಶಸ್ಸಿನ ಕತೆ ಹೀಗೆ ಓಪನ್‌ ಆಗುತ್ತದೆ. ಕಟ್‌ ಮಾಡಿದರೆ ರಾತ್ರಿಯಾಗಿದೆ. ಸೂರಿ ಆತಂಕ ಇನ್ನೂ ಕಮ್ಮಿಯಾಗಿಲ್ಲ. ಅಲ್ಲಿ ಪೋಸ್ಟರ್‌ ಹಚ್ಚಬೇಕು. ಇಲ್ಲಿ ಬ್ಯಾನರ್‌ ಕಟ್ಟಬೇಕು. ಕಟೌಟ್‌ ನಿಲ್ಲಿಸಬೇಕು. ಅಷ್ಟರಲ್ಲಿ ಅವರಿಗೊಂದು ಫೋನ್‌ ಬರುತ್ತದೆ. `ನಾಳೆ ಶೋಗೆ ರಾತ್ರಿಯೇ ಟಿಕೆಟ್‌ ಕೊಡ್ತಾರ ಸಾರ್‌’. ಪುನಃ ಸೂರಿ ಸಂಭ್ರಮಿಸುತ್ತಾರೆ. ಕಟ್‌ ಮಾಡಿದರೆ ಇನ್ನೂ ಬೆಳಗಾಗಿಲ್ಲ. ನಿನ್ನೆ ತಡರಾತ್ರಿ ಸುಸ್ತಾಗಿ ಮಲಗಿದರೂ ಬೇಗ ಎಚ್ಚರವಾಗಿಬಿಟ್ಟಿದೆ. ಗೊಂದಲ, ಆತಂಕ ಇನ್ನೂ ಹಾಗೆಯೇ ಇದೆ. ಗಂಟೆ ಹತ್ತಾಗಿ, ಮೊದಲ ಶೋ ಶುರುವಾಗಿ ಪಿಚ್ಚರ್‌ ಮುಗಿಯವ ಹೊತ್ತಿಗೆ ಜನ ಸಿನಿಮಾ ಮೆಚ್ಚಿಕೊಂಡಿದ್ದಾರೆ ಎಂಬ ವಿಷಯ ಗೊತ್ತಾಗುತ್ತದೆ. ಸೂರಿ ಈ ಸಲ ಹೆಚ್ಚು ನಿರಾಳವಾಗಿ ಸಂಭ್ರಮಿಸುತ್ತಾರೆ. ಮ್ಯಾಟ್ನಿ ಶೋ, ಫಸ್ಟ್‌ ಶೋ ಕೂಡ ಹೌಸ್‌ಫುಲ್‌. ಹೀಗಾಗಿ ಶುಕ್ರವಾರ ಸಂಜೆಯ ಹೊತ್ತಿಗೆ `ದುನಿಯಾ’ ಚಿತ್ರತಂಡದವರ ಮುಖಗಳಲ್ಲಿ ಆಯಾಸದ ವಿಳಾಸವೂ ಕಾಣುತ್ತಿಲ್ಲ!

ಈಗ ಭಯ ಕಡಿಮೆ ಆಗಿದೆ ಎಂದು ಸಂತೋಷಕೂಟದಲ್ಲಿ ಖುಷಿಯಾದರು ಸೂರಿ. ಅವರಿಗೆ ಈ ಚಿತ್ರವನ್ನು ಜನ ಸ್ವೀಕರಿಸುತ್ತಾರೆ ಎಂಬ ವಿಷಯದಲ್ಲಿ ಯಾವುದೇ ಅನುಮಾನ ಇದ್ದಂತಿರಲಿಲ್ಲ. ಒಂದು ಒಳ್ಳೆಯ ಚಿತ್ರ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲೂ ಅವರು ಸಂಕೋಚಪಟ್ಟುಕೊಳ್ಳಲಿಲ್ಲ. ಅಂದುಕೊಂಡಂತೆ ಜನ ಸಿನಿಮಾವನ್ನು ಮೆಚ್ಚುಕೊಳ್ಳುತ್ತಿದ್ದಾರಲ್ಲ ಅಂತ ಅವರಿಗೆ ಸಂತೋಷ.

ಈ ಚಿತ್ರದಲ್ಲಿ ನಾನು ವಿಲನ್‌ಗಳನ್ನು ಸೃಷ್ಟಿಮಾಡಲಿಲ್ಲ ಎಂದರು ಸೂರಿ. ಇದಕ್ಕೆ ಅವರಿಗೆ ಪ್ರೇರಣೆಯಾಗಿದ್ದು `ಕರ್ವಾಲೋ’ ಕಾದಂಬರಿ ಎಂಬ ಕುತೂಹಲಕರ ವಿಷಯವೂ ಈ ಸಂದರ್ಭದಲ್ಲಿ ಬಯಲಾಯಿತು. ಅದರಲ್ಲೂ ವಿಲನ್‌ಗಳಿಲ್ಲ ಇದರಲ್ಲೂ ಇಲ್ಲ ಎಂದರು ಅವರು.

`ದುನಿಯಾ’ದ ಪ್ರಮುಖ ಪಾತ್ರಗಳು ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನೂ ಸೂರಿ ಸಮರ್ಥಿಸಿಕೊಂಡರು. `ಅಬಲಾಶ್ರಮದಲ್ಲಿ ಬೆಳೆದ ಸಾಕಷ್ಟು ಹುಡುಗಿಯರನ್ನು ನೋಡಿದ್ದೇನೆ. ಕಾಲೇಜಿನ ದಿನಗಳಿಂದಲೂ ಗಮನಿಸಿದ್ದೇನೆ. ಅವರು ಸಣ್ಣ ಸಣ್ಣ ವಿಷಯಕ್ಕೂ ಅತಿಶಯ ಎನಿಸಬಹುದಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ’ ಎಂದರು ಸೂರಿ. ಅದನ್ನೇ ಆಧಾರವಾಗಿಟ್ಟುಕೊಂಡು ಅವರು ಪೂರ್ಣಿಮಾ ಪಾತ್ರವನ್ನು ಸೃಷ್ಟಿ ಮಾಡಿದರು ಮತ್ತು ಅವಳಿಗೆ ಆತ್ಮಹತ್ಯೆಯ ಯೋಚನೆ ಬರುವಂತೆ ಮಾಡಿದರು. ಅದು ನಿರ್ದೇಶಕನಾಗಿ ಅವರಿಗೆ ಅನಿವಾರ್ಯವೂ ಆಗಿತ್ತು. ಏಕೆಂದರೆ ಅವರು ಸೃಷ್ಟಿಸಿದ ನಾಯಕನ ಪಾತ್ರ ಬದುಕಿನಲ್ಲಿ ಯಾವುದಕ್ಕೂ ಹೆದರದ ಪಾತ್ರ.

ಈ ಸಂದರ್ಭದಲ್ಲಿ ತಮ್ಮ ತಂಡಕ್ಕೆ ಸೂರಿ ಧನ್ಯವಾದ ಸಮರ್ಪಿಸಿದರು. ಛಾಯಾಗ್ರಾಹಕ ಸತ್ಯಾ ಹೆಗಡೆಯನ್ನು ಹೆಚ್ಚು ಸಲ ಮಿಸ್‌ ಮಾಡಿಕೊಂಡರು. ಮಂಗಳೂರಿನಲ್ಲಿ `ಹುಡುಗಾಟ’ ಚಿತ್ರೀಕರಣದಲ್ಲಿ ಇದ್ದುದರಿಂದ ಸತ್ಯಾ ಹೆಗಡೆಗೆ ಸಂತೋಷಕೂಟದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. `ಎಷ್ಟೋ ಛಾಯಾಗ್ರಾಹಕರಿಗೆ ಇಷ್ಟು ಒಳ್ಳೆಯ ಸೆನ್ಸ್‌ ಇರುವುದಿಲ್ಲ. ಸತ್ಯಾ ಅಷ್ಟು ಚೆನ್ನಾಗಿ ಛಾಯಾಗ್ರಹಣ ಮಾಡಿಕೊಟ್ಟಿದ್ದಾರೆ’ ಎಂದು ಖುಷಿಯಾದರು ಸೂರಿ. ತಾನು ಅಂದುಕೊಂಡಂತೆಯೇ ಚಿತ್ರವನ್ನು ಅವರು ತೆರೆಯ ಮೇಲೆ ತಂದಿದ್ದಾರೆ ಎಂದು ಕೊಂಡಾಡಿದರು.

ಹಿಂಸೆ ಹೆಚ್ಚಾಯಿತಲ್ಲವೇ ಎಂಬ ಪ್ರಶ್ನೆಯೂ ಸೂರಿಗೆ ಬಂತು. ಇದಕ್ಕೆ ಉತ್ತರ ಕೊಡುವಾಗ ಸೂರಿ ಕೊಂಚ ಅಸಹಾಯಕರಾದರು. `ಗಾಂಧೀನಗರಕ್ಕೆ ಬೇಕಾದ ಒಂದಾದರೂ ಕಾರ್ಡ್‌ ನಮ್ಮ ಜೊತೆ ಇರಬೇಕು. ಹೀಗಾಗಿ ಹಿಂಸೆ ಅನಿವಾರ್ಯವಾಯಿತು’ ಎಂದರು ಅವರು. ಈಗ ಮುಂದಕ್ಕೇನು ಎಂಬ ಪ್ರಶ್ನೆ ಬಂತು. ಈಗಾಗಲೇ ಸಾಕಷ್ಟು ಸಿನಿಮಾ ಮಾಡಿರುವ ನಿರ್ಮಾಪಕರೊಬ್ಬರಿಗೆ ಸಿನಿಮಾ ಮಾಡಿಕೊಡುತ್ತೀರಾ ಎಂಬ ಪ್ರಶ್ನೆಯೂ ಎದುರಾಯಿತು. ಇದಕ್ಕೆ ಸೂರಿ ಕೊಟ್ಟ ಉತ್ತರ ಅರ್ಥಪೂರ್ಣವಾಗಿತ್ತು. `ಕೆಲವರು ಕತೆ ಇಟ್ಟುಕೊಂಡು ಬರುತ್ತಾರೆ. ಹೀರೋ ಇಟ್ಟುಕೊಂಡು ಬರುತ್ತಾರೆ. ಮತ್ತೆ ಕೆಲವರು ಮೂರು ಸೀಡಿ ಇಟ್ಟುಕೊಂಡು ಬರುತ್ತಾರೆ. ಹೀಗಾಗಿ ಯೋಚನೆ ಮಾಡುತ್ತಿದ್ದೇನೆ’ ಎಂದರು ಅವರು. ತಮ್ಮ ಮುಂದಿನ ಸಿನಿಮಾದ ಶೈಲಿ ಮತ್ತು ಕಥಾವಸ್ತು ಬೇರೆಯಾಗಿರುತ್ತದೆ ಎಂಬ ಭರವಸೆಯೂ ಅವರಿಂದ ಬಂತು.

Post a Comment

Your email is never published nor shared. Required fields are marked *
*
*