ವಿಕಾಸ ನೇಗಿಲೋಣಿ ಬರಹ:
ಒಂದು ಸಿನಿಮಾದಲ್ಲಿ ನಾಯಕಿ ಅಳುತ್ತಾಳೆ ಮತ್ತು ಹಾಡುತ್ತಾಳೆ: ಅತ್ತೆ ಮನೆಯಲಿ ಅತ್ತು ಕರೆದರೆ ಅಮ್ಮ ಬರುವಳೇ. ಅಮ್ಮ ಬರುತ್ತಾಳೋ ಇಲ್ಲವೋ ಗೊತ್ತಿಲ್ಲ, ಪ್ರೇಕ್ಷಕರಂತೂ ಬರುತ್ತಾರೆ! ಕನ್ನಡದ ನಿರ್ದೇಶಕರು, ನಿರ್ಮಾಪಕರ ಬಾಯಲ್ಲಿ ಆಗಾಗ ಕೇಳಿಬರುವ `ಸೆಂಟಿಮೆಂಟ್ ಸಬ್ಜೆಕ್ಟ್’ನ ಕತೆ ಇದು. ಸುಲಭವಾಗಿ ಹೇಳಬೇಕೆಂದರೆ ಅವು ಕಣ್ಣೀರಿನ ಸಿನಿಮಾಗಳು. ತವರಿನ ಸುಕುಮಾರಿ ಗಂಡನ ಮನೆಯಲ್ಲಿ ಅಬ್ಬೇಪಾರಿಯಾಗುವುದು ಇಲ್ಲೆಲ್ಲಾ ಸಾಮಾನ್ಯ. ಹೆಣ್ಣು ಕಣ್ಣೀರು ಹಾಕಿದರೆ ಮನೆಗೆ ಶ್ರೇಯಸ್ಕರವಲ್ಲ ಎಂದು ಹೇಳುವುದು ಶುದ್ದ ಸಾಂಸಾರಿಕ, ಹೆಣ್ಣು ಕಣ್ಣೀರು ಹಾಕಿದರೆ ಸಿನಿಮಾಕ್ಕೆ ಶ್ರೇಯಸ್ಕರ ಎಂಬುವವರು ನಿರ್ಮಾಪಕ, ಪ್ರೇಕ್ಷಕ!
ಹೀಗೆ ಅತ್ತು ಕರೆದು ಔತಣ ಹಾಕಿಸುವ ಸಿನಿಮಾಕ್ಕೊಂದು ನಿರ್ದಿಷ್ಟ ಕಥಾಹಂದರವಿದೆ. ಅಲ್ಲಿ ಒಬ್ಬ ಹೆಣ್ಣಿರಬೇಕು, ಆ ಹೆಣ್ಣಿಗೊಬ್ಬ ಅಣ್ಣ ಇರಬೇಕು. ತವರುಮನೆಯವರು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಬೇಕು. ಎಲ್ಲರೂ ನಗುತ್ತಾ ಇರುವಾಗ ಆಕೆಗೆ ಮದುವೆ ಆಗಬೇಕು. ಆಮೇಲೆ ಒಂದೋ ಆಕೆಯನ್ನು ಅತ್ತೆ ಮನೆಯವರು ಹಿಂಸಿಸಬೇಕು. ಇಲ್ಲವೇ ಆಕೆ ತವರು ಮನೆಗೆ ಬಂದಾಗ ಅತ್ತಿಗೆ ಕಾಟ ಕೊಡಬೇಕು. ಅಂಥ ಚಿತ್ರಗಳು ದುರಂತದಲ್ಲಿ ಕೊನೆಯಾದರೆ ನಿರ್ಮಾಪಕ ಭಾಗ್ಯವಂತ, ಕಣ್ಣೀರು ಹಾಕಿಸಲು ಕಂಜೂಸು ಮಾಡಿದಷ್ಟೂ ಆ ಸಿನಿಮಾ ಗತಿ ದುರಂತ!ಕಣ್ಣೀರು ಹಾಕಿ ಗೆದ್ದ ನಾಯಕಿಯರು ಅನೇಕ. ಈ ಹಿಂದೆ ಕಲ್ಪನಾ, ಆರತಿ, ಭಾರತಿ, ಜಯಂತಿ ಅವರೂ ಅತ್ತಿದ್ದರು. ಆದರೆ ಅವರ ಕಣ್ಣೀರಿಗೆ ಬೇರೆ ಥರದ ಆಯಾಮವಿತ್ತು. ಅವರ ಕಣ್ಣೀರನ್ನು ಆಗಿನ ಚಿತ್ರಗಳು ಹೇಳುವ ಮೌಲ್ಯಗಳು, ಗುಣಮಟ್ಟಗಳು ನಿರ್ಧರಿಸುತ್ತಿದ್ದವು. ಆದರೆ ಎಂಬತ್ತರ ದಶಕದಲ್ಲಿ ಶುರುವಾಗಿದ್ದು ಮೇಲೆ ಹೇಳಿದ ಕಥಾಹಂದರವುಳ್ಳ ಸಿನಿಮಾಗಳು. `ಹಾಲುಂಡ ತವರು’, `ತವರಿನ ತೊಟ್ಟಿಲು’, `ಹೆತ್ತ ಕರುಳು’ ಸೇರಿದಂತೆ ಹಲವು ಚಿತ್ರಗಳು ಬಂದವು. ಆ ಹೊತ್ತಿಗೆ ಶ್ರುತಿ ಅವರಿಗೆ ಬೇಡಿಕೆ ಹೆಚ್ಚಿತು. ಶ್ರುತಿ- ಎಸ್. ಮಹೇಂದರ್ ಕಾಂಬಿನೇಷನ್‌ನಲ್ಲಿ ಹಲವಾರು ತವರು, ತಾಯಿಯ ಸಿನಿಮಾಗಳು ಬಂದವು ಮತ್ತು ಹಿಟ್ ಆದವು. ಅದೇ ಹೊತ್ತಿಗೆ ಮಾಲಾಶ್ರೀ ಅವರೂ ಅತ್ತೆ ಮನೆಯಲ್ಲಿ ಅತ್ತು ಕರೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವ್ಯತ್ಯಾಸವೆಂದರೆ `ರಾಣಿ- ಮಹಾರಾಣಿ’, `ಮಾಲಾಶ್ರೀ ಮಾಮಾಶ್ರೀ’ ಮೊದಲಾದ ಮಾಲಾಶ್ರೀ ಸಿನಿಮಾಗಳು ಅಳುವುದು ಮತ್ತು ಆಮೇಲೆ ಬಂಡೇಳುವುದನ್ನು ಹೇಳಿದವು. ಶ್ರುತಿ ಕೂಡ ಹೆಣ್ಣಿಗೆ ಕಾಟ ಕೊಡುವವರಿಗೆ ಬುದ್ದಿ ಕಲಿಸುವ ಪಾತ್ರದಲ್ಲಿ ಆಗಾಗ ಕಾಣಿಸಿಕೊಂಡರು. ಅಲ್ಲಲ್ಲಿ ಸಿತಾರಾ, ಶಿಲ್ಪ ಮೊದಲಾದವರೂ ಅತ್ತು ಕರೆದು ಹೋದರು. `ತವರಿಗೆ ಬಾ ತಂಗಿ’ಯಿಂದ ಈ ಟ್ರೆಂಡ್ ಇನ್ನೊಮ್ಮೆ ಮಗ್ಗುಲು ಬದಲಿಸಿತು. ಶಿವಣ್ಣ ಕನ್ನಡದ ಹೆಣ್ಮಕ್ಕಳಿಗೆ ಅಕ್ಕರೆಯ `ಅಣ್ಣ’ನಾದರು. ರಾಧಿಕಾ `ತಂಗಿ’ಯಾದರು. ಶಿವರಾಜ್ ಕುಮಾರ್ ಹಿಂದೊಮ್ಮೆ `ಮುತ್ತಣ್ಣ’ನಾಗಿ ತಂಗಿಯನ್ನು ಪ್ರೀತಿಸಿದರೂ `ತವರಿಗೆ ಬಾ ತಂಗಿ’ ಹಿಟ್ ಆದ ನಂತರ ಅಫೀಷಿಯಲ್ ಆಗಿ ಜನಪ್ರಿಯ ಅಣ್ಣನಾದರು. ರಾಧಿಕಾ ಅವರಿಗೂ ತಂಗಿಯ ಇಮೇಜ್ ಬಂತು. ನಂತರ ಅವರಿಬ್ಬರು `ಅಣ್ಣತಂಗಿ’ಯಾದರು. ಆ ಚಿತ್ರವೂ ಭರ್ಜರಿ ಯಶಸ್ಸು ಕಂಡಿತು. ಈ ಮೂಲಕ ಅಣ್ಣ, ತಂಗಿ, ತವರಿನ ಸೆಂಟಿಮೆಂಟ್ ನಿರ್ದೇಶಕರಾಗಿ ಖ್ಯಾತರಾದವರು ಸಾಯಿ ಪ್ರಕಾಶ್. ಈ ಮೂವರ ಸಿನಿಮಾಕ್ಕೆ ಅಜೇ್ ಕುಮಾರ್ ಅವರು ಕತೆ ಕೊಟ್ಟರಂತೂ ಚಿತ್ರ ಹಿಟ್ಟೇ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಆಮೇಲೆ `ತವರಿನ ಸಿರಿ’ ತೆರೆಗೆ ಬಂತು, ಉತ್ತಮ ಗೀತೆಗಳಿದ್ದರೂ ಬಂದಂತೇ ವಾಪಾಸಾಯಿತು.ಇಂಥ ಸಿನಿಮಾಗಳಿಗೆ ಅಷ್ಟು ಕ್ರೇಜ್ ಇದ್ದರೂ ಕೆಲವು ಸಿನಿಮಾಗಳು ಯಾಕೆ ಸೋಲುತ್ತವೆ? `ನಾಯಕ ಇಲ್ಲದಿರುವುದು ಮತ್ತು ಅಕಾಲಿಕ ಚಿತ್ರ ಬಿಡುಗಡೆ’ ಎನ್ನುತ್ತಾರೆ ಹಂಚಿಕೆದಾರರೊಬ್ಬರು. ಅಚ್ಚರಿಯ ವಿಷಯವೆಂದರೆ ತಂಗಿ, ತವರಿನ ಸಿನಿಮಾ ಎಷ್ಟೇ ಚೆನ್ನಾಗಿರಲಿ, ಜತೆಗೆ ಹೀರೋ ಇರಲಿ ಎನ್ನುತ್ತದೆ ಒಂದು ವಾದ. ನಾಯಕನೂ ಇರುವ ಅಳುವ ಹೆಣ್ಣಿನ ಸಿನಿಮಾಗಳು ಮಾತ್ರ ನಿಲ್ಲುತ್ತವೆ, ಗೆಲ್ಲುತ್ತವೆ ಎಂಬುದು ಕುತೂಹಲಕರ. ಅಲ್ಲಿಗೆ ಹೀರೋಯಿಸಂ ಎಲ್ಲಾ ಕಡೆ ಮುಖ್ಯ ಎಂದ ಹಾಗಾಗುತ್ತದೆ.
ಕಳೆದ ಮೂವತ್ತು ವರ್ಷಗಳಿಂದಲೂ ಈ ಥರದ ಸೆಂಟಿಮೆಂಟ್ ಸಿನಿಮಾಗಳಿಗೆ ಬೇಡಿಕೆ ಇದ್ದೇ ಇದೆ ಎನ್ನುತ್ತದೆ ಹಂಚಿಕೆದಾರರ ಮೂಲ. ಜನ ಎಷ್ಟೇ ಎಂ. ಜಿ. ರಸ್ತೆಯಲ್ಲಿ ಸುತ್ತಲಿ, ತವರು, ಅಣ್ಣ, ತಂಗಿ ಸೆಂಟಿಮೆಂಟ್ ವಿಷಯ ಬಂದಾಗ ಎಲ್ಲರೂ ಭಾವುಕರೇ ಎಂಬುದು ಸೆಂಟಿಮೆಂಟ್ ಸಿನಿಮಾ ಒಂದರ ನಿರ್ಮಾಪಕರ ಅಭಿಮತ. ಆದರೆ ಹಳ್ಳಿಯ ಕಡೆ ಈ ಕ್ರೇಜ್ ಜಾಸ್ತಿ ಇದೆ ಎಂಬುದು ಒಂದು ಸತ್ಯ. ರಕ್ತದ ಸಿನಿಮಾಗಳು ಎಷ್ಟೇ ಬರಲಿ, ಕಣ್ಣೀರನ್ನು ಬೇಡುತ್ತಲೇ ಇರುತ್ತದೆ ಪ್ರೇಕ್ಷಕ ವರ್ಗ, ಅವರಿಗೆ ನಾಯಕಿ ಅತ್ತರದೇ ಸ್ವರ್ಗ!
4 Comments
March 14, 2007 at 3:34 pm
E write up odi kannali alune bandbitdtu saar…!
March 14, 2007 at 5:08 pm
Hmmnn! Whether the audience savour melodramatic scenes or its the general assumption amongst the director circles that the audience have banal taste is debatable!However, it is a common knowledge that the movies that makes one cry provides catharsis and relieves one of stress….thumba sarala mathe engaging shaili baraha nimmadu….high readability.
March 14, 2007 at 8:09 pm
Sakattagide!
Hudugirannu alsodu nodidre alune barutte – ivaru yake hinge madtare anta.
Alodakke anta duddu kottu que nalli nintu, black nalli ticket tagondu mooru gante solle kachchisikodu theatre nalli alta koorbeka? Nenaskondre bikki bikki albeku ansutte. Vikas yake namma cinema industriesge kanniroresi spashta dristi ( visions) sigabaradu.
Sakattagi bardidiya..
March 16, 2007 at 5:36 am
Good one yet again sir…. nimma baraha bahala khushi kodutte!!