ಇದು ವಿಕಾಸ ನೇಗಿಲೋಣಿ ಬರಹ. ಇವರು `ಪಿಚ್ಚರ್’ ತಂಡಕ್ಕೆ ಹೊಸ ಸೇರ್ಪಡೆ. ಈ ಬರಹವನ್ನು ಲಲಿತ ಪ್ರಬಂಧ, ಶಬ್ದಚಿತ್ರ, ಲಹರಿ ಹೀಗೆಲ್ಲ ಕರೆಯಬಹುದಾದರೂ ಇದು ನುಡಿಚಿತ್ರ ಎಂದು ಸ್ವತಃ ವಿಕಾಸ್ ಅನುಮಾನಪಟ್ಟಿದ್ದಾರೆ. ಕತೆಗಾರ, ಕವಿ ಇತ್ಯಾದಿ ಆರೋಪಗಳನ್ನೂ ಹೊಂದಿರುವ ಇವರು ಉದಯವಾಣಿಯಲ್ಲಿ ಪತ್ರಕರ್ತರು. ಇತ್ತೀಚೆಗಷ್ಟೇ ಮದುವೆಯಾಗಿರುವುದರಿಂದ `ಪುತ್ರಕರ್ತ’ರಾಗುವ ಅರ್ಹತೆಯೂ ಅವರಿಗೆ ಬಂದಿದೆ. ಅಂದಹಾಗೆ ಇದು ಮದುವೆಯಾಗುವ ಮೊದಲೇ ಬರೆದ ಬರಹ. ಹಾಗಾಗಿ ನಿರಾಳವಾಗಿ ಓದಬಹುದು.ನೆನಪಿರಲಿ: ಕಾರ್ಲ್ ಮಾರ್ಕ್ಸ್ ಅದ್ಭುತವಾದ ಪ್ರೇಮ ಕವಿತೆಗಳನ್ನು ಬರೆಯುತ್ತಿದ್ದ. ಒಂದು ದಿನ ಆತ ಪ್ರೇಮ ಕವಿತೆಗಳನ್ನು ಬರೆಯುವುದು ನಿಲ್ಲಿಸಿದ. ಏಕೆಂದರೆ ಆತ ಅಷ್ಟರಲ್ಲಿ ಮದುವೆಯಾಗಿದ್ದ. ಅನಂತರ ಮಾರ್ಕ್ಸ್ ಬರೆದಿದ್ದು: ದಾಸ್ ಕೆಪಿಟಲ್.
ಬೀದಿ ಎಲ್ಲಾ ದೇಶಗಳ ಒಂದು ಸಾಂಸ್ಕೃತಿಕ ಭಾಗ. ಮುಂಬಯಿಯ ಬೀದಿಗಳಲ್ಲಿ ಹಗಲೆಂದರೆ ಜನ ರೈಲಿಗಾಗಿ ಓಡುವ ದೃಶ್ಯ. ರಾತ್ರಿ ವೇಶ್ಯಾವಾಟಿಕೆಯ, ದಿಕ್ಕೆಟ್ಟ ಅನಾಥ ಬಾಲಕರ ನಿದ್ರೆಯ, ಕಳ್ಳಕಾಕರ ಗೂಢ ಓಡಾಟದ, ಗಣೇಶೋತ್ಸವ ಮೆರವಣಿಗೆ, ಕೃಷ್ಣ ಜನ್ಮಾಷ್ಟಮಿಯ ಸಾಲು ಸಾಲು ದೃಶ್ಯ. ಕವಿಗಳು ಈ ರಾತ್ರಿ ಹಾಗೂ ಹಗಲುಗಳನ್ನು ವರ್ಣಿಸುವಾಗ ನಿರ್ಜನ ಬೀದಿಗಳು, ಜನಸಂದಣಿಯಿರುವ ಬೀದಿ ಎಂದೆಲ್ಲಾ ಹೇಳಿದ್ದನ್ನು ನಾವು ಓದಿದ್ದೇವೆ. ಹಾಗಾಗಿ ಬೀದಿ ನಮ್ಮೆಲ್ಲರ ಪಾಲಿಗೆ ಒಂದು ನಿಗೂಢ ನಿಲ್ದಾಣ.
ಈ ನಿಟ್ಟಿನಲ್ಲಿ ಕಲಾವಿದರ ಚಿತ್ರಗಳನ್ನು ನೋಡಿದರೆ ಅದರಲ್ಲೂ ಒಂದು ಅನಾಥ ಬೀದಿಗಳಿವೆ. ಜೋರಾದ ಮಳೆಯೊಂದು ಸುರಿದು ನಿಂತ ಮೇಲೆ ಆ ಬೀದಿ ಒಂದು ದೃಷ್ಟಿಯಿಂದ ಸುಂದರ, ಮತ್ತೊಂದು ದೃಷ್ಟಿಯಿಂದ ಅಸ್ತವ್ಯಸ್ತ. ತೈಲವರ್ಣದಲ್ಲಿನ ಬೀದಿಗಳೇ ಬೇರೆ ಥರ ಕಾಣುತ್ತವೆ, ರೇಖಾಚಿತ್ರಗಳಿಗೆ ಸೆರೆಸಿಕ್ಕ ಬೀದಿಗಳೇ ಬೇರೆ ರೀತಿ ಕಾಣುತ್ತವೆ. ಅಂದರೆ ಎಷ್ಟೊಂದು ಬಣ್ಣಗಳು ಈ ಬೀದಿಗಳಿಗೆ, ಎಷ್ಟೊಂದು ಮಗ್ಗುಲುಗಳು ಆ ಬೀದಿಗಳಿಗೆ? ಅಥವಾ ಆ ಬೀದಿಗಳೆಲ್ಲಾ ಏಕ ಕಾಲದಲ್ಲಿ ಒಂದೇ ಮತ್ತು ಬೇರೆ ಬೇರೆ!
ಬೀದಿಗಳನ್ನು ಹಲವು ವಿಧಗಳಾಗಿ ನೋಡಬಹುದು. ಹಳ್ಳಿಯ ಬೀದಿ ಒಂದು ರೀತಿ ನಿರ್ವಿಣ್ಣ. ಅಲ್ಲಲ್ಲಿ ಬಿದ್ದ ಸೆಗಣಿ, ಬಾಳೆ ಹಣ್ಣಿನ ಸಿಪ್ಪೆ, ಕಸ, ಉಗುಳು, ತಿಪ್ಪೆ. ಆಗಾಗ ಬಂದು ಮರೆಯಾಗುವ ಮನುಷ್ಯಾಕೃತಿಗಳು. ಸದಾ ಬಿದ್ದುಕೊಂಡಿರುವ ಹಸು, ಕರುಗಳು. ಬೊಗಳುವ ನಾಯಿ, ಕಚ್ಚುವ ನಾಯಿ. ಆ ಬೀದಿಗಳೊಂಥರ ಸೋಮಾರಿಗಳು, ಹಾಗಾಗಿ ರಾತ್ರಿಯಾಗುವುದೂ ಬೇಗ. ಏಳು ಎಂಟಾದ ಕೂಡಲೇ ಲೈಟ್ ಆಫ್, ಗೋ ಟು ಬೆಡ್. ಅವಕ್ಕೆ ಬೆಳಗಾಗುವುದೂ ತಡ!
ಪೇಟೆ ಬೀದಿ ಹಾಗಲ್ಲ. ಅವು ಕಣ್ಣೇ ಮುಚ್ಚುವುದಿಲ್ಲ. ದೀಪ ಹಾಕಿಕೊಂಡು ರಾತ್ರಿಯಿಡೀ ನಿದ್ದೆ ತೂಗುತ್ತವೆ, ಕುದುರೆಯ ಹಾಗೆ. ನಾಲ್ಕಾಗುತ್ತಲೇ ಟೀಗೆ, ಕಾಫಿಗೆ ಬರುವ ಬಸ್ ಕಂಡಕ್ಟರ್, ಡ್ರೈವರ್‌ಗಳ ಜತೆ ಇವಕ್ಕೆ ದಿನಾ ಪ್ರೀತಿ. ಆದರೂ ಬೆಂಗಳೂರಿನಂಥ ಅಸಂಖ್ಯಾತ ಅನಾಚಾರಗಳಿಗೆ, ಅಗಣಿತ ಅಬ್ಬೇಪಾರಿಗಳಿಗೆ ಬೀದಿಯ ಆಶ್ರಯವಿದೆ. ಎಚ್ಚರ, ಒಂದಿಲ್ಲಾ ಒಂದು ದಿನ ಪೊಲೀಸರು ಬೀದಿಯನ್ನೂ ಕೋಳ ಹಾಕಿ ಕರೆದೊಯ್ಯಲಿದ್ದಾರೆ. ಕಪ್ಪು ಕೋಟು, ಬಿಳಿ ಕಾಲರಿನ ಮನುಷ್ಯರು ಅದಕ್ಕೆ ನೂರಾರು ಪ್ರಶ್ನೆ ಕೇಳಿ ಕಟಕಟೆಯ ಮೇಲೆ ತಬಿಜಿಲ್ ಮಾಡಲಿದ್ದಾರೆ! ಹಾಗಾಗಿ ಹಳ್ಳಿ ಬೀದಿಗಳನ್ನು ಉದ್ದೇಶಿಸಿ ಪೇಟೆ ಬೀದಿ ಹೇಳುತ್ತದೆ ಒಂದು ರಾತ್ರಿ- `ಲೇ ನಿನ್ನ ಸೋಮಾರಿ ಬದುಕು ನನಗೂ ಕೊಡು, ನಾನು ಒಂದು ರಾತ್ರಿ ಸದ್ದಿಲ್ಲದೇ ನಿರಾತಂಕ ರಾತ್ರಿಗಳನ್ನು ಕಾಣುವೆ’. ಆದರೆ ಹಳ್ಳಿಯ ಬಸ್ಸು ಪೇಟೆಗೆ, ಪೇಟೆಯ ಬಸ್ಸು ಹಳ್ಳಿಗೆ ದಿನಾ ಬಂದುಹೋಗಿದ್ದೇ ಬಂತು, ಪೇಟೆ ಬೀದಿಯ ಆಸೆ ನೆರವೇರುವುದೇ ಇಲ್ಲ.
***
ಇಂಥದ್ದೊಂದು ಬೀದಿಯಲ್ಲಿ ಎಸ್. ದಿವಾಕರ್ ಅವರ `ಕ್ರೌರ್ಯ’ ಕತೆ ಆರಂಭವಾಯಿತು.
ಅಲಮೇಲು ಎಂಬುದು ಅವಳ ಹೆಸರು. ಅತ್ಯಂತ ಕುರೂಪಿ ಎಂಬುದು ಅವಳ ಬಗೆಗಿನ ಒಂದು ವಾಕ್ಯದ ವಿವರಣೆ. ಅದಕ್ಕಾಗಿ ಮದುವೆ ಇಲ್ಲ, ಸಂಪ್ರದಾಯಸ್ಥ ಅಯ್ಯಂಗಾರಿ ಅಪ್ಪ ಅಮ್ಮಂದಿರ ಪ್ರೀತಿ ಇಲ್ಲ ಎಂಬುದು ಆ ಕತೆಯ ಪೂರಕ ವಿವರಣೆ. ಅಂಥವಳು ಒಂದು ದಿನ ರಸ್ತೆಯಲ್ಲಿ ನಡೆದು ಹೋಗುವಾಗ ಯಾರೋ ಆಕೆಯ ಬೆನ್ನಿಗೆ ಚೂರಿ ಹಾಕಿದರು. ಅದೂ ಬೇಕೆಂದೂ ಅಲ್ಲ. ಯಾರಿಗೋ ತಗುಲಬೇಕಾದ ಚಾಕು ಅವಳಿಗೆ ತಗುಲಿತು ಎಂಬ ಆಘಾತಕಾರಿ ವಿಷಯದೊಂದಿಗೆ ಈ ಕತೆ ಬಿಚ್ಚಿಕೊಳ್ಳುತ್ತದೆ. ಅದು ಒಂದು ಬೀದಿಯ ಚಿತ್ರಣ. ಬೀದಿಗೆ ಮಾನವತೆ, ಅಮಾನವತೆ, ಸಂಬಂಧದ ಸೋಂಕಿಲ್ಲದ ಕಾರಣ ಅವಳ ಸಾವನ್ನೂ ಅಷ್ಟೇ ನಿರ್ಭಾವುಕವಾಗಿ ಆ ಬೀದಿ ಪರಿಗ್ರಹಿಸಿತು. ಆಗ ಒಬ್ಬ ಕೆಲಸದಾಳು ಅವಳನ್ನು ತನ್ನ ಬೆತ್ತಲು ಎದೆಗೊತ್ತಿಕೊಂಡು ಅವಳ ಹಾರಿ ಹೋಗುವ ಪ್ರಾಣಪಕ್ಷಿಯನ್ನು ನೇವರಿಸುತ್ತಾನೆ. ಆ ಕ್ಷಣದಲ್ಲಿ ಬೀದಿಗೆ ಎರಡು ಅಪರಿಚಿತ ಆತ್ಮಗಳ ನಡುವೆ ಒಂದು ಸಂಬಂಧವನ್ನು ಬೆಸೆದ ಪುಣ್ಯ ಬರುತ್ತದೆ. ತನ್ನ ಜೀವಮಾನದಲ್ಲಿ ಆಕೆ ಕಂಡಿರದ ಪುರುಷರ ದೇಹ ಸ್ಪರ್ಶವನ್ನು ಆ ಬೀದಿ, ಅಂಥ ಅನಿರೀಕ್ಷಿತ ಹೊತ್ತಲ್ಲಿ ಅನಾಯಾಸವಾಗಿ ತಂದುಕೊಡುತ್ತದೆ. ಆಕೆಯ ಸಾವು ಮತ್ತು ಬದುಕಿನ ಸಾರ್ಥಕತೆ ಮತ್ತು ಅವೆರಡರ ಮುಖಾಮುಖಿಯನ್ನು ಆ ಹೊತ್ತಲ್ಲಿ ಬೀದಿ ತಂದುಕೊಡುತ್ತದೆ.
***
ಜಯಂತ ಕಾಯ್ಕಿಣಿ ಅವರ ಬೀದಿ ಇನ್ನೊಂದು ಥರ. ಅದು `ಹಾಲಿನ ಮೀಸೆ’ಯಲ್ಲಿನ ಬೀದಿ. ಪುಂಡು ತಾನು ಕೆಲಸಕ್ಕಿರುವ ಮನೆಯ ಪುಟ್ಟಿಯನ್ನು ದಿನಾ ಶಾಲೆಗೆ ಕರೆದೊಯ್ಯುತ್ತಿರುತ್ತಾನೆ. ಅದು ಮುಂಬಯಿಯ ಟಿಪಿಕಲ್ ಬೀದಿ. ಅಲ್ಲೊಂದಷ್ಟು ಮಂದಿ ಕರೆಂಟು ತಂತಿ ಮೇಲೆ ಬೀಳುವ ಮರದ ರೆಂಬೆ ಕಡಿಯುತ್ತಿದ್ದಾರೆ. ಪಿಂಕಿ ಕೇಳುತ್ತಾಳೆ ಅಲ್ಲಿ ಕರೆಂಟು ಸರಿ ಮಾಡುವ ಕೆಲಸಗಾರರು.
***
ಬೀದಿ ಮೈಯನ್ನು ಹೊಲಸು ಮಾಡಿಕೊಳ್ಳುತ್ತದೆ ಮಕ್ಕಳ ಥರ. ಅದಕ್ಕಾಗಿ ಪೇಟೆಯಲ್ಲಿ ಮಹಾನಗರ ಪಾಲಿಕೆ ಅಕ್ಕಂದಿರು ದಿನಾ ಮೈತೊಳೆದು ಹೋಗುತ್ತಾರೆ. ಬೈಯುತ್ತಾರೆ, ಅದರ ಹೊಲಸುತನಕ್ಕೆ. ಆದರೂ ಅದೇ ಪ್ರೀತಿ, ಬೆಳಿಗ್ಗೆಯಾಗುತ್ತಲೇ. ಆದರೆ ದೇವಸ್ಥಾನದ ಬೀದಿಗೆ, ರಥ ಬೀದಿಗೆ ಇರುವ ಷೋಡಶೋಪಚಾರವನ್ನು ಏನು ಕೇಳುತ್ತೀರಿ? `ದೇವೋ ಜೀವಾಲಯಃ ಪ್ರೋಕ್ತೋ, ದೇವೋ ಜೀವ ಸನಾತನಃ’. ಅವುಗಳ ಮೈಗೆ ಅಂಗಡಿಗಳಲ್ಲಿ ಪೇರಿಸಿಟ್ಟ ಕುಂಕುಮ, ಚಂದನ, ಅರಿಶಿಣ, ರಂಗೋಲಿ, ಹೂ, ಹಣ್ಣು, ಗರಿಕೆ, ತೋರಣ, ಸುಗಂಧಗಳ ನಿರಂತರ ಅಭಿಷೇಕ. ಆ ಬೀದಿ ಸದಾ ಈಗ ಸ್ನಾನ ಮಾಡಿ ಬಂದಿತೋ ಎನ್ನಬೇಕು, ಸ್ನಾನ ಮಾಡಿ ಬಂದ ತರಳೆಯ ಹಾಗೆ ಥಳಥಳ, ಘಮಘಮ. ಆದರೆ ಡುಂಡಿರಾಜರ ಪ್ರಕಾರ ಅದರ ಕಷ್ಟ ಅದಕ್ಕೇ ಗೊತ್ತು. `ರಥಬೀದಿಯಲ್ಲೊಂದು ರೂಮು ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ’. ರಥ ಬೀದಿಯಲ್ಲಿ ರೂಮು ಮಾಡಿದವರು ವರ್ಷಾನುಗಟ್ಟಲೆ ಅನುಭವಿಸುತ್ತಲೇ ಇರುವ ಸಮಸ್ಯೆಯನ್ನು ಅವರ ಕವನ ಹೇಳುತ್ತದೆ.
ಹಾಗಿದ್ದೂ ಆಗಲೇ ಹೇಳಿದಂತೆ ಬೀದಿಗೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಬೀದಿಗೆ ಗೊತ್ತಿಲ್ಲದೇ ನಾವೇನೂ ಮಾಡಲಾರೆವು. ಎಷ್ಟು ಹಾರಾಡಿದ ಮನೆ ಮುರುಕ ಮುಂದೊಂದು ದಿನ ಬೀದಿಗೆ ಬೀಳುತ್ತಾನೆ. ಸಾಲ ಮಾಡಿದರೆ ಬೀದಿಗೆ ಬಾ, ಆನಾಚಾರ ಮಾಡಿದರೆ ಬೀದಿಗೆ ಒಂದಿಲ್ಲಾ ಒಂದು ದಿನ ಬಂದು ಬೆತ್ತಲಾಗುತ್ತಿ. ಸಂಸಾರದ ಗುಟ್ಟು ಒಮ್ಮೆಯಾದರೂ ಬೀದಿಗೆ ಬರಲೇಬೇಕು. ಮದುವೆಗೂ ಮೆರವಣಿಗೆ, ಅವಮಾನಕ್ಕೂ ಬೀದಿಯಲ್ಲಿ ಕತ್ತೆ ಮೇಲೆ ಮೆರವಣಿಗೆ, ಸತ್ತ ಮೇಲೆ ಸಮಸ್ತ ನಾಗರಿಕರೆದುರು ಊರ ಬೀದಿ ತುಂಬ ಶವಯಾತ್ರೆ. ಆಭರಣದಂಗಡಿ ಮುಂದೆ, ಗಡಿಯಾರದಂಗಡಿ ಮುಂದೆ, ತೆರೆದ ಬಾಗಿಲ ಮುಂದೆ ಎದೆ ತೆರೆದ ಹದ ಹುಣ್ಣಿಮೆ ಈ ಬೀದಿ ನೆಲ. ನಿರ್ವಾಹವೇ ಇಲ್ಲ ಒಂದಿಲ್ಲಾ ಒಂದು ದಿನ ಆ ಬೀದಿಯನ್ನು ನಾವೆಲ್ಲಾ ಎದುರಿಸಲೇಬೇಕು.
ಬೀದಿಗೆ ಸಾಮಾಜಿಕ ಮಹತ್ವ ಬರುವುದು ಹೀಗೇ. ಪ್ರತಿಭಟನೆ ಬೀದಿಗಿಳಿದರೇ ಅದಕ್ಕೊಂದು ಕಾವು. ರಸ್ತೆ ರೋಖೋ ಎಂದರೆ ಮತ್ತೆ ಬೀದಿಗೆ ಬರುವುದೇ. ಉಪವಾಸಕ್ಕೆ ಕೂರಲು, ಮೆರವಣಿಗೆ ಹೊರಡಲು ಬೀದಿಯೇ ವೇದಿಕೆ. ಅದು ವೇದಿಕೆ ಎಂದು ಪ್ರಪಂಚಕ್ಕೆ ಗೊತ್ತಾಗಿದ್ದರಿಂದಲೇ ಬೀದಿ ನಾಟಕ ಪ್ರಚಲಿತಕ್ಕೆ ಬಂದಿದ್ದು. ಬೀದಿ ಕಾಳಗವೂ ಹಾಗೇ ಹೆಸರಾಗಿದ್ದು. ಗಣಪತಿ ಹಬ್ಬದ ಆಚರಣೆಯನ್ನು ತಿಲಕರು ಬೀದಿಗೆ ತಂದದ್ದು! ಇಲ್ಲೆಲ್ಲಾ ಒಂದು ಸಂಘಟನೆಯ ರೂಪವಿದೆ, ತತ್‌ಕ್ಷಣದ ಪ್ರತಿಕ್ರಿಯೆಗೆ ಅವಕಾಶವಿದೆ. ಹಾಗಾದರೆ ಯಾರು ಹೇಳಿದ್ದು ಬೀದಿಗಿಳಿಯಬಾರದೆಂದು, ಬೀದಿ ಜಗಳವಾಯಿತೆಂದು, ಬೀದಿ ರೋದನವಾಯಿತೆಂದು? ಬೀದಿಗೆಂಥ ಶಕ್ತಿ, ಎಂಥ ಸಾಮರ್ಥ್ಯ?
ಬ್ರಿಟನ್‌ನ ಖ್ಯಾತ ಛಾಯಾಗ್ರಾಹಕ ಕ್ರಿಸ್ಟೋಫರ್ ವೂರ್ಸ್ಟ್ ಬೀದಿಗಳ ಮೇಲೆ ಒಂದು ಫೋಟೋ ಸಂಗ್ರಹವನ್ನೇ ತಂದಿದ್ದಾನೆ. ವೂರ್ಸ್ಟ್ 15 ವಿಭಿನ್ನ ಬೀದಿಗಳ 40 ಫೋಟೋಗಳನ್ನು ತೆಗೆದಿದ್ದಾರೆ. ಅದೂ ವಿಶ್ವದ ಎಲ್ಲಾ ಬೀದಿಗಳನ್ನೂ ಸುತ್ತಿ ಸುಳಿದು ತೆಗೆಯಲಾದ ಚಿತ್ರಗಳು. ನೋಡಿ, ಬೀದಿ ಕೂಡ ನಮ್ಮ ಆಸಕ್ತಿ ಆಗಬಹುದು, ಅದರಿಂದಲೂ ಅದ್ಭುತವಾದ ಲೋಕವನ್ನು ಹೆಕ್ಕಿ ತೆಗೆಯಬಹುದು.
ಕ್ರಿಸ್ಟೋಫರ್ ಬ್ರಿಟನ್‌ನವರಾದರೂ ಅವರು ಓಡಾಡಿ ಕಂಡಿದ್ದು ವಿಶ್ವದ ನಾನಾ ರಾಷ್ಟ್ರಗಳನ್ನು. ಎಲ್ಲಿ ಹೋದರೂ ಅವರಿಗೆ ಕಾಣುವುದು ಬೀದಿಗಳು, ಅದರ ನಾನಾ ಸಾಧ್ಯತೆಗಳು, ಅವುಗಳ ವೈವಿಧ್ಯಮಯ ಆ್ಯಂಗಲ್‌ಗಳು. ಆ ಕೂಡಲೇ ಅವರ ಕ್ಯಾಮರಾ ಕಣ್ಣು ಅಸಂಖ್ಯ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡುಬಿಟ್ಟಿರುತ್ತವೆ. ಈವರೆಗೆ ವೂರ್ಸ್ಟ್ ಫೋಟೋಗಳು ಅಮೇರಿಕಾ, ಬ್ರಿಟನ್, ದಕ್ಷಿಣ ಆಫ್ರಿಕಾ ಮೊದಲಾದೆಡೆ ಪ್ರದರ್ಶನ ಕಂಡಿವೆ. ಭಾರತದಲ್ಲಿ ಮೊದಲ ಬಾರಿ, ಅದೂ ಬೆಂಗಳೂರಿನಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರದರ್ಶನ ಕಂಡಿತು. ಈ ಪ್ರದರ್ಶನಕ್ಕೆ ಕ್ರಿಸ್ಟೋಫರ್ ಕೊಟ್ಟ ಹೆಸರು `ದ್ಯಾಟ್ ಅದರ್ ರಿಯಾಲಿಟಿ’(ಆ ಮತ್ತೊಂದು ವಾಸ್ತವ).ಙ
One Comment
vikas, nimma nudichitra super. hige baritha iri.
Post a Comment