ಕಿವಿಗೊಟ್ಟು ಕೇಳಿದರೆ ಬರಲಿರುವ ದಿನಗಳಲ್ಲಿ ವೀಕ್ಷಕ ವಿವರಣೆ ಹೀಗೆಲ್ಲ ಕೇಳಿಸುವ ಸಾಧ್ಯತೆಗಳಿವೆ: ಓಹ್, ಸೆಹ್ವಾಗ್ ಔಟಾ? ಹೇಳಿರಲಿಲ್ವಾ? ವೇಸ್ಟೂ ಅಂತ. ಅವನೆಲ್ಲಿ ಆಡ್ತಾನೆ. ಸಿಕ್ಸ್ ಹೊಡೆದನಾ? ಫಾಮ್ ಅನ್ನೋದೆಲ್ಲಾ ಮಣ್ಣಾಂಗಟ್ಟಿ. ತೆಂಡೂಲ್ಕರ್ ಕತೆ ಮುಗೀತು. ಸೆಂಚುರಿ ಹೊಡೆದ್ನಾ? ಅವ್ನು ಬಿಡಿ. ದ್ರಾವಿಡ್ ಯಾಕ್ ಹೀಗೆ ಬಾಲ್ ತಿಂತಿದಾನೋ ಅರ್ಥ ಆಗ್ತಾ ಇಲ್ಲ. ಥತ್, ಇವರ್ ಕತೆ ಇಷ್ಟೇ. ಡೈವ್ ಮಾಡಿದ್ದಿದ್ರೆ ಈಸಿ ಸಿಕ್ಕಿರೋದು. ಟಾಸ್ ಗೆದ್ದು ಯಾರಾದ್ರೂ ಅವ್ರಿಗೆ ಬ್ಯಾಟಿಂಗ್ ಕೊಡ್ತಾರ? ಟಾಸ್ ಗೆದ್‌ಬಿಟ್ರೆ ಬ್ಯಾಟಿಂಗ್ ಮಾಡ್‌ಬಿಡೋದಲ್ಲ. ಇನೊವೇಷನ್ ಇರ್ಬೇಕು. ಯುವರಾಜ್ ಸಿಂಗ್‌ಗೆ ಯಾಕೆ ಬಾಲಿಂಗು ಕೊಡ್ತಾನೋ? ಸ್ಟ್ರೈಕ್ ರೊಟೇಟ್ ಮಾಡ್ಬೇಕು ಅಂತ ಗೊತ್ತಾಗಲ್ವಾ? ಫೀಲ್ಡರಿಗೆ ಬಾಲು ಕೊಡ್ತಾನಪ್ಪ! ಆಡ್ ಶೂಟ್ ಮಾಡ್ತಾ ಇರೋಕೆ ಲಾಯಕ್ಕು. ಪವರ್‌ಪ್ಲೇ ಆಮೇಲೆ ತಗೊಳ್ಳೋದು ಬಿಟ್ಟು, ಥತ್, ಇವರ ಕತೆ ಇಷ್ಟೇ!
ಶತಕೋಟಿ ಕ್ರಿಕೆಟ್ ವೀಕ್ಷಕ ವಿವರಣೆಗಾರರು ಇರುವ ದೇಶ ಇದು!ಕ್ರಿಕೆಟ್ ಪಂದ್ಯ ನಡೆಯುತ್ತಿರಲಿ, ಬಿಡಲಿ. ಇವರ ವೀಕ್ಷಕ ವಿವರಣೆ ಟೀವಿ, ರೇಡಿಯೋಗಳಿಲ್ಲದೇ ಮುಂದುವರೆಯುತ್ತದೆ. ಈ ಕಾಮೆಂಟರಿಗೆ ಒಮ್ಮೆ ಕಿವಿಗೊಡಿ. ದ್ರಾವಿಡ್ ನಂಬರ್ ಮೂರರಲ್ಲಿ ಆಡಲು ಬರಬೇಕು ಎಂದು ಹೇಳುತ್ತಲೇ ನಂಬರ್ ಆರರಲ್ಲಿ ಆಡಿದರೆ ಒಳ್ಳೆಯದು ಎಂದು ಈ ವೀಕ್ಷಕ ವಿವರಣೆಗಾರರು ಪ್ರತಿಪಾದಿಸುತ್ತಿದ್ದಾರೆ. ತೆಂಡೂಲ್ಕರ್‌ಗೆ ವಯಸ್ಸಾಯಿತು ಎನ್ನುತ್ತಲೇ ಮಧ್ಯಮ ಕ್ರಮಾಂಕ ಬಲಗೊಳ್ಳಲು ತೆಂಡೂಲ್ಕರ್ ಬೇಕು ಎಂದು ಹೇಳುತ್ತಿದ್ದಾರೆ. ಸೆಹ್ವಾಗ್ ಫಾರ್ಮ್ ಕುರಿತು ಕಳವಳ ವ್ಯಕ್ತಪಡಿಸುತ್ತಲೇ ಆತ ವಿಶ್ವಕಪ್ ತಂಡದಲ್ಲಿರಬೇಕು ಎಂದು ಅಭಿಪ್ರಾಯಪಡುತ್ತಿದ್ದಾರೆ.ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳುತ್ತಿರುವವರೇ ಭಾರತ ವಿಶ್ವಕಪ್ ಗೆಲ್ಲುವುದಿಲ್ಲ ಎಂದು ವಾದಿಸುವ ವಿಸ್ಮಯವನ್ನು ಇಲ್ಲಿ ನೋಡಬಹುದು. ಇದರ ಅರ್ಥ ಇಷ್ಟೇ. ಭಾರತದ ಕ್ರಿಕೆಟ್ ಪ್ರೇಮಿಯಲ್ಲೊಬ್ಬ ಆಶಾವಾದಿಯಿದ್ದಾನೆ. ಆ ಆಶಾವಾದಿಯಲ್ಲೊಬ್ಬ ನಿರಾಶಾವಾದಿ ಇದ್ದಾನೆ. ಪುನಃ ಆ ನಿರಾಶಾವಾದಿಯಲ್ಲೊಬ್ಬ ಆಶಾವಾದಿ. ಇದು ಕೊನೆಯಾಗುವುದೇ ಇಲ್ಲ. ಬಾಲು ಬಾಲಿಗೆ ಆಶಾವಾದ ನಿರಾಶಾವಾದವಾಗಿ ಬದಲಾಗುತ್ತದೆ. ಪಂದ್ಯದಿಂದ ಪಂದ್ಯಕ್ಕೆ ನಿರಾಶಾವಾದ ಆಶಾವಾದವಾಗಿ ಎದ್ದು ನಿಲ್ಲುತ್ತದೆ. ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ ಶತಕೋಟಿ ಕಾಮೆಂಟರಿ ಹೇಳುತ್ತದೆ: ಹೇಳಿರಲಿಲ್ವಾ, ಭಾರತ ಕಪ್ ಗೆದ್ದುಬಿಟ್ಟಿತು. ಭಾರತ ವಿಶ್ವಕಪ್ ಸೋತರೆ ಶತಕೋಟಿ ಕಾಮೆಂಟರಿ ಹೇಳುತ್ತದೆ: ಹೇಳಿರಲಿಲ್ವಾ, ಭಾರತ ವಿಶ್ವಕಪ್ ಗೆಲ್ಲಲಿಲ್ಲ!ಇದೊಂದು ಕ್ರಿಕೆಟ್ ಹುಚ್ಚರ ದೇಶ ಎನ್ನುವುದು ಕ್ಲಿಷೆ. ಈ ಹೇಳಿಕೆ ಸರಿಯೇ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಇದು ಕ್ರಿಕೆಟ್ ಹುಚ್ಚರ ದೇಶ ಹೌದು. ಏಕೆಂದರೆ ಭಾರತ-ಪಾಕಿಸ್ತಾನ ಕ್ವಾರ್ಟರ್ ಫೈನಲ್ ನಡೆಯುತ್ತಿದ್ದರೆ ದೆಹಲಿಯ ರಸ್ತೆಗಳು ಖಾಲಿಯಿರುತ್ತವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಇಲ್ಲ. ಚೆನ್ನೈ ರಜೆ ಘೋಷಿಸುತ್ತದೆ. ಕ್ರಿಕೆಟ್ ಪ್ರಸಾರ ಮಾಡುತ್ತಿರುವ ಟೀವಿ ಚಾನೆಲ್‌ಗೆ ಟಿಆರ್‌ಪಿ ಕೊರತೆಯಿಲ್ಲ. ಇದು ಕ್ರಿಕೆಟ್ ಹುಚ್ಚರ ದೇಶ ಅಲ್ಲ. ಏಕೆಂದರೆ ಬರೋಡಾ ಮತ್ತು ಹೈದ್ರಾಬಾದ್ ನಡುವೆ ಒಂದು ರಣಜಿ ಪಂದ್ಯ ನಡೆಯುತ್ತಿರುವುದು ಜನರಿಗೆ ಗೊತ್ತಿರುವುದೇ ಇಲ್ಲ. ಪಂದ್ಯ ನೋಡುವುದಕ್ಕೆ ಜನರಿಲ್ಲ. ಸ್ಟೇಡಿಯಂ ಖಾಲಿ ಖಾಲಿ. ಇಂಥ ಭಾರತ ಇನ್ನೊಂದು ವಿಶ್ವಕಪ್ ನೋಡುವುದಕ್ಕೆ ಟೀವಿ ರಿಪೇರಿ ಮಾಡಿಸಿಕೊಳ್ಳುತ್ತಿದೆ. ಹೊಸ ಟೀವಿ ಕೊಳ್ಳುತ್ತಿದೆ. ಟೀವಿ ಇಲ್ಲದ ಭಾರತ ಕಪ್ಪು ಬಿಳುಪಿನ ಟೀವಿ ಕೊಳ್ಳುತ್ತಿದೆ. ಕಪ್ಪುಬಿಳಿಪಿನ ಭಾರತ ಬಣ್ಣ ಬಣ್ಣಕ್ಕೆ ಬಡ್ತಿ ಪಡೆಯುತ್ತಿದೆ. ಕಲರ್ ಟೀವಿ ಭಾರತ ಸಪಾಟಾದ ಟೀವಿ ಕೊಂಡು ಠೀವಿ ತೋರಿಸುತ್ತಿದೆ. ಸಪಾಟಾದ ಟೀವಿಯಿರುವ ಭಾರತ ಪ್ಲಾಸ್ಮಾಕ್ಕೆ ವಲಸೆ ಹೊರಟಿದೆ!
1983ರ ವಿಶ್ವಕಪ್ ಹೊತ್ತಿಗೆ ಭಾರತಕ್ಕೆ ಟೀವಿ ಆಗಷ್ಟೇ ಕಾಲಿಟ್ಟಿತ್ತು. ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಜನ ರೇಡಿಯೋ ಮೂಲಕ ನೋಡಿದ್ದರು! ಕಪಿಲ್‌ದೇವ್ ಹಿಡಿದ ಕ್ಯಾಚು, ಅಮರನಾಥ್ ಉದುರಿಸಿದ ವಿಕೆಟ್, ಶ್ರೀಕಾಂತ್ ಹೊಡೆದ ಹೊಡೆತಗಳನ್ನೆಲ್ಲ ಜನರಿಗೆ ತಲುಪಿಸಿದ್ದು ರೇಡಿಯೋ. ಈ ವಿಶ್ವಕಪ್ ಗೆದ್ದಿದ್ದನ್ನು ಕೆಲವರು ಪತ್ರಿಕೆಗಳಲ್ಲಿ ಓದಿಯೇ ತಿಳಿದುಕೊಂಡಿದ್ದರು.
ಇಂದು ಭಾರತ ಬದಲಾಗಿದೆ. ಇಲ್ಲಿ ಟೀವಿ ಇದೆ. ಇಂಟರ್ನೆಟ್ ಇದೆ. ಇಪ್ಪತ್ನಾಲ್ಕು ಗಂಟೆ ನ್ಯೂಸ್ ಚಾನೆಲ್‌ಗಳಿವೆ. ಹಾಗೆ ನೋಡಿದರೆ ಇಂದಿನ ಭಾರತ ವಿಶ್ವಕಪ್ ಗೆದ್ದೇ ಇಲ್ಲ. ಏಕೆಂದರೆ ಇದು ಯುವಕರ ಭಾರತ. ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರಲ್ಲಿ ಹೆಚ್ಚಿನವರಿಗೆ 1983 ನೆನಪಿಲ್ಲ. ಕಪಿಲ್‌ದೇವ್‌ನ ಹುಡುಗರು ಟ್ರೋಫಿ ಎತ್ತಿದ್ದು ನೆನಪಿಲ್ಲ. ಅಂದಹಾಗೆ ಭಾರತದ ಇಂದಿನ ಸರಾಸರಿ ವಯಸ್ಸು ಕೇವಲ 24. ಅಂದರೆ ಇಂದಿನ ಭಾರತ ವಿಶ್ವಕಪ್ ಗೆದ್ದೇ ಇಲ್ಲ!
ಯುವ ಭಾರತಕ್ಕೆ ವಿಶ್ವಕಪ್ ಅಂದರೆ ಅದು ಯಾವಾಗಲೂ ಗೆಲ್ಲದ ಕಪ್. ಭಾರತ ಇನ್ನಷ್ಟೇ ಗೆಲ್ಲಬೇಕಾದ ಕಪ್. ಏಕೆಂದರೆ ಅವರೆಲ್ಲ ವಿಶ್ವಕಪ್ ಗೆದ್ದಿದ್ದನ್ನು ನೆನಪುಗಳಂತೆ ಓದಿದ್ದಾರೆ. ಇತಿಹಾಸದಂತೆ ನೋಡಿದ್ದಾರೆ. ಈ ಯುವ ಭಾರತಕ್ಕೆ ಕಪಿಲ್‌ದೇವ್ ತಂಡ ವಿಶ್ವಕಪ್ ಗೆದ್ದಿದ್ದು ಆಂಗ್ಲೊ ಮರಾಠಾ ಯುದ್ಧದಂತೆ, ರಕ್ಕಸತಂಗಡಿ ಕದನದಂತೆ, ಪಾಣಿಪತ್ ಹೋರಾಟದಂತೆ ಕಾಣಿಸುತ್ತದೆ. ಅವರ ಪಾಲಿಗೆ ಭಾರತ ಯಾವಾಗಲೂ ವಿಶ್ವಕಪ್ ಗೆದ್ದಿಲ್ಲ. ಜೋಹಾನ್ಸ್‌ಬರ್ಗ್‌ನ ಫೈನಲ್ ಪ್ರವೇಶವೇ ಯುವ ಭಾರತದ ಸವಿಸವಿ ನೆನಪು. 1983ರ ವಿಶ್ವಕಪ್ ಗೆಲುವಿನ ನೆನಪು ಯುವ ಭಾರತದಲ್ಲಿ ಸ್ಪಂದನೆಗಳನ್ನು ಹುಟ್ಟಿಸುವುದೇ ಇಲ್ಲ. ಸಮಾಜ ಪುಸ್ತಕದಲ್ಲಿ ಬರುವ ಸ್ವಾತಂತ್ರ್ಯ ಹೋರಾಟದ ಕತೆಯಂತೆ ಅದು ಹಳೆಯದು. ಪರಕೀಯ. ಲಾರ್ಡ್ಸ್ ಬಾಲ್ಕನಿಯಲ್ಲಿ ನಿಂತು ಕಪಿಲ್‌ದೇವ್ ಪ್ರುಡೆನ್ಶಿಯಲ್ ವಿಶ್ವಕಪ್ ಎತ್ತಿದ್ದು ಇಂದಿನ ಭಾರತಕ್ಕೆ ಕೇವಲ ಒಂದು ಕಪ್ಪು ಬಿಳುಪು ಚಿತ್ರ!
ವಿಶ್ವಕಪ್ ಗೆಲ್ಲದ ದೇಶವೊಂದು ವಿಶ್ವಕಪ್ ಗೆಲ್ಲುವ ಕುರಿತು ವೀಕ್ಷಕ ವಿವರಣೆ ಕೊಡುವುದು ಬಂಜೆಯ ಪ್ರಸವ ವೇದನೆ ಕತೆಯಂತೆ. ಹೀಗಾಗಿ ತದ್ವಿರುದ್ಧ ವೀಕ್ಷಕ ವಿವರಣೆಗಳು ಸಹಜ. ಭಾರತಕ್ಕೆ ಕ್ರಿಕೆಟ್ ಎನ್ನುವುದು ಕಮರ್ಷಿಯಲ್ ಬ್ರೇಕ್‌ಗಳ ನಡುವಿನ ಬಿಡುವು. ಹೀಗಾಗಿ ರಣಜಿ ಸ್ಟೇಡಿಯಂಗಳು ಖಾಲಿ ಹೊಡೆಯುವ ಹೊತ್ತಿನಲ್ಲೇ ಅಂತಾರಾಷ್ಟ್ರೀಯ ಪಂದ್ಯದ ವೀಕ್ಷಕ ವಿವರಣೆಗಳು ಈ ದೇಶದಲ್ಲಿ ಸದಾ ಜಾರಿಯಲ್ಲಿರುತ್ತವೆ.
Post a Comment