ಹದಿನಾರಂಕಣದ ಮನೆ.ದಕ್ಷಿಣಕ್ಕೆ ಬಾಗಿಲು ಇರಬಾರದು ಎಂದು ಪಕ್ಕದಲ್ಲಿದ್ದ ಗುಡ್ಡವನ್ನು ಅಗೆದು ತೆಗೆದು ಕಟ್ಟಲಾಗಿದೆ. ಬಾಗಿಲು ಈಗ ಉತ್ತರಕ್ಕಿದೆ. ಆ ಬಾಗಿಲಿನಿಂದ ಒಳಕ್ಕೆ ಬಂದರೆ ಜಗುಲಿ. ಈ ಜಗುಲಿಯಲ್ಲಿ ಎಡಬದಿಗೆ ಸಾಲಾಗಿ ಮರದ ಕುರ್ಚಿಗಳಿವೆ. ಕುರ್ಚಿಗಳ ಎದುರು ಒಂದು ಹಳೆಯ ಮೇಜು. ಅದರ ಮೇಲೆ ಒಂದು ಮರದ ಬಟ್ಟಲು. ಎಲೆ. ಅಡಿಕೆ. ಸುಣ್ಣ. ತಂಬಾಕು. ಜಗುಲಿಯ ಬಲ ತುದಿಯಲ್ಲಿ ಒಂದಷ್ಟು ಮೂಟೆಗಳನ್ನು ಪೇರಿಸಿಡಲಾಗಿದೆ.ಈ ಜಗುಲಿಯಿಂದ ಒಳಕ್ಕೆ ಹೋದರೆ ಒಳಜಗುಲಿ. ಅಲ್ಲಿ ಎಲ್ಲವೂ ಕತ್ತಲೆ ಕತ್ತಲೆ. ಈ ಜಗುಲಿಯ ಎಡ ಪಕ್ಕ ಖಾಲಿಯಿದೆ. ಬಲ ಪಕ್ಕದಲ್ಲಿ ಈಗ ಟೀವಿಯುಂಟು. ಟೀವಿ ಬರುವ ಮೊದಲು ಅಲ್ಲೊಂದು ಮರದ ಕಪಾಟಿತ್ತು. ಒಳ ಜಗುಲಿಯಿಂದ ಮಹಡಿಗೆ ಹೋಗಲು ಏಣಿಯಿದೆ. ಆ ಏಣಿ ಪಕ್ಕದಲ್ಲಿ ಒಂದು ಗಡಿಯಾರ.
ಈ ಗಡಿಯಾರಕ್ಕೆ ಸರಿಯಾಗಿ ನನ್ನಷ್ಟೇ ವಯಸ್ಸಾಯಿತು.
ಅಲ್ಲಿಂದ ಒಳಕ್ಕೆ ಹೋದರೆ ಇನ್ನೊಂದು ಕೋಣೆ. ಅದು ಇನ್ನೂ ಕತ್ತಲೆ ಕತ್ತಲೆ. ಅಲ್ಲಿಂದ ಮುಂದಕ್ಕೆ ಹೋದರೆ ದೇವರ ಒಳ. ಅದು ವಿಶಾಲವಾಗಿದೆ. ಸತ್ಯನಾರಾಯಣ ಪೂಜೆಗೆ ಗಣಹವನಕ್ಕೆ ಅನುಕೂಲವಾಗುವಂತೆ. ಬೆಳಿಗ್ಗೆಯೆದ್ದು ಇಲ್ಲಿ ಅಪ್ಪ ದೇವರ ಪೂಜೆ ಮಾಡುತ್ತಿರುತ್ತಾರೆ. ಅಲ್ಲಿಂದ ಎಡಕ್ಕೆ ಬಂದು ಒಳಕ್ಕೆ ಹೋದರೆ ಅದು ಒಳ. ಅಡುಗೆ ಕೋಣೆ. ದೇವರ ಕೋಣೆಗೆ ಹೋಲಿಸಿದರೆ ಅಡುಗೆ ಕೋಣೆಯಲ್ಲಿ ಸಾಕಷ್ಟು ಬೆಳಕುಂಟು. ಅಲ್ಲಿಂದ ಹೊರಕ್ಕೆ ಬಂದರೆ ಬಚ್ಚಲು. ಬಚ್ಚಲಿಂದ ಹಿಂದಕ್ಕೆ ಹೋದರೆ ಸಾಕಷ್ಟು ವಿಶಾಲವಾದ ಅಂಗಳ.
ಮನೆ ಮುಂಬದಿಯಂತೆ ಹಿಂಬದಿಯಲ್ಲೂ ಅಂಗಳ. ಮನೆಯನ್ನು ಇನ್ನೂ ನೂರು ಅಡಿ ಹಿಂದಕ್ಕೆ ಕಟ್ಟಿದ್ದರೆ ಮನೆಯ ಮುಂದೆ ಇನ್ನಷ್ಟು ವಿಶಾಲವಾದ ಜಾಗ ಸಿಗುತ್ತಿತ್ತು ಎಂದು ಹೇಳಿದವರಿದ್ದಾರೆ. ಅವರಿಗೆಲ್ಲ ಮೂಲೆಮನೆ ಜೋಯಿಸರು ಹೇಳಿದ್ದು ಗೊತ್ತಿಲ್ಲ.
ಅಲ್ಲಿ ಚೌಡಿ ಮನೆಯಿದೆ!
ನಾನು ಹುಟ್ಟಿದ್ದು ಇದೇ ಮಂಗಳೂರು ಹೆಂಚಿನ ಮಲೆನಾಡಿನ ಮನೆಯಲ್ಲಿ. ಜಗುಲಿ ದಾಟಿದರೆ ಸಿಗುವ ಒಳಜಗುಲಿಯಲ್ಲಿ. ಅಪ್ಪ ಹೇಳುತ್ತಿರುತ್ತಾರೆ. ನಾನು ಹುಟ್ಟಿದ ದಿನವೇ ಇಂದಿರಾಗಾಂಧಿ ಎಮೆರ್ಜೆನ್ಸಿ ಘೋಷಣೆ ಮಾಡಿದ್ದರಂತೆ.
ನನಗೆ ಚೆನ್ನಾಗಿ ನೆನಪಿದೆ.
ತಮ್ಮ ಕೂಡ ಇದೇ ಮನೆಯಲ್ಲಿ ಹುಟ್ಟಿದ. ಅದೇ ಜಗುಲಿಯಲ್ಲಿ ಹುಟ್ಟಿದ. ನಾನು ಹುಟ್ಟಿ ಸರಿಯಾಗಿ ಎಂಟು ವರ್ಷಗಳ ನಂತರ. ನನಗೆ ಅವನು ಹುಟ್ಟಿದ ದಿನ, ಸಮಯ ಎಲ್ಲವೂ ನಿನ್ನೆ ಮೊನ್ನೆ ನಡೆದಷ್ಟೇ ಚೆನ್ನಾಗಿ ನೆನಪಿದೆ.
ಅದು ಮಳೆಗಾಲ. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿತ್ತು. ಇನ್ನೂ ಬೆಳಿಗ್ಗೆ. ನನಗೆ ಆ ದಿನ ಶಾಲೆ ಇರಲಿಲ್ಲ. ಮಳೆ ಬೇರೆ ಇತ್ತು. ಹೊರಜಗುಲಿಯಲ್ಲಿ ನಾನು ಅದು ಇದೂ ಆಟ ಆಡುತ್ತ ಇದ್ದೆ. ಅಗಸ್ಟ್ ಹದಿನೈದಕ್ಕೆ ಅಂತ ಶಾಲೆಯಲ್ಲಿ ಡ್ರಿಲ್ ಮಾಡಿಸುತ್ತಿದ್ದರು.
ಲೆಫ್ಟ್ ರೈಟ್ ಲೆಫ್ಟ್
ಲೆಫ್ಟ್ ರೈಟ್ ಲೆಫ್ಟ್
ಲೆಫ್ಟ್ ರೈಟ್ ಲೆಫ್ಟ್!
ನಾನು ಹೀಗೆ ಗಲಾಟೆ ಮಾಡಿಕೊಂಡು ಹೊರ ಜಗುಲಿಯಲ್ಲಿ ಆಡುತ್ತಿದ್ದಾಗ ಒಳಜಗುಲಿಯಲ್ಲಿ ಅಮ್ಮನಿಗೆ ಯಾತನೆ ಶುರುವಾಗಿತ್ತು. ಇದೆಲ್ಲ ನನಗೆ ಆಗ ಗೊತ್ತಾಗುತ್ತಲೂ ಇರಲಿಲ್ಲ. ದೊಡ್ಡವನಾಗುತ್ತೇನೆ, ತುಂಬಾ ದೊಡ್ಡವನಾಗುತ್ತೇನೆ ಮತ್ತು ಬಸ್ಸು ಡ್ರೈವರ್ ಆಗುತ್ತೇನೆ ಎಂದುಕೊಳ್ಳುತ್ತಿದ್ದ ವಯಸ್ಸದು.
ಹೊರಗಡೆ ಮಳೆ ಜೋರಾಗಿಯೇ ಸುರಿಯುತ್ತಿತ್ತು. ಅಮ್ಮ ಒಳಗಡೆ ಭಯಂಕರ ವೇದನೆ ಅನುಭವಿಸುತ್ತಿರಬೇಕು. ಆದರೂ ಅವಳು ಕೂಗಿಕೊಂಡಿದ್ದು ನನಗೆ ನೆನಪಿಲ್ಲ. ಒಳಜಗುಲಿಯಲ್ಲಿ ಒಂದು ಕಡೆ ಕಂಬಳಿ ಕಟ್ಟಿ ಒಂದು ಕೋಣೆ ಮಾಡಲಾಗಿತ್ತು. ಆ ಕೋಣೆಯಲ್ಲಿ ಕುಳಿತು ಮೂಕಾಂಬತ್ತೆ ಏನೇನೋ ಹೇಳುತ್ತಿದ್ದಳು. ಅಮ್ಮ ಅದಕ್ಕೆ ಏನಾದರೂ ಉತ್ತರ ಕೊಟ್ಟಿದ್ದು ನೆನಪಾಗುತ್ತಿಲ್ಲ.
ಲೆಫ್ಟ್ ರೈಟ್ ಲೆಫ್ಟ್
ಲೆಫ್ಟ್ ರೈಟ್ ಲೆಫ್ಟ್
……..
……..
ಒಂದಷ್ಟು ಹೊತ್ತು ಕಳೆಯಿತು.
ಮಗು ಕೂಗಿಕೊಳ್ಳತೊಡಗಿತು. ನನಗೊಬ್ಬ ತಮ್ಮ ಬಂದಿದ್ದ.
ಮಗು ಕೂಗಿಕೊಳ್ಳುವುದಕ್ಕೂ ಏಣಿ ಪಕ್ಕದಲ್ಲಿರುವ ನನ್ನಷ್ಟೇ ವಯಸ್ಸಾದ ಗಡಿಯಾರ ಗಂಟೆ ಬಾರಿಸಿಕೊಳ್ಳುವುದಕ್ಕೂ ಸರಿಹೋಯಿತು.
ಢಣ್
ಢಣ್
ಢಣ್
ಢಣ್
…
ಸರಿಯಾಗಿ ಒಂಬತ್ತು ಸಲ ಬಾರಿಸಿಕೊಂಡಿತ್ತು.
ಅರೇ ಇಷ್ಟು ಬೇಗ ಒಂಬತ್ತು ಗಂಟೆಯಾಗಿ ಹೋಯಿತೇ ಎಂದು ನಾನು ತಲೆಯೆತ್ತಿ ಗಡಿಯಾರದತ್ತ ನೋಡಿದ್ದೆ.
ಅರೆರೇ… ಇದೇನಾಗಿದೆ ಎಂದು ನನಗೆ ಅನಿಸಿತ್ತು. ಒಂಬತ್ತು ಗಂಟೆ ಬಾರಿಸಿಕೊಂಡಿದ್ದನ್ನು ನಾನು ಸರಿಯಾಗಿ ಕೇಳಿಸಿಕೊಂಡಿದ್ದೆ. ಒಂದು,ಎರಡು ಎಂದೆಲ್ಲ ಲೆಕ್ಕ ಮಾಡಿದ್ದೆ.
ಆದರೆ ಗಡಿಯಾರದ ಮುಳ್ಳುಗಳು ಎಂಟೂವರೆ ಎಂದು ತೋರಿಸುತ್ತಿವೆ.
ಎಂಟುವರೆಗೆ ಒಂಬತ್ತು ಗಂಟೆ ಹೊಡೆದುಕೊಳ್ಳಲು ಸಾಧ್ಯವೇ?
ಅಪ್ಪನಿಗೆ ಇನ್ನೊಬ್ಬ ಮಗ ಬಂದಿದ್ದ. ಖುಷಿಯಾಗಿದ್ದ. ಪಂಚಾಂಗ ತೆಗೆದು ಸಮಯವನ್ನು ಅದರಲ್ಲಿ ಬರೆಯುತ್ತಿದ್ದ.
ಎಂಟು ಗಂಟೆ ಮೂವತ್ತು ನಿಮಿಷ!
ಗಡಿಯಾರ ಒಂಬತ್ತು ಗಂಟೆ ಬಾರಿಸಿಕೊಂಡಿತು ಎಂದು ನಾನು ಹೇಳಿದೆ. ಅದನ್ನು ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ಒಬ್ಬರಿಗಿಂತ ಒಬ್ಬರು ಕೆಲಸ ಇದ್ದವರಂತೆ ಓಡಾಡುತ್ತಿದ್ದರು. ಮಗು ಕೂಗುತ್ತಿತ್ತು. ಅಮ್ಮ ಮಾತಾಡುತ್ತಿರುವುದು ಮಾತ್ರ ಇನ್ನೂ ಕೇಳುತ್ತಿಲ್ಲ. ಮುಕಾಂಬತ್ತೆ ಹೊರಕ್ಕೂ ಒಳಕ್ಕೂ ಗಡಿಬಿಡಿಯಿಂದಲೇ ಓಡಾಡುತ್ತಿದ್ದಳು.
ಇನ್ನೂ ಅರ್ಧ ಗಂಟೆ ಕಳೆಯಿತು.
ಒಂಬತ್ತು ಗಂಟೆಗೆ ಗಡಿಯಾರ ಒಂದೇ ಒಂದು ಗಂಟೆ ಬಾರಿಸಿ ಸುಮ್ಮನಾಯಿತು. ಇದನ್ನೂ ನಾನು ಗಮನಿಸಿದೆ. ಅದನ್ನು ಅಪ್ಪನಿಗೆ ಹೇಳಿದೆ. ಅಪ್ಪ ತಲೆಗೆ ಹಾಕಿಕೊಳ್ಳಲಿಲ್ಲ. ಒಂಬತ್ತು ಗಂಟೆಗೆ ಒಂದೇ ಗಂಟೆ ಬಾರಿಸುವುದು ಸಾಧ್ಯವಿಲ್ಲ ಎಂದು ಹೇಳಿ ನನ್ನನ್ನು ಸುಮ್ಮನಾಗಿಸಿದ.
ನನಗೆ ಮಾತ್ರ ಗ್ಯಾರಂಟಿಯಾಗಿತ್ತು.
ಎಂಟೂವರೆಗೆ ಒಂಬತ್ತು ಗಂಟೆ ಹೊಡೆದುಕೊಂಡಿದ್ದನ್ನು ನಾನು ತಪ್ಪಾಗಿ ಲೆಕ್ಕ ಹಾಕಿರಬಹುದು. ಆದರೆ ಒಂಬತ್ತು ಗಂಟೆಗೆ ಒಂದೇ ಒಂದು ಸಲ ಗಂಟೆ ಬಾರಿಸಿಕೊಂಡಿದ್ದನ್ನು ಮಾತ್ರ ನಾನು ಎಚ್ಚರಿಕೆಯಿಂದ ಗಮನಿಸಿದ್ದೆ.
ಮತ್ತೂ ಒಂದಷ್ಟು ಸಮಯ ಕಳೆಯಿತು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಚದುರಿದ್ದರು. ಅಮ್ಮ, ತಮ್ಮ, ಮೂಕಾಂಬತ್ತೆ ಮತ್ತು ನಾನು. ಮನೆಯಲ್ಲಿ ಇದ್ದುದು ಇಷ್ಟೇ ಜನ.
ಒಂಬತ್ತೂವರೆ ಗಂಟೆಯಾಯಿತು.
ಗಡಿಯಾರ ಢಣ್ ಢಣ್ ಢಣ್ ಎಂದು ಹೊಡೆದುಕೊಳ್ಳುತ್ತ ಹತ್ತು ಗಂಟೆ ಬಾರಿಸಿತು. ಈ ಸಲ ನಾನು ಈ ವಿಚಿತ್ರವನ್ನು ಮೂಕಾಂಬತ್ತೆಗೆ ತೋರಿಸಿದೆ. ಅವಳೂ ನೋಡಿದಳು ಮತ್ತು ಆಶ್ಚರ್ಯಪಟ್ಟಳು.
ಒಂಬತ್ತೂವರೆ ಗಂಟೆಗೆ ಗಡಿಯಾರ ಹತ್ತು ಸಲ ಗಂಟೆ ಹೊಡೆದುಕೊಳ್ಳುವುದೇ?
…..
…..
…..
ಆ ದಿನ ನನಗೆ ಬರೀ ಇದೇ ಕೆಲಸ ಆಯಿತು. ಗಡಿಯಾರ ಗಂಟೆಗೆ ಎಷ್ಟು ಸಲ ಹೊಡೆದುಕೊಳ್ಳುತ್ತದೆ ಮತ್ತು ಅರ್ಧ ಗಂಟೆಗೆ ಎಷ್ಟು ಸಲ ಹೊಡೆದುಕೊಳ್ಳುತ್ತದೆ ಎಂದು ಗಮನಿಸುತ್ತ ಕುಳಿತೆ. ಪ್ರತಿ ಸಲ ಗಂಟೆಗಳನ್ನು ಹೊಡೆದುಕೊಳ್ಳಬೇಕಾದಾಗಲೂ ಅದು ಒಂದೇ ಸಲ ಹೊಡೆದುಕೊಳ್ಳುತ್ತಿತ್ತು. ಒಂದೇ ಸಲ ಗಂಟೆ ಹೊಡೆದುಕೊಳ್ಳಬೇಕಾದಾಗ ಒಂದಕ್ಕಿಂತ ಹೆಚ್ಚು ಸಲ ಹೊಡೆದುಕೊಳ್ಳುತ್ತಿತ್ತು.
ಇದು ಇಡೀ ದಿನ ಮುಂದುವರೆಯಿತು.
ಎಂಟೂವರೆಗೆ ಒಂಬತ್ತು ಗಂಟೆ. ಒಂಬತ್ತೂವರೆಗೆ ಹತ್ತು ಗಂಟೆ. ಹತ್ತೂವರೆಗೆ ಹನ್ನೊಂದು ಗಂಟೆ. ಹನ್ನೊಂದೂವರೆಗೆ ಹನ್ನೆರಡು ಗಂಟೆ.
ಅಪ್ಪನಿಗೆ ಹೇಳಿದೆ. ಅವನು ಬರುವಾಗ ಸರಿಯಾಗಿ ಹನ್ನೆರಡೂವರೆ ಗಂಟೆಯಾಗುತ್ತ ಬಂದಿತ್ತು. ಆತ ನಿಂತ. ಗಡಿಯಾರ ಸರಿಯಾಗಿ ಒಂದೇ ಗಂಟೆ ಬಾರಿಸಿಕೊಂಡಿತು. ಅಪ್ಪ ಸರಿಯಾಗಿದೆಯಲ್ಲ ಅಂದ. ಇಲ್ಲ ಅದು ಹಾಗಲ್ಲ ಎಂದು ನಾನು ಹೇಳುವವನಿದ್ದೆ. ಆದರೆ ಹೇಳುವುದು ನನಗೆ ಸಾಧ್ಯವಾಗಲಿಲ್ಲ.
ಒಂದು ಗಂಟೆಗೂ ಗಡಿಯಾರ ಒಂದೇ ಸಲ ಗಂಟೆ ಹೊಡೆದುಕೊಂಡಿತು.
ಅಪ್ಪ ಪುನಃ ಸರಿಯಾಗಿ ಇದೆಯಲ್ಲ ಎಂದ.
ಒಂದೂವರೆ ಹೊತ್ತಿಗೆ ಅಪ್ಪ ಮನೆಯಿಂದ ಮತ್ತೆ ಹೊರಕ್ಕೆ ಹೋಗಿದ್ದ. ಆ ಹೊತ್ತಿಗೆ ಪುನಃ ಗಡಿಯಾರ ಎರಡು ಸಲ ಹೊಡೆದುಕೊಂಡಿತು. ಎರಡೂವರೆಗೆ ಗಂಟೆಗೆ ಮೂರು ಸಲ. ಮೂರುವರೆಗೆ ನಾಲ್ಕು ಸಲ.
…….
…….
…….
ಕೊನೆಗೂ ಅಪ್ಪನಿಗೆ ಇದನ್ನು ತೋರಿಸಿಕೊಡುವಲ್ಲಿ ನಾನು ಯಶಸ್ವಿಯಾದೆ. ಅಪ್ಪನಿಗೊಬ್ಬನಿಗೇ ಅಲ್ಲ. ಮನೆಯಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು. ನನಗಂತೂ ಬರೀ ಗಡಿಯಾರ ನೋಡುತ್ತ ಕುಳಿತುಕೊಳ್ಳುವುದೇ ಕೆಲಸವಾಗಿತ್ತು. ಜಗತ್ತಿನಲ್ಲಿ ಹೀಗೆಲ್ಲ ನಡೆಯಬಹುದು ಎಂದು ನನಗೆ ಗೊತ್ತೇ ಇರಲಿಲ್ಲ.
ಮೊದಲ ಸಲ ಇದನ್ನು ಗಮನಿಸಿದಾಗ ಅಪ್ಪ ಗಡಿಯಾರವನ್ನು ಸರಿಮಾಡಿಸಿಕೊಂಡು ಬರೋಣ ಎಂದು ಹೇಳಿದ್ದ. ಆದರೆ ಅವನ ಕೆಲಸಗಳ ಮಧ್ಯೆ ಇದು ಸಾಧ್ಯವಾಗಲೇ ಇಲ್ಲ. ಇನ್ನೂ ಮೂರ್ನಾಲ್ಕು ದಿನ ಗಡಿಯಾರ ಈ ವಿಚಿತ್ರವನ್ನು ಮುಂದುವರೆಸಿತು.
ಒಂದಿನ ಪೇಟೆಗೆ ಹೋಗುವಾಗ ಗಡಿಯಾರ ಬಿಚ್ಚಿಕೊಂಡು ಹೋಗಿ ಅಪ್ಪ ರಿಪೇರಿ ಮಾಡಿಸುತ್ತಿದ್ದೇನೆ ಎಂದ. ನನಗೆ ಅವನು ಅದನ್ನು ರಿಪೇರಿ ಮಾಡಿಸಿಕೊಂಡು ಬರಲು ಹೊರಟಾಗಲೇ ಬೇಸರವಾಗಿತ್ತು. ಇನ್ನು ಒಂಬತ್ತು ಗಂಟೆಗೆ ಗಡಿಯಾರ ಒಂಬತ್ತು ಸಲವೇ ಹೊಡೆದುಕೊಳ್ಳುತ್ತದೆ ಎಂದು ಬೇಸರವಾಗಿತ್ತು.
ಪೇಟೆಗೆ ಹೋದ ಗಡಿಯಾರ ರಿಪೇರಿಯಾಗಿ ಮನೆಗೆ ಬಂತು. ಅಪ್ಪ ಅದನ್ನು ಪುನಃ ಏಣಿ ಪಕ್ಕದಲ್ಲಿ ಪ್ರತಿಷ್ಠಾಪಿಸಿದ. ಕೀಲಿ ಕೊಟ್ಟ. ವಾಚು ನೋಡಿ ಸಮಯ ಸರಿಮಾಡಿದ.
ಹನ್ನೆರಡೂ ಕಾಲು.
ಹನ್ನೆರಡೂವರೆ ಆಯಿತು.
ಗಡಿಯಾರ ಒಂದು ಸಲ ಮಾತ್ರ ಹೊಡೆದುಕೊಂಡಿತು.
ಒಂದು ಗಂಟೆಗೆ ಒಂದೇ ಸಲ ಹೊಡೆದುಕೊಂಡಿತು.
ಒಂದೂ ಇಪ್ಪತ್ತೈದಾಯಿತು.
ಇಪ್ಪತ್ತಾರಾಯಿತು. ಎಪ್ಪತ್ತೇಳು, ಎಪ್ಪತ್ತೆಂಟು, ಇಪ್ಪತ್ತೊಂಬತ್ತು, ಮೂವತ್ತು!
ಗಡಿಯಾರ ಎರಡು ಸಲ ಹೊಡೆದುಕೊಂಡಿತು. ನನಗೆ ನಂಬಲಾಗಲಿಲ್ಲ. ಆದರೆ ಗಡಿಯಾರ ಎರಡು ಸಲ ಹೊಡೆದುಕೊಂಡಿತು. ಎರಡು ಗಂಟೆಗೆ ಒಂದು ಸಲ. ಎರಡೂ ವರೆಗೆ ಮೂರು ಸಲ.
ನನಗೆ ಖುಷಿಯಾಯಿತು. ಅಪ್ಪನಿಗೆ ಸಿಟ್ಟು ಬಂತು. ವಿಚಿತ್ರವೆಂದರೆ ಇದನ್ನು ಪೇಟಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸುವ ಪ್ರಯತ್ನವನ್ನು ಅಪ್ಪ ಪುನಃ ಮಾಡಲೇ ಇಲ್ಲ.
ತಮ್ಮನಿಗೆ ನಾಮಕರಣವಾಯಿತು.
ಗಡಿಯಾರ ಹಾಗೇ ಇತ್ತು.
ಎಂಟೂವರೆಗೆ ಒಂಬತ್ತು!
ತಿಂಗಳುಗಳು ಕಳೆದವು. ತಮ್ಮನಿಗೆ ಅನ್ನಮುಹೂರ್ತವಾಯಿತು.
ಗಡಿಯಾರ ಹಾಗೇ ಇತ್ತು.
ಒಂಬತ್ತೂವರೆಗೆ ಹತ್ತು!
ವರ್ಷಗಳು ಕಳೆದವು. ತಮ್ಮನಿಗೆ ಚೌಳ ಸಂಸ್ಕಾರವಾಯಿತು.
ಗಡಿಯಾರ ಹಾಗೇ ಇತ್ತು.
ಹತ್ತೂವರೆಗೆ ಹನ್ನೊಂದು!
ಇಷ್ಟರಲ್ಲಿ ಗಡಿಯಾರದ ನಡವಳಿಕೆ ಅಭ್ಯಾಸವಾಗಿ ಹೋಗಿತ್ತು. ನನಗೆ ಅಂತಲ್ಲ. ಮನೆಯಲ್ಲಿದ್ದವರಿಗೂ ನಮ್ಮ ಮನೆಗೆ ಪದೇ ಪದೇ ಬರುವ ಎಲ್ಲರಿಗೂ ಇದು ಅಭ್ಯಾಸವಾಗಿಹೋಯಿತು.
ಒಂಬತ್ತು ಹೊಡೆದುಕೊಂಡರೆ ಎಂಟೂವರೆ ಎಂದು ಮನೆಯಲ್ಲಿ ಎಲ್ಲರಿಗೂ ಗೊತ್ತಿತ್ತು. ಒಂಬತ್ತೂವರೆಗೆ ಹತ್ತು ಸಲ ಹೊಡೆದುಕೊಳ್ಳುತ್ತದೆ ಎಂದೂ ಗೊತ್ತಿತ್ತು.
……
……
ತಮ್ಮ ದೊಡ್ಡವನಾಗತೊಡಗಿದ್ದ. ಅನ್ನ ಮುಹೂರ್ತ ಆದ ಒಂದಷ್ಟು ದಿನ ಅಮ್ಮನೇ ಅವನಿಗೆ ಊಟ ಮಾಡಿಸುತ್ತಿದ್ದಳು. ಇನ್ನೂ ಒಂದಷ್ಟು ದಿನಗಳು ಕಳೆದ ಮೇಲೆ ಚೌಳ ಸಂಸ್ಕಾರವೂ ಆಯಿತು. ಈ ಹಂತದಲ್ಲಿ ಸ್ವತಃ ಅವನೇ ಊಟ ಮಾಡುವುದನ್ನು ಕಲಿಯತೊಡಗಿದ್ದ.
ವಿಚಿತ್ರ.
ಎಲ್ಲದಕ್ಕೂ ಅವನಿಗೆ ಎಡಗೈಯೇ ಮುಂದೆ ಬರುತ್ತಿತ್ತು. ಯಾವುದೇ ವಸ್ತುವನ್ನು ಎತ್ತಿಕೊಳ್ಳುವುದರಿಂದ ಹಿಡಿದು ಊಟ ಮಾಡುವ ತನಕ. ಎಲ್ಲದಕ್ಕೂ ಎಡಗೈ.
ಅಪ್ಪ ಆರಂಭದಲ್ಲಿ ಅವನಿಗೆ ತಿಳಿಸಿ ಹೇಳಿದ.
ಎಡಗೈ ಬಿಡಲಿಲ್ಲ.
ಅಪ್ಪ ತಮ್ಮನಿಗೆ ಬಯ್ದ.
ಎಡಗೈ ನಿಲ್ಲಲಿಲ್ಲ.
ಒಂದಿನ ಹೊಡೆದ.
ಎಡಗೈ ವ್ಯವಹಾರ ಮುಂದುವರೆಯಿತು.
ದೊಡ್ಡವನಾದ ಮೇಲೆ ಸರಿ ಆಗುತ್ತಾನೆ ಎಂದರು ಕೆಲವರು. ಅಪ್ಪ ಒಪ್ಪಿಕೊಂಡ. ಐದು ವರ್ಷ ಆಯಿತು. ತಮ್ಮನ ಎಡಗೈ ವ್ಯವಹಾರ ಮುಂದುವರೆಯಿತು. ಶಾಲೆಗೆ ಸೇರಿಕೊಂಡ. ತುಂಬಾ ಚುರುಕಾಗಿಯೇ ಇದ್ದ. ಆದರೆ ಎಡಗೈ. ಅಪ್ಪ ಮೇಷ್ಟ್ರಿಗೆ ಹೇಳಿ ಗದರಿಸಿದ. ತಮ್ಮ ಜಗ್ಗಲಿಲ್ಲ. ಹೊಡೆಸಿದ. ತಮ್ಮ ಜಗ್ಗಲಿಲ್ಲ.
ಏಳು ವರ್ಷವಾಯಿತು. ಆತ ಎಡಗೈಯ್ಯಲ್ಲೇ ಊಟ ಮಾಡುವುದು ಮುಂದುವರೆಯಿತು. ಎಡಗೈಯ್ಯಲ್ಲೇ ಬರೆಯುವುದೂ ಮುಂದುವರೆಯಿತು. ಗರ್ಭಾಷ್ಟಮ ಎಂದು ಲೆಕ್ಕ ಹಾಕಿ ಉಪನಯನ ಮಾಡಿದರು. ಆತ ಮೊದಲ ಸಲ ಆಚಮನ ಮಾಡಿದ್ದು ಎಡಗೈಯಲ್ಲಿ. ಮುತುಗಲದ ದಂಟು ಹಿಡಿದುಕೊಂಡಿದ್ದು ಎಡಗೈಯ್ಯಲ್ಲಿ. ಭಿಕ್ಷೆ ಸ್ವೀಕರಿಸಿದ್ದು ಎಡಗೈಯ್ಯಲ್ಲಿ.
ಎಡ
ಎಡ
ಎಡ!
ಹೀಗೆ ನನ್ನ ತಮ್ಮ `ಹುಟ್ಟಾ ಎಡಪಂಥೀಯ’ ಎನಿಸಿಕೊಂಡ.
***
ತಮ್ಮ ಇನ್ನೂ ದೊಡ್ಡವನಾದ.
ಅವನ ಎಡಪಂಥೀಯ ಚಟುವಟಿಕೆಗಳು ಮಾತ್ರ ನಿಲ್ಲಲಿಲ್ಲ. ಕ್ರಿಕೆಟ್ ಬ್ಯಾಟು ಹಿಡಿಯುವುದು ಎಡಗೈಯ್ಯಲ್ಲಿ. ರಣತುಂಗ. ಬೌಲಿಂಗ್‌ಗೆ ಬಂದರೆ ಎಡಗೈ. ವಸೀಮ್ ಆಕ್ರಮ್. ಮೈದಾನದಲ್ಲಿ ಡೈವ್ ಮಾಡುವುದು ಎಡಬದಿಯಿಂದ. ಯಾರು ಏನೇ ಹೇಳಿದರೂ ಊಟವನ್ನೂ ಆತ ಎಡಗೈಯ್ಯಲ್ಲೇ ಮಾಡುತ್ತಿದ್ದ.
ಹಾಗಾದರೆ ಎಡಗೈಯ್ಯಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲ ಆತ ಬಲಗೈಯಲ್ಲಿ ಮಾಡುತ್ತಿದ್ದನೇ?
ಗೊತ್ತಿಲ್ಲ.
ನಾನು ಯಾವತ್ತೂ ಅವನನ್ನು ಕೇಳಿರಲಿಲ್ಲ. ಏಕೆಂದರೆ ಆತ ಯಾವಾಗಲೂ ತಣ್ಣಗಿನ ಸ್ವಭಾವದ ಹುಡುಗ. ಬಲಗೈಯ್ಯಲ್ಲೇ ಊಟ ಮಾಡುವ ನನಗಿಂತ ಅವನಿಗೆ ಒಳ್ಳೆಯ ಮನಸ್ಸಿದೆ ಎಂದು ಎಷ್ಟೋ ಸಲ ನನಗೆ ಅನಿಸಿತ್ತು.
ಅವನ ಗುಣದಿಂದಾಗಿ ಅವನ ಎಡಗೈ ಗೌಣವಾಯಿತು. ಮನೆಯಲ್ಲೂ ಇದು ಅಭ್ಯಾಸವಾಗಿಹೋಯಿತು. ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಈ ಕುರಿತು ಮಾತಾಡುವುದನ್ನೇ ನಿಲ್ಲಿಸಿದರು. ನಮ್ಮನೆಗೆ ಪದೇ ಪದೇ ಬರುವವರೂ ತಮ್ಮನ ಸುದ್ದಿ ಬಿಟ್ಟರು.
ಎಡ, ಎಡ, ಎಡ
ಲೆಫ್ಟ್ ಲೆಫ್ಟ್ ಲೆಫ್ಟ್!
***
ಎಷ್ಟೋ ತಿಂಗಳೂಗಳೇ ಕಳೆದಿರಬೇಕು.
ನಾನು ಒಂದಿನ ಒಳಜಗುಲಿಯಲ್ಲಿ ಕುಳಿತು ಟೀವಿ ನೋಡುತ್ತಿದ್ದೆ. ಯಾವುದೋ ನ್ಯೂಸ್ ಚಾನೆಲ್. ಒಂದಾದ ಮೇಲೆ ಒಂದರಂತೆ ಏನೇನೋ ಸುದ್ದಿಗಳು ಬರುತ್ತಿದ್ದವು. ಅಷ್ಟರಲ್ಲಿ ಒಳಕ್ಕೆ ಬಂದ ಅಪ್ಪ ಕೂಡ ಕುರ್ಚಿ ಎಳೆದುಕೊಂಡು ಟೀವಿ ನೋಡಲು ಕುಳಿತ. ತಮ್ಮ ಆಗಲೇ ಅಡುಗೆಮನೆಯಲ್ಲಿ ಊಟ ಮಾಡುವುದಕ್ಕೆ ತಯಾರಿ ನಡೆಸುತ್ತಿರುವಂತೆ ಇತ್ತು.
ನೈನ್ ಓ ಕ್ಲಾಕ್ ನ್ಯೂಸ್!
ಟೀವಿ ನಿರೂಪಕಿ ಹೇಳುತ್ತಿದ್ದಳು.
ಅಷ್ಟೊತ್ತಿಗೆ ಸರಿಯಾಗಿ ಗಡಿಯಾರ ಗಂಟೆ ಬಾರಿಸಿಕೊಂಡಿತು.
ಢಣ್
ಢಣ್
ಢಣ್
ಢಣ್
….
….
ಸರಿಯಾಗಿ ಒಂಬತ್ತು ಸಲ. ತಲೆ ಎತ್ತಿ ಗಡಿಯಾರವನ್ನು ನೋಡಿದೆ. ಮುಳ್ಳುಗಳೂ ಒಂಬತ್ತು ಗಂಟೆಯನ್ನೇ ತೋರಿಸುತ್ತಿವೆ.
ವೂಹ್!
ವಿಚಿತ್ರ ಅನಿಸಿ ಜೋರಾಗಿ ಕೂಗಿಕೊಂಡೆ. ಗಡಿಯಾರ ಒಂಬತ್ತು ಗಂಟೆಗೆ ಒಂಬತ್ತು ಗಂಟೆಯನ್ನೇ ಬಾರಿಸಿತು ಎಂದು ಅಪ್ಪನಿಗೆ ಹೇಳಿದೆ. ಅಪ್ಪ ಕೂಡ ಗಡಿಯಾರವನ್ನೊಮ್ಮೆ ನೋಡಿದ.
ಏನು ಯೋಚನೆ ಮಾಡುತ್ತಿದ್ದನೋ ಗೊತ್ತಿಲ್ಲ.
`ನಾಳೆ ತಗೊಂಡುಹೋಗಿ ಸರಿ ಮಾಡಿಸೋಣ’ ಎಂದು ಹೇಳಿ ಮತ್ತೆ ಟೀವಿ ವಾರ್ತೆಗಳಲ್ಲಿ ಮುಳುಗಿಹೋದ. ನಾನು ಎದ್ದು ಅಡುಗೆ ಕೋಣೆಗೆ ಬಂದೆ.
ತಮ್ಮ ಊಟ ಮಾಡಲು ಪ್ರಯತ್ನ ಪಡುತ್ತಿದ್ದಾನೆ.
ಆಶ್ಚರ್ಯ!
ಬಲಗೈಯ್ಯಲ್ಲಿ ಊಟ ಮಾಡಲು ಪ್ರಯತ್ನಿಸುತ್ತಿದ್ದಾನೆ.ಅಮ್ಮ ಏನು ಯೋಚನೆ ಮಾಡುತ್ತಿದ್ದಳೋ ಗೊತ್ತಿಲ್ಲ.
ತಮ್ಮನಿಗೆ ಕೇಳುತ್ತಿದ್ದಾಳೆ:
ನಿನ್ನ ಎಡಗೈಗೆ ಏನಾಗಿದೆ?
2 Comments
Leftist story bahala chenagide Gunkal avare. Kept me glued till the end!!!
Hello
You seem to be obsessed with ‘time’!For a moment your description of your ancestral home transported me to my native village and the ancestral home I was born in.It is a very prized feeling to think of one`s birth place. This story of yours has inspired me to write about my village home…lemme see how it unfolds.Since the beginning of the story I was curious to know how you would end it.I liked the description of your home the best…it should have been a real great feeling to have grown up in a home like that!Atharahada ondu manealli hutti beledare ondu samskruthiya prathipadane adha hage….idu nanna abhiprayavashte.As in your story”tik, tik,tik….”, the expression that caught my attention was, though my brother wrote in left hand, he was better at heart than me….Even Andre Brink, a South Afrikaan dissident writer, in his novels does the same…uses easily understandable words, phrases and expressions but the effect that it has on readers is very profound and stimulating.According to me for a piece of writing to be great there are several canonised rules applied to adjudge it, but if the writings are able to bring a flicker of smile on the face of a reader, or if it is able to transport them to their childhood memories nothing like it….manasannu thili mathu niralavagi maduva prathiondu baraha valleya barahave.
Post a Comment