ಕತೆ: ಮುನ್ನಾನ ಪಿಚ್ಚರ್‌

ದೊಂದು ನೀಳ್ಗತೆ. ಇಷ್ಟೊಂದು ಉದ್ದ ಕತೆಯನ್ನು ಯಾರು ಓದುತ್ತಾರೆ ಎಂದು ಬೇಸರ ಮಾಡಿಕೊಳ್ಳಬೇಡಿ. ಪಿಚ್ಚರ್‌ ಎಂದರೆ ಎರಡೂವರೆ ಗಂಟೆಯ ವಿಷಯ. ಚಿಕ್ಕದಾಗಿ ಹೇಳಿ ಎಂದರೆ ಹೇಗೆ?

ಚಳಿಯಿತ್ತು. ಹತ್ತೂವರೆ ಗಂಟೆ ಟ್ರೇನೂ ಹೊರಟು ಹೋಗಿರಬೇಕು. ರೈಲ್ವೆ ಗೇಟ್‌ ತೆರೆದುಕೊಂಡಿತ್ತು. ರಾತ್ರಿಯಾದರೂ ಟೀ ಅಂಗಡಿಯವನು ಇನ್ನೂ ತೆರೆದೇ ಇದ್ದ.

ಬಕೇಟನ್ನು ಹ್ಯಾಂಡಲ್‌ಗೆ ಸಿಕ್ಕಿಸಿಕೊಂಡ ಮುನ್ನಾ ಸೈಕಲ್‌ ದೂಡಿಕೊಂಡೇ ರೈಲ್ವೇ ಗೇಟ್‌ ದಾಟಿದ. ಹಣ್ಣಿನ ಅಂಗಡಿ ದಾಟಿದ. ತಳ್ಳು ಗಾಡಿ ದಾಟಿದ. ಮರ ದಾಟಿದ. ಟೆಲಿಫೋನ್‌ನವರು ಅಗೆದು ಮಾಡಿರುವ ಹೊಂಡ ದಾಟಿದ!

ಬಕೇಟನ್ನು ಮತ್ತು ಸೈಕಲ್ಲನ್ನು ಬ್ಯಾಲೆನ್ಸ್‌ ಮಾಡುತ್ತ ಪೆಡಲ್‌ ತುಳಿಯುತ್ತ ಎಡಕ್ಕೆ ತಿರುಗಿದ. ಮೋರಿಯ ಬಳಿ ಸೈಡ್‌ ಸ್ಟ್ಯಾಂಡ್‌ ಹಾಕಿ ನಿಲ್ಲಿಸಿದ. ಅಂಟಿನ ಬಕೇಟ್‌ ಎತ್ತಿಕೊಂಡ. ಬ್ರಶ್ಶು ಅದರಲ್ಲೇ ಇತ್ತು. ಕ್ಯಾರಿಯರ್‌ಗೆ ಇದ್ದ ಸುರುಳಿ ಪೋಸ್ಟರ್‌ಗಳಲ್ಲಿ ನಾಲ್ಕು ಶೀಟ್‌ಗಳನ್ನು ಎತ್ತಿಕೊಂಡ. ಒಂದೊಂದಕ್ಕೂ ಬ್ರಶ್ಶಿನಿಂದ ಅಂಟು ಸವರಿದ. ಒಂದೊಂದಾಗಿ ನಾಲ್ಕು ಶೀಟುಗಳನ್ನು ಗುರುತು ನೋಡಿಕೊಂಡು ಅಂಟಿಸಬೇಕು. ಎಲ್ಲ ಸೇರಿದರೆ ಅದು ಪೋಸ್ಟರ್‌.

ಮೊದಲ ಶೀಟ್‌ ಅಂಟಿಸಿದ. ಮಚ್ಚು ಹಿಡಿದ ಕೈ ಮತ್ತು ರಕ್ತದ ಗುರುತುಗಳು ಮಾತ್ರ ಕಾಣುತ್ತಿವೆ. ಎರಡನೆ ಶೀಟ್‌ ಅಂಟಿಸಿದ. ಹೀರೋ ಮುಖ ಕಾಣುತ್ತಿದೆ. ಮೂರನೆ ಶೀಟ್‌ ಅಂಟಿಸಿದ. ಹೀರೋ ದೇಹ ಮತ್ತು ಆತನ ರಕ್ತಸಿಕ್ತ ದೇಹದ ಅರ್ಧ ಭಾಗ ಕಾಣುತ್ತಿದೆ. ನಾಲ್ಕನೇ ಶೀಟ್‌ ಅಂಟಿಸಿದ. ಮಚ್ಚು ಹಿಡಿದ ಹೀರೋ ಪೂರ್ತಿಯಾಗಿ ಕಾಣಿಸುತ್ತಿದ್ದಾನೆ.

ಅವನಿಗೀಗ ಜೀವ ಬಂದಿದೆ!

ನಾಲ್ಕು ಹೆಜ್ಜೆ ಹಿಂದಕ್ಕೆ ಬಂದು ಎಷ್ಟನೆಯದೋ ಸಲ ನೋಡಿದ.

ಸರಿಯಾಗಿದೆ.

ಹೀರೋ ಮೈಗೆ ಅಂಟಿಕೊಂಡ ಅಂಗಿ,ಗೋಣಿ ಚೀಲದಿಂದ ಮಾಡಿದಂತಿದೆ. ಹರಿದಿದೆ. ರಕ್ತ ಸಿಕ್ತವಾಗಿದೆ. ತಂಗಿಯ ಮಾನಭಂಗಕ್ಕೆ ಮುಂದಾದ ಹದಿನೆಂಟು ಜನ ಕಟ್ಟುಮಸ್ತಾದ ರೌಡಿಗಳನ್ನು ಏಕಾಂಗಿಯಾಗಿ ಸ್ಲೋ ಮೋಷನ್‌ನಲ್ಲಿ ಚಚ್ಚಿಹಾಕಿ ಬಂದಿರಬೇಕು. ಮುಖಕ್ಕೆ ಗ್ಯಾರೇಜಿನ ಆಯಿಲ್‌ ಮೆತ್ತಿಕೊಂಡಂತೆ ಕಾಣುತ್ತಿದ್ದಾನೆ. ಹಂದಿಯಂತೆ ಬೆಳೆದಿರುವ ಈತ ಏನು ಹೀರೋನೋ ಎಂದು ಮುನ್ನಾ ಪ್ರತಿ ಸಲ ಪೋಸ್ಟರ್‌ ಅಂಟಿಸುವಾಗಲೂ ಅಂದುಕೊಳ್ಳುತ್ತಾನೆ. ಆದರೆ ಆತನ ಮೂರನೇ ಪಿಚ್ಚರ್‌ ಕೂಡ ಈಗ ನೂರು ದಿನದತ್ತ ಓಡುತ್ತಿದೆ.

ಅಮೋಘ ಹದಿನಾಲ್ಕನೇ ವಾರ.

ಗಾಂಧೀಬಜಾರ್‌

ಕನ್ನಡ ಸಿನಿಮಾ ಸ್ಕೋಪ್‌!

ಮುನ್ನಾ ಯೋಚಿಸುತ್ತಾನೆ: ಗಾಂಧೀಯಾದರೇನು? ಬಜಾರ್‌ ಆದರೇನು? ಒಂದು ಪೋಸ್ಟರ್‌ಗೆ ಎರಡು ರೂಪಾಯಿ ಸಿಗುತ್ತದೆ!

***

ತಮಾಷೆಯೆಂದರೆ ಮುನ್ನಾ ಕೂಡ ಇರುವುದು ಗಾಂಧೀಬಜಾರಿನಲ್ಲಿ. ಹಾಗಾಗಿ `ಗಾಂಧೀಬಜಾರ್‌’ ಹೆಸರಲ್ಲೊಂದು ಪಿಚ್ಚರ್‌ ಬರುತ್ತದೆ ಎಂದು ಓದಿದಾಗ ಮುನ್ನಾನಿಗೆ ಖುಷಿಯಾಗಿ ಏನೇನೋ ಅನಿಸಿತ್ತು.

ಸ್ವಲ್ಪ ಹೊತ್ತು ಅಷ್ಟೇ.

ಹೆಚ್ಚೆಂದರೆ ಕೆಲವು ನಿಮಿಷಗಳಿರಬಹುದು.

ಅವನ ತಲೆಯಲ್ಲಿ ಆಲೋಚನೆಗಳು ಪಿಚ್ಚರ್‌ ರೀಲಿನಂತೆ ಸುತ್ತತೊಡಗಿದ್ದವು. ಈಗ ಮುನ್ನಾನ ತಲೆಯಲ್ಲಿಯೇ `ಗಾಂಧೀಬಜಾರ್‌’ ಪಿಚ್ಚರ್‌ ನಡೆಯತೊಡಗಿತು.

ಈ ಪಿಚ್ಚರ್‌ ಅವನ ಅಡ್ಡೆಯಿಂದಲೇ ಆರಂಭವಾಯಿತು. ಅಡ್ಡೆಯಿಂದ ಹೊರಕ್ಕೆ ಬಂದರೆ ಒಂದಷ್ಟು ಮೆಟ್ಟಿಲುಗಳನ್ನು ಇಳಿಯಬೇಕು. ಒಂದು, ಎರಡು, ಮೂರು, ನಾಲ್ಕು….. ಒಟ್ಟೂ ಹನ್ನೆರಡು. ಅಲ್ಲಿಂದ ಮುಂದಕ್ಕೆ ಒಂದು ತುಕ್ಕು ಹಿಡಿದ ಗೇಟು ದಾಟಬೇಕು. ದಾಟಿದರೆ ರಸ್ತೆ. ಬಸ್‌ಸ್ಟಾಪ್‌. ಅಲ್ಲಿ ಬಲಕ್ಕೆ ತಿರುಗಿ ಮುಂದಕ್ಕೆ ಹೋಗಬೇಕು. ಡೆಡ್‌ ಎಂಡ್‌. ಪುನಃ ಎಡ. ಮೂರು ಕ್ರಾಸ್‌ ಮುಂದಕ್ಕೆ ಹೋದರೆ ಅವಳ ಮನೆಯಿದೆ. ಅವಳು ಯಾವಾಗಲೂ ಬಂದು ಇದೇ ಬಸ್‌ಸ್ಟಾಪಿನಲ್ಲಿ ನಿಂತುಕೊಳ್ಳುತ್ತಾಳೆ. ಹೀರೋ ಅಂದರೆ ಮುನ್ನಾ ಹೋಗುತ್ತಲೇ ಅವಳು ಮುಗುಳ್ನಗುತ್ತಾಳೆ. ಮುನ್ನಾ ಕೂಡ ಮುಗುಳ್ನಗುತ್ತಾನೆ.

ಇಬ್ಬರೂ ಕಣ್ಮುಚ್ಚುತ್ತಾರೆ.

ಕಣ್ಣು ತೆರೆದರೆ ಲೊಕೇಷನ್‌ ಶಿಫ್ಟ್‌!

ಆದರೆ ನಾಯಕ ನಾಯಕಿ ಅರೆಬಟ್ಟೆ ತೊಟ್ಟು ಕುಣಿಯುವುದಿಲ್ಲ. ಬದಲಿಗೆ ಸೀದಾ ಬೆಡ್‌ ರೂಮಿನಲ್ಲಿ ಇರುತ್ತಾರೆ. ನಾಯಕ ಅಂದರೆ ಮುನ್ನಾ, ಅವಳನ್ನು ಮುದ್ದಿಸುವುದೂ ಇಲ್ಲ. ಅರೆ ಕ್ಷಣದಲ್ಲಿ ಅವಳ ಬಟ್ಟೆಯನ್ನು ಸುಲಿದು ಹಾಕುತ್ತಾನೆ. ಅಷ್ಟೇ. ಎದೆಯ ಕಣಿವೆ ಸುತ್ತಮುತ್ತ ಕೈ ಓಡಾಡುವುದು, ಮೃದುವಾಗಿ ಅವಳ ಹೊಕ್ಕುಳನ್ನು ಚುಂಬಿಸುವುದು, ತುಟಿಗೆ ತುಟಿಯೊತ್ತಿ ಮೈಮರೆಯುವಂಥ ಯಾವ ಸನ್ನಿವೇಶಗಳೂ ಇಲ್ಲ.

ನೇರವಾಗಿ ರತಿಕ್ರೀಡೆ!

ಒಂದೂವರೆ ನಿಮಿಷ.

ಹೆಚ್ಚೆಂದರೆ ಎರಡು ನಿಮಿಷ.

ಶುದ್ಧ ಒರಟ.

ಮುಗಿದುಹೋಗುತ್ತದೆ.

ಯಾವುದೂ ಸೆನ್ಸಾರ್‌ ಆಗುವುದಿಲ್ಲ.

***

ಅಂಟಿಸುತ್ತಾನೆ. ಹರಿಯುತ್ತಾನೆ. ಇತ್ತೀಚೆಗೆ ಇಷ್ಟೇ ಆಗಿಬಿಟ್ಟಿದೆ. ರಾತ್ರಿ ಒಂದೊಂದಾಗಿ ಅಂಟಿಸುತ್ತಾನೆ. ಹಗಲಾದರೆ ಒಂದೊಂದಾಗಿ ಹರಿದು ಹಾಕುತ್ತಾನೆ. ರಾತ್ರಿ ಅಂಟಿಸಿದ್ದಕ್ಕಾಗಿ ಬೆಳಿಗ್ಗೆ ಹರಿಯುವ ಕೆಲಸ ಸಿಗುತ್ತದೆ. ಬೆಳಿಗ್ಗೆ ಹರಿದಿದ್ದಕ್ಕಾಗಿ ರಾತ್ರಿ ಅಂಟಿಸುವ ಕೆಲಸ ಸಿಗುತ್ತದೆ.

ಈ ಪೋಸ್ಟರ್‌ ಅಂಟಿಸುವ ಕೆಲಸವನ್ನು ಯಾವಾಗ ಆರಂಭಿಸಿದೆ ಎಂದು ಮುನ್ನಾ ಯೋಚಿಸುತ್ತಾನೆ. ಗಾಂಧೀಬಜಾರ್‌ನಲ್ಲಿ ಏನೆಲ್ಲ ಕೆಲಸ ಮಾಡಿಕೊಂಡಿದ್ದಾಗ ಒಂದು ಸಲ ಇಂಥದ್ದೊಂದು ಕೆಲಸ ಅಚಾನಕ್ಕಾಗಿ ಬಂದಿತ್ತು. ಆಗಿನ್ನೂ ಮುನ್ನಾ ಚಿಕ್ಕವನಿರಬೇಕು.

ಅದ್ಯಾರೋ ಲಂಕೇಶ್‌ ಅಂತೆ. ಹುಡುಗಿ. ಪಿಚ್ಚರ್‌ ಮಾಡಿದ್ದಳು. ಪೋಸ್ಟರ್‌ ಅಂಟಿಸುವುದಕ್ಕೆ ಮೂರು ಹುಡುಗರನ್ನು ಕರೆಸಿದ್ದಳು. ಅದರಲ್ಲಿ ಮುನ್ನಾ ಕೂಡ ಒಬ್ಬ. ರಾತ್ರಿಯೆಲ್ಲ ಒದ್ದಾಡಿ ಒಂದು, ಎರಡು, ಮೂರು, ನಾಲ್ಕು ಎಂದು ಶೀಟ್‌ಗಳನ್ನು ಕಷ್ಟಪಟ್ಟು ಜೋಡಿಸುತ್ತ ಗಾಂಧೀಬಜಾರ್‌ನ ಮೋರಿ, ಗೋಡೆ, ಕಾಂಪೌಂಡುಗಳಿಗೆಲ್ಲ ಪೋಸ್ಟರ್‌ ಅಂಟಿಸಿದ್ದು ನೆನಪಿದೆ. ಆಗ ಇವರು ರೋಡ್‌ ಡಿವೈಡರ್‌ಗಳನ್ನೂ ಬಿಟ್ಟಿರಲಿಲ್ಲ. ಮುನ್ನಾನಿಗೆ ಈಗ ಆ ಪಿಚ್ಚರ್‌ ಹೆಸರು ಕೂಡ ಮರೆತುಹೋಗಿದೆ.

ಅದೇನೋ ಇತ್ತು.

ವೇದೇರಿ ಅಲ್ಲ.

ದೇವೀರಿ!

ಹೌದು, ದೇವೀರಿ!

ಮುಂದಕ್ಕೆ ಅದೊಂದು ದೊಡ್ಡ ಫಜೀತಿಯೇ ಆಗಿಹೋಯಿತು. ಗಾಂಧೀಬಜಾರ್‌ನ ಮೋರಿಗಳು, ಗೋಡೆಗಳು, ಕಾಂಪೌಂಡ್‌ಗಳೆಲ್ಲ ಯಾರದೂ ಅಲ್ಲ ಎಂದು ಮುನ್ನಾ ಸೇರಿದಂತೆ ಎಲ್ಲರೂ ಭಾವಿಸಿದ್ದರು. ಆದರೆ ಮರುದಿನ ಸಂಜೆ ಹೊತ್ತಿಗೆ ನೀಲಕಂಠಪ್ಪ ಎಂಬ ಮನುಷ್ಯ ಬಂದ. ಅವನು ಮುನ್ನಾ ಸೇರಿದಂತೆ ಪೋಸ್ಟರ್‌ ಅಂಟಿಸಿದ ಹುಡುಗರನ್ನೆಲ್ಲ ಹಾಕಿಕೊಂಡು ಹೊಡೆದ. ಥೇಟ್‌ ಪೋಸ್ಟರ್‌ಗಳಲ್ಲಿ ಕಾಣಿಸುವ ವಿಲನ್‌ನಂತೆ. ಅದೆಲ್ಲ ತನಗೆ ಸೇರಿದ ಜಾಗ ಎಂದು ಘೋಷಿಸಿದ.

ಮೋರಿ, ಕಾಂಪೌಂಡು, ರೋಡ್‌ ಡಿವೈಡರ್‌ಗಳೆಲ್ಲ ಯಾರದಾದರೂ ಆಗಿರುವುದು ಸಾಧ್ಯವಿದೆಯೇ?

ಗೊತ್ತಿಲ್ಲ. ಆದರೆ ಇದರಿಂದ ಒಂದಂತೂ ಉಪಯೋಗವಾಯಿತು. ಈಗ ಮುನ್ನಾ ಹೋಗಿ ನೀಲಕಂಠಪ್ಪ ಬಳಿ ಕೆಲಸಕ್ಕೆ ಸೇರಿಕೊಂಡ. ಆಗಾಗ ಪೋಸ್ಟರ್‌ ಅಂಟಿಸುವ ಕೆಲಸ. ಗಾಂಧೀಬಜಾರ್‌, ಬಸವನಗುಡಿ, ರಿಚ್ಮಂಡ್‌ ಸರ್ಕಲ್‌, ಸೌತ್‌ ಎಂಡ್‌ ಸರ್ಕಲ್‌ ಹೀಗೆ ಮುನ್ನಾನಿಗೆ ಬೆಂಗಳೂರಿನ ಮೋರಿ ಮೋರಿಗಳೂ, ಕಾಂಪೌಂಡು ಕಾಂಪೌಂಡಗಳೂ ಗೊತ್ತಾಗಿಹೋದವು. ಪ್ರತಿಭಟನೆ, ಮುಷ್ಕರ, ಮುಖ್ಯಮಂತ್ರಿಗಳಿಗೆ ಅಭಿನಂದನೆಯಂಥ ಪೋಸ್ಟರ್‌ಗಳನ್ನೂ ಆತ ಹಚ್ಚಿದ್ದಿತ್ತು. ಆದರೆ ಎಲ್ಲಕ್ಕಿಂತ ಹೆಚ್ಚು ನಿಯಮಿತವಾಗಿ ಆತ ಅಂಟಿಸಿದ್ದು ಪಿಚ್ಚರ್‌ ಪೋಸ್ಟರ್‌ಗಳನ್ನು.

ಮೊದಲ ಶೀಟ್‌ ಹಚ್ಚಿದರೆ ಮಚ್ಚು, ಕೈ, ರಕ್ತ. ಎರಡನೇ ಶೀಟ್‌ನಲ್ಲಿ ಹೀರೋ ಮುಖ. ಮೂರನೆಯದಲ್ಲಿ ಕಾಲು. ನಾಲ್ಕನೆಯದರಲ್ಲಿ ಕಾಲಾಳುಗಳು. ಮಚ್ಚು,ರಕ್ತ, ತೊಡೆ, ಹೊಕ್ಕುಳು, ಸೊಂಟ, ಬೆನ್ನು, ತುಟಿ ಮತ್ತು ಅರೆತೆರೆದ ಮೊಲೆ! ಒಂಚೂರು ಆ ಕಡೆ. ಒಂಚೂರು ಈ ಕಡೆ. ಎಲ್ಲ ಪೋಸ್ಟರ್‌ಗಳಲ್ಲೂ ಅವನಿಗೆ ಇದಕ್ಕಿಂತ ಹೆಚ್ಚು ವಿಶೇಷವಾದುದೇನೂ ಕಾಣಿಸುತ್ತಿರಲಿಲ್ಲ!

***

`ಗಾಂಧೀಬಜಾರ್‌’ ಪಿಚ್ಚರನ್ನು ಅವನು ಮೊದಲ ದಿನವೇ ನೋಡಿದ್ದ. ಕತೆ ಅವನ ತಲೆಯಲ್ಲೇ ನಡೆದಿತ್ತು. ಆದರೂ ನೋಡಿದ್ದ. ಹೇಗೆ ಮಾಡಿದ್ದಾರೆ ಎಂಬ ಕುತೂಹಲದಿಂದ ನೋಡಿದ್ದ.

ಅವನಿಗೆ ನಿರಾಶೆಯಾಗಿತ್ತು.

ಅದರಲ್ಲಿ ಏನೇನೋ ಇತ್ತು. ಅವನ ತಲೆಯಲ್ಲಿ ನಡೆದ ಕತೆಗೂ ಇದಕ್ಕೂ ಸಂಬಂಧವೇ ಇರಲಿಲ್ಲ. ಗಾಂಧೀಬಜಾರಿಗೂ ಕತೆಗೂ ಕೂಡ ಸಂಬಂಧವಿದ್ದಂತೆ ಕಾಣಲಿಲ್ಲ. ಒಂದು ತರಕಾರಿ ಅಂಗಡಿ ಎದುರು ನಡೆಯುವ ಗಲಾಟೆಯೊಂದಿಗೆ ಪಿಚ್ಚರ್‌ ಆರಂಭವಾಯಿತು. ಹೀರೋಗೆ ಯಾರೋ ಕಿರಿಕ್‌ ಮಾಡಿದರು. ಹೀರೋ ಸಹಿಸಿಕೊಂಡ. ಇನ್ನೂ ಕಿರಿಕ್‌ ಮಾಡಿದರು. ಸಹಿಸಿಕೊಂಡ. ಅವನ ಜೊತೆ ಬಂದಿದ್ದ ತಂಗಿಗೆ ಕಿರಿಕ್‌ ಮಾಡಿದರು.

ಮುನ್ನಾ ಬೇಡ ಬೇಡ ಎಂದು ಹೇಳುವವನಿದ್ದ. ಆದರೂ ಅವರು ತಂಗಿಯನ್ನು ಮುಟ್ಟಿಯೇ ಬಿಟ್ಟರು!

ಇಲ್ಲಿಂದ ಮುಂದಕ್ಕೆ ಹೀರೋವನ್ನು ನಿಲ್ಲಿಸುವುದು ಸಾಕ್ಷಾತ್‌ ಪರಮೇಶ್ವರನಿಗೂ ಸಾಧ್ಯವಾಗಲಿಲ್ಲ. ಆತ ಸಿಕ್ಕಿದವರನ್ನೆಲ್ಲ ಹೊಡೆದ. ಸರದಿಯ ಪ್ರಕಾರ ಬಂದು ಒಂದಷ್ಟು ಜನ ಹೊಡೆಸಿಕೊಂಡರು. ಅಲ್ಲಿದ್ದ ಕಾರುಗಳ ಗ್ಲಾಸು ನುಚ್ಚು ನೂರಾಯಿತು. ತರಕಾರಿ ಅಂಗಡಿಯಲ್ಲಿದ್ದ ಟೊಮೆಟೋಗಳು ಅಪ್ಪಚ್ಚಿಯಾದವು. ನಾಯಕನ ಮುಖಕ್ಕೆ ಎಲ್ಲಿಂದಲೋ ಆಯಿಲ್‌ ಕಲೆಗಳೆಲ್ಲ ಬಂದು ಮೆತ್ತಿಕೊಂಡು ಏನೇನೋ ಆಯಿತು.

ಅಲ್ಲಿಂದ ಮುಂದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಆತ ಹೊಡೆದಾಡುತ್ತಲೇ ಇದ್ದ. ಅಷ್ಟರಲ್ಲಿ ಅದ್ಯಾವುದೋ ಹುಡುಗಿ ಬಂದಳು. ಅವಳು ಮೂರು ಕ್ರಾಸುಗಳ ಆ ಕಡೆ ಮನೆಯಿರುವ, ಬಸ್‌ ಸ್ಟಾಪಿನಲ್ಲಿ ಬಂದು ನಿಲ್ಲುವ ಹುಡುಗಿಯಂತೇನೂ ಕಾಣಿಸಲಿಲ್ಲ. ತುಂಬಾ ಕಡಿಮೆ ಬಟ್ಟೆ ಹಾಕಿದ್ದಳು. ಮುಖಕ್ಕೆ ಸಿಕ್ಕಾಪಟ್ಟೆ ಬಣ್ಣ ಮೆತ್ತಿಕೊಂಡಿದ್ದಳು. ತೋಳಿಲ್ಲದ ಟಾಪ್‌ ಹಾಕಿಕೊಂಡೇ ಓಡಾಡುವ ದಪ್ಪ ಸೊಂಟದ ಹುಡುಗಿ. ಮುನ್ನಾನಿಗೆ ಏನೇನೂ ಇಷ್ಟವಾಗಲಿಲ್ಲ. ಹೀರೋ ಅವಳನ್ನು ಲವ್‌ ಮಾಡತೊಡಗಿದರೆ ಹಿಂದಿದ್ದವರು ಯಾಕೆ ಆ ರೀತಿ ಕುಣಿಯಬೇಕು ಎಂದು ಅರ್ಥವಾಗಲಿಲ್ಲ.

ಇನ್ನೂ ಏನೆಲ್ಲ ಆಗುವುದರಲ್ಲಿತ್ತೋ?

ತಲೆಕೆಟ್ಟು ಮುನ್ನಾ ಎದ್ದುಬಂದುಬಿಟ್ಟ. ಅಲ್ಲಿಂದ ಮುಂದಕ್ಕೆ ಅವನಿಗೆ ಪಿಚ್ಚರ್‌ ನೋಡುವುದರಲ್ಲಿ ಇದ್ದ ಉತ್ಸಾಹವೇ ಹೊರಟುಹೋಯಿತು. ಏಕೆಂದರೆ `ಗಾಂಧೀಬಜಾರ್‌’ ಹೆಸರು ನೋಡಿದಾಗ ಅವನ ತಲೆಯಲ್ಲೇ ಒಂದು ಪಿಚ್ಚರ್‌ ಹುಟ್ಟಿಕೊಂಡಿತ್ತು. ಈ ಪಿಚ್ಚರ್‌ ನೋಡುತ್ತಲೇ ಅದು ಸತ್ತು ಹೋಯಿತು.

ಹೌದು, ಸತ್ತು ಹೋಯಿತು.

***

ಬೆಂಗಳೂರಿನ ಮೋರಿ, ಕಾಂಪೌಂಡು, ಗೋಡೆಗಳೆಲ್ಲ ನೀಲಕಂಠಪ್ಪ ಅವರದೂ ಅಲ್ಲ ಎಂದು ಮುನ್ನಾನಿಗೆ ಒಂದು ದಿನ ಗೊತ್ತಾಯಿತು. ಅದು ಕಾರ್ಪೊರೇಷನ್‌ನವರದಂತೆ. ಅಲ್ಲಿ ಪೋಸ್ಟರ್‌ ಹಚ್ಚುವುದು ಅಪರಾಧವಂತೆ. ಹಾಗಾಗಿಯೇ ಪೋಸ್ಟರ್‌ ಹಚ್ಚುವ ಸಂದರ್ಭಗಳಲ್ಲಿ ನೀಲಕಂಠಪ್ಪ ತನ್ನ ರೌಡಿ ಪಡೆಯನ್ನೆಲ್ಲ ಅಲರ್ಟ್‌ ಆಗಿ ಇಟ್ಟಿರುತ್ತಾರೆ ಎಂದು ಅರ್ಥವಾಗಲು ಮುನ್ನಾನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಅದಕ್ಕೆ ಕಾರಣ ಶೆಟ್ಟಿಗಾರ್‌.

ಶೆಟ್ಟಿಗಾರ್‌ ಎಂಬುವವರೊಬ್ಬರು ಮುನ್ನಾನಿಗೆ ಅದು ಹೇಗೋ ಪರಿಚಯ ಆಗಿದ್ದರು. ಮಂಗಳೂರು ಕಡೆಯವರು. ಕಾಂಟ್ರಾಕ್ಟರ್‌. ಇತ್ತೀಚೆಗೆ ಕಾರ್ಪೊರೇಷನ್‌ನವರಿಂದ ಅವರೊಂದು ಕಾಂಟ್ರಾಕ್ಟ್‌ ಪಡೆದುಕೊಂಡಿದ್ದರು.

ಅದೆಂದರೆ ನಗರದ ಕಾಂಪೌಂಡು, ಗೋಡೆ, ರೋಡ್‌ ಡಿವೈಡರ್‌ಗಳನ್ನೆಲ್ಲ ನೋಟೀಸು, ಪೋಸ್ಟರುಗಳಿಂದ ರಕ್ಷಿಸುವುದು. ಯಾರಾದರೂ ನೋಟೀಸು, ಪೋಸ್ಟರು ಹಚ್ಚಿದರೆ ಅದನ್ನು ಕೀಳುವುದು. ಸರಿಯಾಗಿ ಹೇಳಬೇಕೆಂದರೆ ಕೀಳಿಸುವುದು.

ಮುನ್ನಾನಿಗೂ ಕೆಲಸಕ್ಕೂ ಭಾವನಾತ್ಮಕ ಸಂಬಂಧವೇನೂ ಇರಲಿಲ್ಲ. ರಾತ್ರಿಯಾದರೆ ಆತ ನೀಲಕಂಠಪ್ಪ ಅವರ ಬಳಿ ಕೆಲಸ ಮಾಡುತ್ತಿದ್ದ. ಬೆಳಗಾದರೆ ಶೆಟ್ಟಿಗಾರ್‌ ಬಳಿ. ವಿಚಿತ್ರವೆಂದರೆ ಬಹಳಷ್ಟು ಸಲ ಅವನು ಹಚ್ಚಿದ ಪೋಸ್ಟರ್‌ಗಳನ್ನು ಅವನೇ ಕೀಳುತ್ತಿದ್ದ. ಅವನು ಜೀವ ಕೊಟ್ಟ ಹೀರೋಗಳು ಅವನಿಂದಲೇ ಸಾಯುತ್ತಿದ್ದರು.

***

ಗಾಂಧೀಬಜಾರ್‌ ಪಿಚ್ಚರ್‌ ನೋಡಿದ ಮೇಲೆ ಒಂದಷ್ಟು ದಿನ ಮುನ್ನಾನ ತಲೆಯಲ್ಲಿ ಪಿಚ್ಚರ್‌ ನಡೆಯುವುದೇ ನಿಂತುಹೋಯಿತು. ತಲೆಯೊಳಗಿದ್ದ ಪ್ರಾಜೆಕ್ಟರನ್ನೇ ಹಾಳುಮಾಡಿಬಿಡುವಂಥದ್ದು ಆ ಪಿಚ್ಚರ್‌ನಲ್ಲಿ ಏನಿತ್ತು ಎಂದು ಅವನಿಗೆ ಆಶ್ಚರ್ಯವಾಗಿತ್ತು.

ಒಂದಷ್ಟು ದಿನ ಅಷ್ಟೇ!

ಪೋಸ್ಟರ್‌ ಹಚ್ಚಿ ಹಚ್ಚಿ ಹರಿದು ಹರಿದು ಅವನಿಗೆ ಕೊನೆಗೊಂದು ದಿನ ಆ ಪಿಚ್ಚರ್‌ ನೋಡಿದ್ದೇ ಮರೆತುಹೋಯಿತು. ಪುನಃ ತಲೆಯೊಳಗೆ ಪಿಚ್ಚರ್‌ ನಡೆಯುವುದು ಆರಂಭವಾಯಿತು. ಅದೇ ಹುಡುಗಿ. ಗೊತ್ತಿರುವವಳೇ. ಅವಳ ಅಮ್ಮ ಅಂದರೆ ಆಂಟಿ ಕೂಡ ತನಗೆ ಎಷ್ಟು ಪ್ರೀತಿ. ಹಾಗೆ ನೋಡಿದರೆ ಆಂಟಿಯಿಂದಲೇ ಅಲ್ಲವೇ ಅವಳೂ ಇಷ್ಟವಾಗಿದ್ದು.

ಈಗಲೂ ಎಲ್ಲವೂ ನೆನಪಿದೆ. ಅವಳು ತನ್ನವಳಾಗಬೇಕು ಎಂದು ಅನಿಸಿ ಎಷ್ಟೆಲ್ಲ ದಿನಗಳಾಯಿತು? ಒಂದು ವರ್ಷ. ಅಂದರೆ ಹನ್ನೆರಡು ತಿಂಗಳು, ಐವತ್ತೆರಡು ವಾರ. ಮೂನ್ನೂರಾ ಅರವತ್ತೈದು ದಿನ. ಎಷ್ಟೋ ಸಾವಿರ ಗಂಟೆ. ಎಷ್ಟೋ ಸಾವಿರ ನಿಮಿಷ.

ಎಲ್ಲವೂ ನೆನಪಿದೆ.

***

ಆ ಹುಡುಗಿಯನ್ನು ಮುನ್ನಾ ಪ್ರೀತಿಸಿದ್ದ ಅಂದರೆ ತಪ್ಪಾಗುತ್ತದೆ. ಆತನ ಭಾವನೆ ನಿಜವಾಗಿಯೂ ಏನಿತ್ತು ಎನ್ನುವುದು ಸ್ವತಃ ಅವನಿಗೂ ಗೊತ್ತಿಲ್ಲ. ಆದರೆ ಎಲ್ಲವೂ ಚೆನ್ನಾಗಿತ್ತು. ಒಂದು ದಿನ ಅವನನ್ನು ಮತ್ತು ಅವಳನ್ನು ಮುನ್ನಾ ಜೊತೆಯಾಗಿ ನೋಡುವ ತನಕ. ಜೊತೆ ಜೊತೆಯಾಗಿ ನೋಡುವ ತನಕ. ಅವನಿಗೆ ಇನ್ನೂ ನೆನಪಿದೆ. ಗಾಂಧೀಬಜಾರ್‌ ಪಿಚ್ಚರ್‌ ಕುರಿತು ಮೊದಲ ಸಲ ಓದಿದ ದಿನವೇ ಅವನು ಅವರಿಬ್ಬರನ್ನೂ ಜೊತೆಯಾಗಿ ನೋಡಿದ್ದು.

ಅಲ್ಲಿಂದ ಮುಂದಕ್ಕೆ ತಲೆಯಲ್ಲಿ ಸೆನ್ಸಾರಿಲ್ಲದ ಪಿಚ್ಚರ್‌ಗಳ ಅಸಂಖ್ಯ ಪ್ರದರ್ಶನಗಳಾದವು. ಒಂದು ಪ್ರದರ್ಶನದಿಂದ ಒಂದು ಪ್ರದರ್ಶನಕ್ಕೆ ವಿರಾಮ ಕೂಡ ಬಹಳಷ್ಟು ಸಲ ಚಿಕ್ಕದಿರುತ್ತಿತ್ತು. ಇಪ್ಪತ್ನಾಲ್ಕು ಗಂಟೆ. ಏಳೂ ದಿನ. ಅಸಂಖ್ಯ ಪ್ರದರ್ಶನಗಳು. ಮನಸ್ಸಿನ ಪರದೆಗಳ ಮೇಲೆ ಪ್ರದರ್ಶನ ನಡೆಯುತ್ತಿರುವಾಗಲೇ ನಿದ್ದೆ ಬರುತ್ತಿತ್ತು. ಬೆಳಿಗ್ಗೆ ಪ್ರದರ್ಶನ ಆರಂಭವಾಗುವಾಗ ಎಚ್ಚರ ಆಗಿಬಿಡುತ್ತಿತ್ತು. ಪ್ರದರ್ಶನ ಆರಂಭವಾದೊಡನೆ ತನಗೆ ಎಚ್ಚರ ಆಗುತ್ತದೋ ಅಥವಾ ಎಚ್ಚರ ಆದೊಡನೆ ಪ್ರದರ್ಶನ ಆರಂಭ ಆಗುತ್ತದೋ ಎಂಬ ವಿಷಯದಲ್ಲಿ ಮುನ್ನಾನಿಗೇ ಇನ್ನೂ ಸ್ಪಷ್ಟತೆಯಿರಲಿಲ್ಲ.

ಸೆನ್ಸಾರೇ ಇಲ್ಲದ ಪಿಚ್ಚರ್‌ಗಳು ಎಂದರೆ ಆಶ್ಚರ್ಯ ಆಗಬಹುದು.

ನಾಯಕ ನಾಯಕಿಗೆ ಬಟ್ಟೆಯೇ ಇರುತ್ತಿರಲಿಲ್ಲ. ತಬ್ಬಿಕೊಳ್ಳುವುದು, ಮುತ್ತಿಕ್ಕುವುದು, ಹೊಕ್ಕುಳ ಮೇಲೆ ದ್ರಾಕ್ಷಿ ಹಣ್ಣು ಬೀಳಿಸುವಂಥ ದೃಶ್ಯಗಳು ಇರುತ್ತಲೇ ಇರಲಿಲ್ಲ. ಈ ಪಿಚ್ಚರ್‌ಗಳಲ್ಲಿ ಹೀರೋ ಹೀರೋಯಿನ್‌ ಯಾವಾಗಲೂ ರತಿಕ್ರೀಡೆಯಲ್ಲಿ ತೊಡಗಿರುತ್ತಿದ್ದರು. ಆರಂಭದಲ್ಲಿ ಹೀರೋ ಜಾಗದಲ್ಲಿ `ಅವನು’ ಇರುತ್ತಿದ್ದ. ಇತ್ತೀಚೆಗೆ ಆ ಜಾಗದಲ್ಲಿ ಮುನ್ನಾ. ಹೀರೋಯಿನ್‌ ಜಾಗದಲ್ಲಂತೂ ಯಾವಾಗಲೂ ಅವಳು!

ಅವಳು ಎಂದರೆ ಅವಳು.

ಹನ್ನೆರಡು ಮೆಟ್ಟಿಲು ಇಳಿಯಬೇಕು.

ಮುಂದೆ ನಾಲ್ಕು ಹೆಜ್ಜೆ.

ತುಕ್ಕು ಹಿಡಿದ ಗೇಟು.

ರಸ್ತೆ.

ಬಸ್‌ಸ್ಟಾಪ್‌.

ಬಲಕ್ಕೆ ಅರವತ್ತು ಹೆಜ್ಜೆ.

ಡೆಡ್‌ ಎಂಡ್‌.

ಎಡಕ್ಕೆ ನೂರಿಪ್ಪತ್ತು ಹೆಜ್ಜೆ.

ಕ್ರಾಸ್‌ ಒಂದು.

ಮತ್ತೆ ನಲವತ್ತು ಹೆಜ್ಜೆ.

ಕ್ರಾಸ್‌ ಎರಡು.

ಇನ್ನೂ ನಲವತ್ತು ಹೆಜ್ಜೆ.

ಕ್ರಾಸ್‌ ಮೂರು.

ಮತ್ತೆ ಎಡಕ್ಕೆ.

ಇನ್ನೂ ಐವತ್ತು ಹೆಜ್ಜೆ.

ಅಲ್ಲಿದೆ ಹಸಿರು ಮನೆ. ಕೆಂಪು ಮನೆಯ ಪಕ್ಕ. ಬಣ್ಣ ಕಳೆದುಕೊಂಡ ಮನೆಯ ಮುಂದೆ. ಆ ಹಸಿರು ಮನೆಯ ಎದುರಿಗೆ ಗ್ರಿಲ್‌ ಇದೆ. ಒಳಕ್ಕೆ ಹೋದರೆ ಮೆಟ್ಟಿಲು.

ಒಂದು,ಎರಡು, ಮೂರು, ನಾಲ್ಕು, ಐದು, ಆರು, ಏಳು. ಅಷ್ಟೇ!

ಅದು ಮೊದಲ ಮಹಡಿ. ಬಾಲಿಗಿಲಿದೆ. ಪಕ್ಕಕ್ಕೆ ಒಂದು ಸಣ್ಣ ಸ್ವಿಚ್ಚು. ಅದನ್ನು ಅದುಮಿದರೆ ಆಂಟಿ ಬರುತ್ತಾಳೆ. ಇಲ್ಲದಿದ್ದರೆ ಅವಳು.

ಅವಳು ಎಂದರೆ ಅವಳು.

***

ಸಂಜೆಯಾಗಿತ್ತು. ಮುನ್ನಾ ಯಾಕೋ ಮೈಸೂರು ರಸ್ತೆಯಲ್ಲಿದ್ದ. ಶುಕ್ರವಾರ ಆಗಿದ್ದರಿಂದ ಕೆಲಸವೂ ಕಮ್ಮಿಯಿತ್ತು. ಹೋಟೆಲ್‌ ಎದುರುಗಡೆ ನಿಂತು ಸಿಗರೇಟು ಸೇದಿದ. ತಿನ್ನೋಣ ಅನಿಸಿರಬೇಕು. ಗೋಬಿ ಮಂಚೂರಿಗೆ ಹೇಳಿದ.

ಅಷ್ಟರಲ್ಲಿ ಅವನ ಗಮನ ಎದುರಿಗಿರುವ ಕ್ಲಬ್‌ ಕಡೆ ಹೋಯಿತು.

ಅಲ್ಲಿ ಅವನು ಮತ್ತು ಅವಳನ್ನು ಮುನ್ನಾ ಇನ್ನೊಂದು ಸಲ ನೋಡಿಬಿಟ್ಟ. ಜೊತೆ ಜೊತೆಯಾಗಿ ನೋಡಿಬಿಟ್ಟ.

ಅವನು ಪಲ್ಸರ್‌ ಬೈಕಿನಲ್ಲಿ ಬಂದಿದ್ದ. ಅವಳು ಅವನಿಗೆ ಅಂಟಿಕೊಂಡು ಕುಳಿತಿದ್ದಳು. ಅರೆರೇ! ಸ್ಕರ್ಟ್‌ ಹಾಕಿದ್ದಾಳೆ. ತೋಳಿಲ್ಲದ ಟಾಪ್‌ ತೊಟ್ಟಿದ್ದಾಳೆ. ಇಷ್ಟು ದಿನ ಕಂಡಿದ್ದಕ್ಕಿಂತ ಬೇರೆಯದೇ ರೀತಿ ಕಾಣುತ್ತಿದ್ದಾಳೆ. ಮುಖಕ್ಕೆ ಬಣ್ಣವನ್ನೂ ಮೆತ್ತಿಕೊಂಡಂತಿದೆ. ಪಿಚ್ಚರ್‌ ಹೀರೋಯಿನ್‌ಳ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿವೆ.

ಇವಳು ಸೂಜಿ ಹೌದೋ ಅಲ್ಲವೋ ಎಂದೇ ಮುನ್ನಾನಿಗೆ ಗಾಬರಿಯಾಯಿತು. ಆದರೆ ಹೌದು. ಅವಳು ಸೂಜಿಯೇ. ಮೂರು ಕ್ರಾಸಿನ ಆ ಕಡೆಯ ಹಸಿರು ಮನೆಯ ಹುಡುಗಿ. ಬಸ್‌ಸ್ಟಾಪಿಗೆ ಬಂದು ನಿಲ್ಲುವವಳು. ಹೀರೋಯಿನ್‌. ಅವಳ ಜೊತೆಯಿದ್ದವನೂ ಅವನೇ. ಅಂದರೆ ಯತಿ.

ವಿಲನ್‌?

……..

ಮುನ್ನಾನ ತಲೆಯಲ್ಲಿದ್ದ ಪ್ರಾಜೆಕ್ಟರ್‌ ಪುನಃ ಕೆಲಸ ಆರಂಭಿಸಿತು. ಈವನಿಂಗ್‌ ಶೋ ಶುರುವಾಯಿತು. ಮನಸ್ಸಿನ ಪರದೆಗಳ ಮೇಲೆ ಚಿತ್ರಗಳು ಮೂಡತೊಡಗಿದವು. ಹೀರೋ ಅಂದರೆ ಯತಿ, ಈಗ ಹೀರೋಯಿನ್‌ ಅಂದರೆ ಸೂಜಿಯನ್ನು ತಬ್ಬಿಕೊಂಡಿದ್ದಾನೆ. ಕಟ್‌ ಮಾಡಿದರೆ ಬೆಡ್‌ ರೂಮು. ನಗ್ನ ಚಿತ್ರಗಳು. ಪ್ರಣಯ. ರತಿಕ್ರೀಡೆ.

ಯಾವುದೂ ಸೆನ್ಸಾರಿಲ್ಲ.

ಮುನ್ನಾನಿಗೆ ಸಿಟ್ಟು ಬಂತು. ಆಗಲೇ ಯತಿ ಮತ್ತು ಸೂಜಿ ಒಬ್ಬರ ಕೈಯ್ಯನ್ನೊಬ್ಬರು ಹಿಡಿದುಕೊಂಡು ಕ್ಲಬ್ಬು ಪ್ರವೇಶಿಸಿದ್ದನ್ನು ಮುನ್ನಾ ನೋಡಿದ್ದ.

ವಿಪರೀತ ನೋವಾಯಿತು.

ಫುಟ್‌ಪಾತ್‌ ದಾಟಿದ. ರಸ್ತೆ ದಾಟಿದ. ಮತ್ತೆ ಫುಟ್‌ಪಾತ್‌ ದಾಟಿದ. ಕಾಂಪೌಂಡು ದಾಟಿ ಕ್ಲಬ್‌ನ ಬಾಗಿಲಿಗೆ ಹೋದ. ಅವನಿಗೆ ಈಗ ಪಿಚ್ಚರ್‌ ಹೀರೋ ಥರ ಸಿಟ್ಟು ಬಂದಿತ್ತು.

ಒಳಕ್ಕೆ ಹೋಗುತ್ತಿದ್ದರೆ ಸೆಕ್ಯುರಿಟಿ ತಡೆದ.

ಮುನ್ನಾನ ಕೋಪ ಇನ್ನಷ್ಟು ಹೆಚ್ಚಾಯಿತು. ಅವನೊಂದಿಗೆ ವಾಗ್ವಾದವಾಯಿತು. ಹಾಗೆಲ್ಲ ಒಳಕ್ಕೆ ಹೋಗುವಂತಿಲ್ಲ ಎಂದ ಸೆಕ್ಯುರಿಟಿ. ಮತ್ತೆ ಹೇಗೆಲ್ಲ ಹೋಗಬಹುದು ಎಂದು ಕೇಳಿದ ಮುನ್ನಾ.

`ಪೇರ್‌… ಒನ್ಲಿ ಪೇರ್‌’ ಎಂದ ಸೆಕ್ಯೂರಿಟಿ.

ಪುನಃ ಮುನ್ನಾಗೆ ಪಿಚ್ಚರ್‌ ಹೀರೋ ಥರ ಸಿಟ್ಟು ಬಂತು. ಸೆಕ್ಯುರಿಟಿ ಮುಖಕ್ಕೆ ಸರಿಯಾಗಿ ಗುದ್ದಿದ. ಅವನು ಬೀಳುತ್ತಿದ್ದರೆ ಇವನು ಒಳಕ್ಕೆ ಹೋಗತೊಡಗಿದ.

ಮತ್ತೆ ನಿಂತ.

ಹಿಂತಿರುಗಿ ಬಂದವನು ಸೆಕ್ಯುರಿಟಿಗೆ ಇನ್ನೊಮ್ಮೆ ತದಕಿದ.

`ಪೇರ್‌… ಒನ್ಲಿ ಪೇರ್‌’ ಎಂದವನು ಕ್ಲಬ್ಬಿನೊಳಕ್ಕೆ ಹೋದ.

***

ಅಲ್ಲಿ ಎಲ್ಲವೂ ಪಿಚ್ಚರ್‌ನಂತೆಯೇ ಇತ್ತು. ಸಿಕ್ಕಾಪಟ್ಟೆ ಹುಡುಗರಿದ್ದರು. ಪ್ರತಿ ಹುಡುಗನಿಗೂ ಒಬ್ಬಳು ಹುಡುಗಿಯಿದ್ದಳು. ಬಾಯ್‌ ಕಟ್‌ ಮಾಡಿದ ಹುಡುಗಿಯರು, ಜಡೆ ಬಿಟ್ಟ ಹುಡುಗರು. ಸ್ಲೀವ್‌ಲೆಸ್‌ಗಳು, ಟಾಪ್‌ಲೆಸ್‌ಗಳು. ಕಿವಿಗಡಚಿಕ್ಕುವ ಸಂಗೀತ.

ಹುಡುಗರು, ಹುಡುಗಿಯರು ಕೈಯ್ಯಲ್ಲಿ ಗ್ಲಾಸು ಹಿಡಿದುಕೊಂಡಿದ್ದರು. ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಬೆಳಕಿದ್ದೂ ಅಲ್ಲಿ ಕತ್ತಲೆಯಿತ್ತು. ಮುನ್ನಾನಿಗೆ ಹುಡುಕುವ ಕೆಲಸ ಕಷ್ಟವಾಯಿತು. ಎಲ್ಲರೂ ಸೂಜಿಯಂತೆಯೇ ಕಾಣುತ್ತಿದ್ದಾರೆ. ಸೂಜಿಯೂ ಎಲ್ಲರಂತೆಯೇ ಕಾಣುತ್ತಿದ್ದಾಳೆ. ಸ್ಕರ್ಟ್‌ ಹಾಕಿದ ಹುಡುಗಿಯರಿಗಾದರೂ ಲೆಕ್ಕವಿದೆಯೇ?

`ಅರೆ ಹೋ ಹಮ್ಮ

ಹಮ್ಮ ಹಮ್ಮ ಹಮ್ಮ’

ಮುನ್ನಾನ ಹುಡುಕಾಟ ಮುಂದುವರೆಯಿತು. ಸೂಜಿ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ಅವನಿಗೆ ಗೊಂದಲವೂ ಆಯಿತು. ಇವಳಲ್ಲ. ಅವಳಲ್ಲ. ಅವಳೂ ಅಲ್ಲ.

ಪುನಃ ತಲೆಯಲ್ಲಿ ಪಿಚ್ಚರ್‌.

ಸೆನ್ಸಾರಿಲ್ಲದ ರೀಲಿಲ್ಲದ ಪಿಚ್ಚರ್‌!

ಈಗ ಸಿಕ್ಕಿದಳು ಸೂಜಿ. ಅವಳು ಬೆವರುವುದು ನೋಡಿ. ಅದು ಹೇಗೆ ತಬ್ಬಿಕೊಂಡಿದ್ದಾಳೋ ನೋಡಿ. ಯತಿ. ಅವನೂ ಬೆವರಿದ್ದಾನೆ. ಕೈಯ್ಯಲ್ಲಿ ಏನೋ ಇದೆ. ಅವಳನ್ನು ತಬ್ಬಿಕೊಂಡಿದ್ದಾನೆ.

ಮುನ್ನಾ ಮಾತ್ರ ದೂರದಲ್ಲಿ ನಿಂತಿದ್ದಾನೆ.

ಅಷ್ಟರಲ್ಲಿ ಸೂಜಿಗೆ ಮುನ್ನಾ ಬಂದಿದ್ದು ಗೊತ್ತಾಗಿದೆ.

`ಅರೆಹೋ ಹಮ್ಮ

ಹಮ್ಮ ಹಮ್ಮ ಹಮ್ಮ’

ಇಡೀ ವಾತಾವರಣಕ್ಕೇ ಅಲ್ಲೊಂದು ನಶೆಯಿದೆ. ಎಲ್ಲರೂ ಅದನ್ನು ಕುಡಿದವರಂತೆ ಕಾಣುತ್ತಿದ್ದಾರೆ. ಕುಣಿಯುತ್ತಿದ್ದಾರೆ. ಸೂಜಿ ಈಗ ಓಡಿ ಬಂದು ಮುನ್ನಾನನ್ನೂ ಅದಕ್ಕೆ ಎಳೆದುಕೊಳ್ಳುತ್ತಾಳೆ.

ಮುನ್ನಾನಿಗೆ ಆಶ್ಚರ್ಯವಾಗುತ್ತದೆ. ಗಾಂಧೀಬಜಾರ್‌ ಪಿಚ್ಚರ್‌ನಲ್ಲಿ ಹೀಗೆಲ್ಲ ಆಗಿರಲಿಲ್ಲ. ಮುನ್ನಾನನ್ನೂ ಈಗ ತನ್ನ ಜೊತೆಯಲ್ಲಿ ಹೆಜ್ಜೆ ಹಾಕಲು ಎಳೆದುಕೊಂಡಿದ್ದಾಳೆ.

ಯತಿಯನ್ನು ಎಳೆದುಕೊಂಡಂತೆ.

ಗೊಂದಲವಾಗುತ್ತದೆ. ಮುನ್ನಾ ಕುಣಿಯಲು ಪ್ರಯತ್ನ ಪಡುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಹೆಜ್ಜೆ ಹಾಕುವುದು, ಕೈ ಬೆರಳು ತಿರುಗಿಸುವುದು ಉಹೂಂ ಒಂದೂ ಸಾಧ್ಯವಾಗುತ್ತಿಲ್ಲ.

ಸಿಟ್ಟು ಬರುತ್ತದೆ.

***

ಸ್ವಲ್ಪವೇ ಹೊತ್ತಿನಲ್ಲಿ ಸೂಜಿಯನ್ನು ಮುನ್ನಾ ಕ್ಲಬ್ಬಿನಿಂದ ಹೊರಕ್ಕೆ ಎಳೆದುಕೊಂಡು ಬರುತ್ತಿದ್ದಾನೆ. ಆಗಲೇ ರಾತ್ರಿಯಾಗಿದೆ. ಸೂಜಿ ಬೇಡ ಎನ್ನುತ್ತಿದ್ದಾಳೆ. ಯತಿಗೆ ಗೊಂದಲವಾಗಿದೆ. ಅವರಿಬ್ಬರ ಜಗಳ ಬಿಡಿಸಲು ಆತ ಹೆಣಗಾಡುತ್ತ ಹಿಂಬಾಲಿಸುತ್ತಿದ್ದಾನೆ.

ಮುನ್ನಾನಿಗೆ ವಿಚಿತ್ರ ಆವೇಶ ಬಂದಿದೆ.

ಪಿಚ್ಚರ್‌ ಹೀರೋ ಥರ.

ಈಗ ಸೂಜಿಯನ್ನು ಎಳೆದುಕೊಂಡು ಮುನ್ನಾ ಪಲ್ಸರ್‌ ಬೈಕಿನ ತನಕ ಬಂದಿದ್ದಾನೆ. ಅವರನ್ನು ಹಿಂಬಾಲಿಸಿಕೊಂಡು ಯತಿ ಬಂದಿದ್ದಾನೆ.

`ಕೀ ಕೊಡೋ’

ಮುನ್ನಾ ಕೇಳುತ್ತಾನೆ.

ಯತಿ ಕೇಳಿಸಿಕೊಳ್ಳುವುದಿಲ್ಲ.

`ಕೀ ಕೊಡು ಅಂದ್ರೆ’

ಈ ಸಲ ಬೆದರಿಕೆಯನ್ನೇ ಹಾಕುತ್ತಿರುವಂತಿದೆ.

ಯತಿ ಕೀ ಕೊಡುತ್ತಾನೆ. ಪಲ್ಸರ್‌ ಬೈಕು ಸ್ಟಾರ್ಟ್‌ ಆಗುತ್ತದೆ. ಸೂಜಿಗೆ ಕುಳಿತುಕೊಳ್ಳಲು ಹೇಳುತ್ತಾನೆ. ಸ್ಕರ್ಟು. ಸ್ಲೀವ್‌ಲೆಸ್‌ ಟಾಪಿನ ಸೂಜಿ, ಕುಳಿತುಕೊಳ್ಳುತ್ತಾಳೆ. ಅವಳ ಹಿಂದೆ ಯತಿಗೂ ಕುಳಿತುಕೊಳ್ಳಲು ಹೇಳುತ್ತಾನೆ ಮುನ್ನಾ.

ಪಲ್ಸರ್‌ ಬೈಕು ಓಡತೊಡಗುತ್ತದೆ.

ಸೂಜಿಯ ಎದೆ ಮುನ್ನಾನ ಬೆನ್ನಿಗೆ `ಸುಚ್ಚು’ತ್ತಿದೆ.

ಥ್ರಿಬ್ಬಲ್‌ ರೈಡಿಂಗ್‌!

ಗಾಡಿ ಓಡಿಸುವಾಗಲೂ ಮುನ್ನಾನ ತಲೆಯಲ್ಲಿ ಪಿಚ್ಚರ್‌ ಮುಂದುವರೆದಿದೆ. ಆದರೆ ಗಾಂಧೀಬಜಾರ್‌ ದಿಕ್ಕಿನಲ್ಲಿ ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವನಿಗೆ ಗೊಂದಲವಾಗುತ್ತದೆ. ಸೂಜಿ ತನಗೆ ಅಂಟಿಕೊಂಡು ಕುಳಿತಿದ್ದಾಳೆ.

ಸಂತೋಷ.

ಆದರೆ ಸೂಜಿಗೆ ಅಂಟಿಕೊಂಡು ಯತಿ ಕುಳಿತಿದ್ದಾನೆ !

ಮುನ್ನಾನ ತಲೆಯಲ್ಲಿ ಪುನಃ ಪಿಚ್ಚರ್‌. ಸೆನ್ಸಾರಿಲ್ಲದ ಪಿಚ್ಚರ್‌.

ಪಲ್ಸರ್‌ ಗಾಡಿ ನಿಲ್ಲುತ್ತದೆ. ಯತಿಗೆ ಇಳಿಯಲು ಸೂಚಿಸುತ್ತಿದ್ದಾನೆ ಮುನ್ನಾ. ಯತಿ ಇಳಿದುಕೊಳ್ಳುತ್ತಾನೆ. ತಿರುಗಿ ಕುಳಿತುಕೋ ಎನ್ನುತ್ತಿದ್ದಾನೆ. ಯತಿಗೆ ಅರ್ಥವಾಗುವುದಿಲ್ಲ. ತಿರುಗಿ ಅಂದರೆ ಹಿಂಬದಿಗೆ ಮುಖ ಹಾಕಿ ಕುಳಿತುಕೋ ಎಂದು ಗದರುತ್ತಾನೆ . ಸುಮ್ಮನೇ ನಿಂತ ಯತಿಯನ್ನು ನೋಡಿ ಮುನ್ನಾಗೆ ಪುನಃ ರೇಗುತ್ತದೆ.

ಈಗ ಯತಿ, ಸೂಜಿಗೆ ಬೆನ್ನು ಹಾಕಿ ಹಿಂಬದಿ ನೋಡುತ್ತ ಬೈಕಿನ ಮೇಲೆ ಕುಳಿತುಕೊಳ್ಳುತ್ತಾನೆ. ಸೂಜಿ, ಮುನ್ನಾಗೆ ಅಂಟಿಕೊಂಡಿದ್ದಾಳೆ. ಸಂತೋಷವಾಗುತ್ತದೆ.

ಮುನ್ನಾ ಗಾಡಿ ಓಡಿಸುತ್ತಿದ್ದಾನೆ.

***

ಗಾಂಧೀಬಜಾರಿನ ಆ ಮೂರು ಕ್ರಾಸುಗಳನ್ನು ದಾಟುತ್ತಾನೆ. ಬಲಕ್ಕೆ ತಿರುಗಿ ಬರುತ್ತಾನೆ. ಬಸ್‌ಸ್ಟಾಪು. ಅದರ ಎದುರು ತುಕ್ಕು ಹಿಡಿದ ಗೇಟು. ದಾಟುತ್ತಾನೆ. ಅಲ್ಲಿಂದ ಮೆಟ್ಟಿಲು ಹತ್ತಬೇಕು. ಒಂದು,ಎರಡು,ಮೂರು, ನಾಲ್ಕು…ಒಟ್ಟೂ ಹನ್ನೆರಡು. ಬಾಗಿಲು ತೆರೆದರೆ ಅದು ಮುನ್ನಾನ ಅಡ್ಡೆ.

ಅಲ್ಲಿ ಸೂಜಿ ತನ್ನವಳು ಎಂದು ವಾದಿಸುತ್ತಾನೆ ಮುನ್ನಾ. ಯತಿ ಪ್ರತಿಭಟಿಸುತ್ತಾನೆ. ಅಲ್ಲೊಂದು ಹೊಡೆದಾಟವೇ ಆಗುತ್ತದೆ. ಮುನ್ನಾನಿಗೆ ಥೇಟ್‌ ಗಾಂಧೀಬಜಾರ್‌ ಹೀರೋ ಥರ ಸಿಟ್ಟು ಬಂದಿದೆ. ಅವನು ಯತಿಗೆ ಹೊಡೆಯುತ್ತಿದ್ದಾನೆ.

ಆದರೆ ಪಿಚ್ಚರ್‌ ಥರ ಎಫೆಕ್ಟ್‌ ಇಲ್ಲ. ಯತಿ ಸಾಕಷ್ಟು ದೊಡ್ಡದಾಗಿಯೇ ಕೂಗಿಕೊಳ್ಳುತ್ತಿದ್ದರೂ ಆ ಎಫೆಕ್ಟ್‌ ಇಲ್ಲ ಎಂದು ಮುನ್ನಾನಿಗೆ ಅನಿಸುತ್ತದೆ. ಪಿಚ್ಚರ್‌ನಲ್ಲಿ ನಾಯಕಿ ಕೂಗಿಕೊಂಡಿರಲಿಲ್ಲ. ಆದರೆ ಇಲ್ಲಿ ಸೂಜಿ ಕೂಗಿಕೊಳ್ಳುತ್ತಿದ್ದಾಳೆ. ತಾನು ಯತಿಯನ್ನು ಹೊಡೆಯುತ್ತಿದ್ದರೆ ಕೂಗಿಕೊಳ್ಳುತ್ತಿದ್ದಾಳೆ. ಕೂಗುತ್ತ ಕೂಗುತ್ತ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಸೂಜಿಗೆ ರಕ್ತ ಕಂಡರೆ ಆಗುವುದಿಲ್ಲ.

ಹೊಡೆದಾಟದ ಸೀನು ಎಷ್ಟೋ ಹೊತ್ತು ಮುಂದುವರೆಯುತ್ತದೆ. ಮುನ್ನಾನ ತಲೆಯಲ್ಲಿ ಪಿಚ್ಚರ್‌ ರೀಲು ಸುತ್ತಿ ಸುತ್ತಿ ಸುಸ್ತಾಗಿ ನಿಲ್ಲುತ್ತದೆ. ಆತ ಅಲ್ಲಿಂದ ನಿದ್ರಾ ನಡಿಗೆಯಲ್ಲಿಯೇ ಹೊರಕ್ಕೆ ಹೊರಡುತ್ತಾನೆ. ಆಶ್ರಮ ಸರ್ಕಲ್ಲಿನಿಂದ ನಡೆಯತೊಡಗುತ್ತಾನೆ.

ಗೊತ್ತಿಲ್ಲದ ನಿಲ್ದಾಣದ ಕಡೆ.

***

ರಾತ್ರಿ ಸವೆದು ಸರಿರಾತ್ರಿಯಾಗಿದೆ.

ಸಣ್ಣದಾಗಿ ಮಳೆ ಬಂದು ನಿಂತಿದೆ. ಬಾರಿನಿಂದ ಹೊರಬಿದ್ದು ಮುನ್ನಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾನೆ. ಬಾಯಲ್ಲಿ ಸಿಗರೇಟಿದೆ. ಕೂದಲು ಎಂದಿಗಿಂತ ಹೆಚ್ಚು ಕೆದರಿದೆ. ಹೌದೋ ಅಲ್ಲವೋ ಎನ್ನುವಂತೆ ಆತ ಕೊಂಚ ತೂರಾಡಿಕೊಂಡು ಹೋಗುತ್ತಿದ್ದಾನೆ.

ಸೂಜಿ ಇಲ್ಲ.

ಯತಿ ಇಲ್ಲ.

ತಲೆಯಲ್ಲಿ ಪಿಚ್ಚರೂ ಇಲ್ಲ.

ಜಗತ್ತೆಲ್ಲ ಹಾಯಾಗಿದೆ, ನೆಮ್ಮದಿಯಾಗಿದೆ ಎಂದು ಮುನ್ನಾಗೆ ಅನಿಸುತ್ತದೆ. ಕಾರ್ಪೊರೇಷನ್‌ ದಾಟಿ ಕೆಂಪೆಗೌಡ ರಸ್ತೆಯಲ್ಲಿ ನಡೆಯುವಾಗ ಪೊಲೀಸ್‌ ಇನ್‌ಸ್ಪೆಕ್ಟರ್‌ ಹಿಡಿದುಕೊಳ್ಳುತ್ತಾನೆ. ಇನ್‌ಸ್ಪೆಕ್ಟರ್‌ ಏನೇನೋ ಕೇಳುತ್ತಿದ್ದರೆ ಮುನ್ನಾ ಹೋಗಿ ಫುಟ್‌ ಪಾತ್‌ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಪದ್ಮಾಸನ ಹಾಕಿ ಕುಳಿತುಬಿಡುತ್ತಾನೆ. ಇನ್‌ಸ್ಪೆಕ್ಟರ್‌ ಅಲ್ಲಿಗೆ ಬಂದು ಆತನನ್ನು ವಿಚಾರಿಸತೊಡಗುತ್ತಾನೆ.

ಮುನ್ನಾ ಕೇಳುತ್ತಲೇ ಇಲ್ಲ.

ಇನ್‌ಸ್ಪೆಕ್ಟರ್‌ಗೆ ಒಂದು ಸಿಗರೇಟ್‌ ಕೊಡಲು ಹೋಗುತ್ತಾನೆ. ಚಳಿಯಿದ್ದುದರಿಂದ ಅದನ್ನು ನಿರಾಕರಿಸುವುದು ಇನ್‌ಸ್ಪೆಕ್ಟರ್‌ಗೂ ಸಾಧ್ಯವಾಗುವುದಿಲ್ಲ. ಸಿಗರೇಟ್‌ ಹಚ್ಚಿಕೊಂಡು ಕೇಳುತ್ತಾನೆ.

`ಯಾರು?’

`ಮುನ್ನಾ?’

`ಇಲ್ಲೇನ್‌ ಮಾಡ್ತಿದ್ದೀಯಾ?’

`ನಡ್ಕೊಂಡ್‌ ಹೋಗ್ತಿದ್ದೀನಿ’

`ಇಷ್ಟೊತ್ತು ಏನ್‌ ಮಾಡ್ತಿದ್ದೆ?’

`ಪಿಚ್ಚರ್‌ ನೋಡ್ತಿದ್ದೆ. ಸೆಕೆಂಡ್‌ ಶೋ’

`ಸುಳ್ಳು’

`ಸತ್ಯ’

`ಸುಳ್ಳು’

`ಸತ್ಯ’

`ಎಲ್ಲಿ… ಟಿಕೆಟ್‌ ತೋರಿಸು?’

`ಟಿಕೆಟ್‌ ಅಲ್ಲೇ ಹರಿದು ಹಾಕ್ದೆ’

`ಸುಳ್‌ ಹೇಳ್ತೀಯಾ?’

`ಇಲ್ಲ ಸಾರ್‌’

`ಯಾವ ಪಿಚ್ಚರ್‌?’

`…..’

ಉತ್ತರವಿಲ್ಲ.

`ಯಾವ ಪಿಚ್ಚರ್‌?’

ಇನ್‌ಸ್ಪೆಕ್ಟರ್‌ ದನಿ ಗಡುಸಾಗಿದೆ.

`ಗಾಂಧೀಬಜಾರ್‌’

`ಸುಳ್ಳು’

`ಸುಳ್ಳಲ್ಲ ಸಾರ್‌’

`ಸುಳ್ಳು’

`ಸುಳ್ಳಲ್ಲ ಸಾರ್‌’

`ಹೇಗ್‌ ಹೇಳ್ತೀಯಾ?’

`ಕುತ್ಕೊಳ್ಳಿ. ಬೇಕಿದ್ರೆ ಪಿಚ್ಚರ್‌ ಕತೆ ಹೇಳ್ತೀನಿ’

ಏನೆನಿಸಿತೋ. ಇನ್‌ಸ್ಪೆಕ್ಟರ್‌ ಕೂಡ ಅಷ್ಟೇ ಹುಚ್ಚನಿರಬೇಕು. ಕುಳಿತುಕೊಳ್ಳುತ್ತಾನೆ. ಮುನ್ನಾ ಇನ್ನೊಂದು ಸಿಗರೇಟ್‌ ಕೊಟ್ಟು ಕತೆ ಹೇಳತೊಡಗುತ್ತಾನೆ.

`ಇದ್‌ ಬಂದ್‌ಬಿಟ್ಟು ಒಂದ್‌ ನಗರ ಸಾರ್‌. ಬೆಂಗಳೂರು ಅಂತ್ಲೆ ಅಂದ್ಕೊಳ್ಳಿ. ಅಲ್ಲಿ ಅವನು, ಅವಳು ಮತ್ತು ಅವನು ಇರ್ತಾರೆ’

ಕತೆ ಶುರು ಮಾಡುತ್ತಾನೆ ಮುನ್ನಾ.

`ಸರಿಯಾಗ್‌ ಹೇಳೋ. ಅವನು, ಅವಳು ಮತ್ತು ಅವನು ಅಂದರೆ ಹೇಗೆ?’

ಇನ್‌ಸ್ಪೆಕ್ಟರ್‌ ಗದರುತ್ತಾರೆ.

`ಪಿಚ್ಚರ್‌ ಇರೋದೆ ಹಾಗೆ ಸಾರ್‌. ಅವನು, ಅವಳು ಮತ್ತು ಅವನು ಇರ್ತಾರೆ’

ಹೇಳುತ್ತಾನೆ ಮುನ್ನಾ.

`ಕನ್‌ಫ್ಯೂಸ್‌! ಒಂದ್‌ ಕೆಲ್ಸ ಮಾಡು. ನೀನು, ಅವಳು ಮತ್ತು ಅವನು ಇರ್ತಾರೆ ಅಂತ ಕತೆ ಶುರು ಮಾಡು’

`ಅಂದ್ರೆ?’ ಮುನ್ನಾ ಕೇಳುತ್ತಾನೆ.

`ನಿನ್ನನ್ನು ಹೀರೋ ಅಂದ್ಕೋ. ಅವಳನ್ನು ಹೀರೋಯಿನ್ನು ಅಂದ್ಕೋ. ಇನ್ನು ಅವನು…ವಿಲನ್‌?’

ಒಂದು ಕ್ಷಣ ಇನ್‌ಸ್ಪೆಕ್ಟರ್‌ ನಿಲ್ಲುತ್ತಾರೆ. ಅಷ್ಟೊತ್ತಿಗೆ ಮುನ್ನಾನ ತಲೆಯಲ್ಲಿ ಪಿಚ್ಚರ್‌ ಸುತ್ತತೊಡಗುತ್ತದೆ. ಶಾಟ್‌ಗಳೆಲ್ಲ ಹಾಗೆ ಹಾಗೆ ಬರುತ್ತಿವೆ. ಸೆನ್ಸಾರಾಗದೇ.

ಅವಳ ಜೊತೆ ಮಲಗಿದ್ದು, ರತಿಕ್ರೀಡೆ…ಎಲ್ಲ!

ಅದನ್ನೆಲ್ಲ ಇನ್‌ಸ್ಪೆಕ್ಟರ್‌ಗೆ ಹೇಳುವುದು ಹೇಗೆ?

`ಸರಿ. ಸರಿ’ ಎಂದು ಶುರುಹಚ್ಚಿಕೊಳ್ಳುತ್ತಾನೆ ಮುನ್ನಾ. `ಬಸವನಗುಡಿ ಪೊಲಿಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಬರೋ ಹನ್ನೊಂದನೆ ಕ್ರಾಸಿನಲ್ಲಿ ಬಸ್‌ ಸ್ಟಾಪ್‌ ಇದೆ. ಅದರ ಎದುರು ಒಂದು ಮನೆ. ಆ ಮನೆಯಲ್ಲಿ ಹೀರೋ ಅಂದರೆ ಮುನ್ನಾ. ಅಲ್ಲೇ ಹತ್ತಿರದಲ್ಲಿ, ಬಸ್‌ಸ್ಟಾಪ್‌ನಿಂದ ಬಲಕ್ಕೆ, ಮೂರು ಕ್ರಾಸ್‌ ಆ ಕಡೆ ಅವಳು. ಹೀರೋಯಿನ್‌. ಅಂದ್ರೆ ಸೂಜಿ . ಇನ್ನು ಅವನು…. ಇಲ್ಲ ಅವನ ಮನೆ ಗೊತ್ತಿಲ್ಲ. ಅವನು ಎಂಜಿನೀಯರ್‌’

ಮುನ್ನಾನ ಪಿಚ್ಚರ್‌ ಆರಂಭವಾಗುತ್ತದೆ.

***

`ಒಂದು ಹಾಡ್‌ನೊಂದಿಗೆ ಪಿಚ್ಚರ್‌ ಶುರು ಸಾರ್‌’ ಎನ್ನುತ್ತಾನೆ ಮುನ್ನಾ. `ಆರಂಭದಲ್ಲೇ ಹಾಡ್‌ ಯಾಕೆ?’ ಕೇಳುತ್ತಾನೆ ಇನ್‌ಸ್ಪೆಕ್ಟರ್‌.

`ನಾವ್‌ಹೇಗೆ ಹೇಳೋಕಾಗುತ್ತೆ ಸಾರ್‌?’

`ಸರಿ ಸರಿ’ ಎನ್ನುತ್ತಾನೆ ಇನ್‌ಸ್ಪೆಕ್ಟರ್‌.

`ಹಾಡು ಮುಗಿಯುತ್ತೆ….’ ಎಂದು ಒಂದು ಕ್ಷಣ ನಿಲ್ಲುತ್ತಾನೆ ಮುನ್ನಾ. ಅವನಿಗೆ ಮುಂದೆ ಏನು ಹೇಳಬೇಕೆಂದು ತೋಚುತ್ತಿಲ್ಲ.

`ಹಾಡು ಮುಗಿದ್ಮೇಲೆ…’

ಇನ್‌ಸ್ಪೆಕ್ಟರ್‌ ಕೇಳುತ್ತಿದ್ದಾನೆ. ಮುಂದೆ ಏನು ಹೇಳಬೇಕು ಎಂದು ಮುನ್ನಾನಿಗೆ ತೋಚುತ್ತಿಲ್ಲ. ಬರೀ ಸೆನ್ಸಾರಾಗದ ರೀಲುಗಳೇ ತಲೆಯಲ್ಲಿ ಸುತ್ತುತ್ತಿದೆ.

`ಹಾಡು ಮುಗಿದ್ಲೇಲೆ…’

ಪಕ್ಕದಲ್ಲೇ ಕುಳಿತ ಕಾನ್‌ಸ್ಟೇಬಲ್‌ ಸಹ ಕೇಳುತ್ತಾನೆ.

`ಹೊಡೆದಾಟ…’ ಎನ್ನುತ್ತಾನೆ ಮುನ್ನಾ.

`ಹೊಡೆದಾಟವಾ?’

ಇನ್‌ಸ್ಪೆಕ್ಟರ್‌ಗೆ ಆಶ್ಚರ್ಯವಾಗುತ್ತದೆ. ಅವನ ಪ್ರಶ್ನೆಯಲ್ಲಿ ಕತೆ ಹಿಂಗಾದ್ರೆ ಹೆಂಗೆ ಎಂಬ ದನಿಯಿದೆ.

`ಇಲ್ಲಾ ಸಾರ್‌. ಅದು ಇರೋದೆ ಹಾಗೆ’

`ಸರಿ..ಸರಿ’

……..

ಪುನಃ ಮುನ್ನಾ ಯೋಚನೆಗೆ ಬೀಳುತ್ತಾನೆ. ತಲೆಯಲ್ಲಿ ಕತೆ ಮುಂದುವರೆಯುತ್ತಲೇ ಇಲ್ಲ. ಇನ್‌ಸ್ಪೆಕ್ಟರ್‌ಗೆ ಅನುಮಾನವಾಗಿ ಇನ್ನೊಂದು ಪ್ರಶ್ನೆ ಕೇಳುವಷ್ಟರಲ್ಲಿ ಅವನಿಗೊಂದು ಎಳೆ ಹೊಳೆದುಹೋಗುತ್ತದೆ. ಈಗ ತಾನಿರುವ ಪರಿಸ್ಥಿತಿಯನ್ನೂ ಅದಕ್ಕೆ ಸೇರಿಸಿಕೊಂಡು ಒಂದು ಕತೆ ಹೆಣೆಯಲು ಹೋಗಿ ತನ್ನದೇ ಕತೆ ಹೇಳತೊಡಗುತ್ತಾನೆ.

`ಒಂದು ದಿನ ರಾತ್ರಿ, ಸೂಜಿ ಮತ್ತು ಮುನ್ನಾ ಸೆಕೆಂಡ್‌ ಶೋ ಪಿಚ್ಚರ್‌ಗೆ ಹೋಗ್ತಾರೆ’ ಎಂದು ಶುರುಹಚ್ಚಿಕೊಳ್ಳುತ್ತಾನೆ.

………

………

………

ಸೂಜಿ ಮತ್ತು ಮುನ್ನಾ ಥಿಯೇಟರಿಂದ ಹೊರಬಂದವರು ಕಳ್ಳೆಕಾಯ್‌ ತಿನ್ನುತ್ತಾ ನಡೆದುಕೊಂಡೇ ಮನೆಗೆ ಹೊರಡ್ತಾರೆ. ಪಿಚ್ಚರ್‌ ಪೋಸ್ಟರ್‌ ನೋಡುತ್ತ.

ಅಷ್ಟರಲ್ಲಿ ಪೊಲೀಸ್‌ ವ್ಯಾನ್‌ ಅವರನ್ನು ಹಿಡಿದುಕೊಳ್ಳುತ್ತದೆ.

`ಯಾರು?’

ವಿಚಾರಿಸುತ್ತಾನೆ ಇನ್‌ಸ್ಪೆಕ್ಟರ್‌.

`ನಾವು’

ಹೇಳುತ್ತಾನೆ ಮುನ್ನಾ.

`ನಾವು ಅಂದ್ರೆ?’

`ಮುನ್ನಾ ಮತ್ತು ಸೂಜಿ’

`ಇಲ್ಲೇನು ಮಾಡ್ತಿದ್ದೀರಿ?’

ಇನ್‌ಸ್ಪೆಕ್ಟರ್‌ ದನಿ ಗಡುಸಾಗಿದೆ.

`ನಡ್ಕೊಂಡ್‌ ಮನೆಗೆ ಹೋಗ್ತಿದ್ದೀವಿ’

`ಇಷ್ಟೊತ್ತಲ್ಲಿ?’

`ಸೆಕೆಂಡ್‌ ಶೋ ಪಿಚ್ಚರ್‌ಗೆ ಹೋಗಿದ್ವಿ ಸಾರ್‌’

`ಪಿಚ್ಚರಾ?’

`ಹೌದು ಸಾರ್‌’

`ಟಿಕೆಟ್‌ ಎಲ್ಲಿ?’

`ಅಲ್ಲೇ ಹರ್ದ್‌ ಹಾಕ್ದೆ ಸಾರ್‌’

`ಸುಳ್‌ ಹೇಳ್ತಿಯಾ ಮಗನೆ..?’

`ಇಲ್ಲ…ಪಿಚ್ಚರಿಗೇ ಹೋಗಿದ್ದು ಸಾರ್‌’

`ಏಯ್‌! ನನ್‌ ಹತ್ರ ಡೌ ಹೊಡೀತೀಯಾ ಮಗನೇ’

`ಸುಳ್ಯಾಕೆ ಹೇಳ್ಲಿ ಸಾರ್‌? ಬೇಕಿದ್ರೆ ಕತೆ ಹೇಳ್ತೀನಿ’

ಮುನ್ನಾ ಹೇಳುತ್ತಾನೆ. ಸೂಜಿಗೆ ನಗು ಬರುತ್ತದೆ. ಇನ್‌ಸ್ಪೆಕ್ಟರ್‌ಗೆ ರೇಗುತ್ತದೆ.

`ಹತ್ರೋ ಜೀಪು’

ಗದರುತ್ತಾನೆ. ಇಬ್ಬರೂ ಹತ್ತಿ ಕುಳಿತುಕೊಳ್ಳುತ್ತಾರೆ. ಜೀಪು ಸ್ಟೇಷನ್‌ಗೆ ಹೋಗುತ್ತದೆ.

………

………

………

ರಾತ್ರಿ. ಪೊಲೀಸ್‌ ಸ್ಟೇಷನ್‌. ಇನ್‌ಸ್ಪೆಕ್ಟರ್‌ ಮುಂದೆ ಮುನ್ನಾ ಮತ್ತು ಸೂಜಿ ಕುಳಿತಿದ್ದಾರೆ. ಸೂಜಿ ನಿನಗೆ ಏನಾಗಬೇಕು ಎಂದು ಕೇಳಿ ಕೇಳಿ ಮುನ್ನಾನನ್ನು ಇನ್‌ಸ್ಪೆಕ್ಟರ್‌ ಪೀಡಿಸುತ್ತಿದ್ದಾನೆ.

`ಪಕ್ಕದ ಮನೆ ಹುಡುಗಿ ಸಾರ್‌. ಮೂರು ಕ್ರಾಸು ಆ ಕಡೆ ಇರುವವಳು’

`ಅಂದರೆ ಪಕ್ಕದ್ಮನೆ ಮೀನಾ’ ಎಂದು ನಗುತ್ತಾನೆ ಇನ್‌ಸ್ಪೆಕ್ಟರ್‌. ಅದೊಂದು ಜೋಕು ಎನ್ನುವಂತೆ. ಮುನ್ನಾ ನಗುವುದಿಲ್ಲ.

`ಪಕ್ಕದ್ಮನೆ ಹುಡುಗಿ ನಿಂಜೊತೆ ಇಷ್ಟೊತ್ತಿಗೆ ರಸ್ತೆಯಲ್ಲಿ ಏನು ಮಾಡ್ತಾ ಇದ್ಲು?’

`ಹೇಳಿದ್ವಲ್ಲ ಸಾರ್‌. ಪಿಚ್ಚರ್‌ಗೆ ಹೋಗಿದ್ವಿ’

ಇನ್‌ಸ್ಪೆಕ್ಟರ್‌ ಒಪ್ಪಿಕೊಳ್ಳುವುದಿಲ್ಲ.

`ಹೇಳು. ಇವಳು ನಿನ್‌ ಡವ್ವಾ?’

ಕೇಳುತ್ತಿದ್ದಾನೆ. ಮುನ್ನಾನಿಗೆ ಕಿರಿಕಿರಿ ಆಗುತ್ತದೆ. ಏನೂ ಉತ್ತರಿಸುವುದಿಲ್ಲ. ಸೂಜಿಗಂತೂ ಏನೊಂದೂ ಅರ್ಥ ಆಗುತ್ತಿರುವಂತಿಲ್ಲ. ರಾತ್ರಿ ಇಬ್ಬರು ಅವರಷ್ಟಕ್ಕೆ ನಡೆದುಕೊಂಡು ಹೊರಟರೆ ಪೊಲೀಸರು ಯಾಕೆ ಹಿಡಿದುಕೊಳ್ಳಬೇಕು ಎಂಬ ಮುಗ್ಧ ಪ್ರಶ್ನೆ ಅವಳ ಕಣ್ಣುಗಳಲ್ಲಿವೆ.

`ಡವ್‌ ಅಲ್ಲ, ಫ್ರೆಂಡ್‌ ಅಲ್ಲ. ಇಟ್ಕೊಂಡವಳು ಅಲ್ಲ. ಕಟ್ಕೊಂಡವಳು ಅಲ್ಲ. ಕಟ್ಕೊಳ್ಳುವವಳೂ ಅಲ್ಲ. ಅಂದ್ರೆ ದಂಧೆಯವಳಾ?’

ಇನ್‌ಸ್ಪೆಕ್ಟರ್‌ ಪ್ರಶ್ನೆ ಸೂಜಿ ಮೊನೆಯಿಂದ ಚುಚ್ಚುತ್ತಿರುವಂತಿದೆ. ಮುನ್ನಾ ಅಸಹಾಯಕನಾಗುತ್ತಾನೆ.

ಅವಳು ಯಾರೆಂದು ಹೇಳುವುದು. ಸ್ನೇಹಿತೆಯಾ? ತಂಗಿಯಾ? ಪ್ರೇಯಸಿಯಾ? ಯಾರು?

………

………

……….

ಈ ಘಟನೆ ಆಗಿ ಒಂದಷ್ಟು ದಿನವೂ ಮುನ್ನಾ ಮತ್ತು ಸೂಜಿ ಸಂಬಂಧ ಹೀಗೆಯೇ ಮುಂದುವರೆಯುತ್ತದೆ. ರಾತ್ರಿಯಾದರೆ ಮುನ್ನಾ ಪೋಸ್ಟರ್‌ ಹಚ್ಚುವ ಕೆಲಸಕ್ಕೆ ಹೋಗುತ್ತಾನೆ. ಹಗಲಾದರೆ ಪೋಸ್ಟರ್‌ ಕೀಳುವ ಕೆಲಸದಲ್ಲಿರುತ್ತಾನೆ. ಅದಿಲ್ಲದಿದ್ದರೆ ಆತ ಆಂಟಿ ಮನೆಯಲ್ಲಿರುತ್ತಾನೆ. ಮೂರು ಕ್ರಾಸು ಆ ಕಡೆ. ಹಸಿರು ಮನೆ. ಮೊದಲ ಮಹಡಿ!

ಆಂಟಿ ಅವನಿಗೆ ಮೊದಲಿಂದಲೂ ಇಷ್ಟ. ಅದಕ್ಕೆ ಕಾರಣ ವಿವರಿಸಲು ಹೋದರೆ ಅದೊಂದು ದೊಡ್ಡ ಫ್ಲ್ಯಾಶ್‌ಬ್ಯಾಕ್‌ ಆಗುತ್ತದೆ. ಒಟ್ಟಾರೆ ಅವನಿಗೆ ಅವಳು ಹತ್ತಿರದವಳು. ಅವಳ ಮಗಳು ಸೂಜಿ. ಅಪ್ಪ ಇಲ್ಲ. ಅಣ್ಣ ತಮ್ಮ ಇಲ್ಲ.

ಮುನ್ನಾ ಮೊದಲಿಂದಲೂ ಮನೆಗೆ ಬಂದು ಹೋಗಿ ಮಾಡುತ್ತಿರುತ್ತಾನೆ. ಆಗಾಗ ಸಹಾಯಕ್ಕೂ ನಿಂತಿರುತ್ತಾನೆ. ಸೂಜಿಯನ್ನು ಎಷ್ಟೋ ಸಲ ಕಾಲೇಜಿಗೆ ಬಿಟ್ಟು ಬಂದಿದ್ದಾನೆ. ಅವಳನ್ನು ಪಿಚ್ಚರ್‌ಗೆ ಕರೆದುಕೊಂಡು ಹೋಗಿದ್ದಾನೆ. ಅವರಿಬ್ಬರೂ ಅಸಂಖ್ಯ ಸಲ ಜೊತೆಯಾಗಿ ನಡೆದುಕೊಂಡು ಹೋಗುತ್ತ ಕಳ್ಳೆಕಾಯಿ ತಿಂದಿದ್ದಾರೆ.

ಅವನನ್ನು ಯಾವಾಗಲೂ ಅವಳು ಅಣ್ಣ ಎಂದು ಕರೆದಿಲ್ಲ. ಆದರೆ ಅವನು ಅವಳನ್ನು ಸಾಕಷ್ಟು ಸಲ ತಂಗಿಯಂತೆ ನಡೆಸಿಕೊಂಡಿದ್ದಾನೆ. ಅವನು ಅವಳನ್ನು ಯಾವಾಗಲೂ ಸ್ನೇಹಿತೆ ಎಂದಿಲ್ಲ. ಆದರೆ ಅವಳು ಗೆಳತಿಯ ತಂಪುತನವನ್ನು ಈತನಿಗೆ ಅರ್ಥಮಾಡಿಸಿದ್ದಾಳೆ. ಅವಳು ಯಾವಾಗಲೂ ಅವನನ್ನು ತನ್ನ ಪ್ರಿಯಕರ ಎಂದು ಅಂದುಕೊಂಡಿದ್ದಿಲ್ಲ. ಆದರೆ ಪ್ರೇಮಿಗಳಂತೆ ಇಬ್ಬರೂ ಸುತ್ತಾಡಿದ್ದಿದೆ.

ತಂಗಿ, ಸ್ನೇಹಿತೆ, ಪ್ರೇಯಸಿ ಎಲ್ಲವೂ ಹೌದು ಅನಿಸುತ್ತದೆ!

……..

……..

……..

ಇಷ್ಟೆಲ್ಲ ಆಗುವಾಗ ಒಂದು ದಿನ ಅವನು ಬರುತ್ತಾನೆ.

ಅವನು ಎಂದರೆ ಯತಿ.

ಅವನು ಈ ಕುಟುಂಬಕ್ಕೆ ಹತ್ತಿರವಾದಷ್ಟೂ ಮುನ್ನಾನ ಇನ್‌ಸೆಕ್ಯುರಿಟಿ ಹೆಚ್ಚಾಗುತ್ತ ಹೋಗುತ್ತದೆ. ಸೂಜಿ, ಆತನಿಗೆ ಹತ್ತಿರವಾದಷ್ಟೂ ಮುನ್ನಾ ವಿಚಿತ್ರ ತಳಮಳದಿಂದ ಚಡಪಡಿಸುತ್ತಾನೆ.

ಸುಮಾರು ದಿನಗಳು ಹೀಗೇ ಕಳೆಯುತ್ತವೆ. ಗಾಂಧೀಬಜಾರಿನ ರಸ್ತೆ ಬದಿಗಿರುವ ಮರದ ಎಲೆಗಳು ಉದುರುತ್ತವೆ. ಹೊಸ ಚಿಗುರು ಹುಟ್ಟುತ್ತದೆ. ಮಳೆ ಬರುತ್ತದೆ. ಬೇಸಿಗೆ ಕಳೆಯುತ್ತದೆ. ಕಾವೇರಿಗಾಗಿ ಹೊಡೆದಾಟಗಳಾಗುತ್ತವೆ. ನ್ಯಾಷನಲ್‌ ಕಾಲೇಜಿನ ಸರ್ಕಲ್‌ಅನ್ನು ಕನಿಷ್ಠ ಮೂರು ಸಲ ಕಾರ್ಪೊರೇಷನ್‌ನವರು ಅಗೆಯುತ್ತಾರೆ!

ಹೀಗೆ ಮೂರನೇ ಸಲ ಅಗೆಯುವ ಹೊತ್ತಿಗೆ ಅಲ್ಲಿಂದ ನೂರು ಹೆಜ್ಜೆ ಆ ಕಡೆ ಇರುವ ಲಾಲ್‌ಬಾಗಿನಲ್ಲಿ ಯತಿ ಮತ್ತು ಸೂಜಿ ನಡುವೆ ಪ್ರೀತಿ ಚಿಗುರೊಡೆಯುತ್ತದೆ.

…………..

ಐಸ್‌ಕ್ರೀಮು. ಜೋಳ. ಹೂವು. ನಾಲ್ಕು ಪಿಚ್ಚರ್‌ . ಅಷ್ಟೇ.

…………..

ಇದೆಲ್ಲವನ್ನೂ ಮುನ್ನಾ ಜೊತೆ ಕೂಡ ಸೂಜಿ ಮಾಡಿದ್ದಾಳೆ. ಆದರೆ ಅವಳಲ್ಲಿ ಈ ಸಲ ವಿಚಿತ್ರ ಕಂಪನಗಳು ಹುಟ್ಟಿಕೊಳ್ಳುತ್ತಿವೆ. ವಿಲಕ್ಷಣ ಆಶೆಗಳು ಮೊಳಕೆ ಒಡೆಯುತ್ತಿವೆ. ಅವಳ ಕಾಲೇಜು, ಓದಿನ ನಡುವೆ ಆಕೆ ಯತಿಗೂ ಸಮಯ ಕೊಡುತ್ತಾಳೆ. ಲೈಂಗಿಕ ಆಶೆಗಳು ಲಾಲ್‌ಬಾಗಿನ ಹಾದಿ ಹಾದಿಯಲ್ಲೂ ಮೆರವಣಿಗೆ ಹೊರಡುತ್ತವೆ.

ಹೀಗಿರುವಾಗ ಸೂಜಿ ಮತ್ತು ಯತಿಯನ್ನು ಒಮ್ಮೆ ಮುನ್ನಾ ನೋಡುತ್ತಾನೆ. ತುಂಬಾ ಕ್ಯಾಷುವಲ್ಲಾಗಿ ನೋಡುತ್ತಾನೆ. ಅದರೆ ಅದೊಂದು ದೃಶ್ಯ ಆತನ ಮನಸ್ಸಿನಲ್ಲಿ ಹಾಗೆಯೇ ಉಳಿದುಹೋಗುತ್ತದೆ. ಅಲ್ಲಿ ತನಕ ಸೂಜಿ ಏನೂ ಅಲ್ಲ ಅನಿಸಿದವಳು ಈಗ ತುಂಬಾ ತೀವ್ರವಾಗಿ ತನ್ನವಳು ಎಂದು ಅನಿಸಲು ಪ್ರಾರಂಭವಾಗಿಬಿಡುತ್ತದೆ.

ಅದು ಆರಂಭ.

ಇಲ್ಲಿಂದ ಮುಂದೆ ಒಂದೊಂದು ಸಲ ಯತಿ ಮತ್ತು ಸೂಜಿಯನ್ನು ಜೊತೆಯಾಗಿ ನೋಡಿದಾಗಲೂ ಮುನ್ನಾ ಚಡಪಡಿಸುತ್ತಾನೆ. ಅರ್ಥವಾಗದ ವೇದನೆಯಿಂದ ತತ್ತರಿಸುತ್ತಾನೆ. ತಲೆಯಲ್ಲಿ ನಡೆಯುವ ಪಿಚ್ಚರ್‌ಗಳು ಹೆಚ್ಚಾಗುತ್ತವೆ. ಸೆನ್ಸಾರಿಲ್ಲದ ಪಿಚ್ಚರ್‌ಗಳ ಅಸಂಖ್ಯ ಪ್ರದರ್ಶನಗಳಾಗುತ್ತವೆ. ಸಾದಾ ಪಿಚ್ಚರ್‌ ಪೋಸ್ಟರ್‌ ಅಂಟಿಸುವಾಗ ಸಿಗುವ ಸಂತೋಷಕ್ಕಿಂತ ವಯಸ್ಕರ ಪಿಚ್ಚರ್‌ ಪೋಸ್ಟರ್‌ ಅಂಟಿಸಿದರೆ ಸಿಗುವ ಸಂತೋಷ ಹೆಚ್ಚಾಗುತ್ತದೆ!

ಸೂಜಿಗೆ ಈ ದ್ವಂದ್ವ ಅರ್ಥವಾಗುತ್ತಿಲ್ಲ. ಅವಳು ತಣ್ಣಗಿದ್ದಾಳೆ, ಎಂದಿನಂತೆ. ಅವಳ ಪ್ರೀತಿಯನ್ನು ಮೊದಲಿನಂತೆ ಸಹಜವಾಗಿ ಸ್ವೀಕರಿಸುವುದು ಮುನ್ನಾನಿಗೆ ಸಾಧ್ಯವಾಗುತ್ತಿಲ್ಲ. ತನಗವಳು ಬೇಕು ಅನಿಸುತ್ತಿದ್ದಾಳೆ. ಅವಳ ಜೊತೆಯಿದ್ದಷ್ಟೂ ಹೊತ್ತು ತಲೆಯಲ್ಲಿ ಪಿಚ್ಚರ್‌ ನಡೆಯುತ್ತದೆ. ನಗ್ನ ಚಿತ್ರಗಳು ಕಾಣಿಸುತ್ತವೆ.

ಇಷ್ಟರ ನಡುವೆ ಆಂಟಿ ಸತ್ತು ಹೋಗುತ್ತಾಳೆ. ಹುಡುಗಿ ಒಬ್ಬಳೇ ಇರುತ್ತಾಳೆ. ಈಗಲೂ ಮುನ್ನಾ ಹೋಗುತ್ತಾನೆ. ಅದೇ ಪ್ರೀತಿಯಿಂದ ಸೂಜಿ ಅವನನ್ನು ಆಹ್ವಾನಿಸುತ್ತಾಳೆ. ಆದರಿಸುತ್ತಾಳೆ. ಇಬ್ಬರೂ ಕನಿಷ್ಠ ಹತ್ತು ಸಲವಾದರೂ ಒಂದೇ ರೂಮಿನಲ್ಲಿ ಅಕ್ಕಪಕ್ಕದ ಹಾಸಿಗೆಯಲ್ಲಿ ಮಲಗಿದ್ದಾರೆ.

ಪಕ್ಕದಲ್ಲಿ ಮಲಗಿದ ಸೂಜಿಗೆ ದಿಂಬಿಗೆ ತಲೆಕೊಟ್ಟ ತಕ್ಷಣ ನಿದ್ದೆ ಬಂದುಬಿಡುತ್ತದೆ. ಮುನ್ನಾನಿಗೆ ರಾತ್ರಿಯಿಡೀ ಜಾಗರಣೆ.

ತಲೆಯಲ್ಲಿ ಪಿಚ್ಚರ್‌!

ಅವಳು ಅವನನ್ನು ಆಗಾಗ ಮುಟ್ಟಿ ಮಾತಾಡಿಸುವುದಿದೆ. ಮಾತಾಡುವಾಗ ಸುಮ್ಮನೇ ಕೈ ಹಿಡಿದುಕೊಳ್ಳುವುದಿದೆ. ಎಲ್ಲವೂ ಸಹಜವಾಗಿ. ಆದರೆ ಯತಿ ಬರುವ ಮೊದಲಿನ ಮುಗ್ಧತೆ ತನಗೆ ಈಗಿಲ್ಲ ಅನಿಸಿ ಮುನ್ನಾನಿಗೆ ವಿಚಿತ್ರ ಅನಿಸುತ್ತದೆ. ಅವಳನ್ನು ಕೇಳಿಬಿಡೋಣ ಎಂದುಕೊಳ್ಳುತ್ತಾನೆ.

ಏನೆಂದು ಕೇಳುವುದು?

ನನ್ನ ಜೊತೆ ಮಲಗು ಎಂದು ಕೇಳಲೇ?

ಅವಳು ಆಗಲೇ ಮಲಗಿದ್ದಾಳೆ. ಇನ್ನೊಂಥರಾ ಮಲಗುತ್ತೀಯಾ ಎಂದು ಕೇಳಲೇ? ಇನ್ನೊಂಥರಾ ಅಂದರೆ ಹೇಗೆ?

ಮುನ್ನಾನಿಗೂ ಗೊಂದಲವಾಗುತ್ತದೆ.

ತಲೆಯಲ್ಲಿ ಪಿಚ್ಚರ್‌.

ಸೆನ್ಸಾರಿಲ್ಲ.

………

………

………

ಇಷ್ಟೆಲ್ಲ ಆಗುವಾಗ ಒಂದಿನ ಮುನ್ನಾ ಗೋಬಿ ಮಂಚೂರಿ ತಿನ್ನುತ್ತ ನಿಂತಿರುತ್ತಾನೆ. ಎದುರಿಗಿನ ಕ್ಲಬ್ಬಿಗೆ ಸೂಜಿ ಮತ್ತು ಯತಿ ಪಲ್ಸರ್‌ ಬೈಕಿನಲ್ಲಿ ಬಂದು ಇಳಿಯುತ್ತಾರೆ. ಇಬ್ಬರೂ ಕ್ಲಬ್ಬಿನೊಳಕ್ಕೆ ಹೋಗುತ್ತಾರೆ. ಮುನ್ನಾನಿಗೆ ಸುಮ್ಮನೇ ಕುತೂಹಲ ಹೆಚ್ಚಾಗುತ್ತದೆ. ಅವನೂ ಕ್ಲಬ್ಬಿನೊಳಕ್ಕೆ ಹೋಗುತ್ತಾನೆ. ಅಲ್ಲಿ ಇಬ್ಬರೂ ತಬ್ಬಿಕೊಂಡು ಕುಣಿಯುತ್ತಿರುವುದನ್ನು ನೋಡುತ್ತಾನೆ. ಅವರನ್ನು ಕರೆದುಕೊಂಡು ಹೊರಕ್ಕೆ ಬಂದು ಬೈಕಿನ ಮೇಲೆ ಕೂರಿಸಿಕೊಂಡು ತನ್ನ ಅಡ್ಡೆಗೆ ಹೋಗುತ್ತಾನೆ.

***

`ಪಿಚ್ಚರ್‌ ಮುಂದೇನಾಯ್ತೋ ಗೊತ್ತಿಲ್ಲ. ತಲೆ ನೋವು ಬಂದು ಎದ್ದುಬಂದ್‌ಬಿಟ್ಟೆ’ ಎಂದುಬಿಡುತ್ತಾನೆ ಮುನ್ನಾ. ಮುಂದಿನದನ್ನು ಅವನಾದರೂ ಹೇಗೆ ಹೇಳುತ್ತಾನೆ?

ಈಗ ಕಾನ್‌ಸ್ಟೇಬಲ್‌, ಮುನ್ನಾ ಮತ್ತು ಇನ್‌ಸ್ಪೆಕ್ಟರ್‌ ಸೇರಿ ಈ ಪಿಚ್ಚರ್‌ನ ಕ್ಲೈಮ್ಯಾಕ್ಸ್‌ ಹೇಗೆಲ್ಲ ಇರಬಹುದು ಎಂದು ಲೆಕ್ಕ ಹಾಕಲು ಪ್ರಾರಂಭಿಸುತ್ತಾರೆ.

`ಕ್ಲೈಮ್ಯಾಕ್ಸ್‌ನಲ್ಲಿ ಮುನ್ನಾ, ಯತಿಯನ್ನು ಮರ್ಡರ್‌ ಮಾಡಿದ್ರೆ ಹೇಗಿರುತ್ತೆ?’

ಕೇಳುತ್ತಾನೆ ಇನ್‌ಸ್ಪೆಕ್ಟರ್‌.

`ಪೊಲೀಸರಾಗಿರೋದ್ರಿಂದ ನಿಮ್ಮ ತಲೇಲಿ ಬರೀ ಮರ್ಡರೇ ಬರ್ತಾ ಇದೆ. ಆದರೆ ಅದು ಮಾಮೂಲಿ ಟ್ರ್ಯಾಜಡಿ ಆಗಿಬಿಡುತ್ತೆ’ ಎನ್ನುತ್ತಾನೆ ಮುನ್ನಾ.

`ಹಾಗಿದ್ರೆ ಮುನ್ನಾನನ್ನು ಯತಿ ಮರ್ಡರ್‌ ಮಾಡ್ತಾನೆ’ ಎನ್ನುತ್ತಾನೆ ಕಾನ್‌ಸ್ಟೇಬಲ್‌.

`ಹಾಗೆ ಮಾಡಿಬಿಟ್ರೆ ಪಿಚ್ಚರ್‌ ಸುಖಾಂತ್ಯ ಆಗಿಬಿಡುತ್ತದಾ?’ ಕೇಳುತ್ತಾನೆ ಮುನ್ನಾ.

ಒಂದಷ್ಟು ಹೊತ್ತು ಮೌನ. ಇನ್ನೆರಡು ಸಿಗರೇಟು ಖರ್ಚಾಗುತ್ತದೆ.

`ಇಲ್ಲ, ಯತಿ ಮತ್ತು ಸೂಜಿಯನ್ನು ಬಿಟ್ಟು ಮುನ್ನಾ- ದೂರ, ತುಂಬಾ ದೂರ ಹೊರಟುಹೋಗುತ್ತಾನೆ. ಸೂಜಿಗೆ, ನನಗಿಂತ ಯತಿಯೇ ಇಷ್ಟ ಎಂದ ಮೇಲೆ ಮುಗಿದ್ಹೋಯ್ತಲ್ಲ?’ ಎನ್ನುತ್ತಾನೆ ಮುನ್ನಾ. ಇನ್‌ಸ್ಪೆಕ್ಟರ್‌ ಮೀಸೆಯಂಚಿನಲ್ಲಿ ನಗು ಕಾಣಿಸಿಕೊಳ್ಳುತ್ತದೆ.

`ಇಲ್ಲ ಇಲ್ಲ. ಮುನ್ನಾ ಹೋಗಿ ಯತಿಯನ್ನು ಮರ್ಡರ್‌ ಮಾಡುವುದೇ ಸರಿ!’ ಎಂದು ವಾದಿಸುತ್ತಾನೆ ಇನ್‌ಸ್ಪೆಕ್ಟರ್‌.

`ಈ ಪೊಲೀಸರಿಗೆ ಮರ್ಡರ್‌ ಬಿಟ್ಟು ಬೇರೆ ಏನೂ ಕಾಣ್ಸೋದಿಲ್ವಾ?’ ಎಂದು ಕೇಳಿದ ಮುನ್ನಾ `ನಾನು ಹೇಳಿದ ಕ್ಲೈಮ್ಯಾಕ್ಸೇ ಫರ್‌ಫೆಕ್ಟು’ ಎನ್ನುತ್ತಾನೆ.

ಇನ್‌ಸ್ಪೆಕ್ಟರ್‌ ಒಪ್ಪಿಕೊಳ್ಳುವುದಿಲ್ಲ.

`ಇಲ್ಲ ನಾನು ಹೇಳಿದ ಮರ್ಡರ್‌ ಎಂಡಿಂಗೇ ಸರಿ’

`ಇಲ್ಲ, ಸರಿಯಿಲ್ಲ’

ಮುನ್ನಾ ಕೂಡ ಹಟ ಮಾಡುತ್ತಾನೆ.

`ಸರಿಯಿದೆ’

`ಸರಿಯಿಲ್ಲ’

`ಸರಿಯಿದೆ’

`ಸರಿಯಿಲ್ಲ’

ಇಬ್ಬರ ನಡುವೆ ವಾಗ್ವಾದ ಮುಂದುವರೆಯುತ್ತದೆ. ಕೊನೆಯಲ್ಲಿ ಇನ್‌ಸ್ಪೆಕ್ಟರ್‌ ಗಟ್ಟಿಯಾಗಿ ಹೇಳುತ್ತಾನೆ: ಸರಿಯೋ ತಪ್ಪೋ. ಆದರೆ ಅಲ್ಲಿ ಮರ್ಡರ್‌ ಅಂತೂ ಆಗಿದೆ.

`ಮರ್ಡರಾ?’

ಮುನ್ನಾನ ಪ್ರಶ್ನೆಯಲ್ಲಿ ಆಶ್ಚರ್ಯವಿದೆ.

`ಹೌದು, ಮರ್ಡರ್‌!’

ಒಂದು ಕ್ಷಣ ನಿಂತು ಇನ್‌ಸ್ಪೆಕ್ಟರ್‌ ಆರ್ಡರ್‌ ಮಾಡುವ ದನಿಯಲ್ಲಿ ಹೇಳುತ್ತಾನೆ:

ಮುನ್ನಾ, ಜೀಪ್‌ ಹತ್ತು!

…….

ಮುನ್ನಾ ಜೀಪ್‌ ಹತ್ತುತ್ತಾನೆ. ಹತ್ತಲೇ ಬೇಕಾಗುತ್ತದೆ. ಇನ್‌ಸ್ಪೆಕ್ಟರ್‌ ಕೂಡ ಹತ್ತಿಕೊಳ್ಳುತ್ತಾನೆ. ಜೀಪು ಗಾಂಧೀಬಜಾರಿನ ಕಡೆಗೆ ಓಡತೊಡಗುತ್ತದೆ. ಗಲ್ಲಿ ಗಲ್ಲಿಗಳನ್ನು ದಾಟಿ ಸೂಜಿ ಮನೆಯ ಮುಂದಿನಿಂದ ಜೀಪು ಮುನ್ನಾನ ಅಡ್ಡೆ ಕಡೆ ಹೊರಳುತ್ತದೆ.

ಕ್ರಾಸ್‌ ಮೂರು

ಕ್ರಾಸ್‌ ಎರಡು

ಕ್ರಾಸ್‌ ಒಂದು

ಬಲಕ್ಕೆ ತಿರುಗಿದರೆ ಸ್ವಲ್ಪವೇ ದೂರ. ಬಸ್‌ಸ್ಟಾಪ್‌. ಈಗ ಇನ್‌ಸ್ಪೆಕ್ಟರ್‌, ಕಾನ್‌ಸ್ಟೇಬಲ್‌ ಮತ್ತು ಮುನ್ನಾ ತುಕ್ಕು ಹಿಡಿದ ಆ ಗೇಟು ದಾಟುತ್ತಾರೆ. ನಾಲ್ಕು ಹೆಜ್ಜೆ. ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಾರೆ. ಒಂದು,ಎರಡು, ಮೂರು, ನಾಲ್ಕು…..ಒಟ್ಟೂ ಹನ್ನೆರಡು.

ಅಡ್ಡೆಯ ಬಾಗಿಲು ತೆರೆದರೆ ಅಲ್ಲಿ ಯತಿ ರಕ್ತದ ಮಡುವಿನಲ್ಲಿ ಮಲಗಿದ್ದಾನೆ.

`ಇದು ಕ್ಲೈಮ್ಯಾಕ್ಸ್‌’ ಇನ್‌ಸ್ಪೆಕ್ಟರ್‌ ಹೇಳುತ್ತಾನೆ.

ಮುನ್ನಾ ಮಾತಾಡುವುದಿಲ್ಲ. ಕಣ್ಮುಚ್ಚುತ್ತಾನೆ.

ಪಿಚ್ಚರಿಲ್ಲ.

ಏನೆಂದರೆ ಏನೂ ಕಾಣುತ್ತಿಲ್ಲ.

ಕೊನೆಗೆ `ಇಂದು ಪ್ರದರ್ಶನವಿಲ್ಲ ‘ ಬೋರ್ಡ್‌ ಸಹ.

2 Comments

  1. Priya
    Posted March 10, 2007 at 1:43 pm | Permalink

    Pichchar nodidashte santosha ayitu sir.

  2. Vikram
    Posted January 2, 2008 at 10:05 am | Permalink

    story tumbane thrillagide


Post a Comment

Your email is never published nor shared. Required fields are marked *
*
*