ಇರಾಕ್ ಮೆಲೆ ಆಮೆರಿಕದವರು ಯುದ್ದ ಮಾಡುತ್ತಿದ್ದ ಹಂತದಲ್ಲಿ ಬರೆದ ಕತೆಯಿದು. ಉತ್ತರ ಕನ್ನಡದ ಮಲೆನಾಡ ಹಳ್ಳಿಯೊಂದರಲ್ಲಿ ಅಕ್ಕ ಪಕ್ಕದ ಮನೆಗಳ ನಡುವಿನ ರಾಜಕೀಯವನ್ನು ಹೇಳಲು ಪ್ರಯತ್ನಿಸಿದ್ದೇನೆ. ಓದಿ, ಪ್ರತಿಕ್ರಿಯಿಸಿ.
ಅಚ್ಚೆಮನೆ ಅಣ್ಣನಿಗೆ ಅರಬ್ ದೇಶವೊಂದರಲ್ಲಿ ಕೆಲಸ ಸಿಕ್ಕಿತು. ಅವನನ್ನು ದೊಡ್ಡಪ್ಪ ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿ ಕಳುಹಿಸಿ ಬಂದಿದ್ದ. ಈ ಸುದ್ದಿಯನ್ನು ಕೇಳಿದಾಗ ಅಪ್ಪನಿಗೆ ಹೊಟ್ಟೆಕಿಚ್ಚಾಗಿತ್ತು. ಇದಾದ ಮೇಲೆ ಮತ್ತೇನೂ ಆಗದಿದ್ದರೂ ಯಾಕೋ ನನ್ನ ನಿರುಪಯುಕ್ತತೆ ಮಾತ್ರ ಅಪ್ಪನಿಗೆ ಇನ್ನಷ್ಟು ಢಾಳಾಗಿ ಕಾಣಿಸತೊಡಗಿತು. ನಾನು ಮಾಡುವ ಕೆಲಸಗಳು ಅಪ್ಪನಿಗೆ ಯಃಕಶ್ಚಿತವೆನಿಸತೊಡಗಿದವು. `ನನ್ನ ಮಗ ಫಾರಿನ್‌ನಲ್ಲಿ ಇದ್ದಾನೆ. ಎಂಜಿನೀಯರ್’ ಎಂದು ದೊಡ್ಡಪ್ಪ ಯಾರ ಮುಂದಾದರೂ ಹೇಳಿಕೊಳ್ಳುವಾಗ ಅಪ್ಪನಲ್ಲಿ ನನ್ನ ಕುರಿತು ಹುಟ್ಟಿಕೊಳ್ಳುತ್ತಿದ್ದ ತಿರಸ್ಕಾರವನ್ನು ಈಗೀಗ ನಾನು ನಗುತ್ತ ಸ್ವೀಕರಿಸುವ ಹಂತ ತಲುಪಿದ್ದ್ದೆ.ಮುಂದೆ ಏನೆಲ್ಲ ಆಗುವುದಿತ್ತೊ?ಆದರೆ ಈ ಮಧ್ಯೆ ಒಂದು ಆಸಕ್ತಿಕರ ಬೆಳವಣಿಗೆಯಾಯಿತು.
ಕೂಲಿ ಕೆಲಸಕ್ಕೆ ಅಂತ ನಮ್ಮನೆಗೆ ಬರುತ್ತಿದ್ದ ಹುಡುಗ ಮಾಬ್ಲುವನ್ನು ಪಕ್ಕದ ಊರಿನ ಮದುವೆಯೊಂದಕ್ಕೆ ಬಂದಿದ್ದ ಬಂದಿದ್ದ ಹೊಸಳ್ಳಿಯ ಮೋನಾ ಎಂಬ ಹುಡುಗಿ ಗುಟ್ಟಾಗಿ ಪ್ರೀತಿಸಿಬಿಟ್ಟಳು. ಅಪ್ಪನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದ ಅವಳು ಒಂದಷ್ಟು ದಿನ ಮುಂಬೈಯಲ್ಲಿ ಏನೋ ಮಾಡಿಕೊಂಡಿದ್ದಳು. ಹಾಗೇ ಅವಳು ದುಬೈಗೆ ಹೋಗಿದ್ದಾಳೆ ಎಂಬ ಸುದ್ದಿ ನಮ್ಮೂರು ತಲುಪುವಷ್ಟರಲ್ಲಿ ಪುನಃ ಇಂಡಿಯಾಕ್ಕೆ ಬಂದಳು. ಹಾಗೆ ಬಂದವಳು ಹೊಸಳ್ಳಿಯಲ್ಲಿದ್ದ ತಮ್ಮ ಮನೆಯಲ್ಲೇ ಒಂದಷ್ಟು ದಿನ ಇದ್ದಳು. ಈ ಸಂದರ್ಭದಲ್ಲಿ ಮಾಬ್ಲುವನ್ನು ಅವಳು ರವಿವಾರದ ಸಂತೆಪೇಟೆಯಲ್ಲಿ ಭೇಟಿಯಾಗಿದ್ದು ಮತ್ತು ರಾಜಕಮಲ ಟಾಕೀಸಿನಲ್ಲಿ ಹಿಂದಿ ಪಿಚ್ಚರ್ ನೋಡಿದ್ದು ಮಾರಾಟಕ್ಕಿಟ್ಟ ಬಂಗಡೆ ಮೀನಿನ ವಾಸನೆಯಂತೆ ನಿಧಾನವಾಗಿ ಹರಡತೊಡಗಿತ್ತು.
ಸ್ವಲ್ಪವೇ ದಿನ.
ಅವಳು ಕ್ಯಾಲಿಫೋರ್ನಿಯಾದ ರೆಸ್ಟುರಾದಲ್ಲಿ ಕ್ಯಾಶಿಯರ್ ಕೆಲಸ ಹಿಡಿದು ಅಮೆರಿಕಾಕ್ಕೆ ಹೋಗಿಬಿಟ್ಟಳು. ಮೋನಾ ನಮ್ಮೂರಿನ ಹುಡುಗಿ ಅಲ್ಲದಿದ್ದುದರಿಂದ, ಹೊಸಳ್ಳಿ ಸಾಕಷ್ಟು ದೂರದ ಊರಾದ್ದರಿಂದ ಇದು ಅಷ್ಟಾಗಿ ಸುದ್ದಿಯಾಗಲಿಲ್ಲ.
ಇದಾದ ಮೇಲೆ ಸುಮಾರು ದಿನ ಕಳೆಯಿತು.
ಒಂದಿನ ಕೆಲಸಕ್ಕೆ ಬಂದಾಗ ಮಾಬ್ಲು ತಾನು ಸದ್ಯವೇ ಅಮೆರಿಕಾಕ್ಕೆ ಹೋಗುತ್ತೇನೆ ಎಂದು ಘೋಷಿಸಿದ. ಇದು ಹಲವರಿಗೆ ತಮಾಷೆಯಾಗಿ ಕಂಡಿತು. ಅದಕ್ಕೂ ಕಾರಣಗಳಿದ್ದವು. ಆತನಿಗೆ ಓದಲು ಬರೆಯಲೂ ಬರುತ್ತಿರಲಿಲ್ಲ. ಕೂಲಿ ಕೆಲಸ ಮಾಡಿಕೊಂಡು ಹಳ್ಳಿಯಲ್ಲೇ ಬೆಳೆದವನು ಆತ. ಕೊಂಕಣಿಯಲ್ಲಿ ಮತ್ತು ಅಚ್ಚಕನ್ನಡದಲ್ಲಿ ಚೆನ್ನಾಗಿ ಮಾತಾಡುತ್ತಿದ್ದ. ಒಂದಾರು ತಿಂಗಳು ಬಾಂಬೆ ಟ್ರಿಪ್ಪಿಗೆ ಕ್ಲೀನರ್ ಕೆಲಸ ಮಾಡಿದ್ದರಿಂದ ಮೋಟಾರ್ ಡ್ರೈವರ್‌ಗಳ ಹಿಂದಿ ಕೂಡ ಬರುತ್ತಿತ್ತು.
ಆದರೆ ಇಂಗ್ಲೀಷು?
ಗೊತ್ತೇ ಇರಲಿಲ್ಲ.
ಇಂಗ್ಲೀಷಿಲ್ಲದೇ ಅಮೆರಿಕಾಕ್ಕೆ ಹೋಗುವುದು ಹೇಗೆ?
ನಮ್ಮನೆಯ ಆಳುಗಳಿಗೆ ಅಡಿಕೆ ಸುಲಿಯುವಾಗ ಆಡಿಕೊಳ್ಳುವುದಕ್ಕೆ ಒಂದು ವಿಷಯ ಸಿಕ್ಕಿತು. ಮಾಬ್ಲು ಅಮೆರಿಕಾಕ್ಕೆ ಹೋದ ಹಾಗೆ ಅಂತ ಹೊಸ ಗಾದೆ ಚಲಾವಣೆಗೆ ಬಂತು. ಆದರೆ ಮಾಬ್ಲು ಮಾತ್ರ ಮಾತಾಡಲಿಲ್ಲ. ತಮಾಷೆ ಮಾಡಿದಾಗ ಸಿಟ್ಟಾಗಲಿಲ್ಲ. ಈ ವಿಷಯದ ಕುರಿತು ಆತ ಪ್ರತಿಕ್ರಿಯಿಸಲೇ ಇಲ್ಲ.
ಈ ಮಧ್ಯೆ ಮಾಬ್ಲು ಎಲ್ಲೆಲ್ಲಿಗೋ ಹೋಗಿ ಬಂದ. ಯಾರ್ಯಾರದೋ ಸಹಾಯ ಯಾಚಿಸಿದ. ಎಲ್ಲವೂ ಸರಿಯಾಗುತ್ತದೆ ಎನ್ನುವಷ್ಟರಲ್ಲಿ ವಲ್ಡ್ ಟ್ರೇಡ್ ಸೆಂಟರ್ ಬಿತ್ತು. ವೀಸಾ ಸಿಗುವುದು ತಡವಾಯಿತು. ತಾನು ಅಮೆರಿಕಾಕ್ಕೆ ಹೋದ ಹಾಗೆ ಅಂತ ಸುದ್ದಿ ಬಿಡುವುದರಲ್ಲಿದ್ದ. ಆದರೆ ಮೋನಾ ಬಿಡಲಿಲ್ಲ. ಒಂದು ದಿನ ಮಾಬ್ಲು ವಿಮಾನ ಹತ್ತಿಯೇ ಬಿಟ್ಟ. ಕಳೆದ ಕ್ರಿಸ್‌ಮಸ್ ಹೊತ್ತಿಗೆ ಐ ಲವ್ ಇಂಡಿಯಾ ಅಂತ ಇಂಗ್ಲಿಷಿನಲ್ಲಿ ಬರೆದಿದ್ದ ಕ್ರಿಸ್‌ಮಸ್ ಗ್ರೀಟಿಂಗ್ ಕಾರ್ಡು ಮಾಬ್ಲುನಿಂದ ಅಪ್ಪನಿಗೆ ಬಂತು.
ಮಾಬ್ಲು ಅಮೆರಿಕಾಕ್ಕೆ ಹೋದ ಮೇಲೆ ಅಚ್ಚೆ ಮನೆ ಅಣ್ಣನ ಕುರಿತು ಅಪ್ಪನ ಮಾತ್ಸರ್ಯ ಗಮನಾರ್ಹವಾಗಿ ಕಮ್ಮಿಯಾಯಿತು. ಈಗ ದೊಡ್ಡಪ್ಪ ತನ್ನ ಮಗನ ಕುರಿತು ಹೇಳಿಕೊಳ್ಳತೊಡಗಿದರೆ ಅಪ್ಪ ಪಕ್ಕದಲ್ಲಿದ್ದವರ ಹತ್ತಿರ ಮಾಬ್ಲು ಅಮೆರಿಕಾಕ್ಕೆ ಹೋಗಿದ್ದರ ಕುರಿತು ಹೇಳತೊಡಗುತ್ತಿದ್ದ. ದೊಡ್ಡಪ್ಪನ ಅಹಂಕಾರ ಮತ್ತು ಹೆಮ್ಮೆ ಹಾಗೆಯೇ ಅಪ್ಪನ ಕೀಳರಿಮೆ ಮತ್ತು ಚಿಲ್ಲರೆತನ ಇತ್ತೀಚೆಗೆ ನನ್ನಲ್ಲಿ ಕುತೂಹಲ ಕೂಡ ಹುಟ್ಟಿಸುತ್ತಿರಲಿಲ್ಲ.
ಸುಮಾರು ಒಂದು ವರ್ಷವೇ ಕಳೆದಿರಬೇಕು.
ಈ ಮಧ್ಯೆ ಇರಾಕ್ ಮೇಲೆ ಅಮೆರಿಕಾ ಯುದ್ಧ ಘೋಷಿಸಿತು. ದುಬೈನಲ್ಲಿದ್ದವರು, ಬಗ್ದಾದ್‌ನಲ್ಲಿದ್ದವರು ವಾಪಸಾಗತೊಡಗಿದರು. ಅಚ್ಚೆ ಮನೆ ಅಣ್ಣನೂ ಹಾಗೇ ವಾಪಸಾಗುತ್ತಾನೆ ಎಂದು ಊರಿನಲ್ಲಿ ಗುಸುಗುಸು ಇತ್ತು.
ಆದರೆ ಅಣ್ಣ ಮಾತ್ರ ಬರಲಿಲ್ಲ.
ಹತ್ತು, ಹದಿನೈದು, ಇಪ್ಪತ್ತು ದಿನ ಕಳೆಯಿತು.
ಅಣ್ಣ ಬರಲಿಲ್ಲ.
ಇರಾಕ್ ಮೇಲೆ ಅಮೆರಿಕಾ ದಾಳಿ ಮುಂದುವರೆಸಿತ್ತು. ಬಸ್ರಾ ಮಿತ್ರಪಡೆಗಳ ವಶವಾಯಿತು. ಯಫ್ರಟೀಸ್ ನದಿಗುಂಟ ಸಾಗಿದ ಅಮೆರಿಕಾ ಮಿತ್ರಪಡೆ ಬಾಗ್ದಾದ್ ಪ್ರವೇಶಿಸಿ ಯುದ್ಧದಲ್ಲಿ ತೊಡಗಿತ್ತು.
ಒಂದು ಕಡೆ ಹೆಚ್ಚು. ಮತ್ತೊಂದು ಕಡೆ ಕಮ್ಮಿ. ಆದರೆ ಎರಡೂ ಪಡೆಗಳ ಸೈನಿಕರು ಸತ್ತರು.
ಅಣ್ಣ ಬರಲಿಲ್ಲ.
ಜನಸಾಮಾನ್ಯರು ಸತ್ತರು.
ಅಣ್ಣ ಬರಲಿಲ್ಲ.
ಮಕ್ಕಳು ಸತ್ತರು.
ಅಣ್ಣ ಬರಲಿಲ್ಲ.
ಹೆಂಗಸರು , ಯುದ್ಧ ವರದಿಗೆ ಹೋದ ಪತ್ರಕರ್ತರೂ ಸತ್ತರು.
ಅಣ್ಣ ಬರಲಿಲ್ಲ.
ಇರಾಕಿನ ಪಡೆಗಳು ಅಲ್ಲಲ್ಲಿ ಪ್ರತಿರೋಧ ತೋರಿಸಿದರು. ಇರಾಕ್‌ನ ಇನ್‌ಫಾರ್ಮೆಷನ್ ಮಿನಿಸ್ಟರ್ ಇನ್ನು ಕೆಲವೇ ದಿನದಲ್ಲಿ ಅಮೆರಿಕಾಕ್ಕೆ ತಕ್ಕ ಪಾಠ ಕಲಿಸುವುದಾಗಿ ಮಾಡಿದ ಭಾಷಣ ಟಿ.ವಿ. ಮೂಲಕ ಜಗತ್ತಿನ ಮೂಲೆ ಮೂಲೆಗಳನ್ನು ತಲುಪುವ ಹೊತ್ತಿಗೆ ಬಾಗ್ದಾದ್‌ನ ಮೂಲೆ ಮೂಲೆಗಳಲ್ಲಿ ಅಮೆರಿಕಾ ಸೈನಿಕರಿದ್ದರು.
ಸದ್ದಾಮ್ ಹುಸೇನ್ ಓಡಿಹೋಗಿದ್ದ ಅಥವಾ ಸತ್ತಿದ್ದ.
ಇಷ್ಟಾದರೂ ಅಚ್ಚೆಮನೆ ಅಣ್ಣ ಮಾತ್ರ ಬರಲಿಲ್ಲ.
ಅಮೆರಿಕಾ ಪಡೆಗಳು ಬಾಗ್ದಾದ್ ದಾಟಿ ಮಿಸೋಲ್ ತಲುಪಿದರು. ಅಷ್ಟರಲ್ಲಿ ಬಾಗ್ದಾದ್ ಮತ್ತು ಬಸ್ರಾದಲ್ಲಿ ಜನ ಸಿಕ್ಕಿದ್ದನ್ನೆಲ್ಲ ಲೂಟಿ ಮಾಡತೊಡಗಿದರು. ಅದರ ದೃಶ್ಯಗಳು ಟಿವಿ ಮೂಲಕ ಇರಾಕ್ ಮತ್ತು ಜಗತ್ತಿನ ಮೂಲೆ ಮೂಲೆ ತಲಪತೊಡಗಿತು.
ಜನ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೋಗತೊಡಗಿದ್ದರು. ಬಾಸ್ರಾದಲ್ಲಿ ಬ್ಯಾಂಕು ಲೂಟಿಯಾಯಿತು. ಕಾಲೇಜುಗಳು, ಸರಕಾರಿ ಕಾರ್ಯಾಲಯಗಳು ಲೂಟಿಯಾದವು. ಇರಾಕಿನ ಕರೆನ್ಸಿಗಳು ಕರಪತ್ರಗಳಂತೆ ರಸ್ತೆಯಲ್ಲಿ ಅನಾಥವಾಗತೊಡಗಿದವು.
ಇದನ್ನೆಲ್ಲ ಮನೆಯಲ್ಲಿ ಕುಳಿತು ನೋಡುತ್ತಿದ್ದ ಅಪ್ಪನ ಉತ್ಸಾಹ ಮಾತ್ರ ಹೆಚ್ಚಾಗುತ್ತಲೇ ಹೋಯಿತು. ಪೆಟ್ರೋಲು ರೇಟು ಏರುವ ಆತಂಕವಿದ್ದರೂ ಅಪ್ಪ ಅಮೆರಿಕಾವನ್ನು ಸಮರ್ಥಿಸುತ್ತಿದ್ದ. ಇತ್ತೀಚಿನ ದಿನದಲ್ಲಿ ಆತ ವಾರ್ತೆ ನೋಡದೇ ಇದ್ದುದೇ ಇಲ್ಲ.
ಅಪ್ಪ ಅಮೆರಿಕಾ ಸಮರ್ಥಿಸುವುದನ್ನು ಮೂಲೆಮನೆ ಗಣಪತಿ ಸಾಮ್ರಾಜ್ಯವಾದಿ ಗುಣದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುತ್ತ ಊರಲ್ಲೆಲ್ಲ ಓಡಾಡುತ್ತಿದ್ದ. ಆದರೆ ಅಪ್ಪನ ಇರಾಕ್ ವಿರೋಧಿ ನೀತಿಯನ್ನು ಅರ್ಥಮಾಡಿಕೊಳ್ಳಲು ಇಂಪಿರಿಯಲಿಸಮ್ ಕುರಿತು ಓದುವ ಅಗತ್ಯ ಇರಲಿಲ್ಲ. ಅಚ್ಚೆ ಮನೆ ರಾಜಕಾರಣವನ್ನು ಅರ್ಥ ಮಾಡಿಕೊಂಡ ಯಾರ ಊಹೆಗಾದರೂ ಅದು ನಿಲುಕುವಂತಿತ್ತು.
ಜನ ಟೀವಿಯನ್ನು, ಏರ್ ಕೂಲರ್, ಕಂಪ್ಯೂಟರ್‌ಗಳನ್ನು ಲೂಟಿ ಮಾಡಿಕೊಂಡು ಹೋಗುತ್ತಿರುವ ದೃಶ್ಯಗಳನ್ನು ಅಪ್ಪ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದ. ಚೆಲ್ಲಾಪಿಲ್ಲಿಯಾದ ಬಾಗ್ದಾದ್‌ನ ಬೀದಿಗಳಲ್ಲಿ ಆತ ಯಾರನ್ನೋ ಹುಡುಕುತ್ತಿರುವಂತ್ತಿತ್ತು. ಟಿವಿಯಲ್ಲಿ ಬರುತ್ತಿರುವ ಈ ದೃಶ್ಯಗಳಲ್ಲಿದ್ದ ಜನರ ಮುಖವನ್ನೆಲ್ಲ ಗಮನಿಸುತ್ತಿದ್ದ ಅಪ್ಪನ ಕಣ್ಣುಗಳಲ್ಲಿ ಅಚ್ಚೆಮನೆ ಅಣ್ಣನ ಚಿತ್ರವಿತ್ತು.
***
ನಮ್ಮನೆಯಿರುವುದು ಹುಬ್ಬಳ್ಳಿ ಕಾರವಾರ ಹೆದ್ದಾರಿಯ ಪಕ್ಕ.
ಯಲ್ಲಾಪುರದಿಂದ ಕಾರವಾರದ ಕಡೆಗೆ ಸಾಗುತ್ತ ತಟಗಾರ ಕತ್ರಿ, ನಾಯ್ಕನಕೆರೆ ದಾಟಿ ಆರತಿ ಬೈಲ್ ಘಟ್ಟ ಇಳಿಯುತ್ತಹೋದರೆ ಅದರ ಬುಡದಲ್ಲಿ ನಮ್ಮ ಊರು ಸಿಗುತ್ತದೆ. ಊರೆಂದರೆ ಊರೇನೂ ಅಲ್ಲ. ಆರು ಮನೆಗಳು ಚದುರಿಕೊಂಡಂತೆ ಇರುವ ಪುಟ್ಟ ಹಳ್ಳಿಯಷ್ಟೆ.
ಈ ಹೆದ್ದಾರಿಯ ಪಕ್ಕ ಇರುವ ಕಣಿವೆಯಲ್ಲಿ ಒಂದು ಹಳ್ಳ ನಿಧಾನವಾಗಿ ತೆವಳುತ್ತದೆ. ಅದು ಅರೆಹಳ್ಳ. ಅದರ ಪಕ್ಕ ಗದ್ದೆ ಸಾಲಿದೆ. ಅರ್ಧ ನಮ್ಮದು. ಅರ್ಧ ದೊಡ್ಡಪ್ಪನದು. ಅದಾದ ಮೇಲೆ ಮನೆ. ಅರ್ಧ ನಮ್ಮದು ಮತ್ತರ್ಧ ದೊಡ್ಡಪ್ಪನದು. ಕೇವಲ ಮೂವತ್ತು ವರ್ಷಗಳ ಹಿಂದೆ ಅದು ಒಂದೇ ಮನೆಯಾಗಿತ್ತು. ಅಲ್ಲಿಂದ ಈಚೆಗೆ ಬೆಳೆದು ನಿಂತಿರುವ ಅಡಿಕೆ ತೋಟ. ಅರ್ಧ ನಮ್ಮದು. ಮತ್ತರ್ಧ ದೊಡ್ಡಪ್ಪನದು. ಮತ್ತೂ ಆ ಕಡೆ ಒಂದು ಫರ್ಲಾಂಗ್ ಹೋದರೆ ಮೂಲೆಮನೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಸಂಪಳ್ಳಿಮನೆ.
ಪಕ್ಕದಲ್ಲೇ ಹೆದ್ದಾರಿ ಇರುವುದರಿಂದ ಮಲೆನಾಡ ಕಣಿವೆಯ ಮೌನ ಮಾತ್ರ ಇಲ್ಲಿಲ್ಲ. ಸದಾ ಕಾರವಾರಿನ ಬಂದರಿನ ಕಡೆ ಸಾಗುವ ಟ್ಯಾಂಕರ್‌ಗಳ ಸದ್ದು. ಬಸ್ಸುಗಳ ಗದ್ದಲ. ಏರು ಹತ್ತಲಾಗದೇ ಸುಸ್ತಾಗುವ ಟ್ರಕ್ಕುಗಳ ನಿಟ್ಟುಸಿರು.
***
ನೆಲ್ಲಿಬೇಣದಿಂದ ನಾನು ಮನೆ ತಲುಪುವಷ್ಟರಲ್ಲಿ ಅಪ್ಪ ಗಡಿಬಿಡಿಯಿಂದ ಓಡಾಡುತ್ತಿದ್ದ. ಹೊರಗಡೆ ಸಣ್ಣಗೆ ಸುರಿಯುತ್ತಿದ್ದ ಮಳೆ ದೊಡ್ಡದಾಗುವ ಮುನ್ಸೂಚನೆಯಾಗಿ ಗುಡುಗಿನ ಸದ್ದು ಕೇಳುತ್ತಿತ್ತು. ಅಮ್ಮ ಆತನಿಗೆ ಏನನ್ನೋ ಹುಡುಕುವುದಕ್ಕೆ ಸಹಾಯ ಮಾಡುತ್ತಿದ್ದಳು.
ಅಪ್ಪ ಪ್ಲಾಸ್ಟಿಕ್ ಕ್ಯಾನ್ ಹಿಡಿದುಕೊಂಡು ಮನೆ ಹಿಂದಿರುವ ಹೈವೆ ಕಡೆ ಓಡುತ್ತಿದ್ದ. ಅಮ್ಮನೂ ಏನೋ ಕೂಗಿಕೊಳ್ಳುತ್ತಿದ್ದಳು. ಏನಾಯಿತೆಂದು ಗಾಬರಿಯಾಗಿ ನಾನೂ ಮನೆ ಹಿಂದಿರುವ ರಸ್ತೆಗೆ ಬಂದೆ.
ಅಲ್ಲಿ ಪೆಟ್ರೋಲ್ ಟ್ಯಾಂಕರೊಂದು ನೆಲಕ್ಕುರುಳಿತ್ತು.
ಡ್ರೈವರ್‌ಗೆ ಸಾಕಷ್ಟು ಪೆಟ್ಟಾಗಿತ್ತು. ಕ್ಲೀನರ್ ಬಚಾವಾಗಿದ್ದ. ಯಾವುದೋ ಒಂದು ಗಾಡಿ ನಿಲ್ಲಿಸಿ ಡ್ರೈವರ್‌ನನ್ನು ಆಸ್ಪತ್ರೆಗೆ ಕಳುಹಿಸಲಾಗಿತು.
ಒಂದು ಕ್ಷಣ ಎಲ್ಲವೂ ತಹಬಂದಿಗೆ ಬಂತು.
ಒಂದು ಕ್ಷಣ ಅಷ್ಟೇ.
ಅಷ್ಟರಲ್ಲಿ ಈ ಕಡೆ ನೆಲಕ್ಕೊರಗಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್ ಸೋರತೊಡಗಿತ್ತು. ಅದನ್ನು ನಿಲ್ಲಿಸಲು ಕ್ಲೀನರ್ ಏನು ಮಾಡಬೇಕೆಂದು ತೋಚದೇ ನಿಂತಿದ್ದರೆ ಅಪ್ಪ ಕ್ಯಾನುಗಳನ್ನು ಹಿಡಿದು ಅಲ್ಲಿಗೆ ತಲುಪಿದ್ದ. ಸೋರುತ್ತಿದ್ದ ಪೆಟ್ರೋಲನ್ನು ಕ್ಯಾನಿಗೆ ತುಂಬಿಸಿಕೊಂಡ. ಒಂದು ಕ್ಯಾನು ತುಂಬುತ್ತಲೇ ಮತ್ತೊಂದು ಕ್ಯಾನು ತರಲು ಹೇಳಿದ. ಅದೂ ತುಂಬಿದಾಗ ಮತ್ತೊಂದು. ಹೀಗೆ ಅಪ್ಪ ಒಂದಾದ ಮೇಲೆ ಒಂದು ಪಾತ್ರೆಯಲ್ಲಿ ಸೋರಿ ಹೋಗುತ್ತಿದ್ದ ಪೆಟ್ರೋಲು ತುಂಬಿಸಿಕೊಂಡು ಮನೆಗೆ ಸಾಗಿಸತೊಡಗಿದ.
ಈ ಸುದ್ದಿ ಪೆಟ್ರೋಲಿಗಂಟಿದ ಬೆಂಕಿಯಂತೆ ಮನೆ ಮನೆಗಳಿಗೂ ಹಬ್ಬಿತು.
ಅವರೂ ಕ್ಯಾನ್‌ಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸತೊಡಗಿದರು. ಅಚ್ಚೆಮನೆ ದೊಡ್ಡಪ್ಪ ಮನೆಯಲ್ಲಿರಲಿಲ್ಲ. ದೊಡ್ಡಮ್ಮನಿಗೆ ಹೊರಗೆಲ್ಲ ಓಡಾಡುವುದು ಕಷ್ಟ. ಪೆಟ್ರೋಲನ್ನು ಪುಕ್ಕಟೆ ಮನೆಗೆ ತುಂಬಿಸಿಕೊಳ್ಳುವ ಅವಕಾಶ ತನಗೆ ಸಿಕ್ಕಿದ್ದಕ್ಕಿಂತ ದೊಡ್ಡಪ್ಪನಿಗೆ ತಪ್ಪಿ ಹೋಗಿದ್ದರ ಕುರಿತೇ ಅಪ್ಪನಿಗೆ ಹೆಚ್ಚು ಖುಷಿಯಾದಂತಿತ್ತು.
ನಮ್ಮನೆಯಲ್ಲಿ ಎಲ್ಲ ಪಾತ್ರೆಗಳೂ ತುಂಬಿಹೋದವು.
ಪೆಟ್ರೋಲು ಸೋರುವುದು ನಿಂತಿತ್ತು.
ಆದರೆ ಆಗಲೇ ಅಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಸುದ್ದಿ ಹತ್ತಿರದ ತಟಗಾರು, ನಾಯ್ಕನಕರೆ, ಕವಡಿಕೆರೆ, ದೋಣಗಾರು, ಬಂದೆಗದ್ದೆ, ಸಂಪಳ್ಳಿಯಂಥ ಊರುಗಳಿಗೆ ಹಬ್ಬಿ ಅಲ್ಲಿನ ಜನರೆಲ್ಲ ಕ್ಯಾನ್ ಹಿಡಿದುಕೊಂಡು ಅಲ್ಲಿಗೆ ಬಂದಿದ್ದರು, ಸಂಬಂಧಿಕರ ಆಲೆಮನೆಗೆ ಧಾವಿಸುವಂತೆ.
ಸರಿ, ಪೆಟ್ರೋಲು ಸೋರದಿದ್ದರೆ ಅಲ್ಲಿನ ಜನ ಸೋರುವಂತೆ ಮಾಡಿದರು. ಟ್ಯಾಂಕರ್‌ಗೆ ಮೊಳೆ ಜಡಿದು ತೂತು ಮಾಡಿದರು. ಪೆಟ್ರೋಲನ್ನು ಒಬ್ಬೊಬ್ಬರಾಗಿ ತುಂಬಿಸಿಕೊಳ್ಳತೊಡಗಿದರು. ಪೆಟ್ರೋಲು ತುಂಬಿಸಿಕೊಳ್ಳುವುದಕ್ಕೆ ಕ್ಯೂದಲ್ಲಿ ಬರಬೇಕು ಎನ್ನುವ ನಿಯಮವೂ ಅಲ್ಲೇ ಹುಟ್ಟಿಕೊಂಡಿತು. ಸಣ್ಣ ಮಟ್ಟದಲ್ಲಿ ಜಗಳಗಳೂ ಆದವು. ಇದನ್ನೆಲ್ಲ ಅಲ್ಲೇ ಕುಳಿತಿದ್ದ ಕ್ಲೀನರ್ ಅಸಹಾಯಕನಾಗಿ ನೋಡಬೇಕಾಯಿತು. ಆಸ್ಪತ್ರೆಗೆ ಸೇರಿದ ಡ್ರೈವರ್ ಏನಾದ ಎಂಬ ವಿಷಯದಲ್ಲಿ ಯಾರಿಗೂ ಆಸಕ್ತಿಯಿರಲಿಲ್ಲ.
ಈ ಹಂತದಲ್ಲಿ ಅಪ್ಪನ ಸ್ಥಿತಿ ಮಾತ್ರ ದಾರುಣವಾಗಿತ್ತು.
ಮನೆಯಲ್ಲಿರುವ ಎಲ್ಲ ಪ್ಲಾಸ್ಟಿಕ್ ಕ್ಯಾನ್‌ಗಳೂ ಪೆಟ್ರೋಲಿನಿಂದ ತುಂಬಿ ಹೋಗಿದ್ದವು. ಅದಾದ ಮೇಲೆ ಈಗ ಬೆಲ್ಲ ತುಂಬಿಡುವ ಖಾಲಿ ಕ್ಯಾನುಗಳಲ್ಲೂ ಪೆಟ್ರೋಲು ತುಂಬಿಕೊಳ್ಳತೊಡಗಿತು.
……………..
……………..
ಪುಕ್ಕಟೆ ಪೆಟ್ರೋಲಿಗಾಗಿ ಸೇರುವ ಜನ ಹೆಚ್ಚಾಗತೊಡಗಿದರು. ಇದರಿಂದಾಗಿ ಗಾಡಿ ಕಾಯುವುದಕ್ಕೆ ಕುಳಿತಿದ್ದ ಮತ್ತು ಅಪಘಾತದ ದಿಗ್ಭ್ರಮೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಕ್ಲೀನರ್‌ಗೆ ಗಾಬರಿ ಹೆಚ್ಚಾಯಿತು.
ಪೆಟ್ರೋಲು ತುಂಬಿಕೊಳ್ಳುತ್ತಿದ್ದವರಿಗೆ ಆತ ಏನನ್ನೋ ಹೇಳಲು ಹೋದ.
ಅವನಿಗೆ ಹೇಳಲಾಗುತ್ತಲೇ ಇಲ್ಲ.
ಅಥವಾ ಜನ ಕೇಳಿಸಿಕೊಳ್ಳಲಿಲ್ಲ.
ಪುಕ್ಕಟೆ ಪೆಟ್ರೋಲಿಗಾಗಿ ಅಲ್ಲಿ ತೀವ್ರವಾದ ಪೈಪೋಟಿ ನಡೆಯುತ್ತಿತ್ತು.
ಪುನಃ ಕ್ಲೀನರ್ ಏನನ್ನೋ ಹೇಳಲು ಹೋಗಿ ಹೇಳಲಾಗದೇ ಒದ್ದಾಡಿದ. ಅಪಘಾತದ ಶಾಕ್‌ನಿಂದ ಹೊರಬರಲು ಆತ ಇನ್ನೂ ಪ್ರಯತ್ನ ಮಾಡುತ್ತಿರುವಂತೆ ಇತ್ತು. ಈ ಹೊತ್ತಿನಲ್ಲಿಯೇ ಆತನಿಗೆ ಸಿಗರೇಟು ನೆನಪಾಗಿದ್ದು.
ನಾನು ನಿಂತು ನೋಡುತ್ತಿದ್ದಂತೆ ಸಿಗರೇಟು ಸೇದುವುದಕ್ಕೆ ಆತ ಕಡ್ಡಿ ಗೀರಿದ.
ಕಡ್ಡಿ ಗೀರಿದ ಅಷ್ಟೇ.
……………
……………
ಟ್ಯಾಂಕರ್ ಸ್ಫೋಟಿಸಿತು.
ಜನರು ಕಿರುಚಾಡಿದರು. ಮಕ್ಕಳು ಚೀರಿಕೊಂಡರು. ಕೆಲವರು ಮೈಗೆ ಬೆಂಕಿ ಹೊತ್ತಿಸಿಕೊಂಡು ಓಡುತ್ತಿದ್ದರು. ದೂರದಲ್ಲಿ ನಾನು ದಿಗ್ಭ್ರಮೆಯಿಂದ ಇದನ್ನು ನೋಡುತ್ತ ನಿಂತುಹೋಗಿದ್ದೆ. ಕ್ಲೀನರ್ ಸಿಗರೇಟಿಗೆ ಬೆಂಕಿ ಹೊತ್ತಿಸಿಕೊಂಡದ್ದು ಮಾತ್ರ ಆ ಗೊಂದಲದಲ್ಲೂ ನನಗೆ ಸ್ಪಷ್ಟವಾಗಿ ಕಾಣಿಸಿತು.
1 Comment
March 9, 2007 at 12:20 pm
I liked the whole story. Felt as though I was witness to all that you wrote