ರೌಡಿ, ರಾಜಕಾರಣಿ, ಪತ್ರಕರ್ತ ಹೇಗಿರುತ್ತಾನೆ?

ಕನ್ನಡ ಸಿನಿಮಾಗಳಲ್ಲಿ ಕಾಣುವ ರೌಡಿಯ ಗುಣಲಕ್ಷಣಗಳೇನು?ಉದ್ದ ಕೂದಲು. ಕುರುಚಲು ಗಡ್ಡ. ಕೈಯ್ಯಲ್ಲಿ ಗನ್ನು, ರೇಜರ್‌. ಹತ್ತು ಜನ ಬಂದರೂ ಆತ ಹೊಡೆದಾಡುತ್ತಾನೆ. ಸರ್ವಶಕ್ತ. ಸರ್ವಾಂತರ್ಯಾಮಿ. ಸ್ನೇಹಿತರೆಂದರೆ ಸಾಯಲೂ ಸಿದ್ಧನಾಗುತ್ತಾನೆ. ಸಾಮಾನ್ಯವಾಗಿ ಆತನಿಗೆ ಅಮ್ಮನೆಂದರೆ ತುಂಬಾ ಪ್ರೀತಿ. ಅಪ್ಪ ಇರುವುದಿಲ್ಲ. ಮುಗ್ಧನೂ ಒಳ್ಳೆಯವನೂ ಆಗಿದ್ದವನು ಪರಿಸ್ಥಿತಿಯ ಪಿತೂರಿಗೆ ಸಿಕ್ಕು ರೌಡಿಯಾಗಿರುತ್ತಾನೆ.

ಬೆಂಗಳೂರಿನಲ್ಲಿ ನಿಜವಾದ ರೌಡಿಗಳು ಹೀಗಿರುತ್ತಾರೆಯೇ? ಕಷ್ಟ ಕಷ್ಟ. ಕನ್ನಡ ಸಿನಿಮಾದ ರೌಡಿಗಳ ಕುರಿತು ಎಸಿಪಿ ಶಿವರಾಮ್‌ ಒಂದು ಸುಂದರವಾದ ವಿಮರ್ಶೆ ಮಾಡಿದ್ದಾರೆ. ಅವರು ಹೇಳುತ್ತಾರೆ: ರೌಡಿಗಳಂಥ ಪುಕ್ಕಲು ಜನರನ್ನು ನಾನು ನೋಡಿಯೇ ಇಲ್ಲ. ಅವರನ್ನು ಸಿನಿಮಾದಲ್ಲಿ ವೈಭವೀಕರಿಸುವುದು ನೋಡಿದರೆ ನನಗೆ ನಗು ಬರುತ್ತದೆ. ರೌಡಿಗಳ ಕುರಿತು ಹೆಚ್ಚೆಂದರೆ ಒಂದು ಕಾಮಿಡಿ ಸಿನಿಮಾ ಮಾಡಬೇಕು!ಸಿನಿಮಾಗಳಲ್ಲಿ ಕಾಣುವ ರಾಜಕಾರಣಿಗಳಂಥ ರಾಜಕಾರಣಿಗಳೂ ನಮಗೆ ಕಾಣಲು ಸಿಗುವುದಿಲ್ಲ. ಬಿಳಿ ಟೊಪ್ಪಿ, ಬಿಳಿ ಜುಬ್ಬಾ, ಹೆಗಲ ಮೇಲೊಂದು ಶಾಲು ಹಾಕಿಕೊಂಡಿರುವ ರಾಜಕಾರಣಿಗಳನ್ನೇ ಇನ್ನೂ ಸಿನಿಮಾಗಳಲ್ಲಿ ತೋರಿಸಲಾಗುತ್ತಿದೆ. ಇನ್ನು ಸಿನಿಮಾದಲ್ಲಿರುವ ಪೊಲೀಸರ ಅವಸ್ಥೆಯಂತೂ ದೇವರಿಗೇ ಪ್ರೀತಿ. ಹೀರೋ ಪೊಲೀಸ್‌ ಪಾತ್ರಧಾರಿಯಲ್ಲ ಅಂದರೆ ಮುಗಿಯಿತು. ಅವರನ್ನು ಜೋಕರ್‌ಗಳಂತೆ ಚಿತ್ರಿಸಲಾಗುತ್ತದೆ. ಕಾಮನ್‌ ಸೆನ್ಸು ಸೆಂಟ್ರಲ್‌ ಜೈಲಿನಲ್ಲಿರುತ್ತದೆ! ಸಿನಿಮಾದಲ್ಲಿ ಕಾಣುವ ಪತ್ರಕರ್ತ ಹೇಗಿರುತ್ತಾನೆ? ಜುಬ್ಬಾ ಹಾಕಿರುತ್ತಾನೆ. ಆತನ ಹೆಗಲಿಗೊಂದು ಬ್ಯಾಗ್‌ ಇರುತ್ತದೆ. ಗಡ್ಡ ಬಿಟ್ಟಿರುತ್ತಾನೆ. ಸರಿಯಾಗಿ ನೋಡಿದರೆ ಆ ಗಡ್ಡವನ್ನು ಸಹ ಅಂಟಿಸಿರಲಾಗುತ್ತದೆ!

ಇದು ಕನ್ನಡ ಸಿನಿಮಾಗಳ ಪಾಡು ಮಾತ್ರ ಎಂದು ಹೇಳುವಂತಿಲ್ಲ. ನಮ್ಮ ದೇಶದ ದೊಡ್ಡ ದೊಡ್ಡ ನಿರ್ದೇಶಕರು ಸಹ ಪಾತ್ರಗಳನ್ನು ಇದೇ ರೀತಿ ಚಿತ್ರಿಸಿದ್ದನ್ನು ನಾವು ನೋಡಬಹುದು. ಉದಾಹರಣೆಗೆ ಇತ್ತೀಚೆಗೆ ಬಂದ `ಗುರು’ ಚಿತ್ರ. ಭಾರತ ಕಂಡ ಒಳ್ಳೆಯ ನಿರ್ದೇಶಕರಲ್ಲಿ ಮಣಿರತ್ನಮ್‌ ಒಬ್ಬರು. ಅವರು `ಗುರು’ ಚಿತ್ರದಲ್ಲಿ ಪತ್ರಕರ್ತನನ್ನು ತೋರಿಸಿರುವ ರೀತಿ ಮಾತ್ರ ಕುತೂಹಲಕರವಾಗಿದೆ. ರಾತ್ರಿ ಪತ್ರಿಕೆ ಪ್ರಿಂಟ್‌ ಆಗುತ್ತಿದ್ದರೆ ಆತ ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ತನ್ನ ಪ್ರೇಯಸಿಯೊಂದಿಗೆ ನಿಂತು ನೋಡುತ್ತಿರುತ್ತಾನೆ. ಸಾಮಾನ್ಯವಾಗಿ ಪತ್ರಕರ್ತನಿಗೆ ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ಕೆಲಸ ಇರುವುದಿಲ್ಲ! ವಿಶೇಷ ಸಂದರ್ಭದಲ್ಲಿ ಆತ ಪ್ರೆಸ್ಸಿಗೆ ಹೋಗಿರಬಹುದಲ್ಲಾ ಎಂದು ನೀವು ಹೇಳಬಹುದು. ವಿಚಿತ್ರವೆಂದರೆ ಪತ್ರಿಕೆ ಪ್ರಿಂಟ್‌ ಆಗುತ್ತಿರುವಾಗ ಅಲ್ಲಿ ಪ್ರೆಸ್ಸಿಗೆ ಸಂಬಂಧಿಸಿದ ಯಾರೊಬ್ಬರೂ ಕಾಣಿಸುವುದಿಲ್ಲ. `ಬಾಂಬೆ’ ಚಿತ್ರದಲ್ಲೂ ಅರವಿಂದ ಸ್ವಾಮಿಯನ್ನು ಪ್ರೂಫ್‌ ರೀಡರ್‌ ಎಂದು ತೋರಿಸಿ ಅನಂತರ ವಿಶೇಷ ಸಂದರ್ಶನ ಇತ್ಯಾದಿಗಳನ್ನು ಅವರಿಂದಲೇ ಮಾಡಿಸಲಾಗಿತ್ತು.

ಸಿನಿಮಾಗಳಲ್ಲಿ ಪತ್ರಕರ್ತರು ಪತ್ರಕರ್ತರಂತೆ, ರೌಡಿಗಳು ರೌಡಿಗಳಂತೆ, ರಾಜಕಾರಣಿಗಳು ರಾಜಕಾರಣಿಗಳಂತೆ ಕಾಣಿಸುವುದು ಯಾವಾಗ?

One Comment

  1. Sundara
    Posted March 8, 2007 at 10:33 am | Permalink

    Cinimagalalli samaanyavagi ella patrakartaroo reportergale agiruttare. Avaru ‘article’galanne bareyuttiruttare. Avaryaroo ’suddi’ bareyuvude illa.
    Innu kelavu patragalu suddiyannu oduttiruttave. Suddi mukha putadalli iruttade. Aadare aa suddiyannu a paatra olaputadalli oduttiruttade. Ekendare mukhaputa camerakke kaanabekalla…?

Post a Comment

Your email is never published nor shared. Required fields are marked *
*
*