ಸ್ಕೂಲಿಗೆ ಹೋಗಿ ಓದಿದ್ದು ಎಸ್ಸೆಸ್ಸೆಲ್ಸಿ . ಎಂ ಎ ಓದಿದ್ದು ರಾತ್ರಿ ಶಾಲೆ ಅಥವಾ ಓಪನ್ ಯುನಿವರ್ಸಿಟಿಯಲ್ಲಿ. ನಾಲ್ಕು ವರ್ಷಗಳ ಹಿಂದೆ ಪರೀಕ್ಷೆಗೆ ಮೊದಲು ಓದಲು ಕುಳಿತುಕೊಂಡಾಗ ಬರೀ ಗಡಿಯಾರ ನೋಡುವುದೇ ಆಗುತ್ತಿತ್ತು. ಈ ಹಂತದಲ್ಲಿ ಇಂಥದ್ದೊಂದು ಕತೆ ಹುಟ್ಟಿಕೊಂಡಿತು. ಎಂ ಎ ಪರೀಕ್ಷೆ ಬರೆದು ಮುಗಿಸಿದ ದಿನವೇ ಇದನ್ನು ಬರೆದಿದ್ದು.
ಅರ್ಧ ಗಂಟೆಗೆ ಒಂದು ಮಾತು. ಗಂಟೆಗೊಂದಿಷ್ಟು ಮಾತು. ವರ್ಷಗಳಿಂದ ಬರೀ ಇಷ್ಟೇ ಆಗಿ ಸೆಂಟ್ರಲ್ ಲೈಬ್ರರಿಯ ಕೆಂಪು ಗೋಡೆಗೆ ಅಂಟಿಕೊಂಡಿದ್ದ ಗಡಿಯಾರದ ಮೂರೂ ಮುಳ್ಳುಗಳಿಗೆ ಜೀವನ ಯಾಂತ್ರಿಕವೆನಿಸತೊಡಗಿತು. ಅದೇ ಮೂರನ್ನು, ಆರನ್ನು, ಹನ್ನೆರಡನ್ನು ಮಾತಾಡಿಸಿ ಮಾತಾಡಿಸಿ ಬೋರಾಗಿ ಒಂದು ಬೆಳಗಿನ ದಿವ್ಯ ಕ್ಷಣದಲ್ಲಿ ಗಡಿಯಾರದ ಮೂರೂ ಮುಳ್ಳುಗಳು ಯೋಚಿಸತೊಡಗಿದವು.ಯೋಚಿಸುವ ಶಕ್ತಿ ಬಂದಿದ್ದೇ ಬಂದಿದ್ದು. ಗಾಣದೆತ್ತಿನಂತೆ ಸತತವಾಗಿ ಸುತ್ತುತ್ತಿದ್ದ ಗಂಟೆ, ನಿಮಿಷ ಮತ್ತು ಸೆಕೆಂಡಿನ ಮುಳ್ಳುಗಳಿಗೆ ಒಂದೊಂದೇ ಸಂಗತಿಗಳು ಅರ್ಥವಾಗತೊಡಗಿತು. ಮುಂಜಾನೆ ಹನಿಯುವ ಇಬ್ಬನಿ, ವಾಕಿಂಗ್‌ಗೆ ಬರುವ ಜನ, ಹತ್ತು ಗಂಟೆಯ ಟ್ರಾಫಿಕ್ ಜಾಮ್, ಮಧ್ಯಾಹ್ನದ ಬಿಸಿಲು, ಇಳಿಸಂಜೆಯ ಧೂಳು ಮತ್ತು ರಾತ್ರಿ ಹಠಾತ್ತಾಗಿ ಸುರಿಯುವ ಮಳೆಯನ್ನೆಲ್ಲ ಗಡಿಯಾರದ ಮುಳ್ಳುಗಳು ಕುತೂಹಲದಿಂದ ಗಮನಿಸತೊಡಗಿದವು.ಹಾಗೇ ಸ್ವಲ್ಪ ದಿನಗಳು ಕಳೆದವು……. ತನ್ನ ಮಗ್ಗುಲಲ್ಲೇ ಮನೆ ಮಾಡಿದ್ದ ಪಾರಿವಾಳದ ಜೋಡಿ ರತಿಕ್ರೀಡೆಯಲ್ಲಿ ತೊಡಗಿದಾಗ ಮುಗ್ಧತೆ ಮತ್ತು ಕುತೂಹಲದಿಂದ ಗಮನಿಸಿದ್ದ ಮುಳ್ಳುಗಳು ಅವುಗಳಿಗೊಂದು ಪಾಪು ಬಂದುಬಿಟ್ಟಾಗ ಈ ಜಗತ್ತಿನ ವಿಸ್ಮಯವೊಂದು ಹೊಳೆದಂತಾಗಿ ಅರ್ಥವಾಗದ ಸಂಭ್ರಮದಿಂದ ಚಡಪಡಿಸಿಹೋದವು.ಇದು ಆರಂಭ.ಸೆಕೆಂಡು, ನಿಮಿಷ ಮತ್ತು ಗಂಟೆ ಮುಳ್ಳುಗಳಿಗೆ ಸಿಗ್ನಲ್ ಲೈಟುಗಳು ಏಕಿರುತ್ತವೆ ಎಂದು ಒಂದು ದಿನ ಅರ್ಥವಾಗಿಹೋಯಿತು. ಕೆಂಪು ಬಂದಾಗ ನಿಂತು ಹಳದಿಗೆ ಕಾದು ಹಸಿರು ಬರುತ್ತಲೇ ಓಡುವ ಚಕ್ರಗಳನ್ನು ನೋಡಿದಾಗ ಯಾಕೋ ಹೆಮ್ಮೆಯೆನಿಸಿತು. ಹೊಗೆ ಕಂಡು ಬೇಜಾರಾಗಿ ಮುಳ್ಳು ಪರಿಸರ ಮಾಲಿನ್ಯದ ಕುರಿತು ಮೌನವಾಗಿ ಚಿಂತನೆ ನಡೆಸಿತು. ಹುಡುಗ-ಹುಡುಗಿಯರ ಹುಮ್ಮಸ್ಸು ಕಂಡಾಗ ಸಂಭ್ರಮವಾದಂತೆ ಕಳ್ಳೆ ಕಾಯಿ ಮಾರುವವನ ಹತ್ತಿರ ಒಂದು ಪಾವು ಹಾಕಿಸಿಕೊಂಡು ತಿನ್ನುವ ಆಸೆಯೂ ಆಯಿತು.ಕೆಲವೇ ದಿನ.ಈ ಮುಳ್ಳುಗಳೂ ಜನರಂತೆ ಕ್ರಿಕೆಟ್ ಮ್ಯಾಚ್ ಕುರಿತು ಕುತೂಹಲ ಬೆಳೆಸಿಕೊಂಡು ಪೊಲೀಸರ ಕುರಿತು ಅಸಹ್ಯಪಡತೊಡಗಿದವು. ಬೆಳಿಗ್ಗೆಯೆಲ್ಲ ಸೀರಿಯಸ್ಸಾಗಿ ಪೇಪರ್ ಓದಲಾಗದಿದ್ದರೂ ಅದನ್ನು ಓದುವವರ ಭಾವನೆ ಅದು ಹೇಗೋ ಈ ಮುಳ್ಳುಗಳ ಅನುಭವಕ್ಕೆ ಬರತೊಡಗಿದವು.
ಎಲ್ಲಕ್ಕಿಂತ ಮುಖ್ಯವಾಗಿ ಲೈಬ್ರರಿ ಎದುರಿಗೆ ಅಂದರೆ ರಸ್ತೆ ಆಚೆ ಬದಿಯಲ್ಲಿ, ಬಿದಿರು ಮೆಳೆ ಕೆಳಗೆ ಅಂದರೆ ಕಲ್ಲುಬೇಂಚಿನ ಪಕ್ಕ ಕುಳಿತುಕೊಳ್ಳುವ ಹುಡುಗನೊಬ್ಬ ಈ ಮುಳ್ಳುಗಳ ಆಸಕ್ತಿಯ ಕೇಂದ್ರವಾಗಿಬಿಟ್ಟ. ಸ್ವಲ್ಪವೇ ದಿನಗಳಲ್ಲಿ ಅವನ ಹೆಸರೂ ಮುಳ್ಳುಗಳಿಗೆ ಗೊತ್ತಾಯಿತು. ಅವನನ್ನು ಹುಡುಕಿಕೊಂಡು ಬರುವ ಅಪರಿಚಿತ ಗೆಳೆಯರು ಆತನನ್ನು ಸಮೀರ ಎಂದು ಕರೆಯುವುದನ್ನು ಅವು ಕೇಳಿಸಿಕೊಂಡಿದ್ದವು.
ಸಮೀರ ಬೂಟ್ ಪಾಲಿಶ್ ಮಾಡುವ ಹುಡುಗ.
ಆತನ ಕೆಲಸ ಬೂಟುಗಳನ್ನು ತಿಕ್ಕುವುದು. ತಿಕ್ಕಿ ತಿಕ್ಕಿ ಅದಕ್ಕೆ ಹೊಳಪು ಕೊಡುವುದು.
ಒಂದು ಬ್ರಶ್ಶು, ಪೆಟ್ಟಿಗೆ, ಅದರ ಪಕ್ಕದಲ್ಲಿ ಏನೇನೋ ಸಾಮಾನುಗಳು, ಮರದ ತುಂಡು ಮತ್ತು ಕುಳಿತುಕೊಳ್ಳಲು ಗೋಣಿ ಚೀಲ. ಅವನು ತರುತ್ತಿದ್ದ ಸಾಮಾನುಗಳೇ ಇಷ್ಟು. ಮಾಸಿಹೋದ ಅರ್ಧ ತೋಳಿನ ಶರ್ಟು ಮತ್ತು ಅಷ್ಟೇ ಮಾಸಿದ ಬಣ್ಣದ ಪ್ಯಾಂಟು ಹಾಕಿಕೊಂಡ ಕುರುಚಲು ಗಡ್ಡದ ಸಮೀರ, ಬೆಳ್ಳಂಬೆಳಿಗ್ಗೆ ಅಂದರೆ ಗಂಟೆ ಮುಳ್ಳು ಎಂಟರಂಕಿ ಮಾತಾಡಿಸುವ ಮೊದಲೇ ಬಂದು ಗೋಣಿ ಚೀಲ ಹಾಸಿ ಕುಳಿತುಕೊಳ್ಳುತ್ತಿದ್ದ. ಫುಟ್‌ಪಾತ್ ಮೇಲೆ ನಡೆದುಹೋಗುವವರು ಅವನ ಬಳಿ ಬಂದು ನಿಂತು ಬೂಟು ಉಜ್ಜಿಸಿಕೊಳ್ಳುತ್ತಿದ್ದರು. ಕಿತ್ತು ಹೋದ ಬಾರ್ ಹಾಕಿಸಿಕೊಳ್ಳುತ್ತಿದ್ದರು. ಕೆಲವರು ಕಾರು ನಿಲ್ಲಿಸಿ ಅವನ ಬಳಿಗೆ ಬಂದು ಬೂಟ್ ಪಾಲಿಶ್ ಮಾಡಿಸಿಕೊಳ್ಳುತ್ತಿದ್ದುದೂ ಇತ್ತು.
ಮುಳ್ಳುಗಳು ಗಮನಿಸಿದವು.
ಆತ ಹಗಲಿಡೀ ಅಲ್ಲೇ ಇರುತ್ತಿದ್ದ. ಬೆಳಿಗ್ಗೆ ಬರುವಾಗಲೇ ತಿಂಡಿ ತಿಂದು ಬರುತ್ತಾನೆ ಎಂದು ಮುಳ್ಳುಗಳು ಅಂದುಕೊಂಡವು. ಮಧ್ಯಾಹ್ನ ಸ್ವಲ್ಪ ಹೊತ್ತು ಆತ ಇರುತ್ತಿರಲಿಲ್ಲ. ಬಹುಶಃ ಊಟ ಮಾಡಲು ಹೋಗುತ್ತಿದ್ದಿರಬಹುದು. ಕೆಲವು ಸಲ ಕೆಟಲ್‌ನಲ್ಲಿ ಟೀ ಮಾರುವವರ ಬಳಿ ಚಾ ಹಾಕಿಸಿಕೊಂಡು ಆತ ಕುಡಿಯುತ್ತಿದ್ದ. ಅವರೊಂದಿಗೆ ಏನೇನೋ ಹರಟೆ ಹೊಡೆಯುತ್ತಿದ್ದ.
ಮುಳ್ಳುಗಳಿಗೆ ಸ್ವಲ್ಪವೇ ದಿನದಲ್ಲಿ ಅರ್ಥವಾಗಿಹೋಯಿತು.
ಸಮೀರನಿಗೆ ವಾರವಿಲ್ಲ. ದಿನಾಂಕ, ಗಂಟೆಗಳೂ ಇಲ್ಲ. ಆತ ಬರುತ್ತಾನೆ. ಗೋಣಿ ಚೀಲ ಹಾಸಿ ಕುಳಿತುಕೊಳ್ಳುತ್ತಾನೆ. ತಲೆ ಬಗ್ಗಿಸಿ ಬೂಟ್ ತಿಕ್ಕುತ್ತಾನೆ. ಬಾರ್ ಅಂಟಿಸುತ್ತಾನೆ. ಮೊಳೆ ಜಡಿಯುತ್ತಾನೆ. ಮಳೆ ಬಂದರೆ ಎದ್ದು ಲೆಬ್ರರಿಯ ಕಲ್ಲು ಕಟಾಂಜನದ ಅಡಿಗೆ ನಿಲ್ಲುತ್ತಾನೆ. ರಾತ್ರಿಯಾಗುತ್ತಲೇ ಎದ್ದು ಹೋಗುತ್ತಾನೆ. ಆತ ಯಾವಾಗಲೂ ತಮ್ಮನ್ನು ಅಂದರೆ ಮುಳ್ಳುಗಳನ್ನು ನೋಡಿದ್ದೇ ಇಲ್ಲ!
ಮತ್ತಷ್ಟು ದಿನಗಳು ಕಳೆದವು.
ಸಮೀರನಿಗೆ ಕೆಲವು ಖಾಯಂ ಗಿರಾಕಿಗಳಿದ್ದಾರೆಂಬುದು ಮುಳ್ಳುಗಳಿಗೆ ಗೊತ್ತಾಯಿತು. ಅವರಿಗೆ ಈತನೆಂದರೆ ಅದೇನು ಖುಷಿಯೋ ಎಂದು ಅವು ಅಂದುಕೊಂಡವು. ಕೆಲವರು ಪ್ರತಿದಿನ ಅಲ್ಲಿ ಕಾರು ನಿಲ್ಲಿಸಿ ಅವರ ಬ್ರಶ್ಶಿನಿಂದಲೇ ಬೂಟೊರೆಸಿಕೊಂಡು ಮುನ್ನಡೆಯುತ್ತಿದ್ದರು.
ಮುಳ್ಳುಗಳಿಗೆ ಗೊತ್ತಾಯಿತು.
ಬೆಳಿಗ್ಗೆ ಅವನ ಬಳಿ ಬರುವವರೆಲ್ಲ ಬೂಟೊರೆಸಿಕೊಳ್ಳಲು ಬರುತ್ತಿದ್ದರು. ಸಂಜೆ ಬರುವವರು ಕಿತ್ತು ಹೋದ ಬಾರು ಇತ್ಯಾದಿ ರಿಪೇರಿ ಮಾಡಿಸಿಕೊಳ್ಳುತ್ತಿದ್ದರು.
ಬೂಟೊರೆಸಿಕೊಳ್ಳುವ ಗಿರಾಕಿಗಳು ಸಾಕಷ್ಟು ಜನರಿದ್ದರು. ಆದರೆ ಅದರಲ್ಲೊಬ್ಬ ತರುಣನಿದ್ದ. ಸಿಯಾಲೋ ಕಾರಿನಲ್ಲಿ ಪ್ರತಿದಿನ ಸಂಜೆ ಬರುತ್ತಿದ್ದ. ಕಾರು ನಿಲ್ಲಿಸಿದವನೇ ಪಕ್ಕದ ಪಾರ್ಕಿನಲ್ಲಿ ಚಟಪಟ ನಡೆದಾಡುತ್ತಿದ್ದ. ತಿರುಗಿ ಬಂದವನೇ ಸಮೀರನಿಗೆ ಕಾಲು ಕೊಟ್ಟು ಆಕಾಶ ನೋಡುತ್ತ ನಿಲ್ಲುತ್ತಿದ್ದ. ಆತ ಸಂಜೆ ಹೊತ್ತು ಬೂಟ್ ಪಾಲಿಶ್ ಮಾಡಿಸಿಕೊಳ್ಳುವುದು ಈ ಮುಳ್ಳುಗಳಿಗೆ ತಮಾಷೆಯಾಗಿ ಕಾಣುತ್ತಿತ್ತು. ಕೆಲವೊಮ್ಮೆ ಆ ತರುಣ ಮುಳ್ಳುಗಳೆಡೆ ನೋಡಿ ಮುಗುಳ್ನಗುವುದೂ ಇತ್ತು.
ಕೆಲ ದಿನಗಳಲ್ಲಿ ಅವನೊಂದಿಗೆ ಒಬ್ಬಳು ಹುಡುಗಿ ಬರತೊಡಗಿದಳು. ಉಷಾ-ಸುತೆಯ ಕಾದಂಬರಿ ಓದಿ ಅಭ್ಯಾಸವಿದ್ದ ಮುಳ್ಳುಗಳಿಗೆ ಮೊದಲು ಅವಳು ಅವನ ಹೆಂಡತಿಯಾಗುವವಳಂತೆ ಕಂಡಳು. ಆದರೆ ಅವಳು ಆತನ ತಂಗಿಯೆಂದು ಸ್ವಲ್ಪ ವೇ ದಿನಗಳಲ್ಲಿ ಗೊತ್ತಾಯಿತು.
ಅವಳು ಚೆಂದವಿದ್ದಳು. ಎದುರಿನ ಕಾಂಪೌಂಡಿಗೆ ಅಂಟಿಸಿರುವ ಸಿನಿಮಾ ಪೋಸ್ಟರಿನಿಂದ ಸೀದಾ ಎದ್ದು ಬಂದು ನಡೆದಾಡುತ್ತಿರುವ ರಾಜಕುಮಾರಿಯಂತೆ ಕಾಣುತ್ತಿದ್ದಳು.
ಮುಳ್ಳುಗಳು ಯೋಚಿಸಿದವು.
ಇತ್ತೀಚೆಗೆ ಈ ಅಣ್ಣ-ತಂಗಿ ಬರದೇ ಇದ್ದ ದಿನವೇ ಇಲ್ಲ. ಪ್ರತಿ ದಿನ ಸಂಜೆ ಗಂಟೆ ಮುಳ್ಳು ಆರನ್ನು ಮಾತಾಡಿಸುವ ಮೊದಲು ಇಬ್ಬರೂ ಕಾರಲ್ಲಿ ಬರುತ್ತಿದ್ದರು. ಒಂದಷ್ಟು ಹೊತ್ತು ವಾಕ್. ಅದನ್ನು ಮುಗಿಸಿ ಬಂದು ಅವಳ ಅಣ್ಣ ಸಮೀರನಿಗೆ ಬೂಟು ಕೊಟ್ಟು ಆ ಕಡೆ ಈ ಕಡೆ ನೋಡುತ್ತ ನಿಲ್ಲುತ್ತಿದ್ದ. ಅವಳು ಸುಮ್ಮನೇ ನಿಂತಿರುತ್ತಿದ್ದಳು. ಮತ್ತೆ ಸ್ವಲ್ಪವೇ ಹೊತ್ತಿನಲ್ಲಿ ಸಿಯಾಲೋದಲ್ಲಿ ತೂರಿಕೊಂಡು ಹೋಗಿಬಿಡುತ್ತಿದ್ದರು.
ಹಾಗೆ ಎಷ್ಟೋ ದಿನಗಳು ಕಳೆದವು.
ಗಡಿಯಾರದ ಮುಳ್ಳುಗಳು ಲೈಬ್ರರಿಯ ಕಟ್ಟಡದ ಗೋಡೆಗಂಟಿಕೊಂಡು ಈ ದೃಶ್ಯವನ್ನು ಮೆಗಾ ಸೀರಿಯಲ್ ನೋಡುವಂತೆ ಅತ್ಯಂತ ಕುತೂಹಲದಿಂದ ನೋಡತೊಡಗಿದವು. ನಾಳೆ ಏನಾಗಬಹುದು ಎಂದು ಕಾಯತೊಡಗಿದವು.
ಪ್ರತಿ ದಿನ ಇಷ್ಟೇ ನಡೆಯುತ್ತಿತ್ತು.
ಒಂದು ದಿನ ಆತ ಕೋಟು ಹಾಕಿಕೊಂಡು ಬರುತ್ತಿದ್ದ. ಅವಳು ಜೀನ್ಸ್-ಟೀ ಶರ್ಟು ಹಾಕಿರುತ್ತಿದ್ದಳು. ಮತ್ತೊಂದಿನ ಆತ ಜೀನ್ಸು ಹಾಕಿದ್ದರೆ ಇವಳು ಚೂಡಿ ಹಾಕಿರುತ್ತಿದ್ದಳು. ಸಮೀರನ ವೇಷದಲ್ಲಿ ಮಾತ್ರ ಯಾವ ಬದಲಾವಣೆಯೂ ಇರುತ್ತಿರಲಿಲ್ಲ. ಒಂದು ದಿನ ಗಡ್ಡ ಇರುತ್ತಿತ್ತು. ಮತ್ತೊಂದು ದಿನ ಇರುತ್ತಿರಲಿಲ್ಲ.
ಗಡಿಯಾರದ ಮುಳ್ಳುಗಳಿಗೆ ಈ ಮೂವರೂ ಇಷ್ಟವಾಗತೊಡಗಿದರು.
ಗಂಟೆ ಮುಳ್ಳಿಗೆ ಇಷ್ಟವಾದವ ಸಮೀರ. ಏಕೆಂದರೆ ಆತ ಗಂಟೆ ಮುಳ್ಳಿನಂತೆ ಸ್ವಲ್ಪ ಕುಳ್ಳು ಮತ್ತು ದಪ್ಪ. ಆತ ಕೆಲಸ ಮಾಡುವುದೂ ನಿಧಾನವೇ. ಹಾಗಾಗಿ ಗಂಟೆ ಮುಳ್ಳು ಸಮೀರನಲ್ಲಿ ತನ್ನನ್ನು ಕಂಡುಕೊಳ್ಳತೊಡಗಿತು.
ನಿಮಿಷದ ಮುಳ್ಳಿಗೆ ಮತ್ತು ಆ ಹುಡುಗಿಗೆ ಹೋಲಿಕೆಯಿತ್ತು. ಅವಳು ಹೆಚ್ಚು ದಪ್ಪವೂ ಅಲ್ಲ. ಸಪೂರವೂ ಅಲ್ಲ. ಚುರುಕೂ ಅಲ್ಲ. ಹಾಗಂತ ನಿಧಾನಿಯೂ ಅಲ್ಲ.
ಸೆಕೆಂಡಿನ ಮುಳ್ಳು ಸಿಯಾಲೋ ಕಾರಿನ ತರುಣನಲ್ಲಿ ತನ್ನನ್ನು ಕಂಡುಕೊಂಡಿದ್ದೂ ಸಹಜವೇ ಆಗಿತ್ತು. ಆತ ಚಟುವಟಿಕೆಯಲ್ಲಿ ಥೇಟ್ ಸೆಕೆಂಡಿನ ಮುಳ್ಳಿನಂತೇ ಇದ್ದ. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಕೂತಲ್ಲಿ ಕೂರುತ್ತಿರಲಿಲ್ಲ. ಚಕಚಕನೇ ಮಾತಾಡುತ್ತಿದ್ದ. ಕ್ಷಣಕ್ಕೊಂದು ಹೆಜ್ಜೆ ಎತ್ತಿಡುತ್ತಿದ್ದ. ತಡವಾದರೆ ಸಿಡುಕುತ್ತಿದ್ದ ಮತ್ತು ನೋಡಲು ಸೆಕೆಂಡಿನ ಮುಳ್ಳಿನಂತೆ ಸಪೂರವಾಗಿ ಉದ್ದಗಿದ್ದ.
ದಿನಗಳು ಕಳೆದವು.
ಸಮೀರ ಅವರು ಬರುತ್ತಲೇ ಸಂಭ್ರಮಿಸತೊಡಗಿದ. ಬೂಟನ್ನು ತಿಕ್ಕುತ್ತ ಅವಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳತೊಡಗಿದ. ಅವಳೂ ಸಮೀರನನ್ನು ಕುತೂಹಲದಿಂದ ನೋಡುತ್ತಿದ್ದಳು. ಅವರಿಬ್ಬರ ಕಣ್ಣುಗಳು ಕೂಡುವ ಹೊತ್ತಿನಲ್ಲಿ ಗಡಿಯಾರದ ಪಕ್ಕದಲ್ಲಿ ಪಾರಿವಾಳಗಳು ರತಿಕ್ರೀಡೆಗೆ ತೊಡಗುತ್ತಿದ್ದವು.
ಆತ ಬೂಟನ್ನು ಅವಳ ಕಣ್ಣುಗಳಷ್ಟು ಕಪ್ಪಾಗಿಸುತ್ತೇನೆ ಎಂದುಕೊಂಡು ಉಜ್ಜುತ್ತಿದ್ದ. ಅವಳ ಕೆನ್ನೆಯಷ್ಟು ನುಣುಪಾಗಿಸಲು ಪ್ರಯತ್ನಿಸುತ್ತಿದ್ದ. ಇದು ಸಮೀರನಿಗೆ ಅಭ್ಯಾಸವಾಗಿಹೋಯಿತು. ಯಾರೇ ಬೂಟ್ ಪಾಲಿಶ್‌ಗೆ ಬಂದರೂ ಬೂಟುಗಳನ್ನು ಅವಳ ಕಣ್ಣುಗಳಷ್ಟು ಕಪ್ಪಾಗಿಸಿ ಕೆನ್ನೆಗಳಷ್ಟು ನುಣುಪಾಗಿಸುತ್ತಿದ್ದ.
ಇಂಥ ಎಷ್ಟೋ ಎಪಿಸೋಡುಗಳು ಮುಗಿದ ಮೇಲೆ ವಸಂತದ ಒಂದು ಸಂಜೆ ಯಥಾಪ್ರಕಾರ ಅಣ್ಣ-ತಂಗಿ ಇಬ್ಬರೂ ಬಂದರು. ಕಾರು ನಿಲ್ಲಿಸಿ ಪಕ್ಕದ ಉದ್ಯಾನದಲ್ಲಿ ನಡೆಯತೊಡಗಿದರು. ಆಕಾಶದಲ್ಲಿ ದಟ್ಟೈಸಿದ್ದ ಮೋಡಗಳಿಗೆ ಏನೆನಿಸಿತೋ. ಆತ್ಮಾರ್ಪಣೆ ಮಾಡಿಕೊಳ್ಳುತ್ತ ಮಳೆ ಸುರಿಸತೊಡಗಿದವು. ಹಠಾತ್ತನೇ ಸುರಿಯತೊಡಗಿದ ಮಳೆಯನ್ನು ಅನುಭವಿಸುತ್ತ ಅವರು ಬಿದಿರ ಮೆಳೆಯ ಅಡಿಗೆ ನಿಂತುಕೊಂಡರು.
ಮಳೆ ಸ್ವಲ್ಪ ಹೊತ್ತು ಸುರಿದು ನಿಂತುಕೊಂಡಿತು. ಆಕಾಶ ಶುಭ್ರವಾಯಿತು. ಎಲ್ಲೋ ಇದ್ದ ಸೂರ್ಯ ಕೂಡ ಹೊರಬಂದ.
ಸಂಜೆಯ ಬಿಸಿಲಿನ ಹೊಳಪಿನಿಂದ ಇಡೀ ವಾತಾವರಣ ರಂಗುರಂಗಾಗಿತ್ತು. ತಣ್ಣಗೆ ಗಾಳಿ . ರಸ್ತೆಯಲ್ಲಿ ಚಕ್ರಗಳ ಸಂಖ್ಯೆಯೂ ಕಡಿಮೆಯಿತ್ತು. ಅಂದು ರಜಾದಿನ ಇರಬಹುದು.
ಆತ ಸಮೀರನ ಬಳಿ ಬಂದು ಬೂಟು ಕೊಟ್ಟು ನಿಂತ.
ಸಮೀರ ಯಥಾಪ್ರಕಾರ ಅವಳ ಕಣ್ಣುಗಳಲ್ಲಿ ಕಳೆದುಹೋಗುತ್ತ ಬೂಟು ತಿಕ್ಕತೊಡಗಿದ. ಪಾಲಿಶ್ ಮಾಡಿ ಮುಗಿಸಿ ದುಡ್ಡಿಸಿದುಕೊಂಡು ಪುನಃ ಅವಳ ಕಣ್ಣುಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ.
ಇನ್ನೇನು ಇಬ್ಬರೂ ಹೊರಡಬೇಕು.
ಅಷ್ಟರಲ್ಲಿ ಅವಳು ನಿಂತುಬಿಟ್ಟಳು.
ಚಪ್ಪಲಿಗೆ ಬಾರು ಕಿತ್ತು ಹೋದುದನ್ನು ತಡವಾಗಿ ನೆನಪಿಸಿಕೊಂಡವಳಂತೆ ಅವನಿಗೆ ಕೊಟ್ಟಳು. ಸುಮ್ಮನೇ ನಕ್ಕು ಆತ ತನ್ನ ಪುಟ್ಟ ಸುತ್ತಿಗೆಯಿಂದ ಮೊಳೆ ಹೊಡೆಯುತ್ತ ಅವಳ ಪಾದ ನೋಡತೊಡಗಿದ.
……..
ಚಪ್ಪಲಿ ರಿಪೇರಿಯಾಯಿತು. ಕಾಲಿಗೆ ಹಾಕಿಕೊಳ್ಳಲು ಅವಳು ಬಗ್ಗಿದಳು.ಬಗ್ಗಿ ನಿಂತುಬಿಟ್ಟಳು. ಸಮೀರ ಗಮನಿಸಿದ. ಅವಳ ಬಳಿಯಿಂದ ಆತ್ಮೀಯತೆಯ ಪರಿಮಳ ಬರುತ್ತಿದೆ. ಕೆನ್ನೆ ತೀರ ಹತ್ತಿರದಲ್ಲಿದೆ. ಮೇಲಿಂದ ಸೂರ್ಯ ಕಿರಣಗಳು ಬಿದ್ದು ಅದು ಇನ್ನಷ್ಟು ಹೊಳೆಯುತ್ತಿದೆ.
ಸಮೀರನಿಂದ ತಡೆದುಕೊಳ್ಳಲಾಗುತ್ತಿಲ್ಲ.
ಜಗತ್ತಿನ ಯಾವ ನಿಯಮಗಳೂ ಗೊತ್ತಿಲ್ಲದವನಂತೆ ಅಥವಾ ಧಿಕ್ಕರಿಸುವವನಂತೆ ಅವಳ ಕೆನ್ನೆಯನ್ನು ತನ್ನೆಡೆಗೆ ಎಳೆದುಕೊಂಡು ತುಟಿಗೆ ತುಟಿ ಕೂಡಿಸಿಬಿಟ್ಟ.
ಒಂದು, ಎರಡು, ಮೂರು, ನಾಲ್ಕು…..
ಟಿಕ್ ಟಿಕ್ ಟಿಕ್
ಇಬ್ಬರಿಗೂ ಎಚ್ಚರವಾಗಿದ್ದು ಅಣ್ಣ ಕೂಗಾಡಿಕೊಂಡ ಮೇಲೆಯೇ. ಹಠಾತ್ತನೇ ಅವಳು ಅವನಿಂದ ಬಿಡಿಸಿಕೊಂಡಳು. ಸಮೀರನಂತೂ ಈ ಜಗತ್ತಿನಲ್ಲಿಯೇ ಇರಲಿಲ್ಲ.
ಅಣ್ಣನಿಗೆ ಆವೇಶ ತಡೆದುಕೊಳ್ಳಲಾಗಲಿಲ್ಲ. ಸಮೀರನೇ ಒರೆಸಿಕೊಟ್ಟ ಬೂಟುಗಳು ಆತನ ಕೆನ್ನೆ ಒರೆಸಿದವು. ಸಮೀರ ಕೂಗಿಕೊಳ್ಳಲಿಲ್ಲ. ಆದರೆ ತಾನೇ ಹೊಡೆತ ತಿಂದೆ ಎನ್ನುವಂತೆ ಗಂಟೆ ಮುಳ್ಳು ಮೌನವಾಗಿ ಕೂಗಿಕೊಂಡಿತು.
ಸಮೀರನಿಂದ ಸುಮ್ಮನಿರಲಾಗಲಿಲ್ಲ. ಆತ ಕೆಲ ಕ್ಷಣಗಳ ಅನಂತರ ಎದ್ದು ನಿಂತು ಹೇಳಿದ: ಸಾರ್…ನಾನು ನಿಮ್ಮ ತಂಗಿಯನ್ನು ಮದುವೆಯಾಗ್ತೇನೆ!
ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತೋ ಏನೋ. ಆದರೆ ಅಣ್ಣನ ಕೈ ಹಿಡಿದು ಎಳೆದು ಕಾರಿನಲ್ಲಿ ಕೂರಿಸಿಕೊಂಡು ಅವಳು ಹೊರಟುಹೋದಳು.
***
ಸಂಜೆ ಸವೆದು ರಾತ್ರಿಯಾಯಿತು. ಗಡಿಯಾರದ ಮುಳ್ಳುಗಳನ್ನು ಇಳಿ ಸಂಜೆ ನಡೆದ ಘಟನೆಯೇ ಕಾಡುತ್ತಿತ್ತು. ಅವನು ಮುತ್ತು ಕೊಟ್ಟಿದ್ದು, ಅಣ್ಣ ಕೂಗಾಡಿದ್ದು, ಸಮೀರನಿಗೆ ಬೂಟಿನಲ್ಲಿ ಹೊಡೆದದ್ದು ಮತ್ತು ಆತ ಮದುವೆಯಾಗುತ್ತೇನೆಂದು ಹೇಳಿದ್ದು…… ಎಲ್ಲವೂ ಹಾಗೆಂದರೆ ಹಾಗೇ ಮುಳ್ಳುಗಳಿಗೆ ನೆನಪಾದವು.
ಅಷ್ಟರಲ್ಲೇ ಅವು ತಮ್ಮ ತಮ್ಮ ಪ್ರೀತಿಯ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದವು.
ಸಮೀರನೆಂದರೆ ತಾನೇ ಎಂದು ತಿಳಿದುಕೊಂಡಿದ್ದ ಗಂಟೆ ಮುಳ್ಳಿಗೆ ವಿಪರೀತ ಅವಮಾನವಾಗಿತ್ತು. ನಿಮಿಷದ ಮುಳ್ಳು ಚಡಪಡಿಸುತ್ತಿತ್ತು. ಸೆಕೆಂಡಿನ ಮುಳ್ಳಿನ ಆವೇಶ ತಣಿದಂತಿರಲಿಲ್ಲ. ಅದರ ಕಣ್ಣಿನಲ್ಲಿ ತಮ್ಮ ಬಗ್ಗೆ ಹುಟ್ಟಿಕೊಂಡ ತಿರಸ್ಕಾರವನ್ನು ಗಂಟೆ ಮತ್ತು ನಿಮಿಷದ ಮುಳ್ಳುಗಳೆರಡೂ ಗುರುತಿಸಿದವು.
`ನಾವು ಮದುವೆಯಾಗಿಬಿಡೋಣ’ ಗಂಟೆ ಮುಳ್ಳು ನಿಮಿಷದ ಮುಳ್ಳಿನ ಕಿವಿಯಲ್ಲಿ ಉಸುರಿತು.
ನಿಮಿಷದ ಮುಳ್ಳಿನ ದ್ವಂದ್ವ ಯಾರಿಗೂ ಅರ್ಥವಾಗುವಂತಿರಲಿಲ್ಲ.
`ಅದು ಸರಿ. ಆದರೆ ನೀನು ಬೂಟ್ ಪಾಲಿಶ್ ಮಾಡುವುದನ್ನು ಬಿಟ್ಟುಬಿಡಬೇಕು’ ಎಂದಿತು ನಿಮಿಷದ ಮುಳ್ಳು.
ಬೂಟ್ ಪಾಲಿಶ್ ಮಾಡುವುದಕ್ಕೂ ಮದುವೆಯಾಗುವುದಕ್ಕೂ ಏನು ಸಂಬಂಧವೆಂದು ಗಂಟೆ ಮುಳ್ಳಿಗೆ ಅರ್ಥವಾಗಲಿಲ್ಲ. ತನ್ನ ಉಸಿರಿನಷ್ಟೇ ಮುಖ್ಯವಾದ ಕೆಲಸವನ್ನು ಬಿಡುವುದು ಸಾಧ್ಯವಿಲ್ಲ ಎಂದೂ ಅದಕ್ಕೆ ಅನಿಸಿತು.
`ನಾನು ಬಿಟ್ಟುಬಿಟ್ಟರೆ ನಿಮ್ಮಣ್ಣನಿಗೆ ಬೂಟ್ ಪಾಲಿಶ್ ಮಾಡುವವರು ಯಾರು?’
ಮುಗ್ಧತೆಯಿಂದ ಕೇಳಿತು ಗಂಟೆ ಮುಳ್ಳು.
`ಬಿಡು…ನಿನ್ನ ಜಾಗದಲ್ಲಿ ಬೇರೆ ಯಾರಾದರೂ ಕುಳಿತುಕೊಳ್ಳುತ್ತಾರೆ ‘ ಎಂದಿತು ನಿಮಿಷ.
`ಅವನೂ ಯಾವುದಾದರೂ ಹುಡುಗಿಗಾಗಿ ಕೆಲಸ ಬಿಟ್ಟು ಬಿಟ್ಟರೆ’ ಕೇಳಿತು ಗಂಟೆ.
ನಿಮಿಷಕ್ಕೆ ರೇಗಿ ಹೋಯಿತು.
`ಥೂ…ಬೂಟ್ ಪಾಲಿಶ್ ಮಾಡುವವನಾಗಿದ್ದಕ್ಕೇ …….’ ಎಂದು ಇನ್ನೇನೋ ಹೇಳಿ ಸುಮ್ಮನಾಯಿತು. ಗಂಟೆ ಮುಳ್ಳು ಯೋಚಿಸತೊಡಗಿತು. ಅದಕ್ಕೆ ಸೆಕೆಂಡಿನ ಮುಳ್ಳಿನೆದುರು ಅವಮಾನವಾಗಿತ್ತು. ಅದರ ಚಟುವಟಿಕೆ ಮತ್ತು ಕೆಲಸ ಮೊಟ್ಟ ಮೊದಲ ಸಲ ತನ್ನ ಕೆಲಸಕ್ಕಿಂತ ಶ್ರೇಷ್ಠವಾದುದು ಎನಿಸಿ ಕೀಳರಿಮೆ ಹುಟ್ಟಿಕೊಂಡಿತು. ಈ ಕೀಳರಿಮೆ ನಿಮಿಷದ ಮುಳ್ಳಿಗೂ ಇತ್ತು. ಯೋಚಿಸಿ ಯೋಚಿಸಿ ನಿಮಿಷದ ಮುಳ್ಳು ಹೇಳಿತು.
`ನಾವೂ ಅಣ್ಣನಂತೆ ಚುರುಕಾಗಬೇಕು’.
***
ರಾತ್ರಿಯಿಡೀ ನಿಮಿಷ ಮತ್ತು ಗಂಟೆ ಮುಳ್ಳುಗಳು ಯೋಚನೆ ಮಾಡಿದವು. ಯೋಚನೆ ಮಾಡಿ ಮಾಡಿ ಒಂದು ನಿರ್ಧಾರಕ್ಕೆ ಬಂದವು. ಬೆಳಗಿನ ಝಾವದಲ್ಲಿ ಈ ನಿರ್ಧಾರ ಗಟ್ಟಿಯಾಯಿತು.
ಬೆಳಿಗ್ಗೆಯಾಗುವ ಹೊತ್ತಿಗೆ ಗಂಟೆ ಮುಳ್ಳು ಮತ್ತು ನಿಮಿಷದ ಮುಳ್ಳುಗಳೂ ಸೆಕೆಂಡಿನ ಮುಳ್ಳಿನಷ್ಟೇ ವೇಗವಾಗಿ ಚಲಿಸತೊಡಗಿದವು.
ಟಿಕ್ ಟಿಕ್ ಟಿಕ್!
ಸೆಕೆಂಡಿನ ಮುಳ್ಳು ಶ್ರೇಷ್ಠತೆ ಉಳಿಸಿಕೊಳ್ಳುವುದಕ್ಕೆ ತನ್ನ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಿತು. ನಿಮಿಷ ಮತ್ತು ಗಂಟೆ ಮುಳ್ಳುಗಳೂ ಅದೇ ವೇಗ ಸಾಧಿಸಿದವು. ಸುತ್ತಲೂ ತಟಸ್ಥವಾಗಿರುವ ಹನ್ನೆರಡು ಅಂಕಿಗಳು ಅಚ್ಚರಿ ಮತ್ತು ಅಪನಂಬಿಕೆಯಿಂದ ಈ ಬದಲಾವಣೆಯನ್ನು ಗಮನಿಸತೊಡಗಿದವು.
-ಪರಮೇಶ್ವರ ಗುಂಡ್ಕಲ್
3 Comments
ahaaa!!!!!!!
Sogasada kathe Gundkal avare, bahaLa hidisitu.
Hello, a very beautiful rendition of ‘pathetic fallacy’. The needles of the clock are enthused with more humanity than our own species. I liked the usage “maunavagi koogithu” very much…it is a very interesting one.The story is written in a very gripping one and keeps the readers hooked, as the phrase goes, people hooked on to drugs and alcohol! However, i found the neding of the story quite troublesome, as i felt that it justifies the stipulated hierarchical positions in a society, especially in a formerly feudalistic society of our country. Though not mush has changed in the present scenario. So you are of the opinion that one should stick on to ones position and should not attempt at things better, my senior colleague told that my mode of perception is incorrect and that certain things in nature should remain the way they are unruffled and that one should not meddle with the finer designs of nature, be it the functioning of the needles of a clock….As the needles, its workings can be alluded to the the three human characters in the story, my observation seems to gain momemntum.Looking ahead for a discussion.
Hi!
The story is very interesting. Narrative is immpressing. Of course, join Ranjita to wish the writer for his narrative skills.
However, I doubt if the story implies the author is favours maintaing status-quo. My impression on reading the story is: there certain disturbing elements - the minutes which were moving in certain pace stopped to watch the world or to experience it intensely. But their indulgence in the world’s activities (here with Samir and his affair)lead them to move faster….to fulfil their desires, in made rush…
Of course they strive for change…for better life.. And the symbol is very clear - figures upto 12 are surprised…as the needles turn round and round…which suggest me about cycles.. Life-love-death -a big cycle (Philosophically), Poor becomes rich but still rich can become rich only when someone is poor.
Moreover, Samir’s reply to girl is interesting. He ‘wants’ to be boot-polisher.. There is a simple philosophy of life and a clear ideology for his life though he does not want to be rich or rise to new heights. I think, if we go by Samir’s reply, his character has got some strength.. steady pace.. balanced approach..
But the world outside made if feel guilty/inferior… He himself did not have inferiority complex neither he thouht his job as inferior one.
Hence, though the hour-needle identification with Samir is apt in many ways.. one, phisically, second and the most important is.. steady pace, indulgence in the work.
Until he engaged in affair with girl he was just like the needles before they stopped moving. The needles indulged in worldly affair, stopped their work. The pace of their life changed.. Samir indulged in affair.. pace of his life changed.
There is a comment on ways of the world and the pace of life that changes as more we engage in the world outside…
The story has potential to sustain more remarks.
Congrats
Malathi
Post a Comment